ವಿಷ್ಣು ಸಖಾರಾಮ್ ಖಾಂಡೇಕರ್
ವಿಷ್ಣು ಸಖಾರಾಮ್ ಖಾಂಡೇಕರ್(ಜನವರಿ ೧೯,೧೮೯೮-ಸೆಪ್ಟಂಬರ್ ೨,೧೯೭೬) ಇವರು ಮರಾಠಿಯ ಅಗ್ರಗಣ್ಯ ಲೇಖಕರಲ್ಲಿ ಒಬ್ಬರು . ಮಹಾರಾಷ್ಟ್ರದ ಹಿರಿಯ ಸಾಹಿತಿ, ಕಾದಂಬರಿಕಾರ, ಕಥಾಲೇಖಕ ಮತ್ತು ಪ್ರಬಂಧಕಾರರು. ಮತ್ತು ಜ್ಞಾನಪೀಠ ಪ್ರಶಸ್ತಿ ಪಡೆದ ಲೇಖಕರಲ್ಲಿ ಒಬ್ಬರು.
ಜೀವನ
ಇವರು ಮಹಾರಾಷ್ಟ್ರದ ಸಾಂಗಲಿಯಲ್ಲಿ ಜನಿಸಿದರು.
ಪ್ರಾಥಮಿಕ ವಿದ್ಯಾಭ್ಯಾಸವನ್ನು ಅಲ್ಲಿಯೇ ಪಡೆದು ಪುಣೆಯ ಫಗ್ರ್ಯುಸನ್ ಕಾಲೇಜನ್ನು ಸೇರಿದರಾದರೂ ಮನೆತನದಲ್ಲಿಯ ತೊಂದರೆಗಳಿಂದಾಗಿ ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸಬೇಕಾಯಿತು. ಮುಂದೆ ತಮ್ಮ ಸಾಹಿತ್ಯ ಜೀವನದ ಮೇಲೆ ಪ್ರಭಾವ ಬೀರಿದ ಮಹಾರಾಷ್ಟ್ರದ ಹಿರಿಯ ನಾಟಕಕಾರ ಗಡಕರಿಯವರ ಪರಿಚಯ ಇವರಿಗೆ ಕಾಲೇಜಿನಲ್ಲಿರುವಾಗಲೇ ಲಭ್ಯವಾಯಿತು. ಗಾಂಧೀಜಿಯವರ ಗ್ರಾಮಸೇವೆಯ ಆದರ್ಶವನ್ನು ತುಂಬಿಕೊಂಡಿದ್ದ ಇವರು 1920ರ ಸುಮಾರಿಗೆ ಸಾವಂತವಾಡಿಯ ಹತ್ತಿರದಲ್ಲಿನ ಶಿರೋಡೆ ಎಂಬಲ್ಲಿ ಮಾಧ್ಯಮಿಕ ಶಾಲೆಯ ಮುಖ್ಯಾಧ್ಯಾಪಕರಾಗಿ ಹದಿನೆಂಟು ವರ್ಷ ದುಡಿದರು. ಅನಂತರ ಚಲನಚಿತ್ರಗಳಿಗೆ ಕಥೆ ಬರೆಯುವುದಕ್ಕೆಂದು ಕೊಲ್ಹಾಪುರಕ್ಕೆ ಬಂದು ಅಲ್ಲಿಯೇ ನೆಲೆಸಿದರು.
ಇದೇ ಸಮಯದಲ್ಲಿ ಇವರು ತಮ್ಮ ಸಾಹಿತ್ಯ ಕೃಷಿಯನ್ನು ಪ್ರಾರಂಭಿಸಿದರು.
ಸಾಹಿತ್ಯ
ಕವಿತೆ, ವಿಮರ್ಶೆ, ಕಥೆಗಳನ್ನು ಬರೆಯಲಾರಂಭಿಸಿದ ಖಾಂಡೇಕರರು ಮೊದಲ ಕಾದಂಬರಿ ಹೃದಯಾಚೀ ಹಾಕವನ್ನು 1930ರಲ್ಲಿ ಪ್ರಕಟಿಸಿದರು. ಅಂದಿನಿಂದ ಇಂದಿನವರೆಗೆ ಇವರು ಹದಿನೈದು ಕಾದಂಬರಿಗಳನ್ನೂ ಮೂವತ್ತು ಕಥಾಸಂಗ್ರಹಗಳನ್ನೂ ಹನ್ನೊಂದು ಪ್ರಬಂಧ ಸಂಗ್ರಹಗಳನ್ನೂ ಪ್ರಕಟಿಸಿದ್ದಾರೆ. ನಿಸರ್ಗದಲ್ಲಿಯ ಬೇರೆ ಬೇರೆವಸ್ತುಗಳನ್ನು ಸಾಂಕೇತಿಕವಾಗಿ ದರ್ಶಿಸಿ ಅವನ್ನೇ ಪಾತ್ರಗಳಂತೆ ಬಳಸುವ ರೂಪಕಕಥೆಯನ್ನು ಮರಾಠಿಯಲ್ಲಿ ಇವರೇ ಮೊದಲು ಮಾಡಿದರು. ಮಾನವಜೀವನದ ಸಮಸ್ಯೆಗಳ ಮೇಲೆ ಬೆಳಕು ಬೀರುವ ರೀತಿಯಲ್ಲಿ ಈ ವಿಧಾನವನ್ನು ಇವರು ಬಳಸಿರುವ ಬಗೆ ವಿಶಿಷ್ಟವಾದುದಾಗಿದೆ. ದೋನ ಧ್ರುವ, ಉಲ್ಕಾ, ಕ್ರೌಂಚವಧ, ಅಶ್ರೂ, ಯಯಾತಿ, ಅಮೃತ ವೇಲ ಎಂಬವು ಇವರ ಸುಪ್ರಸಿದ್ಧ ಕಾದಂಬರಿಗಳು. ಇದಲ್ಲದೆ ಮಹಾರಾಷ್ಟ್ರದ ಹಿರಿಯ ಲೇಖಕರಾದ ಅಗರ್ ಕರ್, ಗಡಕರಿ, ಕೇಶವಸುತ ಮುಂತಾದವರ ಬಗ್ಗೆ ವಿಮರ್ಶಾತ್ಮಕ ಗ್ರಂಥಗಳನ್ನೂ ಮಹಾರಾಷ್ಟ್ರದ ನಾಟಕಪರಂಪರೆಯನ್ನು ಕುರಿತಾದ ಸಂಶೋೀಧನಾತ್ಮಕ ಇತಿಹಾಸ ಗ್ರಂಥವಾದ ಮರಾಠೀಚಾ ನಾಟ್ಯಸಂಸಾರ ಎಂಬುದನ್ನೂ ಬರೆದಿದ್ದಾರೆ.
ಇವರು ತಮ್ಮ ಜೀವಮಾನದಲ್ಲಿ ಒಟ್ಟು ೧೬ ಕಾದಂಬರಿಗಳು, ೬ ನಾಟಕಗಳು, ಸುಮಾರು ೨೫೦ ಸಣ್ಣ ಕಥೆಗಳು, ೧೦೦ ಪ್ರಬಂಧಗಳು ಮತ್ತು ೨೦೦ ಟೀಕೆಗಳನ್ನು ಬರೆದರು. ಸಾಹಿತಿಗಳಾಗಿ ಹೇಗೋ ಹಾಗೆ ಖಾಂಡೇಕರರು ಮಹಾರಾಷ್ಟ್ರದ ಸೂಕ್ಷ್ಮಗ್ರಾಹಿ ಸಮೀಕ್ಷಕರೆಂದೂ ಅತ್ಯಂತ ಚಿಂತನಪರ ಬುದ್ಧಿಜೀವಿಗಳೆಂದೂ ಹೆಸರು ಗಳಿಸಿದ್ದಾರೆ; ಮರಾಠೀ ಭಾಷೆಯ ಬಳಕೆಯಲ್ಲಿ ಅಸಾಧಾರಣ ಪ್ರಭುತ್ವವನ್ನು ಪಡೆದು ತಮ್ಮ ಬರೆಹಗಳುದ್ದಕ್ಕೂ ಅದನ್ನು ಮೆರೆದವರಲ್ಲಿ ಅಗ್ರಗಣ್ಯರೆಂದೆನಿಸಿಕೊಂಡಿದ್ದಾರೆ. ಖಾಂಡೇಕರರು ಕೊಲ್ಹಟ್‍ಕರರ ಉತ್ತರಾಧಿಕಾರಿ ಎಂದು ಬಹು ಹಿಂದೆಯೇ ಮುನ್ನುಡಿದ ಗಡಕರಿಯವರ ಮಾತನ್ನು ಇವರು ತಮ್ಮ ವಾಕ್ ಚಮತ್ಕøತಿಯಿಂದಲೂ ಕಲ್ಪನಾವೈಭವದಿಂದಲೂ ಪ್ರಗತಿಪರವಾದ ವಿಚಾರ ಧೋರಣೆಯಿಂದಲೂ ನಿಜವಾಗಿಸಿದ್ದಾರೆ ಕೊಲ್ಹಟ್‍ಕರರ ಸಮಾಜಸುಧಾರಣೆಯ ದೀಕ್ಷೆ ಇವರನ್ನು ವಿದ್ಯಾವಿತರಣೆಯ ಕೆಲಸದತ್ತ. ಕರೆದೊಯ್ದಿತು. ಗ್ರಾಮಾಂತರಜೀವನದಲ್ಲಿಯ ಕಡುಬಡತನವನ್ನು, ಅದರ ನೂರಾರು ಸಮಸ್ಯೆಗಳನ್ನು, ಹತ್ತಿರದಿಂದ ನೋಡಿ ಅನುಭವಿಸಿದ ಇವರ ಬರೆಹಗಳಲ್ಲಿ ಬೆಳಕುಕತ್ತಲೆ, ಸುಖದುಃಖ, ಸಾಮಾಜಿಕ ಜೀವನದಲ್ಲಿಯ ಮೇಲುಕೀಳು-ಇಂಥ ದ್ವಂದ್ವ ಮುಖ್ಯವಾಗಿ ಕಾಣಿಸಿಕೊಳ್ಳುತ್ತದೆ. ಹೀಗೆ ಪರಸ್ಪರ ವಿರುದ್ಧವಾದ ಎರಡು ಧ್ರುವಗಳ ನಡುವೆ ತೊಳಲಾಡುವ ಸಾಮಾನ್ಯ ಸಾಮಾಜಿಕನ ಜೀವನದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳನ್ನು ಕುರಿತೇ ಇವರು ತಮ್ಮ ಕಥೆ ಕಾದಂಬರಿಗಳನ್ನು ಹೆಣೆದಿದ್ದಾರೆ. ಮಧ್ಯಮ ವರ್ಗದವರ ಸುಖದುಃಖಗಳನ್ನು ಚಿತ್ರಿಸುವ ಇವರ ಕಾದಂಬರಿಗಳ ರಚನಾವಿಧಾನ ಕೆಲವೆಡೆ, ಕೆಲಮಟ್ಟಿಗೆ ಕೃತಕ ಎನಿಸುತ್ತದೆ. ಏಕೆಂದರೆ ಒಂದು ಸಮಸ್ಯೆಯನ್ನು ಸ್ಫುಟವಾಗಿಸುವುದಕ್ಕೆಂದೇ ಪಾತ್ರ ಸನ್ನಿವೇಶಗಳ ಯೋಜನೆಯನ್ನು ಅನೇಕ ಕಡೆ ಇವರು ಮಾಡಿಕೊಂಡುಬಿಡುತ್ತಾರೆ. ಆದರೆ ಇವರು ಎತ್ತಿಕೊಳ್ಳುವ ಸಮಸ್ಯೆಗಳು ಜೀವನದ ಮೂಲಭೂತ ಪ್ರಶ್ನೆಗಳಾಗಿರುವುದರಿಂದಲೂ ಅವನ್ನಿವರು ವೈವಿಧ್ಯಪೂರ್ಣವಾದ ಕಲ್ಪಕತೆಯಿಂದ ಚಿತ್ರಿಸಿರುವುದರಿಂದಲೂ ಕಥೆಗಳ ಕೃತ್ರಿಮತೆಯನ್ನು ಓದುಗ ಗಮನಿಸುವುದೇ ಇಲ್ಲ. ಜೀವನದ ಸಮಸ್ಯೆಗಳನ್ನು ಚಿತ್ರಿಸುವುದರ ಜೊತೆಗೆ ಕಾದಂಬರಿಯ ರಚನೆಯಲ್ಲಿ ಹೊಸ ತಂತ್ರವಿಧಾನಗಳನ್ನು ಬಳಸುವುದರಲ್ಲಿಯೂ ಇವರು ಸಿದ್ಧಹಸ್ತರೆನಿಸಿಕೊಂಡಿದ್ದಾರೆ. ಯಯಾತಿಯಂಥ ಪೌರಾಣಿಕ ಪಾತ್ರಗಳನ್ನು ಬಳಸಿಕೊಂಡು ಅವರಿವರಿಂದಲೇ ಅವರ ಅನುಭವಗಳನ್ನು ಹೇಳಿಸುವ ಇವರ ಹೊಸ ಕಥನವಿಧಾನ ಸಾರ್ವತ್ರಿಕವಾದ ಮೆಚ್ಚುಗೆಯನ್ನು ಗಳಿಸಿದೆ.
ಖಾಂಡೇಕರರ ಛಾಯಾ, ಸುಖಾಚಾ ಶೋಧ, ಅಮೃತ, ಮಾಝಬಾಳ್, ದೇವತಾ ಎಂಬ ಕಥೆಗಳನ್ನು ಚಲನಚಿತ್ರಕ್ಕೆ ಅಳವಡಿಸಿಕೊಳ್ಳಲಾಗಿದೆ.
ಖಾಂಡೇಕರರನ್ನು ಕಾದಂಬರಿಕಾರರೆನ್ನುವುದಕ್ಕಿಂತ ಪ್ರಧಾನವಾಗಿ ಪ್ರಬಂಧಕಾರರೆಂದು ಹೇಳುವವರೂ ಇದ್ದಾರೆ. ಸಮಕಾಲೀನ ಜೀವನವನ್ನು ಕುರಿತಾದ ಆಳವಾದ ಚಿಂತನೆಯ ಜೊತೆಗೆ ಮಿಂಚಿನಂತೆ ಕೆಲಸಮಾಡುವ ಇವರ ಕಲ್ಪಕಪ್ರತಿಭೆ ಮತ್ತು ವಾಗ್ವಿಲಾಸ ಮೈಗೂಡಿ ಅಸಾಧಾರಣ ಸೊಗಸಿನ ಅನುಭವವನ್ನು ಕೊಡಬಲ್ಲ ಇವರ ನೂರಾರು ಪ್ರಬಂಧಗಳು ಆ ಪ್ರಕಾರದಲ್ಲಿಯ ಶ್ರೇಷ್ಠ ಸಾಧನಗಳಾಗಿವೆ. ಇವರ ವಿಮರ್ಶನ ಲೇಖನಗಳಲ್ಲಿ ಸೂಕ್ಷ್ಮವಾದ ಬುದ್ಧಿ ಕೆಲಸಮಾಡುತ್ತಿರುವ ಹಾಗೆ ಇವರು ಬರೆದ ಅನೇಕ ಚಿತ್ರಕಥೆಗಳ ಹಿಂದೆ ಕಲ್ಪನಾವಿಲಾಸ ಮತ್ತು ಆಳವಾದ ಜೀವನಪ್ರಜ್ಞೆ ಕೆಲಸ ಮಾಡುತ್ತವೆ. ಅರ್ಧಶತಮಾನದುದ್ದಕ್ಕೂ ಸಾಗಿದ ಇವರ ವೈವಿಧ್ಯಪೂರ್ಣವಾದ ಬರೆವಣಿಗೆ ಸಮಕಾಲೀನ ಮರಾಠೀ ಸಾಹಿತ್ಯಪ್ರಪಂಚದಲ್ಲಿವರಿಗೆ ಎತ್ತರದ ಸ್ಥಾನವನ್ನು ಒದಗಿಸಿದೆ. ಇವರು ಹಿಂದಿನ ತಲೆಮಾರಿನವರಾದರೂ ಬದಲಾಗುತ್ತಿದ್ದ ಪರಿಸರಕ್ಕೆ ಒಂದು ನಿಶ್ಚಿತವಾದ ನಿಲುವಿನಿಂದ ಜೀವಂತ ಪ್ರತಿಕ್ರಿಯೆಯನ್ನು ತೋರ್ಪಡಿಸುತ್ತಿರುವ ಮಹಾರಾಷ್ಟ್ರದ ಶ್ರೇಷ್ಠ ಲೇಖಕರಾಗಿದ್ದಾರೆ.
ಪ್ರಶಸ್ತಿಗಳು, ಗೌರವಗಳು
ಮರಾಠಿಯ ಅಗ್ರಗಣ್ಯ ಲೇಖಕರೆಂದು ಮಹಾರಾಷ್ಟ್ರದ ಜನತೆ ಇವರನ್ನು ಅನೇಕ ವಿಧದಲ್ಲಿ ಗೌರವಿಸಿದೆ. ಅನೇಕ ಪ್ರಾಂತಿಯ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆಗಳೊಂದಿಗೆ ೧೯೪೧ರಲ್ಲಿ ಸೊಲ್ಹಾಪುರದಲ್ಲಿ ಜರುಗಿದ ಅಖಿಲ ಮಹಾರಾಷ್ಟ್ರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯೂ ಇವರ ಪಾಲಿನವಾಗಿವೆ. ಇವರು ಬರೆದ ಛಾಯಾ ಎಂಬ ಚಿತ್ರಕಥೆಗೆ ಸುವರ್ಣಪದಕವೂ (1936) ಯಯಾತಿ ಕಾದಂಬರಿಗೆ ಕೇಂದ್ರಸಾಹಿತ್ಯ ಅಕಾಡಮಿಯ ಪುರಸ್ಕಾರವೂ , ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ(೧೯೬೦), ಜ್ಞಾನಪೀಠ ಪ್ರಶಸ್ತಿ(೧೯೭೪)ಗಳೂ ದೊರೆತಿವೆ. ಸಾಹಿತ್ಯಿಕ ಕೆಲಸಗಳಿಗಾಗಿ ಇವರಿಗೆ ಪದ್ಮಭೂಷಣ ಪ್ರಶಸ್ತಿಯು 1968ರಲ್ಲಿ ಬಂತು. ಮರುವರ್ಷ ಇವರು ಸಾಹಿತ್ಯ ಅಕಾಡಮಿಯ ಫೆಲೋ ಆದರು. ಲೇಖಕರಾಗಿ ಇವರ ಕೀರ್ತಿ ಮಹಾರಾಷ್ಟ್ರದ ಹೊರಗಡೆಯಲ್ಲಿಯೂ ಹಬ್ಬಿದೆ.
ಕನ್ನಡದಲ್ಲಿ ಇವರ ಕೃತಿಗಳು
ಇವರ ಹೃದಯಾಚೀ ಹಾಕ, ಕಾಂಚನ ಮೃಗ, ದೋನ ಧ್ರುವ ಕಾದಂಬರಿಗಳು ಕನ್ನಡಕ್ಕೆ ಅನುವಾದವಾಗಿವೆ. ಯಯಾತಿ ಕಾದಂಬರಿಯನ್ನು ಕನ್ನಡಕ್ಕೆ ವಿ. ಎಮ್. ಇನಾಮದಾರರು ಅನುವಾದಿಸಿದ್ದಾರೆ.