ಮಾಸ್ತಿ ವೆಂಕಟೇಶ ಅಯ್ಯಂಗಾರ್
ಮಾಸ್ತಿ ಕನ್ನಡದ ಆಸ್ತಿ
ಮಾಸ್ತಿ ವೆಂಕಟೇಶ ಅಯ್ಯಂಗಾರ್ (MASTI VENKATESHA IYENGAR) | |
---|---|
![]() ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ | |
ಜನನ | 6 ಜೂನ್ 1891 ಹೊಂಗೆನಹಳ್ಳಿ, ಮಾಲೂರು, ಕೋಲಾರ, ಮೈಸೂರ್ ರಾಜ್ಯ, ಬ್ರಿಟಿಷ್ ಇಂಡಿಯಾ. (ಈಗಿನ ಕರ್ನಾಟಕ, ಭಾರತ) |
ಮರಣ | 6 ಜೂನ್ 1986 ಬೆಂಗಳೂರು, ಕರ್ನಾಟಕ, ಭಾರತ | (ವಯಸ್ಸು 95)
ವೃತ್ತಿ | ಜಿಲ್ಲಾಧಿಕಾರಿ, ಪ್ರೊಫೆಸರ್, ಲೇಖಕ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | Fiction |
ವಿಷಯ | ಕನ್ನಡ ಸಾಹಿತ್ಯ |
ಸಾಹಿತ್ಯ ಚಳುವಳಿ | ಕನ್ನಡ ಸಾಹಿತ್ಯ, ನವೋದಯ |
ಮಾಸ್ತಿ ವೆಂಕಟೇಶ ಅಯ್ಯಂಗಾರರು (ಜೂನ್ ೬ ೧೮೯೧ -ಜೂನ್ ೬ ೧೯೮೬)-ಕನ್ನಡದ ಒಬ್ಬ ಅಪ್ರತಿಮ ಲೇಖಕರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವ ಈ ಸಾಹಿತಿ ಶ್ರೀನಿವಾಸ ಎಂಬ ಕಾವ್ಯನಾಮದಡಿಯಲ್ಲಿ ಬರೆಯುತ್ತಿದರು.
ಬಾಲ್ಯ ಜೀವನ
- ಮಾಸ್ತಿ ವೆಂಕಟೇಶ ಅಯ್ಯಂಗಾರರು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ಜೂನ್ ೬ ೧೮೯೧ ರಂದು ಜನಿಸಿದರು. ಅವರು ಹುಟ್ಟುವ ಕಾಲಕ್ಕೆ ಮನೆಯಲ್ಲಿ ಬಡತನವಿತ್ತು. ಒಂದು ಕಾಲಕ್ಕೆ ಶ್ರೀಮಂತಿಕೆಯಿಂದ ವಿಜೃಂಭಿಸಿದ ಕುಟುಂಬ ಅವರ ಪೂರ್ವಿಕರದು. ಮಾಸ್ತಿ ವೆಂಕಟೇಶ ಅಯ್ಯಂಗಾರರು "ಪೆರಿಯಾತ್" ಎಂಬ ಮನೆತನದವರು. ಇದರ ಅರ್ಥ ದೊಡ್ಡ ಮನೆಯವರು ಎಂದು. ಅವರ ವಿದ್ಯಾಭ್ಯಾಸ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಜರುಗಿತು.
- ಅವರ ಹಿರಿಯರು ಬಹು ಜನಕ್ಕೆ ಅನ್ನ ಹಾಕಿ ಹೆಸರು ಗಳಿಸಿದ್ದರಾದರೂ ಅವರು ವಾರದ ಮನೆಗಳಲ್ಲಿ ಊಟಮಾಡಿ ವಿದ್ಯಾಭ್ಯಾಸ ಮಾಡಬೇಕಾಯಿತು. ಹೊಂಗೇನಳ್ಳಿ, ಯಲಂದೂರು, ಶಿವಾರಪಟ್ಟಣ, ಮಳವಳ್ಳಿ, ಮೈಸೂರು, ಕಡೆಗೆ ಮದರಾಸು ಹೀಗೆ ನಾನಾ ಕಡೆಗಳಲ್ಲಿ ತಮ್ಮ ಬಂಧುಗಳ ನೆರವಿನಿಂದ ವಿದ್ಯಾಭ್ಯಾಸ ಮಾಡಿ ಎಂ.ಎ ಪದವಿ ಗಳಿಸಿದರು. ತಮ್ಮ ವಿದ್ಯಾಭ್ಯಾಸ ಕಾಲದಲ್ಲಿ ಮಾಸ್ತಿ ಯಾವ ಪರೀಕ್ಷೆಯಲ್ಲೂ ಪ್ರಥಮ ಸ್ಥಾನ ವನ್ನು ಬೇರೆಯವರಿಗೆ ಬಿಟ್ಟುಕೊಡಲಿಲ್ಲ.
- ಮದ್ರಾಸಿನಲ್ಲಿ ಇಂಗ್ಲೀಷ್ ಎಂ.ಎ ಮಾಡಿಕೊಂಡು ಚಿನ್ನದ ಪದಕ ಗಳಿಸಿದ ಮಾಸ್ತಿ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸುಮಾರು ಒಂದೂವರೆ ತಿಂಗಳು ಉಪಾಧ್ಯಾಯರಾಗಿದ್ದು ಬೆಂಗಳೂರಿಗೆ ಬಂದು ಸಿವಿಲ್ ಪರೀಕ್ಷೆಗೆ ಕುಳಿತು ಅಲ್ಲಿಯೂ ಪ್ರಥಮರಾಗಿ ತೇರ್ಗಡೆಯಾದರು. ಸರ್ಕಾರದಲ್ಲಿ ಅಸಿಸ್ಟೆಂಟ್ ಕಮೀಶನರಾಗಿ ಕೆಲಸಕ್ಕೆ ಸೇರಿ ಸಮರ್ಪಕವಾಗಿ ಕೆಲಸ ನಿರ್ವಹಿಸಿದರು.
- ಸಾಹಿತ್ಯ ರಚನೆ ಅವರ ಪ್ರವೃತ್ತಿಯಾಗಿ ಬೆಳೆಯಿತು. ಮೆಟ್ರಿಕ್ಯುಲೇಷನ್(೧೯೦೭), ಎಫ್.ಎ (೧೯೦೯), ಬಿ.ಎ (ಮದರಾಸು ವಿಶ್ವವಿದ್ಯಾಲಯ ೧೯೧೨), ಮೈಸೂರು ಸಿವಿಲ್ ಸರ್ವಿಸ್ (೧೯೧೩), ಎಂ.ಎ (ಮದರಾಸು ವಿಶ್ವವಿದ್ಯಾಲಯ ೧೯೧೪) ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ, ೧೯೧೪ ರಲ್ಲಿ ಮೈಸೂರು ಸರ್ಕಾರದಲ್ಲಿ ಅಸಿಸ್ಟೆಂಟ್ ಕಮಿಷನರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು.
- ೧೯೧೪ ರಿಂದ ೧೯೪೩ ರವರೆಗೆ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿ ನಿವೃತ್ತರಾದರು. ೧೯೨೦ ರಲ್ಲಿ ಅವರ ಮೊದಲ ಪುಸ್ತಕ ಕೆಲವು ಸಣ್ಣ ಕಥೆಗಳು ಪ್ರಕಟಗೊಂಡಿತು. ಸಣ್ಣಕತೆ, ನೀಳ್ಗತೆ, ಕಾದಂಬರಿ, ಕಾವ್ಯ, ನಾಟಕ, ಜೀವನ ಚರಿತ್ರೆ, ಪ್ರಬಂಧ, ವಿಮರ್ಶೆ, ಸಂಪಾದನೆ, ಅನುವಾದ - ಹೀಗೆ ಕನ್ನಡ ಸಾಹಿತ್ಯದ ಪ್ರತಿಯೊಂದು ಕ್ಷೇತ್ರಕ್ಕೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ.
- ೧೯೮೩ ರಲ್ಲಿ ಚಿಕವೀರ ರಾಜೇಂದ್ರ ಕಾದಂಬರಿಗಾಗಿ ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡ ಮಾಸ್ತಿಯವರು ಕನ್ನಡಕ್ಕೆ ನಾಲ್ಕನೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟರು. ಜೀವನ ಪರ್ಯಂತ ಕನ್ನಡ ಸೇವೆಯನ್ನು ಮಾಡಿದ ಮಾಸ್ತಿಯವರು ಜೂನ್ ೬ ೧೯೮೬ ರಂದು ನಿಧನ ಹೊಂದಿದರು.

ಮಾಸ್ತಿ ವೆಂಕಟೇಶ ಅಯ್ಯಂಗಾರರು ತಮ್ಮ ಮಧ್ಯ ವಯಸ್ಸಿನಲ್ಲಿರುವಾಗ ಇರುವ ಚಿತ್ರ
ಸಾಹಿತ್ಯ
- ಮಾಸ್ತಿ ಕನ್ನಡಿಗರಿಗೆ ಒಂದು ಆದರ್ಶ. ಎಂಥ ಕಷ್ಟ ಕಾಲದಲ್ಲೂ ಅವರು ಜೀವನವನ್ನೆದುರಿಸಿದರು. ಸಾಹಿತ್ಯ ರಚಿಸಿದಂತೆಯೇ ಸಾಹಿತ್ಯ ಪೋಷಕರಾದರು. ಜಿ ಪಿ ರಾಜರತ್ನಂ, ದ ರಾ ಬೇಂದ್ರೆಯಂತಹವರಿಗೆ ಅವರು ಆದರ್ಶರಾಗಿದ್ದರು. ೧೯೧೦ ರಲ್ಲಿ ಬರೆದ ರಂಗನ ಮದುವೆ ಎಂಬ ಸಣ್ಣ ಕಥೆಗಳ ಸಂಗ್ರಹದಿಂದ ಹಿಡಿದು ಅವರು ನಿಧನರಾಗುವುದಕ್ಕೆ ಕೆಲವೇ ತಿಂಗಳುಗಳ ಹಿಂದೆ ಪ್ರಕಟವಾದ 'ಮಾತುಗಾರ ರಾಮಣ್ಣ' ಎಂಬ ಕೃತಿಯವರೆಗೆ ಅವರು ರಚಿಸಿದ ಕೃತಿಗಳ ಸಂಖ್ಯೆ ೧೨೩.
- ಇದರಲ್ಲಿ ಸಣ್ಣಕತೆಗಳು, ಕಾದಂಬರಿಗಳು, ನಾಟಕಗಳು, ವಿಮರ್ಶೆಗಳು, ಪ್ರಬಂಧಗಳು, ಧಾರ್ಮಿಕ ಕೃತಿಗಳು, ಅನುವಾದ, "ಜೀವನ" ಎಂಬ ಅವರೇ ನಡೆಸುತ್ತಿದ್ದ ಪತ್ರಿಕೆಯಲ್ಲಿ ಬರೆದ ಸಂಪಾದಕೀಯ ಲೇಖನಗಳು, ಕವಿತೆಗಳ ಸಂಗ್ರಹ, ಕಾವ್ಯ ಸೇರಿವೆ. ೨೦ನೆಯ ಶತಮಾನದ ಆರಂಭದ ಕಾಲ. ಕನ್ನಡ ಭಾಷೆಗೆ ಹೇಳಿಕೊಳ್ಳುವಂಥ ಪ್ರೋತ್ಸಾಹವಿರಲಿಲ್ಲ. ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಸಾಹಿತ್ಯದಲ್ಲಿ ಗಮನಾರ್ಹ ಕೆಲಸವಾಗಬೇಕಾಗಿದ್ದ ಕಾಲದಲ್ಲಿ ಮಾಸ್ತಿ ಸಾಹಿತ್ಯ ರಚನೆಯ ಕೆಲಸವನ್ನು ಕೈಗೊಂಡರು.
- ಸಣ್ಣ ಕತೆಗಳ ರಚನೆ ಅವರು ಪ್ರಧಾನವಾಗಿ ಆರಿಸಿಕೊಂಡ ಸಾಹಿತ್ಯ ಪ್ರಕಾರ. ಶ್ರೀನಿವಾಸ ಎಂಬ ಕಾವ್ಯನಾಮದಲ್ಲಿ ಮಾಸ್ತಿ ನೂರಾರು ಸಣ್ಣ ಕತೆಗಳನ್ನು ಬರೆದರು. ಹಲವಾರು ಕಥಾ ಸಂಕಲನಗಳನ್ನು ಪ್ರಕಟಿಸಿದರು. ಅವರ ಒಂದು ಸಣ್ಣಕಥೆಯನ್ನು ರಾಜಾಜಿಯವರು ತಮಿಳಿಗೆ ಅನುವಾದಿಸಿದರು. ಇಂಗ್ಲೀಷ್ ಹಾಗೂ ಇತರ ಭಾರತೀಯ ಭಾಷೆಗಳಿಗೆ ಮಾಸ್ತಿ ಅವರ ಸಣ್ಣ ಕತೆಗಳು ಅನುವಾದಗೊಂಡಿವೆ. ದೂರದರ್ಶನದಲ್ಲಿ ಕೆಲವು ಕತೆಗಳು ಅಭಿನಯಿಸಲ್ಪಟ್ಟು ಪ್ರಸಾರವಾಗಿವೆ. *ಕಥೆ ಹೇಳುವುದರಲ್ಲಿ ಮಾಸ್ತಿ ಎತ್ತಿದ ಕೈ. ಅವರ ಕಥೆಗಳನ್ನು ಓದುತ್ತಿದ್ದರೆ ಅವು ಕಣ್ಣಿಗೆ ಕಟ್ಟಿದಂತಿರುತ್ತವೆ. "ಸುಬ್ಬಣ್ಣ" ಅವರ ಒಂದು ಖ್ಯಾತ ನೀಳ್ಗತೆ. ಅಪಾರ ಮಾನವೀಯ ಅಂತಃಕರಣವನ್ನು ಕತೆಯಲ್ಲಿ ತುಳುಕಿಸಿದ ಅವರು ಕಥೆಗಳ ರಚನೆಗೆ ಬಳಸಿದ ತಂತ್ರ ಅಪರೂಪದ್ದಾಗಿದೆ. ಸಣ್ಣ ಕಥೆಗಳ ಜನಕರೆಂದೇ ಅವರಿಗೆ ಕರೆಯುತ್ತಿದ್ದ ರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಅವರ ಕಥೆಗಳ ಸಂಕಲನಗಳಿಗೆ ಲಭಿಸಿತು. ಕಥೆ ಹೇಳುವುದು ಒಂದು ಪುಣ್ಯದ ಕೆಲಸವೆಂದು ಅವರು ಭಾವಿಸಿದ್ದರು.
- ಮಾಸ್ತಿ ಕಥೆಗಳನ್ನು ಬರೆದಂತೆಯೇ ಕಾದಂಬರಿ, ಕವಿತೆ, ಪ್ರಬಂಧ ಇವುಗಳನ್ನೂ ಬರೆದರು, ನಾಟಕಗಳನ್ನೂ ರಚಿಸಿದರು. ಅವರ ಎಲ್ಲ ಕೃತಿಗಳಲ್ಲೂ ಕುಶಲತೆ, ಸೌಮ್ಯತೆ, ಜೀವನ ದರ್ಶನಗಳನ್ನು ಸ್ಪಷ್ಟವಾಗಿ ಕಾಣಬಹುದು. "ಭಾರತತೀರ್ಥ", "ಆದಿಕವಿ ವಾಲ್ಮೀಕಿ" ಇವು ಭಾರತ ರಾಮಾಯಣಗಳನ್ನು ಕುರಿತು ಬರೆದಿರುವ ಗ್ರಂಥಗಳಾದರೆ "ಶ್ರೀರಾಮ ಪಟ್ಟಾಭಿಷೇಕ" ಅವರ ಒಂದು ಕಾವ್ಯ.
- ರವೀಂದ್ರನಾಥ ಠಾಕೂರ್, ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಗಳನ್ನೂ, ಪುರಂದರದಾಸ, ಕನಕದಾಸ, ಅನಾರ್ಕಳಿ, ತಿರುಪಾಣಿ, ಶಿವಾಜಿ ಮೊದಲಾದ ನಾಟಕಗಳನ್ನೂ, ಷೇಕ್ಸ್‌ಪಿಯರನ ನಾಟಕಗಳ ಅನುವಾದಗಳನ್ನೂ ಮಾಸ್ತಿ ಪ್ರಕಟಿಸಿದ್ದಾರೆ.
- ಮಾಸ್ತಿ ಬರೆದ ಕಾದಂಬರಿಗಳು ಎರಡು. ಜ್ಞಾನಪೀಠ ಪ್ರಶಸ್ತಿ ಗಳಿಸಿದ ಕೃತಿ ಚಿಕವೀರ ರಾಜೇಂದ್ರ - ಕೊಡಗಿನ ಕಡೆಯ ರಾಜ ಚಿಕವೀರ ರಾಜೇಂದ್ರನನ್ನು ಕುರಿತದ್ದು, ಮತ್ತೊಂದು "ಚನ್ನಬಸವನಾಯಕ".
- "ಭಾವ" - ಮಾಸ್ತಿ ಅವರ ಆತ್ಮಕಥೆ ಇರುವ ಮೂರು ಸಂಪುಟಗಳ ಗ್ರಂಥಮುಖ್ಯ ಕೃತಿಗಳು,
5ಸಣ್ಣ ಕತೆಗಳ ಸಂಗ್ರಹ
- ಸಣ್ಣಕತೆಗಳು (೫ ಸಂಪುಟಗಳು)
- ರಂಗನ ಮದುವೆ
- ಮಾತುಗಾರ ರಾಮ
ಕಾವ್ಯ ಸಂಕಲನಗಳು
ಜೀವನ ಚರಿತ್ರೆ
ಪ್ರಬಂಧ
ನಾಟಕ
ಕಾದಂಬರಿ
ಪ್ರಶಸ್ತಿಗಳು
- ಜ್ಞಾನಪೀಠ ಪ್ರಶಸ್ತಿ (೧೯೮೩)
- ಮೈಸೂರು ವಿಶ್ವವಿದ್ಯಾಲಯದ ಡಿ. ಲಿಟ್(೧೯೭೭)
- ಕರ್ನಾಟಕ ವಿಶ್ವವಿದ್ಯಾಲಯದ ಡಿ. ಲಿಟ್(೧೯೫೬)
- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೬೮)
- ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪದವಿ(೧೯೫೩)
- ದಕ್ಷಿಣ ಭಾರತ ಸಾಹಿತ್ಯಗಳ ಸಮ್ಮೇಳನ ಅಧ್ಯಕ್ಷ ಪದವಿ(೧೯೪೬)
ಗೌರವಗಳು
ಮಾಸ್ತಿ ಅವರಿಗೆ ಸಂದ ಗೌರವ, ಪ್ರಶಸ್ತಿಗಳು ಅಪಾರ. "ಮಾಸ್ತಿ ಕನ್ನಡದ ಆಸ್ತಿ" ಎಂಬ ಹೇಳಿಕೆ ಒಂದು ನಾಣ್ಣುಡಿಯಾಗಿದೆ.
- ಎಲ್ಲ ಸಾಹಿತಿಗಳಿಗೂ ಅವರು "ಅಣ್ಣ ಮಾಸ್ತಿ"ಯಾಗಿದ್ದರು. ವರಕವಿ ದ ರಾ ಬೇಂದ್ರೆ ಮಾಸ್ತಿಯವರನ್ನು ಹಿರಿಯಣ್ಣ ಎಂದು ಗೌರವಿಸಿದ್ದರು.
- ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮಾಸ್ತಿ ಸೇವೆ ಸಲ್ಲಿಸಿದರು.
- ೧೯೨೯ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
- ಕರ್ನಾಟಕ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು.
- ಮೈಸೂರು ಮಹಾರಾಜರು "ರಾಜಸೇವಾ ಪ್ರಸಕ್ತ" ಎಂದು ಗೌರವಿಸಿದ್ದರು.
- ೧೯೭೨ರಲ್ಲಿ """ ಶ್ರೀನಿವಾಸ """ ಎಂಬ ಅವರ ಅಭಿನಂದನಾ ಗ್ರಂಥ ಪ್ರಕಟವಾಯಿತು.
ಈ ಪುಟಗಳನ್ನೂ ನೋಡಿ
ಹೊರಗಿನ ಕೊಂಡಿಗಳು
- ಮಾಸ್ತಿಯವರ ವಿವರಗಳನ್ನುಳ್ಳ ಜಾಲತಾಣ-ಎಂ. ವಿ. ಜೆ. ಕೆ. ಟ್ರಸ್ಟ್
- ಸುಬ್ಬಣ್ಣ (ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಜಾಲತಾಣದಲ್ಲಿ ಓದಲು ಸಿಗುವ ಪುಸ್ತಕ)
- ಕನ್ನಡದ ಆಸ್ತಿ 'ಶ್ರೀನಿವಾಸ' ಎಂಬ ಮಾಸ್ತಿ - ಕನ್ನಡರತ್ನ.ಕಾಂ
ವರ್ಗ:ಮಾಸ್ತಿಯವರ ಕೃತಿಗಳು
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.