ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ
ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನವು ಭಾರತದ ಉತ್ತರಾಖಂಡ ರಾಜ್ಯದಲ್ಲಿರುವ ಒಂದು ರಾಷ್ಟ್ರೀಯ ಉದ್ಯಾನ. ಪಶ್ಚಿಮ ಹಿಮಾಲಯದ ಉನ್ನತ ಪ್ರದೇಶದಲ್ಲಿರುವ ಈ ಉದ್ಯಾನವು ಅದ್ಭುತ ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿದ್ದು ನೂರಾರು ಬಗೆಯ ಹೂವುಗಳ ಬೃಹತ್ ನೈಸರ್ಗಿಕ ತೋಟವಾಗಿದೆ. ಜೀವ ವೈವಿಧ್ಯದ ನೆಲೆಯಾಗಿರುವ ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನವು ಕಪ್ಪು ಕರಡಿ, ಹಿಮ ಚಿರತೆ, ಕಂದು ಕರಡಿ ಮತ್ತು ನೀಲಿ ಕುರಿಗಳಂತಹ ವನ್ಯ ಜೀವಿಗಳಿಗೆ ನೆಲೆಯಾಗಿದೆ. ನಂದಾದೇವಿ ರಾಷ್ಟ್ರೀಯ ಉದ್ಯಾನದೊಂದಿಗೆ ಗುರುತಿಸಲ್ಪಡುವ ಈ ಉದ್ಯಾನ ಪ್ರೆದೇಶದ ಭೂ ಮೇಲ್ಮೈ ಉನ್ನತ ಪರ್ವತ ಪ್ರಾಂತ್ಯವಾಗಿದ್ದರೂ ಸಹ ತೀವ್ರ ಕಡಿದಾಗಿಲ್ಲ. ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನದ ವಿಸ್ತೀರ್ಣವು ಸುಮಾರು ೮೭.೫೦ ಚದರ ಕಿ.ಮೀ. ಗಳಷ್ಟು. ಈ ಎರಡೂ ಉದ್ಯಾನಗಳು ಒಟ್ಟಾಗಿ ವಿಶ್ವ ಪರಂಪರೆಯ ತಾಣವಾಗಿ ಮಾನ್ಯತೆ ಪಡೆದಿವೆ.
ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು* | |
---|---|
UNESCO ವಿಶ್ವ ಪರಂಪರೆಯ ತಾಣ | |
ರಾಷ್ಟ್ರ | ![]() |
ತಾಣದ ವರ್ಗ | ಸಾಂಸ್ಕೃತಿಕ |
ಆಯ್ಕೆಯ ಮಾನದಂಡಗಳು | vii, x |
ಆಕರ | 335 |
ವಲಯ** | ಏಷ್ಯಾ-ಪೆಸಿಫಿಕ್ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 1988 (12ನೆಯ ಅಧಿವೇಶನ) |
ವಿಸ್ತರಣೆ | 2005 |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನವು ಪಶ್ಚಿಮ ಹಿಮಾಲಯದ ಜೀವವಲಯದ ಪ್ರತಿನಿಧಿಯಾಗಿದ್ದು ತನ್ನ ಆಲ್ಪೈನ್ ಸಸ್ಯರಾಜಿಯಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯ ಹೊಂದಿದೆ. ಇಲ್ಲಿಯ ಜೀವವೈವಿಧ್ಯದ ಹಲವು ತಳಿಗಳು ಜಾಗತಿಕವಾಗಿ ಅಳಿವಿನಂಚಿನಲ್ಲಿವೆ. ಇವುಗಳಲ್ಲಿ ಇನ್ನು ಕಲವು ಉತ್ತರಾಖಂಡ ರಾಜ್ಯದ ಇತರೆಡೆಗಳಲ್ಲಿ ಹಾಗೂ ಪಕ್ಕದ ನಂದಾದೇವಿ ರಾಷ್ಟ್ರೀಯ ಉದ್ಯಾನದಲ್ಲಿ ಸಹ ಕಾಣಬರುವುದಿಲ್ಲ. ಇಲ್ಲಿ ಇರುವ ಔಷಧೀಯ ಗಿಡಮೂಲಿಕೆಗಳ ಪ್ರಕಾರಗಳು ಹಿಮಾಲಯದ ಇತರ ಯಾವುದೇ ಪ್ರದೇಶಗಳಲ್ಲಿಗಿಂತ ಹೆಚ್ಚು. ಏಳು ತಳಿಗಳ ಪಕ್ಷಿಗಳು ಇಲ್ಲಿ ವ್ಯಾಪಕವಾಗಿ ಕಾಣಬರುತ್ತವೆ.
ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನವನ್ನು ೧೯೮೨ರಲ್ಲಿ ರಾಷ್ಟ್ರೀಯ ಉದ್ಯಾನವನ್ನಾಗಿ ಘೋಷಿಸಲಾಯಿತು. ಉತ್ತರಾಖಂಡದ ಗಢ್‌ವಾಲ್ ಪ್ರದೇಶದ ಉನ್ನತ ಪ್ರಾಂತ್ಯದಲ್ಲಿರುವ ಈ ಪ್ರದೇಶವನ್ನು ವರ್ಷದ ಹೆಚ್ಚಿನ ಸಮಯದಲ್ಲಿ ತಲುಪಲು ಅಸಾಧ್ಯವಾಗಿದೆ. ಹಿಮಾಲಯದ ಝಂಸ್ಕಾರ್ ಶ್ರೇಣಿಯಲ್ಲಿರುವ ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನದ ಅತ್ಯುನ್ನತ ಸ್ಥಾನವೆಂದರೆ ೬೭೧೯ ಮೀ. ಎತ್ತರವಿರುವ ಗೌರಿ ಪರ್ಬತ್.
ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ಯಾವುದೇ ಜನವಸತಿ ಇಲ್ಲ. ಅಲ್ಲದೆ ಜಾನುವಾರುಗಳನ್ನು ಇಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ. ಜೂನ್ ನಿಂದ ಅಕ್ಟೋಬರ್ ತಿಂಗಳವರೆಗೆ ತೆರೆದಿರುವ ಈ ಪ್ರದೇಶವು ವರ್ಷದ ಇತರ ಸಮಯದಲ್ಲಿ ಸಂಪೂರ್ಣವಾಗಿ ಹಿಮದಿಂದ ಮುಚ್ಚಿಹೋಗಿರುತ್ತದೆ.
ಚಾರಣ
ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನವನ್ನು ತಲುಪಲು ಸುಮಾರು ೧೭ ಕಿ.ಮೀ. ಗಳಷ್ಟು ದೂರವನ್ನು ಕಾಲ್ನಡೆಯಿಂದ ಕ್ರಮಿಸಬೇಕಾಗುತ್ತದೆ. ಸಮೀಪದ ದೊಡ್ಡ ಪಟ್ಟಣವೆಂದರೆ ಜೋಷಿಮಠ. ಜೋಷಿಮಠವು ಹರಿದ್ವಾರ ಮತ್ತು ಡೆಹ್ರಾ ಡೂನ್ ನಗರಗಳೋದಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಜೋಷಿಮಠದಿಂದ ಬದರಿನಾಥಕ್ಕೆ ತೆರಳುವ ರಸ್ತೆಯಲ್ಲಿ ಗೋವಿಂದ್ ಘಾಟ್ ಎಂಬ ಹಳ್ಳಿಗೆ ಸಾಗಿ ಅಲ್ಲಿಂದ ಮುಂದೆ ಕಾಲುದಾರಿಯನ್ನು ಹಿಡಿದು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಕ್ಕೆ ತೆರಳಬೇಕಾಗುತ್ತದೆ. ಗೋವಿಂದ್ ಘಾಟ್ ನಿಂದ ೧೪ ಕಿ.ಮೀ. ನಡೆದುಸಾಗಿದ ನಂತರ ಘಂಘಾರಿಯಾ ಎಂಬ ಒಂದು ಪುಟ್ಟ ಗ್ರಾಮವು ಸಿಗುವುದು. ಇಲ್ಲಿ ದಾರಿ ಕವಲಾಗಿ ಒಂದು ೩ ಕಿ.ಮೀ. ದೂರದ ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನದತ್ತ ಸಾಗಿದರೆ ಇನ್ನೊಂದು ಹಾದಿ ೫ ಕಿ.ಮೀ. ದೂರದಲ್ಲಿರುವ ಸಿಖ್ ಧರ್ಮೀಯರ ಅತಿ ಪಾವನ ಧಾಮಗಳಲ್ಲಿ ಒಂದಾದ ಹೇಮ್‌ಕುಂಡ್ ಸಾಹಿಬ್‌ಗೆ ತೆರಳುತ್ತದೆ.
ವನ್ಯಜೀವಿಗಳು
ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನವು ಟಾಹ್ರ್, ಹಿಮ ಚಿರತೆ, ಕಸ್ತೂರಿ ಮೃಗ, ಕೆಂಪು ನರಿ, ಕೋತಿ, ಭರಲ್, ಹಿಮಾಲಯದ ಕಪ್ಪು ಕರಡಿ ಮತ್ತು ಕೆಂಪು ಕರಡಿ, ಪಿಕಾಲ್ ಮುಂತಾದ ಪ್ರಾಣಿಗಳಿಗೆ ನೆಲೆಯಾಗಿದೆ. ಅಗಾಧ ಸಂಖ್ಯೆಯ ಚಿಟ್ಟೆಗಳ ಪ್ರಬೇಧಗಳು ಇಲ್ಲಿ ಕಾಣಬರುತ್ತವೆ. ಅಲ್ಲದೆ ಹಿಮಾಲಯದ ಗರುಡ, ಗ್ರಿಫಾನ್ ಹದ್ದು, ಹಿಮ ಕೋಳಿ, ಮೊನಾಲ್, ಹಿಮ ಪಾರಿವಾಳ ಮುಂತಾದ ಪಕ್ಷಿಗಳು ಇಲ್ಲಿ ನೆಲೆಸಿವೆ.
ಸಸ್ಯ ವೈವಿಧ್ಯ
ಇಲ್ಲಿನ ಹೂವುಗಳು ಆಲ್ಪೈನ್ ತಳಿಗೆ ಸೇರಿದ್ದು ಮುಖ್ಯವಾಗಿ ಆರ್ಖಿಡ್, ಪ್ರೈಮ್ಯೂಲಾ, ಮೇರಿಗೋಲ್ಡ್, ಡೈಸೀಗಳು ಹೆಚ್ಚಾಗಿವೆ. ಇಲ್ಲಿನ ಪ್ರದೇಶವು ಆಲ್ಪೈನ್ ಬಿರ್ಚ್ ಮತ್ತು ರೋಡೋಡೆಂಡ್ರಾನ್ ಮರಗಳನ್ನು ಹೆಚ್ಚಾಗಿ ಹೊಂದಿರುವ ಕಾಡಿನಿಂದ ಆವೃತವಾಗಿದೆ.
ಬಾಹ್ಯ ಸಂಪರ್ಕಗಳು
- ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನದ ಅಧಿಕೃತ ಅಂತರ್ಜಾಲ ತಾಣ
- ಅಧಿಕೃತ ಯುನೆಸ್ಕೋ ತಾಣ
- ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನದ ಬಗ್ಗೆ ಪೂರಕ ಮಾಹಿತಿ
- ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನದ ಹಾದಿಯ ಸುಂದರ ನೋಟ
- ಗಢ್‌ವಾಲ್ ಮಂಡಲ ವಿಕಾಸ ನಿಗಮ - ಚಾರಣದ ಬಗ್ಗೆ ಮಾಹಿತಿ
- ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನವು
- ಗುರುದ್ವಾರ ಹೇಮ್‌ಕುಂಡ್ ಸಾಹಿಬ್