ಗಿರ್ ಅರಣ್ಯ ರಾಷ್ಟ್ರೀಯ ಉದ್ಯಾನ

ಗುಜರಾತ್ ರಾಜ್ಯದ ಜುನಾಗಢ ಜಿಲ್ಲೆಯ ದಕ್ಷಿಣಭಾಗದಲ್ಲಿರುವ ಗಿರ್ ಗಿರಿಶ್ರೇಣಿಯ ತಳಭಾಗದಲ್ಲಿರುವ ಅತ್ಯಂತ ಆಕರ್ಷಕವೂ ವರ್ಣಮಯವೂ ಆಗಿರುವ ಅರಣ್ಯ. ಇದು ಸಾಮಾನ್ಯ ಅರ್ಥದಲ್ಲಿ ಅರಣ್ಯವೇ ಅಲ್ಲ; ಅರೆ ಮರುಭೂಮಿಯಿಂದ ಕೂಡಿದ 1412 ಚ.ಕಿಮೀ ವಿಸ್ತೀರ್ಣದ ಪ್ರದೇಶ. ಅಲ್ಲಲ್ಲಿ ಮುಳ್ಳು ಪೊದೆಗಳುಂಟು. ಇಲ್ಲಿಯ ಮರಗಳು ಸಾಗುವಾನಿಯ ದೃಷ್ಟಿಯಿಂದ ಅಷ್ಟೇನೂ ಉತ್ತಮವಲ್ಲ. ಈ ಕಾಡಿನಲ್ಲಿ ಕೆಲವು ತೇಗದ ಮರಗಳು ಉಂಟೂ. ಇಡೀ ಪ್ರದೇಶದಲ್ಲಿ ಅಲ್ಲಲ್ಲಿ ಸಾಗುವಳಿಯಾದ ನೆಲವೂ ಹಳ್ಳಿಗಳು ಇವೆ. ಭಾರತದಲ್ಲಿ ಉಳಿದಿರುವ ಕೆಲವೇ ಸಿಂಹಗಳು ಗಿರ್ ಅರಣ್ಯದಲ್ಲಿರುವುದರಿಂದ ಇದು ಬಹಳ ಪ್ರಸಿದ್ಧವಾಗಿದೆ ಇದೊಂದು ಅಭಯಾರಣ್ಯ. ಈ ಅರಣ್ಯದಲ್ಲಿರುವ ಸಿಂಹಗಳ ರಕ್ಷಣೆಗೆ ಸರ್ಕಾರ ವಿಶೇಷ ಕ್ರಮ ಕೈಗೊಂಡಿದೆ. 1950ರಲ್ಲಿ ನಡೆಸಿದ ಗಣತಿಯ ಪ್ರಕಾರ ಸುಮಾರು 240 ಸಿಂಹಗಳಿದ್ದುವು. 1955ರಲ್ಲಿ 290 ಸಿಂಹಗಳಿದ್ದು ವೆಂದು ಅಂದಾಜು ಮಾಡಲಾಗಿತ್ತು. ಅರಣ್ಯದಲ್ಲಿ ಆಹಾರ ಸಿಕ್ಕದಿದ್ದಾಗ ಹಳ್ಳಿಗಳೊಳಕ್ಕೆ ನುಗ್ಗಿ ದನಕರುಗಳನ್ನು ಕೊಂದು ತಿನ್ನುತ್ತಿದ್ದ ಸಿಂಹಗಳ ಹಾವಳಿಯನ್ನು ತಪ್ಪಿಸಲು ಹಳ್ಳಿಗರು ವಿಷ ಹಾಕಿ ಇವನ್ನು ಕೊಲ್ಲುತ್ತಿದ್ದರೆಂದೂ ಇದರಿಂದಾಗಿ ಇವುಗಳ ಸಂಖ್ಯೆ ಸುಮಾರು 200ಕ್ಕೆ ಕಡಿಮೆಯಾಗಿದೆಯೆಂದೂ ಭಾವಿಸಲಾಗಿತ್ತು. 2011ರ ಜನಗಣತಿಯ ಪ್ರಕಾರ ಈಗ ಇಲ್ಲಿ ಸು. 526 ಸಿಂಹಗಳಿವೆ.


ಸೌರಾಷ್ಟ್ರದ ದಕ್ಷಿಣ ತೀರಕ್ಕೆ 75 ಕಿಮೀ ದೂರದಲ್ಲಿರುವ ಗಿರ್ ಗಿರಿಸಾಲು ಪೂರ್ವ ಪಶ್ಚಿಮವಾಗಿ 180 ಕಿಮೀ ದೂರ ಹಬ್ಬಿದೆ. ಅಲ್ಲಲ್ಲಿ ಕತ್ತರಿಸಿದಂತಿರುವ ಗಿರ್ ಶ್ರೇಣಿಯ ಪಶ್ಚಿಮದಲ್ಲಿ ಓಜಾತ್ ನದಿಯೂ ಪೂರ್ವದಲ್ಲಿ ಶೆತ್ರುಂಜಿ ನದಿಯೂ ಹರಿಯುತ್ತವೆ. ಓಜಾತ್ ನದಿ ಗಿರ್ ಶ್ರೇಣಿಗೂ ಗಿರ್ನಾರ್ ಶ್ರೇಣಿಗೂ ಗಿರ್ನಾರ್ ನಡುವಣ ಗಡಿರೇಖೆಯಂತಿದೆ. ಗಿರ್ ಶ್ರೇಣಿಯ ಅತ್ಯುನ್ನತ ಶಿಖರದ ಎತ್ತರ 643ಮೀ.


This article is issued from Wikipedia. The text is licensed under Creative Commons - Attribution - Sharealike. Additional terms may apply for the media files.