ಆರ್. ಗುಂಡೂ ರಾವ್

ಕರ್ನಾಟಕದ ಮಾಜಿ ಮುಖ್ಯ ಮಂತ್ರಿ[1] ಶ್ರೀ ಗುಂಡೂರಾವ್ ಇವರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿಯ ಕುಶಾಲನಗರದಲ್ಲಿ ೧೯೩೭ಎಪ್ರಿಲ್ ೮ರಂದು ಜನಿಸಿದರು. ತಾಯಿ ಚೆನ್ನಮ್ಮ ; ತಂದೆ ಕೆ.ರಾಮರಾವ್, ಶಾಲಾ ಶಿಕ್ಷಕರು. ಗುಂಡೂರಾಯರ ಶಿಕ್ಷಣ ಇಂಟರ್ ವರೆಗೆ ಮಾತ್ರ ಆಯಿತು. ಆರಂಭದಲ್ಲಿ ಖಾಸಗಿ ಬಸ್ಸಿನ ಏಜೆಂಟರಾಗಿದ್ದರು.

ರಾಜಕೀಯ

ಪ್ರವೇಶ

ತಮ್ಮ ಅಪಾರ ಜನಪ್ರಿಯತೆಯಿಂದ ತಮ್ಮ ೨೪ನೆಯ ವಯಸ್ಸಿನಲ್ಲೆ ಕುಶಾಲನಗರ ಪುರಸಭೆಯ ಚುನಾವಣೆಯಲ್ಲಿ , ಕಾಂಗ್ರೆಸ್ ವಿರುದ್ಧ ಯುವಕರ ಪಡೆಯನ್ನು ನಿಲ್ಲಿಸಿ, ಗೆಲ್ಲಿಸಿ, ಪುರಸಭೆಯನ್ನು ಕೈವಶ ಮಾಡಿಕೊಂಡಿದ್ದರು. ೯ ವರ್ಷಗಳವರೆಗೆ ಪುರಸಭೆಯ ಅಧ್ಯಕ್ಷರಾಗಿದ್ದರು.

ಆರೋಹಣ

೧೯೬೫ರಲ್ಲಿ ಕೊಡಗು ಜಿಲ್ಲೆ ಕಾಂಗ್ರೆಸ್ ಸದಸ್ಯರಾದರು. ಮುಂದುವರಿದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರಾದರು ; ಆಬಳಿಕ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾದರು. ೧೯೭೨ರಲ್ಲಿ ಸೋಮವಾರ ಪೇಟೆ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. ೧೯೭೩ರಲ್ಲಿ ದೇವರಾಜ ಅರಸು ಸಂಪುಟದಲ್ಲಿ ವಾರ್ತೆ, ಕ್ರೀಡೆ ಮತ್ತು ಯುವಜನ ಸೇವಾ ಖಾತೆಯ ರಾಜ್ಯ ಸಚಿವರಾದರು. ೧೯೭೬ರಲ್ಲಿ ವಸತಿ ಮತ್ತು ಯುವಜನ ಸೇವಾಖಾತೆಗೆ ಪೂರ್ಣಪ್ರಮಾಣದ ಮಂತ್ರಿಯಾದರು. ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಂಡ ನಂತರ, ೧೯೭೭ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜನತಾ ಪಕ್ಷ ಕೇಂದ್ರದಲ್ಲಿ ಅಧಿಕಾರ ಪಡೆಯಿತು. ಆನಂತರ ಅರಸು ಸರಕಾರದ ವಜಾ ಆಯಿತು. ೧೯೭೮ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅರಸು ಸರಕಾರದ ಪುನ:ಸ್ಥಾಪನೆಯಾಯಿತು. ಗುಂಡೂರಾವ್ ಈಗ ಸಾರಿಗೆ ಮತ್ತು ಪ್ರವಾಸೋದ್ಯಮ ಖಾತೆಯ ಸಚಿವರಾದರು. ೧೯೭೯ರಲ್ಲಿ ಕೇಂದ್ರದಲ್ಲಿ ಜನತಾ ಸರಕಾರದ ಪತನವಾಯಿತು. ಕಾಂಗ್ರೆಸ್ ಮತ್ತೆ ಇಬ್ಭಾಗವಾಗಿ ಗುಂಡೂರಾವ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ೧೯೮೦ಲೋಕಸಭಾ ಮಧ್ಯಾವಧಿ ಚುನಾವಣೆಗಳಲ್ಲಿ ,೨೮ ಲೋಕಸಭಾ ಕ್ಷೇತ್ರಗಳಲ್ಲಿ ೨೭ ಕ್ಷೇತ್ರಗಳನ್ನು ಇಂದಿರಾ ಕಾಂಗ್ರೆಸ್ ಗೆದ್ದುಕೊಂಡಿತು. ಅರಸು ಕಾಂಗ್ರೆಸ್ ನಿರ್ನಾಮವಾಗಿ, ಅರಸು ಸರಕಾರ ರಾಜೀನಾಮೆ ನೀಡಿತು. ಇಂದಿರಾ ಕಾಂಗ್ರೆಸ್ಸಿಗೆ ಜನತಾ ಪಕ್ಷ ಹಾಗು ಅರಸು ಪಕ್ಷದವರಿಂದ ಪಕ್ಷಾಂತರ. ಜನೆವರಿ ೧೨ರಂದು ಗುಂಡೂರಾವ್ ಅತಿ ಎಳೆಯ ವಯಸ್ಸಿನ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ೧೯೮೨ರಲ್ಲಿ ದೇವರಾಜ ಅರಸು ನಿಧನ. ೧೯೮೩ರಲ್ಲಿ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ನಡೆಯುವ ವರೆಗೂ ಗುಂಡೂರಾಯರ ವಿಜೃಂಭಣೆ.

ಮುಖ್ಯ ಮಂತ್ರಿ

ಗುಂಡೂರಾಯರ ರಾಜಕೀಯ ವರ್ಣರಂಜಿತವಾದದ್ದು. ತಾವು ನೀಡಿದ ಆದೇಶಗಳು ತಕ್ಷಣವೆ ಜಾರಿಗೆ ಬರಬೇಕು ಎನ್ನುವದು ಇವರ ಮನೋಧರ್ಮ. ಹೀಗಾಗಿ ಬೆಂಗಳೂರಿನ ಸುಭಾಷನಗರದಲ್ಲಿ ವಿಶಾಲವಾದ ಬಸ್ ಸ್ಟೇಶನ್ ನಿರ್ಮಾಣವಾಯಿತು. ಗದಗಿನ ಹತ್ತಿರವಿರುವ ಹುಲಕೋಟಿ ಇಂಜನಿಯರಿಂಗ್ ಕಾಲೇಜಿಗೆ ಟೆಕ್ಸಟೈಲ್ ಮತ್ತು ಕೆಮಿಕಲ್ ಇಂಜನಿಯರಿಂಗ ವಿಭಾಗ ತೆರೆಯಲು ಅನುಮತಿ ದೊರೆಯಿತು. ಧಾರವಾಡದ ಕೆ.ಪಿ.ಎಸ್.ಸಿ. ಸಂಸ್ಥೆಗೆ ಲಾ ಕಾಲೇಜು ಕಟ್ಟಲು ಸರಕಾರಿ ಸ್ಥಳ ದೊರೆಯಿತು.

ಅವರೋಹಣ

ತಮ್ಮ ಸರಕಾರವನ್ನು “ ಇಂದಿರಾಪೋಷಿತ ನಾಟಕ ಕಂಪನಿ” ಎಂದು ಕರೆದುಕೊಳ್ಳುತ್ತಿದ್ದ ಗುಂಡೂರಾಯರ ಈ ಮನೋಧರ್ಮವೇ ಅವರ ರಾಜಕೀಯ ಅವನತಿಗೂ ಕಾರಣವಾಯಿತು. ಸಚಿವರುಗಳಾದ ಇಬ್ರಾಹಿಮ್ ಹಾಗು ರೇಣುಕಾ ರಾಜೇಂದ್ರನ್ ಇವರ ಮೇಲೆ ಭ್ರಷ್ಟಾಚಾರದ ಆರೋಪ, ರೋಲರ್ ಫ್ಲೋರ್ ಮಿಲ್ ಲೈಸೆನ್ಸ್ ಹಗರಣ, ಬೆಂಗಳೂರಿನಲ್ಲಿ ಸಾರ್ವಜನಿಕ ರಂಗದ ಕೈಗಾರಿಕೆಗಳ ೭೭ ದಿನಗಳ ದೀರ್ಘ ಮುಷ್ಕರ, ಗೋಕಾಕ ಚಳವಳಿ, ಎಲ್ಲಕ್ಕೂ ಮುಖ್ಯವಾಗಿ ನರಗುಂದ ಹಾಗು ನವಲಗುಂದಗಳಲ್ಲಿ ನಡೆದ ರೈತ ಚಳವಳಿ ಇವು ಗುಂಡೂರಾಯರ ಅವನತಿಯ ಮೆಟ್ಟಿಲುಗಳಾದವೆನ್ನಬಹುದು. ೧೯೮೩ರಲ್ಲಿ ನಡೆದ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಗುಂಡೂರಾವ್ ಪರಾಭವಗೊಂಡರು. ರಾಮಕೃಷ್ಣ ಹೆಗಡೆ ಆಗ ಜನತಾ ಪಕ್ಷದಿಂದ ಸರಕಾರದ ಮುಖ್ಯ ಮಂತ್ರಿಗಳಾದರು. ೧೯೮೪ ಅಕ್ಟೋಬರ್ ೩೧ರಂದು ಇಂದಿರಾ ಗಾಂಧಿಯವರ ಹತ್ಯೆಯಾಯಿತು. ೧೯೮೫ ಮಾರ್ಚದಲ್ಲಿ ಲೋಕಸಭೆಗೆ ನಡೆದ ಮಧ್ಯಾವಧಿ ಚುನಾವಣೆಯಲ್ಲಿ ಗುಂಡೂರಾಯರಿಗೆ ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲ! ೧೯೮೬ ರಲ್ಲಿ ಪ್ರಣಬ ಮುಖರ್ಜಿ ಸ್ಥಾಪಿಸಿದ ಅಖಿಲ ಭಾರತೀಯ ಇಂದಿರಾ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಸೇರಿದರು. ೧೯೮೯ರಲ್ಲಿ ಪುನ: ರಾಜೀವ ಗಾಂಧಿಯವರಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು ; ಆದರೆ ಕಾಂಗ್ರೆಸ್ ಇಡಿ ದೇಶದಲ್ಲಿ ಪರಾಭವಗೊಂಡಿತ್ತು. ೧೯೯೧ಮೇ -ಜೂನ್‍ದಲ್ಲಿ ಲೋಕಸಭೆಗೆ ಮಧ್ಯಾವಧಿ ಚುನಾವಣೆ ಘೋಷಣೆ ಆಯಿತು. ಮೇ ೨೧ರಂದು ತಮಿಳುನಾಡಿನ ಪೆರಂಬದೂರಿನಲ್ಲಿ ರಾಜೀವ ಗಾಂಧಿಯವರ ಭೀಕರ ಹತ್ಯೆಯಾಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿತು ; ಆದರೆ ಗುಂಡೂರಾವ್ ಪರಾಭವಗೊಂಡರು.

ಕೊನೆ

ತಮ್ಮ ಕೊನೆಯ ೩,೪ ತಿಂಗಳುಗಳಲ್ಲಿ ಗುಂಡೂರಾವ್ ರಕ್ತ ಕ್ಯಾನ್ಸರದಿಂದ ಬಳಲಿದರು. ಲಂಡನ್ನಿನ ರಾಯಲ್ ಫ್ರೀ ಹಾಸ್ಪಿಟಲ್ ‍ನಲ್ಲಿ ಚಿಕಿತ್ಸೆ ನಡೆಯಿತು. ಆದರೆ ಪ್ರಯೋಜನವಾಗಲಿಲ್ಲ. “ಇದು ಜೀವಿತದ ಅಂತ, ಇದು ಜೀವಿತದ ಅಂತ,ಇದು ಜೀವಿತದ ಅಂತ ; ಗುಡುಗು ಹಾಕುತ್ತಲ್ಲ, ಠುಸ್ಸೆನುತ್ತ” ಕವಿ ಟಿ.ಎಸ್.ಈಲಿಯಟ್‍ನ ಈ ನುಡಿಗಳಂತೆ , ಪರ್ವತಪ್ರಾಯದ ದೇಹ ಹಾಗು ಮನಸ್ಸು ಹೊಂದಿದ ಗುಂಡೂರಾವ್ ೧೯೯೩ ಆಗಸ್ಟ್ ೨೨ರಂದು ತಮ್ಮ ಕೊನೆಯುಸಿರನ್ನೆಳೆದರು.

ಕುಟುಂಬ

ಗುಂಡೂರಾಯರ ಪತ್ನಿ ಶ್ರೀಮತಿ ವರಲಕ್ಷ್ಮಿ.ಇವರು ೧೯೯೬ರಲ್ಲಿ ಗುಂಡೂರಾಯರ ಲೋಕಸಭಾ ಕ್ಷೇತ್ರವಾದ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಿ ಸೋತರು. ಗುಂಡೂರಾಯರ ಮೂವರು ಪುತ್ರರಲ್ಲಿ ಒಬ್ಬರಾದ ದಿನೇಶ್ ಗುಂಡೂರಾವ್ ೧೯೯೯ರ ಸಾರ್ವಜನಿಕ ಚುನಾವಣೆಯಲ್ಲಿ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನ ಸಭೆಗೆ ಆಯ್ಕೆಯಾದರು. ಇವರು ಕರ್ನಾಟಕ ಪ್ರದೇಶ ಯುವಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದಾರೆ.

ಉಲ್ಲೇಖಗಳು



This article is issued from Wikipedia. The text is licensed under Creative Commons - Attribution - Sharealike. Additional terms may apply for the media files.