ಬೆಂಗಳೂರು ವಿಶ್ವವಿದ್ಯಾಲಯ

ಬೆಂಗಳೂರು ವಿಶ್ವವಿದ್ಯಾಲಯ - ಭಾರತದ ಅತಿ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಬೆಂಗಳೂರು ವಿಶ್ವವಿದ್ಯಲಯವೂ ಒಂದಾಗಿದೆ.[1] ಇದು ಇದರ ಪ್ರಮಾಣ ಮತ್ತು ಗುಣಮಟ್ಟಗಳೆರಡನ್ನೂ ಗಮನಿಸಿದ ಮಾತು. ಇದನ್ನು ದೃಢೀಕರಿಸುವಂತೆ ಇದರ ವ್ಯಾಪ್ತಿಯಲ್ಲಿರುವ ೭೨೦ ಕಾಲೇಜುಗಳನ್ನು ಮತ್ತು ಇದರ ಶೈಕ್ಷಣಿಕ ಗುಣಮಟ್ಟವನ್ನು ಮೌಲ್ಯಮಾಪನ ಮಾಡಿ ಯುಜಿಸಿ ನ್ಯಾಕ್ ಸಮಿತಿಯು ನೀಡಿರುವ ಪಂಚತಾರಾ ಮಾನ್ಯತೆಯನ್ನು ಗಮನಿಸಬಹುದು.[2][3]

ನೂತನ ಕಛೇರಿ
ಬೆಂಗಳೂರು ವಿಶ್ವವಿದ್ಯಾಲಯ
Bangalore University
ಧ್ಯೇಯJnaanam, Vijanana Sahitam
ಪ್ರಕಾರಸಾರ್ವಜನಿಕ
ಸ್ಥಾಪನೆ1964
ಕುಲಪತಿಗಳುವಾಜುಭಾಯಿ ವಾಲಾ
(ಕರ್ನಾಟಕ ಸರ್ಕಾರ)
ಉಪ-ಕುಲಪತಿಗಳುಬಿ ತಿಮ್ಮೆ ಗೌಡ
ಸ್ಥಳಜ್ಞಾನ ಭಾರತಿ, ಬೆಂಗಳೂರು, ಕರ್ನಾಟಕ, ಭಾರತ
12°56′19.59″N 77°30′11.45″E
ಆವರಣUrban
1,100 acres
NicknameBU
ಮಾನ್ಯತೆಗಳುUGC
NAAC
AIU
ACU
DEC
ಜಾಲತಾಣbangaloreuniversity.ac.in


ಸ್ಥಾಪನೆ

ಬೆಂಗಳೂರು ವಿಶ್ವವಿದ್ಯಾಲಯವು ೨೪.೧೧.೧೯೬೪ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾಯಿತು. ಹೆಚ್ ನರಸಿಂಹಯ್ಯ ನೂತನ ಆವರಣವನ್ನು ಜ್ಣಾನಭಾರತಿಯಲ್ಲಿ ಸ್ಥಾಪಿಸಿದರು ಮತ್ತು ಸ್ಥಾಪಕ ಉಪಕುಲಪತಿಗಳಾಗಿದ್ದರು. ಅದುವರೆಗೂ ಮೈಸೂರು ವಿಶ್ವವಿದ್ಯಾಲಯಕ್ಕೆ ಸೇರಿದ್ದ ೩೨ ಕಾಲೇಜುಗಳು ಇದರ ವ್ಯಾಪ್ತಿಗೆ ವರ್ಗಾವಣೆಗೊಂಡವು. ಇವುಗಳೊಂದಿಗೆ ೧೮೫೮ರಲ್ಲಿ ಆರಂಭವಾಗಿದ್ದ ಸೆಂಟ್ರಲ್ ಕಾಲೇಜು ಮತ್ತು ೧೯೧೭ರಲ್ಲಿ ಆರಂಭವಾಗಿದ್ದ ಎಂಜಿನಿಯರಿಂಗ್ ಕಾಲೇಜು ಇದರ ಆಂಗಿಕ ಕಾಲೇಜುಗಳಾದವು. ೧೯೭೫ ಸಪ್ಟೆಂಬರ್ ತಿಂಗಳ ತನಕ ನಗರದ ಪ್ರಾದೇಶಿಕ ವ್ಯಾಪ್ತಿ ಮಾತ್ರ ಹೊಂದಿದ್ದ ವಿಶ್ವವಿದ್ಯಾಲಯದಲ್ಲಿ ಒಟ್ಟು ೬೦ ಕಾಲೇಜುಗಳು, ೨೩ ಸ್ನಾತಕೋತ್ತರ ವಿಭಾಗಗಳು ಮಾತ್ರ ಇದ್ದವು. ಇವುಗಳು ಕಲೆ, ವಿಜ್ಞಾನ, ಶಿಕ್ಷಣ, ವಾಣಿಜ್ಯ, ವೈದ್ಯ, ಶಿಲ್ಪ, ಕಾನೂನು ಎಂಬ ನಿಕಾಯಗಳಲ್ಲಿ ಹಂಚಲ್ಪಟ್ಟಿದ್ದವು.

ಬೆಂಗಳೂರು ವಿ.ವಿ. ಅಧ್ಯಯನ ಕೇಂದ್ರ

ಕರ್ನಾಟಕ ಸರ್ಕಾರವು ೧೯೭೬ರಲ್ಲಿ ವಿಶ್ವವಿದ್ಯಾಲಯಗಳ ಹೊಸ ಅಧಿನಿಯಮವನ್ನು ಹೊರಡಿಸಿತು. ಪರಿಣಾಮವಾಗಿ ಈಗಾಗಲೇ ಪ್ರಸ್ತಾಪಿಸಿರುವಂತೆ ಬೆಂಗಳೂರು ನಗರಕ್ಕೆ ಸೀಮಿತವಾಗಿದ್ದ ಬೆಂಗಳೂರು ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಯನ್ನು ಅವಿಭಜಿತ ಬೆಂಗಳೂರು, ಕೋಲಾರ ಮತ್ತು ತುಮಕೂರು ಜಿಲ್ಲೆಗಳಿಗೆ ವಿಸ್ತರಿಸಿಕೊಂಡಿತು.

ಸ್ಕೂಲ್ ಆಫ್ ಎಂಜಿನಿಯರಿಂಗ್

ಬೆಳೆದು ಬಂದ ಬಗೆ

ಸೆಂಟ್ರಲ್ ಕಾಲೇಜು ಎಂಬ ಆವರಣದಲ್ಲಿ ಬೆಳೆದು ನಿಂತ ಬೆಂಗಳೂರು ವಿಶ್ವವಿದ್ಯಾಲಯದ ಕೇಂದ್ರ ಸ್ಥಾನವು ಅದರ ಬಾಹುಳ್ಯದಿಂದಾಗಿ ಹೊಸ ಮತ್ತು ವಿಶಾಲ ಆವರಣವನ್ನು ಕಂಡುಕೊಳ್ಳುವುದು ಅನಿವಾರ್ಯವೆನಿಸಿತು. ಹಾಗಾಗಿ ಬೆಂಗಳೂರು ನಗರಕ್ಕೆ ಸಮೀಪವಿದ್ದ ಮತ್ತು ಇಂದು ನಗರದ ಭಾಗವೇ ಆಗಿರುವ ನಾಗರಬಾವಿಯಲ್ಲಿ ಸುಮಾರು ೧,೪೦೦ ಎಕರೆ ವಿಸ್ತೀರ್ಣದ ವಿಶಾಲ ಪ್ರದೇಶದಲ್ಲಿ ಜ್ಞಾನಭಾರತಿ ಎಂಬ ಹೊಸ ಆವರಣವು (ಕ್ಯಾಂಪಸ್) ತಲೆ ಎತ್ತಿತು. ೧೯೭೩ರ ಆಸುಪಾಸಿನಲ್ಲಿ ನಡೆದ ಈ ಕಾರ್ಯದಲ್ಲಿ ಅಂದಿನ ಕುಲಪತಿಗಳಾಗಿದ್ದ ಡಾ. ಎಚ್. ನರಸಿಂಹಯ್ಯನವರ ದೂರದೃಷ್ಟಿ ಮತ್ತು ಪರಿಶ್ರಮ ಗುರುತರವಾದುದಾಗಿದೆ. ಅಂದು ಈ ಹೊಸ ಕ್ಯಾಂಪಸ್ ನಿರ್ಮಾಣಕ್ಕೆ ಮಂಜೂರಾದ ಹಣ ಹದಿನೈದು ಕೊಟಿ ರೂಪಾಯಿಗಳು. ಇದರಲ್ಲಿ ಸುಮಾರು ಹದಿಮೂರು ಕೋಟಿ ರೂಪಾಯಿಗಳು ವಿವಿಧ ಕಟ್ಟಡಗಳ ನಿರ್ಮಾಣಕ್ಕೆ ಬಳಕೆಯಾದುದು ಸಹಜವೇ ಆಗಿದೆ. ವಿವಿಧ ಭಾಗಗಳು, ವಿದ್ಯಾರ್ಥಿ ನಿಲಯಗಳು, ಗ್ರಂಥಾಲಯ, ಕೇಂದ್ರ ಆಡಳಿತ ಕಛೇರಿ, ಆರೋಗ್ಯ ಕೇಂದ್ರ, ಅಧ್ಯಾಪಕ ಮತ್ತು ಸಿಬ್ಬಂದಿಯ ವಸತಿ ಗೃಹಗಳು ಪ್ರಧಾನವಾಗಿ ಸೇರಿವೆ.

ಕುಲಪತಿಗಳು

ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಥಮ ಕುಲಪತಿಗಳಾಗಿದ್ದವರು ಲರೋಯ ಅವರು. ಅನಂತರದಲ್ಲಿ ವಿ.ಕೃ. ಗೋಕಾಕ್, ಟಿ.ಕೆ. ತುಕೋಳ್, ಎಚ್. ನರಸಿಂಹಯ್ಯ, ಟಿ.ಆರ್. ಜಯರಾಮನ್, ಎಂ.ಎನ್. ವಿಶ್ವನಾಥಯ್ಯ, ಡಿ. ಶಂಕರನಾರಾಯಣ, ಡಿ.ಎಂ. ನಂಜುಂಡಪ್ಪ, ಎಚ್. ಹನುಮಂತಪ್ಪ, ಎನ್.ಆರ್. ಶೆಟ್ಟಿ, ಕೆ. ಸಿದ್ಧಪ್ಪ, ಎಂ.ಎಸ್. ತಿಮ್ಮಪ್ಪ, ಕೆ. ಆರ್. ವೇಣುಗೋಪಾಲ್ ಅವರು ಕುಲಪತಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ.

ಇತರ ರಾಷ್ಟ್ರಗಳೊಂದಿಗಿನ ಸಂಬಂಧ

ಬೆಂಗಳೂರು ವಿಶ್ವವಿದ್ಯಾಲಯದ ಬೋಧನೆ ಮತ್ತು ಸಂಶೋಧನೆಗಳು ಜಗತ್ತಿನ ಅನೆಕ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ನಿಕಟಗೊಳಿಸಿವೆ. ಅಮೆರಿಕ, ಕೆನಡ, ಜರ್ಮನಿ, ಆಸ್ಟ್ರೇಲಿಯ, ಪೊಲ್ಯಾಂಡ್, ಚೀನಾ, ನೇಪಾಳ, ಆಫ್ರಿಕನ್ ರಾಷ್ಟ್ರಗಳು ಮುಂತಾದ ಹಲವು ರಾಷ್ಟ್ರಗಳ ಹಲವು ವಿದ್ವಾಂಸರು ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಹಲವು ಅಧ್ಯಾಪಕರು ಮತ್ತು ಪ್ರಾಧ್ಯಾಪಕರು ಇವತ್ತಿಗೂ ಇವುಗಳೊಂದಿಗೆ ಸ್ಥಾಪಿಸಿಕೊಂಡಿರುವ ಕ್ರಿಯಾತ್ಮಕ ನಂಟು ಈ ಮಾತನ್ನು ಪುಷ್ಟೀಕರಿಸುತ್ತವೆ. ಹೀಗಾಗಿ ಈ ವಿಶ್ವವಿದ್ಯಾಲಯಕ್ಕೆ ಜಾಗತಿಕ ಮಟ್ಟದಲ್ಲಿಯೂ ಲಭಿಸಿದೆ. ಇಲ್ಲಿಂದ ಹೊರಬರುತ್ತಿರುವ ದೊಡ್ಡ ಪ್ರಮಾಣದ ಐಟಿ, ಬಿಟಿ ವಿದ್ಯಾರ್ಥಿಗಳು ಇದನ್ನು ಇನ್ನಷ್ಟು ವಿಸ್ತರಿಸುತ್ತಿದ್ದಾರೆ.

ಕಂಪ್ಯೂಟರೀಕರಣ

ಜನಜೀವನದ ಎಲ್ಲ ದಾಖಲೆಗಳೂ ಕಂಪ್ಯೂಟರೀಕರಣಗೊಳ್ಳುತ್ತಿರುವ ಪ್ರಕ್ರಿಯೆಯನ್ನು ನಾವಿಂದು ಕಾಣುತ್ತಿದ್ದೇವೆ. ಇದನ್ನು ಮನಗಂಡು ೨೦೦೦ದ ಸಂದರ್ಭದಲ್ಲಿ ಎಲ್ಲ ಸ್ನಾತಕೋತ್ತರ ತರಗತಿಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ೧೦೦ ಅಂಕಗಳಿಗೆ ಕಡ್ಡಾಯಗೊಳಿಸಿತು. ನೂರೈವತ್ತು ವರ್ಷಗಳ ಹಿಂದೆ ಕಾಗದ ಮತ್ತು ಲೇಖನಿ ಶಿಕ್ಷಣದ ಭಾಗವಾಗಿ ವಿದ್ಯಾರ್ಥಿಗಳ ಕೈಯಲ್ಲಿ ಕಡ್ಡಾಯವಾದಂತೆ ಇಲ್ಲಿ ಅದರೊಂದಿಗೆ ಕಂಪ್ಯೂಟರ್ ಸಹ ಅನಿವಾರ್ಯ ಎಂಬ ಸ್ವಾಗತಾರ್ಹ ಒತ್ತಡ ನಿರ್ಮಾಣವಾಯಿತು. ಅಲ್ಲದೇ ಆಡಳಿತ ಮತ್ತು ಬೋಧನೆಯ ಎಲ್ಲ ಕರ್ಮಿಗಳಿಗೆ ಕಂಪ್ಯೂಟರನ್ನು ನಿಡಲಾಯಿತು. ಈ ಬೆಳವಣಿಗೆ ಕರ್ನಾಟಕದ ಎಲ್ಲ ವಿಶ್ವವಿದ್ಯಾಯಗಳ ಪೈಕಿ ಬೆಂಗಳೂರು ವಿಶ್ವವಿದ್ಯಾಲದಲ್ಲಿಯೇ ಮೊದಲು ಎಂಬುದು ಗಮನಾರ್ಹ ಸಂಗತಿ. ಈ ಬೆಳವಣಿಗೆಯಲ್ಲಿ ಈಚಿನ ಕುಲಪತಿಗಳಾದ ಡಾ. ಕೆ. ಸಿದ್ಧಪ್ಪ ಮತ್ತು ಡಾ. ಎಂ.ಎಸ್. ತಿಮ್ಮಪ್ಪ ಅವರ ಪರಿಶ್ರಮ ಉಲೇಖಾರ್ಹವಾದುದಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಯಲ್ಲಿದ್ದ ವೈದ್ಯಕೀಯ ಕಾಲೇಜುಗಳನ್ನು ರಾಜೀವಗಾಂಧಿ ವಿಶ್ವವಿದ್ಯಾಲಯಕ್ಕೂ ಎಂಜಿನಿಯರಿಂಗ್ ಕಾಲೇಜುಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೂ ಬಿಟ್ಟುಕೊಟ್ಟಿದೆ. ಅಪವಾದವೆಂಬಂತೆ ಯುವಿಸಿಇ ಕಾಲೇಜು, ಜ್ಞಾನಭಾರತಿಯಲ್ಲಿರುವ ಸ್ನಾತಕೋತ್ತರ ಎಂಜಿನಿಯರಿಂಗ್ ವಿಭಾಗ ಮುಂತಾದ ಒಂದೆರಡು ಕಾಲೇಜು, ವಿಭಾಗಗಳನ್ನು ಮಾತ್ರ ತನ್ನ ವ್ಯಾಪ್ತಿಯಲ್ಲಿರಿಸಿಕೊಂಡಿದೆ.

ಸ್ನಾತಕೋತ್ತರ ಕೇಂದ್ರಗಳ ವಿಭಾಗೀಕರಣ

ಹಿಂದೆ ವಿಶ್ವವಿದ್ಯಾಲಯದ ವ್ಯಾಪ್ತಿಗೆ ನಾಲ್ಕು ಜಿಲ್ಲೆಗಳು ಸೇರಿದ್ದವು. ೨೦೦೪ರಲ್ಲಿ ತುಮಕೂರು ವಿಶ್ವವಿದ್ಯಾಲಯವು ಸ್ಥಾಪನೆಯಾದುದರಿಂದ ತುಮಕೂರಿನ ಸ್ನಾತಕೋತ್ತರ ಕೇಂದ್ರಗಳನ್ನು ಹೊರತುಪಡಿಸಿ, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಕೋಲಾರ ಜಿಲ್ಲೆಯ ಕಾಲೇಜು ಮತ್ತು ಕೋಲಾರ ಸ್ನಾತಕೋತ್ತರ ಕೇಂದ್ರಗಳು ಮಾತ್ರ ಇಂದು ತನ್ನ ವ್ಯಾಪ್ತಿಯಲ್ಲಿ ಉಳಿದಿವೆ. ೧೯೯೫ ತುಮಕೂರು ಮತ್ತು ಕೋಲಾರದಲ್ಲಿ ಸ್ನಾತಕೋತ್ತರ ಕೇಂದ್ರಗಳನ್ನು ವಿಶ್ವವಿದ್ಯಾಲಯವು ಸ್ಥಾಪಿಸಿತು. ಇವುಗಳಲ್ಲಿ ಕನ್ನಡ, ಚರಿತ್ರೆ, ಗಣಿತ, ವಾಣಿಜ್ಯ ಮತ್ತು ಕನ್ನಡ ಅರ್ಥಶಾಸ್ತ್ರ, ಸಸ್ಯಶಾಸ್ತ್ರ, ವಾಣಿಜ್ಯ ವಿಭಾಗಗಳು ಕ್ರಮವಾಗಿ ತುಮಕೂರು ಮತ್ತು ಕೋಲಾರ ಸ್ನಾತಕೋತ್ತರ ಕೇಂದ್ರಗಳಲ್ಲಿ ಇವೆ. ಇವುಗಳ ಮೊದಲ ನಿರ್ದೇಶಕರುಗಳು ಕ್ರಮವಾಗಿ ಪ್ರೊ. ಬರಗೂರು ರಾಮಚಂದ್ರಪ್ಪ ಮತ್ತು ಡಾ. ಪಿ.ಆರ್. ನಂಜುಂಡೇಗೌಡ ಅವರಾಗಿದ್ದರು. ವಿಶ್ವವಿದ್ಯಾಲಯವು ಸುಸಜ್ಜಿತ ಗ್ರಂಥಾಲಯವನ್ನು ಒಳಗೊಂಡಿದೆ. ಇದು ಈಗ ಸಂಪೂರ್ಣ ಗಣಕೀಕರಣ ಮತ್ತು ಅಂತರ್‍ಜಾಲೀಕರಣವಾಗಿದ್ದು, ಇದರ ಈ ವ್ಯಾಪ್ತಿಗೆ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಎಲ್ಲ ಕಾಲೇಜುಗಳ ಗ್ರಂಥಾಲಯಗಳು ಬರುತ್ತಿವೆ. ಈ ಕಾರ್ಯದಲ್ಲಿ ಇಂದಿನ ಮುಖ್ಯ ಗ್ರಂಥಾಲಯಾಧಿಕಾರಿ ಡಾ.----- ಪರಿಶ್ರಮವು ಗುರುತರವಾದುದಾಗಿದೆ.

ಅಧ್ಯಯನ ವಿಭಾಗಗಳು

ಕರ್ನಾಟಕದ ಎಲ್ಲ ಸಾಮಾನ್ಯ ವಿಶ್ವವಿದ್ಯಾಲಯಗಳಲ್ಲಿರುವಂತೆ ಇಲ್ಲಿಯೂ ಕನ್ನಡ ಮುಂತಾದ ವಿವಿಧ ಭಾಷಾ ವಿಭಾಗಗಳು, ಚರಿತ್ರೆ, ರಾಜ್ಯಶಾಸ್ತ್ರ ಮುಂತಾದ ಕಲಾ ವಿಭಾಗಗಳು, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮುಂತಾದ ವಿಜ್ಞಾನದ ವಿಭಾಗಗಳು, ಅಂತೆಯೇ ಅನೇಕ ನಿಕಾಯಗಳು ಇಲ್ಲಿವೆ. ಇವಲ್ಲದೆ ಗಾಂಧಿ ಅಧ್ಯಯನ ಕೇಂದ್ರ, ಡಾ. ಬಿ. ಆರ್ ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಮನೋವೈಜ್ಞಾನಿಕ ಸಲಹಾ ಕೇಂದ್ರ, ಮಹಿಳಾ ಅಧ್ಯಯನ ಕೇಂದ್ರ, ಉದ್ಯೋಗ ಸಲಹಾ ಕೇಂದ್ರ ಮುಂತಾದ ವಿಭಾಗಗಳೂ ಇವೆ. ಇವಲ್ಲದೇ ಬೃಹತ್ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸಾರಾಂಗ, ಅಂಚೆ ತೆರಪಿನ ಮತ್ತು ದೂರ ಶಿಕ್ಷಣ ನಿರ್ದೇಶನಾಲಯ, ಕಾಲೇಜು ಅಭಿವೃದ್ಧಿ ಪರಿಷತ್ ನಿರ್ದೇಶನಾಲಯ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿರ್ದೇಶನಾಲಯ, ಯುಜಿಸಿ ಶೈಕ್ಷಣಿಕ ಸಿಬ್ಬಂದಿ ಮಾಹವಿದ್ಯಾಲಯ ಮುಂತಾದವೂ ಸಹ ಇಲ್ಲಿವೆ. ಪ್ರತೀವರ್ಷವೂ ಬೆಂಗಳೂರು ವಿಶ್ವವಿದ್ಯಾಲಯದಿಂದ ವಿವಿಧ ಪದವಿಗಳನ್ನು ಪಡೆದು ಹೊರಬರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ದಾಖಲೆಯೆನಿಸಿದೆ. ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಿಎಚ್.ಡಿ.ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಪ್ರಸಾರಾಂಗದಿಂದ ದಾಖಲೆ ಪ್ರಮಾಣದ ಪುಸ್ತಕಗಗಳು ಹೊರಬಂದಿವೆ. ಶಿಕ್ಷಣದಲ್ಲಿ ಮತ್ತಷ್ಟು ಸುಧಾರಣೆಯನ್ನು ತರುವ ನಿಟ್ಟಿನಲ್ಲಿ ತನ್ನ ವ್ಯಾಪ್ತಿಯ ಸ್ನಾತಕ ಮತ್ತು ಸ್ನಾತಕೋತ್ತರ ತರಗತಿಗಳಿಗೆ ಸೆಮಿಸ್ಟರ್ ಪದ್ಧತಿಯನ್ನು ಅಳವಡಿಸಿದೆ. ಇದು ಇತ್ತೀಚಿನ ವರ್ಷಗಳಲ್ಲಿ ವಿವಿಧ ಸಾಮಾನ್ಯ ವಿಶ್ವವಿದ್ಯಾಗಳಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ್ದೇ ಆದ ಪ್ರಥಮ ಹೆಜ್ಜೆಯಾಗಿದೆ. ಒಟ್ಟಾರೆ ಬೆಂಗಳೂರು ವಿಶ್ವವಿದ್ಯಾಯದ ಬೌದ್ಧಿಕ ಉತ್ಪನ್ನವು ಸಮಾಜದ ಎಲ್ಲ ವಲಯಗಳಲ್ಲಿ ಮತ್ತು ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಪಸರಿಸಿರುವುದು ತನ್ನ ಆಶಯಗಳ ಸಾಕಾರ ರೂಪವೆನಿಸಿದೆ.

ಎಚ್‌ಆರ್‌ಡಿಸಿ

  • ಯುಜಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಿಇ ಯು.ಟಿ. (ಯುಜಿಸಿ-HRDC)

ಸಂಯೋಜಿತ ಕಾಲೇಜುಗಳು

ಬೆಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ವ್ಯಾಪ್ತಿಯಲ್ಲಿ ೭೦ ಕಾಲೇಜುಗಳಿವೆ. [4] ೫೦ ಅನುಧಾನಿತ ಕಾಲೇಜುಗಳಿವೆ.[5] ೧೧ ಅನುಧಾನ ರಹಿತ ಕಾಲೇಜುಗಳಿವೆ.[6] Notable affiliated colleges include:

ಉಲ್ಲೇಖ

  1. http://bangaloreuniversity.ac.in/
  2. http://bangaloreuniversity.ac.in/wp-content/uploads/2018/02/List-of-Affiliated-colleges-2017-18-05022018.pdf
  3. http://bangaloreuniversity.ac.in/statutory-officers/
  4. cite web |url=http://www.bub.ernet.in/collegeList?txtCollegeType=G&txtCollegeName= |title=College |work=bub.ernet.in |accessdate=26 July 2011 |archive-url=https://web.archive.org/web/20110809140005/http://www.bub.ernet.in/collegeList?txtCollegeType=G&txtCollegeName= |archive-date=9 August 2011 |dead-url=yes |df=dmy-all
  5. cite web |url=http://www.bub.ernet.in/collegeList?txtCollegeType=A&txtCollegeName= |title=College |work=bub.ernet.in |accessdate=26 July 2011 |archive-url=https://web.archive.org/web/20110609062535/http://www.bub.ernet.in/collegeList?txtCollegeType=A&txtCollegeName= |archive-date=9 June 2011 |dead-url=yes |df=dmy-all
  6. cite web |url=http://www.bub.ernet.in/collegeList?txtCollegeType=U&txtCollegeName= |archive-url=https://web.archive.org/web/20101012001738/http://www.bub.ernet.in/collegeList?txtCollegeType=U&txtCollegeName= |dead-url=yes |archive-date=12 October 2010 |title=College |work=bub.ernet.in |accessdate=26 July 2011

ಇವನ್ನೂ ನೋಡಿ

ಭಾರತದಲ್ಲಿರುವ ವಿಶ್ವವಿದ್ಯಾಲಯಗಳ ಪಟ್ಟಿ

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.