ಎಚ್ ನರಸಿಂಹಯ್ಯ
ಜನನಡಾ. ಹೆಚ್.ನರಸಿಂಹಯ್ಯ[1][2] (ಜೂನ್ ೬, ೧೯೨೦ - ಜನವರಿ ೩೧, ೨೦೦೫) ಬೆಂಗಳೂರಿನ ಹೆಸರಾಂತ ಭೌತಶಾಸ್ತ್ರಜ್ಞರೂ, ಶಿಕ್ಷಣತಜ್ಞರೂ ಆಗಿದ್ದರು. ಇವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮುಂದೆ ಅಮೇರಿಕ ದೇಶದಲ್ಲಿನ ಓಹಿಯೋ ವಿಶ್ವವಿದ್ಯಾಲಯದಲ್ಲಿ ಪರಮಾಣು ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ನ್ಯಾಷನಲ್ ಕಾಲೇಜು, ಬೆಂಗಳೂರಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಸೇರಿಕೊಂಡ ಇವರು, ತದನಂತರ ಕಾಲೇಜಿನ ಪ್ರಾಂಶುಪಾಲರಾದರು.
ಹೊಸೂರು ನರಸಿಂಹಯ್ಯ | |
---|---|
![]() | |
ಸ್ಥಳೀಯ ಹೆಸರು | ಡಾ. ಎಚ್.ನರಸಿಂಹಯ್ಯ |
ಜನನ | {{Birth date192೦06|06|df=yes}} ಚಿಕ್ಕಬಳ್ಳಾಪುರ ಜಿಲ್ಲೆಯ,ಗೌರಿಬಿದನೂರು ತಾಲೂಕಿನ,ಹೊಸೂರು , ಕರ್ನಾಟಕ, ಭಾರತ |
ಮರಣ | 31 ಜನವರಿ 2005 ಬೆಂಗಳೂರು | (ವಯಸ್ಸು 83)
ವಾಸಸ್ಥಳ | ಬೆಂಗಳೂರು |
ಪೌರತ್ವ | ಭಾರತೀಯ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | ಭೌತಶಾಸ್ತ್ರ |
ಸಂಸ್ಥೆಗಳು | ನ್ಯಾಶನಲ್ ಕಾಲೇಜು ಬೆಂಗಳೂರು ವಿಶ್ವವಿದ್ಯಾಲಯ |
ಅಭ್ಯಸಿಸಿದ ವಿದ್ಯಾಪೀಠ | ಬೆಂಗಳೂರು ಸೆಂಟ್ರಲ್ ಕಾಲೇಜು (ಬಿಎಸ್ಸಿ, ಎಂಎಸ್ಸಿ) ಒಹಾಯೊ ರಾಜ್ಯ ವಿಶ್ವವಿದ್ಯಾಲಯ (ಪಿಹೆಚ್‍ಡಿ) |
ಪ್ರಸಿದ್ಧಿಗೆ ಕಾರಣ | Scepticism |
ಪ್ರಭಾವಗಳು | ಮಹಾತ್ಮ ಗಾಂಧಿ |
ಗಮನಾರ್ಹ ಪ್ರಶಸ್ತಿಗಳು | ಪದ್ಮ ಭೂಷಣ (1985) |
ಜನನ, ಬಾಲ್ಯ ಹಾಗೂ ವಿದ್ಯಾಭ್ಯಾಸ
- ಡಾ.ಹೆಚ್.ಎನ್[3] ಎಂದೇ ಜನಪ್ರಿಯರಾದ 'ಹೊಸೂರು, ನರಸಿಂಹಯ್ಯನವರು' ಜೂನ್ ೬, ೧೯೨೦ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ 'ಹೊಸೂರು' ಗ್ರಾಮದಲ್ಲಿ ಒಂದು ಬಡ ಹಿಂದುಳಿದ ಕುಟುಂಬದಲ್ಲಿ ಹುಟ್ಟಿದರು. ತಂದೆ 'ಹನುಮಂತಪ್ಪ', ತಾಯಿ 'ವೆಂಕಟಮ್ಮ', ತಂಗಿ 'ಗಂಗಮ್ಮ'. ಮನೆಯಲ್ಲಿ ಮಾತಾಡುವ ಭಾಷೆ ಕನ್ನಡವೆಂದರೆ ಹೆಚ್ಚು ಪ್ರೀತಿ, ಹಾಗೂ ಪ್ರಾವೀಣ್ಯತೆ ಇತ್ತು.
- ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಹೊಸೂರಿನಲ್ಲಿ ಮುಗಿಸಿ, ೧೯೩೫ರಲ್ಲಿ ಬೆಂಗಳೂರಿನ ನ್ಯಾಷನಲ್ ಹೈಸೂಲಿಗೆ ಸೇರಿದರು. ಭೌತಶಾಸ್ತ್ರದ ಬಿ.ಎಸ್ಸಿ. (ಹಾನರ್ಸ್) ಮತ್ತು ಎಂ.ಎಸ್ಸಿ., ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿದರು. ಎಲ್ಲಾ ಪರೀಕ್ಷೆಗಳಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದರು.
ಸಾಹಿತ್ಯ ಕೃತಿಗಳು
- ತೆರೆ ದಮನ.
- ಹೋರಾಟದ ಹಾದಿ(ಆತ್ಮಕಥನ).
ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ
- ೧೯೪೬ನೇ ಇಸವಿಯಲ್ಲಿ ಬೆಂಗಳೂರು ಬಸವನಗುಡಿ ಕಾಲೇಜಿನಲ್ಲಿ, ಭೌತಶಾಸ್ತ್ರ ಆಧ್ಯಾಪಕರಾದರು. ಅಲ್ಲಿಯೇ ಪ್ರಾಧ್ಯಾಪಕರಾಗಿ, ನಂತರ ಹನ್ನೆರೆಡು ವರ್ಷಗಳು ಪ್ರಾಂಶುಪಾಲರಾಗಿದ್ದರು. ೧೯೭೨ ರಿಂದ ೧೯೭೭ರ ವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳು. ಆ ಕಾಲದಲ್ಲಿ ಅನೇಕ ಸುಧಾರಣೆಗಳನ್ನು ಮಾಡಿದರು. ಎಚ್.ಎನ್.ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು.
- ವಿದ್ಯಾರ್ಥಿ ದೆಸೆಯಲ್ಲಿ ಅವರು ವಿವಿಧ ಉಚಿತ ವಿದ್ಯಾರ್ಥಿನಿಲಯಗಳಲ್ಲಿದ್ದರು. ಅಧ್ಯಾಪಕರಾದ ಮೇಲೂ ೧೯೪೬ರಿಂದ ಕೊನೆವರೆಗೂ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿಯೇ ವಾಸವಾಗಿದ್ದರು. ಒಟ್ಟು ೫೭ ವರ್ಷಗಳ ವಿದ್ಯಾರ್ಥಿನಿಲಯದಲ್ಲಿಯೇ ನೆಲೆಸಲು ಅವರ ಸರಳ, ಆದರ್ಶಮಯ ಜೀವನವೇ ಕಾರಣವೆಂದು ಹೇಳಲಾಗುತ್ತದೆ.
- ೧೯೪೨ ನೆಯ ಇಸವಿಯಲ್ಲಿ, ಸೆಂಟ್ರಲ್ ಕಾಲೇಜ್‌ನಲ್ಲಿ ಮೂರನೆಯ ಬಿ.ಎಸ್ಸಿ, ಆನರ್ಸ್ ತರಗತಿಯಲ್ಲಿ ಓದುತ್ತಿದ್ದಾಗ ಗಾಂಧೀಜಿಯವರು ಮೊದಲು ಮಾಡಿದ ಕ್ವಿಟ್ ಇಂಡಿಯಾ ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿದಾಗ ವಿದ್ಯಾಭ್ಯಾಸಕ್ಕೆ ಎರಡು ವರ್ಷ ವಿದಾಯ. ೧೯೪೭ರಲ್ಲಿ ಸ್ವಾತಂತ್ರ್ಯ ಬಂದ ನಂತರ ಮೈಸೂರಿನಲ್ಲಿ ನಡೆದ ಮೈಸೂರು ಚಲೋ ಚಳವಳಿಯಲ್ಲಿಯೂ ಅವರು ತಮ್ಮ ಅಧ್ಯಾಪಕ ವೃತ್ತಿಗೆ ರಾಜೀನಾಮೆ ನೀಡಿ ಭಾಗವಹಿಸಿದರು.
- ತಮ್ಮ ಸಹೋದ್ಯೋಗಿ ಕೆ.ಶ್ರೀನಿವಾಸನ್, ಟಿ.ಆರ್.ಶ್ಯಾಮಣ್ಣ ಇವರ ಜೊತೆ ಭೂಗತ ಹೋರಾಟ ನಡೆಸಿ ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪನೆಗೆ ಬೆಂಬಲ ನೀಡತೊಡಗಿದರು."ಇಂಕ್ವಿಲಾಬ್" ಎಂಬ ಕೈಬರಹದ ಪತ್ರಿಕೆಯನ್ನು ಮಾಡಿ ಪೊಲೀಸರಿಗೆ ಸಿಗದಂತೆ ತಪ್ಪಿಸಿಕೊಳ್ಳುತ್ತಿದ್ದರು."ಇಂಕ್ವಿಲಾಬ್" ಕೈಬರಹದ ಪತ್ರಿಕೆಯ ೩೩ ಸಂಚಿಕೆಗಳು ಹೊರ ಬಂದವು.
- ಬೆಂಗಳೂರು, ಮೈಸೂರು ಮತ್ತು ಪುಣೆಯ ಯರವಾಡಾ ಜೈಲುವಾಸ. ಅಮೆರಿಕಾದ ಓಹಿಯೋ ರಾಜ್ಯ ವಿಶ್ವವಿದ್ಯಾಲಯದಲ್ಲಿ (Ohio State University) ಮೂರು ವರ್ಷ ಅಭ್ಯಾಸ ಮಾಡಿ ನ್ಯೂಕ್ಲಿಯಾರ್ ಫಿಸಿಕ್ಸ್‌ನಲ್ಲಿ ೧೯೬೦ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ಅಲ್ಲಿಯ ಪರೀಕ್ಷೆಗಳಲ್ಲಿಯೂ ಉತ್ತಮ ಶ್ರೇಣಿ ಪಡೆದರು.
- ಏಳು ವರ್ಷಗಳ ನಂತರ ಅಮೇರಿಕಾದ ಸದರನ್ ಇಲ್ಲಿನಾಯ್ ವಿಶ್ವವಿದ್ಯಾಲಯ (Southern Illinois University) ದಲ್ಲಿ ಒಂದು ವರ್ಷ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಇವರ ಇಡೀ ಜೀವನ ಶಿಕ್ಷಣಕ್ಕೆ ಮತ್ತು ನಾಲ್ಕು ನ್ಯಾಷನಲ್ ಕಾಲೇಜು, ಐದು ನ್ಯಾಷನ ಲ್ ಹೈಸ್ಕೂಲ್ ಮತ್ತು ಎರಡು ಪ್ರೈಮರಿ ಶಾಲೆಗಳನ್ನೊಳಗೊಂಡ ನ್ಯಾಷನಲ್ ಎಜುಕೇಷನ್ ಸೊಸೈಟಿಗೆ ಮೀಸಲಿಟ್ಟಿದ್ದರು.
- ಈ ಸಂಸ್ಥೆಗಳ ಉನ್ನತಿಗಾಗಿ ಶ್ರಮಿಸಿದ್ದಾರೆ ಎನ್ನಲಾಗುತ್ತದೆ. ಅಲ್ಲದೆ ಈ ಸಂಸ್ಥೆಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಸಾರ್ವಜನಿಕರಿಂದ ಸಂಗ್ರಹ ಮಾಡಿದ್ದಾರೆ. ಈ ಸಂಸ್ಥೆಗಳ ಪೈಕಿ ಆರೇಳು ಸಂಸ್ಥೆಗಳು, ಇವರ ಪ್ರಯತ್ನದ ಫಲವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಾಪಿಸಲ್ಪಟ್ಟಿವೆ.
ವೈಜ್ಞಾನಿಕ ಮನೋಭಾವದ ಬಗ್ಗೆ ಹೆಚ್ಚು ಆದ್ಯತೆ
- ವಿಜ್ಞಾನದಲ್ಲಿ, ವೈಜ್ಞಾನಿಕ ಮನೋಭಾವದಲ್ಲಿ ಅವರಿಗೆ ಅಚಲವಾದ ನಂಬಿಕೆ.ಮೂಢನಂಬಿಕೆ, ಮೌಢ್ಯದ ವಿರುದ್ಧ ಸತತ ಹೋರಾಟ. ಮೂವತ್ತು ವರ್ಷಗಳ ಹಿಂದೆ ಅವರು ಬೆಂಗಳೂರು ವಿಜ್ಞಾನ ವೇದಿಕೆ (Bangalore Science forum) ಎಂಬ ವಿಜ್ಞಾನವೇದಿಕೆಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾದರು. ಸಂಗೀತ, ನಾಟಕ, ನೃತ್ಯ ಮುಂತಾದ ಲಲಿತ ಕಲೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡಿದ್ದರು.
- ಜಯನಗರದ ನ್ಯಾಷನಲ್ ಕಾಲೇಜಿನಲ್ಲಿರುವ ಬೆಂಗಳೂರು ಲಲಿತಕಲಾ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿದ್ದರು. ಅವರ ವಿಶಿಷ್ಟ ಸೇವೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ , ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ದೊರೆಕಿವೆ.
- ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ `ತಾಮ್ರಪತ್ರ` ಪ್ರಶಸ್ತಿ, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ `ಫೆಲೋ`. ಅತೀಂದ್ರಿಯ ಘಟನೆಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲು ಅಮೆರಿಕಾದಲ್ಲಿ ಸ್ಥಾಪಿಸಲ್ಪಟ್ಟಿರುವ ಅಂತರ ರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು, ಸಮಾಜ ಮತ್ತು ಮನಃಶಾಸ್ತ್ರ ವಿಜ್ಞಾನಿಗಳು, ನೋಬೆಲ್ ಪಾರಿತೋಷಕ ವಿಜೇತರು.
- `ಫೆಲೋ`ಗಳಾಗಿರುವ `ಕಮಿಟಿ ಫಾರ್ ದಿ ಸೈಂಟಿಪಿಕ್ ಇನ್ವೆಸ್ಟಿಗೇಷನ್ ಆಫ್ ದಿ ಕ್ಲೈಮ್ಸ್ ಆಫ್ ದಿ ಪ್ಯಾರಾ ನಾರ್ಮಲ್` ( Committee for Scientific Investigation of the claims of the Paranomal) ಸಂಸ್ಥೆಯ ಭಾರತದ ಏಕೈಕ `ಫೆಲೋ` ಎಂಬ ಗೌರವ ಪಡೆದಿದ್ದಾರೆ. ಕರ್ನಾಟಕ ರಾಜ್ಯ ವಿಧಾನ ಪರಿಷತ್‌ನಲ್ಲಿ ಶಿಕ್ಷಣ ಮತ್ತು ವಿಜ್ಞಾನವನ್ನು ಪ್ರತಿನಿಧಿಸುವ ನಾಮಕರಣ ಸದಸ್ಯರಾಗಿದ್ದರು.
ಮಾನವತಾವಾದಿ, ವಿಚಾರವಾದಿ
ಅಧ್ಯಾಪಕ, ಆಡಳಿತಗಾರ, ಸ್ನೇಹಮಯ ಮಾನವತಾವಾದಿ, ವಿಚಾರವಾದಿ, ಮೇಲ್ಮಟ್ಟದ ಹಾಸ್ಯ ಪ್ರಜ್ಞೆ ಅವರದು ಎಂದು ಹೆಚ್.ಎನ್ ಅವರ ನಿಕಟವರ್ತಿಗಳ ಅಭಿಪ್ರಾಯ. ಸರಳ ಜೀವನ ನಡೆಸುತ್ತಿದ್ದರು. ರಾಷ್ಟ್ರೀಯತಾವಾದಿಯಾಗಿದ್ದರು ಮತ್ತು ಖಾದಿ ಬಟ್ಟೆಯನ್ನೇ ಧರಿಸುತ್ತಿದ್ದರು.
ಉಪನ್ಯಾಸ
ಧರ್ಮ ಮತ್ತು ವೈಚಾರಿಕ ಮನೋಭಾವ
- ಶ್ರೀ ಸತ್ಯಸಾಯಿಬಾಬಾ ಅವರು ಹೊಂದಿರುವ ಪವಾಡ ಶಕ್ತಿಗಳನ್ನು ಕುರಿತು ದೇಶದಾದ್ಯಂತ ವಿಪುಲವಾದ ಚರ್ಚೆ ನಡೆಯುತ್ತಿದೆ. ಇದು ಈಗ ರಾಷ್ಟ್ರೀಯ ವಿವಾದದ ವಿಷಯವಾಗಿದೆ. ಅನೇಕ ದಿನಪತ್ರಿಕೆಗಳು ಮತ್ತು ನಿಯತಕಾಲಿಕಗಳು ಸಾಕಷ್ಟು ಪುಟಗಳನ್ನು ಈ ವಿಷಯದ ಚರ್ಚೆಗೆ ವಿನಿಯೋಗಿಸಿವೆ. ಹೆಚ್ಚು ಕಮ್ಮಿ ಇದು ಮನೆ ಮಾತಾಗಿದೆ.
- ಬೆಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ರಚಿತವಾದ ಪವಾಡಗಳು ಮತ್ತು ಮೂಢನಂಬಿಕೆಗಳು ಕುರಿತು ವೈಜ್ಞಾನಿಕವಾಗಿ ತನಿಖೆ ಮಾಡಲು ರಚಿತವಾದ ಸಮಿತಿಯ ಪ್ರಯತ್ನಗಳು ಈ ವಿವಾದಕ್ಕೆ ಅವಕಾಶ ಮಾಡಿಕೊಟ್ಟಿರುವುದು
ಮಹಾನ್ ಆಧ್ಯಾತ್ಮವಾದಿಗಳ ನೆನಪು
- ಈ ವಿಷಯದಲ್ಲಿ ನನಗೆ ಬುದ್ಧ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿಯವರಂತಹ ಮಹಾನ್ ಆಧ್ಯಾತ್ಮವಾದಿಗಳ ನೆನಪು ಬರುತ್ತದೆ. ಅವರ ಜೀವನಗಳು ತೆರೆದಿಟ್ಟ ಪುಸ್ತಕಗಳು, ಅವರ ನೆಲೆ 'ತೆರೆದ ಮನಗಳು'. ಸ್ವಾಮಿ ವಿವೇಕಾನಂದರ ಕೊಠಡಿಗೆ ಯಾರೇ ಹೋಗ ಬಹುದಿತ್ತು, ಗಾಂಧೀಜಿಯವರ ಶಿಬಿರವು ಗಾಜಿನಂತೆ ಪಾರದರ್ಶಕವಾಗಿದ್ದು, ಸಾರ್ವಜನಿಕ ಪ್ರದೇಶದಂತೆ ಇತ್ತು. ಭಗವಾನ್ ಬುದ್ಧನ ವಾಸಸ್ಥಳಕ್ಕೆ ಆಕಾಶವೇ ಚಾವಣಿಯಾಗಿತ್ತು.
- ಅವರುಗಳ ಸರಳವಾದ, ಕಟ್ಟುನಿಟ್ಟಾದ ಬದುಕನ್ನು ಪಾಲಿಸಿದರು. ಯಾರೇ ಯಾವ ಪ್ರಶ್ನೆಯನ್ನೂ ಕೇಳಿದರೂ ಅವರು ಉತ್ತರಿಸಿದರು. ತಮ್ಮನ್ನು ಅಂಧವಾಗಿ ಅನುಕರಿಸಬೇಡಿರೆಂದು ಅವರುಗಳು ಎಲ್ಲರನ್ನೂ ಕೇಳಿಕೊಂಡರು. ಅವರ ಎಲ್ಲ ಹೇಳಿಕೆಗಳೂ ವೈಜ್ಞಾನಿಕ ದೃಷ್ಟಿಕೋಣವನ್ನು ಹೊಂದಿದ್ದವು. ಗಾಂಧೀಜಿಯವರು ತಮ್ಮ ಆತ್ಮ ಚರಿತ್ರೆಯನ್ನು 'ಸತ್ಯದ ಶೋಧನೆ' ಎಂದೇ ಕರೆದಿದ್ದಾರೆ.
- ತಿರುವಣ್ಣಾ ಮಲೈನ ರಮಣ ಮಹರ್ಷಿಗಳು ಕೂಡ ಶ್ರೇಷ್ಠ ವ್ಯಕ್ತಿಯಾಗಿದ್ದು, ನಮ್ಮ ಗೌರವಕ್ಕೆ ಪಾತ್ರರಾಗಿದ್ದಾರೆ. ಅಂತಿಮ ಸತ್ಯವನ್ನು ಕಂಡುಕೊಳ್ಳುವಲ್ಲಿ ಅವರೆಲ್ಲಾ ವಿನಯ ಮತ್ತು ವೈಚಾರಿಕತೆಯನ್ನು ವ್ಯಕ್ತಪಡಿಸಿದರು. ಸತ್ಯಸಾಯಿಬಾಬಾ ಅವರು ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವುದು ಅವರ ಕರ್ತವ್ಯ. ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳ ಬೇಕಾದ ಅವರು ತಮಗೆ ಇದೆಯೆಂದು ಹೇಳಿಕೊಳ್ಳುವ ಆಧ್ಯಾತ್ಮಿಕ ಶಕ್ತಿಗಳನ್ನು ಬಹಿರಂಗವಾಗಿ ತೋರ್ಪಡಿಸುವುದು ಅವಶ್ಯಕ.
- ಅವರ ಬಗ್ಗೆ ಪೂರ್ವಗ್ರಹಪೀಡಿತ ಅಥವಾ ಪೂರ್ವಗ್ರಹವಿಲ್ಲದೆ ಅನುಮಾನಪಡುತ್ತಿರುವ ಸಂಶಯ ಪರಿಹಾರವಾಗುತ್ತದೆ. ಇದು ಸಾರ್ವಜನಿಕರ ದೃಷ್ಟಿಯಿಂದ ಪ್ರಾಮುಖ್ಯವನ್ನು ಪಡೆದುಕೊಂಡಿದೆ. ತಮ್ಮಲ್ಲಿ ನಂಬಿಕೆ ಇರುವವರಿಗಿಂತ ಹೆಚ್ಚಾಗಿ ಇಲ್ಲದೇ ಇರುವವರ ಕಡೆ ಹೆಚ್ಚು ಗಮನ ಹರಿಸಬೇಕಾದ್ದು ಅವರ ಕರ್ತವ್ಯ. ಪ್ರೀತಿ, ನಂಬಿಕೆ ಮತ್ತು ಪೂರ್ವಗ್ರಹಗಳಿಲ್ಲದೆ ತಮ್ಮೆಡೆಗೆ ಬರುವವರಿಗೆ ದರ್ಶನ ಕೊಡುತ್ತೇವೆ ಎಂದು ಅವರು ಹೇಳಿಕೊಳ್ಳುವುದರಲ್ಲಿ ಸಂತೋಷಪಡುತ್ತಾರೆ.
- ಹಿಂದೆ ಹಾಗೂ ಇತ್ತೀಚಿನ ಕೆಲವು ವಾರಗಳಲ್ಲಿ ಅವರನ್ನು ಕಂಡ ವ್ಯಕ್ತಿಗಳೆಲ್ಲ ಮೇಲಿನ ನಿಯಮಗಳಿಗೆ ಬದ್ಧರಾಗಿದ್ದವರೇ ಎಂದು ನಾನು ಕೇಳಬಯಸುತ್ತೇನೆ. ಅವರ ಭಕ್ತವೃಂದವನ್ನು ಮೇಲುನೋಟಕ್ಕೆ ಗಮನಿಸಿದರೂ ಅವರಲ್ಲಿ ಅನೀತಿವಂತರು, ಭಷ್ಟಾಚಾರಿಗಳು, ವರಮಾನ ತೆರಿಗೆ ತಪ್ಪಿಸಿಕೊಂಡವರೂ, ಸಮಾಜ ದ್ರೋಹಿಗಳು ಬೇಕಾದಷ್ಟು ಜನ ಸಿಗುತ್ತಾರೆ. ವಿಶ್ವವಿದ್ಯಾಲಯ ತನಿಖಾ ಸಮಿತಿಯವರು ಅವರ ಸಂದರ್ಶನಕ್ಕೆ ಅನರ್ಹರೆಂದು ತೋರುತ್ತದೆ. ಸಾಯಿಬಾಬಾ ಅವರ ದೃಷ್ಟಿಯಲ್ಲಿ ನಾವು ಅವರ ಸಹವಾಸಕ್ಕೆ ಯೋಗ್ಯರಲ್ಲಿ. ಅದು ನಿಜವಿದ್ದರೂ ಇರಬಹುದು.
ಪ್ರಗತಿ ವಿರೋಧಿಯಾದ ಆರಾಧನಾ ಪದ್ಧತಿ
- 'ನೀವು ದೇವರೇ' ಎಂಬ ಪ್ರಶ್ನೆಗೆ ಅವರು ' ದೇವರು ಎಲ್ಲರಲ್ಲಿಯೂ ಇದ್ದಾನೆ' ಎಂಬ ಉತ್ತರ ಕೊಟ್ಟರೆಂದು ಪತ್ರಿಕೆಗಳಲ್ಲಿ ವರದಿ ಆಗಿದೆ. ಇಪ್ಪತೈದು ವರ್ಷಗಳಿಂದ ಆಧ್ಯಾಪಕನಾಗಿರುವ ನನಗೆ ಈ ಉತ್ತರ ಅಪ್ರಸ್ತತ ಎಂದು ವಿನಯಪೂರ್ವಕವಾಗಿ ತಿಳಿಸ ಬಯಸುತ್ತೇನೆ. ಇದು ಪ್ರಶ್ನೆಯನ್ನು ಮರೆಸುವ ಪ್ರಯತ್ನ. ತಮ್ಮನ್ನು ಆಕ್ಷೇಪಿಸುವವರು ತಾವು ಮಾಡಿರುವ ಮಾನವೀಯ ಮತ್ತು ಶೈಕ್ಷಣಿಕ ಕಾರ್ಯಗಳನ್ನು ಮರೆಯುತ್ತಾರೆ ಎಂದು ಶ್ರೀ ಸತ್ಯಸಾಯಿಬಾಬಾರವರು ನೊಂದ ದ್ವನಿಯಲ್ಲಿ ಹೇಳುವುದುಂಟು.
- ನಾವು ಆ ಬಗ್ಗೆ ಇಲ್ಲಿ ಚರ್ಚಿಸುತ್ತಿಲ್ಲ ಎಂದು ತಿಳಿಸಲು ಇಚ್ಛಿಸುತ್ತೇನೆ. ನಾವು ತೆಗೆದುಕೊಂಡಿರುವ ಸಮಸ್ಯೆಯ ಅಂತರಾಳವು ಹೆಚ್ಚಿನ ಪ್ರಾಮುಖ್ಯವನ್ನು ಹೊಂದಿದ್ದು, ಅನೇಕ ಮಹತ್ತರವಾದ ಪರಿಣಾಮಗಳಿಗೆ ಕಾರಣವಾಗಬಲ್ಲದು. ಈ ತನಿಖೆಯು ಯಾವುದೇ ವ್ಯಕ್ತಿಯನ್ನು ಮುಖಭಂಗ ಮಾಡುವ ಉದ್ಧೇಶದಿಂದ ಹೊರಟಿಲ್ಲ. ಆದರೆ ಪ್ರಗತಿ ವಿರೋಧಿಯಾದ ಆರಾಧನಾ ಪದ್ಧತಿಯ ಮನೋಭಾವನ್ನು ಪ್ರಶ್ನಿಸುತ್ತದೆ. ಇದರ ಗುರಿ ' ಸತ್ಯಾನ್ವೇಷಣೆ' ಯಾಗಿದೆ. ನಮ್ಮ ದೇಶವು ಸಾವಿರಾರು ದೇವರುಗಳು, ಬಾಬಾಗಳು ಮತ್ತು ' ಮಿನಿ' ಬಾಬಾಗಳ ಸಂತೆಯಾಗಿದೆ. *ಪರಿಶೀಲನ ಮಾರ್ಗದಿಂದ, ಪ್ರಶ್ನಿಸುವ ರೀತಿಯಿಂದ ಅಸಲು ನಕಲುಗಳನ್ನು ಬೇರ್ಪಡಿಸುವ ಅವಶ್ಯಕತೆಯಿದೆ. ಈಗ ಪ್ರತಚಲಿತವಾಗಿರುವ ಧಾರ್ಮಿಕ ಮತ್ತು ಆಧ್ಯಾತ್ಮಿಕ ರಂಗಗಳನ್ನು ಪರಿಶುದ್ಧಗೊಳಿಸುವುದು ಅತ್ಯವಶ್ಯಕ. ದೇವರು ಮತ್ತು ಧರ್ಮದ ಹೆಸರಿನಲ್ಲಿ ಅನೇಕ ಶತಮಾನಗಳಿಂದ ಈ ದೇಶದಲ್ಲಿ ಅಗಾಧ ಪ್ರಮಾಣದಲ್ಲಿ ಶೋಷಣೆ ನಡೆದಿದೆ. ಬಡವರು ಹಾಗೂ ದಡ್ಡರೂ ನಿರಂತರವಾಗಿ ಮೋಸಕ್ಕೆ ಒಳಪಟ್ಟಿದ್ದಾರೆ. ಈ ಜ್ಞಾನ ಯುಗದಲ್ಲೂ ಕೆಲವು ವಿಜ್ಞಾನಿಗಳು ಇದಕ್ಕೆ ಅಪವಾದವಾಗಿಲ್ಲ.
- ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಮ್ಮ ದೇಶವು ಹೆಚ್ಚಿನ ಪ್ರಗತಿಯನ್ನು ಸಾಧಿಸಿದೆ ಎಂಬುದು ನಿಜ. ವಿಜ್ಞಾನಿಯು ಪ್ರಯೋಗಶಾಲೆಯಲ್ಲಿ ಜೀವವನ್ನು ಸೃಷ್ಟಿಸುವ ಹಂತದಲ್ಲಿ ಇದ್ದಾನೆ. ಪ್ರಕೃತಿಯ ಅನೇಕ ರಹಸ್ಯಗಳನ್ನು ಮನುಷ್ಯನು ತನ್ನ ಪರಿಶೀಲನ ಮನೋಭಾವದಿಂದ, ಅವಿರತ ಶ್ರಮದಿಂದ ಬಿಡಿಸಿದ್ದಾನೆ. ನೆನ್ನೆಯ ದಿನ ಅತಿಮಾನುಷ ಎಂದು ಅಂದುಕೊಂಡ ಸಂಗತಿಯು ಈ ದಿನ ಸಂಪೂರ್ಣ ಸಹಜ ಸಂಗತಿಯಾಗಿದೆ. ಇದು ಸಾಧನೆಯ ಒಂದು ಮುಖ ಮಾತ್ರ.
- ಈ ಪ್ರಗತಿಯ ಮತ್ತೊಂದು ಭಾಗದ ಚಿತ್ರ ಅತ್ಯಂತ ನಿರಾಶದಾಯಕ. ವಿಜ್ಞಾನಿ ಅಥವಾ ವಿಜ್ಞಾನದ ವಿದ್ಯಾರ್ಥಿ ಪ್ರಯೋಗ ಶಾಲೆಯಲ್ಲಿ ಸಮಸ್ಯೆಗಳನ್ನು ಎದುರಿಸುವಾಗ ವಿಚಾರವಾದಿಯಾಗಿ ಕಂಡುಬರುತ್ತಾನೆ. ಆದರೆ ಇದೇ ವ್ಯಕ್ತಿ ಜೀವನದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಾಗ ಸಂಪೂರ್ಣವಾಗಿ ವೈಚಾರಿಕತೆಯನ್ನು ತ್ಯಜಿಸಿ ಬಿಡುತ್ತಾನೆ. ಅವನ ಯೋಚನಾಶಕ್ತಿ ರಜೆ ತೆಗೆದುಕೊಂಡು ಬಿಡುತ್ತದೆ.
- ಕೆಲವು ವಿಜ್ಞಾನಿಗಳು ಪವಾಡಗಳನ್ನು ಮಾಡುತ್ತೇವೆ ಎಂದು ಹೇಳುವ ವ್ಯಕ್ತಿಗಳನ್ನು ಅಂಧರಾಗಿ ಅನುಸರಿಸುವುದೂ ಉಂಟು. ವಿಜ್ಞಾನವು ಜೀವನ ನಂಬಿಕೆಯಾಗದೆ ಹೊಟ್ಟೆಪಾಡಿನ ಮಾರ್ಗವಾದಲ್ಲಿ, ಅಂತಹ ವ್ಯಕ್ತಿಗಳು ಹೇಗೆ ತಾನೇ ವೈಜ್ಞಾನಿಕ ಮನೋಭಾವವನ್ನು ವೈಚಾರಿಕತೆಯನ್ನು ಪ್ರಚಾರ ಮಾಡಲು ಸಾಧ್ಯ. ನಮ್ಮ ದೇಶವು ಮೂಢನಂಬಿಕೆಗಳಿಂದ ತುಂಬಿ ತುಳುಕುತ್ತಿದೆ. ಶಿಕ್ಷಣ ಪಡೆಯುತ್ತಿರುವವರಿಗೆ ಸರಿಯಾದ ಶಿಕ್ಷಣ ದೊರೆಯಬೇಕಾಗಿರುವುದು ಈಗ ಅತ್ಯಂತ ಅವಶ್ಯಕ.
- ಮೂಢನಂಬಿಕೆಯು ಭಯ ಮತ್ತು ಅಜ್ಞಾನಗಳಿಂದ ಉಂಟಾಗುತ್ತದೆ. ಅವು ಆತ್ಮವಿಶ್ವಾಸವನ್ನು ಲೆಕ್ಕ ಹಾಕಲು ಸಾಧ್ಯವಾಗದಷ್ಟು ಪ್ರಮಾಣದಲ್ಲಿ ನಾಶಪಡಿಸುತ್ತವೆ. ಅವು ಸ್ವತಂತ್ರ ಚಿಂತನೆಯನ್ನು, ನಿರ್ಭೀತ ಮನೋಭಾವವನ್ನು ಮೊಟಕುಗೊಳಿಸುತ್ತವೆ. ವಿಜ್ಞಾನದ ಫಲಿತಾಂಶಗಳು ಬಗ್ಗೆ ನಾವು ಹೆಚ್ಚು ಗಮನ ಕೊಟ್ಟಿದ್ದೇವೆ. ಆದರೆ ವಿಜ್ಞಾನದ ಚೈತನ್ಯವು (spirit) ಜನಪ್ರಿಯವಾಗಿಲ್ಲ. ವಿಜ್ಞಾನದ ನಿಜವಾದ ಪ್ರಾಮುಖ್ಯ ಈ ಅಂಶದಲ್ಲಿ ಅಡಗಿದೆ ಎಂಬುದು ನನ್ನ ಅಭಿಪ್ರಾಯ.
- ನಮ್ಮ ತಿಳುವಳಿಕೆಯಲ್ಲಿ ಎಷ್ಟೆ ಕಂದರಗಳಿದ್ದರೂ, ವಿಜ್ಞಾನಕ್ಕೆ ತನ್ನದೆ ಆದ ಮಿತಿಗಳಿದ್ದರೂ ಸಮಸ್ಯೆಗಳನ್ನು ಪರಿಹರಿಸಿಕೊಳ್ಳವಲ್ಲಿ ವಿಜ್ಞಾನದ ವಿಧಾನಗಳೇ ಹೆಚ್ಚು ಸಮರ್ಪಕ. ಯಾವುದೇ ಹೇಳಿಕೆ ಅಥವಾ ಸೂಕ್ತಿಯನ್ನು ಒಪ್ಪಿಕೊಳ್ಳವುದು ಸರಿಯಲ್ಲ. ಸಾಧ್ಯವಾದಷ್ಟರಮಟ್ಟಿಗೆ ಅವುಗಳನ್ನು ಪ್ರಯೋಗಗಳ ಮೂಲಕ ಪರಿಕ್ಷೀಸಬೇಕು. ಎಲ್ಲ ಪರಿಶೀಲನ ಮಾರ್ಗಗಳಲ್ಲೂ ವಿಚಾರವು ಅಡಿಪಾಯವಾಗಬೇಕು.
- ಈ ಮನೋಭಾವವನ್ನು ಬೆಳೆಸುವ ದಿಸೆಯಲ್ಲಿ ಎಲ್ಲ ಸಂಸ್ಥೆಗಳು ಮತ್ತು ವಿಶ್ವವಿಧ್ಯಾಲಯಗಳು ಕಾರ್ಯಪ್ರವೃತ್ತರಾಗಬೇಕು. ಪಂಡಿತ ಜವಹರಲಾಲ್ ನೆಹುರೂರವರು ಅಲಹಾಬಾದಿನ ವಿಶ್ವವಿದ್ಯಾಲಯದ ವಿಶೇಷ ಘಟಿಕೋತ್ಸವದ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಉದ್ಧೇಶಗಳನ್ನು ಕುರಿತು ಹೇಳಿದ ಮಾತುಗಳನ್ನು ಬಹುಪಾಲು ವಿಶ್ವವಿದ್ಯಾಲಯಗಳು ಮರೆತು ಬಿಟ್ಟಿವೆ. ವಿಶ್ವವಿದ್ಯಾಲಯವು ಮಾನವತಾವಾದ, ಸಹನೆ, ವೈಚಾರಿಕತೆ, ನಿರ್ದಿಷ್ಟ ಗುರಿಗಾಗಿ ಹೋರಾಡುವ ಸಾಹಸ ಮತ್ತು ಸತ್ಯದ ಅನ್ವೇಷಣೆಯ ಸಂಕೇತ.
- ವಿಶ್ವವಿದ್ಯಾಲಯಗಳು ಉನ್ನತ ಧ್ಯೇಯಗಳನ್ನು ಹೊಂದಿ ಮನುಷ್ಯನ ಪ್ರಗತಿಯಲ್ಲಿ ಮುನ್ನುಗ್ಗಬೇಕು. ಅವು ತಮ್ಮ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ, ಜನಗಳಿಗೆ ಹಾಗೂ ದೇಶಕ್ಕೆ ಒಳ್ಳೆಯದನ್ನು ಮಾಡಿದಂತೆ ಆಗುತ್ತದೆ, ಎಂದು ನೆಹರೂರವರು ಅಭಿಪ್ರಾಯ ಪಟ್ಟಿದ್ದಾರೆ.
ನಮಗೆಲ್ಲ ತಿಳಿದಿರುವಂತೆ ಇತ್ತೀಚೆಗೆ ಸಂವಿಧಾನ ತಿದ್ದುಪಡಿ ಸಮಿತಿಯು ಪ್ರತಿಯೊಬ್ಬ ಪ್ರಜೆಯ ಮೂಲಭೂತವಾದ ಹತ್ತು ಕರ್ತವ್ಯಗಳನ್ನು ಸೂಚಿಸಿದೆ. ಅವುಗಳಲ್ಲಿ ಎಂಟನೆಯ ಕರ್ತವ್ಯವು ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು.
- ಮಾನವತಾವಾದ, ವೈಚಾರಿಕತೆ, ಪರೀಕ್ಷಾ ಮನೋಭಾವ ಹಾಗೂ ಸುಧಾರಕ ದೃಷ್ಟಿಯನ್ನು ತಿಳಿಸುತ್ತದೆ. ಈ ಕರ್ತವ್ಯವನ್ನು ಪ್ರತಿಯೊಬ್ಬನೂ ಗಂಭೀರವಾಗಿ ತೆಗೆದುಕೊಡು ಕಾರ್ಯರೂಪಕ್ಕೆ ತಂದರೆ ಬಹಳ ಒಳ್ಳೆಂi ಪರಿಣಾಮಗಳಾಗುತ್ತವೆ. ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಈ ರೀತಿಯ ತನಿಖೆಗಳನ್ನು ಕೈಗೊಳ್ಳುವುದಕ್ಕೆ ಸಂವಿಧಾನದ ಒಪ್ಪಿಗೆ ಕೂಡ ದೊರೆತಿದೆ ಎಂಬುದು ಈ ಅಂಶದಿಂದ ತಿಳಿದು ಬರುತ್ತದೆ.
- ಈಗ ಸತ್ಯಸಾಯಿಬಾಬಾ ಮತ್ತು ಅವರ ಬೆಂಬಲಿಗರು ಉನ್ಮಾದದ ಆವೇಶದ ಮಾತುಗಳ ಕಡೆ ಗಮನ ಹರಿಸೋಣ. ಬಹಳಷ್ಟು ಲೇಖನಗಳನ್ನು ಪ್ರಕಟಿಸುವುದರಿಂದ, ಸಂಶಯದ ಆವರಣದಲ್ಲಿ ಅನೇಕ ವಸ್ತುಗಳನ್ನು ಪ್ರದರ್ಶಿಸುವುದರಿಂದ, ಬೀದಿಯಲ್ಲಿ ನಿಂತು ಕೂಗುವುದರಿಂದ ಆ ಸತ್ಯಸಾಯಿಬಾಬಾರವರು ಶೂನ್ಯದಲ್ಲಿ ವಸ್ತುಗಳನ್ನು ಸೃಷ್ಟಿಸುತ್ತಾರೆ ಎಂಬುದು, ನಿಜವಾಗುವುದಿಲ್ಲ. ಇವೆಲ್ಲವೂ ಅವರ ದೈವೀಶಕ್ತಿಯನ್ನು ರುಜುವಾತು ಮಾಡುವುದಿಲ್ಲ.
- ಎಲ್ಲಿಯ ತನಕ ಈ ಸಂದಿಗ್ಧತೆ ಮುಂದುವರೆಯಬೇಕು? ಸಾವಿರಾರು ಜನರಿಗೆ ಇದರ ಬಗ್ಗೆ ನಿಜವಾದ ಸಂಶಯಗಳಿವೆ. ಇಷ್ಟು ಸಮಯವಾದರೂ ಈ ಒಗಟು ಪರಿಹಾರವಾಗದೇ ಇರುವುದು ಸರಿಯಲ್ಲ. ದೇಶದ ತುಂಬ ನಡೆಯುತ್ತಿರುವ ಚರ್ಚೆಯು ವ್ಯರ್ಥವಾಗುವುದು ಉಚಿತವಲ್ಲ. ಈ ಹೆಚ್ಚಿನ ವಿವಾದಿಂದ ಏನಾದರೂ ಗಟ್ಟಿಯಾದ ತೀರ್ಮಾನಕ್ಕೆ ಬರುವುದು ಅವಶ್ಯಕ. ಈ ಸಮಸ್ಯೆಯು ಸರಳ ಮತ್ತು ಸ್ಪಷ್ಟ. ಸಂಬಂಧವಿಲ್ಲದ ಸಂಗತಿಗಳನ್ನು ಇದರ ಜೊತೆಯಲ್ಲಿ ತಂದು ಗೊಂದಲ ಮಾಡುವುದು ಸರಿಯಲ್ಲ.
- ಇದಕ್ಕೆ ಸಂಬಂಧಿಸಿದಂತೆ ನುಣಿಚಿಕೊಳ್ಳವ ಪ್ರಯತ್ನವಾಗಲೀ, ಹಾರಿಕೆಯ ಉತ್ತರವಾಗಲೀ, ವ್ಯರ್ಥಮಾತುಗಳಾಗಲೀ ಅವಶ್ಯಕತೆ ಇಲ್ಲ. ಶ್ರೀ ಸತ್ಯಸಾಯಿಬಾಬಾರವರು ಪ್ರಾಮಾಣಿಕ ವ್ಯಕ್ತಿಯಾಗಿದ್ದರೆ, ನಮ್ಮ ಸಮಿತಿಯು ಅವರನ್ನು ನೋಡುವ ಅವಕಾಶವನ್ನು ಕೊಟ್ಟು ನೈತಿಕ ಧೈರ್ಯವನ್ನು ವ್ಯಕ್ತಪಡಿಸಲಿ. ಅವರೊಡನೆ ಚರ್ಚಿಸಲು ಹಾಗೂ ಬಹಿರಂಗವಾಗಿ ಅವರ ಪವಾಡವನ್ನು ಪರೀಕ್ಷಿಸಲು ಅವಕಾಶವನ್ನು ಮಾಡಿಕೊಟ್ಟು ಅವರು ತಮ್ಮ ಮಾತಿನ ಸತ್ಯವನ್ನು ಸಾಬೀತುಪಡಿಸಲಿ.
- ವಿಜ್ಞಾನದ ವಿದ್ಯಾರ್ಥಿಯಾಗಿ ಈಗಲೂ ಕೂಡ ನಾನು ವಿಷಯವನ್ನು ಗ್ರಹಿಸುವಲ್ಲಿ ತೆರೆದ ಮನಸ್ಸನ್ನು ಹೊಂದಿದ್ದೇನೆ. ಹೊಸ ಅಂಶಗಳಿಂದ, ಅನುಭವಗಳಿಂದ ನನ್ನ ಅಭಿಪ್ರಾಯಗಳನ್ನು ಮತ್ತು ಪ್ರಾಯೋಗಿಕ ನೆಲೆಯಲ್ಲಿ ಕಂಡುಕೊಂಡಿರುವ ತೀರ್ಮಾನಗಳನ್ನು ಬದಲಾಯಿಸಿಕೊಳ್ಳಲು ಸಿದ್ಧನಿದ್ದೇನೆ.
ನಿಧನ
ಡಾ. ಹೆಚ್.ನರಸಿಂಹಯ್ಯನವರು ೨೦೦೫ ಜನವರಿ ೩೧ರಂದು ನಿಧನರಾದರು
ಉಲ್ಲೇಖಗಳು
ಭಾಹ್ಯ ಕೊಂಡಿಗಳು
- Champion of pure sciences in an IT hub by A. Narayana Article in the newspaper The Hindu 4 April 2004
- Past & Present Rationalist and nationalist article by Ramachandra Guha in The Hindu 27 February 2005
- The Blitz interview Sathya Sai Baba's September 1976 interview with editor R. K. Karanjia of Blitz News Magazine, containing a rebuttal to Narasimhaiah