ವಿನೋಬಾ ಭಾವೆ

ವಿನೋಬಾ ಭಾವೆ (ವಿನಾಯಕ ನರಹರಿ ಭಾವೆ)ಭೂದಾನ’ ಚಳವಳಿಯ ಹರಿಕಾರ ಎಂದು ಖ್ಯಾತರಾಗಿರುವವರು. ಭಾರತದ ಸ್ವಾತಂತ್ರ್ಯ ಹೋರಾಟಗಾರರು. ಅವರು ಕನ್ನಡದ ಲಿಪಿಯನ್ನು ‘ಲಿಪಿಗಳ ರಾಣಿ’ ಎಂದು ಶ್ಲಾಘಿಸುತ್ತಿದ್ದರು."ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು" ಎಂದು ಹೇಳುತ್ತಿದ್ದರು.

ವಿನೋಬಾ ಭಾವೆ
ಮಹಾತ್ಮ ಗಾಂಧಿಯವರೊಂದಿಗೆ ವಿನೋಬಾ
ಜನನ
ವಿನಾಯಕ್ ನರಹರಿ ಭಾವೆ

11 ಸಪ್ಟೆಂಬರ್ 1895
ಗಾಗೋದೇ, ಪೆಣ್, ಇಂಡಿಯಾ, ರಾಯಗಡ ಜಿಲ್ಲೆ, ಬ್ರಿಟಿಷ್ ಭಾರತ
ನಿಧನ15 ನವೆಂಬರ್ 1982(1982-11-15) (ವಯಸ್ಸು 87)
ಪುನರ್, ವಾರ್ಧಾ
Other namesಆಚಾರ್ಯ
Known forಭೂದಾನ ಮೂವ್ಮೆಂಟ್
ಪ್ರಶಸ್ತಿಗಳು1958 ರಲ್ಲಿ ಅಂತಾರಾಷ್ಟ್ರೀಯ ರಾಮನ್ ಪ್ರಶಸ್ತಿ
1983 ರಲ್ಲಿ ಭಾರತ ರತ್ನ
ಸಾಬರಮತಿ ಆಶ್ರಮದಲ್ಲಿರುವ ವಿನೋಬಾ ಕುಟೀರ

ಜನನ/ಜೀವನ

  • ಭೂದಾನ’ ಚಳವಳಿಯ ಹರಿಕಾರ ಎಂದು ಖ್ಯಾತರಾಗಿರುವವರು ಆಚಾರ್ಯ ವಿನೋಬಾ ಭಾವೆ. ವಿನೋಬಾ ಅವರು ಮಹಾರಾಷ್ಟ್ರದ ಕೋಲಬಾ ಜಿಲ್ಲೆಯ ಗಾಗೋಡೆ ಗ್ರಾಮದಲ್ಲಿ ಸೆಪ್ಟೆಂಬರ್ 11, 1895ರಂದು ಜನಿಸಿದರು. ಇವರ ತಂದೆ ನರಹರಿ ಶಂಭುರಾವ್ ಭಾವೆ. ತಾಯಿ ರುಕ್ಮಿಣಿ ದೇವಿ. ಅವರ ಮೂಲ ಹೆಸರು ವಿನಾಯಕ್ ನರಹರಿ ಭಾವೆ. ಬಾಲ್ಯದಲ್ಲಿಯೇ ವಿವಿಧ ಧರ್ಮಗಳ ಸಾರವನ್ನು ಅಧ್ಯಯನ ಮಾಡಿ ಅರಗಿಸಿಕೊಂಡಿದ್ದರು.
  • ಅವರಿಗೆ ಗಣಿತದಲ್ಲಿ ಅಪಾರ ಆಸಕ್ತಿ ಇತ್ತು. 1916ರಲ್ಲಿ ತಮ್ಮ ಇಂಟರ್ ಮೀಡಿಯೆಟ್ ಪರೀಕ್ಷೆಗಗಾಗಿ ಮುಂಬೈಗೆ ಹೊರಟಿದ್ದ ವಿನೋಬಾ ಭಾವೆ ಅವರಿಗೆ ಮಹಾತ್ಮ ಗಾಂಧಿಯವರ ಬರಹವೊಂದು ಕಣ್ಣಿಗೆ ಬಿದ್ದು, ತಮ್ಮ ಓದು ಬರಹದ ಪ್ರಮಾಣ ಪತ್ರಗಳಿಗೆಲ್ಲ ಬೆಂಕಿಗೆ ಹಚ್ಚಿಬಿಟ್ಟರಂತೆ. ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಗಾಂಧೀಜಿಯವರ ಅನುಯಾಯಿಯಾಗುವುದರೊಂದಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಭಾವೆ ಅನಂತರ ತಿರುಗಿ ನೋಡಲಿಲ್ಲ.

ಬರಹಗಾರರಾಗಿ

  • ವಿನೋಬಾ ಭಾವೆ ಸಮರ್ಥ ಲೇಖಕರಾಗಿದ್ದರು. 1923 ರಲ್ಲಿ ’ಮಹಾರಾಷ್ಟ್ರ ಧರ್ಮ’ ಪತ್ರಿಕೆಯ ಸಂಪಾದಕರಾದರು. ನಾಗಪುರದ ’ಧ್ವಜಸತ್ಯಾಗ್ರಹ’ ದಲ್ಲಿ ತಿಂಗಳಾನುಗಟ್ಟಲೆ ಬಂಧಿತರಾದರು ಮತ್ತು ಕೇರಳದ ’ವೈಕೋಮ್ ಸತ್ಯಾಗ್ರಹ’ಕ್ಕೆ ಹೊರಟು ನಿಂತರು. ಇವೆಲ್ಲದರ ನಡುವೆಯೂ ನಿರಂತರ ಅಧ್ಯಯನಶೀಲರಾಗಿದ್ದ ಅವರು ಮರಾಠಿಯಲ್ಲಿ ಗೀತಾಭಾಷ್ಯ ಬರೆದರು.
  • ಉಪನಿಷತ್ತುಗಳಿಗೆ ವ್ಯಾಖ್ಯಾನ ಬರೆದರು. ತಿಂಗಳುಗಟ್ಟಲೆ ಜೈಲಿನಲ್ಲಿದ್ದಾಗ ತಮ್ಮ ಸಹ ಖೈದಿಗಳಿಗೆಲ್ಲ ಇವುಗಳ ಬಗ್ಗೆ ಪ್ರವಚನ ಕೊಡಾ ನೀಡುತ್ತಿದ್ದರು. ಕುರಾನ್ ಮತ್ತು ಬೈಬಲ್ಲಿನ ಬೋಧನೆಗಳನ್ನು ಸಹ ಪ್ರಕಟಿಸಿದರಲ್ಲದೆ, ಶಿಕ್ಷಣ, ಸ್ವರಾಜ್ಯ ಶಾಸ್ತ್ರದ ಕುರಿತಾದ ಗ್ರಂಥ ರಚನೆಯನ್ನೂ ಮಾಡಿದರು.

ಸತ್ಯಾಗ್ರಹಿಯಾಗಿ

  • ವಿನೋಬಾ ಭಾವೆ ಒಬ್ಬ ಹಠವಾದಿ ಸತ್ಯಾಗ್ರಹಿ. ಅಹಿಂಸಾ ಮಾರ್ಗದಲ್ಲಿ ಅಪ್ರತಿಮ ನಿಷ್ಠೆಯಿರಿಸಿದ್ದರು. ಉಪವಾಸ ಸತ್ಯಾಗ್ರಹದಲ್ಲಿ ಎತ್ತಿದ ಕೈಯಿ. ಜಾತೀಯತೆಯ ಭೇದ ಅಳಿಸಿ ಎಲ್ಲರೂ ಸೌಹಾರ್ದದಿಂದ ಬಾಳಬೇಕೆಂಬ ಕನಸು ಕಟ್ಟಿ ಅದನ್ನು ನೆರವೇರಿಸಲು ಹರಿಜನರೊಡನೆ ವಿವಿಧ ಮತೀಯರೊಡನೆ ದೇವಾಲಯಗಳಿಗೆ ಪ್ರವೇಶಿಸಿ ಮತ್ತೆ ಮತ್ತೆ ಸೆರೆವಾಸ ಅನುಭವಿಸಿದರು. ಅವರ ಈ ಎಲ್ಲ ಪ್ರಯತ್ನಗಳು ಎಲ್ಲರ ಮನ್ನಣೆಗಳಿಸಿ ಹೊಸ ಕ್ರಾಂತಿಗೆ ನಾಂದಿಯಾಯಿತು.
  • ಸಂತರಂತೆ ಬಾಳಿದ್ದ ವಿನೋಬಾರವರ ಅಂತಃಸತ್ತ್ವ ಬಹಳ ಪ್ರಭಾವಶಾಲಿಯಾಗಿತ್ತು, 1960ರಲ್ಲಿ ಚಂಬಲ್ ಕಣಿವೆಯ ಡಕಾಯಿತರು, 1972ರಲ್ಲಿಸಂತರಂತೆ ಬಾಳಿದ್ದ ವಿನೋಬಾರವರ ಅಂತಃಸತ್ತ್ವ ಬಹಳ ಪ್ರಭಾವಶಾಲಿಯಾಗಿತ್ತು, 1960ರಲ್ಲಿ ಚಂಬಲ್ ಕಣಿವೆಯ ಡಕಾಯಿತರು, 1972ರಲ್ಲಿ ವಿವಿಧ ಭಾಗದ ನೂರಾರು ಡಕಾಯಿತರು ಅವರಿಗೆ ಶರಣುಬಂದಿದ್ದು ಅದಕ್ಕೊಂದು ಉದಾಹರಣೆ. ಈ ಡಕಾಯಿತರೆಲ್ಲರೂ ಮುಂದೆ ಭಾವೆಯವರ ಸಹವಾಸದಲ್ಲಿ ಜೀವನ ಕಳೆದರು.
  • 1955ರಲ್ಲಿ ’ಭೂದಾನ ಚಳುವಳಿ’ಗೆ ಚಾಲನೆ ನೀಡಿದ ಭಾವೆ ಅದನ್ನು ವ್ಯಾಪಕಗೊಳಿಸಿ ಅಸಂಖ್ಯ ಭೂದಾನಕ್ಕೆ ಪ್ರೇರಣೆ ನೀಡಿದರು. ದೇಶದ ಉದ್ದಗಲಕ್ಕೂ ಕಾಲ್ನಡಿಗೆಯಲ್ಲಿ ಓಡಾಡಿ ಸಹಸ್ರಾರು ಸಾಮಾಜಿಕ ಕಾರ್ಯಕರ್ತರಿಗೆ ಪ್ರೇರಣೆಯಾಗಿ ನಿಂತರು. ಅವರು ಸಿರಿವಂತರಿಂದ ದಾನ ಸ್ವೀಕರಿಸಿ ಬಡಬಗ್ಗರಿಗಾಗಿ ಹಸ್ತಾಂತರಿಸಿದ ಹಳ್ಳಿಗಳ ಸಂಖ್ಯೆ ಸಾವಿರಕ್ಕೂ ಹೆಚ್ಚು. ಅವುಗಳಲ್ಲಿ ತಮಿಳುನಾಡು ಒಂದರಲ್ಲೇ ಅವರು ಸುಮಾರು 175 ಹಳ್ಳಿಗಳನ್ನು ಸಿರಿವಂತರಿಂದ ಸ್ವೀಕರಿಸಿ ಬಡಜನರಿಗೆ ಹಸ್ತಾಂತರಿಸಿದರು.

ಬಹುಭಾಷಾ ಪಂಡಿತರು

ಆಚಾರ್ಯ ವಿನೋಬಾ ಅವರು ಬಹುಭಾಷಾ ಪಂಡಿತರಾಗಿದ್ದು ಮರಾಠಿ, ಹಿಂದಿ, ಉರ್ದು, ಇಂಗ್ಲಿಷ್, ಕನ್ನಡ ಭಾಷೆಗಳ ಪರಿಚಯ ಅವರಿಗಿತ್ತು. ಕನ್ನಡ ಭಾಷೆಯ ಲಿಪಿ ಅವರನ್ನು ಮೋಡಿ ಮಾಡಿತ್ತು. ಅವರು ಕನ್ನಡದ ಲಿಪಿಯನ್ನು ‘ಲಿಪಿಗಳ ರಾಣಿ’ ಎಂದು ಶ್ಲಾಘಿಸುತ್ತಿದ್ದರು. 1958ರಲ್ಲಿ ವಿನೋಬಾ ಅವರು ಸಲ್ಲಿಸಿದ ಸಮಾಜ ಸೇವೆಗಾಗಿ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು 1983ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಲಾಯಿತು. ತುರ್ತುಪರಿಸ್ಥಿತಿ ಘೋಷಿಸಿದ್ದ ದಿನಗಳಲ್ಲೂ ಅವರು ಇಂದಿರಾ ಗಾಂಧಿಯವರ ಆಡಳಿತಕ್ಕೆ ಬೆಂಬಲವಾಗಿ ನಿಂತದ್ದು ವಿವಾದಕ್ಕೆ ಕಾರಣವಾಗಿತ್ತು.

ಸಾಮಾಜಿಕ ಸೇವೆ

  • 1948 ರಲ್ಲಿ ಗಾಂಧೀಜಿಯವರ ಹತ್ಯೆಯಾದ ನಂತರ ಆಚಾರ್ಯ ವಿನೋಬಾ ಭಾವೆಯವರಿಗೆ ಆಶ್ರಮದ ಬದುಕು ಸಾಕೆನಿಸಿತು. ತಮ್ಮ ಗುರು ಹಾಕಿಕೊಟ್ಟಿದ್ದ ಸರ್ವೋದಯ ಪರಿಕಲ್ಪನೆಯಲ್ಲಿ ಏನಾದರೂ ಗ್ರಾಮ ಸುಧಾರಣೆ ಮಾಡಲು ಸಾಧ್ಯವೆ? ಎಂದು ಯೋಚಿಸಿದ ಅವರು ಗ್ರಾಮಭಾರತದ ದರ್ಶನಕ್ಕಾಗಿ ಕಾಲ್ನಡಿಗೆ ಪ್ರವಾಸ ಹೊರಟರು.
  • 1951 ಏಪ್ರಿಲ್ 18 ರಂದು ಆಂಧ್ರದ ತೆಲಂಗಾಣ ಪ್ರಾಂತ್ಯದ ಪೂಚಂಪಲ್ಲಿ ಎಂಬಲ್ಲಿ ಭಾಷಣ ಮಾಡುತ್ತಾ, ಶ್ರೀಮಂತ ಜಮೀನ್ದಾರರು ತಮ್ಮಲ್ಲಿರುವ ಜಮೀನುಗಳನ್ನು ಬಡವರಿಗೆ ದಾನ ಮಾಡಬೇಕು. ಇದು ಯಾವ ಕಾರಣಕ್ಕೂ ನಿಮ್ಮ ಮನಸ್ಸಿನಲ್ಲಿ ಭಿಕ್ಷೆ ಎಂಬ ಭಾವನೆ ಮೂಡಕೂಡದು, ಬಡತನ ಹೋಗಲಾಡಿಸಲು ಹಾಗೂ ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸುವ ದೀಕ್ಷೆ ಎಂದು ಭಾವಿಸಬೇಕು ಎಂದು ಕರೆಯಿತ್ತರು.
  • ವಿನೋಬಾ ಮಾತುಗಳಿಂದ ಪ್ರಭಾವಿತನಾದ ರಾಮರೆಡ್ಡಿ ಎಂಬ ಜಮೀನ್ದಾರ ಸ್ಥಳದಲ್ಲಿ ನೂರು ಎಕರೆ ಭೂಮಿಯನ್ನು ವಿನೋಬಾರವರಿಗೆ ದಾನ ಮಾಡಿದ. ಈ ಕ್ರಿಯೆಯಿಂದ ವಿನೋಬಾ ತಕ್ಷಣಕ್ಕೆ ವಿಚಲಿತರಾದರು. ಆದರೆ, ಇದು ದೇವರು ತೋರಿದ ದಾರಿ ಎಂದು ತಿಳಿದ ಅವರು ಈ ಕ್ರಿಯೆಗೆ ಭೂದಾನ ಎಂಬ ಹೆಸರಿಟ್ಟು ಜಮೀನುಗಳನ್ನು ಸ್ವೀಕರಿಸುತ್ತಾ ಹೋದರು. ನೀವು ನೀಡುವ ಜಮೀನಿನಲ್ಲಿ ಯಾವ ಕಾರಣಕ್ಕೂ ದೇಗುಲ, ಛತ್ರ, ಅಥವಾ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವುದಿಲ್ಲ.
  • ಹಸಿವು ಮತ್ತು ಬಡತನದಿಂದ ಬಳಲುತ್ತಿರುವ ಭಾರತದ ಬಡವರು ನಮ್ಮ ಪಾಲಿನ ನಿಜವಾದ ದೇವರಾಗಿದ್ದಾರೆ. ನೀವು ದಾನ ನೀಡುವ ಜಮೀನು ಅವರಿಗೆ ಸಲ್ಲುತ್ತದ ಎಂದು ಘೋಷಿಸುತ್ತಾ ಹೋದರು. ಮೊದಲ 70 ದಿನಗಳ ಪ್ರವಾಸದಲ್ಲಿ 12 ಸಾವಿರ ಎಕರೆ ಭೂಮಿ ದಾನವಾಗಿ ದೊರೆತರೆ, ನಂತರದ 60 ದಿನಗಳಲ್ಲಿ 18 ಸಾವಿರ ಎಕರೆ ಭೂಮಿ ದೊರೆಯಿತು.
  • ಮೊದಲ ಹಂತದ 800 ಕಿಲೋಮೀಟರ್ ಪಾದಯಾತ್ರೆಯಲ್ಲಿ 30 ಸಾವಿರ ಎಕರೆ ಭೂಮಿಯು ಭೂದಾನವಾಗಿ ವಿನೋಬಾರವರ ಮಡಿಲು ಸೇರಿತ್ತು. 1952 ರಲ್ಲಿ ನೆಹರೂ ರವರು ವಿನೋಬಾ ಅವರನ್ನು ದೆಹಲಿಗೆ ಆಹ್ವಾನಿಸಿ, ಪಂಚವಾರ್ಷಿಕ ಯೋಜನೆಗಳಲ್ಲಿ ಗ್ರಾಮಾಭಿವೃದ್ಧಿಯ ಕುರಿತು ಯಾವ ರೀತಿಯ ಯೋಜನೆಗಳು ಇರಬೇಕೆಂದು ಕೇಳಿದಾಗ ಆಚಾರ್ಯರು ನೀಡಿದ ಉತ್ತರ ಹೀಗಿತ್ತು. “ ಬಡವರ ಹಸಿವನ್ನು ನೀಗಿಸಿಲಾಗದ, ದುಡಿಯುವ ಕೈಗಳಿಗೆ ಕೆಲಸ ನೀಡಲಾಗದ ನಿಮ್ಮ ಪಂಚವಾರ್ಷಿಕ ಯೋಜನೆಗಳನ್ನು ಕಸದ ಬುಟ್ಟಿಗೆ ಬಿಸಾಡಿ. ಮೊದಲು ನೀವು , ನಿಮ್ಮ ಪರಿವಾರ ದೆಹಲಿ ಬಿಟ್ಟು ಹಳ್ಳಿಗಳತ್ತ ಹೊರಡಿ. ಅಲ್ಲಿ ದರ್ಶನವಾಗುವ ನರಕ ಸದೃಶ್ಯ ಬದುಕು ನಿಮಗೆ ದಾರಿ ತೋರಿಸುತ್ತದೆ”.

ಪ್ರಶಸ್ತಿ/ಗೌರವ ಪುರಸ್ಕಾರ

  1. 1958ರಲ್ಲಿ ವಿನೋಬಾ ಅವರು ಸಲ್ಲಿಸಿದ ಸಮಾಜ ಸೇವೆಗಾಗಿ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು
  2. 1983ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಲಾಯಿತು.

ನಿಧನ

1982ರ ವರ್ಷದಲ್ಲಿ ಅವರು ತೀವ್ರ ಅನಾರೋಗ್ಯದಿಂದಿದ್ದರೂ ಯಾವುದೇ ರೀತಿಯ ಔಷದೋಪಚಾರ ಸ್ವೀಕರಿಸಲು ಒಪ್ಪದೆ ನವೆಂಬರ್ 15, 1982ರಂದು ನಿಧನರಾದರು. ಭಾರತೀಯ ಸಮಾಜದ ಸ್ವಾತಂತ್ರ್ಯ ಮತ್ತು ಒಳಿತಿಗಾಗಿ ಶ್ರಮಿಸಿದ ಆಚಾರ್ಯ ವಿನೋಬಾ ಭಾವೆ ಅವರು ಜನಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ.

ಹೊರಗಿನ ಸಂಪರ್ಕಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.