ಸಿಂದಗಿ ವಿಧಾನಸಭಾ ಕ್ಷೇತ್ರ

ಸಿಂದಗಿ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಸಿಂದಗಿ ಮತಕ್ಷೇತ್ರ(2018)ದಲ್ಲಿ 1,15,455 ಪುರುಷರು, 1,07,576 ಮಹಿಳೆಯರು ಸೇರಿ ಒಟ್ಟು 2,23,160 ಮತದಾರರಿದ್ದಾರೆ.

ಕ್ಷೇತ್ರದ ಇತಿಹಾಸ

ಕರ್ನಾಟಕದ ಉತ್ತರದ ಗಡಿಯಲ್ಲಿರುವ ಸಿಂದಗಿಯು ಉತ್ತರಕ್ಕೆ ಮಹಾರಾಷ್ಟ್ರಸೊಲ್ಲಾಪುರ ಜಿಲ್ಲೆ, ಪಶ್ಚಿಮಕ್ಕೆ ಇಂಡಿ ತಾಲ್ಲೂಕು, ದಕ್ಷಿಣಕ್ಕೆ ವಿಜಯಪುರ ತಾಲ್ಲೂಕು ಮತ್ತು ಪೂರ್ವಕ್ಕೆ ಅಫಜಲಪೂರ ತಾಲ್ಲೂಕುಗಳಿವೆ.

ಸ್ವಾತಂತ್ರ್ಯ ಹೋರಾಟಗಾರ ವಾಸುದೇವ ಬಲವಂತರಾಯ ಪದಕಿ ಸೆರೆಸಿಕ್ಕ ದೇವರನಾವದಗಿ ದೇವಾಲಯವಿರುವುದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ. 12 ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ನಿರ್ಮಿಸಲ್ಪಟ್ಟ ದೇವರನಾವದಗಿ ಶ್ರೀ ಸಂಗಮೇಶ್ವರ ದೇವಾಲಯ ಐತಿಹಾಸಿಕ ಪ್ರಸಿದ್ಧಿ ಪಡೆದಿದೆ. ಇದು ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ರೂವಾರಿ ರಮಾನಂದ ತೀರ್ಥರ ನೆಲೆಯೂ ಹೌದು.

ಬಸವಾದಿ ಶರಣರ ವಚನಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಜಗದೇವ ಮಲ್ಲಿಬೊಮ್ಮ ಶರಣರ ಆಲಮೇಲ ನೆಲೆಯನ್ನು ಮಡಿಲಲ್ಲಿ ಕಟ್ಟಿಕೊಂಡಿರುವ ಕ್ಷೇತ್ರ ಸಿಂದಗಿ. ಕಬ್ಬು ಬೆಳೆದು, ಸಕ್ಕರೆ ಉತ್ಪಾದಿಸುವ ಭೀಮಾ ತೀರದ ಈ ಕ್ಷೇತ್ರದ ಮತದಾರ ಸತತವಾಗಿ ಮೂರು ಅವಧಿಗೆ ಬಿಜೆಪಿ ಗೆಲ್ಲಿಸಿದ್ದಾನೆ.

ದೇಶಪ್ರೇಮಿ ಸ್ವಾತಂತ್ರ್ಯ ಹೋರಾಟಗಾರ ರಮಾನಂದ ತೀರ್ಥರು, ಬಸವಪ್ರಿಯ ಎಂ.ಎಂ. ಕಲಬುರ್ಗಿ, ರಂಗರತ್ನ ಹಂದಿಗನೂರು ಸಿದ್ರಾಮಪ್ಪ ಹೀಗೆ ಹತ್ತು ಹಲವು ಪ್ರತಿಭೆಗಳಿಗೆ ಜನ್ಮನೀಡಿದ ಸಿಂದಗಿ ಭೀಮಾ ತೀರದ ಸಮೃದ್ಧ ನೀರಾವರಿ ನೆಲ. ಭೀಮಾ ತೀರದಲ್ಲಿ ಕುಡಿಯುವ ನೀರಿಗೆ ಬರ ಬಂದರೂ ರಕ್ತದ ಕೋಡಿ ಮಾತ್ರ ಹರಿಯುತ್ತಲೇ ಇರುತ್ತದೆ. ಗುಂಡಿನ ಸದ್ದು, ರಕ್ತದ ಕೋಡಿ ಹರಿಸುವ ಮೂಲಕ ಭೀಮಾ ತೀರ ಬೇರೆಯೇ ದೃಷ್ಟಿಕೋನಕ್ಕೆ ಕಾರಣವಾಗಿದೆ.

ಸಿಂದಗಿ ಕ್ಷೇತ್ರದಿಂದ 2 ಬಾರಿ ಶಾಸಕರಾಗಿರುವ ರಮೇಶ ಭೂಸನೂರ ಗ್ರಾಮ ಮಟ್ಟದಿಂದ ರಾಜಕೀಯ ಜೀವನಕ್ಕೆ ಕಾಲಿಟ್ಟವರು. ಇವರು ಪಂಚಾಯತ್‌ ರಾಜ್‌ ವ್ಯವಸ್ಥೆಯ 3 ಹಂತಗಳಲ್ಲಿ (ಮಂಡಲ ಪಂಚಾಯಿತಿ, ತಾಪಂ, ಜಿಪಂ) ಸದಸ್ಯರಾಗಿ ಆಯ್ಕೆಯಾದವರು. 1987ರಲ್ಲಿ ಮಂಡಲ ಪಂಚಾಯಿತಿ ಸದಸ್ಯರಾಗಿ, ಪ್ರಧಾನ ಆಗಿದ್ದರು. 1995ರಲ್ಲಿ ತಾಪಂ ಸದಸ್ಯ, 2000ದಲ್ಲಿ ಆಲಮೇಲ ಜಿಪಂ ಕ್ಷೇತ್ರದಿಂದ ಪಕ್ಷೇತರ ಸದಸ್ಯರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ವಿಧಾನಸಭೆ ಪ್ರವೇಶಿಸಲು ಇಂಡಿ ಕ್ಷೇತ್ರದ ಕಾಂಗ್ರೆಸ್‌ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್‌ ಸಿಗಲಿಲ್ಲ. 2008ರಲ್ಲಿ ಸಿಂದಗಿ ಕ್ಷೇತ್ರದ ಬಿಜೆಪಿಯಿಂದ ಕಣಕ್ಕಿಳಿದು ಮೊದಲ ಶಾಸಕರಾಗಿ ವಿಧಾನಸಭೆ ಮೆಟ್ಟಿಲೇರಿದರು. 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 2ನೇ ಬಾರಿ ಶಾಸಕರಾದರು.

ವಿಜಯಪುರ ಜಿಲ್ಲೆಯ ವಿಶಿಷ್ಟ ವಿಧಾನಸಭಾ ಕ್ಷೇತ್ರ ಸಿಂದಗಿ. 13 ಚುನಾವಣೆ ಕಂಡಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ 7 ವಿಜಯ ಕಂಡಿದ್ದರೂ, ತಲಾ ಒಂದು ಬಾರಿ ಜನತಾ ಪಕ್ಷ, ಜನತಾದಳದ ಅಭ್ಯರ್ಥಿಗಳನ್ನು ಗೆಲ್ಲಿಸಿ ಹಾಗೂ ಹ್ಯಾಟ್ರಿಕ್‌ ಬಾರಿಸಿರುವ ಬಿಜೆಪಿ ಮೂಲಕ ಕಾಂಗ್ರೆಸ್ಸೇತರ ಭದ್ರಕೋಟೆಯೂ ಎನಿಸಿದೆ. ಒಂದು ಬಾರಿ ಗೆದ್ದವರನ್ನು ಮತ್ತೆ ಗೆಲ್ಲಿಸದ ಕ್ಷೇತ್ರ ಎನಿಸಿದ್ದರೂ, ಸೋತವರನ್ನು ಅನುಕಂಪದಿಂದ ಎರಡನೇ ಸ್ಪರ್ಧೆಯಲ್ಲಿ ಗೆಲ್ಲಿಸಿದ ಇತಿಹಾಸ ಹೊಂದಿದೆ.

ವಿಧಾನಸಭಾ ಚುನಾವಣೆಯಲ್ಲಿ ಸಿಂದಗಿ ವಿಧಾನಸಭೆ ಕ್ಷೇತ್ರದಲ್ಲಿ ಒಂದು ಅವಧಿಗೆ ಗೆದ್ದವರನ್ನು ಮತ್ತೆ ಗೆಲ್ಲಿಸಿದ ಉದಾಹರಣೆ ಇರಲಿಲ್ಲ. ಈ ಕಾರಣಕ್ಕೆ ಜೆಡಿಎಸ್‌ ಜಿಲ್ಲಾಧ್ಯಕ್ಷ ಹಾಗೂ ಈ ಬಾರಿ ಸ್ಪರ್ಧಾಕಾಂಕ್ಷಿ ಮಾಜಿ ಸಚಿವ ಎಂ.ಸಿ. ಮನಗೂಳಿ ಸತತ ನಾಲ್ಕು ಬಾರಿ ಸೋಲು ಕಂಡಿದ್ದಾರೆ. ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಶರಣಪ್ಪ ಸುಣಗಾರ ಸತತ ಮೂರು ಸೋಲು ಕಂಡಿದ್ದಾರೆ. ಆದರೆ ಕಳೆದ ಬಾರಿ ಬಿಜೆಪಿಯಿಂದ ಎರಡು ಬಾರಿ ಗೆದ್ದಿರುವ ರಮೇಶ ಭೂಸನೂರ ಹೊಸ ದಾಖಲೆ ಬರೆದಿದ್ದಾರೆ. ಮತ್ತೂಂದೆಡೆ ಬಿಜೆಪಿ ಸತತ ಮೂರು ಗೆಲುವು ದಾಖಲಿಸಿ, ಹ್ಯಾಟ್ರಿಕ್‌ ಸಾಧಿಸಿ ಭದ್ರಕೋಟೆ ನಿರ್ಮಿಸಲು ಕಾರಣವಾದರು. ಭೂಸನೂರ ಅವರಿಗಿಂತ ಮೊದಲು 2004ರಲ್ಲಿ ಅಶೋಕ ಶಾಬಾದಿ ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆದಿದ್ದರು. ಕ್ಷೇತ್ರದ ಮತದಾರರ ಅಂತಿಮ ಕ್ಷಣದವರೆಗೂ ಕ್ಷೇತ್ರದ ಮತದಾರರ ಯಾರ ಪರ ಎಂಬ ಗುಟ್ಟು ರಟ್ಟು ಮಾಡುವುದೇ ಇಲ್ಲ. ಚುನಾವಣಾ ತಜ್ಞರ ಎಲ್ಲ ಸಮೀಕ್ಷೆಗಳನ್ನು ತಲೆ ಕೆಳಗಾಗುವಂತೆ ಫಲಿತಾಂಶ ನೀಡುತ್ತ ಬರುತ್ತಿದ್ದಾನೆ. ಹೀಗಾಗಿ ಈ ಕ್ಷೇತ್ರದಲ್ಲಿ ಮತದಾರ ತನ್ನ ಜಾಣ ನಡೆಯಿಂದ ನಿರಂತರ ತಾನೇ ಗೆಲ್ಲುತ್ತಿದ್ದಾನೆ.

1989ರ ಚುನಾವಣೆಯಲ್ಲಿ ಸೋತಿದ್ದ ಎಂ.ಸಿ.ಮನಗೂಳಿ ಅವರನ್ನು 1994ರಲ್ಲಿ ಜನತಾ ದಳದಿಂದ ಗೆಲ್ಲಿಸಿದ ಮತದಾರ ಮೊದಲ ಬಾರಿ ಶಾಸಕರಾದರೂ ಸಚಿವರಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿ ಕೊಟ್ಟಿದ್ದಾರೆ. ಆ ನಂತರ ನಡೆದ ನಾಲ್ಕು ಚುನಾವಣೆಗಳಲ್ಲಿ ಸ್ಪರ್ಧಿಸಿದರೂ ಮನಗೂಳಿ ಅವರಿಗೆ ಕ್ಷೇತ್ರದ ಮತದಾರ ಮಾತ್ರ ಅನುಕಂಪ ತೋರಿಲ್ಲ. ಕೊನೆಗೆ 2018ರಲ್ಲಿ ಶಾಸಕರಾದರಾಗಿ ತೋಟಗಾರಿಕೆ ಸಚಿವರಾಗಿದ್ದರು.

ಕ್ಷೇತ್ರದ ವಿಶೇಷತೆ

  • ಕಾಂಗ್ರೇಸಿನ ಸಿ.ಎಮ್.ದೇಸಾಯಿ, ಶಂಕರಗೌಡ ಪಾಟೀಲ, ಬಿಜೆಪಿಯ ರಮೇಶ ಭೂಸನೂರ ಮತ್ತು ಜೆಡಿ(ಎಸ್)ನ ಎಂ.ಸಿ.ಮನಗೂಳಿ 2 ಬಾರಿ ಆಯ್ಕೆಯಾಗಿದ್ದು ಬಿಟ್ಟರೆ ಉಳಿದ ಅಭ್ಯರ್ಥಿಗಳು ಕೇವಲ ಒಂದು ಸಲ ಮಾತ್ರ ಆಯ್ಕೆಯಾಗಿದ್ದಾರೆ.
  • 2004ರಿಂದ 2013ರವರೆಗೆ ಕ್ಷೇತ್ರವು ಬಿಜೆಪಿ ಪಕ್ಷದ ಹಿಡಿತದಲ್ಲಿತ್ತು.
  • ಎಂ.ಸಿ.ಮನಗೂಳಿಯವರು 7 ಸಲ ಸ್ಪರ್ಧಿಸಿ 1994 ಮತ್ತು 2018ರಲ್ಲಿ 2 ಬಾರಿ ಆಯ್ಕೆಯಾಗಿದ್ದು ವಿಶೇಷವಾಗಿ ಉಳಿದ 5 ಬಾರಿ ಎರಡನೇಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
  • ಡಾ.ಆರ್.ಬಿ.ಚೌಧರಿಯವರು 1992ರಲ್ಲಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಣ್ಣ ನೀರಾವರಿ, ಬಂಧಿಖಾನೆ ಮತ್ತು ಗೃಹರಕ್ಷಕ ಖಾತೆ ಸಚಿವರಾಗಿದ್ದರು.
  • 1994ರಲ್ಲಿ ಎಂ.ಸಿ.ಮನಗೂಳಿಯವರು ಹೆಚ್.ಡಿ.ದೇವೇಗೌಡ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು.
  • 2018ರಲ್ಲಿ ಎಂ.ಸಿ.ಮನಗೂಳಿಯವರು ಹೆಚ್.ಡಿ.ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರದ ಸಂಪುಟದಲ್ಲಿ ತೋಟಗಾರಿಕೆ ಸಚಿವರಾಗಿದ್ದರು.

ಜನಪ್ರತಿನಿಧಿಗಳ ವಿವರ

ವರ್ಷ ವಿಧಾನ ಸಭಾ ಕ್ಷೆತ್ರ ವಿಜೇತರು ಪಕ್ಷ ಮತಗಳು ಉಪಾಂತ ವಿಜೇತರು ಪಕ್ಷ ಮತಗಳು
ಸಿಂದಗಿ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
2018 ಸಿಂದಗಿ ವಿಧಾನಸಭಾ ಕ್ಷೇತ್ರ ಎಂ.ಸಿ.ಮನಗೂಳಿ ಜೆ.ಡಿ.ಎಸ್. 70865 ರಮೇಶ ಭೂಸನೂರ ಬಿ.ಜೆ.ಪಿ 61560
2013 ಸಿಂದಗಿ ವಿಧಾನಸಭಾ ಕ್ಷೇತ್ರ ರಮೇಶ ಭೂಸನೂರ ಬಿ.ಜೆ.ಪಿ 37834 ಎಂ.ಸಿ.ಮನಗೂಳಿ ಜೆ.ಡಿ.ಎಸ್. 37082
2008 ಸಿಂದಗಿ ವಿಧಾನಸಭಾ ಕ್ಷೇತ್ರ ರಮೇಶ ಭೂಸನೂರ ಬಿ.ಜೆ.ಪಿ 35227 ಎಂ.ಸಿ.ಮನಗೂಳಿ ಜೆ.ಡಿ.ಎಸ್. 20466
2004 ಸಿಂದಗಿ ವಿಧಾನಸಭಾ ಕ್ಷೇತ್ರ ಅಶೋಕ ಶಾಬಾದಿ ಬಿ.ಜೆ.ಪಿ 38853 ಎಂ.ಸಿ.ಮನಗೂಳಿ ಜೆ.ಡಿ.ಎಸ್. 29803
1999 ಸಿಂದಗಿ ವಿಧಾನಸಭಾ ಕ್ಷೇತ್ರ ಶರಣಪ್ಪ ಸುಣಗಾರ ಕಾಂಗ್ರೇಸ್ 30432 ಎಂ.ಸಿ.ಮನಗೂಳಿ ಸ್ವತಂತ್ರ 19675
1994 ಸಿಂದಗಿ ವಿಧಾನಸಭಾ ಕ್ಷೇತ್ರ ಎಂ.ಸಿ.ಮನಗೂಳಿ ಜೆ.ಡಿ 45356 ಡಾ.ಆರ್.ಬಿ.ಚೌಧರಿ ಕಾಂಗ್ರೇಸ್ 17137
1989 ಸಿಂದಗಿ ವಿಧಾನಸಭಾ ಕ್ಷೇತ್ರ ಡಾ.ಆರ್.ಬಿ.ಚೌಧರಿ ಕಾಂಗ್ರೇಸ್ 29798 ಎಂ.ಸಿ.ಮನಗೂಳಿ ಜೆ.ಎನ್.ಪಿ 21169
1985 ಸಿಂದಗಿ ವಿಧಾನಸಭಾ ಕ್ಷೇತ್ರ ಮಲ್ಲನಗೌಡ ಬಿರಾದಾರ ಜೆ.ಎನ್.ಪಿ 31483 ತಿಪ್ಪಣ್ಣ ಅಗಸರ ಕಾಂಗ್ರೇಸ್ 17564
1983 ಸಿಂದಗಿ ವಿಧಾನಸಭಾ ಕ್ಷೇತ್ರ ನಿಂಗನಗೌಡ ಪಾಟೀಲ ಕಾಂಗ್ರೇಸ್ 25778 ಮಲ್ಲನಗೌಡ ಬಿರಾದಾರ ಜೆ.ಎನ್.ಪಿ 18788
1978 ಸಿಂದಗಿ ವಿಧಾನಸಭಾ ಕ್ಷೇತ್ರ ಮಹಿಬೂಬ್ ಬೆಕಿನಾಳಕರ ಕಾಂಗ್ರೇಸ್(ಐ) 19592 ಶಂಕರಗೌಡ ಪಾಟೀಲ ಜೆ.ಎನ್.ಪಿ 18268
ಸಿಂದಗಿ ವಿಧಾನಸಭಾ ಕ್ಷೇತ್ರ ಮೈಸೂರು ರಾಜ್ಯ
1972 ಸಿಂದಗಿ ವಿಧಾನಸಭಾ ಕ್ಷೇತ್ರ ಶಂಕರಗೌಡ ಪಾಟೀಲ ಎನ್.ಸಿ.ಓ 17516 ಮಹಿಬೂಬ್ ಬೆಕಿನಾಳಕರ ಕಾಂಗ್ರೇಸ್ 16538
1967 ಸಿಂದಗಿ ವಿಧಾನಸಭಾ ಕ್ಷೇತ್ರ ಚನ್ನಪ್ಪ ದೇಸಾಯಿ ಕಾಂಗ್ರೇಸ್ 16668 ಶಂಕರಗೌಡ ಪಾಟೀಲ ಸ್ವತಂತ್ರ 13298
1962 ಸಿಂದಗಿ ವಿಧಾನಸಭಾ ಕ್ಷೇತ್ರ ಚನ್ನಪ್ಪ ದೇಸಾಯಿ ಕಾಂಗ್ರೇಸ್ 14012 ಸಿದ್ದಪ್ಪ ರಡ್ಡೆವಾಡಗಿ SWA 7432
1957 ಸಿಂದಗಿ ವಿಧಾನಸಭಾ ಕ್ಷೇತ್ರ ಶಂಕರಗೌಡ ಪಾಟೀಲ ಕಾಂಗ್ರೇಸ್ 10149 ಗೌಡಪ್ಪಗೌಡ ಕೊಣ್ಣೂರ ಸ್ವತಂತ್ರ 7739
ಸಿಂದಗಿ ವಿಧಾನಸಭಾ ಕ್ಷೇತ್ರ ಬಾಂಬೆ ರಾಜ್ಯ
1951 ಸಿಂದಗಿ ವಿಧಾನಸಭಾ ಕ್ಷೇತ್ರ ಮಲ್ಲಪ್ಪ ಸುರಪುರ ಕಾಂಗ್ರೇಸ್ 30231 ಬಬುರಾಮ್ ಹುಜರೆ ಎಸ್.ಸಿ.ಎಫ್ 5457
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.