ಚಿಲಿ
ದಕ್ಷಿಣ ಅಮೇರಿಕದ ಕರಾವಳಿಯುದ್ದಕ್ಕೂ ಪಟ್ಟಿಯಂತೆ ಆಂಡಿಸ್ ಪರ್ವತ ಮತ್ತು ಪೆಸಿಫಿಕ್ ಮಹಾಸಾಗರಗಳ ನಡುವೆ ಚಾಚಿರುವ ದೇಶವೇ ಚಿಲಿ. ಇದರ ಪೂರ್ವಕ್ಕೆ ಅರ್ಜೆಂಟೀನ, ಈಶಾನ್ಯಕ್ಕೆ ಬೊಲಿವಿಯಾ ಮತ್ತು ಉತ್ತರಕ್ಕೆ ಪೆರು ದೇಶಗಳಿವೆ.
ಧ್ಯೇಯ: Por la Razón o la Fuerza (ಸ್ಪಾನಿಷ್ ಭಾಷೆಯಲ್ಲಿ: "ಹಕ್ಕಿನಿಂದ ಅಥವಾ ಶಕ್ತಿಯಿಂದ") | |
ರಾಷ್ಟ್ರಗೀತೆ: ಹಿಮ್ನೊ ನಾಸನಾಲ್ | |
![]() Location of ಚಿಲಿ | |
ರಾಜಧಾನಿ | ಸ್ಯಾಂಟಿಯಾಗೊ೧ |
ಅತ್ಯಂತ ದೊಡ್ಡ ನಗರ | ಸ್ಯಾಂಟಿಯಾಗೊ |
ಅಧಿಕೃತ ಭಾಷೆ(ಗಳು) | ಸ್ಪಾನಿಷ್ |
ಸರಕಾರ | ಗಣರಾಜ್ಯ |
- ರಾಷ್ಟ್ರಪತಿ | ಮಿಷೆಲ್ ಬಾಕಲೆಟ್ |
ಸ್ವಾತಂತ್ರ್ಯ | ಸ್ಪೇನ್ ನಿಂದ |
- ಮೊದಲ ರಾಷ್ಟ್ರೀಯ ಸರಕಾರ ಜಂತಾ | ಸೆಪ್ಟೆಂಬರ್ ೧೮, ೧೮೧೦ |
- ಘೋಷಣೆ | ಫೆಬ್ರವರಿ ೧೨, ೧೮೧೮ |
- ಮಾನ್ಯತೆ | ಏಪ್ರಿಲ್ ೨೫ ೧೮೪೪ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | ೭,೫೬,೯೫೦ ಚದರ ಕಿಮಿ ; (೩೮ನೇ) |
೨,೯೨,೧೮೩ ಚದರ ಮೈಲಿ | |
- ನೀರು (%) | 1.07%2 |
ಜನಸಂಖ್ಯೆ | |
- ಜೂನ್ ೨೦೦೬ರ ಅಂದಾಜು | ೧,೬೪,೩೨,೬೭೪ (೬೦ನೇ) |
- ೨೦೦೨ರ ಜನಗಣತಿ | ೧,೫೧,೧೬,೪೩೫ |
- ಸಾಂದ್ರತೆ | ೨೧ /ಚದರ ಕಿಮಿ ; (೧೮೪ನೇ) ೫೪ /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
- ಒಟ್ಟು | $193,213 million (೪೩ನೇ) |
- ತಲಾ | $11,937 (೫೬ನೇ) |
ಮಾನವ ಅಭಿವೃದ್ಧಿ ಸೂಚಿಕ (೨೦೦೩) |
0.854 (೩೭ನೇ) – high |
ಕರೆನ್ಸಿ | ಚಿಲಿ ಪೆಸೊ (CLP ) |
ಸಮಯ ವಲಯ | — (UTC-4) |
- ಬೇಸಿಗೆ (DST) | — (UTC-3) |
ಅಂತರ್ಜಾಲ TLD | .cl |
ದೂರವಾಣಿ ಕೋಡ್ | +56 |
1 The legislative body operates in Valparaíso 2 Includes Easter Island and Isla Sala y Gómez; does not include 1,250,000 km² of claimed territory in Antarctica |
ಇತಿಹಾಸ

ಸುಮಾರು ೧೦,೦೦೦ ವರ್ಷಗಳ ಹಿಂದೆ ಅಮೆರಿಕದ ಮೂಲನಿವಾಸಿಗಳು ಅಲೆದಾಡುತ್ತ ದಕ್ಷಿಣ ಅಮೆರಿಕದ ಪಶ್ಚಿಮ ಕರಾವಳಿಯ ಫಲವತ್ತಾದ ಪ್ರದೇಶದಲ್ಲಿ ನೆಲೆಸಿದರು. ಕ್ರಿ.ಶ. ೧೫೨೦ರಲ್ಲಿ ಪೋರ್ಚುಗೀಸ್ ನಾವಿಕ ಫರ್ಡಿನೆಂಡ್ ಮಗೆಲ್ಲನ್ ಮೊದಲು ಬಂದಿಳಿದ ಮೇಲೆ ೧೫೩೫ರಲ್ಲಿ ಸ್ಪೇನಿನ ನಾವಿಕರು ಬಂಗಾರವನ್ನು ಹುಡುಕುತ್ತ ಬಂದಿಳಿದರು.
ಸ್ಪಾನಿಷ್ ವಸಾಹತು
ಚಿಲಿಯ ಆಕ್ರಮಣ ೧೫೪೦ರಿಂದ ಭರದಿಂದ ಸಾಗಿತು. ಪೆದ್ರೊ ಡಿ ವಾಲ್ಡಿವಿಯಾ ಎಂಬ ಸ್ಪಾನಿಷ್ ಸೇನಾಪತಿ ಸ್ಯಾಂಟಿಯಾಗೊ ನಗರವನ್ನು ಹುಟ್ಟುಹಾಕಿದನು. ಚಿಲಿ ಪ್ರದೇಶದ ಭೂಮಿಯ ಫಲವತ್ತತೆಯನ್ನು ಅರಿತ ಸ್ಪಾನಿಷರು ಅದನ್ನು ಪೆರು ರಾಜ್ಯದ ಭಾಗವನ್ನಾಗಿ ಮಾಡಿದರು.
ನಂತರ ಬಂದಿಳಿದ ಯೂರೋಪಿಯನ್ನರು ಮೂಲನಿವಾಸಿಗಳ ವಿರೋಧ ಕಟ್ಟಿಕೊಳ್ಳಬೇಕಾಯಿತು. ೧೫೫೩ರಲ್ಲಿ ಮಾಪುಚೆ ಎಂಬ ಮೂಲನಿವಾಸಿ ಜನಾಂಗವು ವಾಲ್ಡಿವಿಯಾನನ್ನು ಕೊಂದು ಸ್ಪಾನಿಷ್ ವಸಾಹತುಗಳನ್ನು ನಾಶ ಮಾಡಿದರು. ಮತ್ತೆ ೧೫೯೮ ಹಾಗೂ ೧೬೫೫ರಲ್ಲಿ ವಸಾಹತುಶಾಹಿಗಳ್ಯ್ ಮತ್ತು ಮೂಲನಿವಾಸಿಗಳ ಮಧ್ಯೆ ಚಕಮಕಿ ನಡೆದೇ ಇತ್ತು. ೧೬೮೩ರಲ್ಲಿ ಗುಲಾಮ ಪದ್ಧತಿಯನ್ನು ರದ್ದು ಮಾಡಿದ ಮೇಲೆ ಇಬ್ಬರ ನಡುವೆ ಸಂಧಾನವಾಗಿ ವಾಣಿಜ್ಯ-ವ್ಯವಹಾರಗಳು ಪ್ರಾರಂಭವಾದವು.
೧೮೦೮ರಲ್ಲಿ ನೆಪೋಲಿಯನ್ ಸಹೋದರನಾದ ಜೋಸೆಫನು ಸ್ಪಾನಿಷ್ ರಾಜಮನೆತನವನ್ನು ಉಚ್ಚಾಟಿಸಿ ಸೇನಾಡಳಿತವನ್ನು ಸ್ಥಾಪಿಸಿದನು. ಈ ಆಡಳಿತ ಚಿಲಿಯನ್ನು ಸ್ಪಾನಿಷ್ ರಾಜ್ಯದ ಸ್ವಾಯತ್ತ ಗಣರಾಜ್ಯವೆಂದು ಘೋಷಿಸಿತು. ಇದರ ಬೆನ್ನಲ್ಲಿಯೇ ಚಿಲಿಯ ಸ್ವಾತಂತ್ರ್ಯ ಚಳುವಳಿ ಆರಂಭವಾಯಿತು. ನಂತರ ಸ್ಪೇನ್ ರಾಜಮನೆತನದಿಂದ ಚಿಲಿಯನ್ನು ಮರು ಆಕ್ರಮಣ ಮಾಡಲು ಪ್ರಯತ್ನ ನಡೆದು ಹಿಂಸಾತ್ಮಕ ಘರ್ಷಣೆಗೆ ಕಾರಣವಾಯಿತು.
ಸ್ವಾತಂತ್ರ್ಯ

೧೮೧೭ರಲ್ಲಿ ಚಿಲಿಯ ಪ್ರಖ್ಯಾತ ದೇಶಪ್ರೇಮಿ ಬರ್ನಾರ್ಡೊ ಓ' ಹಿಗ್ಗಿನ್ಸ್ ಮತ್ತು ಅರ್ಜೆಂಟೀನದ ಸ್ವಾತಂತ್ರ್ಯ ಹೋರಾಟದ ನಾಯಕ ಯೋಸೆ ಡಿ ಸಾನ್ ಮಾರ್ಟಿನ್ ಆಂಡಿಸ್ ಪರ್ವತ ಶ್ರೇಣಿಯನ್ನು ದಾಟಿ ಸ್ಪಾನಿಷ್ ರಾಜಸೇನೆಯನ್ನು ಸೋಲಿಸಿದರು. ಫೆಬ್ರವರಿ ೧೨, ೧೮೧೮ರಂದು ಚಿಲಿಯನ್ನು ಓ' ಹಿಗ್ಗಿನ್ಸ್ ನೇತೃತ್ವದಲ್ಲಿ ಸ್ವತಂತ್ರ ಗಣರಾಜ್ಯವೆಂದು ಘೋಷಿಸಲಾಯಿತು. ಆದರೆ ಈ ಕ್ರಾಂತಿ ಸಾಮಾಜಿಕ ಬದಲಾವಣೆಯನ್ನೇನೂ ಉಂಟು ಮಾಡಲಿಲ್ಲ; ಶ್ರೀಮಂತ ಜಮೀನ್ದಾರರು ಅತಿ ಪ್ರಭಾವಶಾಲಿಯಾಗಿ ಉಳಿದರು. ೧೯ನೇ ಶತಮಾನದ ಕೊನೆಯಲ್ಲಿ ಸರಕಾರ ನಿಷ್ಕರುಣೆಯಿಂದ ಮಾಪುಚೆ ಜನರನ್ನು ದಮನಗೊಳಿಸಿತು. ೧೮೯೧ರಲ್ಲಿ ನಡೆದ ಅಂತಃಕಲಹದ ಪ್ರತಿಫಲವಾಗಿ ಸಂಸತ್ತಿನ ಮಾದರಿ ಪ್ರಜಾಪ್ರಭುತ್ವದ ಸ್ಥಾಪನೆಯಾಯಿತು.
ಆಧುನಿಕ ಕಾಲ
ಶ್ರೀಮಂತ ಜಮೀನ್ದಾರರ ಶೋಷಣೆಯ ವಿರೋಧವಾಗಿ ಬೆಳೆಯುತ್ತಿದ್ದ ಮಧ್ಯಮ ಶ್ರಮಿಕ ವರ್ಗಗಳು ೧೯೨೦ರ ದಶಕದಲ್ಲಿ ಮಾರ್ಕ್ಸಿಸ್ಟ್ ಗುಂಪುಗಳ ಕಡೆ ವಾಲಿದರು. ರಾಜಕೀಯ ಅಸ್ಥಿರತೆಯ ಈ ದಶಕದಲ್ಲಿ ಹಲವಾರು ಸರಕಾರಗಳು ಮತ್ತು ಸರ್ವಾಧಿಕಾರಿಗಳು ಬಂದು ಹೋಗಿ ಕೊನೆಗೆ ೧೯೩೨ರಲ್ಲಿ ಸಾಂವಿಧಾನಿಕ ಆಡಳಿತದ ಮರುಸ್ಥಾಪನೆಯಾಯಿತು. ೧೯೬೪ರಲ್ಲಿ ಎಡ್ವರ್ಡೊ ಫ್ರೆಯ್ ಬಹುಮತದಿಂದ ಚುನಾಯಿತನಾಗಿ ಹಲವಾರು ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕರಮಗಳನ್ನು ತಂದನು. ಫ್ರೆಯ್ ಆಡಳಿತದ ಕೊನೆ ವರ್ಷಗಳಲ್ಲಿ ಕಮ್ಯೂನಿಸ್ಟ್ ಪಕ್ಷಗಳು ಬಲಿಷ್ಠವಾಗಿ ನಂತರ ಸರಕಾರ ಸ್ಥಾಪಿಸಿದವು. ಈ ಸರಕಾರ ಶ್ರಮಿಕ ವರ್ಗದ ಹಿತಾಸಕ್ತಿ, ಕೃಷಿ ರಂಗದ ಸುಧಾರಣೆ, ದೇಶದ ಆರ್ಥಿಕತೆಯ ಸಂಘಟನೆ, ಮತ್ತು ಹೊಸ ವಿದೇಶಿ ನೀತಿ - ಹೀಗೆ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿತು. ಇದರ ಜೊತೆಗೆ ಮಿಲಿಯಾಂತರ ಎಕರೆ ಭೂಮಿಯನ್ನು ಭೂಮಿಹೀನ ಕೃಷಿಕರಿಗೆ ಮರು ಹಂಚಿಕೆ ಮಾಡಲಾಯಿತು.
ಆದರೆ ಕಮ್ಯೂನಿಸ್ಟ್ ಸರಕಾರದ ಪ್ರಗತಿಯನ್ನು ಕಂಡು ಅಮೆರಿಕ ತನ್ನ ಗುಪ್ತಚರ ಇಲಾಖೆಯಿಂದ ಚಿಲಿಯ ಸರಕಾರದ ವಿರೋಧಿಗಳಿಗೆ ಧನಸಹಾಯ ಮಾಡಿ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಿತು. ೧೯೭೨೧ರ ಹೊತ್ತಿಗೆ ಸರಕಾರದ ಎಲ್ಲೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡು ಸರಕಾರದ ಪರ ಮತ್ತು ವಿರೋಧಿಗಳ ಮಧ್ಯೆ ಗುಂಪುಘರ್ಷಣೆ ಏರ್ಪಟ್ಟವು. ೧೯೭೩ರಲ್ಲಿ ಕ್ಷಿಪ್ರಕ್ರಾಂತಿ ನಡೆದು ಸೇನಾಧಿಕಾರಿ ಜನರಲ್ ಆಗಸ್ಟೊ ಪಿನೊಚೆ ಸರ್ವಾಧಿಕಾರಿಯಾದನು. ಆರಂಭದ ವರ್ಷಗಳಲ್ಲಿ ವ್ಯಾಪಕವಾಗಿ ಮಾನವ ಹಕ್ಕುಗಳ ಅತಿಕ್ರಮಣವಾಯಿತು. ಪಿನೊಚೆ ಆಡಳಿತದ ಆರಂಭಿಕ ೬ ತಿಂಗಳಲ್ಲಿ ಕನಿಷ್ಠ ಒಂದು ಸಾವಿರ ಜನರ ಹತ್ಯೆ ಮಾಡಲಾಯಿತು. ನಂತರದ ೧೬ ವರ್ಷಗಳಲ್ಲಿ ಎರಡು ಸಾವಿರ ಜನರನ್ನು ಕೊಲ್ಲಲಾಯಿತು ಹಾಗೂ ೩೦,೦೦೦ ಜನರನ್ನು ದೇಶ ಬಿಟ್ಟು ಉಚ್ಚಾಟಿಸಲಾಯಿತು.
ಪ್ರಜಾಪ್ರಭುತ್ವದ ಮರುಸ್ಥಾಪನೆ

೧೯೮೦ರ ದಶಕದ ಉತ್ತರಾರ್ಧದಲ್ಲಿ ನಿಧಾನವಾಗಿ ಆರ್ಥಿಕತೆಯ ಉದಾರೀಕರಣ ಮಾಡಲಾಯಿತು. ಅಕ್ಟೋಬರ್ ೫, ೧೯೮೮ರಂದು ನಡೆದ ಜನಮತ ಸಂಗ್ರಹಣೆಯಲ್ಲಿ ಪಿನೊಚೆಯ ಆಡಳಿತವನ್ನು ತಿರಸ್ಕರಿಸಲಾಯಿತು. ೧೭ ಪಕ್ಷಗಳ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದು ಪ್ರಜಾಪ್ರಭುತ್ವ ಮರುಸ್ಥಾಪನೆಯಾಯಿತು.
ಜನವರಿ ೨೦೦೬ರಲ್ಲಿ ಸಮಾಜವಾದಿ ಪಕ್ಷದ ಮಿಷೆಲ್ ಬಾಕಲೆಟ್ ರನ್ನು ಚಿಲಿ ದೇಶದ ಪ್ರಥಮ ಮಹಿಳಾ ಅಧ್ಯಕ್ಷರನ್ನಾಗಿ ಚುನಾಯಿಸಲಾಯಿತು.
ಆಡಳಿತಾತ್ಮಕ ವಿಭಾಗಗಳು
ಚಿಲಿಯನ್ನು ೧೩ ಪ್ರದೇಶಗಳಾಗಿ ಭಾಗಿಸಲಾಗಿದೆ. ಪ್ರತಿಯೊಂದು ಪ್ರದೇಶವನ್ನು ರಾಷ್ಟ್ರಪತಿ ಆರಿಸಿದ "ಇಂಟೆಂಡೆಂಟ್" ಆಡಳಿತ ನಡೆಸುತ್ತಾರೆ. ಪ್ರತಿಯೊಡು ಪ್ರದೇಶವನ್ನು ಪ್ರಾಂತ್ಯಗಳನಾಗಿ, ಮತ್ತು ಪ್ರಾಂತ್ಯವನ್ನು ಮುನಿಸಿಪಾಲಿಟಿಗಳನ್ನಾಗಿ ವಿಭಜಿಸಲಾಗಿದೆ.
ಭೂಗೋಳ

ಆಂಡಿಸ್ ಪರ್ವತಗಳ ಪಶ್ಚಿಮಕ್ಕೆ ಕರಾವಳಿ ಪ್ರದೇಶದಲ್ಲಿ ೪,೬೩೦ ಕಿ.ಮಿ ಉದ್ದನೆ ಪಟ್ಟಿಯಂತೆ ಚಾಚಿರುವ ಚಿಲಿ, ಕೇವಲ ೪೩೦ ಕಿ.ಮಿ. ಅಗಲವಿದೆ. ಹೀಗೆ ಚಿಲಿ ಪ್ರಪಂಚದ ಅತಿ ಉದ್ದನೆಯ (ಉತ್ತರದಿಂದ ದಕ್ಷಿಣ) ದೇಶವಾಗಿದೆ. ೧೨,೫೦,೦೦೦ ಚದರ ಕಿ.ಮಿ.ನಷ್ಟು ಅಂಟಾರ್ಕ್ಟಿಕ ಭೂಪ್ರದೇಶದ ಭಾಗವನ್ನೂ ಒಳಗೊಂಡಿದೆ. ಇದರಲ್ಲಿರುವ ಭೂಭಾಗದ ವೈವಿಧ್ಯತೆ ಬಹಳ.
ಉತ್ತರದಲ್ಲಿರುವ ಅಟಕಾಮ ಮರುಭೂಮಿ, ತಾಮ್ರ ಮತ್ತು ನೈಟ್ರೇಟುಗಳಲ್ಲಿ ಸಂಪದ್ಭರಿತವಾಗಿದೆ. ರಾಜಧಾನಿ ಸ್ಯಾಂಟಿಯಾಗೊ ಮತ್ತು ಸುತ್ತಲಿನ ಕಣಿವೆಯಲ್ಲಿಯೇ ದೇಶದ ಅತ್ಯಧಿಕ ಜನರು ವಾಸವಾಗಿದ್ದಾರೆ. ಚಿಲಿಯ ದಕ್ಷಿಣ ಭಾಗದಲ್ಲಿ ಕಾಡು, ಜ್ವಾಲಾಮುಖಿ, ಹಾಗೂ ಸರೋವರಗಳಿವೆ. ದಕ್ಷಿಣದ ಕರಾವಳಿ ದ್ವೀಪಸಮೂಹ, ಜೌಗು ಪ್ರದೇಶ, ಸಮುದ್ರದ ಚಾಚು ಪ್ರದೇಶ ಹಾಗೂ ಆಳವಿಲ್ಲದ ನದಿಗಳ ಆಗರವಾಗಿದೆ.
ಅರ್ಥವ್ಯವಸ್ಥೆ

ಕಳೆದ ಮೂರು ದಶಕಗಳಿಂದ ಖಾಸಗೀಕರಣ ಮಾಡುತ್ತ ಬಂದಿರುವ ಸರಕಾರ, ತನ್ನ ಪಾತ್ರವನ್ನು ಕೇವಲ ನಿಬಂಧಕನಾಗಿ ಉಳಿಸಿಕೊಂಡಿದೆ. ೨೦೦೪ರಲ್ಲಿ ಆರ್ಥಿಕ ಪ್ರಗತಿ ೬.೧% ಆಗಿತ್ತು. ಇದಕ್ಕೆ ಮುಖ್ಯ ಕಾರಣ ತಾಮ್ರಕ್ಕೆ ಹೆಚ್ಚಾದ ಬೇಡಿಕೆ. ಭಾರತ ಸೇರಿದಂತೆ ಪ್ರಪಂಚದ ಹಲವಾರು ದೇಶಗಳ ಜೊತೆ ಮುಕ್ತ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಂಡಿದೆ. ಇತ್ತೀಚೆಗಿನ ವರ್ಷಗಳಲ್ಲಿ ನಿರುದ್ಯೋಗ ೮-೧೦% ನಷ್ಟು ಇದೆ. ಆದರೆ ಸಾಮಾನ್ಯವಾಗಿ ಜನರ ಆದಾಯ ಹಣದುಬ್ಬರದ ದರಕ್ಕಿಂತ ಅಧಿಕವಾಗಿ ಜೀವನಮಟ್ಟ ಹೆಚ್ಚಾಗಲು ಕಾರಣವಾಗಿದೆ. ಬಡತನದ ರೇಖೆ (ಕನಿಷ್ಠ ಪೌಷ್ಟಿಕ ಆಹಾರದ ಎರಡರಷ್ಟು ದರ)ಯ ಕೆಲಗಿರುವವರ ದರ ೧೯೮೭ರಲ್ಲಿ ೪೭% ಇದ್ದದ್ದು ೨೦೦೪ರಲ್ಲಿ ೧೮%ಗೆ ಇಳಿದಿದೆ. ಆದರೆ ಸಂಪತ್ತಿನ ಹಂಚಿಕೆಯಲ್ಲಿ ಬಹಳಷ್ಟು ಅಸಮಾನತೆಗಳಿವೆ. ಕೇವಲ ೧೦.೫% ಜನರಲ್ಲಿ ದೇಶದ ೯೦% ಸಂಪತ್ತು ಶೇಖರಣೆಗೊಂಡಿದೆ.
ಜನತೆ ಮತ್ತು ಜನಾಂಗ
ಚಿಲಿಯ ಬಹುತೇಕ ಜನರು ಸ್ಪಾನಿಷ್ ಸಂತತಿಗಳಾಗಿದ್ದಾರೆ. ಜೊತೆಗೆ ಮೂಲನಿವಾಸಿಗಳು ಮತ್ತು ಈ ಇಬ್ಬರ ಮಿಶ್ರತಳಿ ಜನಾಂಗವೂ ಇದೆ. ದೇಶದ ೪೦% ಜನ ರಾಜಧಾನಿ ಸ್ಯಾಂಟಿಯಾಗೊನಲ್ಲಿ ವಾಸಿಸುತ್ತಾರೆ. ೧೦.೫% ಜನ ತಮ್ಮನ್ನು ಮೂಲನಿವಾಸಿಗಳ ಸಂತತಿ ಎಂದು ಗುರುತಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಇವರು ಸಾಮಾಜಿಕ-ಆರ್ಥಿಕವಾಗಿ ಕೆಳಗಿನ ಮಟ್ಟದಲ್ಲಿರುವವರು.
ಸಂಸ್ಕೃತಿ
ಇನ್ಕಾ ನಾಗರಿಕತೆಯ ಕಾಲದಲ್ಲಿ ಉತ್ತರ ಚಿಲಿ ಒಂದು ಮುಖ್ಯ ಸಾಂಸ್ಕೃತಿಕ ಕೇಂದ್ರವಾಗಿತ್ತು. ನಂತರದ ಶತಮಾನಗಳಲ್ಲಿ ಸ್ಪಾನಿಷ್ ವಸಾಹತುಶಹಿಗಳದೇ ಪ್ರಭಾವ. ಚಿಲಿಯನ್ನರಿ ತಮ್ಮ ದೇಶವನ್ನು 'ಕವಿಗಳ ದೇಶ' ಎಂದು ಹೇಳಿಕೊಳ್ಳುತ್ತಾರೆ. ಗಾಬ್ರಿಯೆಲ ಮಿಸ್ತ್ರಾಲ್ ಸಾಹಿತ್ಯದ ನೊಬೆಲ್ ಪ್ರಶಸ್ತಿ ಗಳಿಸಿದ ಮೊದಲ ಚಿಲಿಯನ್ನನಾದ. ಚಿಲಿಯ ಅತಿ ಪ್ರಖ್ಯಾತ ಕವಿ ಪಾಬ್ಲೊ ನೆರುಡಾ ೧೯೭೧ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದನು.
ಧರ್ಮ
೨೦೦೨ರ ಜನಗಣತಿಯ ಪ್ರಕಾರ ಸುಮಾರು ೬೦% ಜನ ತಮ್ಮನ್ನು ಕ್ಯಾಥಲಿಕ್‌ಗಳೆಂದು ಗುರುತಿಸಿಕೊಂಡಿದ್ದಾರೆ. ೨೫% ಜನ ಪ್ರೊಟೆಸ್ಟೆಂಟರು, ೮.೩% ಜನ ನಾಸ್ತಿಕರು. ಕ್ಯಾಥಲಿಕ್ ಚರ್ಚಿನ ಅಧಿಕಾರ ವ್ಯಾಪ್ತಿ ಈಗ ಕಡಿಮೆಯಾಗಿದ್ದರೂ, ಸಮಾಜದ ಮೇಲೆ ಇದರ ಪ್ರಭಾವ ಅಧಿಕವಾಗಿದೆ. ಸ೦ವಿಧಾನವು ಧರ್ಮದ ಸ್ವಾತ೦ತ್ರವನ್ನು ಒದಗಿಸಿದೆ, ಅದೆ ರೀತಿಯಾಗಿ ಇನ್ನಿತರ ಕಾಯ್ದೆ ಕಾನೂನುಗಳು ಧರ್ಮದ ಸ್ವಾತ೦ತ್ರಕ್ಕೆ ಪೂರಕವಾಗಿವೆ.
ಕ್ರಿಸ್ಮಸ, ಗುಡ್-ಫಾಯ್ಡೆ ಮತ್ತು ಅನೇಕ ಹಬ್ಬಗಳು ಸರಕಾರಿ ಘೋಶಿತ ರಜೆಯೆ೦ದು ಆಚರಿಸಲಾಗುತ್ತವೆ.
ಭಾಷೆ

ಚಿಲಿಯನ್ ಸ್ಪಾನಿಷ್ ಚಿಲಿಯೇತರರಿಗೆ ಬಹು ಕಷ್ಟವಾಗಿ ಅರ್ಥವಾಗುವ ಭಾಷೆ. ಇದಕ್ಕೆ ಕಾರಣ ಇವರು ಮಾತನಾಡುವ ಶೈಲಿ. ಇವರು ಅತಿ ವೇಗವಾಗಿಯೂ ಮಾತನಾಡುತ್ತಾರೆ. ಇಂಗ್ಲಿಷ್ ಭಾಷೆಯನ್ನು ದ್ವಿತೀಯ ಭಾಷೆಯನ್ನಾಗಿ ಅಭ್ಯಾಸ ಮಾಡಲಾಗುತ್ತದೆ. ಆಂಗ್ಲ ಭಾಷೆಯ ಕೆಲವು ಶಬ್ದಗಳು ಇಲ್ಲಿ ಕಂಡು ಬಂದರೂ, ಅವುಗಳ ಪ್ರಯೋಗ ಮತ್ತು ಉಚ್ಚರಣೆ ಶೈಲಿಯ ಕಾರಣ ಗುರುತು ಹಿಡಿಯಲು ದುಃಸಾಧ್ಯ.
ರಾಷ್ಟ್ರೀಯ ಸಂಕೇತಗಳು
ಕೊಪಿಹ್ಯು ಚಿಲಿಯ ರಾಷ್ಟ್ರೀಯ ಹೂವಾಗಿದೆ. ಮೇಲಿನ ಬಾಕ್ಸಿನಲ್ಲಿ ಚಿತ್ರಿತ ರಾಷ್ಟ್ರ ಲಾಂಛನ ಎರಡು ಪ್ರಾಣಿಗಳನ್ನು ಒಳಗೊಂಡಿದೆ - "ಕಾಂಡಾರ್" (ಪರ್ವತಗಳಲ್ಲಿ ಜೀವಿಸುವ ಒಂದು ಬಗೆಯ ರಣಹದ್ದು) ಮತ್ತು "ಹ್ಯೂಮುಲ್" (ಬಿಳಿ ಬಾಲದ ಜಿಂಕೆ).
ಇವನ್ನೂ ನೋಡಿ
ಹೊರಗಿನ ಸಂಪರ್ಕಗಳು
![]() | ದಕ್ಷಿಣ ಅಮೇರಿಕ ಖಂಡದ ದೇಶಗಳು |
ಅರ್ಜೆಂಟೀನ | ಬೊಲಿವಿಯ | ಬ್ರೆಜಿಲ್ | ಚಿಲಿ | ಕೊಲೊಂಬಿಯ | ಎಕ್ವಡಾರ್ | ಗಯಾನ | ಪೆರಗ್ವೆ | ಪೆರು | ಸುರಿನಾಮ್ | ಉರುಗ್ವೆ | ವೆನೆಜುವೆಲಾ |