ಇಂಡಿ ವಿಧಾನಸಭಾ ಕ್ಷೇತ್ರ
ಇಂಡಿ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಇಂಡಿ ಮತಕ್ಷೇತ್ರ(2018)ದಲ್ಲಿ 1,18,626 ಪುರುಷರು, 1,09,818 ಮಹಿಳೆಯರು ಸೇರಿ ಒಟ್ಟು 2,28,444 ಮತದಾರರಿದ್ದಾರೆ.
ಕ್ಷೇತ್ರದ ಇತಿಹಾಸ
ಪುಣ್ಯಕ್ಷೇತ್ರವಾಗಿಯೂ ಪ್ರಸಿದ್ಧಿ ಪಡೆದ ಇಂಡಿ ಕ್ಷೇತ್ರವು ವಿಜಯಪುರ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ. ಕರ್ನಾಟಕದ ಉತ್ತರದ ಗಡಿಯಲ್ಲಿರುವ ಇಂಡಿಯು ಉತ್ತರಕ್ಕೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ, ಪಶ್ಚಿಮಕ್ಕೆ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ , ದಕ್ಷಿಣಕ್ಕೆ ವಿಜಯಪುರ ತಾಲ್ಲೂಕು ಮತ್ತು ಪೂರ್ವಕ್ಕೆ ಸಿಂದಗಿ ತಾಲ್ಲೂಕುಗಳಿವೆ.
ಅವಿಭಜಿತ ವಿಜಯಪುರ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಬಿಎಲ್‌ಡಿಇ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಬಂಥನಾಳದ ಸಂಗನಬಸವ ಶಿವಯೋಗಿಗಳ ಕಾರ್ಯಕ್ಷೇತ್ರ. ಲಚ್ಯಾಣದ ಕಮರಿಮಠದ ಸಿದ್ಧಲಿಂಗ ಮಹಾರಾಜರು ನೆಲೆಸಿದ ನೆಲೆವೀಡು.
ಶತ ಶತಮಾನಗಳ ಹಿಂದೆಯೇ ಪ್ರಸಿದ್ಧ ವಿದ್ಯಾಕೇಂದ್ರ ಸಾಲೋಟಗಿಯಲ್ಲಿತ್ತು ಎಂಬ ಐತಿಹ್ಯ. ಸಾಧು–ಸಂತರು ಜನ್ಮ ತಾಳಿದ ಸುಕ್ಷೇತ್ರ. ಶಿಲಾಯುಗ ಸೇರಿದಂತೆ ರಾಮಾಯಣ ಕಾಲಘಟ್ಟದ ಇತಿಹಾಸ. ಪುರಾತನ ಸ್ಥಳ ಎಂಬ ಉಲ್ಲೇಖವೂ ಈಜಿಪ್ಟ್‌ನ ಖ್ಯಾತ ಭೂಗೋಳ ಶಾಸ್ತ್ರಜ್ಞ ಟಾಲೆಮಿ ರಚಿತ ಗ್ರಂಥದಲ್ಲಿ ದಾಖಲಾಗಿದೆ.
ಭೀಮಾ ನದಿ ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಹೆಚ್ಚು ಹರಿಯುವುದೇ ಇಂಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ. ಅಪರಾಧಿಕ ಚಟುವಟಿಕೆಗಳಿಂದಲೂ ಇಂಡಿ ರಾಜ್ಯದಲ್ಲೇ ಕುಖ್ಯಾತ. ಭೀಮಾ ತೀರ ಎಂದರೇ ಇಂದಿಗೂ ಬೆಚ್ಚಿ ಬೀಳುವವರು ಇದ್ದಾರೆ.
ಕ್ಷೇತ್ರದ ವಿಶೇಷತೆ
- ಮಲ್ಲಪ್ಪ ಸುರಪುರ, ಆರ್.ಆರ್. ಕಲ್ಲೂರ ಹಾಗೂ ರವಿಕಾಂತ ಪಾಟೀಲರು 3 ಬಾರಿ ಆಯ್ಕೆಯಾಗಿದ್ದಾರೆ. ಇಂಡಿ ವಿಧಾನಸಭಾ ಕ್ಷೇತ್ರದ ಮತದಾರರು ಮೂವರಿಗೆ ತಲಾ ಮೂರು ಬಾರಿ ಶಾಸಕರಾಗುವ ಅವಕಾಶ ನೀಡಿದ್ದಾರೆ. ಅದರಲ್ಲೂ ರವಿಕಾಂತ ಪಾಟೀಲ ಪಕ್ಷೇತರರಾಗಿ ಹ್ಯಾಟ್ರಿಕ್ ವಿಜಯಭೇರಿ ಬಾರಿಸಿದ ಕ್ಷೇತ್ರವಿದು.
- 1978, 1983, 1989ರಲ್ಲಿ ಆರ್.ಆರ್. ಕಲ್ಲೂರ ಶಾಸಕರಾದ ಆಗಿನ ಮುಖ್ಯಮಂತ್ರಿ ಗುಂಡೂರಾವ್‌ಗೆ 9 ಕೆ.ಜಿ. ತೂಕದ ಬೆಳ್ಳಿ ಪಂಪ್‌ಸೆಟ್ ನೀಡಿದ ಹೆಗ್ಗಳಿಕೆ ಇವರದ್ದು.
- ಕಾಂಗ್ರೆಸ್ನಿಂದ ೨ ಬಾರಿ ಶಾಸಕರಾದ ಆರ್.ಆರ್.ಕಲ್ಲೂರರವರಿಗೆ ಭೂಸೇನಾ ನಿಗಮ(ಪ್ರಸ್ತುತ ಹೆಸರು : ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ)ದ ಅಧ್ಯಕ್ಷರಾಗಿದ್ದರು.
- 1994, 1999, 2004ರಲ್ಲಿ ಪಕ್ಷೇತರರಾಗಿ ಮೊದಲ ಬಾರಿಗೆ ಹ್ಯಾಟ್ರಿಕ್ ವಿಜಯಭೇರಿ ದಾಖಲಿಸಿದ ಕೀರ್ತಿ ರವಿಕಾಂತ ಪಾಟೀಲರದ್ದು.
- ಬಿ.ಜಿ.ಪಾಟೀಲ(ಹಲಸಂಗಿ)ರು ವಿಧಾನ ಪರಿಷತನ ಸದಸ್ಯರಾಗಿದ್ದರು.
- 2008ರಲ್ಲಿ ಡಾ.ಸರ್ವಭೌಮ ಬಗಲಿಯವರು ಬಿಜೆಪಿಯಿಂದ ಕೇವಲ ಒಮ್ಮೆ ಆಯ್ಕೆಯಾಗಿದ್ದು ಈ ಕ್ಷೇತ್ರದ ವಿಶೇಷತೆಯಾಗಿದೆ.
- ಕಾಂಗ್ರೆಸನ ಯಶವಂತರಾಯಗೌಡ ಪಾಟೀಲರು ಕಳೆದ 40 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮರಗೂರಿನ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು 2018ರಲ್ಲಿ ಪೂರ್ಣಗೊಳಿಸಿದ್ದು ಇವರ ಹೆಗ್ಗಳಿಕೆ.
- ಯಶವಂತರಾಯಗೌಡ ಪಾಟೀಲರು 2018ರಲ್ಲಿ ಜೆಡಿಎಸ್-ಕಾಂಗ್ರೆಸನ ಹೆಚ್.ಡಿ.ಕುಮಾರಸ್ವಾಮಿ ಸಮ್ಮಿಸ್ರ ಸರಕಾರದ ಸಂಪುಟದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿದ್ದರು.
- ಕ್ಷೇತ್ರದಿಂದ ಸ್ಪರ್ಧಿಸಿದ ಯಾವುದೇ ನಾಯಕರು ಇದೂವರೆಗೆ ಸಚಿವ ಸ್ಥಾನವನ್ನು ಅಲಂಕರಿಸಿಲ್ಲ.
ಜನಪ್ರತಿನಿಧಿಗಳ ವಿವರ
ವರ್ಷ | ವಿಧಾನ ಸಭಾ ಕ್ಷೆತ್ರ | ವಿಜೇತರು | ಪಕ್ಷ | ಮತಗಳು | ಉಪಾಂತ ವಿಜೇತರು | ಪಕ್ಷ | ಮತಗಳು |
ಇಂಡಿ ವಿಧಾನಸಭಾ ಕ್ಷೇತ್ರ | ಕರ್ನಾಟಕ ರಾಜ್ಯ | ||||||
2018 | ಇಂಡಿ ವಿಧಾನಸಭಾ ಕ್ಷೇತ್ರ | ಯಶವಂತರಾಯಗೌಡ ಪಾಟೀಲ | ಕಾಂಗ್ರೇಸ್ | 50401 | ಬಿ.ಡಿ.ಪಾಟೀಲ(ಹಂಜಗಿ) | ಜೆಡಿಎಸ್ | 40463 |
2013 | ಇಂಡಿ ವಿಧಾನಸಭಾ ಕ್ಷೇತ್ರ | ಯಶವಂತರಾಯಗೌಡ ಪಾಟೀಲ | ಕಾಂಗ್ರೇಸ್ | 58562 | ರವಿಕಾಂತ ಪಾಟೀಲ | ಕೆ.ಜೆ.ಪಿ. | 25260 |
2008 | ಇಂಡಿ ವಿಧಾನಸಭಾ ಕ್ಷೇತ್ರ | ಡಾ.ಸರ್ವಭೌಮ ಬಗಲಿ | ಬಿ.ಜೆ.ಪಿ. | 29456 | ಯಶವಂತರಾಯಗೌಡ ಪಾಟೀಲ | ಕಾಂಗ್ರೇಸ್ | 28885 |
2004 | ಇಂಡಿ ವಿಧಾನಸಭಾ ಕ್ಷೇತ್ರ | ರವಿಕಾಂತ ಪಾಟೀಲ | ಪಕ್ಷೇತರ | 42984 | ಬಿ.ಜಿ.ಪಾಟೀಲ(ಹಲಸಂಗಿ) | ಕಾಂಗ್ರೇಸ್ | 33652 |
1999 | ಇಂಡಿ ವಿಧಾನಸಭಾ ಕ್ಷೇತ್ರ | ರವಿಕಾಂತ ಪಾಟೀಲ | ಪಕ್ಷೇತರ | 44523 | ಬಿ.ಆರ್.ಪಾಟೀಲ(ಅಂಜುಟಗಿ) | ಕಾಂಗ್ರೇಸ್ | 25203 |
1994 | ಇಂಡಿ ವಿಧಾನಸಭಾ ಕ್ಷೇತ್ರ | ರವಿಕಾಂತ ಪಾಟೀಲ | ಪಕ್ಷೇತರ | 23200 | ಬಿ.ಜಿ.ಪಾಟೀಲ(ಹಲಸಂಗಿ) | ಜೆ.ಡಿ.ಎಸ್. | 19469 |
1989 | ಇಂಡಿ ವಿಧಾನಸಭಾ ಕ್ಷೇತ್ರ | ಆರ್.ಆರ್. ಕಲ್ಲೂರ | ಕಾಂಗ್ರೇಸ್ | 27154 | ಬಿ.ಜಿ.ಪಾಟೀಲ(ಹಲಸಂಗಿ) | ಜೆ.ಡಿ.ಎಸ್. | 18438 |
1985 | ಇಂಡಿ ವಿಧಾನಸಭಾ ಕ್ಷೇತ್ರ | ಎನ್.ಎಸ್.ಖೇಡ | ಜೆ.ಎನ್.ಪಿ | 30349 | ಭೀಮನಗೌಡ ಪಾಟೀಲ | ಕಾಂಗ್ರೇಸ್ | 23541 |
1983 | ಇಂಡಿ ವಿಧಾನಸಭಾ ಕ್ಷೇತ್ರ | ಆರ್.ಆರ್. ಕಲ್ಲೂರ | ಕಾಂಗ್ರೇಸ್ | 24132 | ಬಸನಗೌಡ ಪಾಟೀಲ | ಸ್ವತಂತ್ರ | 11098 |
1978 | ಇಂಡಿ ವಿಧಾನಸಭಾ ಕ್ಷೇತ್ರ | ಆರ್.ಆರ್. ಕಲ್ಲೂರ | ಜೆ.ಎನ್.ಪಿ | 26022 | ಸಿದ್ದೂಬಾ ಮಿಸಾಳೆ | ಕಾಂಗ್ರೇಸ್ | 15856 |
ಇಂಡಿ ವಿಧಾನಸಭಾ ಕ್ಷೇತ್ರ | ಮೈಸೂರು ರಾಜ್ಯ | ||||||
1972 | ಇಂಡಿ ವಿಧಾನಸಭಾ ಕ್ಷೇತ್ರ | ಮಲ್ಲಪ್ಪ ಕರಬಸಪ್ಪ ಸುರಪುರ | ಕಾಂಗ್ರೇಸ್ | 17517 | ಆರ್.ಆರ್. ಕಲ್ಲೂರ | ಎನ್.ಸಿ.ಓ | 14490 |
1967 | ಇಂಡಿ ವಿಧಾನಸಭಾ ಕ್ಷೇತ್ರ | ಮಲ್ಲಪ್ಪ ಕರಬಸಪ್ಪ ಸುರಪುರ | ಎಸ್.ಡಬ್ಲೂ.ಎ | 15769 | ಆರ್.ಆರ್. ಕಲ್ಲೂರ | ಕಾಂಗ್ರೇಸ್ | 11703 |
1962 | ಇಂಡಿ ವಿಧಾನಸಭಾ ಕ್ಷೇತ್ರ | ಗುರುಲಿಂಗಪ್ಪ ದೇವಪ್ಪ ಪಾಟೀಲ | ಎಸ್.ಡಬ್ಲೂ.ಎ | 14624 | ಮಲ್ಲಪ್ಪ ಕರಬಸಪ್ಪ ಸುರಪುರ | ಕಾಂಗ್ರೇಸ್ | 13673 |
1957 | ಇಂಡಿ ವಿಧಾನಸಭಾ ಕ್ಷೇತ್ರ-2 | ಮಲ್ಲಪ್ಪ ಕರಬಸಪ್ಪ ಸುರಪುರ | ಕಾಂಗ್ರೇಸ್ | 23033 | ಯಶವಂತರಾವ್ ಪಾಟೀಲ | ಎಸ್.ಎಫ.ಸಿ | 6586 |
ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ | ಬಾಂಬೆ ರಾಜ್ಯ | ||||||
1951 | ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ-2 | ಮಲ್ಲಪ್ಪ ಕರಬಸಪ್ಪ ಸುರಪುರ | ಕಾಂಗ್ರೇಸ್ | 30322 | ರಾವಪ್ಪ ಕಾಳೆ | ಸ್ವತಂತ್ರ | 4536 |