ಚಾಮುಂಡಿ ಬೆಟ್ಟ

ಮೈಸೂರು ನಗರಕ್ಕೆ ಹೊಂದಿಕೊಂಡಂತೆ ಅದರ ಅಗ್ನೇಯಕ್ಕೆ ಪೂರ್ವಮಶ್ಚಿಮವಾಗಿ ಹಬ್ಬಿ ನಿಂತಿರುವ ಬೆಟ್ಟ. ಸಮುದ್ರಮಟ್ಟದಿಂದ ೧೦೬೩ ಮೀ. ಎತ್ತರವಾಗಿದೆ. ಬೆಟ್ಟದ ಮೇಲೆ ಚಾಮುಂಡೇಶ್ವರಿಯ ದೇವಾಲಯವಿರುವುದರಿಂದ ಈ ಬೆಟ್ಟಕ್ಕೆ ಆ ದೇವತೆಯ ಹೆಸರೇ ಬಂದಿದೆ. ಸುತ್ತಲೂ ಬಯಲಿದ್ದು, ಒಂಟಿಯಾಗಿ ನಿಂತಿರುವ ಕಡಿದಾದ ಈ ಬೆಟ್ಟ ಬಹು ದೂರದವರೆಗೂ ಗೋಚರಿಸುವುದಲ್ಲದೆ, ಬೆಟ್ಟದ ಮೇಲೆ ನಿಂತು ನೋಡಿದಾಗ ಮೈಸೂರಿನ ಹರವು ಮತ್ತು ಸುತ್ತಲಿನ ಪ್ರಕೃತಿ ಸೌಂದರ್ಯ ರಮ್ಯವಾಗಿ ಕಾಣಿಸುತ್ತದೆ. ಮೈಸೂರಿಗೆ ಬರುವ ಪ್ರವಾಸಿಗಳ ಆಕರ್ಷಣೆಗಳಲ್ಲಿ ಇದೂ ಒಂದು ಮುಖ್ಯವಾದ್ದು. ಬೆಟ್ಟದ ಮೇಲ್ಭಾಗವನ್ನು ಹತ್ತನೆಯ ಶತಮಾನದ ಹೊತ್ತಿಗಾಗಲೇ ಪುಣ್ಯ ಕ್ಶೇತ್ರವೆಂದು ಪರಿಗಣಿಸಲಾಗಿತ್ತು. ಇಲ್ಲಿರುವ ಆ ಕಾಲದ ಶಾಸನಗಳಲ್ಲಿ ಇದನ್ನು ಮಬ್ಬೆಲದ ತೀರ್ಥ ಅಥವಾ ಮರ್ಬ್ಬಳದ ತೀರ್ಥ ಎಂದು ಕರೆದಿದೆ. ಇಲ್ಲಿ ಹಲವರು ಸಿದ್ಡಿ ಪಡೆದರೆಂದು ಶಾಸನಗಳು ತಿಳಿಸುತ್ತವೆ. ಈಗ ಇಲ್ಲಿರುವ ಮಹಾಬಲೇಶ್ವರ ದೇವಸ್ಥಾನ ಹೊಯ್ಸಳ ವಿಷ್ಣುವರ್ಧನನ ಕಾಲಕ್ಕಿಂತ ಮುಂಚೆಯೇ ನಿರ್ಮಿತವಾಗಿತ್ತು. ವಿಷ್ಣುವರ್ಧನನ ಕಾಲದಲ್ಲಿ ೧೧೨೮ರಲ್ಲಿ ಈ ಮರ್ಬ್ಬಳದ ತೀರ್ಥಕ್ಕೆ ದತ್ತಿ ಬಿಟ್ಟಿದ್ದ ಬಗ್ಗೆ ಶಾಸನವಿದೆ.

ಚಾಮುಂಡಿ ಬೆಟ್ಟ
ಚಾಮುಂಡೇಶ್ವರಿಯ ದೇವಾಲಯ
ಮಹಿಷಾಸುರನ ವಿಗ್ರಹ


This article is issued from Wikipedia. The text is licensed under Creative Commons - Attribution - Sharealike. Additional terms may apply for the media files.