ಎಸ್.ಪಿ.ಬಾಲಸುಬ್ರಹ್ಮಣ್ಯಂ

ಎಸ್ ಪಿ ಬಾಲಸುಬ್ರಹ್ಮಣ್ಯಂ (ಜೂನ್ ೪. ೧೯೪೬) ಭಾರತದ ಸುಪ್ರಸಿದ್ಧ ಹಿನ್ನೆಲೆ ಗಾಯಕರು. ದಕ್ಷಿಣ ಭಾರತದ ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಅವರದ್ದು ಅದ್ವಿತೀಯ ಸಾಧನೆ. ಗಾಯನದಲ್ಲಷ್ಟೇ ಅಲ್ಲದೆ, ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಧ್ವನಿದಾನ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆ ಮುಂತಾದವುಗಳಲ್ಲಿ ಅವರು ನಿರಂತರವಾದ ಸಾಧನೆ ಮಾಡುತ್ತಿದ್ದಾರೆ.

ಎಸ್, ಪಿ. ಬಾಲಸುಬ್ರಹ್ಮಣ್ಯಂ
ಜನನ
ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ

ಜೂನ್ ೪, ೧೯೪೬
ಕೊನೇಟಮ್ಮಪೇಟಾ, ನೆಲ್ಲೂರ್ ಜಿಲ್ಲೆ, ಆಂಧ್ರಪ್ರದೇಶ
ವಾಸಿಸುವ ಸ್ಥಳಚೆನ್ನೈ
ವೃತ್ತಿಗಾಯಕರು, ನಟರು, ಸಂಗೀತ ಸಂಯೋಜಕರು, ಚಿತ್ರ ನಿರ್ಮಾಪಕರು
Years active೧೯೬೬–ಪ್ರಸಕ್ತ
ಪ್ರಶಸ್ತಿಗಳುಪದ್ಮಭೂಷಣ, ಪದ್ಮಶ್ರೀ, ಗೌರವ ಡಾಕ್ಟರೇಟ್
ಜಾಲತಾಣwww.spbindia.com

ಜನನ, ಜೀವನ

  • ಬಾಲಸುಬ್ರಹ್ಮಣ್ಯಂ ಅವರು ಹುಟ್ಟಿದ ದಿನ ಜೂನ್ ೪, ೧೯೪೬. ಅವರು ಆಂಧ್ರಪ್ರದೇಶ ಚಿತ್ತೂರಿನ ಕೊನೇಟಮ್ಮಪೇಟಾ ಎಂಬಲ್ಲಿನ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ಜನಿಸಿದರು. ಬಾಲು ವ್ಯವಸ್ಥಿತವಾಗಿ ಸಂಗೀತ ಕಲಿಯಲಿಲ್ಲ. ಹರಿಕಥೆ ಹೇಳುತ್ತಿದ್ದ ತಂದೆ ಎಸ್.ಪಿ.ಸಾಂಬಮೂರ್ತಿ ಯವರೇ ಅವರಿಗೆ ಪ್ರೇರಣೆ. ಹಾಡುವುದನ್ನು, ಹಾರ್ಮೋನಿಯಂ, ಕೊಳಲುಗಳನ್ನು ತಮ್ಮಷ್ಟಕ್ಕೆ ತಾವು ನುಡಿಸುತ್ತಾ ಸಂಗೀತದ ಪರ್ವತವೇ ಆದರು. ಮುಂದೆ ಮೇರು ಪ್ರಸಿದ್ಧಿ ಪಡೆದ ನಂತರದಲ್ಲಿ ವಿಧೇಯ ವಿದ್ಯಾರ್ಥಿಯಂತೆ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದರು.
  • ೧೯೬೬ರ ವರ್ಷದಲ್ಲಿ ಬಾಲು ಅವರು, ಘಂಟಸಾಲಾ ಮತ್ತು ಎಸ್.ಪಿ. ಕೋದಂಡಪಾಣಿ ತೀರ್ಪುಗಾರರಾಗಿದ್ದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದರು. ಇಬ್ಬರಿಂದಲೂ ಅವರಿಗೆ ಮೆಚ್ಚುಗೆಯ ಸುರಿಮಳೆಯಾಯಿತು. ಕೋದಂಡಪಾಣಿಯವರು ತಮ್ಮ ತೆಲುಗು ಚಿತ್ರ 'ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ'ದಲ್ಲಿ ಹಾಡಲು ಬಾಲೂಗೆ ಅವಕಾಶ ನೀಡಿದರು. ಬಾಲು ಹೇಳುತ್ತಾರೆ 'ನಾನು ಘಂಟಸಾಲ ಅವರ ಏಕಲವ್ಯ ಶಿಷ್ಯ'.

ಎಲ್ಲೆಲ್ಲೂ ಸಂದವರು

  • ಆಗೊಂದು ಯುಗ, ತೆಲುಗಿನಲ್ಲಿ ಘಂಟಸಾಲ, ತಮಿಳಿನಲ್ಲಿ ಟಿ ಎಂ ಸೌಂದರ್ ರಾಜನ್, ಕನ್ನಡದಲ್ಲಿ ಪಿ ಬಿ ಶ್ರೀನಿವಾಸ್ ಹೀಗೆ ಒಬ್ಬೊಬ್ಬರೂ ಒಂದೊಂದು ಭಾಷೆಯ ಚಿತ್ರರಂಗದಲ್ಲಿ ಸಾರ್ವಭೌಮರು. ಬಾಲು ಚಿತ್ರರಂಗಕ್ಕೆ ಬಂದು ಈ ಎಲ್ಲ ಭಾಷೆಗಳಿಗೂ ಸಾರ್ವಭೌಮರಾಗಿಬಿಟ್ಟರು. ಒಮ್ಮೆ ಅವರು ತಮಿಳು ತೆಲುಗಿನಲ್ಲಿ ಒಂದೇ ದಿನದಲ್ಲಿ ೧೯ ಗೀತೆಗಳನ್ನು ಧ್ವನಿಮುದ್ರಿಸಿದ್ದರು.
  • ಕನ್ನಡದಲ್ಲಿ ಒಂದೇ ದಿನ ೧೭ ಗೀತೆಗಳನ್ನು ಧ್ವನಿಮುದ್ರಿಸಿದ್ದರು, ಹಿಂದಿಯಲ್ಲಿ ಒಂದೇ ದಿನ ೧೬ ಹಾಡುಗಳನ್ನು ಧ್ವನಿಮುದ್ರಿಸಿದ್ದರು. ಇದು ಎಸ್ ಪಿ ಬಿ ಅವರ ಸಾಮರ್ಥ್ಯ, ಅವರಿಗಿದ್ದ ಬೇಡಿಕೆ, ಅವರಿಗಿರುವ ವೈಶಾಲ್ಯತೆಗಳಿಗಿರುವ ನಿದರ್ಶನ. ಸಂಗೀತ ಪ್ರಧಾನವಾದ ಭಾರತೀಯ ಚಿತ್ರರಂಗದಲ್ಲಿ ಒಂದು ರೀತಿಯಲ್ಲಿ ಹಿನ್ನೆಲೆ ಗಾಯಕರು ಅಭಿನಯಿಸುವವರ ಆತ್ಮವಿದ್ದಂತೆ.
  • ಇದನ್ನೇ ಡಾ. ರಾಜ್ ಕುಮಾರ್ ಅವರು ಒಮ್ಮೆ ಪಿ ಬಿ ಎಸ್ ಬಗ್ಗೆ ಹೇಳುತ್ತಾ ‘ಪಿ ಬಿ ಎಸ್ ನನ್ನ ಆತ್ಮ, ನಾನು ಶರೀರ’ ಎನ್ನುತ್ತಿದ್ದರು. ರಾಜ್ ಕಪೂರ್ ಮುಖೇಶ್ ಬಗ್ಗೆ ಇದನ್ನೇ ಹೇಳುತ್ತಿದ್ದರು. ಹಾವಿನ ದ್ವೇಷ ಹನ್ನೆರಡು ವರುಷ ಎಂದು ಎಸ್. ಪಿ. ಹಾಡಿದಾಗ ವಿಷ್ಣುವರ್ಧನ್ ರಾಮಾಚಾರಿಯಾಗಿಬಿಟ್ಟರು. ಸ್ನೇಹದ ಕಡಲಲ್ಲಿ ಎಂದು ಹಾಡಿದಾಗ ಶ್ರೀನಾಥ್ ಗರಿಗೆದರಿಬಿಟ್ಟರು. ಎಲ್ಲಿರುವೇ ಮನವ ಕಾಡುವ ರೂಪಸಿಯೇ ಎಂದು ಅನಂತ್ ನಾಗ್ ಆಕಾಶಕ್ಕೆ ಹಾರಿದರು.
  • ನಲಿವಾ ಗುಲಾಬಿ ಹೂವೆ ಎಂದು ಶಂಕರ್ ಭಾವಸ್ಥರಾದರು. ದಕ್ಷಿಣ ಭಾರತದ ರಜನೀಕಾಂತ್, ಕಮಲಹಾಸನ್, ಚಿರಂಜೀವಿ ಹೀಗೆ ಎಪ್ಪತ್ತು ಎಂಭತ್ತರ ದಶಕದಿಂದ ಎರಡು ಸಾವಿರದ ದಶಕದವರೆಗಿನ ಬಹುತೇಕ ಹೀರೋಗಳ ಅಂತರ್ಧ್ವನಿ ಶಕ್ತಿ ಬಾಲು ಅವರದ್ದು. ಅವರ ಧ್ವನಿಯ ಮೋಡಿ ಎಂ.ಜಿ. ಆರ್, ಶಿವಾಜಿ ಗಣೇಶನ್, ಎನ್ ಟಿ ರಾಮರಾವ್, ರಾಜ್ ಕುಮಾರ್, ಅಕ್ಕಿನೇನಿ ಅಂತಹ ಹಿರಿಯರಿಗೆ ಕೂಡಾ ಆಗಾಗ ಇಣುಕಿತ್ತು.
  • ಹಿಂದಿಯಲ್ಲಿ ಏಕ್ ದೂಜೇ ಕೆ ಲಿಯೇ ಬಂದಾಗ ಬಾಲು ಹಿಂದಿ ಚಿತ್ರರಂಗವನ್ನೂ ತಮ್ಮ ಮೋಡಿಗೆ ಸೆಳೆದುಕೊಂಡರು. ಸಾಜನ್, ಮೈ ನೇ ಪ್ಯಾರ್ ಕಿಯಾ ಮುಂತಾದ ಚಿತ್ರಗಳು ಬಂದಾಗ ರಫಿ, ಕಿಶೋರ್ ಅವರನ್ನು ಕಳೆದುಕೊಂಡು ಕಂಗಾಲಾಗಿದ್ದ ಹಿಂದಿ ಚಿತ್ರರಂಗಕ್ಕೆ ಬಾಲು ಬೆನ್ನೆಲುಬಾಗಿದ್ದರು.

ಮಹತ್ಸಾಧನೆ

  • ಶಂಕರಾಭರಣಂ, ಪಂಚಾಕ್ಷರಿ ಗವಾಯಿ, ಸಾಗರ ಸಂಗಮಂ, ಸ್ವಾತಿ ಮುತ್ಯಂ, ರುದ್ರವೀಣ, ಏಕ್ ದೂಜೇ ಕೇಲಿಯೇ ಚಿತ್ರಗಳ ಹಾಡುಗಳಿಗೆ ಬಾಲು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಪದ್ಮಶ್ರೀ, ಪದ್ಮಭೂಷಣ, ಹಲವು ಡಾಕ್ಟರೇಟ್ ಪದವಿಗಳು, ಸಾವಿರಾರು ಇನ್ನಿತರ ಗೌರವ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಎಸ್ ಪಿ ಬಿ ಅವರು ಹಾಡಿರುವ ಹಾಡುಗಳ ಸಂಖ್ಯೆ ೪೦,೦೦೦ಕ್ಕೂ ಹೆಚ್ಚು.
  • ವಿವಿಧ ಭಾಷೆಗಳ ಪರಿಧಿಯಲ್ಲಿ ಇಷ್ಟೊಂದು ಗೀತೆಗಳನ್ನು ಹಾಡಿರುವವರು ಇವರೊಬ್ಬರೇ. ಸಂಗೀತ ನಿರ್ದೇಶಕರಾಗಿ, ಹಲವಾರು ನಾಯಕರಿಗೆ ಮಾತುಗಾರರಾಗಿ, ನಟರಾಗಿ, ನಿರ್ಮಾಪಕರಾಗಿ ಕೂಡಾ ಬಾಲು ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಹ ಶಾರೀರಿಕ ಭಾಷಾಭಿವ್ಯಕ್ತಿ ಅವರಲ್ಲಿರುವುದನ್ನು ಸುಲಭವಾಗಿ ಕಾಣಬಹುದಾಗಿದೆ. ಅವರ ಒಟ್ಟಾರೆ ಪ್ರಮುಖ ಸಾಧನೆಗಳನ್ನು ಹೇಳುವುದಾದರೆ ಅದು ಅಪರಿಮಿತವಾದುದು.

ಪ್ರಶಸ್ತಿ, ಗೌರವ ಮತ್ತು ಪುರಸ್ಕಾರ

  1. ವಿವಿಧ ಭಾಷೆಗಳ ಪರಿಧಿಯಲ್ಲಿ ೪೦,೦೦೦ ಕ್ಕೂ ಹೆಚ್ಚು ಹಾಡುಗಳು
  2. ನಾಲ್ಕು ಭಾಷೆಗಳಲ್ಲಿ ಒಟ್ಟು ೬ ರಾಷ್ಟ್ರ ಪ್ರಶಸ್ತಿಗಳು
  3. ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು
  4. ೨೫ ಬಾರಿ ಆಂಧ್ರಪ್ರದೇಶ ಸರ್ಕಾರದ 'ನಂದಿ' ಪ್ರಶಸ್ತಿ.
  5. ೪ ಭಾಷೆಗಳಿಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ.
  6. ಹಲವು ವಿಶ್ವ ವಿದ್ಯಾಲಯಗಳ ಡಾಕ್ಟರೇಟ್

ಎದೆ ತುಂಬಿ ಹಾಡಿದೆನು

ದೂರದರ್ಶನದಲ್ಲಿ ಒಂದು ದಶಕದಿಂದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವಂತೆ, ಇತರ ಭಾಷೆಗಳಲ್ಲೂ ಅಂತದೇ ಕಾರ್ಯಕ್ರಮಗಳನ್ನು ಬಾಲು ನಡೆಸುತ್ತಿದ್ದಾರೆ. ಅವರು ಪುಟ್ಟ ಮಕ್ಕಳಿಂದ ಹಿಡಿದು ಸಂಗೀತದ ದಿಗ್ಗಜಗಳವರೆಗೆ ಹಿರಿಯರು ಕಿರಿಯರು ಎಲ್ಲರನ್ನೂ ಗೌರವಪೂರ್ಣವಾಗಿ ನಡೆಸಿಕೊಳ್ಳುವುದನ್ನು ಕಾಣುವುದೇ ಒಂದು ಚೆಂದ ಎಂಬುದು ಅವರ ಅಭಿಮಾನಿ ವೀಕ್ಷಕರುಗಳಗಳ ನುಡಿ. ಈ ಎಲ್ಲ ನಿಟ್ಟಿನಲ್ಲಿ ಬಾಲು ಒಬ್ಬ ನೈಜ ಸಾಂಸ್ಕೃತಿಕ ರಾಯಭಾರಿ.

ಆಕರಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.