ವಿಶ್ವೇಶ್ವರ ಜ್ಯೋತಿರ್ಲಿಂಗ
ಕಾಶಿ ವಿಶ್ವನಾಥ ದೇವಾಲಯ. | |
---|---|
![]() | |
ಹೆಸರು: | ಕಾಶಿ ವಿಶ್ವನಾಥ ದೇವಾಲಯ. |
ನಿರ್ಮಾತೃ: | ಮಹಾರಾಣಿ ಅಹಲ್ಯಭಾಯಿ ಹೋಲ್ಕರ್ |
ಕಟ್ಟಿದ ದಿನ/ವರ್ಷ: | 1780 |
ಪ್ರಮುಖ ದೇವತೆ: | ವಿಶ್ವನಾಥ(ಶಿವ) |
ವಾಸ್ತುಶಿಲ್ಪ: | Mandir |

ಶ್ರೀ ವಿಶ್ವೇಶ್ವರ ಜ್ಯೋತಿರ್ಲಿಂಗ -ಕಾಶಿ
- ವಾರಣಾಸಿಯ (ಬನಾರಸ್) ಅಥವಾ ಕಾಶಿಯ ಶ್ರೀ ವಿಶ್ವೇಶ್ವರ -ಲಿಂಗವು (ಈಶ್ವರ - ವಿಶ್ವನಾಥ ಲಿಂಗ) ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು. ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಅತ್ಯಂತ ಪ್ರಸಿದ್ಧವಾದುದು. ಮತ್ತು ಬಹಳ ಪ್ರಾಚೀನ ಮತ್ತು ಶ್ರೀಮಂತವಾದುದು. ಹೇಗೆ ಇಲ್ಲಿಯ ಕಾಶೀವಿಶ್ವನಾಥ ಜ್ಯೋತಿರ್ಲಿಂಗ ಪ್ರಸಿದ್ಧವೋ ಹಾಗೇ ಕಾಶಿಯು ಭಾರತ ಸಂಸ್ಕೃತಿ ಯ ಪ್ರತೀಕವೂ ಆಗಿದೆ. ಇಲ್ಲಿ ನೋಡಬೇಕಾದ ತಿಳಿಯಬೇಕಾದ ಇತರ ವಿಚಾರ ಮತ್ತು ಸ್ಥಳಗಳೂ ಇವೆ.
ಹರಿಶ್ಚಂದ್ರ ಘಾಟ್ -ಗಂಗಾ ನದಿ
- ಈ ನಗರದ ಪಕ್ಕದಲ್ಲಿ ಹರಿಯುವ ಗಂಗಾನದಿಯಲ್ಲಿ ಅನೇಕ ಸ್ನಾನ ಘಟ್ಟಗಳಿವೆ ಅದರಲ್ಲಿ ಹರಿಶ್ಚಂದ್ರ ಘಾಟ್ ಪ್ರಸಿದ್ಧವಾದುದು ಅದು ಪೌರಾಣಿಕ ಪ್ರಸಿದ್ಧಿಹೊಂದಿದೆ. ಈ ಘಟ್ಟ ಮೃತದೇಹಗಳನ್ನು ಸುಡುವ ಘಟ್ಟ . ಹಿಂದೆ ಚಕ್ರವರ್ತಿಯಾಗಿದ್ದ ಸತ್ಯ ಹರಿಶ್ಚಂದ್ರನು ಇಲ್ಲಿ, ಈ ಘಾಟಿಯ (ಪಕ್ಕದ) ಸ್ಮಶಾನದ ಕಾವಲು ಕಾದಿದ್ದನೆಂಬುದು ಪುರಾಣ ಪ್ರಸಿದ್ಧ ಕಥೆ.
ಜ್ಯೋತಿರ್ಲಿಂಗ ದರ್ಶನ
- ಈ ಕಾಶಿ ವಿಶ್ವೇಶ್ವರನ ಜ್ಯೋತಿರ್ಲಿಂಗ ದರ್ಶನಕ್ಕೆ ಹೋಗುವವರು ಪಕ್ಕದಲ್ಲಿ ಹರಿಯುವ ಅತ್ಯಂತ ಪವಿತ್ರ ನದಿಯೆಂದು ಹೆಸರು ಪಡೆದಿರುವ ಗಂಕೈಗೂಅಡುವುದೆಂದುದು ಹೋಗಬೇಕು . ನದಿಯಿಂದ ವಿಶ್ವೇಶ್ವರನ ದರ್ಶನಕ್ಕೆ ಹೋಗುವ ದಾರಿ ಇಕ್ಕಟ್ಟಾಗಿದೆ. ದಾರಿಯ ಎಡ ಬಲಗಳಲ್ಲಿ ನೂರಾರು ಅಂಗಡಿಗಳಿವೆ . ಅವು ಪೂಜಾಸಾಮಗ್ರಿಗಳು , ತಿಂಡಿಯ ಅಂಗಡಿಗಳು, ಬಟ್ಟೆ ಪಾತ್ರೆಯ ಅಂಗಡಿಗಳು ಮೊದಲಾದ ಎಲ್ಲಾ ಬಗೆಯ ಅಂಗಡಿಗಳಿವೆ . ಅದು ಭಕ್ತರ ,ಪ್ರವಾಸಿಗರಿಂದ ತುಂಬಿಹೋಗಿರುತ್ತದೆ. ಶಿವನ ಲಿಂಗ ದರ್ಶನಕ್ಕೆ ಹೋಗುವವರು ಈ ಅಂಗಡಿಗಳಲ್ಲಿ ಅಭಿಷೇಕಕ್ಕೆ ಹಾಲಿನ ಮತ್ತು ನೀರಿನ ಗಿಂಡಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ಸದಾ ಜನರಿಂದ ತುಂಬಿರುವ ದೇವಸ್ಥಾನಕ್ಕೆ ಸರತಿಯಲ್ಲಿ ಸಾಗಬೇಕು. ಸಣ್ಣದಾದ ಗರ್ಭಗುಡಿಯಲ್ಲಿರುವ ಶ್ರೀ ವಿಶ್ವೇಶ್ವರ ಜೋತಿರ್ಲಿಂಗ ದರ್ಶನ ಮಾತ್ರದಿಂದಲೇ ಮನಸ್ಸು ಮುದಗೊಳ್ಳುವುದಲ್ಲದೇ ಸರ್ವ ಪಾಪಗಳೂ ಕ್ಷಯವಾಗುವುದೆಂಬ ನಂಬುಗೆ ಇದೆ. ಅಲ್ಲದೆ ಸವ೯ ಅಭೀಷ್ಟಗಳೂ ನೆರವೇರುತ್ತವೆ, ಜೀವನ ಸಾರ್ಥಕವಾಗುತ್ತದೆ, ಜೀವನ್ಮುಕ್ತಿ ದೊರೆಯುತ್ತದೆ ಎಂಬ ಬಲವಾದ ನಂಬುಗೆ ಭಕ್ತರಲ್ಲಿ ಇದೆ. ಎದುರುಗಡೆ ಗಣಪತಿ ವಿಗ್ರಹವಿದೆ. ಇಲ್ಲಿ ಎದುರು ಇರಬೇಕಾದ ನಂದಿ ವಿಗ್ರಹ ಹೊರಗಡೆ ಇದ್ದು , ಪಕ್ಕದಲ್ಲಿರುವ ಮಸೀದಿಯ ಕಡೆ ನೋಡುತ್ತಿದ್ದಾನೆ. ಮಂದಿರದ ಗೋಡೆ ಮತ್ತು ಮುಸ್ಲಿಂ ರ ಪ್ರಾರ್ಥನಾ ಮಂದಿರದ ಗೋಡೆ ಒಂದನ್ನೊಂದು ಹೊಂದಿಕೊಂಡಿವೆ. ಇಲ್ಲಿ ಬಲವಾದ ಪೋಲೀಸ್ ಪಡೆಯನ್ನು ಕಾವಲು ಹಾಕಲಾಗಿದೆ. ಜಗದ್ ರಕ್ಷಕ ವಿಶ್ವೇಶ್ವರ ಜ್ಯೋತಿರ್ಲಿಂಗ ರಕ್ಷಣೆಗಾಗಿ ಪೋಲಿಸರು ಹಗಲು ರಾತ್ರಿ ಕಾಯುತ್ತಾರೆ. ಮುಸ್ಲಿಂ ದೊರೆ ಔರಂಗಜೇಬನು ದೇವಾಲಯವನ್ನು ನಾಶಮಾಡಿ ಲಿಂಗವನ್ನು ದೇವಾಲಯದ ಬಾವಿಯಲ್ಲಿ ಹಾಕಿದ್ದರಂತೆ. ನಂತರ ರಾಣಿ ಅಹಲ್ಯಾಬಾಯಿಯು ದೇವಾಲಯವನ್ನು ಹೊಸದಾಗಿಕಟ್ಟಿಸಿ ಲಿಂಗವನ್ನು ಪ್ರತಿಷ್ಟಾಪಿಸಿದಳೆಂದು ಇತಿಹಾಸ ಹೇಳುತ್ತದೆ.
ದೇವಾಲಯದ ಆವರಣ ದೇವಸ್ಥಾನದ ಸುತ್ತಲೂ ಆಂಜನೇಯ, ಗಣಪತಿ, ದುರ್ಗಾ, ಹಾಗೂ ನೂರಾರು ಶಿವಲಿಂಗಗಳಿವೆ. ಆವರಣದಲ್ಲಿ ಒಂದು ಪುರಾತನ ವಟವೃಕ್ಷವಿದೆ. ಮನಸ್ಸಿನಲ್ಲಿ ಬೇಕಾದ ಕೋರಿಕೆಯನ್ನು ಸಂಕಲ್ಪಸಿಕೊಂಡು ಅದಕ್ಕೆ ದಾರ ಕಟ್ಟಿದರೆ ಆಸೆ ಕೈಗೂಡುವುದೆಂದು ಹೇಳುತ್ತಾರೆ . ಹಾಗಾಗಿ ಲಕ್ಷಾಂತರ ದಾರಗಳು ವೃಕ್ಷವನ್ನು ಸುತ್ತಿಕೊಂಡಿವೆ. ನಂತರ ತಾಯಿ ವಿಶಾಲಾಕ್ಷಿಯ ದರ್ಶನ , ಮತ್ತು ಅನ್ನಪೂರ್ಣೇಶ್ವರಿ ಹಾಗೂ ಕಾಳ ಭೈರವನ ದರ್ಶನ ಮಾಡಲೇಬೇಕು- ಇಲ್ಲದಿದ್ದರೆ ವಿಶ್ವನಾಥನ ದರ್ಶನ ಮಾಡಿದ ಪುಣ್ಯ ಲಭಿಸುವುದಿಲ್ಲವೆಂಬ ನಂಬುಗೆ / ಹೇಳಿಕೆ ಇದೆ . ಆದ್ದರಿಂದ ಅವುಗಳ ದರ್ಶನ ಮಾಡಬೇಕು.
ವಿಶಾಲಾಕ್ಷಿ ಮತ್ತು ಅನ್ನಪೂರ್ಣೇಶ್ವರೀ ದೇವಾಲಯ:
- ಸಣ್ಣ ಸಣ್ಣ ಗಲ್ಲಿಗಳಲ್ಲಿ ಸುತ್ತಿಕೊಂಡು ಹೋದರೆ ವಿಶಾಲಾಕ್ಷಿ ಅಮ್ಮನವರ ದೇವಾಲಯ ಸಿಗುವುದು. ಸಣ್ಣದಾದ ದೇವಾಲಯ, ಸರಳ ಅಲಂಕಾರ, ಅಲ್ಲಿಂದ ಮುಂದೆ ಅನ್ನಪೂರ್ಣೇಶ್ವರೀ ದೇವಾಲಯದ ದರ್ಶನ ಮಾಡಬೇಕು ; ಈ ದೇವಾಲಯ ಸ್ವಲ್ಪ ವಿಶಾಲವಾಗಿದೆ. ನಗುಮುಖದ ಅನ್ನಪೂರ್ಣೇಶ್ವರಿ ಅಭಯ ಹಸ್ತ ಹೊಂದಿದ್ದು ಭಕ್ತರಿಗೆ ಬೇಡಿದ್ದನ್ನೆಲ್ಲಾ ಕೊಡುವಳೆಂಬ ನಂಬುಗೆ ಇದೆ. ಭಕ್ತರು ದೇವಿಗೆ ಉಡಿ ತುಂಬುತ್ತಿರುತ್ತಾರೆ. ಇಲ್ಲಿಂದ ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡು ಹೋಗಿ ಮನೆ ಅಕ್ಕಿ ಡಬ್ಬಕ್ಕೆ ಹಾಕಿದರೆ ಶುಭವುಂಟಾಗುವುದೆಂದು ಹೇಳುತ್ತಾರೆ.
ಕಾಳ ಭೈರವನ ದೇವಾಲಯ
ಕಾಶಿಯ ಕಾಳಭೈರವ ಭವ್ಯ ಮೂರ್ತಿ . ಇಲ್ಲಿ ಕಾಶಿಯ ಕಪ್ಪು ದಾರವನ್ನು ಕೊಂಡು ತಂದು ಅದು ಅವನ ಪ್ರಸಾದವೆಂದು (ಅವನ ತಲೆಕೂದಲು ?) ಎಲ್ಲಾ ದೋಷ ನಿವಾರಣೆಗಾಗಿ ಕೈಗೆ ಕಟ್ಟಿಕೊಳ್ಳುತ್ತಾರೆ. ಆ ದಾರಗಳನ್ನು ಮನೆಗೆ ತಂದು ಗಂಗಾ ಸಮಾರಾಧನೆ ಮಾಡಿ , ನೆಂಟರು ಇಷ್ಟರಿಗೆ ಆ ದಾರವನ್ನೂ ,ಗಂಗಾಜಲವನ್ನೂ ಕೊಟ್ಟು ಆಶೀರ್ವಾದ ಪಡೆಯುವ ಪದ್ಧತಿ ಇದೆ. ಇದು ಕಾಶೀಯಾತ್ರೆಯ ಕೊನೆಯ ಕಾರ್ಯಕ್ರಮ. ಕಾಶಿಯಲ್ಲಿ ಇನ್ನೂ ಅನೇಕ ಮಂದಿರಗಳಿವೆ. ದುರ್ಗಾ ಬಾಯಿ ಮಂದಿರ , ಇಲ್ಲಿಯ ಆರಾದ್ಯ ದೈವವಾದ ಕವಡೀಬಾಯಿ ಮಂದಿರ, ತುಳಸೀ ಮಾನಸ ಮಂದಿರ.. ಇತ್ಯಾದಿ.
ಬನಾರಸ್ ಹಿಂದೂ ವಿಶ್ವವಿದ್ಯಾಲಯ
- ಬನಾರಸ್ ವಿಶ್ವವಿದ್ಯಾಲಯ.
- ಕಾಶಿಗೆ ಹೋದವರು ಬನಾರಸ್ ವಿಶ್ವವಿದ್ಯಾಲಯವನ್ನು ನೋಡಿಯೇ ನೋಡುತ್ತಾರೆ. ಇದನ್ನು ಭಾರತದ ಸಂಸ್ಕೃತಿ ಯನ್ನು ಬೋಧಿಸಲು ಆಚಾರ್ಯ ಮದನ ಮೋಹನ ಮಾಳವೀಯರವರು ೧೯೧೬ರಲ್ಲಿ ಸ್ಥಾಪಿಸಿದರು. ಅತ್ಯಂತ ಪ್ರಸಿದ್ಧವೂ ದೊಡ್ಡದೂ ಆದ ಇದು ಬನಾರಸ್ ಹಿಂದೂ ವಿಶ್ವವಿದ್ಯಾಲಯವೆಂದು ಹೆಸರು ಪಡೆದಿದೆ. ಇದು ಭಾರತದ ಒಂದು ಕೇಂದ್ರೀಯ ವಿಶ್ವವಿದ್ಯಾಲಯ ಆಗಿದೆ . ಭಾರತದ ಅತ್ಯಂತ ದೊಡ್ಡ ವಿಶ್ವವಿದ್ಯಾಲಯವೆಂಬ ಕೀರ್ತಿಗೆ ಒಳಪಟ್ಟಿದೆ (ಇಂಡಿಯಾ ಟುಡೇ ಯ ಸರ್ವೇ). ಎಲ್ಲಾ ಜನಾಂಗದವರಿಗೆ ಪ್ರವೇಶವಿದೆ. ಎಲ್ಲಾ ಬಗೆಯ ಜ್ಞಾನದಲ್ಲಿ ಉನ್ನತ ವ್ಯಾಸಂಗಕ್ಕೆ ಅವಕಾಶವಿದೆ. ದೇಶ ವಿದೇಶಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಅಭ್ಯಾಸ ಮಾಡುತ್ತಾರೆ ಸುಮಾರು ೧೫೦೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಇದು ೧೩೫೦ ಎಕರೆ ವಿಸ್ತೀರ್ಣದ ಕ್ಯಾಂಪಸ್ ಹೊಂದಿದೆ. ಇದರ ಜೊತೆಯಲ್ಲೇ ಭಾರತ ಮಂದಿರವೆಂಬ ಭಾರತ ದರ್ಶನದ ಒಂದು ವಿಶೇಷ ಪ್ರದರ್ಶನ ಮಂದಿರವಿದೆ.
ಜನಜೀವನ
- ಇಲ್ಲಿಯ ಜನಜೀವನದಲ್ಲಿ ಸೈಕಲ್ ರಿಕ್ಷಾಗಳು ಕಾಶೀ ಪಟ್ಟಣದ ಅವಿಭಾಜ್ಯ ಅಂಗವಾಗಿದೆ. ತಕ್ಕ ಮಟ್ಟಿಗೆ ಇತರ ಸಾರಿಗೆಗಿಂತ ಅಗ್ಗ ವಾಗಿ ಪ್ರಯಾಣಿಕರನ್ನು ಒಂದುಕಡೆಯಿಂದ ನಗರದ ಮತ್ತೊಂದುಕಡೆಗೆ ಸಾಗಿಸುತ್ತಿರುತ್ತಾರೆ. ಕುಳಿತುಕೊಳ್ಳುವ ಆಸನದ ಕೆಳಗಡೆಯ ಲಗ್ಗೇಜು ಸ್ಥಳದಲ್ಲಿ ಮೃತದೇಹವನ್ನೂ ಮೂಟೆಯೊಳಗಿಟ್ಟು ಸಾಗಿಸುತ್ತಿರುತ್ತಾರೆ.
- ಇದು ದೊಡ್ಡ ವ್ಯಾಪಾರ ಕೇಂದ್ರವೂ ಆಗಿದೆ ಇಲ್ಲಿಗೆ ಬರುವ ಲಕ್ಷಾಂತರ ಜನರು ಏನಾದರೂ ನೆನಪಿನ ಕಾಣಿಕೆ ,ವಸ್ತುಗಳನ್ನು ಕೊಂಡುಹೋಗುತ್ತಾರೆ. ಬನಾರಸ್ ರೇಷ್ಮೆ ಪ್ರಸಿದ್ಧವಾದುದು. ಇಲ್ಲಿಗೆ ಯಾತ್ರೆಗೆಬಂದ ಹೆಣ್ಣುಮಕ್ಕಳು (ಹೆಂಗಸರು) ತಮ್ಮ ಜೊತೆಯಲ್ಲಿ ರೇಷ್ಮೆ ಸೀರೆಗಳನ್ನು ತೆಗೆದುಕೊಂಡು ಹೋಗುವುದು ಸಾಮಾನ್ಯ. ಕಾಶಿ ಒಂದು ರೀತಿಯಲ್ಲಿ ಇಡೀ ಭಾರತ ಸಂಸ್ಕೃತಿಯ ಪ್ರತೀಕ . ಇಲ್ಲಿ ಭಾರತದ ಎಲ್ಲಾ ರಾಜ್ಯದ, ಎಲ್ಲ ಭಾಷೆಯ ಜನರು ಇದ್ದಾರೆ . ಎಲ್ಲಾ ಧಾರ್ಮಿಕ ಗುರುಗಳೂ ಇದ್ದಾರೆ. ಸಂಸ್ಕೃತದ ಉದ್ದಾಮ ಪಂಡಿತರಿಗೂ , ತತ್ವ ಜ್ಞಾನಿಗಳಿಗೂ ಇದು ಕೇಂದ್ರ.
ಆಧಾರ :
ನೋಡಿ
- ಶ್ರೀ ವೈದ್ಯನಾಥ ಜ್ಯೋತಿರ್ಲಿಂಗ
- ಜ್ಯೋತಿರ್ಲಿಂಗ
- ಕಾಶಿ
- ಪ್ರತಿಕ್ರಿಯೆ, -ತಿದ್ದುಪಡಿ - ಸಲಹೆ ಕೊಡಲು ಈ ಮೇಲಿನ ಎಡಗಡೆ ಇರುವ- 'ಚರ್ಚೆ' ಚರ್ಚೆಪುಟ:ವಿಶ್ವೇಶ್ವರ ಜ್ಯೋತಿರ್ಲಿಂಗ ಪುಟಕ್ಕೆ ಹೋಗಿ. ಅಲ್ಲಿ ಬದಲಾಯಿಸಿಗೆ ಕ್ಲಿಕ್ ಮಾಡಿ ಕೆಳಗಡೆ ಸಲಹೆ ಟೈಪು ಮಾಡಿ