ಪಿ.ವಿ.ನರಸಿಂಹರಾವ್

ಪಾಮುಲಪರ್ತಿ ವೆಂಕಟ ನರಸಿಂಹರಾವ್ (ತೆಲುಗು:పి.వి.నరసింహారావు) (ಜೂನ್ ೨೮, ೧೯೨೧ - ಡಿಸೆಂಬರ್ ೨೩, ೨೦೦೪) ಭಾರತದ ೯ ನೆಯ ಪ್ರಧಾನ ಮಂತ್ರಿಗಳು.

ಪಿ ವಿ ನರಸಿಂಹರಾವ್
ಜನನ: ಜೂನ್ ೨೮, ೧೯೨೧ [1]
ನಿಧನ: ಡಿಸೆಂಬರ್ ೨೩, ೨೦೦೪
ಜನ್ಮಸ್ಥಳ ಕರೀಮನಗರ, ಆಂಧ್ರ ಪ್ರದೇಶ
ಭಾರತದ ಪ್ರಧಾನ ಮಂತ್ರಿ
Tenure Order: ೯ ನೆಯ ಪ್ರಧಾನ ಮಂತ್ರಿ
ರಾಜಕೀಯ ಪಕ್ಷ ಕಾಂಗ್ರೆಸ್ ಪಕ್ಷ
ಪ್ರಮಾಣ ವಚನ ಸ್ವೀಕಾರ: ಜೂನ್ ೨೮, ೧೯೯೧
ಅವಧಿ ಅಂತ್ಯ: ಮೇ ೧೬, ೧೯೯೬
ಹಿಂದಿನ ಪ್ರಧಾನ ಮಂತ್ರಿ ಚಂದ್ರಶೇಖರ್
ಮುಂದಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ

ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ನರಸಿಂಹರಾವ್, ಸ್ವಾತಂತ್ರ್ಯಾನಂತರ ಆಂಧ್ರ ಪ್ರದೇಶ ರಾಜ್ಯ ಸರ್ಕಾರದ ಕೆಲವು ಖಾತೆಗಳನ್ನು ನಿರ್ವಹಿಸಿ ನಂತರ ಮುಖ್ಯಮಂತ್ರಿ ಸ್ಥಾನಕ್ಕೇರಿದರು. ಇದರ ನಂತರ ರಾಷ್ಟ್ರೀಯ ಮಟ್ಟಕ್ಕೇರಿದ ನರಸಿಂಹರಾವ್ ಕೇಂದ್ರ ಸರ್ಕಾರದ ಕೆಲ ಖಾತೆಗಳನ್ನು ನಿರ್ವಹಿಸಿದರು (ಮುಖ್ಯವಾಗಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಸರ್ಕಾರಗಳಲ್ಲಿ ವಿದೇಶ ವ್ಯವಹಾರಗಳ ಖಾತೆ).

೧೯೯೧ ರಲ್ಲಿ ರಾಜೀವ್ ಗಾಂಧಿಯವರ ಮರಣಾನಂತರ ನಡೆದ ಚುನಾವಣೆಯಲ್ಲಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ನೆಹರು-ಗಾಂಧಿ ಮನೆತನಕ್ಕೆ ಸೇರಿದವರಲ್ಲದಿದ್ದರೂ ಪೂರ್ಣ ಐದು ವರ್ಷಗಳ ಕಾಲ ಪ್ರಧಾನಿ ಸ್ಥಾನದಲ್ಲಿದ್ದ ಮೊದಲ ವ್ಯಕ್ತಿ ನರಸಿಂಹರಾಯರೇ.

ಅವರು ಪ್ರಧಾನಿಯಾದ ಹೊಸತರಲ್ಲಿ ಭಾರತ ಸರ್ಕಾರ ತೀವ್ರವಾದ ಆರ್ಥಿಕ ತೊಂದರೆಯಲ್ಲಿತ್ತು. ತುರ್ತಾಗಿ ಡಾ. ಮನಮೋಹನ್ ಸಿಂಗ್ ಅವರನ್ನು ವಿತ್ತ ಮಂತ್ರಿ ಸ್ಥಾನಕ್ಕೆ ಮತ್ತು ಮಾಂಟೇಕ್ ಸಿಂಗ್ ಅಹ್ಲುವಾಲಿಯಾ ಅವರನ್ನು ವಿತ್ತ ಕಾರ್ಯದರ್ಶಿ ಸ್ಥಾನಕ್ಕೆ ನೇಮಿಸಿದ ರಾವ್, ಆರ್ಥಿಕ ಸ್ವತಂತ್ರೀಕರಣ ನೀತಿಗಳನ್ನು ಪರಿಚಯಿಸಿದರು. ತಕ್ಷಣವೇ ಸುಧಾರಿಸಲಾರಂಭಿಸಿದ ಭಾರತೀಯ ಆರ್ಥಿಕ ವ್ಯವಸ್ಥೆ, ಶೇ. ೫.೫ ರ ಪ್ರಮಾಣದಲ್ಲಿ ಮೇಲೇರಲಾರಂಭಿಸಿತು. ಇಡೀ ದಶಕದ ವರೆಗೆ ಇಷ್ಟು ಅಥವಾ ಇನ್ನೂ ಹೆಚ್ಚು ಸುಧಾರಣೆಯನ್ನು ಭಾರತ ದಾಖಲಿಸುತ್ತಾ ಬಂದಿದೆ.

ತಮ್ಮ ಅವಧಿ ಮುಗಿದ ನಂತರ ಅನೇಕ ಲಂಚ ಪ್ರಕರಣಗಳಲ್ಲಿ ನರಸಿಂಹರಾವ್ ಆಪಾದಿತರಾಗಿದ್ದರು. ನ್ಯಾಯಾಲಯದಲ್ಲಿ ಇವರ ವಿರುದ್ಧ ತೀರ್ಪು ಬಂದರೂ ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯ ಅವರನ್ನು ಎಲ್ಲ ಆಪಾದನೆಗಳಿಂದ ಮುಕ್ತಗೊಳಿಸಿತು.

೧೭ ಭಾಷೆಗಳನ್ನು ಮಾತನಾಡಬಲ್ಲವರಾಗಿದ್ದ ರಾವ್, ಜ್ಞಾನಪೀಠ ಪುರಸ್ಕೃತ ತೆಲುಗು ಲೇಖಕ ವಿಶ್ವನಾಥ ಸತ್ಯನಾರಾಯಣರ ಕಾದಂಬರಿ "ವೇಯಿ ಪದಗಾಲು" ಅನ್ನು ಹಿಂದಿ ಭಾಷೆಗೆ "ಸಹಸ್ರ ಫಣ್" ಹೆಸರಿನಲ್ಲಿ ಭಾಷಾಂತರಿಸಿದ್ದಾರೆ.

ಸಾಮಾನ್ಯವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸದಿದ್ದ ನರಸಿಂಹರಾವ್ ಅವರಿಗೆ ಸುದ್ದಿ ಮಾಧ್ಯಮದವರು ಇಟ್ಟ ಅಡ್ಡಹೆಸರು "ಚಾಣಕ್ಯ"! ರಾಜಕೀಯದಿಂದ ನಿವೃತ್ತಿ ಹೊಂದಿದ ನಂತರ ಭಾರತೀಯ ರಾಜಕೀಯದ ಬಗೆಗೆ "ದ ಇನ್‌ಸೈಡರ್" ಎಂಬ ಇಂಗ್ಲಿಷ್ ಕಾದಂಬರಿಯನ್ನು ಬರೆದರು.

ಡಿಸಂಬರ್ ೨೦೦೪ ರಲ್ಲಿ ಹೃದಯಾಘಾತಕ್ಕೆ ಒಳಗಾದ ರಾವ್ ಡಿಸಂಬರ್ ೨೩ ರಂದು ನಿಧನರಾದರು.

ಉಕ್ತಿ

  • "ನಾನು ನಿರ್ಧಾರ ಮಾಡದಿರುವಾಗಲೂ ವಿಷಯದ ಬಗ್ಗೆ ಯೋಚಿಸಿರುತ್ತೇನೆ. ಯೋಚಿಸಿದ ಮೇಲೆ, ಅದರ ಬಗ್ಗೆ ನಿರ್ಧಾರ ಮಾಡುವುದು ಬೇಡ ಎಂಬ ನಿರ್ಧಾರ ತೆಗೆದುಕೊಂಡಿರುತ್ತೇನೆ."

ಉಲ್ಲೇಖಗಳು


ಹಿಂದಿನ ಪ್ರಧಾನಿಗಳು:
ಚಂದ್ರಶೇಖರ್
ಭಾರತದ ಪ್ರಧಾನ ಮಂತ್ರಿ ಮುಂದಿನ ಪ್ರಧಾನಿಗಳು:
ಅಟಲ್ ಬಿಹಾರಿ ವಾಜಪೇಯಿ


This article is issued from Wikipedia. The text is licensed under Creative Commons - Attribution - Sharealike. Additional terms may apply for the media files.