ಗಿನಿ
ಗಿನಿ (ಅಧಿಕೃತವಾಗಿ ಗಿನಿ ಗಣರಾಜ್ಯ) ಪಶ್ಚಿಮ ಆಫ್ರಿಕಾದ ಒಂದು ರಾಷ್ಟ್ರ. ಈ ದೇಶವು ಹಿಂದೆ ಫ್ರಾನ್ಸ್‌ನ ವಸಾಹತಾಗಿದ್ದ ಕಾಲದಲ್ಲಿ ಫ್ರೆಂಚ್ ಗಿನಿ ಎಂಬುದಾಗಿ ಕರೆಯಲ್ಪಡುತ್ತಿತ್ತು. ಬಾಗಿದ ಕೊಂಬಿನ ಆಕಾರದಲ್ಲಿರುವ ಗಿನಿಯ ಉತ್ತರದಲ್ಲಿ ಗಿನಿ-ಬಿಸೌ ಮತ್ತು ಸೆನೆಗಾಲ್; ಉತ್ತರ ಮತ್ತು ಈಶಾನ್ಯದಲ್ಲಿ ಮಾಲಿ; ಆಗ್ನೇಯದಲ್ಲಿ ಕೋತ್ ದ ಐವರಿ; ದಕ್ಷಿಣದಲ್ಲಿ ಲೈಬೀರಿಯ; ನೈಋತ್ಯದ ಅಂಚಿನಲ್ಲಿ ಸಿಯೆರ್ರ ಲಿಯೋನ್ ದೇಶಗಳಿವೆ. ನಾಡಿನ ಬಹುಭಾಗ ಭೂಮಿಗೆ ನೈಜರ್, ಸೆನೆಗಾಲ್ ಮತ್ತು ಗ್ಯಾಂಬಿಯ ನದಿಗಳು ನೀರುಣಿಸುತ್ತವೆ.
ಧ್ಯೇಯ: "ಉದ್ಯೋಗ, ನ್ಯಾಯ ಮತ್ತು ಐಕ್ಯಮತ" | |
ರಾಷ್ಟ್ರಗೀತೆ: "ಸ್ವಾತಂತ್ರ್ಯ" | |
![]() Location of ಗಿನಿ | |
ರಾಜಧಾನಿ | ಕೊನಾಕ್ರಿ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಫ್ರೆಂಚ್ |
ಸರಕಾರ | ಗಣರಾಜ್ಯ |
- ರಾಷ್ಟಾಧ್ಯಕ್ಷ | ಲನ್ಸಾನಾ ಕಾಂಟೆ |
- ಪ್ರಧಾನಿ | ಲನ್ಸಾನಾ ಕೌಯಟೆ |
ಸ್ವಾತಂತ್ರ್ಯ | |
- ಫ್ರಾನ್ಸ್ ನಿಂದ | ಅಕ್ಟೋಬರ್ 2 1958 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 245,857 ಚದರ ಕಿಮಿ ; (78ನೆಯದು) |
94,926 ಚದರ ಮೈಲಿ | |
- ನೀರು (%) | ನಗಣ್ಯ |
ಜನಸಂಖ್ಯೆ | |
- ಜುಲೈ 2005ರ ಅಂದಾಜು | 9,402,000 (83ನೆಯದು) |
- 1996ರ ಜನಗಣತಿ | 7,156,406 |
- ಸಾಂದ್ರತೆ | 38 /ಚದರ ಕಿಮಿ ; (164ನೆಯದು) 98 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
- ಒಟ್ಟು | $18.879 ಬಿಲಿಯನ್ (111ನೆಯದು) |
- ತಲಾ | $2,035 (142ನೆಯದು) |
ಮಾನವ ಅಭಿವೃದ್ಧಿ ಸೂಚಿಕ (2004) |
![]() |
ಕರೆನ್ಸಿ | ಗಿನಿಯ ಫ್ರಾಂಕ್ (GNF ) |
ಸಮಯ ವಲಯ | GMT (UTC) |
ಅಂತರ್ಜಾಲ TLD | .gn |
ದೂರವಾಣಿ ಕೋಡ್ | +224 |
ಪಶ್ಚಿಮ ಆಫ್ರಿಕದ ಗಿನಿ ಪ್ರದೇಶದಲ್ಲಿರುವ ಒಂದು ಗಣರಾಜ್ಯ. ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ ಮತ್ತು ಪೋರ್ಚುಗೀಸ್ ಗಿನಿ, ಉತ್ತರದಲ್ಲಿ ಸೆನಿಗಾಲ್ ಮತ್ತು ಮಾಲಿ, ಪೂರ್ವದಲ್ಲಿ ಐವರಿ ಕೋಸ್ಟ್, ದಕ್ಷಿಣದಲ್ಲಿ ಲೈಬೀರಿಯ ಮತ್ತು ಸೆಯೆರ ಲಿಯೋನ್-ಇವು ಇದರ ಮೇರೆಗಳು. ಗಿನಿ ಗಣರಾಜ್ಯದ ವಿಸ್ತೀರ್ಣ 245,857 ಚ.ಕಿಮೀ, ಜನಸಂಖ್ಯೆ 10,069,000 (2011). ರಾಜಧಾನಿ ಕಾನಕ್ರಿ.
ಭೌತಲಕ್ಷಣ

ಗಿನಿಯ ಸಮುದ್ರತೀರ ಅಂಕುಡೊಂಕಾಗಿ ನದೀ ಅಳಿವೆಗಳಿಂದ ಕೂಡಿದೆ. ಕರೆಯ ಬಳಿ ಅಲ್ಲಲ್ಲಿ ಜವುಗು ತುಂಬಿದ ದ್ವೀಪಗಳಿವೆ. ಉಳಿದ ಭಾಗವನ್ನು ಸ್ಥೂಲವಾಗಿ ನಾಲ್ಕು ವಿಭಾಗಗಳಾಗಿ ವಿಂಗಡಿಸಬಹುದು. 1 45-53 ಮೈ. ಅಗಲವಾಗಿ ರುವ ಕರಾವಳಿಯ ಮೈದಾ ತಗ್ಗಿನಪ್ರದೇಶ. ಇದಕ್ಕೆ ಅಡ್ಡಲಾಗಿ ಹಲವಾರು ನದಿಗಳಿವೆ. ನೆಲ ಬಹುತೇಕ ಮೆಕ್ಕಲು ಮಣ್ಣಿನಿಂದಲೂ ಜಂಬುಮಣ್ಣಿನಿಂದಲೂ ಆವೃತವಾದ್ದು. ಕಡಲಕರೆಗೆ 30 ಮೈ. ದೂರದಲ್ಲಿರುವ ಮರಳುಗಲ್ಲಿನ ಗುಡ್ಡಗಳ ಮುಂದೆ 3,688' ಎತ್ತರದ ಕಕೌಲಿಯ ಬೆಟ್ಟಗಳಿವೆ. ಮೆಲ್ಲಕೋರಿ, ಕಾಂಕೌರಿ, ರೀಯೂ ಕಪಾಟ್ಚೆಜ಼್, ರೀಯೂ ನೂನೆಜ಼್, ರೀಯೂ ಕಾಂಪಿನಿ ಅಥವಾ ಕಾಗಾನ್ ಇವು ಇಲ್ಲಿ ಹರಿಯುವ ನದಿಗಳು. 2 ಮಧ್ಯ ಗಿನಿ ಎತ್ತರ ಪ್ರದೇಶ. ಇಲ್ಲಿರುವ ಫೂಟ ಜ್ಯಾಲಾನ್ ಗುಡ್ಡಗಾಡಿನ ಸರಾಸರಿ ಎತ್ತರ 3,000' ಇದರುತ್ತರಕ್ಕೆ ಇರುವ ಲೌರ ಶಿಖರ 4,970' ಎತ್ತರವಾಗಿದೆ. ಗ್ಯಾಂಬಿಯ ನದಿ ಉಗಮಿಸುವುದು ಇದರ ಬಳಿಯಲ್ಲೆ. ಪಶ್ಚಿಮದ ಕಡೆಯ ನೆಲ ಸ್ವಲ್ಪ ತಗ್ಗು. ಇಲ್ಲಿ ಕಾಗಾನ್, ಟಾಮಿನೆ ಮತ್ತು ಫಟಾಲಾ ನದಿಗಳು ಹರಿಯುತ್ತವೆ. 3 ಈಶಾನ್ಯ ಭಾಗ ಹುಲ್ಲು ತುಂಬಿದ ಮೈದಾನ. ಅಲ್ಲಲ್ಲಿ ಕುಳ್ಳಾದ ಮರಗಳಿವೆ. ಟಿಂಕಿಸ್ಸೊ ನದಿ ಇದರ ಮೂಲಕ ಹರಿದು ಮುಂದೆ ನೈಜರ್ ನದಿಯನ್ನು ಸೇರುತ್ತದೆ. 4 ಗಿನಿಯ ದಕ್ಷಿಣ ಭಾಗ ಪ್ರಸ್ಥಭೂಮಿ ಪ್ರದೇಶ. ಬೆಣಚುಕಲ್ಲು ಮತ್ತು ಕಾಚ ಶಿಲೆಗಳ ಗುಡ್ಡಗಳಿಂದ ಕೂಡಿದ ಈ ಪ್ರದೇಶದ ಎತ್ತರ ಶಿಖರ ನಿಂಬ (6,069).
ವಾಯುಗುಣ

ಗಿನಿ ಗಣರಾಜ್ಯ ಉಷ್ಣವಲಯದಲ್ಲಿದೆ. ವರ್ಷದಲ್ಲಿ ಆರು ತಿಂಗಳು (ಜೂನ್-ಡಿಸೆಂಬರ್) ಮಳೆಗಾಲ. ಉಳಿದ ಆರು ತಿಂಗಳು ಶುಷ್ಕ ಹವೆ. ಕರಾವಳಿ ಪ್ರದೇಶದಲ್ಲಿ ಉಷ್ಣತೆಯೂ ಮಳೆಯೂ ಹೆಚ್ಚು. ಉಷ್ಣತೆ ಒಣಹವೆಯ ಕಾಲದಲ್ಲಿ 62° ಫ್ಯಾ. ನಿಂದ ಮಳೆಗಾಲದಲ್ಲಿ 80° ಫ್ಯಾ.ವರಗೆ ವ್ಯತ್ಯಾಸವಾಗುತ್ತದೆ. ಎತ್ತರವಾದ ಒಳನಾಡಿನಲ್ಲಿ ಮಳೆ ಕಡಿಮೆ. ಉಷ್ಣತೆಯೂ ಕಡಿಮೆ. ಈಶಾನ್ಯದಲ್ಲಿ ಉಷ್ಣತೆಯ ಅಂತರ ಹೆಚ್ಚು (64° ಫ್ಯಾ.-104° ಫ್ಯಾ.); ಮಳೆ ಕಡಿಮೆ
ಸಸ್ಯಪ್ರಾಣಿ ಜೀವನ
ಕರಾವಳಿಯಲ್ಲಿ ತಾಳೆ ಮರಗಳು ವಿಶೇಷ. ಮಳೆ ಕಡಿಮೆಯಿರುವಲ್ಲಿ ಹುಲ್ಲು ಹೆಚ್ಚಾಗಿ ಬೆಳೆಯುತ್ತದೆ. ಜಿಂಕೆ, ಮೊಲ, ಆನೆ, ಸಿಂಹ, ಕಾಡುಕೋಣ, ಮೊಸಳೆ, ಹಾಗೂ ನಾನಾಜಾತಿಯ ಹಾವುಗಳು ಇಲ್ಲಿವೆ.
ಕೃಷಿ, ಕೈಗಾರಿಕೆ, ಅಭಿವೃದ್ಧಿ
ಗಿನಿಯ ಶೇ.95 ಜನಕ್ಕೆ ಕೃಷಿ ಮುಖ್ಯ ಕಸಬು. ಬಾಳೆಹಣ್ಣು, ಎಣ್ಣೆ ತೆಂಗು, ಅನಾನಾಸ್, ಕಾಫಿ ಮುಖ್ಯ ನಿರ್ಯಾತ ಬೆಳೆಗಳು. ಕಬ್ಬಿಣ ಅದಿರು, ವಜ್ರ, ಬಾಕ್ಸೈಟ್ ಇವನ್ನು ಗಣಿಗಳಿಂದ ತೆಗೆದು ರಫ್ತು ಮಾಡುತ್ತಾರೆ. ಕ್ಯಾಲ್ಸಿಯಂ ಕಾರ್ಬೈಡ್ ನಿಕ್ಷೇಪಗಳು ಇಲ್ಲಿ ಹೇರಳವಾಗಿವೆ. ಹೊಗೆಸೊಪ್ಪು, ಕ್ವಿನೈನ್, ಚಹ ರಬ್ಬರ್ ಇವೂ ಬೆಳೆಯುತ್ತವೆ. ಬತ್ತ ಮಿಲೆಟ್ಗಳೂ ಮುಖ್ಯ ಬೆಳೆಗಳು. ಈಶಾನ್ಯ ಗಿನಿಯಲ್ಲಿ ದನಗಳನ್ನು ಸಾಕಿ ರಫ್ತು ಮಾಡುತ್ತಾರೆ. ಮೀನು, ಚರ್ಮ ಇನ್ನೆರಡು ಮುಖ್ಯ ರಫ್ತು ವಸ್ತುಗಳು, ಜವಳಿ, ಪೆಟ್ರೋಲಿಯಂ ಉತ್ಪನ್ನ, ಸಿಮೆಂಟ್ ಇವು ಮುಖ್ಯ ಆಮದುಗಳು.
ಸಾರಿಗೆ
ಗಿನಿಯ ರಾಜಧಾನಿ ಕಾನಕ್ರಿ , ಕಂಕನ್, ಕಿಂಡಿಯ ಇನ್ನೆರಡು ದೊಡ್ಡ ನಗರಗಳು. ಕಾನಕಿ ಗಿನಿ ಗಣರಾಜ್ಯದ ದೊಡ್ಡ ಬಂದರು. ವಿಮಾನ ನಿಲ್ದಾಣ. ಅಲ್ಲಿಂದ ಕಂಕನ್ಗೆ 657.6 ಕಿಮೀ ಉದ್ದದ ರೈಲು ಮಾರ್ಗವಿದೆ. ಗಿನಿಯಲ್ಲಿ ಸುಮಾರು 16000 ಕಿಮೀ ಉದ್ದದ ರಸ್ತೆಗಳಿವೆ. ಕಾನಕ್ರಿಯಿಂದ ಮಾಲಿಯ ರಾಜಧಾನಿಯಾದ ಬ್ಯಾಮ್ಯಾಕೋಗೆ ಸಾಗುವ ರಸ್ತೆಯ ಉದ್ದ 928 ಕಿಮೀ ಸೆನಿಗಾಲ್ನ ರಾಜಧಾನಿಯಾದ ಡಾಕಾರ್ ಮತ್ತು ಐವರಿ ಕೋಸ್ಟಿನ ರಾಜಧಾನಿ ಆಬಿಜಾನ್ ನಡುವಣ ರಸ್ತೆ ಗಿನಿಯ ಮೂಲಕ ಹಾದುಹೋಗುತ್ತದೆ.
ಭಾಷೆಗಳು
ಗಿನಿಯ ಅಧಿಕೃತ ಭಾಷೆಗಳು ಫ್ರೆಂಚ್ ಮತ್ತು ಎಂಟು ರಾಷ್ಟ್ರೀಯ ಭಾಷೆಗಳಲ್ಲಿ ಒಂದು ಸೌಸೌ ಅಥವಾ ಮಾನಿಕವನ್ನು ಅಧಿಕೃತ ಭಾಷೆಯಾಗಿ ಮಾಡಬೇಕೆಂಬ ಉದ್ದೇಶವಿದೆ. ಇಲ್ಲಿಯ ಜನರಲ್ಲಿ ಬಹು ಮಂದಿ ಮುಸ್ಲಿಮರು.
ಶಿಕ್ಷಣ
ಗಿನಿಯಲ್ಲಿ ಶಿಕ್ಷಣ ಉಚಿತ. ಪ್ರಾಥಮಿಕ, ಉಚ್ಚ ಪ್ರಾಥಮಿಕ, ದ್ವಿತೀಯಕ ಎಂಬ ಮೂರು ಹಂತಗಳಲ್ಲಿ ಶಿಕ್ಷಣ ನೀಡಲಾಗುತ್ತವೆ. 1968 ರಿಂದ ಗಿನಿಯ ಎಂಟು ರಾಷ್ಟ್ರೀಯ ಭಾಷೆಗಳನ್ನೂ ಕಲಿಸಲಾಗುತ್ತಿದೆ. ಸದ್ಯಕ್ಕೆ ಫ್ರೆಂಚ್ ಭಾಷೆ ಹೆಚ್ಚು ಪ್ರಚಾರದಲ್ಲಿದೆ. ಎಂಟು ರಾಷ್ಟ್ರೀಯ ಭಾಷೆಗಳಲ್ಲಿ ಒಂದಲ್ಲ ಒಂದು ಭಾಷೆಯನ್ನು ಪ್ರತಿಯೊಬ್ಬರೂ ಕಲಿಯುವಂತೆ ಮಾಡಿ ಫ್ರೆಂಚ್ ಭಾಷೆಯನ್ನು ಉಚ್ಚಾಟಿಸಲು 1968ರಲ್ಲಿ ದೇಶದಲ್ಲಿ ಸಾಂಸ್ಕೃತಿಕ ಕ್ರಾಂತಿಯೊಂದು ಆರಂಭವಾಯಿತು. ದೇಶದ ಅಭಿವೃದ್ಧಿಗಾಗಿ 1964ರಲ್ಲಿ ಏಳು ವರ್ಷಗಳ ಆರ್ಥಿಕಾಭಿವೃದ್ಧಿ ಯೋಜನೆ ಜಾರಿಗೆಬಂತು. ಸರ್ಕಾರ ರಾಷ್ಟ್ರೀಕರಣ ನೀತಿ ಅನುಸರಿಸುತ್ತಿದೆ. ವ್ಯಾಪಾರ ಕೈಗಾರಿಕೆಗಳನ್ನು ಸರ್ಕಾರ ನಿಯಂತ್ರಿಸುವ ಕ್ರಮ ಕೈಗೊಂಡಿದೆ.
ಪ್ರವಾಸೋದ್ಯಮ
ಗಿನಿಯ ನಿಸರ್ಗ ಸೌಂದರ್ಯ ಅನೇಕ ಪ್ರವಾಸಿಗಳನ್ನು ಆಕರ್ಷಿಸಿದೆ. ಫೂಟ ಜ್ಯಾಲಾನ್ ಬೆಟ್ಟಪ್ರದೇಶ ತುಂಬ ಸುಂದರವಾಗಿದೆ. ಗಿನಿಯಲ್ಲಿ ರಾಷ್ಟ್ರೀಯ ರಂಗಮಂದಿರವಿದೆ. ಆಫ್ರಿಕನ್ ನೃತ್ಯಕ್ಕೆ ವಿಶೇಷ ಪ್ರೋತ್ಸಾಹವುಂಟು. ಗಿನಿಯ ರಾಷ್ಟ್ರೀಯ ವಾದ್ಯಮೇಳಕ್ಕೆ ಸಂಪೂರ್ಣ ಆಫ್ರಿಕನ್ ವಾದ್ಯಗಳನ್ನು ಅಳವಡಿಸಲಾಗಿದೆ. ಫುಟ್ಬಾಲ್ ಗಿನಿಯ ಅತ್ಯಂತ ಜನಪ್ರಿಯ ಆಟ. ಗಿನಿಯನ್ ಫ್ರಾಂಕ್ ಇಲ್ಲಿಯ ನಾಣ್ಯ.
ಆಡಳಿತ
ಗಿನಿ ಅಧ್ಯಕ್ಷಪ್ರರೂಪಿ ಗಣರಾಜ್ಯ. ಅಧ್ಯಕ್ಷನನ್ನು ಅಲ್ಲಿಯ ರಾಷ್ಟ್ರೀಯ ಸಭೆ ಏಳು ವರ್ಷಗಳಿಗೊಮ್ಮೆ ಆಯ್ಕೆ ಮಾಡುತ್ತವೆ. ರಾಷ್ಟ್ರೀಯ ಸಭೆಯ ಸದಸ್ಯರ ಸಂಖ್ಯೆ 60. ಇವರ ಚುನಾವಣೆ ನಡೆಯುವುದು ಐದು ವರ್ಷಗಳಿಗೊಮ್ಮೆ. ಅಧ್ಯಕ್ಷ ಮಂತ್ರಿಸಂಪುಟದ ಮೂಲಕ ಆಡಳಿತ ನಡೆಸುತ್ತಾನೆ. ದೇಶವನ್ನು ಆಡಳಿತ ಸೌಕರ್ಯಕ್ಕಾಗಿ 26 ವಿಭಾಗಗಳಾಗಿ ವಿಂಗಡಿಸಲಾಗಿದೆ.
ಇತಿಹಾಸ
ಈ ಪ್ರದೇಶದ ಅನೇಕ ಸ್ಥಳಗಳಲ್ಲಿ ಶಿರೋಕರಣಗಳು ಸಿಕ್ಕಿರುವುದರಿಂದ ಪ್ರಾಗಿತಿಹಾಸಕಾಲದಲ್ಲಿ ಜನರು ಇಲ್ಲಿ ವಾಸಿಸುತ್ತಿದ್ದರೆಂದು ತಿಳಿಯಬಹುದು. ಸುಮಾರು ಪ್ರ.ಶ.ಪು. 2000ದಿಂದ ಸಹರ ಪ್ರದೇಶದ ಜನರು ಇಲ್ಲಿಗೆ ವಲಸೆ ಬಂದಿರಬಹುದು. ಮೊದಲ ನಿವಾಸಿಗಳು ಬೇಟೆಯಾಡುವುದು ಮತ್ತು ಅರಣ್ಯ ಫಲಗಳನ್ನು ಶೇಖರಿಸುತ್ತಿದ್ದರು. ಪ್ರ.ಶ.ಪು. 1000ರಲ್ಲಿ ಜನರು ಪಶುಪಾಲನೆ ಮತ್ತು ವ್ಯವಸಾಯವನ್ನು ಪ್ರಾರಂಭಿಸಿದರು.
ಗಿನಿಯ ಕೆಲವು ಭಾಗ ಪ್ರ.ಶ. 1000 ದಿಂದ 1500ರವರೆಗೆ ಅನೇಕ ಸಾಮ್ರಾಜ್ಯಗಳ ವಶದಲ್ಲಿತ್ತು. ಗಿನಿಯಲ್ಲಿ ಮೇಲಣ ಪ್ರದೇಶ ಚಿನ್ನ ದೊರಕುವುದು 1000ರಲ್ಲಿ ಗಿನಿಯು ಘಾನ ಸಾಮ್ರಾಜ್ಯದ ಪ್ರಭಾವಕ್ಕೆ ಒಳಪಟ್ಟಿತ್ತು. ಈ ಪ್ರದೇಶದಲ್ಲಿ 1200ರಿಂದ 1500ರವರೆಗೆ ಮಲಿಂಕೆ ಜನರಿಂದ ಸ್ಥಾಪಿತವಾದ ಮಾಲಿ ಸಾಮ್ರಾಜ್ಯ ಬಹಳ ಬಲಿಷ್ಠವಾಗಿತ್ತು. ಇಲ್ಲಿಗೆ 1300 ರಿಂದ 1700ರ ವರೆಗೆ ಉತ್ತರದಿಂದ ಫುಲನಿಗಳು ವಲಸೆ ಬಂದರು. ಇವರಲ್ಲಿ ಮುಸ್ಲಿಂ ಫುಲನಿ ಅಧಿಕ ಸಂಖ್ಯೆಯಲ್ಲಿದ್ದರು. 1700ರ ಮೊದಲಲ್ಲಿ ಮುಸ್ಲಿಂ ಫುಲನಿ ಮತ್ತು ಮಲಿಂಕೆ ಮತ್ತು ಮುಸ್ಲಿಂ ಅಲ್ಲದ ಫುಲನಿ ಮತ್ತು ಮಲಿಂಕೆ ಜನರ ನಡುವೆ ಧರ್ಮಯುದ್ಧ ನಡೆದು ಮುಸ್ಲಿಂ ಫುಲನಿ ಮಲಿಂಕೆ ಜನರು ಫೌಂಟ್ ಡ್ಜಿಲ್ಲೊನ್ ಮೇಲೆ ಹಿಡಿತ ಸಾಧಿಸಿದರು.
ಗಿನಿಯ ತೀರವನ್ನು ಮೊದಲು ಕಂಡ ಐರೋಪ್ಯರು ಪೋರ್ಚುಗೀಸರು (15ನೆಯ ಶತಮಾನ). ಫ್ರೆಂಚ್ ಪರಿಶೋಧಕ ರೇನೇ ಎ. ಕೈಲಿ 1827ರಲ್ಲಿ ಈ ದೇಶದಲ್ಲಿ ಸಂಚರಿಸಿದ. 1838ರಿಂದ ಅನೇಕ ಫ್ರೆಂಚ್ ನಾವಿಕರು ಇದರ ಕರಾವಳಿಯ ಸರ್ವೇಕ್ಷಣ ನಡೆಸಿ ಕ್ರಮವಾಗಿ ಇದನ್ನು ಆಕ್ರಮಿಸಿಕೊಂಡರು. ಫ್ಯೂಟ ಜ್ಯಾಲಾನ್ನ ಅಮೀರ 1881ರಲ್ಲಿ ಫ್ರೆಂಚ್ ರಕ್ಷಣೆಗೆ ಒಳಪಟ್ಟ. 1890ರಲ್ಲಿ ಗಿನಿ ಪ್ರದೇಶವನ್ನು ಸೆನಿಗಾಲ್ನಿಂದ ಪ್ರತ್ಯೇಕಿಸಲಾಯಿತು. ಇದಕ್ಕೆ ಫ್ರೆಂಚ್ ಗಿನಿ ಎಂಬ ಹೆಸರು ಬಂದದ್ದು ಅನಂತರ. 1895ರಲ್ಲಿ ಇದು ಫ್ರೆಂಚ್ ಪಶ್ಚಿಮ ಆಫ್ರಿಕ ಒಕ್ಕೂಟದ ಭಾಗವಾಯಿತು. ಕ್ರಮೇಣ ಅಕ್ಕಪಕ್ಕದ ಪ್ರದೇಶಗಳನ್ನು ಸೇರಿಸಿ ಇದನ್ನು ವಿಸ್ತರಿಸಲಾಯಿತು.

ಮಲಿಂಕೆಯ ಬಲಿಷ್ಠನಾಯಕ ಸಮೊರಿತೌರಿ (ಟೌರೆ) ಫ್ರೆಂಚ್ರ ಆಳಿಕೆಯನ್ನು ವಿರೋಧಿಸಿದ. ಆದರೆ ಹೋರಾಟದಲ್ಲಿ ಸೋತು 1898ರಲ್ಲಿ ಸೆರೆಯಾದ. ಗಿನಿಯನ್ನು ಫ್ರೆಂಚ್ ಸಾಗರಾಂತರ ಪ್ರದೇಶವೆಂದು ಕರೆದು ಅದರ ಪ್ರಜೆಗಳನ್ನು ಫ್ರಾನ್ಸಿನ ಪ್ರಜೆಗಳೆಂದು ಪರಿಗಣಿಸಲಾದ್ದು 1946ರಲ್ಲಿ. 2ನೆಯ ಮಹಾಯುದ್ಧ ಮುಗಿದ ಅನಂತರ ಗಿನಿಯಲ್ಲಿ ರಾಜಕೀಯ ಪಕ್ಷಗಳು ಮತ್ತು ಕಾರ್ಮಿಕ ಸಂಘಗಳು ಜಾಗ್ರತವಾದುವು. ಗಿನಿ ಪ್ರಜಾಪ್ರಭುತ್ವ ಪಕ್ಷ (ಪಿಡಿಜಿ)ವು 1947ರಲ್ಲಿ ಪ್ರಾರಂಭವಾಯಿತು. ಸಿಕೌತೌರೆ 1952ರಲ್ಲಿ ಆ ಪಕ್ಷದ ನಾಯಕನಾದ. ಗಿನಿಯಲ್ಲಿ 1957ರಲ್ಲಿ ಮತದಾನ ನಡೆದು 1958ರ ಸೆಪ್ಟೆಂಬರ್ 28ರಂದು ಫ್ರಾನ್ಸ್‌ನಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯಿತು. 1958ರ ಅಕ್ಟೋಬರ್ 2 ರಂದು ತೌರೆ ಗಿನಿಯ ಮೊದಲ ಅಧ್ಯಕ್ಷನಾದ. ನವೆಂಬರ್ 12ರಂದು ಸಂವಿಧಾನ ಸರ್ಕಾರ ಪ್ರಾರಂಭವಾಯಿತು. ಆಗ ಪಿ.ಡಿ.ಜಿ ಒಂದೇ ರಾಜಕೀಯ ಪಕ್ಷವಾಯಿತು.
ಗಿನಿಯ ಸಂಪೂರ್ಣ ವಾಣಿಜ್ಯ, ಕೈಗಾರಿಕೆಗಳ ಮೇಲೆ ಹಿಡಿತ ಸಾಧಿಸಿ ಸಮಾಜವಾದಿ ರಾಷ್ಟ್ರವಾಗಿ ಮಾಡಲು ಅಧ್ಯಕ್ಷ ಪ್ರಯತ್ನ ಪಟ್ಟನು. ಆಫ್ರಿಕ ಖಂಡದಲ್ಲಿ ಸ್ವಾತಂತ್ರ್ಯ ಪಡೆದ ದೇಶಗಳ ಮತ್ತು ಸಮಾಜವಾದಿ ರಾಷ್ಟ್ರಗಳೊಡನೆ ಹೊಂದಾಣಿಕೆಯಿಂದ ಒಗ್ಗಟ್ಟಾಗಿ ಇರಲು ಪ್ರಯತ್ನಪಟ್ಟನು. ಆದರೆ ಅನೇಕ ಸಮಸ್ಯೆಗಳು ಎದುರಿಸಬೇಕಾಯಿತು. ನೈಸರ್ಗಿಕ ಸಂಪನ್ಮೂಲಗಳಿಂದ ರಾಷ್ಟ್ರವನ್ನು ಅಭಿವೃದ್ಧಿ ಪಡಿಸುವಲ್ಲಿ ಸರ್ಕಾರ ವಿಫಲವಾಯಿತು. ಅಧಿಕ ಜನರು ಬಡವರಾಗಿಯೇ ಉಳಿದರು. 1960ರ ದಶಕ ಮತ್ತು 1970ರ ದಶಕದ ಮೊದಲಲ್ಲಿ ಅಧ್ಯಕ್ಷನ ಕಾರ್ಯ ನೀತಿಗೆ ವಿರೋಧ ವ್ಯಕ್ತವಾಯಿತು. ಅಧ್ಯಕ್ಷ ತೌರೆ ತನ್ನ ಸರ್ಕಾರದ ವಿರೋಧಿಗಳನ್ನು ಮತ್ತು ವಿರೋಧಿಸುವ ಪ್ರಜೆಗಳನ್ನು ಕಾರಣವಿಲ್ಲದೆ ಬಂಧಿಸಿದನು.
.jpg)
ಅಧ್ಯಕ್ಷ ತೌರೆ 1984ರ ಮಾರ್ಚ್ 26ರಂದು ನಿಧನವಾದ. ಏಪ್ರಿಲ್ ಮೊದಲವಾರದಲ್ಲಿ ಸೈನ್ಯದ ನಾಯಕರು ಸರ್ಕಾರವನ್ನು ಹತೋಟಿಗೆ ತೆಗೆದುಕೊಂಡು ಸಂವಿಧಾನವನ್ನು ತಡೆಹಿಡಿದು ಪಿಡಿಜಿ ಪಕ್ಷವನ್ನು ವಿಸರ್ಜಿಸಿದರು. ಸೈನ್ಯ ಮಂಡಲಿಯ ನಾಯಕ ಕರ್ನಲ್ ಲಂಸನ ಕಾಂಟೆ ಅಧ್ಯಕ್ಷನಾದ. ಇವನ ಸರ್ಕಾರ ಸಮಾಜವಾದವನ್ನು ನಿಷೇಧಿಸಿ ಮುಕ್ತ ವ್ಯಾಪಾರನಿಯಮಗಳನ್ನು ಪ್ರಾರಂಭಿಸಿ, ಫ್ರಾನ್ಸ್ ಮತ್ತು ಇತರ ದೇಶಗಳೊಡನೆ ಉತ್ತಮ ಸಂಬಂಧ ಪ್ರಾರಂಭಿಸಿದ 1990ರಲ್ಲಿ ಜನರು ಅನೇಕ ಪಕ್ಷಗಳ ನಾಗರಿಕ ಆಳಿಕೆಯ ಸಂವಿಧಾನವನ್ನು ಒಪ್ಪಿಕೊಂಡರು. 1993ರಲ್ಲಿ ಇಲ್ಲಿಯ ಮತದಾರರು ಕಾಂಟೆಯನ್ನು ಅಧ್ಯಕ್ಷನಾಗಿ ಚುನಾಯಿಸಿದರು. 1995ರಲ್ಲಿ ಕಾಂಟೆಯ ಪಾರ್ಟಿ ಆಫ್ ಯೂನಿಟಿ ಪಕ್ಷ ಬಹುಮತ ಪಡೆಯಿತು. 1998ರಲ್ಲಿ ಕಾಂಟೆಯನ್ನು ಮತ್ತೆ ಅಧ್ಯಕ್ಷನಾಗಿ ಚುನಾಯಿಸಿದರು.
ಉಲ್ಲೇಖಗಳು
ಬಾಹ್ಯ ಸಂಪರ್ಕಗಳು
- http://www.africaguinee.com
- ಅಧಿಕೃತ ಜಾಲತಾಣ (French)
- Le Jour Guinée (French)
- Guinea entry at The World Factbook
- wikiGuinée
- Official
- Guinea from UCB Libraries GovPubs
- ಗಿನಿ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- Guinea profile from the BBC News
Wikimedia Atlas of Guinea- The State of the World's Midwifery – Guinea Country Profile
- 'Media and Telecommunication Lansdcape in Guinea', a 'infoasaid' guide, April 2011, 69 pp.
- Key Development Forecasts for Guinea from International Futures
- CHAMBRE DE COMMERCE, D'INDUSTRIE ET D'ARTISANAT DE GUINÉE Allemagne (CCIAGA)
- Trade