ಪು.ತಿ.ನರಸಿಂಹಾಚಾರ್
ಪು.ತಿ. ನರಸಿಂಹಾಚಾರ್ - ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ, ಗೀತನಾಟಕಕಾರರು.ಪು.ತಿ.ನರಸಿಂಹಾಚಾರ್ ಅವರದು ಕನ್ನಡ ಸಾಹಿತ್ಯದಲ್ಲಿ ಬಲು ದೊಡ್ಡ ಹೆಸರು. ಜೀವನ ಹಾಗೂ ಸಾಹಿತ್ಯದಲ್ಲಿ ತುಂಬೊಲವನ್ನು ಹರಿಸಿದ, ಬದುಕು ಭಗವಂತನ ಕೃಪೆಯಿಂದ ಆದುದು ಎಂದು ಭಾವಿಸಿದ ಕವಿ. ನವೋದಯ ಸಾಹಿತ್ಯದ ಮೊದಲ ತಲೆಮಾರು ಕಂಡ ಹಲವು ಹಿರಿಯ ಕವಿಗಳ ಸಾಲಿಗೆ ಸೇರಿದ ಹಿರಿದಾದ ಚೇತನ. ಬಿ.ಎಂ.ಶ್ರೀ, ಬೇಂದ್ರೆ, ಕುವೆಂಪು, ಕೆ.ಎಸ್. ನರಸಿಂಹಸ್ವಾಮಿಯಂತಹ ಹಿರಿಯ ಕವಿಗಳ ಗುಂಪಿನಲ್ಲಿ ಇದ್ದವರು.
ಪುರೋಹಿತ ತಿರುನಾರಾಯಣಾಚಾರ್ಯ ನರಸಿಂಹಾಚಾರ್ P. T. Narasimhachar (Pu Ti Na) | |
---|---|
![]() | |
ಜನನ | 17 ಮಾರ್ಚ್ 1905 ಮೇಲುಕೋಟೆ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ, ಕರ್ನಾಟಕ |
ಮರಣ | 23 ಅಕ್ಟೋಬರ್ 1998 ಬೆಂಗಳೂರು, ಕರ್ನಾಟಕ | (ವಯಸ್ಸು 93)
ಕಾವ್ಯನಾಮ | ಪು.ತಿ.ನ |
ವೃತ್ತಿ | ಬರಹಗಾರ, ಕವಿ |
ರಾಷ್ಟ್ರೀಯತೆ | ಭಾರತ |
ಪ್ರಕಾರ/ಶೈಲಿ | ಫಿಕ್ಷನ್ |
ಸಾಹಿತ್ಯ ಚಳುವಳಿ | ಕನ್ನಡ: ನವೋದಯ ಸಾಹಿತ್ಯ. |

ಪುತಿನ ಮನೆ

ಪುತಿನ ಮನೆ
ಜೀವನ
- ಪು.ತಿ.ನ. ಎಂಬುದು ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಎಂಬ ಹೆಸರಿನ ಸಂಕ್ಷಿಪ್ತ ರೂಪ [ಹೆಸರು]. ಇವರ ತಂದೆ ವೃತ್ತಿಯಿಂದ ವೈದಿಕರಾಗಿದ್ದವರು. ಮೇಲುಕೋಟೆಯಲ್ಲಿ ೧೯೦೫ ಮಾರ್ಚ್ ೧೭ರಂದು ಜನಿಸಿದ ಇವರ ಮೇಲೆ ಅಲ್ಲಿನ ಆಧ್ಯಾತ್ಮಿಕ ಪರಿಸರ ವೈಯಕ್ತಿಕವಾಗಿ ಹಾಗೂ ಸಾಹಿತ್ಯ ಬದುಕಿನಲ್ಲಿ ಸಾಕಷ್ಟು ಪರಿಣಾಮ ಬೀರಿದೆ. ಪ್ರಕೃತಿ ಮತ್ತು ಪ್ರಕೃತಿಯಲ್ಲಿ ದೈವತ್ವದ ಹುಡುಕಾಟ ಅವರ ಕಾವ್ಯದ ಮೂಲಭೂತ ಅಂಶವಾಗಿದೆ.
- ಪು.ತಿ.ನ. ಅವರ ಬಾಲ್ಯ ಅರಳಿದ್ದು ತಂದೆಯ ಊರಾದ ಮೇಲುಕೋಟೆ ಹಾಗೂ ತಾಯಿಯ ಊರಾದ ಗೊರೂರು ನಡುವೆ. ಮುಂದೆ ವಯಸ್ಕರಾದಾಗ ಹೆಂಡತಿಯ ಊರಾದ ಹೆಮ್ಮಿಗೆ, ಓದಿನ ಊರಾದ ಮೈಸೂರು, ವೃತ್ತಿನಗರವಾದ ಬೆಂಗಳೂರು, ಮಲ್ಲೇಶ್ವರಗಳ ನಡುವೆ ಅವರ ಮನಸ್ಸು ಸುಳಿದಾಡಿದೆ. ತಂದೆಯವರು ವೃತ್ತಿಯಿಂದ ವೈದಿಕರಾದರೂ ಜೀವನ ನಿರ್ವಹಣೆ ದುರ್ಬರವೆನಿಸಿದ ಕಾರಣ ಹಾಗೂ ಪು.ತಿ.ನ. ಅವರ ಪ್ರಕೃತಿಗೆ ಒಗ್ಗದಿದ್ದ ಕಾರಣದಿಂದ ಮೈಸೂರನ್ನು ಸೇರಿ ವಿದ್ಯಾಭ್ಯಾಸಕ್ಕೆ ತೊಡಗಿದರು.
- ಮೂಲತಃ ಗ್ರಾಮ್ಯ ತಮಿಳನ್ನು ಆಡುತ್ತಿದ್ದು ಮೈಸೂರಲ್ಲಿ ಆಂಗ್ಲಭಾಷೆ ಮತ್ತು ಕನ್ನಡ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದರು. ಅಲ್ಲಿ ಗುರು ಹಿರಿಯಣ್ಣ, ಆತ್ಮೀಯ ಮಿತ್ರರಾದ ಶಿವರಾಮ ಶಾಸ್ತ್ರಿ ಹಾಗೂ ತೀ.ನಂ. ಶ್ರೀಕಂಠಯ್ಯನವರ ಸಂಪರ್ಕ ಒದಗಿ ಬಂತು. ನಂತರ ಬೆಂಗಳೂರಿನಲ್ಲಿ ಸೈನ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಫಿರಂಗಿಯವರ (ಇಂಗ್ಲೀಷರ) ನೇರ ಕೈಕೆಳಗೆ ಕೆಲಸ ಮಾಡುವ ಸಂದರ್ಭ ಒದಗಿತು. ಸೈನ್ಯದ ಮುಖಂಡರು ಚೆನ್ನಾಗಿ ನಡೆಸಿಕೊಂಡ ಕಾರಣ ಪು.ತಿ.ನ.ರವರ ರೀತಿನೀತಿಗಳು ಬದಲಾಗದೆ ನೆಮ್ಮದಿಯಾಗಿ ಕೃತಿರಚನೆ ಮಾಡಲು ಸಾಧ್ಯವಾಯಿತು.
ಕೃತಿಗಳು
ಪು.ತಿ.ನ. ಅವರು ಒಟ್ಟು ಹನ್ನೊಂದು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವುಗಳು ಕ್ರಮವಾಗಿ -
ಕವನ ಸಂಕಲನಗಳು
- ಹಣತೆ,
- ಮಾಂದಳಿರು,
- ಶಾರದ ಯಾಮಿನಿ,
- ಗಣೇಶ ದರ್ಶನ,
- ರಸ ಸರಸ್ವತಿ,
- ಮಲೆ ದೇಗುಲ,
- ಹೃದಯ ವಿಹಾರಿ,
- ಇರುಳು ಮೆರುಗು,
- ಹಳೆಯ ಬೇರು ಹೊಸ ಚಿಗುರು,
- ಎಂಬತ್ತರ ನಲುಗು.
- ರಥಸಪ್ತಮಿ.
- ನಿರೀಕ್ಷೆ.
- ಹಣತೆಯ ಹಾಡು. `ಹಣತೆ'ಯಿಂದ ಆರಂಭವಾದ ಅವರ ಕಾವ್ಯ ಜೀವನ `ಹಣತೆಯ ಹಾಡು' ಕವನ ಸಂಕಲನದೊಂದಿಗೇ ಕೊನೆಗೊಂಡಿದ್ದು ವಿಪರ್ಯಾಸದ ಸಂಗತಿಯಾಗಿದೆ.
ಗೀತನಾಟಕಗಳು
ಪು.ತಿ.ನ. ಅವರು ಕವಿ ಮಾತ್ರವಲ್ಲದೆ ಉತ್ತಮ ಗೀತನಾಟಕಕಾರರೂ ಆಗಿದ್ದಾರೆ. ಅವರ ಒಂಬತ್ತು ಗೀತನಾಟಕಗಳಲ್ಲಿ ಗೀತರೂಪಕಗಳೂ ಸೇರಿವೆ. ಅವುಗಳು ಕ್ರಮವಾಗಿ -
- ಗೋಕುಲ ನಿರ್ಗಮನ,
- ಶ್ರೀಹರಿಚರಿತೆ,
- ಅಹಲ್ಯೆ,
- ಸತ್ಯಾಯನ ಹರಿಶ್ಚಂದ್ರ,
- ವಿಕಟಕವಿ ವಿಜಯ,
- ಶಬರಿ,
- ಹಂಸದಮಯಂತಿ,
- ಹರಿಣಾಭಿಸರಣ,
- ದೀಪಲಕ್ಷ್ಮಿ .
- ಶ್ರೀಹರಿಚರಿತೆ
- ಈ ನಾಟಕಗಳಲ್ಲಿ ಗೋಕುಲ ನಿರ್ಗಮನ, ಅಹಲ್ಯೆ, ಬಿ.ವಿ. ಕಾರಂತರ ಪ್ರಯತ್ನದಿಂದ ರಂಗಪ್ರಯೋಗ ಕಂಡಿವೆ. ಉದ್ಯಾವರ ಮಾಧವ ಆಚಾರ್ಯ ಹೇಳುವಂತೆ ಹರಿಣಾಭಿಸರಣ ಹಾಗೂ ಸತ್ಯಾಯನ ಹರಿಶ್ಚಂದ್ರ ನಾಟಕಗಳು ರಂಗ ಪ್ರಯೋಗ ಕಂಡಿವೆ. ಗೋಕುಲ ನಿರ್ಗಮನ ಅವರ ಹೆಸರಾಂತ ನಾಟಕವಾಗಿದ್ದು ಪ್ರಣಯಿಯೂ, ಸಂಗೀತಗಾರನೂ ಆಗಿರುವ ಕೃಷ್ಣ ಮುಂದೆ ಕೊಳಲನ್ನು ಬಿಸುಟು ಬೇರೆಯದೇ ಹಾದಿ ಹಿಡಿಯುವ ಸೂಚನೆ ಸಿಗುತ್ತದೆ. ಮುಂದೆ ಮಹಾಭಾರತ, ಮಧುರೆ, ದ್ವಾರಕೆಯಲ್ಲೆಲ್ಲೂ ಕೃಷ್ಣ ಕೊಳಲನ್ನು ಹಿಡಿಯುವುದಿಲ್ಲ.
- ಶ್ರೀಹರಿಚರಿತೆ ಆಧುನಿಕ ಯುಗದಲ್ಲಿ ಕೃಷ್ಣನ ಕಲ್ಪನೆಯನ್ನು ಸಾಕ್ಷಾತ್ಕರಿಸುವ ಪ್ರಯತ್ನವಾಗಿದೆ. ಇಂತಹ ಪೌರಾಣಿಕ ಸಂಗೀತಮಯ ನಾಟಕಗಳ ರಚನೆಗೆ ಪ್ರೇರಣೆ ಸಿಕ್ಕಿದ್ದು ಹರಿಕಥೆಗಳು, ಅರಮನೆ ನಾಟಕ ಕಂಪೆನಿಗಳಲ್ಲಿದ್ದ ಒಳ್ಳೆಯ ಸಂಗೀತಗಾರರು ಮತ್ತು ಅವರ ಪಾತ್ರ ನಿರ್ವಹಣೆ, ಮಾರ್ಷ್ ಶಿವಿಲಿಯರ್‌ನ `Spring time in Paris' ಎಂಬ ಆಧುನಿಕ ಅಪೆರಾ, ತಮಿಳಿನಲ್ಲಿ `ವಲ್ಲಿ ಪರಿಣಯ' ಎನ್ನುವ ಹಾಡುಗಳಿಂದಲೇ ನಿರ್ವಹಿಸಲ್ಪಟ್ಟ ನಾಟಕ ಹಾಗೂ ಕಂಪೆನಿ ನಾಟಕಗಳಿಂದ.
- ಅವರೊಬ್ಬ ಗೀತರೂಪಕ ನಾಟಕಕಾರರಾಗುವುದಕ್ಕೆ ಕಾರಣ ಕಾವ್ಯ ಮತ್ತು ಸಂಗೀತ ಮೇಳೈಸಿಕೊಂಡ ಕನ್ನಡದ ಏಕೈಕ ರಚನಕಾರರಾಗಿದ್ದುದು. ಸಂಗೀತಕ್ಕೆ ಪು.ತಿ.ನ.ರವರು ಹಲವು ಹೊಸ ರಾಗಗಳನ್ನು ಕಂಡುಹಿಡಿಯುವುದರ ಮೂಲಕ ಕೊಡುಗೆ ಸಲ್ಲಿಸಿದ್ದಾರೆ ಎಂದು ಡಾ| ದೊರೆಸ್ವಾಮಿ ಅಯ್ಯಂಗಾರರು ಮೆಚ್ಚಿಗೆ ಮಾತನ್ನಾಡಿದ್ದಾರೆ. ಅವುಗಳಲ್ಲಿ ಮುಖ್ಯವಾದವು ವಾಸಂತಿ, ಸಂಜೀವಿನಿ, ಹರಿಣಿ, ಋತುವಿಲಾಸ, ಗಾಂಧಾರದೋಲ, ಋಷಭ ವಿಲಾಸ ಮತ್ತು ಇನ್ನೂ ನಾಮಕರಣವಾಗದ ಹಲವಾರು ರಾಗಗಳು ಸಾಕಷ್ಟಿವೆ. ಪು.ತಿ.ನ.ರವರು ಒಳ್ಳೆಯ ಗದ್ಯ ಬರಹಗಾರರೂ ಆಗಿದ್ದರು ಎಂಬುದಕ್ಕೆ ಅವರ ಐದು ಪ್ರಬಂಧ ಸಂಕಲನಗಳು ಸಾಕ್ಷಿಯಾಗಿವೆ.
ಗದ್ಯಚಿತ್ರಗಳು
- ರಾಮಾಚಾರಿಯ ನೆನಪು,
- ಈಚಲು ಮರದ ಕೆಳಗೆ,
- ಗೋಕುಲಾಷ್ಟಮಿ,
- ಭೀತಿ ಮೀಮಾಂಸೆ,
- ಧೇನುಕೋಪಾಖ್ಯಾನ,
- ಮಸಾಲೆದೋಸೆ, ಪ್ರಬಂಧಗಳು ಅವರ ಹಾಸ್ಯ ಪ್ರಸನ್ನತೆ, ಮಾತುಗಾರಿಕೆಯಿಂದ ಕೂಡಿವೆ.
ಅನುವಾದಗಳು
- ಬದಲಿಸಿದ ತಲೆಗಳು,
- ಮಹಾಪ್ರಸ್ಥಾನ,
- ಕನ್ನಡ ಭಗವದ್ಗೀತೆ,
ಕಾವ್ಯಮೀಮಾಂಸೆ/ವಿಮರ್ಶೆ
- ಕಾವ್ಯ ಕುತೂಹಲ.
- ರಸಪ್ರಜ್ಞೆ.
ಪ್ರಶಸ್ತಿ ಮತ್ತು ಪುರಸ್ಕಾರಗಳು
ಕವಿತೆಯ ಹಾಗೆ ಸರಳ, ಪ್ರಾಮಾಣಿಕ ಮನಸ್ಥಿತಿಯುಳ್ಳ ಹಿರಿಯ ಕವಿ ಪು.ತಿ.ನ.ರವರಿಗೆ ಸಂದ ಪ್ರಶಸ್ತಿಗಳು ಹಲವಾರು.
- ಇವರ "ಹಂಸ ದಮಯಂತಿ ಮತ್ತು ಇತರ ರೂಪಕಗಳು" ಎಂಬ ಕೃತಿಗೆ ೧೯೬೬ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
- ಹಾಗೆಯೇ ಇವರ "ಗೋಕುಲ ನಿರ್ಗಮನ" ಎಂಬ ಸಂಗೀತ ಪ್ರಧಾನ ನಾಟಕ ಕನ್ನಡದ ಮೇರು ಕೃತಿಗಳ ಸಾಲಿಗೆ ಸೇರುತ್ತದೆ. ಈ ಕಾವ್ಯಮಯ ನಾಟಕದಲ್ಲಿ, ಕೃಷ್ಣನಿಗೆ ಕಂಸನಿಂದ ಆಹ್ವಾನ ಬಂದು ಗೋಕುಲದಿಂದ ದ್ವಾರಕೆಗೆ ಹೋಗಬೇಕಾಗಿ ಬಂದಾಗ, ಗೋಕುಲದ ಜನರ ಅನುರಾಗ, ರಾಧೆಯ ವ್ಯಾಕುಲತೆ ಮುಂತಾದವುಗಳನ್ನು ದಿವ್ಯವಾಗಿ ನಿರೂಪಿಸಿದ್ದಾರೆ.
- ಪದ್ಮಶ್ರೀ,
- ಪಂಪಪ್ರಶಸ್ತಿ,
- ನಾಡೋಜ ಪ್ರಶಸ್ತಿ,
- ಮೈಸೂರು ವಿಶ್ವವಿದ್ಯಾಲಯದ ಡಿ.ಲಿಟ್,
- ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ,
- ರಾಜ್ಯೋತ್ಸವ ಪ್ರಶಸ್ತಿ,
- ಜೊತೆಗೆ ಚಿಕ್ಕಮಗಳೂರಿನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಅವರಿಗೆ ದೊರೆಯದಿದ್ದ ಪ್ರಶಸ್ತಿ ಎಂದರೆ "ಭಾರತೀಯ ಜ್ಞಾನಪೀಠ ಪ್ರಶಸ್ತಿ" ಮಾತ್ರ! ಇದಕ್ಕಿಂತ ಮಿಗಿಲಾಗಿ ಒಳ್ಳೆಯ ಹಿರಿಯ ಸ್ನೇಹಿತರೂ, ಅಭಿಮಾನಿ ಕಿರಿಯ ಸ್ನೇಹಿತರನ್ನೂ ಹಾಗೂ ಸಹೃದಯಿಗಳ ಮೆಚ್ಚಿಗೆಯನ್ನು ಪಡೆದವರಾಗಿದ್ದಾರೆ. ಅವರು ಗತಿಸಿದಾಗ ಅವರಿಗೆ ತೊಂಬತ್ಮೂರರ ವಯಸ್ಸು.
ಕವಿ ಪುತಿನ ಅವರ ಶತಮಾನದ ಮನೆ
- ಪುತಿನ ಮನೆ ಸ್ಮಾರಕವಾಗಿದ್ದು ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ಅಂದರೆ, ಪುತಿನ ಬದುಕಿದ್ದ ಕಾಲದಲ್ಲೇ. ಕವಿಯ ಆಶಯವೂ ಅದೇ ಆಗಿತ್ತು; 'ನಾನು ಬದುಕಿರುವಾಗಲೇ ಬಾಳಿ, ಬದುಕಿದ ನನ್ನ ಮನೆ ಸ್ಮಾರಕವಾಗಬೇಕು. ನಾನು ಬರೆದ ಸಾಹಿತ್ಯ ನಿಂತ ನೀರಾ ಗದೆ, ನನ್ನ ಸಾವಿನಾಚೆಯೂ ಮುಂದಿನ ಪೀಳಿಗೆಯನ್ನು ತಲುಪುವಂತಾಗಬೇಕು'. 1996ರಲ್ಲಿ ಈ ಮನೆ ಸ್ಮಾರಕವಾಗಿ, ಸರ್ಕಾರದ ತೆಕ್ಕೆ ಸೇರಿತು.
- 1998ರಲ್ಲಿ ಕವಿ ವಿಧಿವಶರಾದ ನಂತರ ಟ್ರಸ್ಟ್‌ನವರು ಕವಿಯ ಬಯಕೆಯಂತೆ ಮನೆಯ ಮೂಲ ರೂಪವನ್ನು ಬದಲಿಸದೇ 2000ನೇ ಇಸ್ವಿಯಲ್ಲಿ ಪ್ರಾಚ್ಯವಸ್ತು ಇಲಾಖೆಗೆ ಗುತ್ತಿಗೆ ನೀಡಿ (10 ಲಕ್ಷ ರು.), ಹೊಸ ರೂಪ ಕೊಡಲು ಮುಂದಾದರು. ಶತಮಾನದ ಅಂಚಿನಲ್ಲಿದ್ದ ಮನೆಯ ಹಳೇ ಕಂಬಗಳು, ಮಹಡಿಯ ಮೆಟ್ಟಿಲುಗಳು, ಹೆಂಚುಗಳನ್ನು ಬಳಸಿಕೊಂಡೇ ಮೂಲ ಮನೆಯ ಅಂದ, ಚಂದಕ್ಕೆ ಯಾವುದೇ ಧಕ್ಕೆ ಬಾರದಂತೆ ಕವಿ ಮನೆಯನ್ನು ಸುಂದರ ಸ್ಮಾರಕವಾಗಿಸಲಾಯಿತು.
- ಈ ಮನೆಯಲ್ಲಿ ಕವಿ ಪುತಿನ ಅವರ ಊರುಗೋಲು, ಬರೆಯಲು ಬಳಸುತ್ತಿದ್ದ ಮಣೆ, ಟೋಪಿ ಸೇರಿದಂತೆ ಮಹಡಿಯಲ್ಲಿ ಕುಳಿತು ಬರೆಯುತ್ತಿದ್ದ ಜಾಗವನ್ನೂ ಸಂರಕ್ಷಿಸಲಾಗಿದೆ. ಅಲ್ಲದೆ, ಕವಿಯ 'ಮನೆ ದೇಗುಲ', 'ರಥ ಸಪ್ತಮಿ', 'ಹರಿ ಚರಿತೆ', 'ಮಾಂದಳಿರು', 'ಜಾನ್ಹವಿಗೆ ಜೋಡಿ ದೀವಿಗೆ', 'ಗೋಕುಲ ನಿರ್ಗಮನ' ಸೇರಿದಂತೆ ಅನೇಕ ಕೃತಿಗಳ ಪ್ರಥಮ ಮುದ್ರಣವೂ ಇಲ್ಲಿ ನೋಡಲು ಸಿಗುತ್ತದೆ.
ಹೊರಗಿನ ಕೊಂಡಿಗಳು
- [http://kanaja.in/೫೬-ಪು-ತಿ-ನ-ಅವರ-ಕಾವ್ಯಮೀಮಾಂಸ/ ಜಿ ಎಸ್ ಶಿವರುದ್ರಪ್ಪ ಅವರ ಪು.ತಿ.ನ. ಕಾವ್ಯಮೀಮಾಂಸೆ
- ಜಿ ಎಸ್ ಶಿವರುದ್ರಪ್ಪ ಅವರ ಪು.ತಿ.ನ. ವಿಶಿಷ್ಟತೆ
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.