ಚನ್ನರಾಯನ ದುರ್ಗ

ಚನ್ನರಾಯನ ದುರ್ಗ, ತುಮಕೂರು ಜಿಲ್ಲೆ ಯ ಮತ್ತೊಂದು ಪ್ರಸಿದ್ಧ ತಾಣ ಮಧುಗಿರಿಯ ಸಮೀಪವೇ ಇರುವ ಪುಟ್ಟ ಹಳ್ಳಿ.

ಚನ್ನರಾಯನದುರ್ಗ ಬೆಟ್ಟದ ಕೋಟೆಯ ಒಂದು ದೂರನೋಟ

ಇತಿಹಾಸ

ಸಮುದ್ರಮಟ್ಟದಿಂದ ಮೂರೂಮುಕ್ಕಾಲು ಸಾವಿರ ಅಡಿ ಎತ್ತರದಲ್ಲಿರುವ ಇಲ್ಲಿನ ಕೋಟೆಯನ್ನು ಮೊದಲಿಗೆ ಕಟ್ಟಿದವನು ಮಧುಗಿರಿಯ ಪಾಳೇಗಾರ ವಂಶಕ್ಕೆ ಸೇರಿದ ಚಿಕ್ಕಪ್ಪ ಗೌಡ ಎಂದು ಇತಿಹಾಸ ಹೇಳುತ್ತದೆ. ಬಹಳಷ್ಟು ವರ್ಷಗಳ ಕಾಲ ಈ ಕೋಟೆ ಮಧುಗಿರಿಯ ಪಾಳೇಗಾರರ ವಶದಲ್ಲೇ ಇತ್ತಂತೆ. ಮಧುಗಿರಿ ಮರಾಠರ ಆಕ್ರಮಣಕ್ಕೆ ತುತ್ತಾದಾಗ ಈ ಕೋಟೆ ಕೂಡ ಅವರ ಕೈವಶವಾಯಿತು. ಚಿಕ್ಕದೇವರಾಯ ಒಡೆಯರ ಆಳ್ವಿಕೆಯಲ್ಲಿ ಚನ್ನರಾಯನದುರ್ಗ ಮೈಸೂರು ಸಂಸ್ಥಾನದ ಭಾಗವಾಯಿತು. ಆಗ ಇಲ್ಲಿಗೆ ಪ್ರಸನ್ನಗಿರಿ ಎಂಬ ಹೆಸರಿತ್ತಂತೆ. ನಡುವೆ ಮತ್ತೊಮ್ಮೆ ಮರಾಠರ ಪಾಲಾದ ಈ ದುರ್ಗ ಚಂದ್ರಾಯದುರ್ಗವೆಂದೂ ಕರೆಸಿಕೊಂಡಿತ್ತು, ಮರಾಠಾ ಸೇನಾಧಿಕಾರಿಗಳಾದ ಶ್ರೀಪಂತ ಪ್ರಧಾನ ಹಾಗೂ ಮಾಧವರಾಯ ಬಲ್ಲಾಳ ಪ್ರಧಾನರ ಹೆಸರಿನಲ್ಲಿರುವ ೧೭೬೬ರ ಶಿಲಾಶಾಸನವನ್ನು ಕೋಟೆಯ ದ್ವಾರದಲ್ಲಿ ಈಗಲೂ ಕಾಣಬಹುದು.ಟಿಪ್ಪುವಿನ ಪ್ರಾಬಲ್ಯದ ಸಮಯದಲ್ಲಿ ಚನ್ನರಾಯದುರ್ಗ ಮತ್ತೆ ಮೈಸೂರು ಸಂಸ್ಥಾನಕ್ಕೆ ಸೇರಿತು. ಅಂತಿಮವಾಗಿ ಮೂರನೆಯ ಮೈಸೂರು ಯುದ್ಧದ ಸಂದರ್ಭದಲ್ಲಿ ಲೆಫ್ಟಿನೆಂಟ್ ಕರ್ನಲ್ ಮ್ಯಾಕ್ಸ್‌ವೆಲ್ ಎಂಬಾತನ ನೇತೃತ್ವದಲ್ಲಿದ್ದ ಬ್ರಿಟಿಷ್ ಸೇನೆ ಈ ದುರ್ಗವನ್ನು ಆಕ್ರಮಿಸಿಕೊಂಡಿತು. ನಂತರದ ದಿನಗಳಲ್ಲಿ ತನ್ನದೇ ಹೆಸರಿನ ತಾಲೂಕಿನ ಕೇಂದ್ರವಾಗಿದ್ದ ಚನ್ನರಾಯನ ದುರ್ಗ ಈಗ ಪುಟ್ಟದೊಂದು ಅಜ್ಞಾತ ಹಳ್ಳಿಯಾಗಿ ಉಳಿದುಕೊಂಡಿದೆ. ಇಲ್ಲಿಗೆ ಬರುವ ಪ್ರವಾಸಿಗರು ಕಡಿಮೆಯಾದರೂ ಐತಿಹಾಸಿಕ ಸ್ಮಾರಕಗಳನ್ನು ಹಾಳುಗೆಡವುವ ನಿಧಿಶೋಧಕರ ಪೀಡೆ ಮಾತ್ರ ತಪ್ಪಿಲ್ಲ.

ಚಿತ್ರಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.