ಕಲ್ಲಿದ್ದಲು
ಕಲ್ಲಿದ್ದಲು ಸಸ್ಯಪದಾರ್ಥಗಳು ಸಹಸ್ರಾರು ವರ್ಷ ಭೂಗರ್ಭದಲ್ಲಿ ಹೂತುಹೋಗಿ, ಕೊಳೆತು, ಅನೇಕ ಭೌತ ಜೈವ ರಾಸಾಯನಿಕ ಪರಿವರ್ತನೆಗಳನ್ನು ಹೊಂದಿ ಉತ್ಪನ್ನವಾಗುವ, ಒತ್ತಾದ ಪದರವಿರುವ ಇಂಗಾಲದ ವಸ್ತು (ಕೋಲ್). ಮುಖ್ಯವಾದ ಖನಿಜೇಂಧನಗಳಲ್ಲಿ ಇದು ಒಂದು. ಉಷ್ಣಶಕ್ತಿಗೆ ಒಂದು ಪ್ರಧಾನ ಮೂಲ. ಪ್ರಪಂಚದಲ್ಲಿನ ಶಕ್ತಿಯ ಉತ್ಪನ್ನದಲ್ಲಿ ಸುಮಾರು ಅರ್ಧದಷ್ಟು ಕಲ್ಲಿದ್ದಲಿನಿಂದಲೇ ಆಗುವುದು. ಆದ್ದರಿಂದ ಇದನ್ನು ಕೈಗಾರಿಕೆಯ ಬೆನ್ನುಮೂಳೆ ಎನ್ನುವುದುಂಟು. ಕೋಕ್ ಕುಲುಮೆಯಂತ್ರಗಳಲ್ಲಿಯೂ ಅನಿಲ ಕಾರ್ಖಾನೆಗಳಲ್ಲಿಯೂ ಕಲ್ಲಿದ್ದಲೇ ಮೂಲ ಕಚ್ಚಾ ಸಾಮಗ್ರಿ.
ಅವಸಾದೀ ಶಿಲೆಗಳು rock | |
![]() ಅಂಥ್ರಸೈಟ್ ಕಲ್ಲಿದ್ದಲು | |
Composition | |
---|---|
Primary | ಇಂಗಾಲ |
Secondary | ಜಲಜನಕ ಗಂಧಕ ಆಮ್ಲಜನಕ ಸಾರಜನಕ |

ಉಂಟಾಗುವ ಬಗೆ

ನಿಸರ್ಗದಲ್ಲಿ ಕಲ್ಲಿದ್ದಲು ಉಂಟಾಗುವ ಬಗೆಯಲ್ಲಿ ಎರಡು ಸ್ಪಷ್ಟ ಹಂತಗಳನ್ನು ಗುರುತಿಸಲಾಗಿದೆ. ಮೊದಲಿನದು ಜೀವರಾಸಾಯನಿಕ ಪ್ರಕ್ರಿಯೆ (ಹ್ಯೂಮಿಫಿಕೇಶನ್ ಪ್ರೋಸೆಸ್). ಪ್ರಾಚೀನ ಕಾಲದಲ್ಲಿ ಸರೋವರಗಳ ಸುತ್ತಮುತ್ತ, ಜೌಗುಪ್ರದೇಶಗಳಲ್ಲಿ, ಕಣಿವೆಗಳಲ್ಲಿ ವಿಪುಲವಾಗಿ ಬೆಳೆದಿದ್ದ ಮರಗಳು ಬಿದ್ದು ಕೊಳೆತು ಏಕಾಣುಜೀವಿಗಳ ನಿರಂತರ ಕ್ರಿಯೆಯಿಂದ ಶಿಥಿಲವಾಗಿ ವಿಘಟನಗೊಂಡುವು. ಇದರ ಪರಿಣಾಮ ಸಸ್ಯಗಳಲ್ಲಿದ್ದ ಪ್ರೋಟೀನುಗಳು, ಕೊಬ್ಬುಗಳು, ಕಾರ್ಬೊಹೈಡ್ರೇಟುಗಳು ಮುಂತಾದ ರಾಸಾಯನಿಕ ವಸ್ತುಗಳು ರಾಸಾಯನಿಕ ಕ್ರಿಯೆಗಳಿಗೆ ಒಳಗಾಗಿ ಸಾರಜನಕದಿಂದ ತುಂಬಿರುವ ಕೆಲವು ಕಪ್ಪು ಬಣ್ಣದ ಹ್ಯೂಮಿನ ವಸ್ತುಗಳಾಗಿ ಪರಿವರ್ತನೆಗೊಂಡುವು. ಇವು ಸೂಕ್ಷ್ಮತಂತುಗಳಿಂದ ಕೂಡಿದ ಪುಡಿಮಾಡಬಹುದಾದ ಕಪ್ಪು ಬಣ್ಣದ ಸರಂಧ್ರಕ ವಸ್ತುಗಳು, ಪೀಟ್ ಅಥವಾ ಸಸ್ಯಾಂಗಾರ ಎಂದು ಇವುಗಳ ಹೆಸರು. ಸಸ್ಯಗಳ ಮೂಲ ರಚನೆಯನ್ನು ಸಸ್ಯಾಂಗಾರದ ಮೇಲೆ ಚೆನ್ನಾಗಿ ಗುರುತಿಸಬಹುದು.
ಕಲ್ಲಿದ್ದಲು ಪರಿವರ್ತನಕ್ರಿಯೆ (ಕೋಲಿಫಿಕೇಷನ್ ಪ್ರಾಸೆಸ್)
ಸಸ್ಯಾಂಗಾರ ವಸ್ತುಗಳು ಪದರ ಪದರವಾಗಿ ಶೇಖರಣೆಗೊಂಡಂತೆ ಅವುಗಳ ಭಾರದಿಂದ ತಳದ ನೆಲ ಕುಸಿಯಿತು; ಬದಿಯ ಬರೆಗಳು ಕುಸಿದು ಈ ರಾಶಿಯ ಮೇಲೆ ಕೆಡೆದುವು. ಹೀಗೆ ಸಸ್ಯಾಂಗಾರ ಆಳ ಆಳಕ್ಕೆ ಸಾಗಿದಂತೆ ಅದರ ಮೇಲೆ ಹೇರಲಾದ ಒತ್ತಡ ಮತ್ತು ಅದರಿಂದ ಜನಿಸಿದ ತೀವ್ರ ಉಷ್ಣ ಇವುಗಳ ಪ್ರಭಾವದಿಂದ ಎರಡನೆಯ ಪ್ರಕ್ರಿಯೆ ಆರಂಭವಾಯಿತು. ಇದರಿಂದ ಸಸ್ಯಾಂಗಾರ ದಟ್ಟೈಸಿ ಕ್ರಮೇಣ ಕಲ್ಲಿದ್ದಲಾಗಿ ಪರಿವರ್ತನೆಗೊಂಡಿತು. ಈ ಪರಿವರ್ತನದ ಪ್ರಮಾಣವನ್ನು ಅನುಸರಿಸಿ ಲಿಗ್ನೈಟ್, ಬಿಟುಮಿನಸ್ ಕೋಲ್ ಮತ್ತು ಆಂಥ್ರಸೈಟ್ ಮುಂತಾದ ಬಗೆಬಗೆಯ ನಮೂನೆಗಳನ್ನು ವಿಂಗಡಿಸುತ್ತಾರೆ. ಸಸ್ಯಾಂಗಾರ ಕಲ್ಲಿದ್ದಲಾಗಿ ಪರಿಣಮಿಸುವಾಗ ಪ್ರಥಮ ನಿರ್ದಿಷ್ಟ ಘಟ್ಟ ಲಿಗ್ನೈಟ್ ಅಥವಾ ಕಂದುಬಣ್ಣದ ಕಲ್ಲಿದ್ದಲು. ಇದು ಮರದ ರಚನೆಯನ್ನು ತೋರಿಸುತ್ತದೆ. ಇದು ಬಲು ಮೃದುವಾಗಿದ್ದು ಹಿಸುಕಿದರೆ ದೂಳಾಗುವಂತಿರುವುದು. ಇದರೊಳಗೆ ಸ್ಥಿರ ಪ್ರಮಾಣದಲ್ಲಿ ಇಂಗಾಲ ಶೇ. ೨೩ ಭಾಗದವರೆಗಿರುತ್ತದೆ. ಈ ಪ್ರಕ್ರಿಯೆಯಲ್ಲಿ ಮುಂದಿನ ಘಟ್ಟ ಬಿಟ್ಟುಮಿನಸ್ ಕಲ್ಲಿದ್ದಲು. ಇದು ಹೆಚ್ಚು ಬಳಕೆಯ ಅತ್ಯುಪಯುಕ್ತ ಕಲ್ಲಿದ್ದಲು. ಬಲು ಕಠಿಣವಾಗಿರುವ ವಸ್ತು. ಇದರಲ್ಲಿ ಸ್ಥಿರವಾಗಿರುವ ಇಂಗಾಲಾಂಶ ಶೇ. ೫೦-೬೦ ವರೆಗಿರುತ್ತದೆ. ಆಂಥ್ರಸೈಟ್ ಎಂಬುದು ಗಟ್ಟಿಯಾಗಿಯೂ ಸಾಂದ್ರವಾಗಿಯೂ ಕಡುಕಪ್ಪಾಗಿಯೂ ಇದೆ ಮತ್ತು ಇದು ಕಲ್ಲಿದ್ದಲಿನ ಅತ್ಯಂತ ಶುದ್ಧರೂಪ. ಇದರ ಸ್ಥಿರ ಇಂಗಾಲದ ಪ್ರಮಾಣ ಸುಮಾರು ಶೇ.೯೦. ಕಲ್ಲಿದ್ದಲಿನ ಸಾಪೇಕ್ಷ ಗುರುತ್ವ ಮತ್ತು ಉಷ್ಣೋತ್ಪಾದನ ಮೌಲ್ಯ ಲಿಗ್ನೈಟಿನಿಂದ ಆಂಥ್ರಸೈಟಿನವರೆಗೆ ಏರುತ್ತ ಹೋಗುತ್ತದೆ.
ರಾಸಾಯನಿಕವಾಗಿ ಕಲ್ಲಿದ್ದಲು ಸಂಕೀರ್ಣ ಇಂಗಾಲ (ಕಾರ್ಬನ್) ಸಂಯುಕ್ತಗಳನ್ನೂ ಜೊತೆಗೆ ಸ್ವಲ್ಪ ಇಂಗಾಲೇತರ ದ್ರವ್ಯವನ್ನೂ ನೀರನ್ನು ಒಳಗೊಂಡಿದೆ. ಕಲ್ಲಿದಲಿನ ಮೂಲ ಧಾತುಗಳು ತುಂಬ ಸರಳ-ಕಾರ್ಬನ್, ಜಲಜನಕ ಮತ್ತು ಆಮ್ಲಜನಕ ಇವು ಪ್ರಧಾನ ಘಟಕಗಳು. ಸಾರಜನಕ ಹಾಗೂ ಗಂಧಕ ಅಂಶಗಳೂ ಇವೆ. ಕಲ್ಲಿದ್ದಲಿನ ಪರಿವರ್ತನ ಪ್ರಕ್ರಿಯೆ ಮುಂದುವರಿದಂತೆಲ್ಲ ಇಂಗಾಲದ ಪ್ರಮಾಣ ಸಮತೂಕವಾಗಿ ಹೆಚ್ಚುತ್ತದೆ. ಆದರೆ ಆಕ್ಸಿಜನ್ ಮತ್ತು ಹೈಡ್ರೊಜನ್ನುಗಳ ಪ್ರಮಾಣಗಳು ಸಮತೂಕವಾಗಿ ಕಡಿಮೆ ಹಾಗುತ್ತ ಹೋಗುತ್ತವೆ.
ಕಲ್ಲಿದ್ದಲಿನ ವಿಶ್ಲೇಷಣೆ

ಕಲ್ಲಿದ್ದಲಿನ ಜಲಾಂಶ. ಬಾಷ್ಪಶೀಲದ್ರವ್ಯಾಂಶ ಬೂದಿಯ ಶತಾಂಶ, ಸ್ಥಿರ, ಇಂಗಾಲ ಮತ್ತು ಉಷ್ಣಜನಕ ಕೆಲೊರಿ ಮೌಲ್ಯಗಳನ್ನು ನಿರ್ಣಯಿಸಿ ಈ ಅಂಶಗಳ ಮೇಲೆ ಕಲ್ಲಿದ್ದಲಿನ ದರ್ಜೆಯನ್ನು ಸಾಮಾನ್ಯವಾಗಿ ಗೊತ್ತು ಮಾಡಲಾಗುತ್ತದೆ. ಲೋಹ ತಯಾರಿಕೆಯ ಕಾರ್ಯಗಳಲ್ಲಿ ಉಪಯೋಗಿಸಲು ಅರ್ಹವಾದ ಕಲ್ಲಿದ್ದಲಿನ ಮತ್ತೊಂದು ಮುಖ್ಯ ಲಕ್ಷಣ ಅದರ ಕೋಕಿಂಗ್ ಗುಣ. ಹೆಚ್ಚು ಉಷ್ಣತೆಗೆ ಕಲ್ಲಿದ್ದಲನ್ನು ಕೋಕ್ ಒಲೆಗಳಲ್ಲಿ ಕಾಯಿಸಿದ ಮೇಲೆ, ಎಂದರೆ ಅದರೊಳಗಿನ ಬಾಷ್ಪಶೀಲ ದ್ರವ್ಯಗಳನ್ನು ಕರಗಿಸಿ ಹೊರಗೆ ಹಾಕಿದ ಮೇಲೆ, ಉಳಿದುಕೊಳ್ಳುವ ಅಂಶವೇ ಕೋಕ್. ಕಲ್ಲಿದ್ದಲುಗಳಿಂದ ಪಡೆದ ಕೋಕ್ ದುರ್ಬಲ ಸರಂಧ್ರಕ ಮತ್ತು ಪುಡಿಯಾಗುವಂಥದು ಆಗಿರಬಹುದು ಅಥವಾ ಒಡೆಯದ ಹಾಗೆ ಗಟ್ಟಿಯಾಗಿರಬಹುದು. ಲೋಹ ತಯಾರಿಕೆಯಲ್ಲಿ ಗಟ್ಟಿ ಕೋಕನ್ನು ಉತ್ಪತ್ತಿಮಾಡುವ ಕಲ್ಲಿದ್ದಲನ್ನು ಮಾತ್ರ ಅದುರನ್ನು ಕರಗಿಸಲು ಉಪಯೋಗಿಸಬೇಕು.
ಅವಸಾದೀ ಶಿಲೆಗಳ (ಸೆಡಿಮೆಂಟರಿ ರಾಕ್ಸ್) ತಳಗಳಲ್ಲಿ ಅಥವಾ ಪದರಗಳಲ್ಲಿನ ಕಲ್ಲಿದ್ದಲಿರುತ್ತದೆ. ಪ್ರತಿಯೊಂದು ತಳಕ್ಕೂ ಒಂದು ಸೀಮ್ ಅಥವಾ ನಾಳ ಎಂದು ಹೆಸರು. ಇಂಥ ಕಲ್ಲಿದ್ದಲಿನ ಶ್ರೇಣಿಗಳು ಒಂದರ ಮೇಲೊಂದು ಒಂದು ನಿಯತ ಕ್ರಮದಲ್ಲಿರುತ್ತವೆ. ಪದರದ ನಡುವೆ ಶೇಲುಗಳ ಮತ್ತು ಮರಳುಗಲ್ಲುಗಳ ದಪ್ಪ ಪದರಗಳಿವೆ. ಒಂದು ನಾಳ ಕೆಲವು ಅಡಿಗಳಷ್ಟು ದಪ್ಪವಾಗಿರಬಹುದು ಅಥವಾ ನೂರಾರು ಅಡಿಗಳಷ್ಟೂ ಇರಬಹುದು. ಕಲ್ಲಿದ್ದಲು ಒಂದಾದ ಮೇಲೊಂದು ಬರುವ ಮಂಕಾದ ಮತ್ತು ಹೊಳಪಾದ ಪದರಗಳಿಂದ ಕೂಡಿದೆ. ಹೊಳಪುಳ್ಳ ದ್ರವ್ಯಗಳನ್ನು ವಿಟ್ರೇನ್ ಮತ್ತು ಕ್ಲಾರ್ಯೇನ್ ಎಂದು ಕರೆಯುತ್ತಾರೆ. ಮಂಕಾಗಿರುವ ಅಂಶಕ್ಕೆ ಡುರ್ಯೇನ್ ಎಂದು ಹೆಸರು. ಮರದ ಇದ್ದಲಿನಂತಿರುವ ಮತ್ತೊಂದು ಅಂಶವೂ ಕಲ್ಲಿದ್ದಲಿನಲ್ಲಿ ಸೇರಿದೆ; ಇದಕ್ಕೆ ಪ್ಯುಸೇನ್ ಎಂದು ಹೆಸರು. ಭೂಮಿಯ ಚರಿತ್ರೆಯನ್ನು ನೋಡಿದ್ದೇ ಆದರೆ ಎರಡು ಅವಧಿಗಳಲ್ಲಿ, ಕಾರ್ಬಾನಿ ಫರಸ್-ಪರ್ಮಿಯನ್ (ಸುಮಾರು ೨೭೫-೨೦೦ ದಶಲಕ್ಷ ವರ್ಷಗಳ ಕೆಳಗೆ), ಮತ್ತು ಟರ್ಷಿಯರಿ ಅವಧಿ (೪೦-೬೦ ದಶಲಕ್ಷ ವರ್ಷಗಳ ಕೆಳಗೆ) ಗಳಲ್ಲಿ, ವಿಸ್ತಾರವಾದ ಕ್ಷೇತ್ರಗಳಲ್ಲಿ ಕಲ್ಲಿದ್ದಲಿನ ರಚನಾಪ್ರಕ್ರಿಯೆಗಳು ಜರುಗುತ್ತಿದ್ದುದಾಗಿ ಕಂಡುಬರುತ್ತದೆ. ಜಗತ್ತಿನಲ್ಲಿರುವ ಕಲ್ಲಿದ್ದಲುಗಳೆಲ್ಲ ಇವೆರಡರ ಪೈಕಿ ಒಂದು ಅವಧಿಯಲ್ಲಿ ರೂಪಗೊಂಡವು. ಕಾರ್ಬಾನಿಫರಸ್-ಪರ್ಮಿಯನ್ ಕಾಲದ ಕಲ್ಲಿದ್ದಲುಗಳು ಹೆಚ್ಚು ಭೂಭಾಗವನ್ನು ಆಕ್ರಮಿಸಿಕೊಂಡಿವೆ. ಇವುಗಳ ಗುಣ ಶ್ರೇಷ್ಠತರವಾಗಿದೆ. ಪ್ರಪಂಚದ ಅತ್ಯುತ್ತಮ ಕಲ್ಲಿದ್ದಲುಗಳು ಈ ಅವಧಿಯವು. ಆದರೆ ಟರ್ಷಿಯರಿ ಅವಧಿಯ ಕಲ್ಲಿದ್ದಲುಗಳು ಸಾಮಾನ್ಯವಾಗಿ ಲಿಗ್ನೈಟುಗಳು.
ಪ್ರಪಂಚದ ಕಲ್ಲಿದ್ದಲಿನ ಸಂಗ್ರಹ
ಪ್ರಚಂಚದಲ್ಲಿ ಈ ವರೇಗೆ ಕಂಡುಹಿಡಿದು, ಸಂಗ್ರಹಿಸಬಹುದಾದ ಕಲ್ಲಿದ್ದಲಿನ ನಿಕ್ಷೇಪದ ತಖ್ತೆ ಇಲ್ಲಿದೆ.
ದೇಶ | ಅಂಠ್ರಸೈಟ್ ಮತ್ತು ಬಿಟುಮಿನಸ್ | ಸಬ್ ಬಿಟುಮಿನಸ್ | ಲಿಗ್ನೈಟ್ | ಒಟ್ಟು | ಪ್ರಪಂಚದ ಮೊತ್ತದಲ್ಲಿ ಶೇಕಡಾವಾರು |
---|---|---|---|---|---|
![]() | 108,501 | 98,618 | 30,176 | 237,295 | 22.6 |
![]() | 49,088 | 97,472 | 10,450 | 157,010 | 14.4 |
![]() | 62,200 | 33,700 | 18,600 | 114,500 | 12.6 |
![]() | 37,100 | 2,100 | 37,200 | 76,400 | 8.9 |
![]() | 56,100 | 0 | 4,500 | 60,600 | 7.0 |
![]() | 99 | 0 | 40,600 | 40,699 | 4.7 |
![]() | 15,351 | 16,577 | 1,945 | 33,873 | 3.9 |
![]() | 21,500 | 0 | 12,100 | 33,600 | 3.9 |
![]() | 30,156 | 0 | 0 | 30,156 | 3.5 |
![]() | 9 | 361 | 13,400 | 13,770 | 1.6 |
![]() | 6,366 | 380 | 0 | 6,746 | 0.8 |
![]() | 3,474 | 872 | 2,236 | 6,528 | 0.8 |
![]() | 4,338 | 0 | 1,371 | 5,709 | 0.7 |
![]() | 1,520 | 2,904 | 1,105 | 5,529 | 0.6 |
![]() | 0 | 4,559 | 0 | 4,559 | 0.5 |
![]() | 0 | 0 | 3,020 | 3,020 | 0.4 |
![]() | 484 | 0 | 2,369 | 2,853 | 0.3 |
![]() | 1,170 | 0 | 1,350 | 2,520 | 0.3 |
![]() | 2 | 190 | 2,174 | 2,366 | 0.3 |
![]() | 0 | 166 | 1,904 | 2,070 | 0.3 |
![]() | 529 | 0 | 1,814 | 2,343 | 0.3 |
![]() | 47 | 0 | 1,853 | 1,900 | 0.2 |
![]() | 13 | 439 | 1,208 | 1,660 | 0.2 |
![]() | 0 | 0 | 1,239 | 1,239 | 0.1 |
![]() | 860 | 300 | 51 | 1,211 | 0.1 |
![]() | 1,203 | 0 | 0 | 1,203 | 0.1 |
![]() | 192 | 0 | 908 | 1,100 | 0.1 |
![]() | 0 | 0 | 812 | 812 | 0.1 |
![]() | 0 | 0 | 794 | 794 | 0.1 |
![]() | 300 | 300 | 0 | 600 | 0.1 |
![]() | 33 | 205 | 333-7,000 | 571–15,000[2] | 0.1 |
![]() | 200 | 300 | 30 | 530 | 0.1 |
![]() | 4 | 0 | 499 | 503 | 0.1 |
![]() | 502 | 0 | 0 | 502 | 0.1 |
![]() | 0 | 0 | 500 | 500 | 0.1 |
ಉಳಿದ ದೇಶಗಳು | 3,421 | 1,346 | 846 | 5,613 | 0.7 |
ಪ್ರಪಂಚ ಮೊತ್ತ | 404,762 | 260,789 | 195,387 | 860,938 | 100 |
ಪ್ರಪಂಚದ ಕಲ್ಲಿದ್ದಲಿನ ಉತ್ಪಾದನೆ
ಈ ಕೆಳಗಿನ ತಖ್ತೆ ಪ್ರಪಂಚದ ಕಲ್ಲಿದ್ದಲಿನ ಉತ್ಪಾದನೆ ಮತ್ತು ಈಗಿನ ಪ್ರಮಾಣದಲ್ಲಿ ಉತ್ಪಾದಿಸಿದರೆ ಸಂಗ್ರಹ ಬರಿದಾಗಬಹುದಾದ ವರ್ಷಗಳನ್ನು ಸೂಚಿಸುತ್ತದೆ.
ದೇಶ | 2003 | 2004 | 2005 | 2006 | 2007 | 2008 | 2009 | 2010 | 2011 | ದೇಣಿಗೆ | ಸಂಗ್ರಹದ ಆಯುಸ್ಸು (ವರ್ಷಗಳಲ್ಲಿ) |
---|---|---|---|---|---|---|---|---|---|---|---|
![]() |
1834.9 | 2122.6 | 2349.5 | 2528.6 | 2691.6 | 2802.0 | 2973.0 | 3235.0 | 3520.0 | 49.5% | 35 |
![]() |
972.3 | 1008.9 | 1026.5 | 1054.8 | 1040.2 | 1063.0 | 975.2 | 983.7 | 992.8 | 14.1% | 239 |
![]() |
375.4 | 407.7 | 428.4 | 449.2 | 478.4 | 515.9 | 556.0 | 573.8 | 588.5 | 5.6% | 103 |
![]() |
637.2 | 627.6 | 607.4 | 595.1 | 592.3 | 563.6 | 538.4 | 535.7 | 576.1 | 4.2% | 97 |
![]() |
350.4 | 364.3 | 375.4 | 382.2 | 392.7 | 399.2 | 413.2 | 424.0 | 415.5 | 5.8% | 184 |
![]() |
276.7 | 281.7 | 298.3 | 309.9 | 313.5 | 328.6 | 301.3 | 321.6 | 333.5 | 4.0% | 471 |
![]() |
114.3 | 132.4 | 152.7 | 193.8 | 216.9 | 240.2 | 256.2 | 275.2 | 324.9 | 5.1% | 17 |
![]() |
237.9 | 243.4 | 244.4 | 244.8 | 247.7 | 252.6 | 250.6 | 254.3 | 255.1 | 3.6% | 118 |
![]() |
204.9 | 207.8 | 202.8 | 197.1 | 201.9 | 192.4 | 183.7 | 182.3 | 188.6 | 1.1% | 216 |
![]() |
163.8 | 162.4 | 159.5 | 156.1 | 145.9 | 144.0 | 135.2 | 133.2 | 139.2 | 1.4% | 41 |
![]() |
84.9 | 86.9 | 86.6 | 96.2 | 97.8 | 111.1 | 100.9 | 110.9 | 115.9 | 1.5% | 290 |
World Total | 5,301.3 | 5,716.0 | 6,035.3 | 6,342.0 | 6,573.3 | 6,795.0 | 6,880.8 | 7,254.6 | 7,695.4 | 100% | 112 |
ಭಾರತದಲ್ಲಿ ಕಲ್ಲಿದ್ದಲಿನ ವಲಯಗಳು
ಪರ್ಮಿಯನ್ ಮತ್ತು ಟರ್ಷಿಯರಿ ಅವಧಿಗಳ ಎರಡು ತಳಗಳಲ್ಲೂ ಇವು ದೊರೆಯುತ್ತವೆ. ಆದರೆ ಮೊದಲನೆಯದು ಹೆಚ್ಚು ವಿಸ್ತಾರವೂ ಮುಖ್ಯವೂ ಆಗಿದೆ. ಈ ಕಲ್ಲಿದ್ದಲುಗಳು ಆ ಕಾಲದಲ್ಲಿ ಭಾರತದ ಪರ್ಯಾಯದ್ವೀಪ ಭಾಗದಲ್ಲಿದ್ದ ಅನೇಕ ಸಿಹಿನೀರಿನ ಸರಹದ್ದುಗಳ ತಳದಲ್ಲಿನ ಅವಸಾದೀ ಶಿಲೆಗಳ ಗುಂಪಿನಲ್ಲಿ ದೊರೆಯುತ್ತವೆ. ಆಗಿನ ನದಿಗಳು ಬೇಕಾದಷ್ಟು ಸಸ್ಯ ಪದಾರ್ಥಗಳನ್ನು ಈ ಸರೋವರ ಪಾತ್ರಗಳಿಗೆ ತಂದುಹಾಕಿದುವು. ಈಗ ಅವು ಕಲ್ಲಿದ್ದಲಿನ ಸ್ತರಗಳಾಗಿ ಗೊಚರಿಸುತ್ತವೆ. ಆ ಕಾಲದಲ್ಲಿ ಸಿಹಿನೀರಿನ ಸರಸ್ಸುಗಳ ತಳಗಳಲ್ಲಿ ಸ್ಥಾಪಿತವಾದ ಅವಸಾದೀ ಶಿಲೆಗಳನ್ನು ಭಾರತದಲ್ಲಿ ಗೊಂಡವಾನ ಸಮುದಾಯವೆಂದು ಕರೆಯುತ್ತಾರೆ. ಇಂಥ ಕಲ್ಲಿದ್ದಲಿರುವ ಕ್ಷೇತ್ರಗಳು ಈಗ ಬಿಹಾರ, ಬಂಗಾಳ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ಆಂಧ್ರಪ್ರದೇಶ ಮತ್ತು ಆಸ್ಸಾಮುಗಳಲ್ಲಿವೆ. ಕಲ್ಲಿದ್ದಲಿನ ಕ್ಷೇತ್ರಗಳನ್ನು ಪರಿಶೀಲಿಸಿದರೆ ಅವು ಮುಖ್ಯವಾಗಿ ಮೂರು ನದೀಕಣಿವೆಗಳಲ್ಲಿ ಸ್ಥಾಪಿತವಾಗಿರುವುದು ಕಾಣುತ್ತದೆ. ಅವು ಶೋಣ-ದಾಮೋದರ. ಕಣಿವೆ, ಮಹಾನದೀ ಕಣಿವೆ ಮತ್ತು ವಾರ್ಧಾ-ಗೋದಾವರೀ ಕಣಿವೆ. ಇವು ಬಿಟುಮಿನಸ್ ಮಾದರಿಯವಾಗಿದ್ದು ಮತ್ತು ಒಳ್ಳೆ ಕೋಕ್‍ನ ಕಲ್ಲಿದ್ದಲುಗಳನ್ನು ಒಳಗೊಂಡಿವೆ. ಕಲ್ಲಿದ್ದಲಿನ ಪ್ರಧಾನ ಕ್ಷೇತ್ರ ಬಂಗಾಳ ಮತ್ತು ಬಿಹಾರದ ದಾಮೋದರ ಕಣಿವೆ. ಅದರಲ್ಲಿ ರಾಣಿಗಂಜ್, ಝರಿಯಾ ಕಲ್ಲಿದ್ದಲಿನ ಕ್ಷೇತ್ರಗಳು ಬಹು ಮುಖ್ಯವಾದವು. ಮೊದಲನೆಯದರ ಹರವು ೧೦೩೫.೬ ಚ.ಕಿಮೀ ಎರಡನೆಯದರದು ೪೫೩.೨ ಚ.ಕಿಮೀ ಇವೆರಡರಿಂದ ಭಾರತದ ಒಟ್ಟು ಉತ್ಪನ್ನದ ಮೂರರಲ್ಲಿ ಎರಡು ಭಾಗದಷ್ಟು ಕಲ್ಲಿದ್ದಲು ಸಿಕ್ಕುತ್ತದೆ. ಲೋಹ ತಯಾರಿಕೆಗೆ ಬೇಕಾದ ಶ್ರೇಷ್ಠ ಕಲ್ಲಿದ್ದಲು ಸಿಕ್ಕುವ ಸ್ಥಳ ವಸ್ತುತಃ ಝರಿಯಾ ಕ್ಷೇತ್ರವೊಂದೇ, ಮಧ್ಯಪ್ರದೇಶದಲ್ಲಿ ಸಾತ್ಪುರ ಛತ್ತೀಸ್ ಘರ್ ಮತ್ತು ರೇವಾ ಕ್ಷೇತ್ರಗಳಲ್ಲಿ ಕಲ್ಲಿದ್ದಲು ದೊರೆಯುತ್ತದೆ. ಈಚಿನ ವರ್ಷಗಳಲ್ಲಿ ಈ ಕ್ಷೇತ್ರಗಳನ್ನು ಕಲ್ಲಿದ್ದಲಿನ ಉತ್ಪಾದನೆಗಾಗಿ ಹೆಚ್ಚು ಹೆಚ್ಚಾಗಿ ಉಪಯೋಗಿಸಿಕೊಳ್ಳಲಾಗುತ್ತಿದೆ. ಆಂಧ್ರಪ್ರದೇಶ ಮತ್ತು ಒರಿಸ್ಸಗಳಲ್ಲಿ ಕಲ್ಲಿದ್ದಲಿನ ಮುಖ್ಯ ಕ್ಷೇತ್ರಗಳು ಸಿಂಗರಾಣಿ ಮತ್ತು ತಾಳಚೀರುಗಳಲ್ಲಿವೆ. ಮಹಾರಾಷ್ಟ್ರ ಮತ್ತು ಒರಿಸ್ಸಗಳಲ್ಲಿ ಅಲ್ಪಪ್ರಮಾಣದಲ್ಲಿ ಗೊಂಡವಾನ ಕಲ್ಲಿದ್ದಲುಗಳನ್ನು ತೆಗೆಯಲಾಗುತ್ತಿದೆ. ಟರ್ಷಿಯರಿ ಕಾಲದ ಕಲ್ಲಿದ್ದಲುಗಳು ಅಸ್ಸಾಂ, ಕಾಶ್ಮೀರ, ರಾಜಸ್ತಾನ, ತಮಿಳುನಾಡು ಮತ್ತು ಕಚ್ ರಾಜ್ಯಗಳಲ್ಲಿ ದೊರೆಯುತ್ತವೆ. ಲಿಗ್ನೈಟುಗಳನ್ನು ಕಾಶ್ಮೀರದ ಕಣಿವೆಯಲ್ಲಿ, ರಾಜಸ್ತಾನದ ಬಿಕನೀರಿನ ಪ್ರದೇಶದಲ್ಲಿ ಮತ್ತು ತಮಿಳುನಾಡಿನ ದಕ್ಷಿಣ ಆರ್ಕಾಟ್ ಜಿಲ್ಲೆಯ ನೈವೇಲಿಯಲ್ಲಿ ತೋಡಿ ಹೊರತೆಗೆಯುತ್ತಾರೆ. ಇವುಗಳಲ್ಲಿ ಈಗ ತಾನೆ ಬೆಳೆವಣಿಗೆಗೆ ಬಂದಿರುವ ನೈವೇಲಿ ಲಿಗ್ನೈಟ್ ಕ್ಷೇತ್ರ ಅತ್ಯಂತ ಮುಖ್ಯವಾದದ್ದು.
ಅನೇಕ ಕಲ್ಲಿದ್ದಲಿನ ಸ್ವರಗಳು ಭೂಮಿಯ ಕೆಳಗೆ ದೊರೆಯುತ್ತವೆ. ನೆಲದಲ್ಲಿ ಗಣಿ ತೋಡಿ ಇವನ್ನು ಹೊರಕ್ಕೆ ತೆಗೆಯಬೇಕಾಗುತ್ತದೆ. ಭಾರತದಲ್ಲಿ ೪" ಗಿಂತ ಹೆಚ್ಚು ದಪ್ಪವಾಗಿರುವ ಕಲ್ಲಿದ್ದಲಿನ ಸ್ತರಗಳನ್ನು ನಷ್ಟಕ್ಕೊಳಗಾಗದೆ ತೋಡಿ ತೆಗೆಯಬಹುದಾದಿದೆ. ಬಿಹಾರದ ಬೋಕಾರೋ ಕಲ್ಲಿದ್ದಲಿನ ಹರವಿನಲ್ಲಿ ೧೫೭"ಗಳಷ್ಟು ದಪ್ಪಗಿರುವ ಕಾರ್ನಾಲೀ ಕಲ್ಲಿದ್ದಲಿನ ಪದರವೂ ಮಧ್ಯಪ್ರದೇಶದ ಕೋರಬ ಕಲ್ಲಿದ್ದಲಿನ ಹರವಿನಲ್ಲಿ ೧೫೦"ಗಳಷ್ಟು ದಪ್ಪಗಿರುವ ಕಲ್ಲಿದ್ದಲಿನ ಪದರವೂ ಸಿಕ್ಕಿವೆ. ಇವು ಭಾರತದ ಅತ್ಯಂತ ದಪ್ಪಗಿರುವ ಕಲ್ಲಿದ್ದಲಿನ ಪದರಗಳ ಶ್ರೇಣಿಗೆ ಸೇರುತ್ತವೆ. ಇತ್ತೀಚೆಗೆ ಮಧ್ಯಪ್ರದೇಶದ ಸಿಂಗ್ರೌಲಿ ಕಲ್ಲಿದ್ದಲು ಕ್ಷೇತ್ರದಲ್ಲಿ ೨೫೦"ಗಳಷ್ಟು ದಪ್ಪಗಿರುವ ಮತ್ತೊಂದು ಕಲ್ಲಿದ್ದಲಿನ ಸ್ತರ ಸಿಕ್ಕಿರುವುದಾಗಿ ವರದಿಯಾಗಿದೆ. ಭಾರತದ ದೇಶದಲ್ಲಿ ಕಲ್ಲಿದ್ದಲಿನ ಗಣಿ ಕೆಲಸ ನಾಲ್ಕು ಲಕ್ಷಕ್ಕಿಂತಲೂ ಹೆಚ್ಚಿನ ಜನಕ್ಕೆ ಉದ್ಯೋಗವನ್ನು ಕಲ್ಪಿಸಿಕೊಡುತ್ತಿರುವ ಪ್ರಧಾನೋದ್ಯಮವಾಗಿದೆ. ಈಗ ಉತ್ಪನ್ನವಾಗುತ್ತಿರುವ ಕಲ್ಲಿದ್ದಲಿನ ಪರಿಮಾಣ ೬೨ ದಶಲಕ್ಷ ಮೆಟ್ರಿಕ್ ಟನ್ನುಗಳಿಗಿಂತ ಹೆಚ್ಚಾಗಿದೆ. ಇದರ ಬೆಲೆ ೧೫೦ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು. ಇದು ಭಾರತದಲ್ಲಿ ಉತ್ಪನವಾಗಿರುವ ಖನಿಜಗಳ ಒಟ್ಟು ಬೆಲೆಯ ಶೇ. ೭೦ ಆಗುತ್ತದೆ. ಕಲ್ಲಿದ್ದಲನ್ನು ಅತಿ ಹೆಚ್ಚಾಗಿ ಬಳಸಿಕೊಳ್ಳುವ ಪ್ರಧಾನೋದ್ಯಮಗಳು ಎರಡು-ರೈಲ್ವೆಗಳು ಮತ್ತು ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಗಳು. ಇವೆರಡೂ ಸೇರಿ ಕಲ್ಲಿದ್ದಲಿನ ಒಟ್ಟು ಉತ್ಪತ್ತಿಯ ಅರ್ಧಭಾಗದಷ್ಟನ್ನು ಉಪಯೋಗಿಸಿಕೊಳ್ಳುತ್ತವೆ.
ಕಲ್ಲಿದ್ದಲಿನ ನಿಕ್ಷೇಪಗಳು (ಭಾರತದ)
ಭೂ ಇತಿಹಾಸದ ಎರಡು ಸ್ಪಷ್ಟ ಅವಧಿಗಳಿಗೆ ಸೀಮಿತವಾದ ಕಲ್ಲಿದ್ದಲಿನ ನಿಕ್ಷೇಪಗಳನ್ನು ಭಾರತದಲ್ಲಿ ಕಾಣಬಹುದು-ಪರ್ಮಿಯನ್ ಯುಗದವು (ಸು. ೨೭೫-೨೦೦ ದಶಲಕ್ಷ ವರ್ಷ ಪ್ರಾಚೀನ ಕಾಲದವು); ಇಯೊಸೀನ್ ಮತ್ತು ಮಿಯೊಸೀನ್ ಯುಗದವು (ಸು. ೬೦-೨೫ ದಶಲಕ್ಷ ವರ್ಷ ಪ್ರಾಚೀನ ಕಾಲದವು). ಮೊದಲಿನವು ಗೊಂಡ್ವಾನಾ ಸಮುದಾಯದಲ್ಲಿವೆ. ಎರಡನೆಯವು ಟರ್ಷಿಯರಿ ಸಮುದಾಯದಲ್ಲಿವೆ. ಆದ್ದರಿಂದ ಇವುಗಳಿಗೆ ಅನುಕ್ರಮವಾಗಿ ಗೊಂಡ್ವಾನಾ ಕಲ್ಲಿದ್ದಲು, ಟರ್ಷಿಯರಿ ಕಲ್ಲಿದ್ದಲು ಎಂಬ ಹೆಸರುಗಳು ಬಂದಿವೆ. ಇವೆರಡರ ಪೈಕಿ ಗೊಂಡ್ವಾನಾ ಕಲ್ಲಿದ್ದಲು ಉತ್ತಮ ದರ್ಜೆಗೆ ಸೇರಿದೆ. ಅದು ಯಥೇಚ್ಛವಾಗಿ ದೊರಕುವುದೂ ಅಲ್ಲದೆ ಹೆಚ್ಚು ಭೂ ಭಾಗವನ್ನು ಸಹ ಆವರಿಸಿಕೊಂಡಿದೆ. ಟರ್ಷಿಯರಿ ಕಲ್ಲಿದ್ದಲು ಹೇರಳವಾಗಿಲ್ಲದಿದ್ದರೂ ಗಣಿ ಉದ್ಯೋಗಕ್ಕೆ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತದೆ. ಗೊಂಡ್ವಾನಾ ಕಲ್ಲಿದ್ದಲು ಬಿಟುಮಿನಸ್ ವರ್ಗದ್ದು. ಇದು ಅತ್ಯಂತ ಸಾಮಾನ್ಯವಾದದ್ದು ಮತ್ತು ದಿನವಹಿ ಕಾರ್ಖಾನೆಗಳಲ್ಲೂ ರೈಲ್ವೆಯಲ್ಲೂ ಮನೆಗಳಲ್ಲೂ ಉಪಯೋಗಕ್ಕೆ ಬರುತ್ತಿರುವಂಥದು. ಗೊಂಡ್ವಾನಾ ಕಲ್ಲಿದ್ದಲಿನ ಪ್ರದೇಶಗಳ ಹರವನ್ನು ನೋಡಿದ್ದೇ ಆದರೆ ಅವು ಮುಖ್ಯವಾಗಿ ಈ ಮೂರು ನದಿ ಕಣಿವೆಗಳಲ್ಲಿ ಕಂಡುಬರುವುವು: ಶೋಣ-ದಾಮೋದರ ಕಣಿವೆ, ಮಹಾನದಿ ಕಣಿವೆ, ವಾರ್ಧಾ-ಗೋದಾವರಿ ಕಣಿವೆ. ಈ ಕಾರಣದಿಂದ ಕಲ್ಲಿದ್ದಲಿನ ಸ್ತರಗಳು ಮುಖ್ಯವಾಗಿ ಪಶ್ಚಿಮ ಬಂಗಾಳ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಒರಿಸ್ಸ ರಾಜ್ಯಗಳಲ್ಲಿ ಕಾಣುವುವು. ಇವಲ್ಲದೆ ಕೆಲವು ಸಣ್ಣ ನಿಕ್ಷೇಪಗಳ ಅಸ್ಸಾಂ ಮತ್ತು ಸಿಕ್ಕಿಂ ಪ್ರದೇಶಗಳಲ್ಲೂ ಇವೆ. ಟರ್ಷಿಯರಿ ಕಲ್ಲಿದ್ದಲು ಕೀಳು ದರ್ಜೆಗೆ ಸೇರಿದ ಲಿಗ್ನೈಟ್ ನಮೂನೆಯದು. ಉತ್ಪಾದನೆ ದೃಷ್ಟಿಯಿಂದ ಇದು ಅಷ್ಟು ಪ್ರಧಾನವಾದುದಲ್ಲವಾದರೂ ಇದಕ್ಕೆ ಆರ್ಥಿಕ ಮಹತ್ತ್ವ ಉಂಟು. ಈ ದರ್ಜೆಯ ಕಲ್ಲಿದ್ದಲು ಅಸ್ಸಾಂ, ಕಾಶ್ಮೀರ, ತಮಿಳುನಾಡು, ರಾಜಸ್ತಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಸಿಕ್ಕುತ್ತದೆ. ಭಾರತದ ಕಲ್ಲಿದ್ದಲು ಕ್ಷೇತ್ರಗಳನ್ನೂ ಅವುಗಳ ಹರವನ್ನೂ ಕೆಳಗೆ ಸೂಚಿಸಲಾಗಿದೆ.
ಗೊಂಡ್ವಾನಾ ಕಲ್ಲಿದ್ದಲು
ಹಿಂದೆಯೇ ತಿಳಿಸಿರುವಂತೆ ಈ ಕಲ್ಲಿದ್ದಲು ಗೊಂಡ್ವಾನಾ ಸಮುದಾಯದ ಸ್ತರಗಳಲ್ಲಿ ಸೇರಿರುವುದರಿಂದ ಈ ಹೆಸರು ಬಂದಿದೆ. ಭಾರತ ಪರ್ಯಾಯ ದ್ವೀಪದ ಹಲವೆಡೆಗಳಲ್ಲಿ ಕಾರ್ಬಾನಿಫೆರಸ್ ಯುಗದ (ಸುಮಾರು ೨೭೫ ದಶಲಕ್ಷ ವರ್ಷಗಳ ಹಿಂದೆ) ಅಂತ್ಯದಲ್ಲಿ ಸಿಹಿನೀರಿನ ಸರೋವರಗಳಿದ್ದು ಅವುಗಳಲ್ಲಿ ೧೫,೦೦೦'-೨೦,೦೦೦’ಗೂ ಮೀರಿ ಶೇಖರವಾದ ಶಿಲಾಸ್ತರಗಳಿಗೆ ಗೊಂಡ್ವಾನಾ ಸಮುದಾಯವೆಂದು ಕರೆಯಲಾಗಿದೆ. ಇಷ್ಟು ಗಾತ್ರದ ಶಿಲಾಸಮುದಾಯವನ್ನು ಕೆಳಭಾಗ ಮತ್ತು ಮೇಲ್ಭಾಗವೆಂದು ವಿಂಗಡಿಸಬಹುದು. ಕೆಳಭಾಗ ೧೦,೦೦೦’ಗಳಿಗಿಂತ ಹೆಚ್ಚಾಗಿ ಮಂದವಾಗಿದ್ದು ಎಲ್ಲ ಕಲ್ಲಿದ್ದಲನ್ನೂ ಒಳಗೊಂಡಿದೆ. ಈ ಭಾಗವನ್ನು ಕೆಳಕಂಡಂತೆ ವಿಭಾಗಿಸಲಾಗಿದೆ.
- ಪಂಚೆಟ್ ಸಮೂಹ . . . . . . . . ೨,೦೦೦'
- ಕೆಳ ಗೊಂಡ್ವಾನಾ ....ದಾಮೂದಾ ಸಮೂಹ ....
- 1 ರಾಣಿಗಂಜ್ ಶ್ರೇಣಿ . . . ೩,೦೦೦'
- 2 ಕಲ್ಲಿದ್ದಲಿಲ್ಲದ ಶ್ರೇಣಿ . . . ೨,೦೦೦'
- 3 ಬರಾಕರ್ ಶ್ರೇಣಿ . . . ೨,೫೦೦'
- ತಾಲ್ ಚೀರ್ ಸಮೂಹ . . . . ೧,೦೦೦'
ಉತ್ತಾದನೆಗೆ ಯೋಗ್ಯವಾದ ಕಲ್ಲಿದ್ದಲಿನ ಸ್ತರಗಳು ದಾಮೂದಾ ಸಮೂಹದಲ್ಲಿ ಮಾತ್ರ ಇರುವುವು. ಮತ್ತು ಎರಡು ಸಮಮಟ್ಟದಲ್ಲಿ ದೊರಕುವುವು. ಒಂದು, ತಳಭಾಗದ ಬರಾಕರ್ ಶ್ರೇಣಿಯಲ್ಲಿ; ಎರಡನೆಯದು, ಮೇಲಿನ ಭಾಗದ ರಾಣಿಗಂಜ್ ಶ್ರೇಣಿಯಲ್ಲಿ. ಇವೆರಡು ಕಲ್ಲಿದ್ದಲಿರುವ ಶ್ರೇಣಿಗಳ ಮಧ್ಯೆ ಕಲ್ಲಿದ್ದಲು ಇಲ್ಲದ ಶ್ರೇಣಿ ಇದೆ. ಬರಾಕರ್ ಶ್ರೇಣಿಯ ಶಿಲೆಗಳು ಕಾಣಬರುವ ಪ್ರದೇಶಗಳಲ್ಲೆಲ್ಲ ಉತ್ಪಾದನೆಗೆ ಯೋಗ್ಯವಾದ ಕಲ್ಲಿದ್ದಲಿನ ಸ್ತರಗಳು ಇವೆ. ಆದರೆ ರಾಣಿಗಂಜ್ ಶ್ರೇಣಿಯ ಕಲ್ಲಿದ್ದಲು ಪ್ರಧಾನವಾಗಿ ಅದೇ ಕಲ್ಲಿದ್ದಲು ಕ್ಷೇತ್ರದಲ್ಲೂ ಸ್ವಲ್ಪ ಮಟ್ಟಿಗೆ ಝರಿಯಾ ಮತ್ತು ಕರಣಪುರ ಕಲ್ಲಿದ್ದಲು ಕ್ಷೇತ್ರಗಳಲ್ಲೂ ಕಾಣುತ್ತವೆ.
ಸಾಮಾನ್ಯವಾಗಿ ಗೊಂಡ್ವಾನಾ ಕಲ್ಲಿದ್ದಲು ಬಿಟುಮಿನಸ್ ವರ್ಗದ್ದು. ಬರಾಕರ್ ಕಲ್ಲಿದ್ದಲು ರಾಣಿಗಂಜ್ ಕಲ್ಲಿದ್ದಲಿಗಿಂತ ಶ್ರೇಷ್ಠ ತರಗತಿಯದು. ಎರಡು ಬಗೆಯ ಕಲ್ಲಿದ್ದಲುಗಳಲ್ಲೂ ಗಂಧಕದ ಮತ್ತು ರಂಜಕದ ಅಂಶಗಳು ಅತ್ಯಲ್ಪ ಪ್ರಮಾಣದಲ್ಲಿವೆ. ಬರಾಕರ್ ಕಲ್ಲಿದ್ದಲು ಸಣ್ಣ ಜ್ವಾಲೆಯೊಡನೆ ಉರಿಯುವ. ಶ್ರೇಷ್ಠ ವರ್ಗದ ಗಟ್ಟಿ ಕೋಕನ್ನೂ ಉತ್ಪತ್ತಿಮಾಡಬಲುದು. ರಾಣಿಗಂಜ್ ಕಲ್ಲಿದ್ದಲು ನೀಳಜ್ವಾಲೆಯೊಡನೆ ಉರಿಯುವ ದುರ್ಬಲವಾದ ಕೋಕನ್ನು ಉತ್ಪತ್ತಿಮಾಡಬಲ್ಲುದು. ಲೋಹ ಕರಗಿಸುವ ಕುಲುಮೆಗಳಲ್ಲಿ ಉಪಯೋಗಿಸಲು ಬರಾಕರ್ ಕಲ್ಲಿದ್ದಲೂ ಹಬೆ ಯಂತ್ರಗಳು ಮತ್ತು ಅನಿಲ ಕಾರ್ಖಾನೆಗಳಲ್ಲಿ ಉಪಯೋಗಿಸಲು ರಾಣಿಗಂಜ್ ಕಲ್ಲಿದ್ದಲೂ ಅತ್ಯುತ್ತಮವೂ ಯೋಗ್ಯವೂ ಆಗಿವೆ.
ಗೊಂಡ್ವಾನಾ ಕಲ್ಲಿದ್ದಲು ಕ್ಷೇತ್ರಗಳು
ಭಾರತದ ವಿವಿಧ ಕಲ್ಲಿದ್ದಲು ಕ್ಷೇತ್ರಗಳನ್ನು ರಾಜ್ಯಗಳ ಪ್ರಕಾರ ವಿಂಗಡಿಸಿ ಈ ಮೊದಲೇ ನಮೂದಿಸಲಾಗಿದೆ. ಇವುಗಳ ಪೈಕಿ ದಾಮೋದರ್ ಕಣಿವೆಯಲ್ಲಿರುವ ಮತ್ತು ಪಶ್ಚಿಮ ಬಂಗಾಳ, ಬಿಹಾರಿನಲ್ಲಿ ಸ್ಥಾಪಿತವಾಗಿರುವ ಕ್ಷೇತ್ರಗಳು ಎಲ್ಲಕ್ಕಿಂತಲೂ ಮುಖ್ಯವಾದುವು. ಏಕೆಂದರೆ ಇಲ್ಲಿ ಭಾರತದ ಅತ್ಯುತ್ತಮ ಕಲ್ಲಿದ್ದಲು ಇರುವುದಲ್ಲದೆ ಇದರ ಉತ್ಪಾದನೆ ಬಹು ಹೆಚ್ಚಾಗಿದೆ. ಪ್ರತಿವರ್ಷವೂ, ಭಾರತದ ಒಟ್ಟು ಕಲ್ಲಿದ್ದಲ ಉತ್ಪತ್ತಿಯಲ್ಲಿ ಮುಕ್ಕಾಲು ಭಾಗದಷ್ಟು ಈ ಪ್ರದೇಶದಿಂದ ಉತ್ಪಾದನೆಯಾಗುತ್ತಿದೆ. ಈ ಕಣಿವೆಯಲ್ಲಿ ಭಾರತದ ಪ್ರಧಾನ ಕಲ್ಲಿದ್ದಲು ಕ್ಷೇತ್ರಗಳಿವೆ. ಅವು ರಾಣಿಗಂಜ್, ಝರಿಯಾ, ಬೊಕಾರೊ ಮತ್ತು ಕರಣಪುರ ಕ್ಷೇತ್ರಗಳು. ಇವುಗಳ ಸಂಕ್ಷೇಪ ವಿವರಣೆಯನ್ನು ಈ ಕೆಳಗೆ ಕೊಡಲಾಗಿದೆ.
ರಾಣಿಗಂಜ್ ಕಲ್ಲಿದ್ದಲು ಕ್ಷೇತ್ರ
ಹೆಚ್ಚು ಭಾಗ ಪಶ್ಚಿಮ ಬಂಗಾಳದಲ್ಲೂ ಪಶ್ಚಿಮದ ಸ್ವಲ್ಪ ಭಾಗ ಬಿಹಾರ್ ರಾಜ್ಯದಲ್ಲೂ ಇವೆ. ಇದು ದಾಮೋದರ್ ಕಣಿವೆ ಪ್ರದೇಶದ ಅತ್ಯಂತ ಹಳೆಯ ಕಲ್ಲಿದ್ದಲು ಕ್ಷೇತ್ರ ; ಕಲ್ಕತ್ತೆಗೆ ವಾಯುವ್ಯ ದಿಕ್ಕಿನಲ್ಲಿ ೧೧೫ ಮೈಲಿ ದೂರದಲ್ಲಿದೆ ಮತ್ತು ಮುಖ್ಯ ರೈಲ್ವೆ ನಿಲ್ದಾಣವಾದ ಅಸನ್ಸಾಲ್ ಈ ಕ್ಷೇತ್ರದ ಮಧ್ಯದಲ್ಲಿದೆ. ಆಗ್ನೇಯ ದಿಕ್ಕಿನಲ್ಲಿರುವ ರಾಣಿಗಂಜ್ ಪಟ್ಟಣ ಕಲ್ಲಿದ್ದಲು ಗಣಿಗಳ ಮುಖ್ಯ ಕೇಂದ್ರವಾಗಿರುವುದರಿಂದ ಈ ಕ್ಷೇತ್ರಕ್ಕೆ ಈ ಹೆಸರು ಬಂದಿದೆ. ಇಲ್ಲಿಂದ ಇದುವರೆಗೆ ಸುಮಾರು ೭೫೦ ದಶಲಕ್ಷ ಟನ್ಗಳಷ್ಟು ಕಲ್ಲಿದ್ದಲನ್ನು ಅಗೆದು ತೆಗೆಯಲಾಗಿದೆ. ಮತ್ತು ಇನ್ನೂ ಭೂಮಿಯೊಳಗೆ ೧,೦೦೦" ಆಳದ ವರೆಗೆ ಸುಮಾರು ೬,೭೦೦" ದಶಲಕ್ಷ ಟನ್ಗಳಷ್ಟು, ೨,೦೦೦" ಆಳದ ವರೆಗೆ ಸುಮಾರು ೧೯,೦೦೦ ದಶಲಕ್ಷ ಟನ್ಗಳಷ್ಟು ಕಲ್ಲಿದ್ದಲು ಇರುವುದಾಗಿ ಅಂದಾಜು ಮಾಡಲಾಗಿದೆ.
ಝರಿಯಾ ಕಲ್ಲಿದ್ದಲು ಕ್ಷೇತ್ರ
ಇದು ಬಿಹಾರಿನ ಧನ್ಬಾದ್ ಜಿಲ್ಲೆಯಲ್ಲಿ ಕಲ್ಕತ್ತೆಗೆ ೨೫೬ ಕಿಮೀ ವಾಯುವ್ಯ ದಿಕ್ಕಿನಲ್ಲಿ ರಾಣಿಗಂಜ್ ಕ್ಷೇತ್ರದ ಪಶ್ಚಿಮದಲ್ಲಿ ಸ್ಥಾಪಿತವಾಗಿದೆ. ಇದು ಅರ್ಧಚಂದ್ರಾಕಾರವಾಗಿದೆ. ಇದರ ವಿಸ್ತಾರ ಸುಮಾರು ೧೭೫ ಚ. ಮೈಲಿಗಳಷ್ಟು. ಧನ್ಬಾದ್ ನಗರ ಈ ಕ್ಷೇತ್ರಕ್ಕೆ ಈಶಾನ್ಯ ದಿಕ್ಕಿನ ಸರಹದ್ದಿನ ಮೇಲಿದೆ. ಗಣಿಗಳ ಮುಖ್ಯ ಕೇಂದ್ರವಾದ ಝರಿಯಾ ಈ ಕ್ಷೇತ್ರದ ಪೂರ್ವಭಾಗದಲ್ಲಿದೆ.
ಕಲ್ಲಿದ್ದಲನ್ನು ಒಳಗೊಂಡ ಬರಾಕರ್ ಮತ್ತು ರಾಣಿಗಂಜ್ ಶ್ರೇಣಿಯ ಶಿಲೆಗಳು ಇಲ್ಲಿ ಉತ್ತಮ ರೀತಿಯಲ್ಲಿ ಕಂಡುಬಂದಿವೆ. ಮತ್ತು ಕ್ರಮಶಃ ೨,೫೦೦" ಮತ್ತು ೧,೮೦೦" ದಪ್ಪವಾಗಿವೆ. ಇವೆರಡರಲ್ಲೂ ಕಲ್ಲಿದ್ದಲು ಹೇರಳವಾಗಿದೆ. ಬರಾಕರ್ ಶ್ರೇಣಿಯಲ್ಲಿರುವ ಕಲ್ಲಿದ್ದಲು ಅತಿಮುಖ್ಯವಾದುದು ಮತ್ತು ಇದರಲ್ಲಿ ೪" ರಿಂದ ೬೦" ದಪ್ಪವಿರುವ ೨೪ ಕಲ್ಲಿದ್ದಲು ಸ್ತರಗಳು ಇವೆ. ಇವುಗಳ ಪೈಕಿ ೧೮ ಸ್ತರಗಳು ಪ್ರಧಾನವಾಗಿದ್ದು ಅವು ಕ್ಷೇತ್ರದ ಎಲ್ಲ ಕಡೆಗಳಲ್ಲೂ ವ್ಯಾಪಿಸಿವೆ. ಇವುಗಳಿಗೆ ೧ ರಿಂದ ೧೮ರ ವರೆಗೆ ಸಂಖ್ಯೆಗಳ ನಾಮಕರಣ ಮಾಡಲಾಗಿದೆ. ೧ನೆಯದು ಎಲ್ಲಕ್ಕಿಂತ ತಳದ್ದು ಅಥವಾ ಪುರಾತನವಾದದ್ದು ಮತ್ತು ೧೮ ನೆಯದು ಎಲ್ಲಕ್ಕಿಂತ ಮೇಲಿನದು ಅಥವಾ ಆಧುನಿಕವಾದದ್ದು. ಸಾಮಾನ್ಯವಾಗಿ ೧ ರಿಂದ ೯ನೇ ಸ್ತರಗಳು ಕೀಳುದರ್ಜೆಯ ಕಲ್ಲಿದ್ದಲನ್ನು ಒಳಗೊಂಡಿವೆ. ೧೦ ರಿಂದ ೧೮ನೇ ಸ್ತರಗಳಲ್ಲಿ ಶ್ರೇಷ್ಟ ದರ್ಜೆಯ ಕಲ್ಲಿದ್ದಲು ಇದೆ. ಇದಕ್ಕೆ ಒಳ್ಳೆಯ ಕೋಕ್ನ ಗುಣ ಉಂಟು. ಅಲ್ಪಭಸ್ಮಾಂಶ ಗುಣವೂ ಇದೆ. ಈ ಸ್ತರಗಳು ಭಾರತದ ಅತ್ಯುತ್ತಮ ಕಲ್ಲಿದ್ದಲಿನ ಭಂಡಾರಗಳು. ರಾಣಿಗಂಜ್ ಶ್ರೇಣಿಯಲ್ಲಿ ಏಳು ಕಲ್ಲಿದ್ದಲು ಸ್ತರಗಳಿವೆ. ಇವುಗಳಲ್ಲಿ ಕೆಲವನ್ನು ಉತ್ಪಾದನೆಗಾಗಿ ಉಪಯೋಗಿಸಲಾಗುತ್ತಿದೆ. ಈ ಕ್ಷೇತ್ರವನ್ನು ಕಳೆದ ೭೦ ವರ್ಷಗಳಿಂದಲೂ ಕಲ್ಲಿದ್ದಲು ಉತ್ಪಾದನೆಗಾಗಿ ವಿಶೇಷವಾಗಿ ಅಭಿವೃದ್ಧಿಗೊಳಿಸಲಾಗಿದೆ. ಈಗ ಇದು ಭಾರತದ ಅತಿಪ್ರಧಾನ ಕ್ಷೇತ್ರ. ಈ ಕ್ಷೇತ್ರ ಕಬ್ಬಿಣ ಮತ್ತು ಉಕ್ಕಿನ ಉದ್ಯೋಗಕ್ಕೆ ಯೋಗ್ಯವಾದ ಕಲ್ಲಿದ್ದಲಿನ ಮುಖ್ಯ ಆಧಾರ. ಭಾರತದ ಒಟ್ಟು ಉತ್ಪತ್ತಿಯ ಮೂರರಲ್ಲೊಂದು ಭಾಗವನ್ನು ಈ ಕ್ಷೇತ್ರದಿಂದ ಪ್ರತಿವರ್ಷವೂ ತೆಗೆಯಲಾಗುತ್ತಿದೆ. ಇದುವರೆಗೆ ಇಲ್ಲಿಂದ ಒಟ್ಟು ೮೫೦ ದಶಲಕ್ಷ ಟನ್ನುಗಳಿಗಿಂತ ಅಧಿಕವಾಗಿ ಉತ್ಪಾದನೆ ಮಾಡಲಾಗಿದೆ ಮತ್ತು ಇನ್ನೂ ಭೂಮಿಯಲ್ಲಿ ೧,೦೦೦' ಆಳದ ವರೆಗೆ ೭,೦೦೦' ದಶಲಕ್ಷ ಟನ್ನುಗಳಷ್ಟು ೨,೦೦೦' ಆಳದವರೆಗೆ ೧೨,೦೦೦ ದಶಲಕ್ಷ ಟನ್ನುಗಳಷ್ಟು ಕಲ್ಲಿದ್ದಲು ಇರುವುದಾಗಿ ಅಂದಾಜು ಮಾಡಲಾಗಿದೆ.
ಬೊಕಾರೊ ಕಲ್ಲಿದ್ದಲು ಕ್ಷೇತ್ರ
ಇದು ಝರಿಯಾ ಕ್ಷೇತ್ರದ ಪಶ್ಚಿಮಕ್ಕೆ ಹಜಾರಿಬಾಗ್ ಜಿಲ್ಲೆಯಲ್ಲಿ ೧೬೪ ಕಿಮೀ ಉದ್ದ ಮತ್ತು ಸುಮಾರು ೧೧ ಕಿಮೀಗಳ ಅಗಲದ ಪ್ರದೇಶವನ್ನು ವ್ಯಾಪಿಸಿಕೊಂಡಿದೆ. ಈ ಪ್ರದೇಶದಲ್ಲಿ ಭಾರತದ ಮಂದವಾದ ಕಲ್ಲಿದ್ದಲು ಸ್ತರಗಳು ಇರುವುದರಿಂದಲೂ ಮತ್ತು ಇವು ನೆಲಕ್ಕೆ ಸಮೀಪದಲ್ಲಿದ್ದು ಅಗೆದು ತೆಗೆಯಲು ಸಾಧ್ಯವಿರುವುದರಿಂದಲೂ ಕಲ್ಲಿದ್ದಲು ಉತ್ಪಾದನೆಗೆ ಬಹುಮುಖ್ಯ ಕ್ಷೇತ್ರವಾಗಿದೆ. ಇಲ್ಲಿನ ಕಲ್ಲಿದ್ದಲು ಪದರಗಳು ಕಾರೋ ಶ್ರೇಣಿ ೭೦"-೧೦೦" ದಪ್ಪ, ಬರ್ಮಾ ಶ್ರೇಣಿ ೪೦"-೪೬" ದಪ್ಪ ಮತ್ತು ಕರ್ಗಲಿ ಶ್ರೇಣಿ ೪೦"-೧೪೭" ದಪ್ಪ. ಈ ಶ್ರೇಣಿಗಳ ಕಲ್ಲಿದ್ದಲು ಉತ್ತಮ ದರ್ಜೆಯವೂ ಮತ್ತು ಕೋಕ್ನ ಗುಣ ಉಳ್ಳವೂ ಆಗಿರುವುದರಿಂದ ಲೋಹವಿದ್ಯೆಯಲ್ಲಿ (ಮೆಟಲರ್ಜಿ) ಉಪಯೋಗಿಸಲು ಅರ್ಹವಾಗಿದೆ. ಆದರೆ ಭಸ್ಮಾಂಶ ಸ್ವಲ್ಪ ಹೆಚ್ಚಿಗೆ ಇರುವುದರಿಂದ ಮೊದಲು ಕಲ್ಲಿದ್ದಲನ್ನು ತೊಳೆದು ಆ ಮೂಲಕ ಈ ಅಂಶವನ್ನು ತಗ್ಗಿಸಿ ಅನಂತರ ಕೋಕನ್ನು ಮಾಡಲಾಗುತ್ತಿದೆ. ಈಚೆಗೆ ಸಾರ್ವಜನಿಕ ಕ್ಷೇತ್ರದಲ್ಲಿ ಸ್ಥಾಪಿಸಿರುವ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳಲ್ಲಿ ಈ ಕಲ್ಲಿದ್ದಲನ್ನು ಹೇರಳವಾಗಿ ಉಪಯೋಗಿಸಲಾಗುತ್ತಿದೆ. ಕರಣಪುರ ಕಲ್ಲಿದ್ದಲು ಕ್ಷೇತ್ರ : ಬೊಕಾರೊ ಕ್ಷೇತ್ರದ ಪಶ್ಚಿಮಕ್ಕಿದೆ. ಇದರ ಹರವು ಸುಮಾರು ೧೪೨೪.೪ ಚ.ಕಿಮೀ. ಇದನ್ನು ಉತ್ತರ ಮತ್ತು ದಕ್ಷಿಣ ಭಾಗಗಳಾಗಿ ವಿಂಗಡಿಸಲಾಗಿದೆ. ದಕ್ಷಿಣ ಕ್ಷೇತ್ರದಲ್ಲಿ ಹನ್ನೆರಡು ಕಲ್ಲಿದ್ದಲು ಪದರಗಳು ಉತ್ಪನ್ನಕ್ಕೆ ಯೋಗ್ಯವಾಗಿವೆ. ಇವುಗಳಲ್ಲಿ ಅರ್ಗಾಡಾ ಮತ್ತು ಸಿರ್ಕ ಶ್ರೇಣಿಗಳು ಪ್ರಧಾನವಾದವು. ಇವುಗಳ ದಪ್ಪ ೮೫" ಮತ್ತು ೪೦". ಇಲ್ಲಿನ ಕಲ್ಲಿದ್ದಲು ಶ್ರೇಷ್ಟ ತರಗತಿಯದು. ಉತ್ತರ ಕರಣಪುರ ಕ್ಷೇತ್ರದಲ್ಲೂ ಹಲವಾರು ಶ್ರೇಣಿಗಳು ಇವೆ. ಇವುಗಳ ಪೈಕಿ ನಾಲ್ಕು ಶ್ರೇಣಿಗಳು ೫೫"-೬೫" ದಪ್ಪ ಇವೆ. ಈಚಿನ ವರ್ಷಗಳಲ್ಲಿ ಈ ಕ್ಷೇತ್ರವನ್ನು ಹೆಚ್ಚು ಅಭಿವೃದ್ಧಿಗೊಳಿಸಲಾಗಿದೆ.
ಇತರ
ಬಂಗಾಳ ಮತ್ತು ಬಿಹಾರ ಕ್ಷೇತ್ರಗಳಲ್ಲಿ ಭಾರತದ ಒಟ್ಟು ಉತ್ಪತ್ತಿಯ ಶೇ.೭೭ ಭಾಗದಷ್ಟು ಉತ್ಪಾದನೆಯಾಗುತ್ತಿದೆ. ಬಿಹಾರ್ ಮತ್ತು ಬಂಗಾಳದ ಹೊರಗೆ ಮಧ್ಯಪ್ರದೇಶದಲ್ಲಿ ಅನೇಕ ಕಲ್ಲಿದ್ದಲು ಕ್ಷೇತ್ರಗಳು ರೇವಾ, ಸಾತ್ಪುರ ಮತ್ತು ಛತ್ತೀಸ್ಗಡ್ ಪ್ರದೇಶಗಳಲ್ಲಿವೆ. ಇವುಗಳ ಪೈಕಿ ಪೆಂಚ್ ಕಣಿವೆ, ಕೊರಿಯಾ, ಕೊರ್ಬಾ, ಸಿಂಗ್ರೌಲಿ, ಚಿರಿಮಿರಿ ಮತ್ತು ಕುರೇಸಿಯಾ ಕಲ್ಲಿದ್ದಲು ಕ್ಷೇತ್ರಗಳು ಮುಖ್ಯವಾದವು. ಈಚೆಗೆ ಈ ಪೈಕಿ ಹಲವಾರು ಕ್ಷೇತ್ರಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಕೊರ್ಬಾ ಕ್ಷೇತ್ರದಲ್ಲಿ ೧೫೦" ಮಂದವಾದ ಶ್ರೇಷ್ಟ ಕಲ್ಲಿದ್ದಲಿನ ಪದರಗಳಿವೆ. ಭಾರತದ ಅತ್ಯಂತ ಮಂದವಾದ ೩೦೦"ಗಿಂತಲೂ ಹೆಚ್ಚು ಕಲ್ಲಿದ್ದಲಿನ ಶ್ರೇಣಿ ಸಿಂಗ್ರೌಲಿ ಕ್ಷೇತ್ರದಲ್ಲಿ ಇರುವುದಾಗಿ ವರದಿಯಾಗಿದೆ. ಮಧ್ಯ ಪ್ರದೇಶದ ಕಲ್ಲಿದ್ದಲು ಕ್ಷೇತ್ರಗಳಿಂದ ನಮ್ಮ ದೇಶದ ಒಟ್ಟು ಉತ್ಪತ್ತಿಯ ಶೇ. ೧೨ರಷ್ಟು ಉತ್ಪಾದನೆಯಾಗುತ್ತದೆ. ಮಹಾರಾಷ್ಟ್ರದ ಕಲ್ಲಿದ್ದಲು ಕ್ಷೇತ್ರಗಳ ಪೈಕಿ ವಾರ್ಧಾ ಕಣಿವೆಯಲ್ಲಿರುವ ಚಂದಾ, ಶಸ್ತಿ ಕ್ಷೇತ್ರಗಳೂ ನಾಗಪುರ ಪ್ರದೇಶದಲ್ಲಿರುವ ಕಾಮತಿ, ಉಮ್ರೆರ್ ಕ್ಷೇತ್ರಗಳೂ ಮುಖ್ಯವಾದವು. ಈ ರಾಜ್ಯದ ಕ್ಷೇತ್ರಗಳಿಂದ ಭಾರತದ ಒಟ್ಟು ಉತ್ಪತ್ತಿಯ ಶೇ.೨ ರಷ್ಟು ಭಾಗ ಕಲ್ಲಿದ್ದಲನ್ನು ತೆಗೆಯಲಾಗುತ್ತಿದೆ.
ಒರಿಸ್ಸದಲ್ಲಿ ಮುಖ್ಯವಾದ ಕ್ಷೇತ್ರಗಳು ಎರಡೇ. ಅವು ಮಹಾನದಿ ಕಣಿವೆಯಲ್ಲಿರುವ ತಾಲ್ಚಿರ್ ಮತ್ತು ಹಿಂಗಿರ್-ರಾಮ್ಪುರ್ ಕ್ಷೇತ್ರಗಳು. ಇವುಗಳಿಂದ ಉತ್ಪಾದನೆ ಭಾರತದ ಒಟ್ಟು ಉತ್ಪಾದನೆಯ ಶೇ. ೧.೫ ಭಾಗ.
ಆಂಧ್ರಪ್ರದೇಶದಲ್ಲಿ ಗೋದಾವರಿ ಕಣಿವೆಯಲ್ಲಿ ಅನೇಕ ಕಲ್ಲಿದ್ದಲು ಕ್ಷೇತ್ರಗಳಿವೆ. ಇವುಗಳಲ್ಲಿ ಸಿಂಗರಾಣಿ ಮತ್ತು ಕೊತ್ತಗುಡಿಯಂ ಕ್ಷೇತ್ರಗಳು ಪ್ರಧಾನವಾದವು. ಈ ಪ್ರದೇಶದ ಉತ್ಪಾದನೆ ಭಾರತದ ಒಟ್ಟು ಉತ್ಪತ್ತಿಯಲ್ಲಿ ಶೇ. ೬ ಭಾಗದಷ್ಟು.
ಟರ್ಷಿಯರಿ ಕಲ್ಲಿದ್ದಲು
ಉತ್ಪಾದನೆಯ ದೃಷ್ಟಿಯಿಂದ ಇದು ಭಾರತದ ಒಟ್ಟು ಉತ್ಪತ್ತಿಯಲ್ಲಿ ಶೇ.೨ಕ್ಕಿಂತ ಕಮ್ಮಿ ಆಗಿದ್ದರೂ ಈ ಕಲ್ಲಿದ್ದಲು ದೊರೆಯುವ ಪ್ರದೇಶಗಳಲ್ಲಿ ಗೊಂಡ್ವಾನ ಕಲ್ಲಿದ್ದಲು ಇಲ್ಲದಿರುವುದರಿಂದ ಇವು ಆಯಾ ಪ್ರದೇಶಗಳ ಆರ್ಥಿಕ ದೃಷ್ಟಿಯಲ್ಲಿ ಮಹತ್ವ ಪೂರ್ಣವಾದವು. ಸಾಮಾನ್ಯವಾಗಿ ಈ ಸಮುದಾಯದ ಕಲ್ಲಿದ್ದಲು ಅಸ್ಸಾಂ ಮತ್ತು ಕಾಶ್ಮೀರ ಪ್ರದೇಶಗಳಲ್ಲಿ ಇಯೋಸೀನ್ ಅಥವಾ ಆಲಿಗೋಸಿನ್ (ಸುಮಾರು ೬೦-೪೦ ದಶಲಕ್ಷ ವರ್ಷಗಳ ಕೆಳಗೆ) ಅವಧಿಯ ಶಿಲೆಗಳಲ್ಲಿ ಇರುತ್ತವೆ. ತಮಿಳುನಾಡಿನಲ್ಲಿ ಮಿಯೋಸಿನ್ ಯುಗದ ಶಿಲೆಗಳಲ್ಲಿ ಮಂದವಾದ ಲಿಗ್ನೈಟ್ ಸ್ತರಗಳು ಸಿಕ್ಕುತ್ತವೆ. ಕಾಶ್ಮೀರ ಕಣಿವೆಯಲ್ಲಿ ಪ್ಲೀಸ್ಟೊಸೀನ್ ಯುಗದ (ಸುಮಾರು ೧ ದಶಲಕ್ಷ ವರ್ಷಗಳ ಕೆಳಗೆ) ಶಿಲೆಗಳಲ್ಲೂ ಲಿಗ್ನೈಟ್ ಪದರಗಳು ಇವೆ. ಟರ್ಷಿಯರಿ ಕಲ್ಲಿದ್ದಲು ಸಿಕ್ಕುವ ಮತ್ತು ಉತ್ಪಾದನೆಯಾಗುತ್ತಿರುವ ಮುಖ್ಯ ಪ್ರದೇಶಗಳು ಅಸ್ಸಾಂ, ಮದರಾಸು, ಕಾಶ್ಮೀರ ಮತ್ತು ರಾಜಸ್ತಾನ. ಇದಲ್ಲದೇ ಗುಜರಾತ್ ಮತ್ತು ಕೇರಳ ರಾಜ್ಯಗಳಲ್ಲಿ ಲಿಗ್ನೈಟ್ ನಿಕ್ಷೇಪಗಳು ಇರುವುದಾಗಿ ವರದಿಯಾಗಿದೆ. ಈ ಕೇಂದ್ರಗಳಲ್ಲೆಲ್ಲ ಅಸ್ಸಾಂ ಪ್ರದೇಶ ಪ್ರಧಾನವಾದುದು. ಏಕೆಂದರೆ ಟರ್ಷಿಯರಿ ಕಲ್ಲಿದ್ದಲ ಉತ್ಪತ್ತಿಯಲ್ಲಿ ಇದಕ್ಕೆ ಪ್ರಥಮ ಸ್ಥಾನವಿದೆ. ಅದಲ್ಲದೆ ಇಲ್ಲಿನ ಕಲ್ಲಿದ್ದಲು ಉತ್ತಮವಾದುದು. ಅಸ್ಸಾಂ ಆದಮೇಲೆ ತಮಿಳುನಾಡು ಪ್ರಧಾನವಾದದ್ದು. ಇಲ್ಲಿ ಅಧಿಕವಾಗಿ ಲಿಗ್ನೈಟ್ ಉತ್ಪಾದನೆಯಾಗುತ್ತಿದೆ.
ಟರ್ಷಿಯರಿ ಕಲ್ಲಿದ್ದಲು ಭೂ ಚರಿತ್ರೆಯ ಈಚಿನ ಕಾಲದ ಉತ್ಪನ್ನ. ಇದು ಕಲ್ಲಿದ್ದಲಿನ ವರೆಗಿನ ಪೂರ್ಣ ಪ್ರಕ್ರಿಯೆ ಪಡೆದಿರದೆ ಸಾಮಾನ್ಯವಾಗಿ ಲಿಗ್ನೈಟ್ ಹಂತದಲ್ಲೇ ಇರುತ್ತದೆ. ಆದರೆ ಅಸ್ಸಾಂ ಮತ್ತು ಕಾಶ್ಮೀರ ಪ್ರದೇಶದಲ್ಲಿನ ಹಿಮಾಲಯ ಪರ್ವತದ ತಳಬೆಟ್ಟಗಳಲ್ಲಿರುವ ಲಿಗ್ನೈಟ್ ಸ್ತರಗಳು ಈ ಪರ್ವತದ ಉದ್ಭವಕ್ಕೆ ಕಾರಣವಾದ ಭೂ ಚಲನೆ ಮತ್ತು ಒತ್ತಡಗಳಿಗೆ ಸಿಕ್ಕಿ ಮಡಿಸಿಹೋಗಿ ಪುಡಿಯಾಗಿ, ಬಿಟುಮಿನಸ್ ಕಲ್ಲಿದ್ದಲು ಅಥವಾ ಆಂಥ್ರಸೈಟ್ ಆಗಿ ಪರಿವರ್ತನೆಯಾಗಿರುವುದು ಕಂಡುಬರುತ್ತದೆ. ಟರ್ಷಿಯರಿ ಕಲ್ಲಿದ್ದಿಲಿನ ಗುಣವೆಂದರೆ ಹೆಚ್ಚಿನ ಗಂಧಕದ ಅಂಶ ಶೇ. ೩-೮ ಮತ್ತು ಸಾಮಾನ್ಯ ಕೋಕಿಂಗ್ ಗುಣ. ಗಂಧಕದ ಅಂಶ ಹೆಚ್ಚಿರುವುದರಿಂದ ಇದು ಲೋಹವಿದ್ಯಾಕಾರ್ಯಗಳಲ್ಲಿ ಉಪಯೋಗಿಸಲು ಯೋಗ್ಯವಾಗಿಲ್ಲ.
ಟರ್ಷಿಯರಿ ಕಲ್ಲಿದ್ದಲು ಕ್ಷೇತ್ರಗಳು
ಅಸ್ಸಾಂ
ಟರ್ಷಿಯರಿ ಕಲ್ಲಿದ್ದಲಿನ ಉತ್ಪಾದನೆಗೆ ಇದು ಪ್ರಮುಖ ಕೇಂದ್ರ. ಕಲ್ಲಿದ್ದಲು ಸ್ತರಗಳು ಜೈನ್ಷಿಯ ಶ್ರೇಣಿ ಎಂಬ ಇಯೊಸೀನ್ ಕಾಲದ ಶಿಲೆಗಳಲ್ಲಿ ಪಶ್ಚಿಮ ಅಸ್ಸಾಂನಲ್ಲಿಯೂ ಬರೈಲ್ ಶ್ರೇಣಿ ಎಂಬ ಆಲಿಗೋಸೀನ್ ಯುಗದ ಶಿಲೆಗಳಲ್ಲಿ ಅಸ್ಸಾಮಿನ ಮೇಲ್ಭಾಗದಲ್ಲೂ ಇರುತ್ತವೆ. ಇವೆರಡರ ಪೈಕಿ ಬರೈಲ್ ಶ್ರೇಣಿಯಲ್ಲಿರುವ ಕಲ್ಲಿದ್ದಲು ಮುಖ್ಯವಾದದ್ದು. ಉತ್ಪಾದನೆಗೆ ಯೋಗ್ಯವಾದ ಎಲ್ಲ ಸ್ತರಗಳೂ ಇದರಲ್ಲಿವೆ. ಅಸ್ಸಾಮಿನ ಕಲ್ಲಿದ್ದಲು ಪ್ರದೇಶಗಳು ಮೂರು: (೧) ಅಸ್ಸಾಮಿನ ಮೇಲ್ಭಾಗದಲ್ಲಿ ಮತ್ತು ದಿಬ್ರುಗಡದ ಪೂರ್ವದಲ್ಲಿ ಈಶಾನ್ಯಕ್ಕಿರುವ ಅತ್ಯಂತ ಕೊನೆಯ ಭಾಗ. (೨) ಷಿಲಾಂಗ್ ಪ್ರಸ್ಥಭೂಮಿಗೆ ಈಶಾನ್ಯದಲ್ಲಿರುವ ಮಿಕಿರ್ ಬೆಟ್ಟಗಳು. (೩) ಷಿಲಾಂಗ್ ಪ್ರಸ್ಥಭೂಮಿಯ ದಕ್ಷಿಣ ಮತ್ತು ನೈಋತ್ಯ ದಿಕ್ಕಿನ ತುದಿಯಲ್ಲಿರುವ ಜೈನ್ಷಿಯ, ಖಾಸಿ ಮತ್ತು ಗಾರೊ ಬೆಟ್ಟಗಳು. ಇವುಗಳ ಪೈಕಿ ಉತ್ಪಾದನೆಗೆ ಯೋಗ್ಯವಾದ ಕ್ಷೇತ್ರಗಳು ಅಸ್ಸಾಮಿನ ಮೇಲ್ಭಾಗದಲ್ಲಿರುವ ಪಟ್ಕೈ ಬೆಟ್ಟಗಳ ಪ್ರದೇಶದಲ್ಲಿವೆ. ನಾಜಿರ, ಜೈಪುರ್, ಮಾಕುಂ ಕ್ಷೇತ್ರಗಳು ಮುಖ್ಯವಾದವು. ಅಸ್ಸಾಂ ಪ್ರದೇಶದಿಂದ ಭಾರತದ ಒಟ್ಟು ಉತ್ಪತ್ತಿಯ ಸುಮಾರು ಶೇ. ೧.೫ ಭಾಗದಷ್ಟು ಕಲ್ಲಿದ್ದಲನ್ನು ತೆಗೆಯಲಾಗುತ್ತಿದೆ.
ಕಾಶ್ಮೀರ
ಇಯೊಸೀನ್ ಕಾಲದ ಕಲ್ಲಿದ್ದಲು ಸ್ತರಗಳು ಕಾಶ್ಮೀರದ ಸರಹದ್ದಿನಲ್ಲಿ ಹಿಮಾಲಯ ಪರ್ವತಪ್ರದೇಶದ ತಪ್ಪಲಿನ ಬೆಟ್ಟಗಳಲ್ಲಿ ಅನೇಕ ಕಡೆ ಕಾಣಬರುತ್ತವೆ. ಇವು ತಕ್ಕಮಟ್ಟಿಗೆ ಮಂದವಾಗಿಯೂ ಉತ್ತಮ ದರ್ಜೆಯವೂ ಆಗಿವೆ. ಇವುಗಳಿರುವ ಮುಖ್ಯ ಸ್ಥಳಗಳು ನಾಲ್ಕು : (೧) ರಿಯಾಸಿ ಜಿಲ್ಲೆ : ಇಲ್ಲಿಯ ಮುಖ್ಯ ಕ್ಷೇತ್ರಗಳು ಚಕಾರ್, ಮಹೋಗಲಾ, ಮೆಟ್ಕಾ ಮತ್ತು ಕಲಾಕೋಟ್. (೨) ಧನಸ್ವಾಲ್ : ಸವಾಲ್ಕೋಟ್ ಕ್ಷೇತ್ರಗಳು. (೩) ದಂಡ್ಲಿ ಪ್ರದೇಶ : ಪುಂಚ್ ನದಿ ಸಮೀಪದಲ್ಲಿರುವ ದಂಡ್ಲಿ ಕ್ಷೇತ್ರ. (೪) ಚೀನಾಬ್ ನದಿಯ ಪೂರ್ವಪ್ರದೇಶ : ಇಲ್ಲಿ ನೆಲೆಗೊಂಡಿರುವ ಲಡ್ಡಾ-ಜಾಂಗ್ಲಗಲಿ ಕ್ಷೇತ್ರ.. ಈ ಪ್ರದೇಶಗಳ ಕಲ್ಲಿದ್ದಲು ಒತ್ತಡಕ್ಕೆ ಸಿಕ್ಕಿ ಅದುಮಿ ಪುಡಿಯಾಗಿರುವುದು. ಕೆಲವು ಕಡೆ ಆಂಥ್ರಸೈಟ್ ಗುಣಗಳನ್ನು ಪಡೆದಿರುತ್ತದೆ. ಈ ಪ್ರದೇಶಗಳಿಂದ ವರ್ಷಕ್ಕೆ ಸುಮಾರು ೨೦ ಸಾವಿರ ಟನ್ನುಗಳಷ್ಟು ಕಲ್ಲಿದ್ದಲು ಉತ್ಪಾದನೆ ಆಗುತ್ತಿದೆ. ಕಾಶ್ಮೀರ ಕಣಿವೆಯಲ್ಲಿ ಕರೇವಾ ಸಮೂಹವೆಂಬ ಪ್ಲಿಸ್ಟೊಸೀನ್ ಕಾಲದ ಸರೋವರಗಳಲ್ಲಿ ಉತ್ಪನ್ನವಾದ ಅವಸಾದನ ಶಿಲೆಗಳಲ್ಲಿ ಕೆಲವು ಲಿಗ್ನೈಟ್ ಪದರಗಳು ಕಂಡುಬರುತ್ತವೆ. ಇವು ಪ್ರಧಾನವಾಗಿ ಶಾಲಿಗಂಗಾ ಮತ್ತು ಹಂಡ್ವಾರಾ ಪ್ರದೇಶಗಳಲ್ಲಿವೆ. ಇಲ್ಲಿರುವ ರೈಥಾನ್ ಮತ್ತು ನಿಕೋಮಾ ಲಿಗ್ನೈಟ್ ಕ್ಷೇತ್ರಗಳನ್ನು ಈಚೆಗೆ ಅಭಿವೃದ್ಧಿ ಮಾಡಲಾಗುತ್ತಿದೆ.
ತಮಿಳುನಾಡು
ಈ ರಾಜ್ಯದ ದಕ್ಷಿಣ ಆರ್ಕಾಟ್ ಜಿಲ್ಲೆಯಲ್ಲಿ ಲಿಗ್ನೈಟ್ ಪದರಗಳು ಇರುವುದು ಅನೇಕ ವರ್ಷಗಳಿಂದ ತಿಳಿದಿದ್ದರೂ ಈಚೆಗೆ ಈ ಪ್ರದೇಶವನ್ನು ಪೂರ್ಣವಾಗಿ ಸಂಶೋಧಿಸಲಾಯಿತು. ಇದರ ಪ್ರಕಾರ ಈ ಜಿಲ್ಲೆಯ ಕಡಲೂರು-ವೃದ್ಧಾಚಲಂ ಪ್ರದೇಶದಲ್ಲಿ ಮಿಯೋಸೀನ್ ಕಾಲದ ಶಿಲೆಗಳಲ್ಲಿ ಐದು ಲಿಗ್ನೈಟ್ ಪದರಗಳು ೨೫೮.೯ ಚ.ಕಿಮೀಗಳ ಹರವಿನಲ್ಲಿ ವ್ಯಾಪಿಸಿರುವುದಾಗಿಯೂ ೨,೦೦೦ ದಶಲಕ್ಷ ಟನ್ನುಗಳಷ್ಟು ಲಿಗ್ನೈಟ್ ಭೂಮಿಯಲ್ಲಿರುವುದಾಗಿಯೂ ಕಂಡುಬಂದಿತು. ನೈವೇಲಿ ಲಿಗ್ನೈಟ್ ಕ್ಷೇತ್ರ : ಇದು ದಕ್ಷಿಣ ಆರ್ಕಾಟ್ ಜಿಲ್ಲೆಯಲ್ಲಿ ವೃದ್ಧಾಚಲಂನಿಂದ ೧೭.೬ ಕಿಮೀ ದೂರದಲ್ಲಿರುವ ನೈವೇಲಿ ಗ್ರಾಮದ ಸುತ್ತ ಆವರಿಸಿದೆ. ಇದರ ವ್ಯಾಪ್ತಿ ಸುಮಾರು ೧೩೩.೮ ಚ.ಕಿಮೀಗಳಷ್ಟು. ಇಲ್ಲಿ ಉತ್ಪಾದನೆಗೆ ಅಗೆದು ತೆಗೆಯುತ್ತಿರುವ ಲಿಗ್ನೈಟ್ ಪದರ ಸುಮಾರು ೬೦" ದಪ್ಪವಾಗಿದ್ದು ನೆಲಮಟ್ಟದಿಂದ ೧೮೦"-೨೦೦" ಗಳಷ್ಟು ಆಳದಲ್ಲಿದೆ. ಮೇಲಿನ ೧೮೦" ಮಣ್ಣುಕಲ್ಲನ್ನು ತೆಗೆದುಹಾಕಿ ಲಿಗ್ನೈಟ್ ಪದರ ಕಾಣುವಂತೆ ಮಾಡಿದ ಅನಂತರ ಅದನ್ನು ಅಗೆದು ತೆಗೆಯಲಾಗುತ್ತಿದೆ. ಲಿಗ್ನೈಟ್ ಶ್ರೇಣಿಯ ಕೆಳಗಿರುವ ಶಿಲೆಗಳಲ್ಲಿ ಯಥೇಚ್ಛವಾಗಿ ನೀರು ಆರ್ಟೀಸಿಯನ್ ಪರಿಸ್ಥಿತಿಯಲ್ಲಿ ಇರುವುದರಿಂದ ಇದನ್ನು ಹೊರಗೆ ತೆಗೆದು ಹಾಕುತ್ತಿರುವುದು ಅನಿವಾರ್ಯವಾಗಿ ಕಂಡುಬಂದಿತು. ಇಲ್ಲದಿದ್ದರೆ ಗಣಿಯಲ್ಲಿ ನೀರು ತುಂಬಿಕೊಂಡು ಉತ್ಪಾದನೆ ಅಸಾಧ್ಯವಾಗುವುದು. ಇದಕ್ಕೋಸ್ಕರ ಈ ಕ್ಷೇತ್ರದ ಸುತ್ತ ಬಾವಿಗಳನ್ನು ತೋಡಿ ೨೦೦" ಗಳ ದೂರದಲ್ಲೊಂದರಂತೆ ೪೫ ಅಧಿಕಸಾಮರ್ಥ್ಯಪಂಪುಗಳನ್ನು ಇಟ್ಟು ಇವುಗಳಿಂದ ಮಿನಿಟಿಗೆ ೪೨,೦೦೦ ಗ್ಯಾಲನ್ ನೀರನ್ನು ಹೊರಹಾಕಲಾಗುತ್ತಿದೆ. ಈ ಪಂಪುಗಳು ದಿನದ ೨೪ ಗಂಟೆಗಳೂ ಕೆಲಸಮಾಡುತ್ತಿರುತ್ತವೆ.
ರಾಜಸ್ತಾನ
ಇಲ್ಲಿನ ಬಿಕನೀರ್ ಪ್ರದೇಶದಲ್ಲಿ ಖಾರಿ, ಗಂಗಾ ಸರೋವರ, ಚನೇರಿ, ಮಧ್ ಮತ್ತು ಪಲಾನ ಮುಂತಾದ ಸ್ಥಳಗಳಲ್ಲಿ ಲಿಗ್ನೈಟ್ ಇರುವುದು ವರದಿಯಾಗಿದೆ. ಇವುಗಳ ಪೈಕಿ ಪಲಾನ ಕ್ಷೇತ್ರ ಮುಖ್ಯವಾದುದು. ಪಲಾನ ಲಿಗ್ನೈಟ್ ಕ್ಷೇತ್ರ : ಇದು ಬಿಕನೀರಿಗೆ ೨೦.೮ಕಿಮೀ ದೂರದಲ್ಲಿದೆ ಮತ್ತು ಇದರ ಹರವು ೪.೩೮ ಚ.ಕಿಮೀಗಳು. ಇಲ್ಲಿ ಲಿಗ್ನೈಟ್ ಪದರ ೧೨' ದಪ್ಪವಾಗಿದ್ದು ಬಹಳ ಮೃದುವಾಗಿಯೂ ಪುಡಿಯಾಗಿಯೂ ಇದೆ. ಇಲ್ಲಿ ಕಳೆದ ೬೮ ವರ್ಷಗಳಿಂದಲೂ ಲಿಗ್ನೈಟ್ ಉತ್ಪಾದನೆ ಮಾಡಲಾಗುತ್ತಿದೆ.
ಗುಜರಾತ್
ಇಲ್ಲಿ ಕಚ್ ಪ್ರದೇಶದಲ್ಲಿ ಉಮರ್ಸರ್ ಎಂಬ ಸ್ಥಳದಲ್ಲಿ ಮುಖ್ಯ ಲಿಗ್ನೈಟ್ ನಿಕ್ಷೇಪಗಳು ಇರುವುದಾಗಿ ವರದಿಯಾಗಿದೆ. ಈ ಕ್ಷೇತ್ರ ಇನ್ನೂ ಅಭಿವೃದ್ಧಿಗೆ ಬಂದಿಲ್ಲ.
ಕೇರಳ
ಇಲ್ಲಿ ಅನೇಕ ಸ್ಥಳಗಳಲ್ಲಿ ಲಿಗ್ನೈಟ್ ನಿಕ್ಷೇಪಗಳು ಇರುವುದಾಗಿ ವರದಿಯಾಗಿದೆ. ಅವುಗಳ ಪೈಕಿ ವರ್ಕಲೈ, ಕ್ವಿಲಾನ್, ಕಣ್ಣಾನೂರು ಮತ್ತು ಕಾಸರಗೋಡು ಮುಖ್ಯವಾದವು. ಉತ್ಪಾದನೆ ಕಾರ್ಯ ಎಲ್ಲೂ ಆರಂಭವಾಗಿಲ್ಲ.
ಭಾರತದಲ್ಲಿ ೫೦,೦೦೦ ದಶಲಕ್ಷ ಟನ್ನುಗಳಷ್ಟು ಗೊಂಡ್ವಾನಾ ಕಲ್ಲಿದ್ದಲೂ ೪,೦೦೦ ದಶಲಕ್ಷ ಟನ್ನುಗಳಷ್ಟು ಟರ್ಷಿಯರಿ ಕಲ್ಲಿದ್ದಲೂ ಸಿಗುವುದಾಗಿ ಅಂದಾಜು ಮಾಡಲಾಗಿದೆ. ಭಾರತದಲ್ಲಿ ಕಲ್ಲಿದ್ದಲಿನ ಗಣಿ ಕೆಲಸ ಒಂದು ವಿಶಿಷ್ಟ ಉದ್ಯಮ. ಸುಮಾರು ೮೦೦ ಕಲ್ಲಿದ್ದಲ ಗಣಿಗಳಿದ್ದು ನಾಲ್ಕು ಲಕ್ಷಕ್ಕಿಂತಲೂ ಮೇಲ್ಪಟ್ಟು ಕೆಲಸಗಾರರು ಈ ಉದ್ಯೋಗದಲ್ಲಿ ನಿರತರಾಗಿದ್ದಾರೆ. ಪಂಚವಾರ್ಷಿಕ ಯೋಜನೆಯ ಅನಂತರ ಕಲ್ಲಿದ್ದಲಿನ ಉತ್ಪಾದನೆ ಬಹುಮಟ್ಟಿಗೆ ಹೆಚ್ಚಾಗಿದೆ. ೧೯೫೫ನೆಯ ಇಸವಿಯಲ್ಲಿ ಒಟ್ಟು ಉತ್ಪಾದನೆ ಸುಮಾರು ೩೯ ದಶಲಕ್ಷ ಟನ್ನುಗಳಿದ್ದು ೧೯೬೫ನೆಯ ಇಸವಿಯಲ್ಲಿ ೭೦ ದಶಲಕ್ಷ ಟನ್ನುಗಳನ್ನು ಮೀರಿತು. ಈಗ ಉತ್ಪನ್ನವಾಗುತ್ತಿರುವ ಪರಿಮಾಣ ಸುಮಾರು ೮೦ ದಶಲಕ್ಷ ಟನ್ನುಗಳು. ಇದರ ಬೆಲೆ ೧೭೫ ಕೋಟಿ ರೂಪಾಯಿಗಳಿಗಿಂತ ಅಧಿಕವಾಗುತ್ತದೆ. ಇದು ಭಾರತದಲ್ಲಿ ಉತ್ಪನ್ನವಾಗುವ ಖನಿಜಗಳ ಒಟ್ಟು ಬೆಲೆಯು ೭೦ ಭಾಗದಷ್ಟಾಗುತ್ತದೆ. ಕಲ್ಲಿದ್ದಲನ್ನು ಅತಿ ಹೆಚ್ಚಾಗಿ ಬಳಸಿಕೊಳ್ಳುವ ಪ್ರಧಾನೋದ್ಯಮಗಳು ಎರಡು-ರೈಲ್ವೆಗಳು; ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು. ಇವೆರಡೂ ಕಲ್ಲಿದ್ದಲಿನ ಒಟ್ಟು ಉತ್ಪತ್ತಿಯ ಅರ್ಧಭಾಗವನ್ನು ಉಪಯೋಗಿಸಿಕೊಳ್ಳುತ್ತಿವೆ. ಸ್ವಲ್ಪ ಪ್ರಮಾಣದಲ್ಲಿ ಕಲ್ಲಿದ್ದಲನ್ನು ಪಾಕಿಸ್ತಾನ, ಸಿಂಹಳದ್ವೀಪ, ಮಲಯ ಮತ್ತು ಬರ್ಮ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.
ಗಣಿ ದುರಂತಗಳು
- ಕಲ್ಲಿದ್ದಲು ಗಣಿಗಳಲ್ಲಿ ದುರಂತ.
- ಕಲ್ಲಿದ್ದಲು ಗಣಿ ಬೆಂಕಿ:ಡಿ. ಉಮಾಪತಿ;ಕಾವಿಗೆ ಕುಳಿತಿರುವ ಒಂದು ಅಗ್ನಿ‘ಪ್ರಳಯ’;9 Jan, 2017
- Jharia
ಬಾಹ್ಯ ಸಂಪರ್ಕಗಳು
- Coal news and industry magazine
- Coal Online – International Energy Agency
- Coal Research at the National Energy Technology Laboratory
- Energy KIDS – Coal page from U. S. Department of Energy.
- European Association for Coal and Lignite
- World Coal Association
- Coal: Facts & Figures
- International Coal Price Data
- World Energy Council – Survey of Energy Resources 2010. (PDF) . Retrieved on 24 August 2012.
- Sherwood, Alan and Phillips, Jock. Coal and coal mining – Coal resources, Te Ara – the Encyclopedia of New Zealand, updated 2009-03-02
- "BP Statistical review of world energy 2012" (XLS). British Petroleum. Retrieved 18 August 2011.