ರಾಗಿಗುಡ್ಡ ಆಂಜನೇಯ ದೇವಸ್ಥಾನ

ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಈ ಆಂಜನೇಯನ ಗುಡಿಯು, ರಾಗಿಗುಡ್ಡ ದೇವಸ್ಥಾನವೆಂದೇ ಪ್ರಸಿದ್ಧವಾಗಿದೆ. ಎಡಭಾಗಕ್ಕೆ ಮಾರೇನ ಹಳ್ಳಿ, ಬಲಭಾಗಕ್ಕೆ ಸಾರಕ್ಕಿ, ಮುಂದೆ ತಾಯಪ್ಪನ ಹಳ್ಳಿ, ಅದರ ಪಕ್ಕದಲ್ಲಿ ಗುರಪ್ಪನ ಪಾಳ್ಯ - ಹೀಗೆ ಹೆಚ್ಚು ರಾಗಿ ಬೆಳೆಯುತ್ತಿದ್ದ ಗ್ರಾಮೀಣ ಪ್ರದೇಶ ಜಯನಗರಒಂಭತ್ತನೆಯ ಬಡಾವಣೆಯಾಯಿತು. ತಾಯಪ್ಪನ ಹಳ್ಳಿ ಜಯನಗರ ಟಿ ಬ್ಲಾಕ್ ಆಗಿ ಬದಲಾಗುವ ವೇಳೆಗೆ ಅಲ್ಲೊಂದು ಬಿ.ಟಿ.ಎಸ್. ಬಸ್ ಡಿಪೋ ಬಂದಿತ್ತು. ಬಸ್ಸಿನ ಅನುಕೂಲವಿದ್ದದ್ದರಿಂದ ಬಡಾವಣೆ ಶೀಘ್ರದಲ್ಲಿ ಬೆಳೆಯಿತು. ಎಪ್ಪತ್ತರ ದಶಕದಲ್ಲಿ ಮೈಸೂರು ಹೌಸಿಂಗ್ ಬೋರ್ಡ್ ಇಲ್ಲಿ ಮನೆಗಳನ್ನು ಕಟ್ಟಿಸಿ ಹಂಚಿಕೆ ಮಾಡಿದ್ದ ಕಾರಣ ಸರ್ಕಾರಿ, ಸಾರ್ವಜನಿಕ ವಲಯದ ಕಾರ್ಖಾನೆ ಹಾಗೂ ಬ್ಯಾಂಕುಗಳು ಮತ್ತು ಇನ್ಶ್ಯೂರೆನ್ಸ್ ಕಂಪನಿಗಳ ನೌಕರವರ್ಗದವರು ಈ ಬಡಾವಣೆಯಲ್ಲಿ ನೆಲೆಸಲು ಸಾಧ್ಯವಾಯಿತು. ಪ್ರಮುಖವಾಗಿ ಹೆಚ್.ಎ.ಎಲ್. ಹಾಗೂ ಮೈಕೋ ಕಂಪನಿಗಳ ನೌಕರರು ರಾಗಿಗುಡ್ಡದ ಮೇಲಿದ್ದ ಮೂಲ ಆಂಜನೇಯನ ವಿಗ್ರಹಕ್ಕೆ ವ್ಯವಸ್ಥಿತ ಪೂಜೆ ನಡೆಯಲು ಅನುಕೂಲ ಮಾಡಿಕೊಟ್ಟರು.

ಇತಿಹಾಸ

ದೇವಸ್ಥಾನದ ಆಡಳಿತ ವರ್ಗದವರು ಹಾಗೂ ಇಲ್ಲಿನ ಹಳೆಯ ನಿವಾಸಿಗಳ ಬಾಯಿಮಾತಿನಲ್ಲಿ ಪ್ರಚಲಿತವಾಗಿರುವ ಕತೆಯೊಂದಿದೆ. ರಾಗಿ ಬೆಳೆಯುತ್ತಿದ್ದ ಹೊಲವೊಂದಕ್ಕೆ ಬೈರಾಗಿಯೊಬ್ಬ ಭಿಕ್ಷೆ ಕೇಳಲು ಹೋಗಿದ್ದನಂತೆ. ಸಾಮಾನ್ಯವಾಗಿ ಕೈಹಿಡಿತವಿದ್ದ ಅತ್ತೆಯೊಬ್ಬಳು ಇಂಥ ಬೈರಾಗಿಗಳಿಗೆ ಒಂದೆರಡು ಮುಷ್ಟಿ ಮಾತ್ರರಾಗಿ ಕೊಡುತ್ತಿದ್ದಳಂತೆ. ಅತ್ತೆ ಇಲ್ಲದ ದಿನ ಬಂದ ಬೈರಾಗಿಗೆ, ಸೊಸೆ ಮೊರದ ತುಂಬ ರಾಗಿ ದಾನವಾಗಿ ನೀಡಿದ ಸಂದರ್ಭದಲ್ಲಿ ಅತ್ತೆಯ ಕಣ್ಣಿಗೆ ಬಿದ್ದು, ಅದನ್ನು ಆಕೆ ಮರುಕಸಿದಳಂತೆ. ಬೈರಾಗಿ ರೂಪದಲ್ಲಿದ್ದ ದೇವರು ಪ್ರತ್ಯಕ್ಷನಾಗಿ ಇಡೀ ರಾಗಿಯ ಬಣವೆ ಕಲ್ಲಾಗಲಿ ಎಂದು ಶಾಪ ನೀಡಿದನಂತೆ. ಆ ಗುಡ್ಡ ಹಾಗೂ ಸುತ್ತಲ ಶಿಲಾ ಪ್ರದೇಶಕ್ಕೆ ರಾಗಿಗುಡ್ಡ ಎಂಬ ಹೆಸರು ಬಂತು ಎನ್ನುವ ನಂಬಿಕೆಯಿದೆ.

ಬೆಳವಣಿಗೆ

ಕೇವಲ ಮೂಲ ಆಂಜನೇಯ ಹಾಗೂ ಪ್ರವೇಶದ್ವಾರದ ಗಣೇಶ ವಿಗ್ರಹಗಳಷ್ಟೇ ಇದ್ದ ರಾಗಿಗುಡ್ಡದ ಆಂಜನೇಯ ದೇವಸ್ಥಾನ, ಕಾಲಾಂತರದಲ್ಲಿ ಸೀತೆ, ಲಕ್ಷ್ಮಣರೊಡಗೂಡಿದ ಶ್ರೀರಾಮ, ಈಶ್ವರ ಲಿಂಗ, ಶ್ರೀ ರಾಜರಾಜೇಶ್ವರಿ, ಮಹಾವಲ್ಲಭ ಗಣಪತಿ, ನವಗ್ರಹಗಳ ದೇವಾಲಯ ಸಮುಚ್ಛಯವಾಯಿತು. ದೊಡ್ಡದಾದ ಆಂಜನೇಯನ ವಿಗ್ರಹವೂ ಬಂತು. ಗುಡ್ಡ ಹತ್ತಲು ಮೆಟ್ಟಿಲುಗಳಾದವು. ಇದೀಗ ಕೈಲಾಗದವರಿಗೆಂದು ವಿದ್ಯುಚ್ಛಾಲಿತ ಲಿಫ್ಟ್ ಕೂಡಾ ಬಂದಿದೆ. ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ನ ನೆರವಿನಿಂದ ಸುತ್ತಮುತ್ತಲ ಜಾಗವೂ ರಾಗಿಗುಡ್ಡ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಭಕ್ತ ಮಂಡಲಿಯ ವಶವಾಯಿತು. ಅದ್ಧೂರಿಯಿಂದ ಡಿಸೆಂಬರ್ ತಿಂಗಳಲ್ಲಿ ಹನುಮಜ್ಜಯಂತಿ ಉತ್ಸವಗಳು ಪ್ರಾರಂಭವಾದವು. ಬಡ ಮಕ್ಕಳಿಗೆ ಪ್ರೌಢಶಾಲೆಯ ತನಕ ಶಾಲೆಗಳನ್ನು ತೆರೆಯಲಾಯಿತು. ಸಂಜೆಯಲ್ಲಿ ಪ್ರವಚನ, ಉಪನ್ಯಾಸ ಕಾರ್ಯಕ್ರಮಗಳು ಆರಂಭವಾದವು. ಎಸ್ಸೆಸ್ಸೆಲ್ಸಿ, ಪಿಯುಸಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಚಿತ ಸಂಜೆ ತರಗತಿಗಳು ಏರ್ಪಾಡಾದವು. ಮುಂಜಾನೆ ಹಾಗೂ ಮಧ್ಯಾಹ್ನ ಯೋಗ ತರಗತಿಗಳು, ಸಂಜೆ ಉಚಿತ ಚಿಕಿತ್ಸಾಲಯಗಳು ತೆರೆದವು. ಭಕ್ತಾದಿಗಳ ನೆರವಿನಿಂದ ಕಲ್ಯಾಣ ಮಂಟಪ, ಪ್ರವಚನ ಮಂದಿರಗಳು ನಿರ್ಮಾಣವಾದವು. ನಿತ್ಯ ಅನ್ನ ದಾಸೋಹ ಕಾರ್ಯಕ್ರಮವೂ ಚಾಲ್ತಿಗೆ ಬಂತು. ಈ ಭಾಗದ ಹಿಂದೂ ಆಸ್ತಿಕ ಜನರ ಒಂದು ಮುಖ್ಯ ತಾಣವಾಗಿ ರಾಗಿಗುಡ್ಡ ಪರಿವರ್ತನೆಯಾಯಿತು.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.