ಯೂಫ್ರೆಟೀಸ್

ಯೂಫ್ರೆಟೀಸ್ - ಪಶ್ಚಿಮ ಏಷ್ಯದ ಅತ್ಯಂತ ಉದ್ದ ಹರಿವುಳ್ಳ ನದಿ, ಟರ್ಕಿಯ ಪರ್ವತಗಳ ಮಧ್ಯೆ ಹುಟ್ಟಿ, ಸಿರಿಯ, ಇರಾಕ್ ದೇಶಗಳ ಮುಖಾಂತರ ಹರಿದು, ಇರಾಕ್‍ನಲ್ಲಿ ಟೈಗ್ರಿಸ್ ನದಿಯೊಂದಿಗೆ ಕೂಡಿ ಪರ್ಷಿಯನ್ ಕೊಲ್ಲಿಯನ್ನು ಸೇರುತ್ತದೆ. ಇದರ ಒಟ್ಟು ಉದ್ದ ಸು. 3597 ಕಿಮೀ. ನದಿ ಪಾತ್ರದ ಒಟ್ಟು ವಿಸ್ತೀರ್ಣ ಸು. 649,750 ಚಕಿಮೀ. ಈ ನದಿಯು ಅನೇಕ ಪ್ರಾಚೀನ ನಾಗರಿಕತೆಗಳನ್ನು ಪೋಷಿಸಿ ಬೆಳೆಸಿದೆ.

ಟೈಗ್ರಿಸ್-ಯೂಫ್ರಟಿಸ್ ಹರಿವಿನ ನಕ್ಷೆ

ನದಿಯ ಹರಿವು

ಈ ನದಿಯ ಹರಿವನ್ನು ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಮೊದಲ ಭಾಗ ಕಾರಸು ಮತ್ತು ಮುರಾತ್ ನೆರೀ ಎಂಬ ಪಶ್ಚಿಮ ಮತ್ತು ಪೂರ್ವ ದಿಕ್ಕುಗಳಿಂದ ಹರಿವ ಎರಡು ನದಿ ಕವಲುಗಳಿಂದ ಕೂಡಿದ್ದು ಪಶ್ಚಿಮ ಯೂಫ್ರೆಟೀಸ್ ಎಂದೂ ಕರೆಯುವ ಕಾರಸು ಎರ್ಜುರಂನಿಂದ 24 ಕಿಮೀ ಉತ್ತರಕ್ಕೆ ಪರ್ವತ ಪ್ರಾಂತ್ಯದಲ್ಲಿ ಹುಟ್ಟಿ, ಸು. 456 ಕಿಮೀ. ಕ್ರಮಿಸಿ ಕೇಬಾಸ್ ಬಳಿ ಮುರಾತ್ ನದಿಯನ್ನು ಸೇರುತ್ತದೆ. ಮುರಾತ್ ನದಿ ಯೂಫ್ರೆಟೀಸ್‍ನ ದಕ್ಷಿಣಕ್ಕೆ 64 ಕಿಮೀ ದೂರದಲ್ಲಿ ಆರಾರತ್ ಪರ್ವತ ಶ್ರೇಣಿಯಲ್ಲಿ ಹುಟ್ಟಿ ಹೆಚ್ಚು ಕಡಿಮೆ ಯೂಫ್ರೆಟೀಸ್‍ಗೆ ಸಮಾನಾಂತರವಾಗಿ 608 ಕಿಮೀ, ಕ್ರಮಿಸಿ ಯೂಫ್ರೆಟೀಸನ್ನು ಕೂಡುತ್ತದೆ. ಮುಂದೆ ಕೇಬಾನ್‍ನಿಂದ ದಕ್ಷಿಣಕ್ಕೆ ನಿಸರ್ಗ ರಮಣೀಯವಾದ ಟಾರಸ್ ಪರ್ವತಗಳ ಮುಖಾಂತರ ಹರಿಯುವುದು. ನದಿಯ ಮುಂದಿನ ಮಧ್ಯದ ಭಾಗ ಸಂಪೂರ್ಣವಾಗಿ ಬರಡು ಪ್ರದೇಶದಲ್ಲಿ ಗುರುತಿಸಲಾಗಿದೆ. ಈ ಭಾಗ ಅಸ್ಸೀರಿಯನ್ ಮತ್ತು ಹಿಟೈಟ್ ಸಾಮ್ರಾಜ್ಯಗಳ ಗಡಿ ಪ್ರದೇಶವಾಗಿತ್ತು. ಜೊತೆಗೆ ಪರ್ಶಿಯನ್ ಮತ್ತು ರೋಮನ್ ಸಾಮ್ರಾಜ್ಯಗಳ ಭಾಗವೂ ಆಗಿತ್ತು. ಸಂಸತ್ ಪಟ್ಟಣ ಪ್ರಾಚೀನ ಸೆಲ್ಯೂಸಿಡ್ ಸಾಮ್ರಾಜ್ಯದ ರಾಜಧಾನಿ ಸಮೂಸತ ನಗರದ ಅವಶೇಷಗಳ ಮೇಲೆ ನಿಂತಿದೆ. ಇತರ ಮುಖ್ಯ ಪ್ರಾಚೀನ ಕೇಂದ್ರಗಳಾದ ಥಪ್ಸಕಸ್, ಡೌನರಾ, ಸಿಫಿನ್, ಸುರಾ, ಹೆರಾಕ್ಲಿಯ, ಕ್ಯಾಲಿನಿಕಸ್ (ಹರೂನ್ ಅಲ್-ರಷೀದಾನ್ ರಾಜಧಾನಿ), ಜೆಲೇಬೆಯ ಮತ್ತು ಹಲೇಬಿಯ ಪಟ್ಟಣಗಳು ಪಾಳು ನಿವೇಶನಗಳು : ಹಧಿಧಾ, ಅಲ್‍ಉಜ್ ಇತ್ಯಾದಿ ಅನೇಕ ಪ್ರಾಚೀನ ನೆಲೆಗಳು ಈ ಭಾಗದಲ್ಲಿ ಯೂಫ್ರೆಟೀಸ್ ನದಿಯ ದಂಡೆಯ ಮೇಲೆ ಬೆಳೆದಿದ್ದವು.

ಯೂಫ್ರೆಟೀಸ್ ಸಂಸತ್‍ನಿಂದ ಹಲ್‍ಫೇಡಿಯವರೆಗೆ ನೈಋತ್ಯಾಭಿಮುಖವಾಗಿ ಹರಿದು ಮೆಡಿಟರೇನಿಯನ್ ಸಮುದ್ರಕ್ಕೆ 152 ಕಿಮೀ. ಸಮೀಪ ಹರಿದು ಅಲ್ಲಿಂದ ದಕ್ಷಿಣಕ್ಕೆ ತಿರುಗಿ ಜೆರಾಬ್ಲಿಸ್ ಬಳಿ ಸಿರಿಯ ದೇಶವನ್ನು ಪ್ರವೇಶಿಸುತ್ತದೆ. ಅಲ್ಲಿಂದ ಆಗ್ನೇಯಾಭಿಮುಖವಾಗಿ ಸಿರಿಯಾನ್ ಮರುಭೂಮಿಯಲ್ಲಿ ದೀರ್ಘವಾಗಿ ಹುದು ಅಬುಕೆಮಾಲ್‍ನ ದಕ್ಷಿಣಕ್ಕೆ ಇರಾಕ್ ದೇಶವನ್ನು ಪ್ರವೇಶಿಸುತ್ತದೆ.

ನದಿಯ ಮುಂದಿನ ಕೆಳಗಿನ ಹರಿವು ಹಿಟ್ ಇಸ್‍ನಿಂದ ಪ್ರಾರಂಭವಾಗುತ್ತದೆ. ಈ ಪ್ರದೇಶದಲ್ಲಿ ಪ್ರಸಿದ್ಧಿಯಾದ ಬಿಟ್ಯುಮೆನ್ ಕೊಳಗಳು ಕಾಣಬರುತ್ತವೆ. ಇಲ್ಲಿಂದ ಬ್ಯಾಬಿಲಾನ್ ಪಟ್ಟಣದ ಗೋಡೆಗಳಿಗೆ ಬಳಿಯಲು ಬಳಸುತ್ತಿದ್ದ ಕಪ್ಪುರಾಳ ಸರಬರಾಜಾಗುತ್ತಿತ್ತೆಂದು ಪ್ರತೀತಿ. ಈ ಪ್ರದೇಶದಲ್ಲಿ ನದಿಯ ಬಹಳಷ್ಟು ಭಾಗ ವಿಶಾಲವಾಗಿದ್ದು ರಾಡಿಯಾಗಿ, ಮಂದಗಾಮಿಯಾಗಿ ಕಾಣಬರುತ್ತದೆ. ವಸಂತ ಋತುವಿನಲ್ಲಿ ಮಾತ್ರ ಪ್ರವಾಹದಿಂದ ಕೂಡಿ ನೀರು ಗರಿಷ್ಠಮಟ್ಟವನ್ನು ಮುಟ್ಟುತ್ತದೆ. ಯೂಫ್ರೆಟೀಸ್ ನದಿ ಪ್ರಾಚೀನ ಬ್ಯಾಬಿಲಾನ್ ಪಟ್ಟಣದ ಬಳಿ ಎರಡು ಕವಲುಗಳಾಗಿ ಒಡೆಯುತ್ತದೆ. ಉತ್ತರವಾಹಿನಿಯನ್ನು ಷಟ್‍ಹಿಲ್ಲೇ ಎಂದೂ ದಕ್ಷಿಣವಾಹಿನಿಯನ್ನು ಷಟ್ ಹಿಂದಿಯ ಎಂದೂ ಕರೆಯುತ್ತಾರೆ. ಎರಡೂ ಶಾಖೆಗಳೂ ಹೆಚ್ಚೂ ಕಡಿಮೆ ಸಮಾನಾಂತರವಾಗಿ 192 ಕಿಮೀ ದೂರವನ್ನು ಆಗ್ನೇಯಾಭಿಮುಖವಾಗಿ ಕ್ರಮಿಸಿ ಸಮವಾ ಬಳಿ ಮತ್ತೆ ಒಂದುಗೂಡುತ್ತದೆ. ಸಮವಾ ಬಳಿ ನದಿ ಪಾತ್ರ ಸುಮಾರು ಒಂದೂವರೆ ಕಿಮೀನಷ್ಟು ವಿಸ್ತಾರವಾಗಿದ್ದು ಹೋರ್ ಅಲ್ ಹಮಾರ್ ಮುಂತಾದ ಅನೇಕ ಸರೋವರಗಳನ್ನೂ ಕೂಡಿಸಿಕೊಂಡು ಹರಿಯುತ್ತದೆ. ಇಲ್ಲಿಂದ ಮುಂದೆ ಯೂಫ್ರೆಟೀಸ್ ನದಿ ಬಸ್ರಾಕ್ಕೆ ಉತ್ತರದಲ್ಲಿ ಟೈಗ್ರಿಸ್ ನದಿಯನ್ನು ಅಲ್‍ಕುರ್‍ನ ಬಳಿ ಕೂಡಿಕೊಂಡು ಷಟ್ ಅಲ್ ಅರಬ್ ನದಿಯಾಗಿ ಹರಿಯುತ್ತದೆ. ಈ ನದಿ ಪಾತ್ರವೇ ಇರಾಕ್ ಮತ್ತು ಇರಾನ್ ದೇಶಗಳ ಎಲ್ಲೆಯೂ ಆಗಿದೆ. ಫಟ್ ಅಲ್ ಅರಬ್ ನದಿ ಬಸ್ರಾದಿಂದ 88 ಕಿಮೀ ಅಗ್ನೇಯಕ್ಕೆ ಇರಕ್‍ನ ಫಾವೊ ಬಳಿ ಪರ್ಷಿಯನ್ ಕೊಲ್ಲಿಯನ್ನು ಸೇರುತ್ತದೆ.

ಸಂಚಾರಮಾರ್ಗ

ಹಿಂದಿನ ಕಾಲದಲ್ಲಿ ವ್ಯವಸಾಯಕ್ಕಾಗಿ ನಿರ್ಮಿಸಲಾಗಿದ್ದು ಅನೇಕ ಅಡ್ಡೆಗಳ ಕಟ್ಟೆಗಳ ಅವಶೇಷಗಳಿಂದಾಗಿ ನದಿಯನ್ನು ಪ್ರಸ್ತುತ ಸಂಚಾರ ಮಾರ್ಗವನ್ನಾಗಿ ಉಪಯೋಗಿಸುವುದಕ್ಕೆ ತೊಂದರೆಯಾಗಿದೆ. ನದಿಮುಖಜದಿಂದ ಸು. 80 ಕಿಮೀ ಮೇಲಕ್ಕೆ ಯೂಫ್ರೆಟೀಸ್ ಮತ್ತು ಟೈಗ್ರಿಸ್ ನದಿ ಸಂಗಮದವರೆಗೆ ಮಾತ್ರ ಸಂಚಾರ ಯೋಗ್ಯವಾಗಿದೆ.

ನೀರಾವರಿ

ಒಂದನೆಯ ಮಹಾಯುದ್ಧಕ್ಕೆ ಮುಂಚೆ ಈ ನದಿಗೆ ಎರಡು ನೀರಾವರಿ ಯೋಜನೆಗಳನ್ನು ಹಮ್ಮಿಕೊಳ್ಳಲಾಯಿತು. ಅವುಗಳಲ್ಲಿನ ಕೆಳಗಿನ ಯೂಫ್ರೆಟೀಸ್ ಒಂದು ಅಣೆಕಟ್ಟು 1913ರಲ್ಲಿ ಪೂರ್ಣವಾಯಿತು. ಹಬ್ಬನಿಯ ಸರೋವರವನ್ನು ಕೂಡಿಸಿಕೊಂಡು ಯೋಜಿಸಲಾದ ಮತ್ತೊಂದು ಯೋಜನೆ ಎರಡನೆಯ ಮಹಾಯುದ್ಧದಿಂದಾಗಿ ನಿಂತು ಹೋಗಿ 1956ರಲ್ಲಿ ಪೂರ್ಣಗೊಂಡಿತು.

ಇತಿಹಾಸ

ಯೂಫ್ರೆಟೀಸ್ ನದಿಯ ಕೆಳಗಿನ ಭಾಗವನ್ನು ಪ್ರಪಂಚದ ನಾಗರೀಕತೆಯ ತೊಟ್ಟಿಲು ಎಂದು ಕರೆಯಲಾಗಿದೆ. ಪ್ರಸಿದ್ಧವಾದ ಸುಮೇರಿಯನ್. ಬ್ಯಾಬಿಲಾನಿಯನ್ ನಾಗರಿಕತೆಗಳು ಇಲ್ಲಿ ನೆಲೆಸಿದವು. ಬೈಬಲ್‍ನಲ್ಲಿ ಯೂಫ್ರೆಟೀಸ್ ನದಿಯನ್ನು `ದಿ ರಿವರ್ ಎಂದು ಸಂಬೋಧಿಸಲಾಗಿದೆ. ಕೆಳಗಿನ ಹರಿವಿನ ಭಾಗ ಸಮತಟ್ಟಾದ ಮೆಕ್ಕಲುಮಣ್ಣಿನ ಪ್ರದೇಶವಾಗಿರುವುದರಿಂದ ಈ ಭಾಗವನ್ನು ವ್ಯವಸಾಯಕ್ಕೆ ಪ್ರಾಚೀನಕಾಲದಿಂದಲೂ ಬಳಸಲಾಗಿದೆ. ಹಿಂದೆ ನದಿಗೆ ಅನೇಕ ನಾಲೆಗಳನ್ನು ನಿರ್ಮಿಸಿ ಇಡೀ ಪ್ರದೇಶವನ್ನು ಕೃಷಿಯೋಗ್ಯವನ್ನಾಗಿ ಮಾಡಲಾಗಿತ್ತು. ಅಂಥ ಪ್ರಾಚೀನ ನೆಲೆಗಳಾದ ಕಾರ್ಕ್‍ಮಿಷ್, ಧಾಪ್ಸಕಸ್, ಅಲ್ ಫಲೂಜಾ, ಟಿಲ್ ವಿಲ್ ಒಬೆಯಿದ್ ಇದ್ದು ನದಿಯ ಪ್ರಾಚೀನತೆಯನ್ನೂ ಅದರ ಪ್ರಾಮುಖ್ಯತೆಯನ್ನೂ ಸಾರುತ್ತವೆ.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.