ಮತ್ತಾಯನು ಬರೆದ ಸುಸಂದೇಶಗಳು

ಹನ್ನೆರಡು ಜನ ಪ್ರೇಷಿತರಲ್ಲಿ ಹಾಗು ನಾಲ್ವರು ಸುಸಂದೇಶಕರ್ತರಲ್ಲಿ ಓರ್ವನಾದ ಸಂತ ಮತ್ತಾಯನು ಯೇಸುವಿನ ಪುನರುತ್ಥಾನ ಮತ್ತು ಸ್ವರ್ಗಾರೋಹಣವನ್ನು ಕಣ್ಣಾರೆ ಕಂಡವನಾಗಿದ್ದ. ಸಂತ ಐರೆನ್ಯೂಸ್‌ ಮತ್ತು ಅಲೆಕ್ಸಾಂಡ್ರಿಯಾಸಂತ ಕ್ಲೆಮೆಂಟ್‌ ಪ್ರಕಾರ ಮತ್ತಾಯನು ಇತರ ದೇಶಗಳಿಗೆ ಕಾಲಿಡುವ ಮೊದಲು ಜುದೇಯಯೆಹೂದ್ಯ ಸಮುದಾಯಕ್ಕಾಗಿ 15 ವರ್ಷಗಳ ಕಾಲ ಹೀಬ್ರೂ ಭಾಷೆಯಲ್ಲಿ ಧರ್ಮಬೋಧನೆಯನ್ನು ಮಾಡುತ್ತಿದ್ದ. ಇದೇ ವೇಳೆಯಲ್ಲೇ ಮತ್ತಾಯನು ತನ್ನ ಸುಸಂದೇಶವನ್ನು ಹೀಬ್ರೂ ಭಾಷೆಯಲ್ಲಿ ಬರೆದಿರಬೇಕು. ಆದರೆ ಅನೇಕರ ಅಭಿಪ್ರಾಯದ ಪ್ರಕಾರ ಆತ ಸುಸಂದೇಶವನ್ನು ಬರೆದದ್ದು ಗ್ರೀಕ್‌ ಭಾಷೆಯಲ್ಲೇ! ಮೊದಲು ಹೀಬ್ರೂ ಭಾಷೆಯಲ್ಲಿ ಸುಸಂದೇಶವನ್ನು ಬರೆದು ಅನಂತರ ಅದನ್ನು ಗ್ರೀಕ್‌ ಭಾಷೆಗೆ ಯಾಕೆ ತರ್ಜುಮೆಗೊಳಿಸಿರಬಾರದು? ಎಂದು ಅಭಿಪ್ರಾಯ ಪಡುವವರೂ ಇದ್ದಾರೆ. ಮಥಾಯನ ಸುಸಂದೇಶದಲ್ಲಿ ಕ್ರಿ.ಪೂ.2ರಿಂದ ಕ್ರಿ.ಶ.33ರ ಅವಧಿಯವರೆಗೆ ನಡೆದಂತಹ ಘಟನೆಗಳ ಚಿತ್ರಣವಿದೆ. ಮತ್ತಾಯನ ಸುಸಂದೇಶದಲ್ಲಿ ಬರುವ ವಿವರಣೆಗಳಲ್ಲಿ ಸುಮಾರು 40ರಷ್ಟು ಭಾಗ ಇತರ ಸುಸಂದೇಶಗಳಲ್ಲಿ ಕಂಡು ಬರುವುದಿಲ್ಲ. ವಿಶೇಷವಾಗಿ ಕನಿಷ್ಟ ಹತ್ತು ಸಾಮತಿಗಳಂತೂ ಇತರ ಸುಸಂದೇಶಗಳಲ್ಲಿ ಇಲ್ಲವೇ ಇಲ್ಲ ಎಂದು ಹೇಳಬಹುದು. ಅವುಗಳು; 1.ಕಳೆಗಳ ಸಾಮತಿ, 2.ಹೂತಿಟ್ಟ ನಿಧಿ, 3.ಅನರ್ಘ್ಯ ಮುತ್ತುರತ್ನ, 4.ಬೀಸುಬಲೆ, 5.ದಯೆಯಿಲ್ಲದ ಸೇವಕ, 6.ಉದಾರ ಮನದ ಮಾಲೀಕ, 7.ಆಡದೇ ಮಾಡುವವನು ಉತ್ತಮ, 8.ವಿವಾಹಕ್ಕೆ ತಕ್ಕ ವಸ್ತ್ರ ಧರಿಸದೇ ಬಂದ ಅತಿಥಿ, 9.ಹತ್ತು ಮಂದಿ ಕನ್ಯೆಯರ ಸಾಮತಿ, 10.ಪರಸೇವೆಯೇ ಪರಮಾತ್ಮನ ಸೇವೆ ಇತ್ಯಾದಿ.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.