ಸಂತ ಮತ್ತಾಯ

ಜುದೇಯದ ಅರಸ 'ಹೆರೋದ ಅಂತಿಪಾ'ನಿಗಾಗಿ ಕಫರ್ನೌಮ್‌ನಲ್ಲಿ ಶುಲ್ಕವನ್ನು ವಸೂಲಿಮಾಡುತ್ತಿದ್ದಾತನೇ 'ಲೇವಿ'. ಅದು ಆತನ ಮೂಲ ಹೆಸರು. ತಂದೆ ಆಲ್ಫೆಯುಸ್‌. ಈತನೂ ಶುಲ್ಕ ವಸೂಲಿ ಮಾಡುತ್ತಿದ್ದ. ಹುಟ್ಟೂರು ಗಲಿಲೀಯ, ಈತ ಅರಾಮೈಕ್‌ ಮತ್ತು ಗ್ರೀಕ್‌ ಭಾಷೆಯ ಪಾಂಡಿತ್ಯವನ್ನು ಹೊಂದಿದ್ದ. ಸಾಮಾಜಿಕವಾಗಿ ಅಂದು ಪಾಲೆಸ್ತೀನ್‌ನಲ್ಲಿ ಅರಾಮೈಕ್‌ ಭಾಷೆ ಪ್ರಚಲಿತದಲ್ಲಿದ್ದರೂ, ಮಾರುಕಟ್ಟೆಗಳಲ್ಲಿ ಗ್ರೀಕ್‌ ಭಾಷೆಯನ್ನೇ ಹೆಚ್ಚಾಗಿ ಬಳಸುತ್ತಿದ್ದರೆನ್ನಲಾಗಿದೆ. ಸುಂಕ ವಸೂಲಿಯಂತಹ ಕೆಲಸಗಳನ್ನು ನಿರ್ವಹಿಸುವ ಸರಕಾರಿ ಅಧಿಕಾರಿಗಳು ಅರಾಮೈಕ್‌ ಮತ್ತು ಗ್ರೀಕ್‌ ಭಾಷೆಗಳನ್ನು ಕಲಿತವರೇ ಆಗಿರಬೇಕೆಂಬ ನಿಯಮವಿದ್ದಿರಬೇಕು. ಹಾಗಾಗಿಯೇ ಲೇವಿ ಸುಂಕ ವಸೂಲಿಗಾಗಿ ನೇಮಿಸಲ್ಪಟ್ಟಿದ್ದ. ಪ್ರಾಯಶಃ ಯೇಸುವು ಲೇವಿಯನ್ನು ಅಲ್ಮಗೊರ್‌ ಎಂಬ ಸ್ಥಳದಲ್ಲಿ ಭೇಟಿಯಾಗಿ ತನ್ನ ಶಿಷ್ಯನಾಗಲು ಆಹ್ವಾನಿಸಿರಬಹುದು ಎಂದು ಊಹಿಸಲಾಗಿದೆ. ಯೇಸುವಿನ ಶಿಷ್ಯನಾದ ಬಳಿಕ ಲೇವಿಯ ಹೆಸರು 'ಮತ್ತಾಯ' ಅರ್ಥಾತ್‌ 'ದೇವರ ಉಡುಗೊರೆ' ಎಂದು ಬದಲಾಗಿರಬೇಕು. ಅನಂತರದ ದಿನಗಳಲ್ಲಿ ಮತ್ತಾಯನು ಯೇಸುವನ್ನು ಔತಣಕ್ಕಾಗಿ ತನ್ನ ಮನೆಗೆ ಆಹ್ವಾನಿಸುತ್ತಾನೆ. ಮತ್ತಾಯನ ಮನೆಯಲ್ಲಿ ಇನ್ನಷ್ಟು ಮಂದಿ ಸುಂಕ ವಸೂಲಿಗಾರರೂ, ಸಮಾಜದಿಂದ ಬಹಿಷ್ಕೃತರಾದವರೂ ಆ ಸಮಯದಲ್ಲಿ ಹಾಜರಿರುತ್ತಾರೆ. ಅವರೂ ಸಹ ಯೇಸುವಿನೊಂದಿಗೆ ಔತಣದಲ್ಲಿ ಭಾಗವಹಿಸುತ್ತಾರೆ. ಅದನ್ನು ಕಂಡ ಫರಿಸೇಯರೆಂಬ ಯೆಹೂದ್ಯರ ಒಂದು ಪಂಗಡ ಯೇಸುವನ್ನು ಹಂಗಿಸುತ್ತದೆ. 'ಶುಲ್ಕ ವಸೂಲಿಗಾರರ ಮತ್ತು ಪಾಪಿಗಳ ಸಂಗಡ ಕುಳಿತು ಊಟ ಮಾಡುತ್ತಾನೆ' ಎಂದು ಕುಹುಕವಾಡುತ್ತಾರೆ. ಯೇಸು ಅದಕ್ಕೆ ಮಾರ್ಮಿಕವಾಗಿಯೇ ಉತ್ತರಿಸುತ್ತಾರೆ; "ವೈದ್ಯನ ಅವಶ್ಯಕತೆಯಿರುವುದು ರೋಗಿಗಳಿಗೆ; ಆರೋಗ್ಯವಂತರಿಗಲ್ಲ...ನಾನು ಕರೆಯಲು ಬಂದಿರುವುದು ಧರ್ಮಿಷ್ಟರನ್ನಲ್ಲ, ಪಾಪಿಷ್ಟರನ್ನು!" ಎಂದು. ಹನ್ನೆರಡು ಜನ ಪ್ರೇಷಿತರಲ್ಲಿ ಹಾಗು ನಾಲ್ವರು ಸುಸಂದೇಶಕರ್ತರಲ್ಲಿ ಓರ್ವನಾದ ಮತ್ತಾಯನು ಯೇಸುವಿನ ಪುನರುತ್ಥಾನ ಮತ್ತು ಸ್ವರ್ಗಾರೋಹಣವನ್ನು ಕಣ್ಣಾರೆ ಕಂಡವನಾಗಿದ್ದ. ಸಂತ ಐರೆನ್ಯೂಸ್‌ ಮತ್ತು ಅಲೆಕ್ಸಾಂಡ್ರಿಯಾದ ಸಂತ ಕ್ಲೆಮೆಂಟ್‌ ಪ್ರಕಾರ ಮತ್ತಾಯನು ಇತರ ದೇಶಗಳಿಗೆ ಕಾಲಿಡುವ ಮೊದಲು ಜುದೇಯದ ಯೆಹೂದ್ಯ ಸಮುದಾಯಕ್ಕಾಗಿ 15 ವರ್ಷಗಳ ಕಾಲ ಹೀಬ್ರೂ ಭಾಷೆಯಲ್ಲಿ ಧರ್ಮಬೋಧನೆಯನ್ನು ಮಾಡುತ್ತಿದ್ದ. ಮತ್ತಾಯನು ಹುತಾತ್ಮನಾದನು ಎಂಬ ಅಭಿಪ್ರಾಯವಿದೆ. ಒಂದು ಸಂಪ್ರದಾಯದ ಪ್ರಕಾರ, ಇಥಿಯೋಪಿಯಾದ ರಾಜನಾದ 'ಎಗ್ಗಿಪ್ಪ'ನ ಮಗಳಾದ 'ಇಫಿಜೀನಿಯ' ಎಂಬವಳು ಕ್ರೈಸ್ತ ಮತವನ್ನು ಅಪ್ಪಿ, ಕನ್ಯಾಸ್ತ್ರಿಯ ಪಟ್ಟವನ್ನು ಸ್ವೀಕರಿಸಿ ದೇವರ ಸೇವೆಗಾಗಿ ತನ್ನನ್ನು ಮುಡಿಪಾಗಿ ಇಟ್ಟಿದ್ದಳು. ಆದರೆ ಎಗ್ಗಿಪ್ಪನ ನಂತರದ ರಾಜನಾದ 'ಹಿರ್ತಾಕಸ್‌' ಎಂಬವನು ಕಾಮಾಂಧನಾಗಿ ಅವಳನ್ನು ವಶಪಡಿಸಿಕೊಳ್ಳಲು ಯತ್ನಿಸಿದ. ಆ ವಿಷಯ ತಿಳಿದ ಸಂತ ಮತ್ತಾಯನು ರಾಜನನ್ನು ಆಕ್ಷೇಪಿಸಿ ಅವನ ಕೃತ್ಯವನ್ನು ಖಂಡಿಸಿದ. ಇದರಿಂದ ಕೋಪೋದ್ರಿಕ್ತನಾದ ರಾಜನು ಸೈನಿಕನೊಬ್ಬನ ಮುಖಾಂತರ ಬಲಿಪೂಜೆಯಲ್ಲಿ ನಿರತನಾಗಿದ್ದ ಸಂತ ಮತ್ತಾಯನನ್ನು ಕೊಲ್ಲಿಸಿದ. ಹುತಾತ್ಮನಾದ ಸಂತ ಮತ್ತಾಯನ ದೇಹದ ಅವಶೇಷವನ್ನು ಜಾರ್ಜಿಯಾದ ಗೋನಿಯೋ ಕೋಟೆಯಲ್ಲಿ ಸಂರಕ್ಷಿಸಿ ಇಡಲಾಗಿದೆ. ಸೆಪ್ಟಂಬರ್‌ 21ರಂದು ಸುಸಂದೇಶಕರ್ತ ಸಂತ ಮತ್ತಾಯನ ಹಬ್ಬದ ದಿನಾಚರಣೆ.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.