ಮಡಗಾಸ್ಕರ್

ಮಡಗಾಸ್ಕರ್ ಅಥವಾ ಮಡಗಾಸ್ಕರ್ ಗಣರಾಜ್ಯ (ಹಳೆಯ ಹೆಸರು ಮಲಗಸಿ/ಮ್ಯಾಲಗಾಸೀ ಗಣರಾಜ್ಯ), ಹಿಂದೂ ಮಹಾಸಾಗರದಲ್ಲಿ ಪೂರ್ವ ಆಫ್ರಿಕಾದ ದಕ್ಷಿಣ ದಂಡೆಯ ಸಮೀಪದಲ್ಲಿ ಇರುವ ಒಂದು ದ್ವೀಪ ರಾಷ್ಟ್ರ. ಮಡಗಾಸ್ಕರ್ ದ್ವೀಪ ಪ್ರಪಂಚದ ನಾಲ್ಕನೇ ಅತಿ ದೊಡ್ಡ ದ್ವೀಪ. ಇದು ಪ್ರಪಂಚದ ಗೊತ್ತಿರುವ ಸಸ್ಯ ಮತ್ತು ಪ್ರಾಣಿ ಪ್ರಬೇಧಗಳಲ್ಲಿನ ೫% ಪ್ರಬೇಧಗಳನ್ನು ಹೊಂದಿದೆ. ಇದರಲ್ಲಿ ಅನೇಕ ಪ್ರಬೇಧಗಳು ಕೇವಲ ಇಲ್ಲಿ ಮಾತ್ರ ಜೀವಿಸುತ್ತವೆ.

Repoblikan'i Madagasikara
République de Madagascar

ಮಡಗಾಸ್ಕರ್ ಗಣರಾಜ್ಯ
ಧ್ವಜ ಲಾಂಛನ
ಧ್ಯೇಯ: Tanindrazana, Fahafahana, Fandrosoana (ಮಲಗಸಿ)
Patrie, liberté, progrès ( ಫ್ರೆಂಚ್)
"ಪೂರ್ವಜರ ಭೂಮಿ, ಸ್ವಾತಂತ್ರ್ಯ, ಪ್ರಗತಿ"
ರಾಷ್ಟ್ರಗೀತೆ: Ry Tanindraza nay malala ô
ಓ, ನಮ್ಮ ಪ್ರೀತಿಯ ಪೂರ್ವಜರ ನಾಡೆ

Location of ಮಡಗಾಸ್ಕರ್

ರಾಜಧಾನಿ ಅನ್ಟನನರಿವೊ
18°55′S 47°31′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಮಲಗಸಿ, ಫ್ರೆಂಚ್, ಆಂಗ್ಲ1
ಸರಕಾರ ಗಣರಾಜ್ಯ
 - ರಾಷ್ಟ್ರಪತಿ ಮಾರ್ಕ್ ರವಲೊಮನನ
 - ಪ್ರಧಾನ ಮಂತ್ರಿ ಚಾರ್ಲ್ಸ್ ರಬೆಮನನ್ಜಾರ
ಸ್ವಾತಂತ್ರ್ಯ ಫ್ರಾನ್ಸ್ ಇಂದ 
 - ದಿನಾಂಕಜೂನ್ ೨೬, ೧೯೬೦ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ587,041 ಚದರ ಕಿಮಿ ;  (45th)
 226,597 ಚದರ ಮೈಲಿ 
 - ನೀರು (%)0.13%
ಜನಸಂಖ್ಯೆ  
 - ಜುಲೈ ೨೦೦೭ರ ಅಂದಾಜು19,448,815 [1] (55th)
 - ೧೯೯೩ರ ಜನಗಣತಿ 12,238,914
 - ಸಾಂದ್ರತೆ 33 /ಚದರ ಕಿಮಿ ;  (171st)
86 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೬ರ ಅಂದಾಜು
 - ಒಟ್ಟು$17.270 billion (123rd)
 - ತಲಾ$905 (169th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
0.509 (143th)  ಮಧ್ಯಮ
ಕರೆನ್ಸಿ ಮಲಗಸಿ ಅರ್ಯಾರಿ (MGA)
ಸಮಯ ವಲಯ EAT (UTC+3)
 - ಬೇಸಿಗೆ (DST) not observed (UTC+3)
ಅಂತರ್ಜಾಲ TLD .mg
ದೂರವಾಣಿ ಕೋಡ್ +261
1ಏಪ್ರಿಲ್ ೨೭, ೨೦೦೭ರಿಂದ ಅಧಿಕೃತ ಭಾಷೆಗಳು

ಮ್ಯಾಲಗಾಸೀ ಆಫ್ರಿಕದ ಆಗ್ನೇಯದಲ್ಲಿ 386 ಕಿಮೀ ದೂರದಲ್ಲಿರುವ ಈ ದ್ವೀಪ ಸಮೂಹವನ್ನು ಈ ದ್ವೀಪ ಉತ್ತರದಿಂದ ದಕ್ಷಿಣಕ್ಕೆ 1580 ಕಿಮೀ ಉದ್ದವಿದ್ದು ಪೂರ್ವದಿಂದ ಪಶ್ಚಿಮಕ್ಕೆ 579 ಕಿಮೀ ಅಗಲವಿದೆ. ಇದರ ತೀರಪ್ರದೇಶದ ಒಟ್ಟು ಉದ್ದ 4180 ಕಿಮೀ. ಒಟ್ಟು ವಿಸ್ತೀರ್ಣ 5,84,041 ಚಕಿಮೀ ಜನಸಂಖ್ಯೆ 10,303,000 (1986) ರಾಜಧಾನಿ ಟನನರೀವೋ.

ಭೌತಲಕ್ಷಣ

ಮ್ಯಾಲಗಾಸೀ ಭೂಪ್ರದೇಶವನ್ನು ಮಧ್ಯಬಾಗದ ಪ್ರಸ್ಥಭೂಮಿ ಪೂರ್ವದ ತೀರಪ್ರದೇಶ ಮತ್ತು ಪಶ್ಚಿಮ ಭಾಗದಲ್ಲಿಯ ಕೆಳಮಟ್ಟದ ಪ್ರಸ್ಥಭೂಮಿ ಹಾಗೂ ವಿಶಾಲವಾದ ಬಯಲು ಪ್ರದೇಶ ಎಂದು ವಿಂಗಡಿಸಬಹುದು. ಸಮುದ್ರ ಮಟ್ಟಕ್ಕೆ ಸುಮಾರು 761-1371 ಮೀ ಎತ್ತರವಿರುವ ಮಧ್ಯಭಾಗ ಪ್ರಸ್ಥಭೂಮಿಯ ಭೂಸ್ತರ ಮಡಿಕೆಗಳಿಂದ ಕೂಡಿದ್ದು ಪಶ್ಚಿಮದ ಕಡೆಗೆ ವಾಲಿದೆ. ಅಗ್ನಿಪರ್ವತದಿಂದ ಉಂಟಾಗಿರುವ 2876 ಮೀ ಎತ್ತರದ ಶಿಖರ ದ್ವೀಪದಲ್ಲಿಯೇ ಹೆಚ್ಚು ಎತ್ತರ ಪ್ರದೇಶ. ಪ್ರಸ್ಥಭೂಮಿಯ ಪೂರ್ವ ಹಾಗೂ ಪಶ್ಚಿಮದ ಎಲ್ಲೆಗಳು ಕಡಿದಾಗಿದ್ದು ದಕ್ಷಿಣದ ಕಡೆಯಲ್ಲಿ ಇಳಿಜಾರಿನಿಂದ ಕೂಡಿದೆ. 304 - 608 ಮೀಗಳಷ್ಟು ಕಡಿದಾಗಿರುವ ಪೂರ್ವದ ದುರ್ಗಮ ಸ್ತರಗಳನ್ನು ದಿ ಗ್ರೇಟ್ ಕ್ಲಿಫ್ ಅಥವಾ ಕ್ಲಿಫ್ ಆಫ್ ಅಂಗಾವೊ ಎಂದು ಕರೆಯುತ್ತಾರೆ. ಈ ಪ್ರಪಾತಗಳ ಹಿಂಬದಿಯಲ್ಲಿ ಪ್ರಾಚೀನ ಸರೋವರಗಳ ಅವಶೇಷಗಳಿವೆ. ಇವುಗಳಲ್ಲಿ ಪ್ರಮುಖವಾದದ್ದು ಅಲೋಟ್ರಾ. ಪೂರ್ವ ತೀರದುದ್ದಕ್ಕೂ ಇರುವ ಸರಾಸರಿ 48 ಕಿಮೀ. ಅಗಲದ ಇಕ್ಕಟ್ಟಾದ ತೀರಪ್ರದೇಶ ಮೆಕ್ಕಲು ಮಣ್ಣಿನಿಂದ ಕೂಡಿದ್ದು ಫಲವತ್ತಾಗಿದೆ. ಈ ತೀರ ಮರಳಿನ ದಿಬ್ಬಗಳಿಂದ ಹಾಗೂ ಬಂಡೆಗಳಿಂದ ಕೂಡಿದ್ದು ಹಡಗುಗಳಿಗೆ ಅಪಾಯಕಾರಿಯಾಗಿದೆ. ಪಶ್ಚಿಮಭಾಗದ ಪ್ರಸ್ಥಭೂಮಿ ಹಾಗೂ ಬಯಲುಪ್ರದೇಶ ವಿಶಾಲವಾಗಿದ್ದು ಅನೇಕ ಫಲವತ್ತಾದ ನದೀ ಕಣಿವೆಗಳಿಂದ ಕೂಡಿದೆ. ಸಮುದ್ರತೀರ ಹವಳದ ದಿಬ್ಬಗಳಿಂದಲೂ ಮ್ಯಾಂಗ್ರೋವ್ ವೃಕ್ಷಸಮೂಹಗಳಿಂದಲೂ ಕೂಡಿದೆ. ವಾಯುವ್ಯ ತೀರದಲ್ಲಿ ಅನೇಕ ಅಳಿವೆಗಳೂ ಕೊಲ್ಲಿಗಳೂ ಇವೆ. ಮೊಜಾಂಬಿಕ್ ಕಡಲ್ಗಾಲುವೆ ತೀರದಲ್ಲಿ ಮೆಕ್ಕಲು ಮಣ್ಣನ್ನು ಹರಡುತ್ತದೆ. ಈ ದ್ವೀಪದ ಸುತ್ತ ಇರುವ ಅನೇಕ ದ್ವೀಪಗಳಲ್ಲಿ ಪ್ರಮುಖವಾದದ್ದು ಹಾಗೂ ಹೆಚ್ಚು ಜನಸಂಖ್ಯೆಯುಳ್ಳದ್ದು ನಾಸೀ ಬೇ ದ್ವೀಪ.

ಪ್ರಸ್ಥಭೂಮಿಯ ಪೂರ್ವದ ಕಡಿದಾದ ಭಾಗದಲ್ಲಿ ರಭಸವಾಗಿ ಹರಿಯುವ ನದಿಗಳಿವೆ. ಇವುಗಳ ಉದ್ದ ಕಡಿಮೆಯಿದ್ದು ಅವು ತೀರದಲ್ಲಿಯೇ ಲಗೂನ್‍ಗಳಿಗೆ ಅಥವಾ ಸಮುದ್ರಕ್ಕೆ ಸೇರುತ್ತವೆ. ಈ ನದಿಗಳಲ್ಲಿ ಮುಖ್ಯವಾದವು ಮಂಡ್ರಾರೆ, ಮನರರ, ಫರೋನಿ, ಇವಾಂಡ್ರೊ ಮತ್ತು ಮಾನಿನ್‍ಗೊರಿ. ಪ್ರಸ್ಥಭೂಮಿಯ ಭಾಗ ಹಂತಹಂತವಾಗಿ ಇಳಿಜಾರಿನಿಂದ ಕೂಡಿರುವುದರಿಂದ ಇಲ್ಲಿ ಹೆಚ್ಚು ಉದ್ದವಾದ ಮತ್ತು ದೊಡ್ಡದಾದ ನದಿಗಳಿವೆ. ಈ ದ್ವೀಪದಲ್ಲಿ ಅಗ್ನಿಪರ್ವತಗಳಿಂದಾದ ಅನೇಕ ಸರೋವರಗಳನ್ನು ಕಾಣಬಹುದು.

ವಾಯುಗುಣ

ನವಂಬರ್‍ನಿಂದ ಏಪ್ರಿಲ್ ತನಕ ಬೇಸಗೆ ಹಾಗೂ ಮಳೆಗಾಲ. ಮೇನಿಂದ ಅಕ್ಟೋಬರ್ ತನಕ ಚಳಿಗಾಲ. ಇಲ್ಲಿಯ ವಾಯುಗುಣ ಆಗ್ನೇಯ ವಾಣಿಜ್ಯ ಮಾರುತ ಹಾಗೂ ವಾಯುವ್ಯ ಮಾನಸೂನ್ ಮಾರುತಗಳಿಂದ ಪ್ರಭಾವಿತವಾಗಿದೆ. ವಾಣಿಜ್ಯ ಮಾರುತಗಳು ವರ್ಷದ ಸದಾಕಾಲವೂ ಬೀಸುತ್ತಿದ್ದು ಮೇನಿಂದ ಅಕ್ಟೋಬರ್ ತನಕ ಅತ್ಯಂತ ಬಲಯುತವಾಗಿರುತ್ತದೆ. ದ್ವೀಪದ ಪ್ರಸ್ಥಭೂಮಿಯ ಮೇಲೆ ಮಾರುತಗಳು ಬೀಸಿದಂತೆಲ್ಲಾ ತೇವಾಂಶ ಕಡಿಮೆಯಾಗಿ ಪಶ್ಚಿಮಭಾಗಕ್ಕೆ ಬಂದಾಗ ಒಣಹವೆಯಾಗುತ್ತದೆ. ಮಳೆಯ ವಾರ್ಷಿಕ ಪರಿಮಾಣ ವಾಯುವ್ಯ ಭಾಗದ ನಾಸೀ ಬೇ ದ್ವೀಪದಲ್ಲಿ 2300 ಮಿಮೀ ಇದ್ದರೆ ಪಶ್ಚಿಮ ತೀರದ ಮೈಂಟಿರಾನೋ ಮತ್ತು ಮೊರೊನ್‍ದವಾಗಳಲ್ಲಿ 760 ಮಿಮೀ ಹಾಗೂ ನೈಋತ್ಯಭಾಗದ ಟುಲಿಯರ್‍ನಲ್ಲಿ 330 ಮಿಮೀ. ಪ್ರಸ್ಥಭೂಮಿಯಲ್ಲಿ ಸಾಧಾರಣ ಮಳೆಯಾಗುತ್ತದೆ. ಟನನರೀವೊನಲ್ಲಿ ಬೀಳುವ ಮಳೆಯ ವಾರ್ಷಿಕ ಪರಿಮಾಣ 134 ಸೆಂಮೀ. ಡಿಸೆಂಬರ್‍ನಿಂದ ಮಾರ್ಚ್ ತನಕ ಅನೇಕ ಬಾರಿ ರಭಸದ ಚಂಡಮಾರುತ ಬೀಸಿ ಧಾರಾಕಾರವಾಗಿ ಮಳೆ ಬೀಳುತ್ತದೆ ಹಾಗೂ ಅನೇಕ ವೇಳೆ ವಿನಾಶಕಾರಕ ಪ್ರವಾಹಗಳೂ ಬರುತ್ತವೆ. ಜುಲೈ ವರ್ಷದ ಅತ್ಯಂತ ತಂಪಾದ ತಿಂಗಳು. ಆಗ ಉಷ್ಣತ 120-250 ಅ. ಇರುತ್ತದೆ. ಡಿಸೆಂಬರ್‍ನಲ್ಲಿ ಉಷ್ಣತೆ ಅತ್ಯಂತ ಹೆಚ್ಚು. ಪ್ರಸ್ಥಭೂಮಿಗೆ ಬಂದಂತೆ ಹವೆ ತಂಪಾಗುತ್ತದೆ.

ಸಸ್ಯ ಹಾಗೂ ಪ್ರಾಣಿ ಸಂಪತ್ತು

ಸಿಫಾಕ.ಪ್ರಾಪಿಥೆಕಸ್; Propithecus coquereli 02

ಹಿಂದೆ ಈ ದ್ವೀಪದ ಹೆಚ್ಚಿನ ಭಾಗ ನಿತ್ಯಹರಿದ್ವರ್ಣದ ಕಾಡುಗಳಿಂದ ತುಂಬಿತ್ತು. ಈಗ ಪೂರ್ವಭಾಗದ ಇಳಿಜಾರು ಪ್ರದೇಶ ಮತ್ತು ಪಶ್ಚಿಮಭಾಗಗಳಲ್ಲಿ ಮಾತ್ರ ಈ ಕಾಡುಗಳನ್ನು ಸತತವಾಗಿ ಕಡಿಯುತ್ತಿರುವುದೇ ಇದಕ್ಕೆ ಕಾರಣ. ಪ್ರಸ್ಥಭೂಮಿ ಬೋಳಾಗಿದ್ದು ಸವೆಯುತ್ತಿದೆ. ದ್ವೀಪದ 7/8 ಭಾಗ ಹುಲ್ಲುಗಾವಲು, ಬಿದಿರುಮಳೆ ಮತ್ತು ಕುರುಚಲು ಗಿಡಗಳಿಂದ ಕೂಡಿದೆ. ಈ ದ್ವೀಪದಲ್ಲಿ ಗಂಧ, ಬೀಟೆ ಮತ್ತು ಎಬೊನಿ ಜಾತಿಯ ಮರಗಳಿವೆ. ತೀರಪ್ರದೇಶದಲ್ಲಿಯೂ ಸ್ಕ್ರೂ, ಪೈನ್, ತಾಳೆ ಮತ್ತು ಜೊಂಡು ಬೆಳೆಯುತ್ತದೆ. ದಕ್ಷಿಣ ಶುಷ್ಕಪ್ರದೇಶದಲ್ಲಿ ಮುಳ್ಳುಗಿಡಗಳು. ಕಾಕ್ಟಸ್, ಬಾಒ ಬಾಬ್‍ಗಳನ್ನು ಕಾಣಬಹುದು.

ನೆಲದ ಮೇಲೆ ಚಲಿಸುವಾಗ ಸಿಫಕಾಗಳು ಪಕ್ಕ-ಪಕ್ಕಕ್ಕೆ ನೆಗೆಯುತ್ತಾ ಚಲಿಸುತ್ತವೆ. (hop side-to-side) .Propithecus bipedal gallop

ಈ ದ್ವೀಪ ಇತರ ಭಾಗಗಳೊಡೆನೆ ಬೆರೆಯದೆ ಪ್ರತ್ಯೇಕತೆಯನ್ನು ಉಳಿಸಿಕೊಂಡಿರುವುದರಿಂದ ಇಲ್ಲಿ ಪ್ರಾಚೀನ ಸ್ತನಿ ಪ್ರಾಣಿವರ್ಗ ಉಳಿಯಲು ಸಾಧ್ಯವಾಗಿದೆ. ವಾನರ ಸಂತತಿಯಲ್ಲಿರುವ ಒಟ್ಟು ಉಪಜಾತಿಗಳಲ್ಲಿ ಸುಮಾರು ಮುಕ್ಕಾಲುಭಾಗ ಮಡಗಾಸ್ಕರ್‍ನಲ್ಲಿಯೇ ಇದೆ. ಮುಳ್ಳು ಹಂದಿಯ ಜಾತಿಗೆ ಸೇರಿದ ಕ್ರಿಮಿಕೀಟಗಳನ್ನು ತಿನ್ನುವ ಅನೇಕ ಪ್ರಾಣಿಗಳು ಇಲ್ಲಿವೆ. ಪಕ್ಷಿಗಳಲ್ಲಿ ಗಿನಿ ಹಕ್ಕಿಗಳು, ಕವುಜಗಹಕ್ಕಿ, ಪಾರಿವಾಳ, ಕ್ರೌಂಚಪಕ್ಷಿ, ಕೊಕ್ಕರೆಯನ್ನು ಹೋಲುವ, ಐಬಿಸ್, ಫ್ಲೆಮಿಂಗೊ, ಈಗ್ರೆಟ್ ಹಾಗೂ ಗೂಬೆಗಳನ್ನು ಕಾಣಬಹುದು. ಇಲ್ಲಿ ಸುಮಾರು 800 ಜಾತಿಯ ಚಿಟ್ಟೆಗಳು ಪತಂಗಗಳು ಮತ್ತು ಜೇಡಗಳಿವೆ. ಇಲ್ಲಿರುವ ಏಕಮಾತ್ರ ದೊಡ್ಡ ಹಾಗೂ ಅಪಾಯಕಾರಿ ಪ್ರಾಣಿಯೆಂದರೆ ಮೊಸಳೆ, ಇಲ್ಲಿ 3-3.5 ಮೀ ಉದ್ದದ ಹಾವುಗಳಿದ್ದರೂ ಅವು ಅಪಾಯಕಾರಿಗಳಲ್ಲ. ಸಮುದ್ರ ಹಾಗೂ ನದಿಗಳಲ್ಲಿ ವಲ್ಕವಂತ ಪ್ರಾಣಿಗಳು ಹೇರಳವಾಗಿವೆ. ಗ್ಲೋಬ್ ಷಿಪ್ ಮತ್ತು ಕಾ¥sóÀರ್ ಷಿಪ್ ಇಲ್ಲಿಯ ವೈಶಿಷ್ಟ್ಯಗಳು.

ಮಡಗಾಸ್ಕರ್ ದ್ವೀಪದಲ್ಲಿ ಹಲವು ಬಗೆಯ ಪ್ರಾಣಿಗಳು ಮತ್ತು ಪಕ್ಷಿ ಪ್ರಭೇದಗಳಿವೆ. ಇಲ್ಲಿ ಮಾತ್ರ ಕಂಡುಬರುವ ಪ್ರಾಣಿಗಳಲ್ಲಿ ವಿಶಿಷ್ಠ ಜೀವನ ಶೈಲಿಯ ಪ್ರಾಣಿ ಸಿಫಾಕ. ಇದರ ವೈಜ್ಞಾನಿಕ ಹೆಸರು ಪ್ರಾಪಿಥೆಕಸ್ (Propithecus). ಅವುಗಳ ಗಾತ್ರ ದೇಹದ ಉದ್ದ- 40 ರಿಂದ 55 ಸೆಂ.ಮೀ: ಮತ್ತು ಜೀವಿತಾವಧಿ - 15 ರಿಂದ 20 ವರ್ಷ;ತೂಕ 6 ರಿಂದ 8 ಕೆ.ಜಿ: [2]

ಜನಜೀವನ

ಮ್ಯಾಲಗಾಸೀ ಜನತೆ ತಮ್ಮನ್ನು ಆಫ್ರಿಕನ್ನರೆಂದು ಭಾವಿಸಿಲ್ಲ ಮತ್ತು ಸಮೀಪದ ಪೂರ್ವ ಆಫ್ರಿಕದ ರಾಜ್ಯಗಳೊಂದಿಗೆ ಸಂಪರ್ಕವನ್ನೂ ಹೊಂದಿಲ್ಲ. ಆದರೆ ಸುಮಾರು 483 ಕಿಮೀ ದೂರದ ಇಂಡೋನೇಷ್ಯರೊಡನೆ ಇವರ ಸಾಮ್ಯತೆಯನ್ನು ಕಾಣಬಹುದು. ಹಾಗೆಯೇ ಇಲ್ಲಿಯ ಸಸ್ಯ ಹಾಗೂ ಪ್ರಾಣಿಜೀವನ ಆಫ್ರಿಕದಲ್ಲಿರುವುದಕ್ಕಿಂತ ವಿಭಿನ್ನವಾಗಿದೆ. ಹಿಂದೆ ಇದು ಫ್ರೆಂಚ್ ವಸಾಹತಾಗಿದ್ದರಿಂದ ಫ್ರೆಂಚ್ ಮಾತನಾಡುವ ಪಶ್ಚಿಮ ಆಫ್ರಿಕದ ಕೆಲವು ರಾಜ್ಯಗಳೊಡನೆ ಸಂಬಂಧಹೊಂದಿದೆ. ಇಲ್ಲಿಯ ನಿವಾಸಿಗಳಲ್ಲಿ ಎರಡು ಪ್ರಮುಖ ಪಂಗಡಗಳನ್ನು ಕಾಣಬಹುದು. ಆಫ್ರಿಕನ್ ಮೂಲದ ಕರಿಯರು ಮತ್ತು ಇಂಡೋನೇಷ್ಯನ್ ಮೂಲದವರು. ಬಹುಸಂಖ್ಯಾತರಾದ ಕರಿಯರು ತೀರ ಪ್ರದೇಶದಲ್ಲಿ ವಾಸಿಸುತ್ತಾರೆ. ಇಂಡೊನೇಷ್ಯನ್ ಮೂಲದವರು ಮಧ್ಯ ಹಾಗೂ ದಕ್ಷಿಣದ ಪ್ರಸ್ಥಭೂಮಿಯಲ್ಲಿ ವಾಸವಾಗಿದ್ದಾರೆ. ಇಲ್ಲಿಯ ಸರ್ಕಾರ ಆಫ್ರಿಕನ್ನರ ವಶದಲ್ಲಿದೆ. ಭೂಮಿಯಲ್ಲಿ ವಾಸವಾಗಿದ್ದಾರೆ. ಇಲ್ಲಿಯ ಸರ್ಕಾರ ಆಫ್ರಿಕನ್ನರ ವಶದಲ್ಲಿದೆ. ಇಂಡೋನೇಷ್ಯನ್ ಮೂಲದವರು ವಿದ್ಯಾವಂತರಾದರೂ ಅಲ್ಪಸಂಖ್ಯಾತರಾದ್ದರಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಈ ಕಾರಣದಿಂದ ಎರಡು ಪಂಗಡಗಳ ನಡುವೆ ರಾಜಕೀಯ ಪೈಪೋಟಿಯಿದೆ.

ದೇಶಾದ್ಯಂತ ಬಳಕೆಯಲ್ಲಿರುವ ಮ್ಯಾಲಗಾಸೀ ಭಾಷೆ, ಮಲಯ ಹಾಗೂ ಇಂಡೋನೇಷ್ಯನ್ ಭಾಷೆಗಳನ್ನು ಹೋಲುತ್ತದೆ. ಫ್ರೆಂಚ್ ಮತ್ತು ಮ್ಯಾಲಗಾಸೀ ಎರಡೂ ಇಲ್ಲಿಯ ಅಧಿಕೃತ ಭಾಷೆಗಳು. ಇಲ್ಲಿಯ ನಿವಾಸಿಗಳಲ್ಲಿ 1/3 ಭಾಗ ಕ್ರೈಸ್ತರು. ದೇಶದ ವಾಯುವ್ಯ ಭಾಗದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮುಸ್ಲಿಮರಿದ್ದಾರೆ. ಉಳಿದವರು ಸಾಂಪ್ರದಾಯಿಕ ಧರ್ಮವನ್ನು ಅನುಸರಿಸುತ್ತಾರೆ. ಇವರು ತಮ್ಮ ಪೂರ್ವಜರನ್ನೂ ಭೂತಪ್ರೇತಗಳನ್ನೂ ಆರಾಧಿಸುತ್ತಾರೆ, ದನಕರುಗಳನ್ನು ಬಲಿಕೊಡುತ್ತಾರೆ ಹಾಗೂ ಕುಟುಂಬದ ಗೋರಿಗಳನ್ನು ಪೂಜಿಸುತ್ತಾರೆ.

ಇಲ್ಲಿಯ ಸುಮಾರು ಶೇಕಡಾ 45 ರಷ್ಟು ಅಕ್ಷರಸ್ಥರಿದ್ದಾರೆ. 1976 ರಿಂದ 6 ವರ್ಷಗಳವರೆಗೆ ಶಿಕ್ಷಣವನ್ನು 6 ರಿಂದ 13 ವರ್ಷ ವಯಸ್ಸಿನ ಮಕ್ಕಳಿಗೆ ಕಡ್ಡಾಯ ಮಾಡಲಾಗಿದೆ. 1975 ರಲ್ಲಿ ಪ್ರಾಥಮಿಕ ಶಾಲೆಗಳಿಗೆ ಹೋಗುವ ಮಕ್ಕಳ ಪ್ರಮಾಣ ಶೇಕಡಾ 94 ಆಗಿದ್ದು ಸೆಕೆಂಡರಿ ಶಾಲೆಗಳಿಗೆ ಹೋಗುವ ಮಕ್ಕಳ ಪ್ರಮಾಣ ಕೇವಲ ಶೇಕಡಾ 12 ರಷ್ಟಿದ್ದಿತ್ತು. 1961 ರಲ್ಲಿ ಸ್ಥಾಪಿಸಲಾದ ವಿಶ್ವವಿದ್ಯಾನಿಲಯದಲ್ಲಿ ಈತ ಆರು ಪ್ರಾದೇಶಿಕ ಕೇಂದ್ರಗಳೂ ಎಲ್ಲ ವೈದ್ಯಕೀಯ ಸೇವೆಗಳು ಉಚಿತ.

ಆರ್ಥಿಕತೆ

ಮ್ಯಾಲಗಾಸೀ ಕೃಷಿ ಪ್ರಧಾನ ದೇಶ. ಸುಮಾರು 4/5 ರಷ್ಟು ಜನವ್ಯವಸಾಯ ಮತ್ತು ಪಶುಪಾಲನೆಯನ್ನವಲಂಬಿಸಿದ್ದಾರೆ. ಬತ್ತ ಇಲ್ಲಿಯ ಪ್ರಮುಖ ಬೆಳೆ. ಮರಗೆಣಸು, ಕೆಲವು ಧಾನ್ಯಗಳು ಮತ್ತು ಆಲೂಗಡ್ಡೆ ಇತರ ಬೆಳೆಗಳು. ಸೀತಾಳೆ ಹೂವಿನ ಗಿಡ ಹಾಗೂ ಅದರ ಬೀಜ ಇವುಗಳ ಉತ್ಪಾದನೆಯಲ್ಲಿ ಮಡಗಾಸ್ಕರ್ ಪ್ರಪಂಚದಲ್ಲಿಯೇ ಮೊದಲನೆಯದು. ಲವಂಗ, ಕಬ್ಬು ಮತ್ತು ಬಾಳೆಹಣ್ಣು ರಫ್ತಾಗುವ ಉತ್ಪನ್ನಗಳು. ದೇಶದ ಒಟ್ಟು ರಫ್ತಿನ ಆದಾಯದಲ್ಲಿನ ಶೇಕಡಾ 41 ರಷ್ಟು ಕಾಫಿಬೀಜದಿಂದ ಬರುತ್ತದೆ. ರಾಸಾಯನಿಕ ವಸ್ತುಗಳು, ಖನಿಜೋತ್ಪನ್ನಗಳು, ಕಚ್ಚಾ ಪೆಟ್ರೋಲಿಯಂ, ಬಟ್ಟೆ ಲೋಹ ಪದಾರ್ಥಗಳು ಯಂತ್ರೋಪಕರಣಗಳು ಇಲ್ಲಿಗೆ ಆಮದಾಗುವ ಮುಖ್ಯ ಪದಾರ್ಥಗಳು. ಫ್ರಾನ್ಸ್ ಇದರ ಪ್ರಮುಖ ವ್ಯಾಪಾರಿ ಪಾಲುದಾರ. ಇತರ ದೇಶಗಳೆಂದರೆ ಅಮೆರಿಕ, ಜಪಾನ್, ಜರ್ಮನಿ, ಇಟಲಿ, ಇಂಗ್ಲೆಂಡ್‍ಗಳು.

ಇಲ್ಲಿ ಸಿಗುವ ಖನಿಜಗಳಲ್ಲಿ ಮುಖ್ಯವಾದದ್ದು ಕ್ರೋಮೈಟ್, ಇತರ ಖನಿಜಗಳು ಗ್ರಾಫೈಟ್, ಮೈಕಾ ಫಾಸ್ಪೇಟ್, ಸ್ಫಟಿಕಶಿಲೆ, ಬಾಕ್ಸೈಟ್, ಯುರೇನಿಯಮ್ ಮತ್ತು ಕಬ್ಬಿಣ; ಅದೆ ಇವನ್ನು ಲಾಭದಾಯಕವಾಗಿ ಉಪಯೋಗಿಸುವ ಪ್ರಯತ್ನ ಸಾಕಷ್ಟು ನಡೆದಿಲ್ಲ. ಇಲ್ಲಿಯ ಪ್ರಮುಖ ಕೈಗಾರಿಕೆಗಳೆಂದರೆ ವ್ಯವಸಾಯೋತ್ಪನ್ನಗಳ ಸಂಸ್ಕರಣ ಹಾಗೂ ಬಟ್ಟೆ ತಯಾರಿಕೆ. ಟೊಮಾಸಿನಾ ತೈಲ ಶುದ್ಧೀಕರಣ ಕೇಂದ್ರ ಸಂಸ್ಕರಿಸಿದ ತೈಲವನ್ನು ರಫ್ತು ಮಾಡುವುದು. 1985 ರಲ್ಲಿ ಈ ಶುದ್ಧೀಕರಣ ಕೇಂದ್ರ ಉತ್ಪಾದನೆಯ ರಾಸಾಯನಿಕವನ್ನು (ನ್ಯಾಫ್ತಾ) ಉಪಯೋಗಿಸಿ ರಸಾಯನಿಕ ಗೊಬ್ಬರ ತಯಾರಿಸಿದ, ಕಾರ್ಖಾನೆ ಸ್ಥಾಪಿಸಲಾಯಿತು. 1985 - 86 ರಲ್ಲಿ ಕೈಗಾರಿಕೆಗಳನ್ನು ಅಭಿವ್ಥದ್ಧಿಪಡಿಸಲು ಮತ್ತು ಉತ್ಪಾದನೆ ಹೆಚ್ಚಿಸಲು ವಿಶ್ವಬ್ಯಾಂಕ್ 60 ಮಿಲಿಯನ್ ಅಮೆರಿಕನ್ ಡಾಲರುಗಳ ಸಾಲವನ್ನು ನೀಡಿದೆ.

ತಮಾತವೆ ಮತ್ತು ಮಾಜುಂಗ ಇಲ್ಲಿಯ ಪ್ರಮುಖ ಬಂದರುಗಳು. ಟನನ ರೀವೋನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ದೇಶದಲ್ಲಿ ಒಟ್ಟು 200 ವಿಮಾನ ನಿಲ್ದಾಣಗಳಿದ್ದು ಅದರಲ್ಲಿ 1/3 ಭಾಗ ಸಾರ್ವಜನಿಕ ವಾಯುಯಾನಕ್ಕೆ ಮೀಸಲಾಗಿದೆ. ಇಲ್ಲಿಯ ಭೂಪ್ರದೇಶ ಸಂಚಾರ ಸೌಲಭ್ಯಗಳು ಅಭಿವೃದ್ಧಿಯಾಗಿಲ್ಲ. ವಾಯುಯಾನ ಸೌಕರ್ಯ ದೇಶದ ಎಲ್ಲ ಕಡೆಯಲ್ಲಿ ಲಭ್ಯವಿದ್ದು ಪ್ರಮುಖ ಸಂಚಾರ ಮಾಧ್ಯಮವಾಗಿದೆ. ಇಲ್ಲಿ ಪ್ರವಾಸಿಗಳಿಗೆ ಅನೇಕ ಆಕರ್ಷಕ ತಾಣಗಳಿದ್ದರೂ ಸಾಕಷ್ಟು ಅಭಿವೃದ್ಧಿ ಪಡೆದಿಲ್ಲ.

ಆಡಳಿತ

ಅಧಿಕೃತವಾಗಿ ಮ್ಯಾಲಗಾಸೀ ಒಂದು ಗಣರಾಜ್ಯ. ಡಿಸೆಂಬರ್ 1975ರ ರಾಜ್ಯಾಂಗದ ಪ್ರಕಾರ ದೇಶದ ಶಾಸನಾಧಿಕಾರ 5 ವರ್ಷಗಳಿಗೊಮ್ಮೆ ವಯಸ್ಕ ಮತದಾನ ಪದ್ಧತಿಯ ಮೇಲೆ ಆಯ್ಕೆಯಾದ 137 ಸದಸ್ಯರನ್ನುಳ್ಳ ರಾಷ್ಟ್ರೀಯ ಜನತಾ ಅಸೆಂಬ್ಲಿಗೆ ಸೇರಿದೆ. ಕಾರ್ಯಾಂಗದ ಮುಖ್ಯಸ್ಥನಾದ ಅಧ್ಯಕ್ಷನನ್ನು ಏಳು ವರ್ಷ ಅವಧಿಗೆ ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿಯ ಅನುಸಾರ ಚುನಾಯಿಸುತ್ತಾರೆ. ಅಧ್ಯಕ್ಷ ಸವೋಚ್ಛ ಕ್ರಾಂತಿಕಾರಿ ಮಂಡಲಿಯ ಮುಖ್ಯಸ್ಥನೂ ಆಗಿದ್ದಾನೆ. ಈ ಸಲಹಾ ಮಂಡಲಿ ಮ್ಯಾಲಗಾಸೀ ಸಮಾಜವಾದಿ ಕ್ರಾಂತಿಯ ರಕ್ಷಣೆಯ ಭಾರವನ್ನು ಹೊತ್ತಿದೆ. ಈ ಮಂಡಲಿಯ ಸದಸ್ಯರನ್ನು ಅಧ್ಯಕ್ಷ ನೇಮಿಸುತ್ತಾನೆ. ಈ ನೇಮಕ ಮಾಡುವಾಗ 1/3 ರಷ್ಟು ಸದಸ್ಯರನ್ನು ರಾಷ್ಟ್ರೀಯ ಜನತಾ ಅಸೆಂಬ್ಲಿ ಆರಿಸಿದ ಜನರ ಪಟ್ಟಿಯಿಂದ ನೇಮಕ ಮಾಡಲಾಗುತ್ತದೆ. ಪ್ರಧಾನಮಂತ್ರಿಯನ್ನು ಅಧ್ಯಕ್ಷ ನೇಮಕ ಮಾಡುತ್ತಾನೆ. ಉಳಿದ ಮಂತ್ರಿ ಮಂಡಲದ ಸದಸ್ಯರನ್ನು ಪ್ರಧಾನಿಯ ಶಿಫಾರಸ್ಸಿನ ಅನುಸಾರವಾಗಿ ನೇಮಿಸಲಾಗುತ್ತದೆ. ಕೇಂದ್ರ ಸರ್ಕಾರ ಸ್ಥಳೀಯ ಸರ್ಕಾರಗಳ ಮೇಲೆ ಪೂರ್ಣ ಹತೋಟಿ ಹೊಂದಿದೆ. ದೇಶವನ್ನು ಆರು ಪ್ರಾಂತ್ಯಗಳಾಗಿ ವಿಭಾಗಿಸಲಾಗಿದೆ. 1972 ರ ಕ್ರಾಂತಿಯ ಅನಂತರ ಮಿಲಿಟರಿ ಅಧಿಕಾರಿಗಳೇ ದೇಶವನ್ನು ಆಳುತ್ತಿದ್ದಾರೆ.

ಇತಿಹಾಸ

ಕ್ರಿಸ್ತಪೂರ್ವದಿಂದ ಕ್ರಿ. ಶ. 15 ನೆಯ ಶತಮಾನದ ತನಕ ಇಂಡೋನೇಷ್ಯದಿಂದ ತಂಡತಂಡವಾಗಿ ವಲಸೆ ಬಂದ ಜನ ಇಲ್ಲಿಯ ಮಧ್ಯಭಾಗದ ಪ್ರಸ್ಥಭೂಮಿಯಲ್ಲಿ ನೆಲೆಸಿದರು. ಆಫ್ರಿಕ ಮತ್ತು ಅರೇಬಿಯನ್ ಪರ್ಯಾಯದ್ವೀಪದಿಂದ ವಲಸೆ ಬಂದ ನಿವಾಸಿಗರು ತೀರಪ್ರದೇಶದಲ್ಲಿ ನೆಲೆಸಿದರು. 14 ನೆಯ ಶತಮಾನದ ಅನಂತರ ಮುಸ್ಲಿಮರ ಸಣ್ಣ ಸಣ್ಣ ಗುಂಪುಗಳು ಆಫ್ರಿಕದ ಪೂರ್ವತೀರದಿಂದ ಈ ದ್ವೀಪದ ಉತ್ತರಭಾಗಕ್ಕೆ ಬಂದು ವ್ಯಾಪಾರಿ ವಸಾಹತುಗಳನ್ನು ಸ್ಥಾಪಿಸಿದರು.

ಇನ್ನು ಕೆಲವು ಮುಸ್ಲಿಮರು ಆಫ್ರಿಕನ್ನರೊಡನೆ ಬೆರೆತು ಆಗ್ನೇಯಭಾಗದಲ್ಲಿ ಜಫಿರಮಿನಿಯ ಮತ್ತು ಅಂಟೊಮೋರೋ ಸಾಮ್ರಾಜ್ಯಗಳನ್ನು ಸ್ಥಾಪಿಸಿದರು. ಮಾರ್ಕೊಪೋಲೋನ ಬರೆಹಗಳಲ್ಲಿ ಈ ದೇಶದ ಉಲ್ಲೇಖವನ್ನು ಕಾಣಬಹುದು. ಈ ದ್ವೀಪಕ್ಕೆ ಬಂದ ಮೊದಲನೆಯ ಯುರೋಪಿಯನ್ನನೆಂದರೆ 1500 ರಲ್ಲಿ ಇಲ್ಲಿಗೆ ಬಂದ ಪೋರ್ಚುಗೀಸ್ ನಾವಿಕ ಡಿಯಾಗೊ ಡಯಾಸ್. ಪೋರ್ಚುಗೀಸರು ಈ ದ್ವೀಪವನ್ನು ಸೇಂಟ್ ಲಾರೆನ್ ದ್ವೀಪವೆಂದು ಕರೆಯುತ್ತಿದ್ದರು ಮತ್ತು 16 ನೆಯ ಶತಮಾನದಲ್ಲಿ ಮುಸ್ಲಿಮರ ವಸಾಹತುಗಳನ್ನು ನಾಶಪಡಿಸಲು ಪದೇ ಪದೇ ದಾಳಿ ನಡೆಸುತ್ತಿದ್ದರು. ಕ್ರಮೇಣ ಇತರ ಯುರೋಪಿಯನ್ ದೇಶಗಳೂ ಇಲ್ಲಿಗೆ ಕಾಲಿಟ್ಟವು. 17 ನೆಯ ಶತಮಾನದ ಉತ್ತರಭಾಗ ಹಾಗೂ 18 ನೆಯ ಶತಮಾನದ ಆದಿಭಾಗದಲ್ಲಿ ಕಡಲ್ಗಳ್ಳರು ನೆಲೆಸಿ ಹಿಂದೂಮಹಾಸಾಗರದಲ್ಲಿ ನೌಕೆಗಳ ಮೇಲೆ ದಾಳಿ ನಡೆಸುತ್ತಿದ್ದರು. ಈ ದ್ವೀಪದ ಮೇಲೆ ಅನೇಕ ಸಾಮ್ರಾಜ್ಯಗಳು ಅಧಿಪತ್ಯ ನಡೆಸಿದವು. ಅದರೆ 1300 ವೇಳೆಗೆ ದ್ವೀಪದ ಬಹುಭಾಗ ಮೆರಿನಾ ಸಾಮ್ರಾಜ್ಯಕ್ಕೆ ಸೇರಿತು.

ಮೊದಲನೆಯ ರಡಾಮಾ ದೊರೆ 1800 ರಲ್ಲಿ ರಾಜನಾದ ಬಳಿಕ ಇಂಗ್ಲಿಷ್ ಮತ್ತು ಫ್ರೆಂಚ್ ವ್ಯಾಪಾರಿಗಳು ಮತ್ತು ಧರ್ಮಪ್ರಚಾರಕರು ಬಂದು ನೆಲೆಸಲು ಅನುಮತಿ ನೀಡಿದ. ಅವರು ಇಲ್ಲಿ ಅನೇಕ ಚರ್ಚು ಮತ್ತು ಶಾಲೆಗಳನ್ನು ತೆರೆದು ಗುಲಾಮಗಿರಿ ನಿರ್ಮೂಲಕ್ಕೆ ಪ್ರೋತ್ಸಾಹ ನೀಡಿದರು. 1840ರ ದಶಕದಲ್ಲಿ ರಾಣಿಯಾದ ಮೊದಲನೆಯ ರಾನಾವಲೋನಾ ಯುರೋಪಿಯನ್ನರನ್ನು ದ್ವೀಪದಿಂದ ಹೊರಗೆ ಕಳುಹಿಸಿದರು. 1861ರಲ್ಲಿ ಅವಳ ಮರಣಾನಂತರ ಅವರು ಮತ್ತೆ ವಾಪಸಾದರು. 1869 ರ ಅನಂತರ ಇಲ್ಲಿ ಫ್ರೆಂಚ್ ಪ್ರಭಾವ ಹೆಚ್ಚಾಯಿತು. ಮೆರಿನಾ ಹಾಗೂ ಫ್ರೆಂಚರ ನಡುವೆ 1880 ಮತ್ತು 1890 ದಶಕಗಳಲ್ಲಿ ಅನೇಕ ಬಾರಿ ಯುದ್ಧವಾಗಿ 1896 ರಲ್ಲಿ ಈ ರಾಜ್ಯ ಫ್ರೆಂಚ್ ವಸಾಹತಾಯಿತು.

ಒಂದನೆಯ ಪ್ರಪಂಚ ಯುದ್ಧ ಕಾಲದಲ್ಲಿ ಮೆರಿನಾ ನಾಯಕರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದರು. ಫ್ರಾನ್ಸ್ ಕೆಲವು ಆರ್ಥಿಕ ವಿಷಯಗಳಲ್ಲಿ ವಸಾಹತುಗೆ ಅಧಿಕಾರ ನೀಡಿತು ಮತ್ತು ಅಸೆಂಬ್ಲಿಗೆ ಪ್ರತಿನಿಧಿಗಳನ್ನು ಚುನಾಯಿಸಲು 1945 ರಲ್ಲಿ ಹಕ್ಕು ನೀಡಿತು. ಇದಲ್ಲದೆ ಫ್ರೆಂಚ್ ಪಾರ್ಲಿಮೆಂಟಿಗೆ ಪ್ರತಿನಿಧಿಗಳನ್ನು ಚುನಾಯಿಸಲು ಸಹ ಅಧಿಕಾರ ನೀಡಿತು. ಇದಲ್ಲದೆ ಫ್ರೆಂಚ್ ಪಾರ್ಲಿಮೆಂಟಿಗೆ ಪ್ರತಿನಿಧಿಗಳನ್ನು ಚುನಾಯಿಸಲು ಸಹ ಅಧಿಕಾರ ನೀಡಿತು. ಇದರಿಂದ ಜನರು ತೃಪ್ತರಾಗದೆ 1947 ರಲ್ಲಿ ಎರಡು ವರ್ಷ ಕಾಲ ಸಶಸ್ತ್ರ ಹೋರಾಟ ಪ್ರಾರಂಭವಾಯಿತು. 1950 ರ ದಶಕದ ಅಂತ್ಯಭಾಗದಲ್ಲಿ ದ್ವೀಪ ಹಂತಹಂತವಾಗಿ ಸ್ವರಾಜ್ಯವನ್ನು ಶಾಂತಿಯುತವಾಗಿ ಪಡೆಯಿತು. 1958 ರಲ್ಲಿ ಈ ದ್ವೀಪ ಫ್ರೆಂಚ್ ಅಧೀನದಲ್ಲಿ ಸ್ವಯಮಾಡಳಿತವುಳ್ಳ ಗಣರಾಜ್ಯವಾಯಿತು. 1960 ರಲ್ಲಿ ಜೂನ್ 26ರಂದು ಸಂಪೂರ್ಣ ಸ್ವಾತಂತ್ರ್ಯ ಪಡೆಯಿತು. 1959ರಲ್ಲಿ ಫಿಲಿಬರ್ಟ್ ಸಿರಾನಾನಾ ಮೊದಲ ಅಧ್ಯಕ್ಷನಾಗಿ 1965 ಹಾಗೂ 1972 ರಲ್ಲಿ ಮತ್ತೆ ಅಧ್ಯಕ್ಷನಾಗಿ ಚುನಾಯಿತನಾದ. 1972 ರಲ್ಲಿ ಸರ್ಕಾರದ ವಿರುದ್ಧ ಚಳುವಳಿಯಿಂದಾಗಿ ಸಿರಾನಾನಾ ರಾಜೀನಾಮೆ ನೀಡಬೇಕಾಯಿತು. ಆಗ ಸೈನ್ಯಾಧಿಕಾರಿಗಳು ಆಡಳಿತವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. 1977ರಲ್ಲಿ ಪಾರ್ಲಿಮೆಂಟನ್ನು ಸ್ಥಾಪಿಸಿದರೂ ಮಿಲಿಟರಿ ಆಡಳಿತ ಮುಂದುವರಿದಿದೆ. 1960 ಸಪ್ಟೆಂಬರ್ 20 ರಂದು ವಿಶ್ವಸಂಸ್ಥೆ ಸದಸ್ಯತ್ವ ಪಡೆಯಿತು.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.