ಭೂಮಿಯ ವಾಯುಮಂಡಲ

ಭೂಮಿಯ ವಾತಾವರಣ ಅಥವಾ ವಾಯುಮಂಡಲವು, ಭೂಮಿಯು ತನ್ನ ಸುತ್ತಲೂ ಗುರುತ್ವಾಕರ್ಷಣೆಯಿಂದ ಸೆಳೆದಿಟ್ಟಿರುವ ಅನಿಲಗಳ ವಿಶಾಲ ಆವರಣ.ಭೂಮಿಯ ವಾತಾವರಣವು ಸೂರ್ಯಅತಿನೇರಳೆ ಕಿರಣಗಳನ್ನು ಹೀರಿಕೊಳ್ಳುವುದರಿಂದಲೂ,ಸೂರ್ಯನಿಂದ ಬರುವ ಉಷ್ಣತೆಯನ್ನು ಉಳಿಸಿಕೊಂಡು(ಹಸಿರುಮನೆ ವಿದ್ಯಮಾನ ಅಥವಾ ಗ್ರೀನ್ ಹೌಸ್ ಎಫೆಕ್ಟ್)ಭೂಮಿಯ ಮೇಲ್ಮೈಯನ್ನು ಬೆಚ್ಚಗಿಡುವುದರಿಂದಲೂ ಮತ್ತು ಹಗಲು, ರಾತ್ರಿಗಳಲ್ಲಿ ತಾಪಮಾನವು ತೀರಾ ಏರಿಳಿಕೆಯಾಗದಂತೆ ನಿಯಂತ್ರಿಸುವುದರಿಂದಲೂ ಭೂಮಿಯ ಜೀವರಾಶಿಗಳನ್ನು ರಕ್ಷಿಸುತ್ತದೆ. ಭೂಮಿಯ ವಾತಾವರಣದ ತೂಕವು ಸುಮಾರು ಐದು ಕ್ವಾಡ್ರಿಲಿಯನ್ (೫೦೦೦೦೦೦೦೦೦೦೦೦೦೦)ಟನ್ ಗಳಷ್ಟು. ಈ ತೂಕದ ಮುಕ್ಕಾಲು ಭಾಗದಷ್ಟು ಭಾರವು ಭೂಮಿಯ ಮೇಲ್ಮೈಯಿಂದ ೧೧ ಕಿ.ಮೀ ವರೆಗಿನ ವಾಯುವಿನಿಂದಾಗುತ್ತದೆ.ಮೇಲ್ಮೈಯಿಂದ ಎತ್ತರಕ್ಕೆ ಹೋದಂತೆಲ್ಲಾ ವಾತಾವರಣದ ಸಾಂದ್ರತೆಯು ಕ್ಷೀಣಿಸುತ್ತಾ, ವಾತಾವರಣವು ತೆಳ್ಳಗಾಗುತ್ತಾ, ಇನ್ನೂ ಮೇಲಕ್ಕೆ ಹೋದಂತೆ ನಿಧಾನವಾಗಿ ಅಂತರಿಕ್ಷವಾಗಿ ಮಾರ್ಪಡುತ್ತದೆ. ವಾತಾವರಣಕ್ಕೂ, ಅಂತರಿಕ್ಷಕ್ಕೂ ಯಾವುದೇ ನಿಶ್ಚಿತ ಗಡಿಯಿಲ್ಲ.ಅಂತರಿಕ್ಷನೌಕೆಯು ಭೂಮಿಯ ವಾತಾವರಣವನ್ನು ಮರುಪ್ರವೇಶಿಸುವಾಗ (ವಾತಾವರಣದಲ್ಲಿ ಮರುಪ್ರವೇಶಿಸುವಿಕೆ)ಭೂಮಿಯ ಮೇಲ್ಮೈಯಿಂದ ಸುಮಾರು ೧೨೦ ಕಿ.ಮೀ ಎತ್ತರದಲ್ಲಿ ವಾಯುವಿನ ಉಪಸ್ಥಿತಿಯನ್ನು ತೋರುವ ಗಮನಾರ್ಹ ವಿದ್ಯಮಾನಗಳನ್ನು ಕಾಣಬಹುದು. ಸಾಮಾನ್ಯವಾಗಿ ಮೇಲ್ಮೈಯಿಂದ ೧೦೦ ಕಿ.ಮೀ ಎತ್ತರದಲ್ಲಿರುವ ಕ್ರಾಮನ್ ರೇಖೆಯೆಂದು ಕರೆಯಲ್ಪಡುವ ಪ್ರದೇಶವನ್ನು ಅಂತರಿಕ್ಷ ಮತ್ತು ವಾತಾವರಣದ ಗಡಿಯೆಂದು ಪರಿಗಣಿಸುತ್ತಾರೆ.

ಭೂಮಿಯ ವಾಯುಮಂಡಲದ ಅನಿಲಗಳು ಬೆಳಕಿನ ನೀಲಿ ಬಣ್ಣವನ್ನು ಇತರ ಬಣ್ಣಗಳಿಗಿಂತ ಹೆಚ್ಚು ಚದುರಿಸುತ್ತವೆ ಇದರಿಂದ ಆಂತರಿಕ್ಷದಿಂದ ನೋಡಿದಾಗ ಭೂಮಿಗೆ ನೀಲಿ ಪ್ರಭಾವಲಯ ಉಂಟಾಗುತ್ತದೆ.

ಸಂಯೋಜನೆ

ಡಿಸೆಂಬರ್ 1987ರಲ್ಲಿ ಅಳೆಯಲ್ಪಟ್ಟ ವಾತಾವರಣದ ಸಂಯೋಜನೆ. ಕೆಳಗಿನ ವೃತ್ತಾಕಾರದ ಚಿತ್ರವು ವಾತಾವರಣದ 0.038%ರಷ್ಟಿರುವ ಅತಿ-ವಿರಳ ಅನಿಲಗಳ ಸಂಯೋಜನೆಯನ್ನು ತೋರಿಸುತ್ತದೆ.

ವಾಯುವು ಮುಖ್ಯವಾಗಿ ಸಾರಜನಕ,ಆಮ್ಲಜನಕ ಮತ್ತು ಅರ್ಗಾನ್ ಅನಿಲಗಳಿಂದ ಕೂಡಿದೆ.ಇವುಗಳನ್ನು ವಾತಾವರಣದ "ಮುಖ್ಯ ಅನಿಲ" ಗಳೆನ್ನುತ್ತಾರೆ.ಉಳಿದ ಇತರ ಅನಿಲಗಳು ತೀರಾ ವಿರಳ ಪ್ರಮಾಣದಲ್ಲಿವೆ.ಇವುಗಳನ್ನು ವಾತಾವರಣದ "ವಿರಳ ಅನಿಲ" ಗಳೆನ್ನುತ್ತಾರೆ. ಇವು ಯಾವುವೆಂದರೆ, ಹಸಿರುಮನೆ ಅನಿಲಗಳಾದ ನೀರಾವಿ,ಕಾರ್ಬನ್ ಡೈ ಆಕ್ಸೈಡ್,ಮೀಥೇನ್,ನೈಟ್ರಸ್ ಆಕ್ಸೈಡ್ ಮತ್ತು ಓಝೋನ್. ಶೋಧಿಸಿ,ಶುಧ್ಧೀಕರಿಸಿದ ಗಾಳಿಯು(ವಾಯು), ಅತಿ ವಿರಳ ಪ್ರಮಾಣದಲ್ಲಿ ಕೆಲವು ರಾಸಾಯನಿಕ ಸಂಯುಕ್ತಗಳನ್ನು ಹೊಂದಿರುತ್ತದೆ.ಶುಧ್ಧೀಕರಿಸದ ಸಾಮಾನ್ಯ ವಾಯುವಿನಲ್ಲಿ ಹಲವು ಪ್ರಾಕೃತಿಕ ವಸ್ತುಗಳು ಕಾಣಬರುತ್ತವೆ. ಅವು ಯಾವವೆಂದರೆ,ಧೂಳು,ಪರಾಗರೇಣು,ಅತಿಸೂಕ್ಷ್ಮ ಬೀಜಗಳು,ಕಡಲ ತೇವಾಂಶ(ಸೀ ಸ್ಪ್ರೇ), ಜ್ವಾಲಾಮುಖಿಗಳ ಬೂದಿ, ಉಲ್ಕೆಗಳ ಬೂದಿ ಮುಂತಾದವು. ಕೈಗಾರಿಕಾ ಪ್ರದೂಷಕಗಳಾದ ಕ್ಲೋರಿನ್ ಮತ್ತು ಅದರ ಸಂಯುಕ್ತಗಳು, ಫ್ಲೋರಿನ್ ಮತ್ತು ಅದರ ಸಂಯುಕ್ತಗಳು, ಪಾದರಸ ಮತ್ತು ಗಂಧಕ (ಸಂಯುಕ್ತ ರೂಪದಲ್ಲಿ ಉ.ದಾ ಸಲ್ಫರ್ ಡೈ ಆಕ್ಸೈಡ್).

ಒಣ ಹವೆಯ ಸಂಯೋಜನೆ, ಪ್ರಮಾಣಕ್ಕನುಗುಣವಾಗಿ
ppmv: ಪಾರ್ಟ್ಸ್ ಪರ್ ಮಿಲಿಯನ್ ಪ್ರಮಾಣಕ್ಕನುಗುಣವಾಗಿ
ಆನಿಲ ಪ್ರಮಾಣ
ಸಾರಜನಕ (N2)780,840 ppmv (78.084%)
ಆಮ್ಲಜನಕ (O2)209,460 ppmv (20.946%)
ಅರ್ಗಾನ್ (Ar)9,340 ppmv (0.9340%)
ಕಾರ್ಬನ್ ಡೈ ಆಕ್ಸೈಡ್ (CO2)383 ppmv (0.0383%)
ನಿಯಾನ್ (Ne)18.18 ppmv (0.001818%)
ಹೀಲಿಯಂ (He)5.24 ppmv (0.000524%)
ಮೀಥೇನ್ (CH4)1.745 ppmv (0.0001745%)
ಕ್ರಿಪ್ಟಾನ್ (Kr)1.14 ppmv (0.000114%)
ಜಲಜನಕ (H2)0.55 ppmv (0.000055%)
ನೈಟ್ರಸ್ ಅಕ್ಸೈಡ್ (N2O)0.3 ppmv (0.00003%)
ಝೆನಾನ್ (Xe)0.09 ppmv (9x10−6%)
ಓಝೋನ್ (O3)0.0 to 0.07 ppmv (0% to 7x10−6%)
ನೈಟ್ರೋಜೆನ್ ಡೈ ಆಕ್ಸೈಡ್ (NO2)0.02 ppmv (2x10−6%)
ಅಯೋಡಿನ್ (I)0.01 ppmv (1x10−6%)
ಕಾರ್ಬನ್ ಮೋನಾಕ್ಸೈಡ್ (CO)0.1 ppmv
ಅಮೋನಿಯಾ (NH3)ಅತಿ ವಿರಳ
ಕೆಳಗಿನವುಗಳನ್ನು ಮೇಲಿನ ಒಣಹವೆಯ ಸಂಯೋಜನೆಯಲ್ಲಿ ಸೇರಿಸಿಲ್ಲ:
ನೀರಾವಿ (H2O)~0.40% ಸರಾಸರಿ, ಸಾಮಾನ್ಯವಾಗಿ 1%-4% ರಷ್ಟು ಮೇಲ್ಮೈಯಲ್ಲಿ.

ರಚನೆ

ವಾತಾವರಣದ ವಿವಿಧ ವಲಯಗಳು (ಅಳತೆಗನುಸಾರವಾಗಿಲ್ಲ)

ಭೂಮಿಯ ವಾತಾವರಣವನ್ನು ಐದು ಪ್ರಮುಖ ವಲಯ ಅಥವಾ ಪದರುಗಳನ್ನಾಗಿ ವಿಭಾಗಿಸಲಾಗಿದೆ.ವಾತಾವರಣದಲ್ಲಿ ನೆಲದಿಂದ ಎತ್ತರಕ್ಕೆ ಹೋದಂತೆ ಉಷ್ಣತೆಯು ಹೆಚ್ಚಾಗುತ್ತದೆಯೋ ಅಥವಾ ಕಡಿಮೆಯಾಗುತ್ತದೆಯೋ ಎಂಬುದರ ಮೇಲೆ ಈ ವಲಯಗಳನ್ನು ವಿಂಗಡಿಸಲಾಗಿದೆ. ಕೆಳಗಿನಿಂದ ಮೇಲಕ್ಕೆ ಹೋದಂತೆ ಈ ವಲಯಗಳು ಹೀಗಿವೆ.

ಟ್ರೋಪೋಸ್ಫಿಯರ್

ಭೂಮಧ್ಯ ಪ್ರದೇಶದಲ್ಲಿ ನೆಲದಿಂದ ಶುರುವಾಗಿ ೧೭ ಕಿ.ಮೀ ಎತ್ತರದವರೆಗೆ (೫೩೦೦೦ ಫೀಟ್) ಮತ್ತು ಧ್ರುವಪ್ರದೇಶಗಳಲ್ಲಿ ನೆಲದಿಂದ ೭ ಕಿ.ಮೀ ಎತ್ತರದವರೆಗೆ(೨೩೦೦೦ ಫೀಟ್) ಈ ವಲಯ ಹರಡಿದೆ.

ಸ್ಟ್ರಾಟೋಸ್ಫಿಯರ್

ಟ್ರೋಪೋಸ್ಫಿಯರ್ ನ ಗಡಿಪ್ರದೇಶವಾದ ಟ್ರೋಪೋಪಾಸ್ನಿಂದ ೫೧ ಕಿ.ಮೀ ಎತ್ತರದವರೆಗೆ ಈ ವಲಯ ಹರಡಿದೆ.

ಮೀಸೋಸ್ಫಿಯರ್

ಸ್ಟ್ರಾಟೋಸ್ಫಿಯರ್ ನಿಂದ ೮೦-೮೫ ಕಿ.ಮೀ ಎತ್ತರದವರೆಗೆ ಈ ವಲಯವಿದೆ.

ಥರ್ಮೋಸ್ಫಿಯರ್

ಮೀಸೋಸ್ಫಿಯರ್ ನ ಮೇಲಿರುವ ಈ ವಲಯದಲ್ಲಿ ಹೆಚ್ಚುತ್ತಾ ಹೋಗುತ್ತದೆ. ಉಷ್ಣತೆ ೧೫೦೦ ಡಿಗ್ರೀ ಸೆಲ್ಶಿಯಸ್ ವರೆಗೂ ಏರಬಹುದು.

ಎಕ್ಸೋಸ್ಫಿಯರ್

ಇದು ವಾತಾವರಣದ ಅತ್ಯಂತ ಹೊರವಲಯದ ಪದರ. ಇಲ್ಲಿಂದ ವಾತಾವರಣವು ಅಂತರಿಕ್ಷವಾಗಿ ಬದಲಾಗುತ್ತದೆ.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.