ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ
ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಮರಗೂರ ಗ್ರಾಮದ ಹತ್ತಿರ 1982 ಸ್ಥಾಪಿತವಾಗಿದೆ.
ಇತಿಹಾಸ
ನಾಲ್ಕೈದು ದಶಕಗಳ ಹಿಂದೆ ವಿಜಯಪುರ ಜಿಲ್ಲೆಯಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಕನಸಿನೊಂದಿಗೆ ರೈತರ ಷೇರು ಸಂಗ್ರಹ, ಲೈಸೆನ್ಸ್ ಸಹಿತ ಜನ್ಮತಳೆದಿದ್ದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಹಲವು ಕಾರಣಗಳಿಂದ ಸಂಪೂರ್ಣ ಸ್ಥಗಿತವಾಗಿತ್ತು. 2017-2018ರಲ್ಲಿ ರಾಜಕೀಯ ಇಚ್ಛಾಶಕ್ತಿ ಹಾಗೂ ರೈತರ ಸಹಕಾರ, ಸರ್ಕಾರದ ನೆರವಿನ ಫಲವಾಗಿ ಮುಚ್ಚಿಹೋಗಿದ್ದ ಈ ಸಹಕಾರಿ ಸಕ್ಕರೆ ಕಾರ್ಖಾನೆ ಮರುಜೀವ ಪಡೆದಿದೆ[1].
ಕುಡಿಯುವ ನೀರಿಗೂ ತತ್ವಾರ ಎದುರಿಸುವ ಮೂಲಕ ಭೀಕರ ಬರಕ್ಕೆ ಹೆಸರಾಗಿರುವ ವಿಜಯಪುರ ಜಿಲ್ಲೆಯ ರೈತರು ಕಠಿಣ ಪರಿಶ್ರಮದ ಫಲವಾಗಿ ಕಬ್ಬು ಬೆಳೆಯುತ್ತಿದ್ದಾರೆ. ಪರಿಣಾಮ ಇಂಡಿ, ಸಿಂದಗಿ, ಬಬಲೇಶ್ವರ ಮತ್ತು ಮುದ್ದೇಬಿಹಾಳ ಭಾಗದಲ್ಲಿ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರದ ರಾಜಕೀಯ ನಾಯಕರ ಮಾಲೀಕತ್ವದ ಖಾಸಗಿ ಸಕ್ಕರೆ ಕಾರ್ಖಾನೆಗಳು ಎರಡು ದಶಕಗಳಿಂದ ಇಲ್ಲಿ ಸಕ್ಕರೆ ಉತ್ಪಾದಿಸುತ್ತಿವೆ. ಜಿಲ್ಲೆಯಲ್ಲಿ ಸಹಕಾರಿ ಕ್ರಾಂತಿಯ ಫಲವಾಗಿ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಿಸುವ ಚಿಂತನೆ ಆರಂಭಗೊಂಡಾಗ ನಂದಿ ಹಾಗೂ ಭೀಮಾಶಂಕರ ಕಾರ್ಖಾನೆಗಳನ್ನು ಆರಂಭಕ್ಕೆ ನಿರ್ಧರಿಸಲಾಯಿತು. 1995ರಲ್ಲಿ ವಿಜಯಪುರ ತಾಲ್ಲೂಕಿನ ಕೃಷ್ಣಾನಗರದಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಗೊಂಡು, ಈಗ ದೇಶದಲ್ಲೇ ಅತ್ಯುತ್ತಮ ಸಹಕಾರಿ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆ ಹೊಂದಿದೆ.
ಹಿನ್ನಲೆ
ಆದರೆ ಇದೇ ಅವಧಿಯಲ್ಲಿ ಎಸ್.ಆರ್.ಸಾಖರೆ ಎಂಬುವರ ಪರಿಶ್ರಮದ ಫಲವಾಗಿ ಲೈಸೆನ್ಸ್ ಪಡೆದರೂ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಗೊಳ್ಳಲೇ ಇಲ್ಲ. ಇಂಡಿ ಭಾಗದ ರೈತರು ಭೀಕರ ಬರದಲ್ಲೂ ತಲಾ ಒಂದು ಸಾವಿರ ರೂ. ಷೇರು ಹಣ ಸಂಗ್ರಹಿಸಿ, ನಂತರ ಷೇರು ಮೊತ್ತವನ್ನು ಎರಡು ಸಾವಿರ ರೂ. ಏರಿಸಿದರು. ಪರಿಣಾಮ 16,395 ಸದಸ್ಯರಿಂದ 4.61 ಕೋಟಿ ರೂ.ಷೇರು ಸಂಗ್ರಹಿಸಿ, ಇಂಡಿ ತಾಲೂಕ ಮರಗೂರು ಗ್ರಾಮದ ಬಳಿ 181 ಎಕರೆ ಪ್ರದೇಶದಲ್ಲಿ ಕಾರ್ಖಾನೆ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಯಿತು. ಆದರೆ ಕಾರಣಾಂತರಗಳಿಂದ ಕಾರ್ಖಾನೆ ಆರಂಭಗೊಳ್ಳಲೇ ಇಲ್ಲ. ಈ ಕಾರ್ಖಾನೆ ಒಟ್ಟು 181 ಎಕರೆ ಪ್ರದೇಶದಲ್ಲಿ ತಲೆ ಎತ್ತಿದ್ದು.೧೪ ಮೇಗಾವ್ಯಾಟ್ ವಿದ್ಯುತ್ ತಯಾರಿಸಿ ಅದರಲ್ಲಿ ೯ ಮೇಗಾವ್ಯಾಟ್‌ನ್ನು ಹೆಸ್ಕಾಂಗೆ, ಉಳಿದಿದ್ದನ್ನು ಕಾರ್ಖಾನೆಗೆ ಉಪಯೋಗಿಸುತ್ತಿದೆ.[2]
1997 ಹಾಗೂ 2001ರಲ್ಲಿ ಸರ್ಕಾರ 8.20 ಕೋಟಿ ರೂ. ಷೇರು ಬಂಡವಾಳ ನೀಡಿದರೂ ಕಾರ್ಖಾನೆ ಆರಂಭಗೊಳ್ಳಲಿಲ್ಲ. ಅಂತಿಮವಾಗಿ ಇಲ್ಲಿನ ದುಸ್ಥಿತಿ ಗಮನಿಸಿದ ಸಹಕಾರಿ ಇಲಾಖೆಯ ಬೆಳಗಾವಿ ಜಂಟಿ ಉಪ ನಿಬಂಧಕರು ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಿಸುವುದು ಅಸಾಧ್ಯ ಎಂಬ ಷರಾ ಹಾಕಿದ ಕಾರಣ ಕಾರ್ಖಾನೆ ಲೈಸೆನ್ಸ್ ರದ್ದಾಗಿ, ಲಿಕ್ವಿಡೇಶನ್ ಆಗಿತ್ತು. ಮತ್ತೂಂದೆಡೆ ಈ ಕಾರ್ಖಾನೆ ಆರಂಭದ ಕನಸು ಕಂಡಿದ್ದ ಷೇರುದಾರರು ಒಬ್ಬೊಬ್ಬರಾಗಿ ತಾವು ಕಂಡ ಕನಸು ಕೈಗೂಡದ ಕೊರಗಿನಲ್ಲೇ ಕೊನೆಯುಸಿರೆಳೆದರು. ಒಂದು ಹಂತದಲ್ಲಿ ಈ ಕಾರ್ಖಾನೆ ಖಾಸಗಿ ಕೈವಶ ಆಗುವ ಹಂತಕ್ಕೆ ಹೋದರೂ ರೈತರು ಮಾತ್ರ ಜಗ್ಗಲಿಲ್ಲ. ರೈತರೆಲ್ಲ ಒಗ್ಗೂಡಿ ಹೈಕೋರ್ಟ್, ಸುಪ್ರೀಂಕೋಟ್ ವರೆಗೆ ಹೋರಾಡಿ ಕಾರ್ಖಾನೆ ಆರಂಭಿಸುವ ತಮ್ಮ ಕನಸು ಜೀವಂತ ಇರಿಸಿಕೊಂಡಿದ್ದರು.
ಮತದಾನ
ಕಾರ್ಖಾನೆ ವ್ಯಾಪ್ತಿಗೆ ಇಂಡಿ ಹಾಗೂ ಸಿಂದಗಿ ತಾಲ್ಲೂಕಿನ 123 ಗ್ರಾಮಗಳು ಸೇರಿದ್ದು , 17,013 ಷೇರು ಸದಸ್ಯರಿದ್ದಾರೆ. 15,316 ಅ ವರ್ಗ ಸದಸ್ಯರು (ಕಬ್ಬು ಬೆಳೆಗಾರರು), 1184 ಬ ವರ್ಗದ (ಕಬ್ಬು ಬೆಳೆಗಾರರಲ್ಲದ ಸದಸ್ಯರು), 69 ಸಿ ವರ್ಗ (ಸಂಘ ಸಂಸ್ಥೆಗಳು) ಸದಸ್ಯರಿದ್ದಾರೆ. ಕಾರ್ಖಾನೆ ವ್ಯಾಪ್ತಿಗೆ ಇಂಡಿ ಹಾಗೂ ಸಿಂದಗಿ ತಾಲೂಕಿನ ಸದಸ್ಯರಿಗೆ ಮಾತ್ರ ಮತದಾನ ಅವಕಾಶ ಇರುತ್ತದೆ. ಬೇರೆ ತಾಲೂಕಿನವರು ಕೂಡ ಷೇರುದಾರರಾಗಿದ್ದು , ಅವರಿಗೆ ಮತದಾನದ ಹಕ್ಕು ಇರಲ್ಲ.
ಭೀಮಾಶಂಕರ ಕಾರ್ಖಾನೆಯ ಬೈಲಾ ಪ್ರಕಾರ ಆಡಳಿತ ಮಂಡಳಿಯಲ್ಲಿ 15 ನಿರ್ದೇಶಕರಿರುತ್ತಾರೆ. ಇದರಲ್ಲಿ ಅ ವರ್ಗದಿಂದ (ಕಬ್ಬು ಬೆಳೆಗಾರ ಕ್ಷೇತ್ರ)9 ನಿರ್ದೇಶಕರು ಆಯ್ಕೆಯಾಗಬೇಕಿದೆ. 9 ನಿರ್ದೇಶಕ ಸ್ಥಾನಗಳಲ್ಲಿ ಸಾಮಾನ್ಯ 3, ಎಸ್‌ಸಿ/ಎಸ್‌ಟಿ ತಲಾ 1, ಮಹಿಳೆಯರು 2, ಹಿಂದುಳಿದ ವರ್ಗಕ್ಕೆ 2 ಸ್ಥಾನ ಮೀಸಲಾಗಿವೆ.
ಬ ವರ್ಗದಿಂದ (ಕಬ್ಬು ಬೆಳೆಗಾರರಲ್ಲದ ಸದಸ್ಯರ ಕ್ಷೇತ್ರ) 1 ಸ್ಥಾನ ಹಾಗೂ ಸಿ ವರ್ಗ (ಸಂಘಸಂಸ್ಥೆಗಳ ಕ್ಷೇತ್ರ)ದಿಂದ 1ಸ್ಥಾನಕ್ಕೆ ಚುನಾವಣೆ ನಡೆಯಲಿದೆ. 1ನಿರ್ದೇಶಕ ಸ್ಥಾನಕ್ಕೆ ಸರಕಾರದಿಂದ ಹಾಗೂ ಮತ್ತೊಂದು ನಿರ್ದೇಶಕ ಸ್ಥಾನವನ್ನು ಕಾರ್ಖಾನೆಯ ಆರ್ಥಿಕ ನೆರವು ಸಂಸ್ಥೆ (ಡಿಸಿಸಿ ಬ್ಯಾಂಕ್)ಯಿಂದ ನಾಮನಿರ್ದೇಶನ ಮಾಡಲಾಗುವುದು.[3]
ಉಲ್ಲೇಖ
- https://vijaykarnataka.indiatimes.com/district/vijayapura/-37-/articleshow/29108896.cms
- http://kannadamma.net/2018/10/%E0%B2%AD%E0%B3%80%E0%B2%AE%E0%B2%BE%E0%B2%B6%E0%B2%82%E0%B2%95%E0%B2%B0-%E0%B2%B8%E0%B2%B9%E0%B2%95%E0%B2%BE%E0%B2%B0%E0%B2%BF-%E0%B2%B8%E0%B2%95%E0%B3%8D%E0%B2%95%E0%B2%B0%E0%B3%86-%E0%B2%95/
- https://vijaykarnataka.indiatimes.com/district/vijayapura/who-is-bhimashankar-sugar-president-/articleshow/67656576.cms