ಪಂಡರಿನಾಥಾಚಾರ್ಯ ಗಲಗಲಿ

ಪಂಡರಿನಾಥಾಚಾರ್ಯ ಗಲಗಲಿಯವರು ವಿಜಾಪುರ ಜಿಲ್ಲೆಗಲಗಲಿ ಗ್ರಾಮದಲ್ಲಿ ೧೦ ಜುಲೈ ೧೯೨೨ ರಂದು ಜನಿಸಿದರು. ತಂದೆ ಕೂರ್ಮಾಚಾರ್ಯರು, ತಾಯಿ ಗಂಗಾಬಾಯಿ. ಪಂಡರಿನಾಥಾಚಾರ್ಯರು ಪ್ರಾಥಮಿಕ ಶಿಕ್ಷಣವನ್ನು ಗಲಗಲಿಯಲ್ಲಿಯೆ ಪಡೆದರು. ಬಳಿಕ ೧೯೪೪ ರಿಂದ ೧೯೬೦ ರವರೆಗೆ ಬಾಗಲಕೋಟೆಯಲ್ಲಿ ಸಕ್ರಿ ಹೈಸ್ಕೂಲಿನಲ್ಲಿ ಸಂಸ್ಕೃತ ಬೋಧಕರಾಗಿ ಕೆಲಸ ಮಾಡಿದರು. ೧೯೬೧ ರಲ್ಲಿ ಗದುಗಿಗೆ ಆಗಮಿಸಿ ಅಲ್ಲಿ ‘ ವೀರನಾರಾಯಣ ಸಂಸ್ಕೃತ ಪಾಠಶಾಲೆ’ ಪ್ರಾರಂಭಿಸಿದರು ಹಾಗು ‘ಮಧುರ ವಾಣಿ’ ಮತ್ತು ‘ ಪಂಚಾಮೃತ’ ವೆಂಬ ಮಾಸಪತ್ರಿಕೆಗಳನ್ನೂ ಸಹ ಪ್ರಾರಂಭಿಸಿದರು. ೧೯೭೧ರಲ್ಲಿ ಗಲಗಲಿಯವರು ಹುಬ್ಬಳ್ಳಿಗೆ ಆಗಮಿಸಿ ‘ ವೇದ, ಪುರಾಣ ಸಾಹಿತ್ಯಮಾಲಾ’ ಟ್ರಸ್ಟ ಸ್ಥಾಪಿಸಿದರು. ಈ ಟ್ರಸ್ಟ ಮೂಲಕ ಗಲಗಲಿಯವರು ಅನೇಕ ಸಂಸ್ಕೃತ ಪುರಾಣಗಳನ್ನು ಕನ್ನಡಕ್ಕೆ ಭಾಷಾಂತರಿಸಿದರು. ಅಲ್ಲದೆ ಕನ್ನಡ ಹಾಗು ಸಂಸ್ಕೃತದಲ್ಲಿಯೂ ಸಹ ಅನೇಕ ಗ್ರಂಥಗಳನ್ನು ರಚಿಸಿರುವರು.

ಪಂಡರಿನಾಥಾಚಾರ್ಯ ಗಲಗಲಿಯವರಿಗೆ ದೊರೆತ ಪುರಸ್ಕಾರಗಳು ಅನೇಕ. ಹಿಂದಿನ ರಾಷ್ಟ್ರಪತಿಗಳಾದ ಬಾಬು ರಾಜೇಂದ್ರ ಪ್ರಸಾದ, ಶಂಕರ ದಯಾಳ ಶರ್ಮಾ ಹಾಗು ಹಿಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರಿಂದ ಇವರಿಗೆ ಸನ್ಮಾನ ಲಭಿಸಿದೆ. ೨ ಲಕ್ಷ ರೂಪಾಯಿ ಹಾಗು ಸನ್ಮಾನ ಪತ್ರ ಒಳಗೊಂಡ ‘ ದಾಲ್ಮಿಯಾ ಪ್ರಶಸ್ತಿ’ ಇವರಿಗೆ ಕರ್ಣಸಿಂಗರ ಹಸ್ತದಿಂದ ಕೊಡಲ್ಪಟ್ಟಿದೆ.ಪೇಜಾವರ ಪ್ರಥಮ ಪ್ರಶಸ್ತಿ ೧ ಲಕ್ಷ ರೂಪಾಯಿ ಹಾಗು ಉತ್ತರಾದಿ ಮಠದ ಧ್ಯಾನ ಪ್ರಮೋದ ಪ್ರಶಸ್ತಿ ೧ ಲಕ್ಷ ರೂಪಾಯಿ ಇವರಿಗೆ ದೊರೆತಿದೆ. ಕಂಚಿ ಕಾಮಕೋಟಿ ಮಠದಿಂದ ಸ್ವರ್ಣಪದಕ ಹಾಗು ತಿರುಪತಿ ವಿಶ್ವವಿದ್ಯಾಲಯದಿಂದ ‘ ಮಹಾ ಮಹೋಪಾಧ್ಯಾಯ’ ಪದವಿ ಇವರಿಗೆ ಲಭಿಸಿವೆ. ಪೇಜಾವರ ಸ್ವಾಮಿಗಳಿಂದ‘ ಕವಿಕುಲತಿಲಕ’, ಭಂಡಾರಕೆರೆ ಸ್ವಾಮಿಗಳಿಂದ ‘ ಶಾಸ್ತ್ರ ಪ್ರವಚನ ರತ್ನ’ ಹಾಗು ‘ ಪುರಾಣತೀರ್ಥ’ , ಮುಳುಬಾಗಿಲು ಮಠದಿಂದ ‘ ವಿದ್ಯಾಧಿರಾಜ ಪ್ರಶಸ್ತಿ’ ,ಬೆಂಗಳೂರು ನಾಗರಿಕರಿಂದ ‘ ವಿದ್ವತ್ ಕುಲತಿಲಕ’ , ವಿಬುಧೇಶ ತೀರ್ಥರಿಂದ ‘ ಸಾಹಿತ್ಯ ರತ್ನ’ , ಧಾರವಾಡಧರ್ಮ,ಸಂಸ್ಕೃತಿ ಪ್ರತಿಷ್ಠಾನದಿಂದ ‘ ಸಂಸ್ಕೃತಿವಾಹಕ’ ಮೊದಲಾದ ಪ್ರಶಸ್ತಿಗಳು ಗಲಗಲಿಯವರಿಗೆ ಲಭಿಸಿವೆ.

ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಗ್ರಂಥಗಳು: ಹರಿವಂಶ ಪುರಾಣ, ವಿಷ್ಣುಪುರಾಣ, ವರಾಹಪುರಾಣ, ವಾಮನಪುರಾಣ, ದಕ್ಷಪುರಾಣ, ನಾರದಪುರಾಣ, ಬ್ರಹ್ಮಪುರಾಣ, ಬ್ರಹ್ಮ ವೈವರ್ತಪುರಾಣ, ಭವಿಷ್ಯಪುರಾಣ, ಪದ್ಮಪುರಾಣ, ಸ್ಕಂದಪುರಾಣ

ಸಂಸ್ಕೃತ ಭಾಷೆಯಲ್ಲಿ ರಚಿಸಿದ ಗ್ರಂಥಗಳು: ರಾಮರಸಾಯನಮ್, ಕೃಷ್ಣಕಂಠಾಭರಣಮ್, ಪವನಪಾವನ ಶಂಭುಲಿಂಗೇಶ್ವರ, ವಿಜಯಚಂಪೂ, ಪಂಢರಪುರ ವಿಠ್ಠಲ ಶತಕ,ಕೊಲ್ಹಾಪುರ ಮಹಾಲಕ್ಷ್ಮೀ ಶತಕ, ಕೃಷ್ಣವೇಣೀ ವೈಭವಮ್, ರಾಘವೇಂದ್ರ ಕಾವ್ಯ ಪಂಚಕಮ್, ಭಾರತ ಸಂಗ್ರಾಮಸ್ಯ ಇತಿಹಾಸ, ಲೋಕಮಾನ್ಯ ತಿಲಕ ಚರಿತಮ್, ಕ್ರಾಂತಿಸ್ಫುಲಿಂಗಾಹ, ತಾತ್ಯಾಟೋಪಿತ ಗಾಂಧಿಟೋಪಿ ಪರ್ಯಂತಮ್,

ಕನ್ನಡದಲ್ಲಿ ರಚಿಸಿದ ಗ್ರಂಥಗಳು: ರಾಗವಿರಾಗ, ಪೌರಾಣಿಕ ಕಥಾಸಂಗ್ರಹ, ಮಹಾಭಾರತದಲ್ಲಿ ಮಿಂಚಿದ ಮಹಿಳೆಯರು, ಗಂಗಾಲಹರಿ, ಭಾಮತಿಕಾವ್ಯ,

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.