ಚಂಪಾರಣ್
ಚಂಪಾರಣ್ - ಬಿಹಾರ ರಾಜ್ಯದ ವಾಯುವ್ಯದಲ್ಲಿರುವ ಒಂದು ಜಿಲ್ಲೆ. ತಿರಹುತ್ ವಿಭಾಗಕ್ಕೆ ಸೇರಿದೆ ಉತ್ತರದಲ್ಲಿ ನೇಪಾಳ, ಪಶ್ಚಿಮದಲ್ಲಿ ಗಂಡಕ್ ನದಿ, ಪೂರ್ವದಲ್ಲಿ ಭಾಗಮತೀ ನದಿ, ದಕ್ಷಿಣದಲ್ಲಿ ಮುಜಫರ್‍ಪುರ ಜಿಲ್ಲೆ-ಇವು ಮೇರೆಗಳು. ವಿಸ್ತೀರ್ಣ 3,553 ಚ.ಮೈ, ಜನಸಂಖ್ಯೆ 35,40,976 (1971).
ಜಿಲ್ಲೆಯ ಆಡಳಿತಕೇಂದ್ರ ಮೋತೀಹಾರೀ. ಜನಸಂಖ್ಯೆ 40,380 (1971). ಇದು ವ್ಯಾಪಾರ ಮತ್ತು ಶಿಕ್ಷಣ ಕೇಂದ್ರ. ಪಟ್ಟಣಗಳ ಪೈಕಿ ಬೆಟ್ಟಿಹಾ (51,076) ಅತ್ಯಂತ ದೊಡ್ಡದು ಸಗೌಲಿ ಒಂದು ಸೈನಿಕ ಕೇಂದ್ರ.
ಭೌಗೋಳಿಕ ಮಾಹಿತಿ
ಜಿಲ್ಲೆಯ ವಾಯುವ್ಯ ಭಾಗದಲ್ಲಿ ಶಿವಾಲಿಕ್ ಶ್ರೇಣಿಯ ದುನ್ ಮತ್ತು ಸುಮೇಶ್ವರ ಬೆಟ್ಟಗಳಿವೆ. ಇವು ಅರಣ್ಯಾವೃತ. ಇಲ್ಲಿ ಸಾಲ್ ವೃಕ್ಷಗಳು ಹೆಚ್ಚು. ಸಮುದ್ರಮಟ್ಟಕ್ಕೆ ಸರಾಸರಿ 1,500' ಎತ್ತರದಲ್ಲಿರುವ 364 ಚ.ಮೈ. ವಿಸ್ತೀರ್ಣದ ಈ ಪ್ರದೇಶಕ್ಕೆ ದಕ್ಷಿಣದಲ್ಲಿ ನುರುಜುಗಲ್ಲಿನಿಂದ ಕೂಡಿದ ಕಿರು ಪ್ರದೇಶವೂ ಅದಕ್ಕೆ ದಕ್ಷಿಣದಲ್ಲಿ ಹುಲ್ಲಿನಿಂದ ಕೂಡಿದ ಜವುಗು ನೆಲವೂ (ಟೆರಾಯ್) ಇವೆ. ಜಿಲ್ಲೆಯ ಉಳಿದ ಭಾಗ ಮೆಕ್ಕಲು ಮಣ್ಣಿನ ಮೈದಾನ. ಅಲ್ಲಲ್ಲಿ ಮಾವಿನ ಮರಗಳ ತೋಪುಗಳಿವೆ. ಗಂಡಕ್, ದೊಡ್ಡ ಗಂಡಕ್, ಧನೌತೀ, ಭಾಗಮತೀ ಮತ್ತು ಲೇಲ್ ವಾಗೀ-ಇವು ಜಿಲ್ಲೆಯ ನದಿಗಳು. ಜಿಲ್ಲೆಯಲ್ಲಿ 139 ಚ.ಮೈ.ಗಳಷ್ಟು ಸರೋವರಗಳಿವೆ. ವಾರ್ಷಿಕ ಸರಾಸರಿ ಉಷ್ಣತೆ 760 ಫ್ಯಾ. ಮಳೆ ಸರಾಸರಿ 55'. ಮಳೆಗಾಲದಲ್ಲಿ ನದಿಗಳು ತುಂಬಿ ಹರಿದು ಅನಾಹುತ ಮಾಡುತ್ತವೆ. ನದಿಗಳ ಪಾತ್ರಗಳೂ ಆಗಾಗ ಬದಲಾಗುತ್ತದೆ. ಜಿಲ್ಲೆಯ ನದಿಗಳಲ್ಲಿ ಸಾಲಿಗ್ರಾಮಗಳು ಸಿಕ್ಕುತ್ತವೆ. ಬಂಗಾರದ ಚಿಕ್ಕ ಚಿಕ್ಕ ಕಣಗಳೂ ಪ್ರವಾಹದಲ್ಲಿ ತೇಲಿ ಬರುವುದುಂಟು. ಕೆಲವು ತೀರಗಳಲ್ಲಿ ಸುಣ್ಣಕಲ್ಲು ಸಿಕ್ಕುತ್ತದೆ. ಕ್ಷಾರ ಮಿಶ್ರಿತ ಮಣ್ಣಿನಿಂದ ಉಪ್ಪು ತೆಗೆಯುತ್ತಾರೆ.
ಉದ್ಯೋಗ ಮತ್ತು ವ್ಯಾಪಾರ
ಅರಣ್ಯಪ್ರದೇಶದಲ್ಲಿ ಮರಗಳನ್ನು ಕಡಿದು ಸಾಗಿಸುವುದು, ದನಗಳನ್ನು ಮೇಯಿಸುವುದು ಮುಖ್ಯ ಕಸುಬುಗಳು. ಗೋಧಿ, ಸಣಬು, ಮುಸುಕಿನಜೋಳ, ಎಣ್ಣೆಬೀಜಗಳು, ಗಸಗಸೆ, ನೀಲಿ ಮುಖ್ಯ ಬೆಳೆಗಳು. ಈಚೆಗೆ ನೀಲಿಯ ಬದಲು ಕಬ್ಬು ಹೆಚ್ಚಾಗಿ ಬೆಳೆಯುತ್ತಿದೆ. ತೆವುರ್ ಧಾಕಾ ಮತ್ತು ತ್ರಿವೇಣಿ ಕಾಲುವೆಗಳಿಂದ 1,35,000 ಎಕರೆಗಳಿಗೆ ನೀರಾವರಿ ಸೌಲಭ್ಯವುಂಟು.
ಕೈಮಗ್ಗದ ಬಟ್ಟೆ, ಚಾದರ, ಕಂಬಳಿಗಳು, ಮಣ್ಣಿನ ಪಾತ್ರೆಗಳು ಮುಂತಾದವು ಇಲ್ಲಿ ತಯಾರಾಗುತ್ತವೆ. ಬೆಟ್ಟಿಹಾದಲ್ಲಿ ಸಕ್ಕರೆಯನ್ನು ಶುದ್ದಗೊಳಿಸುವ ಕಾರ್ಖಾನೆಯಿದೆ. ಸರಾಹ್‍ದಲ್ಲಿ ಸಕ್ಕರೆ ಕಾರ್ಖಾನೆಯುಂಟು. ಸಕ್ಕರೆ ಮತ್ತು ಅಕ್ಕಿಗಿರಣಿಗಳ ಸಂಖ್ಯೆಯ ದೃಷ್ಟಿಯಿಂದ ಈ ಜಿಲ್ಲೆ ಬಿಹಾರ ರಾಜ್ಯದಲ್ಲೆ ಪ್ರಥಮ. ನೀಲಿಯ ವ್ಯಾಪಾರವೂ ನಡೆಯುತ್ತದೆ.
ನೇಪಾಳಕ್ಕೆ ಹೋಗುವ ಮುಖ್ಯರಸ್ತೆ ಚಂಪಾರಣ್ ಮುಖಾಂತರ ಹಾದು ಹೋಗುತ್ತದೆ. ನೀಲಿ, ಎಳ್ಳು, ಸಕ್ಕರೆ ಇಲ್ಲಿಂದ ರಫ್ತಾಗುತ್ತವೆ. ಬಟ್ಟೆ, ಉಪ್ಪು, ಸೀಮೆಎಣ್ಣೆ, ಕಲ್ಲಿದ್ದಲು ಮತ್ತು ತಂಬಾಕು ಆಮದಾಗುತ್ತವೆ. ವ್ಯಾಪಾರ ಸಾಮಾನ್ಯವಾಗಿ ನದಿಗಳ ಮುಖಾಂತರ ನಡೆಯುತ್ತದೆ.
ಇತಿಹಾಸ
ಹಿಂದೆ ಚಂಪಾರಣ್ ದಟ್ಟ ಕಾಡಾಗಿತ್ತು. ಇಲ್ಲಿ ರಾಮ ಮತ್ತು ಲವಕುಶರ ಯುದ್ಧ ಸಂಭವಿಸಿದ್ದರಿಂದ ಈ ಸ್ಥಳಕ್ಕೆ ಸಂಗ್ರಾಮಪುರ ಎನ್ನುವ ಹೆಸರು ಬಂತೆಂದು ಹೇಳಲಾಗಿದೆ. ಜಿಲ್ಲೆಯ ಅನೇಕ ಭಾಗಗಳಿಗೆ ಹಿಂದು ಋಷಿಗಳ ಹೆಸರಿನ್ನಿಡಲಾಗಿದೆ. ಈ ಭಾಗ ಮಿಥಿಲಾ ರಾಜ್ಯದಲ್ಲಿತ್ತೆನ್ನಲಾಗಿದೆ. ಇದು ಸ್ವಲ್ಪ ಕಾಲ ನೇಪಾಳದ ರಾಜರ ವಶದಲ್ಲಿದ್ದಿರಬಹುದು. 1765ರಲ್ಲಿ ಇದು ಈಸ್ಟ್ ಇಂಡಿಯ ಕಂಪನಿಯ ಆಡಳಿತಕ್ಕೆ ಸೇರಿತು. 1912ರಲ್ಲಿ ಬಿಹಾರ ಪ್ರಾಂತ್ಯದಲ್ಲಿ ಸಮಾವೇಶಗೊಂಡಿತು. ಈಗ ಬಿಹಾರ ರಾಜ್ಯದ ಒಂದು ಜಿಲ್ಲೆ.
ಮಹಾತ್ಮ ಗಾಂಧಿಯವರು ಇಲ್ಲಿಗೆ ಭೇಟಿ ಕೊಟ್ಟಂದಿನಿಂದ ಈ ಪ್ರದೇಶಕ್ಕೆ ರಾಜಕೀಯ ಮಹತ್ತ್ವ ಉಂಟಾಯಿತು. ನೀಲಿ ತೋಟದ ಕೆಲಸಗಾರರ ಸ್ಥಿತಿಯನ್ನು ಸ್ವತಃ ಪರಿಶೀಲಿಸಲು ಗಾಂಧೀಜಿ ಇಲ್ಲಿಗೆ ಬಂದಿದ್ದರು. ಅವರು ನಡೆಸಿದ ಸತ್ಯಾಗ್ರಹದ ಫಲವಾಗಿ ನೀಲಿ ಕೆಲಸಗಾರರ ಪರಿಸ್ಥಿತಿ ಉತ್ತಮಗೊಂಡಿತು. (ನೋಡಿ- ಚಂಪಾರಣ್-ಸತ್ಯಾಗ್ರಹ)
1815ರ ನೇಪಾಳಿ ಕೌಲು ಸಹಿಯಾದ್ದು ಈ ಸ್ಥಳದಲ್ಲಿ. ಲೌರಿಯಾ ನಂದನಗಢ. ಲೌರಿಯಾ ಆರಾರಾಜ್ ಮತ್ತು ರಾಂಪುರ್ವದಲ್ಲಿ ಚಕ್ರವರ್ತಿ ಅಶೋಕನ ಶಾಸನಗಳಿವೆ.