ಒಲಂಪಿಕ್ - ಕ್ರೀಡೆಗಳು

ರಿಮ್ಸ್ ಇಲ್ಲದೆ ಒಲಿಂಪಿಕ್ ಉಂಗುರಗಳು- ವಿಶ್ವದ ಐದು ಖಂಡಗಳನ್ನು ಪ್ರತಿನಿಧಿಸುತ್ತವೆ

ಇತಿಹಾಸ

ಒಲಂಪಿಕ್ ಧ್ವಜ:ಒಲಿಂಪಿಕ್ ಧ್ವಜವು ಬಿಳಿ ಹಿನ್ನೆಲೆಯನ್ನು ಹೊಂದಿದೆ, ಮಧ್ಯದಲ್ಲಿ ಐದು ಪರಸ್ಪರ ಉಂಗುರಗಳಿವೆ: ನೀಲಿ, ಹಳದಿ, ಕಪ್ಪು, ಹಸಿರು ಮತ್ತು ಕೆಂಪು. ಈ ವಿನ್ಯಾಸ ಸಾಂಕೇತಿಕವಾಗಿದೆ; ಇವು ವಿಶ್ವದ ಐದು ಖಂಡಗಳನ್ನು ಪ್ರತಿನಿಧಿಸುತ್ತವೆ, ಒಲಿಂಪಿಸಂನಿಂದ ಒಗ್ಗೂಡಿಸಲ್ಪಟ್ಟಿದೆ, ಈ ಆರು ಬಣ್ಣಗಳು ಪ್ರಸ್ತುತ ಸಮಯದಲ್ಲಿ ವಿಶ್ವದ ಎಲ್ಲಾ ರಾಷ್ಟ್ರೀಯ ಧ್ವಜಗಳಲ್ಲಿ ಗೋಚರಿಸುತ್ತವೆ.— ಪಿಯರೆ ಡಿ ಕೂಬರ್ಟಿನ್ (1931)[1]
  • ಇಂದು ವಿಶ್ವದ ಜನರೆಲ್ಲ ಒಂದೆಡೆ ಸೇರುವ ಎರಡು ಸ್ಥಳಗಳಿವೆ. ಒಂದು-ವಿಶ್ವ ಸಂಸ್ಥೆ ; ಇನ್ನೊಂದು-ಒಲಿಂಪಿಕ್ಸ್‌. ಆದರೆ ಇಂದು ವಿಶ್ವಸಂಸ್ಥೆ ರಾಜಕೀಯ ಕ್ಷೇತ್ರವಾಗಿರುವುದರಿಂದ, ಬಹುಶಃ ಒಲಿಂಪಿಕ್ಸ್‌ ಒಂದೇ ವಿಶ್ವದ ಎಲ್ಲ ಜನಾಂಗದ, ಭಾಷೆಯ, ವರ್ಗದ ಜನ ಸೇರುವ ಸ್ಥಳ ಎಂದು ಹೇಳಬಹುದು’ ಎಂದು ಒಲಿಂಪಿಕ್ ಕ್ರೀಡೆಗಳ ಇತಿಹಾಸ ಬರೆದಿರುವ ಲೇಖಕರೊಬ್ಬರು ಬರೆದಿದ್ದಾರೆ.
ಒಲಂಪಿಕ್ - ಕ್ರೀಡೆಗಳು
  • ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕ್ರೀಡಾಪಟುವೂ ತನ್ನ ರಾಷ್ಟ್ರವನ್ನು ಪ್ರತಿನಿಧಿಸುತ್ತಾನೆ. ಒಲಿಂಪಿಕ್ ಕ್ರೀಡೆಗಳ ಸ್ವರೂಪ ಇಂದು ಬದಲಾಗಿದ್ದರೂ ಇಲ್ಲಿ ಜಾತಿ, ಧರ್ಮ, ವರ್ಣಭೇದಕ್ಕೆ ಅವಕಾಶ ಇಲ್ಲ.(ಒಲಂಪಿಕ್ ಗೀತೆ)
  • ಗ್ರೀಕರು ಮನುಕುಲಕ್ಕೆ ಕೊಟ್ಟ ಅಪುರ್ವ ಸಾಂಸ್ಕೃತಿಕ ಕಾಣಿಕೆ ಎಂದರೆ ಒಲಿಂಪಿಕ್ ಕ್ರೀಡೆಗಳು. ಪುರಾತನ ಗ್ರೀಸಿನ ಒಲಿಂಪಿಯದಲ್ಲಿ ಅಖಿಲ ಹೆಲನಿಕ್ ಜನಪ್ರಿಯ ಉತ್ಸವಗಳಾಗಿ ಹಲವು ಶತಮಾನಗಳ ಕಾಲ ವಿಜೃಂಭಿಸಿದವು. ಆಧುನಿಕ ಯುಗದಲ್ಲಿ ವಿಶ್ವದ ಸಮಸ್ತ ರಾಷ್ಟ್ರಗಳ ಸ್ನೇಹವರ್ಧನೆಯ ಸಾಧನವಾಗಿ ದೊಡ್ಡ ಪ್ರಮಾಣದಲ್ಲಿ ಪುನರವತರಿಸಿರುವ ಅಂತಾರಾಷ್ಟ್ರೀಯ ಸ್ಪರ್ಧೆಗಳು (ಒಲಿಂಪಿಕ್ ಗೇಮ್ಸ್‌) ಪ್ರ.ಶ.ಪು. 776ರಲ್ಲಿ ಆರಂಭವಾದವೆಂದು ನಂಬಿಕೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತಿದ್ದ ಈ ಉತ್ಸವದಿಂದ ಇನ್ನೊಂದು ಉತ್ಸವದವರೆಗಿನ ಅವಧಿಯನ್ನು ಒಲಿಂಪಿಕ್ ಶಕವೆಂದೇ (ಒಲಿಂಪಿಯಾಡ್) ಕರೆಯುವ ವಾಡಿಕೆಯಿತ್ತು. ಪ್ರತಿಯೊಂದು ಒಲಿಂಪಿಕ್ ಶಕದ ಉದಯದ ಆಚರಣೆಯಾಗಿ ಒಲಿಂಪಿಕ್ ಕ್ರೀಡೋತ್ಸವವನ್ನು ಆಚರಿಸಲಾಗುತ್ತಿತ್ತು. ಒಲಿಂಪಿಯದ ದೇವಸ್ಥಾನದ ಧಾರ್ಮಿಕ ವಿಧಿಗೂ ಒಲಿಂಪಿಕ್ ಕ್ರೀಡೆಗೂ ಹತ್ತಿರದ ಸಂಬಂಧವಿದ್ದರೂ ಇದು ಕೇವಲ ವಿಧಿಯಾಗಿಯೇ ಕೊನೆಗೊಳ್ಳುತ್ತಿರಲಿಲ್ಲ. ಕ್ರೀಡಾ ಸ್ಪರ್ಧೆಗಳ ಜೊತೆಗೆ ಅಲ್ಲಿ ಭಾಷಣ, ಸಂಗೀತ, ಕಾವ್ಯ ಸ್ಪರ್ಧೆಗಳನ್ನೂ ಏರ್ಪಡಿಸಲಾಗುತ್ತಿತ್ತು.
  • ಪ್ರಾರಂಭದಲ್ಲಿ ಒಲಿಂಪಿಕ್ ಉತ್ಸವ ಕೇವಲ ಒಂದು ದಿನದ ಕಾರ್ಯಕ್ರಮವಾಗಿತ್ತು. ಆಗ ನಡೆಯುತ್ತಿದ್ದುದಾದರೂ ಒಂದೇ ಸ್ಪರ್ಧೆ; ಕ್ರೀಡಾಂಗಣದ (ಸ್ಟೇಡಿಯಂ) ಉದ್ದಕ್ಕೆ (181.8 ಮೀ) ಓಟ. ಕ್ರಮೇಣ ಸ್ಪರ್ಧೆಗಳ ಸಂಖ್ಯೆ ಹೆಚ್ಚಿತು. ಚಕ್ರದ (ಡಿಸ್ಕಸ್) ಎಸೆತ, ಈಟಿಯ (ಜಾವೆಲಿನ್)ಎಸೆತ, ಅಗಲನೆಗೆತ (ಬ್ರಾಡ್ಜಂಪ್), ಮುಷ್ಟಿ ಕಾಳಗ (ಬಾಕ್ಸಿಂಗ್), ಕುಸ್ತಿ, ಪೆಂಟಾಥ್ಲಾನ್, ರಥಗಳ ಸ್ಫರ್ಧೆ ಮುಂತಾದವು ಸೇರಿಕೊಂಡುವು. ಧಾರ್ಮಿಕ ವಿಧಿಗಳನ್ನೂ ಒಳಗೊಂಡು ಏಳು ದಿನಗಳ ಉತ್ಸವವಾಗಿ ಇದು ಬೆಳೆಯಿತು. ಮೊದಮೊದಲು ಗ್ರೀಕರಿಗೆ ಮಾತ್ರ ಸ್ಪರ್ಧೆಗೆ ಪ್ರವೇಶವಿತ್ತು. ಆದರೆ ಎಲ್ಲ ಗ್ರೀಕ್ ವಸಾಹತುಗಳಿಂದಲೂ ಸ್ಫರ್ಧಿಗಳು ಬರುತ್ತಿದ್ದರು. ಉತ್ಸವ ಕಾಲದಲ್ಲಿ ಸ್ಪರ್ಧಿಗಳು ನಿರ್ಭಯವಾಗಿ ಸಂಚರಿಸಲು ಸಾಧ್ಯವಾಗುವಂತೆ ಶಾಂತ ವಾತಾವರಣವನ್ನು ಏರ್ಪಡಿಸಲಾಗುತ್ತಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಲೂ ಅದನ್ನು ವೀಕ್ಷಿಸಲೂ ಸ್ತ್ರೀಯರಿಗೆ ಅವಕಾಶವಿರಲಿಲ್ಲ. ಡೆಮೆಟರಿನ ಪುಜಾರಿಣಿಗಳು ಮಾತ್ರ ಈ ನಿಯಮಕ್ಕೆ ಅಪವಾದ; ಅವರು ಕ್ರೀಡೆಗಳನ್ನವಲೋಕಿಸಬಹುದಿತ್ತು. ಈ ನಿಯಮವನ್ನುಲ್ಲಂಘಿಸಿದ ಮಹಿಳೆಗೆ ಮರಣ ದಂಡನೆ ವಿಧಿಸುತ್ತಿದ್ದರು. ಸ್ಪರ್ಧೆಯ ಪಾವಿತ್ರ್ಯವನ್ನು ಕಾಪಾಡುತ್ತೇವೆ; ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತೇವೆ; ನ್ಯಾಯವಾದ ತೀರ್ಪು ನೀಡುತ್ತೇವೆ-ಎಂದು ಸ್ಪರ್ಧೆ ಪ್ರಾರಂಭವಾಗುವ ಮುನ್ನ ಎಲ್ಲ ಸ್ಪರ್ಧಿಗಳೂ ಅವರ ಕುಟುಂಬದವರೂ ಶಿಕ್ಷಕರೂ ತೀರ್ಪುಗಾರರೂ ಪ್ರತಿಜ್ಞಾವಿಧಿ ಸ್ವೀಕರಿಸಬೇಕಿತ್ತು.
  • ಆಗಿನ ಕಾಲದಲ್ಲಿ ಒಲಿಂಪಿಕ್ ಕ್ರೀಡೆಗಳು ಬಹಳ ಗೌರವದ ಸ್ಥಾನ ಪಡೆದಿದ್ದುವು. ತಂತಮ್ಮಲ್ಲೇ ಬಡಿದಾಡುತ್ತಿದ್ದ ಗ್ರೀಕ್ ರಾಷ್ಟ್ರಗಳು ಉತ್ಸವ ಕಾಲದಲ್ಲಿ ಪರಸ್ಪರ ಸಹಕರಿಸುತ್ತಿದ್ದುದೂ ಅವು ಚತುರ್ವರ್ಷೀಯ ಕಾಲಚಕ್ರವನ್ನು ಪುರಸ್ಕರಿಸಿದ್ದೂ ಇದಕ್ಕೆ ಸಾಕ್ಷಿ. ಒಲಿಂಪಿಕ್ ಸ್ಪರ್ಧೆಯಲ್ಲಿ ಗೆದ್ದವರಿಗೆ ಲಭಿಸುತ್ತಿದ್ದುದಾದರೂ ಏನು? ಕಾಡು ಆಲಿವ್ ಮರದ ಎಲೆಗಳ ರೆಂಬೆಯ ಕಿರೀಟ. ಆದರೆ ಈ ಗೌರವಕ್ಕಾಗಿಯೇ ದೊರೆಗಳೂ ಸಾಮಾನ್ಯರೂ ಸಮಾನರಾಗಿ ಸ್ಪರ್ಧಿಸುತ್ತಿದ್ದರು. ರೋಮನ್ ಚಕ್ರವರ್ತಿ ನೀರೋ ಕೂಡ ಈ ಮರ್ಯಾದೆಗಾಗಿ ಹಾತೊರೆದನಂತೆ. ಸ್ಪರ್ಧೆಗಳಲ್ಲಿ ವಿಜಯಗಳಿಸಿದವರನ್ನು ರಾಷ್ಟ್ರವೀರರೆಂದು ಗೌರವಿಸಲಾಗುತ್ತಿತ್ತು. ಅವರ ಸಾಹಸಗಳು ಕಾವ್ಯಕ್ಕೆ ವಸ್ತುವಾಗುತ್ತಿದ್ದುವು; ಸಂಗೀತಕ್ಕೆ ಸ್ಪೂರ್ತಿ ನೀಡುತ್ತಿದ್ದುವು, ವಿಜಯಿಯ ಮೈಕಟ್ಟನ್ನೂ ಗಾಡಿಯನ್ನೂ ಶಿಲ್ಪಿಗಳು ಅಮೃತಶಿಲೆಯಲ್ಲಿ ಶಾಶ್ವತವಾಗಿ ಸೆರೆ ಹಿಡಿದಿಡುತ್ತಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸುವುದು ಗೆಲ್ಲುವುದಕ್ಕಾಗಿ ಮಾತ್ರವಲ್ಲ, ಆಡುವುದಕ್ಕಾಗಿ-ಎಂಬುದು ಇಲ್ಲಿಯ ಧ್ಯೇಯ. ಕ್ರೀಡಾಪಟುವಿನ ನಿಜಮನೋಧರ್ಮ, ಆಟವಾಡುವ ಶೈಲಿಯ ಸೊಬಗು-ಇವಕ್ಕೆ ಇಲ್ಲಿ ಪ್ರಾಧಾನ್ಯ.

ಉಗಮ

  • ಪ್ರ.ಶ.ಪು. 776ರಲ್ಲಿ ಒಲಿಂಪಿಕ್ ಶಕೆ ಆರಂಭವಾಯಿತೆಂಬುದು ಐತಿಹ್ಯವಾದರೂ ಅದಕ್ಕೂ ಹಿಂದೆಯೇ ಒಲಿಂಪಿಕ್ ಕ್ರೀಡೆಗಳು ಪ್ರಾರಂಭವಾದುವೆಂದು ಭಾವಿಸುವುದು ತಪ್ಪಾಗಲಾರದು, ಕ್ರೀಡಾಸ್ಪರ್ಧೆಗಳು ಹುಟ್ಟಿದ್ದೇ ಪುರಾತನ ಗ್ರೀಸಿನಲ್ಲಿ. ದೇವರ ಅಥವಾ ಸತ್ತ ವೀರನ ಗೌರವಾರ್ಥವಾಗಿ ಅಂಗಸಾಧನೆಯ ಸ್ಪರ್ಧೆಗಳನ್ನೇರ್ಪಡಿಸುವ ಪದ್ಧತಿಯಿಂದ ಒಲಿಂಪಿಯನ್ ಹಬ್ಬ ಬೆಳೆದು ಬಂದಿರಬಹುದು. ಆರಂಭದಲ್ಲಿ ಮೃತನ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಕ್ರೀಡೆಗಳನ್ನೇರ್ಪಡಿಸುವ ಪದ್ಧತಿಯಿದ್ದಿರಬಹುದು. (ಹೋಮರ್ ಕವಿಯ ಈಲಿಯಡಿನಲ್ಲಿ ಇಂಥ ಒಂದು ಪ್ರಸಂಗದ ವರ್ಣನೆಯಿದೆ) ಅನಂತರ ಇದು ಸಾಮೂಹಿಕವಾಗಿ ಪರಿಣಮಿಸಿ, ಒಂದು ಅವಧಿಯಲ್ಲಿ ಸತ್ತ ಎಲ್ಲ ವೀರರ ಗೌರವಾರ್ಥವಾಗಿ ಏರ್ಪಡಿಸುವ ಪದ್ಧತಿ ಬೆಳೆದು ಬಂದಿರಬಹುದು. ಇದರಿಂದ ಸ್ಪರ್ಧಿಗಳಲ್ಲಿ ನವಚೈತನ್ಯ ತುಂಬಿ ಅವರ ಯೌವ್ವನ ಪುನರ್ನವಗೊಳ್ಳುವುದೆಂದೂ ದೇವರುಗಳ ಶಕ್ತಿಗೆ ಚಾಲನೆ ದೊರಕುವುದೆಂದೂ ಸತ್ತವರಿಗೆ ನಷ್ಟವಾದ ಶಕ್ತಿ ಲಭಿಸುವುದೆಂದೂ ಭಾವಿಸಲಾಗಿತ್ತು. ಅಂಗಸಾಧನೆಯಿಂದ ಆರೋಗ್ಯ ಪ್ರಾಪ್ತಿ. ಹೋರಾಟಕ್ಕೆ ಸಿದ್ಧತೆ, ತತ್ತ್ವದರ್ಶನ ಮತ್ತು ಶೌರ್ಯಪರಾಕ್ರಮಗಳೆರಡನ್ನೂ ಏಕಪ್ರಕಾರವಾಗಿ ಪ್ರೀತಿಸುತ್ತಿದ್ದ ಗ್ರೀಕರ ಜೀವನದ ಆದರ್ಶಗಳಿಗೆ ಕ್ರೀಡೆಗಳೇ ತಳಹದಿ. ಆಯಾ ಸ್ಥಳದೇವತೆಗಳ ಗೌರವಾರ್ಥ ನಡೆಯುತ್ತಿದ್ದ ಧಾರ್ಮಿಕ ಉತ್ಸವಗಳೂ ಕ್ರೀಡಾಸ್ಪರ್ಧೆಗಳೊಂದಿಗೆ ಬೆರೆತುಕೊಂಡು ಕ್ರಮೇಣ ಒಲಿಂಪಿಯನ್ ಹಬ್ಬಕ್ಕೊಂದು ಸಾರ್ವತ್ರಿಕ ರೂಪ ಬಂದಿರಬೇಕು.
  • ಗ್ರೀಕರ ಜೀವನ ಧೋರಣೆ ಮತ್ತು ಅವರು ಕ್ರೀಡಾಸ್ಪರ್ಧೆಗಳನ್ನು ನಡೆಸುತ್ತಿದ್ದ ವಿಧಾನಗಳು ಹೋಮರನ ಈಲಿಯಡಿನಲ್ಲಿ ವರ್ಣಿತವಾಗಿವೆ. ಯುದ್ಧದಲ್ಲಿ ವೀರಮರಣ ಪಡೆದ ಪೆಟ್ರೋಕ್ಲಸನ ಅಂತಿಮಗೌರವವಾಗಿ ಟ್ರಾಯ್ನ ಹೊರವಲಯದಲ್ಲಿ ಕೆಲವು ಕ್ರೀಡಾಸ್ಪರ್ಧೆಗಳನ್ನು ಅಕಿಲೀಸ್ ಏರ್ಪಡಿಸಿದ. ಅದರಲ್ಲಿ ಭಾಗಿಗಳು ಪ್ರೇಕ್ಷಕರು ಸೈನಿಕರು. ರಥಸ್ಪರ್ಧೆಯೇ ಮುಖ್ಯ ಘಟನೆ (ಇವೆಂಟ್). ಕುಶಲಕಲೆಗಳನ್ನರಿತ ಸುಂದರ ಹೆಣ್ಣು ಮತ್ತು 22 ಪಿಂಟ್ ಹಿಡಿಸುವ, ಕಿವಿಯಂಥ ಹಿಡಿಗಳಿರುವ ಪಾತ್ರೆ-ಇದು ಅಕಿಲೀಸ್ ಇಟ್ಟಿದ್ದ ಪ್ರಥಮ ಬಹುಮಾನ. ದೇವತೆಗಳೇ ತೀರ್ಪುದಾರರು. ಅವರಲ್ಲೂ ಪುರ್ವಾಗ್ರಹ, ಪಕ್ಷಪಾತ. ರಥಸ್ಪರ್ಧೆಯೇ ಅಲ್ಲದೆ ಮುಷ್ಟಿಕಾಳಗ, ಕುಸ್ತಿ, ಓಟ, ಬಾಣವಿದ್ಯೆ, ದ್ವಂದ್ವ ಯುದ್ಧ ಮುಂತಾದ ಇತರ ಕ್ರೀಡೆಗಳನ್ನೂ ಹೋಮರ್ ಬಣ್ಣಿಸಿದ್ದಾನೆ.
ಜೀಯಸ್ (Zeus) ದೇವತೆ (ಜುಪಿಟರ್)ಜೀಯಸ್ (Zeus) ದೇವತೆ ಸ್ವರ್ಗದ ಒಡೆತನಕ್ಕಾಗಿ ಕ್ರೋನಸನೊಂದಿಗೆ ಒಲಿಂಪಿಯದಲ್ಲಿ ಸೆಣಸಿ ಗೆದ್ದನೆಂದೂ ಇದರ ಸ್ಮರಣಾರ್ಥವಾಗಿ ಒಲಿಂಪಿಕ್ ಕ್ರೀಡೆಗಳು ಆರಂಭವಾದುವೆಂದೂ ಪಾಸೇನಿಯಸನಿಂದ ತಿಳಿದು ಬರುತ್ತದೆ.
  • ಕವಿ ಪಿಂಡರನ ಪ್ರಕಾರ ಒಲಿಂಪಿಕ್ ಕ್ರೀಡೆಗಳನ್ನು ಸ್ಥಾಪಿಸಿದವನು ವೀರ ಹೆರಾಕ್ಲಿಸ್(Heracles). ಆಜಿಯಸ್ ದೊರೆಯನ್ನು ಕೊಂದು ಈಲಿಸ್ ರಾಜ್ಯವನ್ನು ಗೆದ್ದ ಜ್ಞಾಪಕಾರ್ಥವಾಗಿ ಆತ ಇದನ್ನು ಆರಂಭಿಸಿದನಂತೆ, ರೋಗರುಜಿನಾದಿ ಉಪದ್ರವಗಳೂ ಪರಸ್ಪರ ವೈಷಮ್ಯವೂ ಕಚ್ಚಾಟವೂ ನಾಡಿನಲ್ಲೆಲ್ಲ ಹಬ್ಬಿದ್ದಾಗ, ದಿವ್ಯವಾಣಿಯ ಆಜ್ಞೆಯಂತೆ ಇಫಿಟಸ್ ಇವನ್ನು ಪ್ರಾರಂಭಿಸಿದನೆಂಬುದು ಇನ್ನೊಂದು ಐತಿಹ್ಯ. ಈ ಕಥೆಗೆ ಆಧಾರವಾಗಿ ಒಲಿಂಪಿಯದ ಹೇರಿಯಂನಲ್ಲಿರುವ ಕಂಚಿನ ಚಕ್ರವೊಂದನ್ನು ಗ್ರೀಕ್ ಪ್ರವಾಸಿ ಪಾಸೇನಿಯಸ್ ಉಲ್ಲೇಖಿಸಿದ್ದಾನೆ, ನಾನಾ ಆಟಗಳ ನಿಯಮಾವಳಿಗಳನ್ನೆ ಅಲ್ಲದೆ ಲಿಕರ್ಗಸ್ ಮತ್ತು ಇಫಿಟಸರ ಹೆಸರುಗಳನ್ನೂ ಇದರಲ್ಲಿ ಕೆತ್ತಿದೆ. ಇಯಾನ್ ಹಕುರ್ಯ್‌ಲಿಸ್/ಹೆರಾಕ್ಲಿಸ್ ಒಲಿಂಪಿಕ್ ಕ್ರೀಡೆಗಳ ಜನಕನೆಂದೂ ಅವನೇ ಇವಕ್ಕೆ ಈ ನಾಮಕರಣ ಮಾಡಿದವನೆಂದೂ ಒಲಿಂಪಿಯದಲ್ಲಿ ಓಟದ ಸ್ಪರ್ಧೆಗೆ ಬರಬೇಕೆಂದು ತನ್ನ ಸೋದರನಿಗೇ ಆತ ಸವಾಲು ಒಡ್ಡಿದನೆಂದೂ ಈಲಿಸಿನ ಜನದ ಪುರಾತನ ದಾಖಲೆಗಳು ಸಾರುತ್ತವೆಯೆಂದೂ ಪಾಸೇನಿಯಸ್ ಹೇಳುತ್ತಾನೆ. ಜೀಯಸ್ (Zeus) ದೇವತೆ ಸ್ವರ್ಗದ ಒಡೆತನಕ್ಕಾಗಿ ಕ್ರೋನಸನೊಂದಿಗೆ ಒಲಿಂಪಿಯದಲ್ಲಿ ಸೆಣಸಿ ಗೆದ್ದನೆಂದೂ ಇದರ ಸ್ಮರಣಾರ್ಥವಾಗಿ ಒಲಿಂಪಿಕ್ ಕ್ರೀಡೆಗಳು ಆರಂಭವಾದುವೆಂದೂ ಪಾಸೇನಿಯಸನಿಂದ ತಿಳಿದು ಬರುತ್ತದೆ.

ಬೆಳೆವಣಿಗೆ

  • ಒಲಿಂಪಿಕ್ ಕ್ರೀಡೆಗಳ ಉಗಮ ಹೇಗಾಯಿತೆಂಬುದು ಸ್ಪಷ್ಟವಿಲ್ಲವಾದರೂ ಪ್ರ.ಶ.ಪು. 776ರ ಹೊತ್ತಿಗೆ ಇವು ಸ್ಥಾಪಿತವಾಗಿದ್ದುವೆಂಬುದಂತೂ ನಿಜ. ಇವುಗಳ ಸ್ಥಳ ಒಲಿಂಪಿಯ-ಪೆಲೊಪೊನೀಸಸಿನ ವಾಯವ್ಯಭಾಗ. ಆಲ್ಫಿಯಾಸ್ ಮತ್ತು ಕ್ಲೇಡಿಯಸ್ ನದಿಗಳ ಪುರ್ವ ಮತ್ತು ಉತ್ತರ ದಡಗಳ ಮೇಲೆ ಕ್ರೀಡಾಂಗಣವೂ ಜóÆ್ಯಸ್ ದೇವಸ್ಥಾನವೂ ನಿರ್ಮಿತವಾಗಿದ್ದುವು. ಹೆಲನಿಕ್ ಯುಗದಲ್ಲಿ ಈ ಕ್ಷೇತ್ರ ಪ್ರಸಿದ್ಧವಾಯಿತು, ಗ್ರೀಕರ ದೈಹಿಕ ಸೌಂದರ್ಯಾರಾಧನೆಯ ಮತ್ತು ದೇಹ ಬುದ್ಧಿಗಳೆರಡರ ಸಮನ್ವಯದ ಸಂಕೇತವಾಯಿತು.
  • ಒಲಿಂಪಿಕ್ ಕ್ರೀಡೆಗಳು ಬಹಳ ಪ್ರಸಿದ್ಧವೂ ಪ್ರಮುಖವೂ ಆದದ್ದು ಪ್ರ.ಶ.ಪು. 6ನೆಯ ಶತಮಾನದಿಂದೀಚೆಗೆ, ನಗರರಾಜ್ಯವಾದ ಪೀಸಾವೇ ಮೊದಲು ಇವನ್ನು ನಿಯಂತ್ರಿಸುತ್ತಿತ್ತು. ಆದರೆ ಪ್ರ.ಶ.ಪು. 572ರ ವೇಳೆಗೆ ನೆರೆಯ ನಗರ ರಾಜ್ಯ ಈಲಿಸ್ ಇವುಗಳ ಹಿಡಿತ ಪಡೆದುಕೊಂಡಿತು. ಕ್ರಮೇಣ ಒಲಿಂಪಿಯ ಒಂದು ಒಕ್ಕೂಟದ ಕೇಂದ್ರವಾಯಿತು. ಈ ಕ್ರೀಡೆಗಳು ಸ್ಥಳೀಯ ಪ್ರಾಮುಖ್ಯದ ವ್ಯಾಪ್ತಿಯನ್ನು ಮೀರಿ ಅಂತಾರಾಷ್ಟ್ರೀಯವೆನಿಸಿಕೊಂಡುವು. ಆಗ ಸ್ಪಾರ್ಟ ಪ್ರಬಲ ರಾಜ್ಯ. ಇದು ಈಲಿಸಿನೊಂದಿಗೆ ಸಖ್ಯ ಗಳಿಸಿಕೊಂಡಿತು. ಒಲಿಂಪಿಕ್ ಉತ್ಸವದ ಧಾರ್ಮಿಕ ವಿಧಿಗಳ ನಿಯೋಜನೆ ಈಲಿಸಿನದಾದರೆ, ಕ್ರೀಡೆಗಳ ಅಧಿಕೃತ ರಕ್ಷಣೆ ಸ್ಪಾರ್ಟದ್ದು. ಹೀಗೆ ಸ್ಪಾರ್ಟದ ಕೀರ್ತಿ ಪ್ರತಿಷ್ಠೆಗಳು ಬೆಳೆದುವು. ಯುದ್ಧಕಾಲದಲ್ಲಿ ಕೂಡ ಗ್ರೀಕ್ ಜನರು ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸಲು ಮತ್ತು ಅವನ್ನು ಪ್ರೇಕ್ಷಿಸಲು ನಾನಾ ಕಡೆಗಳಿಂದ ಬರುವುದು ಸಾಧ್ಯವಾಗುವಂತೆ ಶಾಂತ ವಾತಾವರಣ ರಚಿಸಿ ಪಾಲಿಸುವ, ಸುವ್ಯವಸ್ಥೆ ಏರ್ಪಡಿಸುವ ಹೊಣೆ ಸ್ಪಾರ್ಟದ್ದಾಯಿತು, ಹೀಗೆ ಈ ಕ್ರೀಡೆಗಳು ಎಲ್ಲ ಯುದ್ಧಗಳನ್ನೂ ಭಿನ್ನತೆ ವೈಷಮ್ಯಗಳನ್ನೂ ಮೀರಿದ ಅಂತಾರಾಷ್ಟ್ರೀಯ ಸ್ನೇಹ ಸಂವರ್ಧನೆಯ ಏಕೈಕ ಸೂತ್ರವಾಗಿ ಪರಿಣಮಿಸಿದುವು. ಪ್ರ.ಶ.ಪು. 776-21ರವರೆಗೆ ವಿಜಯಿಗಳ ಪಟ್ಟಿಯಲ್ಲಿದ್ದವರು ಈಲಿಯನರು ಮತ್ತು ಅವರ ನೆರೆಹೊರೆಯವರು ಮಾತ್ರ. ಆದರೆ ಅನಂತರ ಅಥೀನಿಯನ್ನರೂ ಇತರರೂ ಪ್ರವೇಶಿಸಿದರು.
  • ಹೀಗೆ ಹೆಲನಿಕ್ ಏಕತೆಯ ಸಂಕೇತವಾಗಿ, ದೇಹ-ಮನಸ್ಸುಗಳ ಸುಮಧುರ ಹೊಂದಾಣಿಕೆಯ ಸಾಧನವಾಗಿ, ಜóÆ್ಯಸ್ ದೇವತೆಯ ಆರಾಧನೋತ್ಸವವಾಗಿ ಇದು ಮುಂದುವರಿಯಿತು. ಗ್ರೀಕ್ ರಾಜ್ಯಗಳ ಸ್ವಾತಂತ್ರ್ಯಹರಣವಾದ ಮೇಲೂ-ಮೆಸೆಡೋನಿಯನ್ ಮತ್ತು ರೋಮನ್ ಚಕ್ರಾಧಿಪತ್ಯಗಳ ಕಾಲದಲ್ಲಿ ಕೂಡ-ಅನಸ್ಯೂತವಾಗಿ ನಡೆದುಕೊಂಡು ಬಂದುವು. 393ರ ಅನಂತರ ಇವು ನಿಂತುಹೋದವೆಂದು 11ನೆಯ ಶತಮಾನದ ಗ್ರೀಕ್ ಲೇಖಕ ಸಿಡ್ರಿನಸ್ ಬರೆಯುತ್ತಾನೆ. ರೋಮನ್ ಚಕ್ರವರ್ತಿ ಥಿಯೊಸೋಸಿಯಸನ ಆಳ್ವಿಕೆಯ ಕಾಲದಲ್ಲಿ ಅವನ ಆಜ್ಞೆಯಂತೆ ಕ್ರೈಸ್ತರು ಅಥವಾ ಗಾಥರು ಜóÆ್ಯಸ್ ದೇಗುಲವನ್ನು ನಾಶ ಮಾಡಿದರು. ಜóÆ್ಯಸ್ ದೇವತೆಯ ವಿಗ್ರಹವನ್ನು ಕಾನ್ಸ್ಟಾಂಟಿನೋಪಲಿಗೆ ಸಾಗಿಸಲಾಯಿತು. ಅಲ್ಲಿ ಅದು 47ರಲ್ಲಿ ಅಗ್ನಿಗೆ ಆಹುತಿಯಾಯಿತು. ಅಂತೂ ಇಷ್ಟು ದೀರ್ಘಕಾಲ ಇಂಥ ಪ್ರಮಾಣದಲ್ಲಿ ಜನರ ಮೇಲೆ ಪ್ರಭಾವ ಬೀರಿದ ಮಾನವ ನಿರ್ಮಿತ ವ್ಯವಸ್ಥೆ ಇನ್ನೊಂದಿಲ್ಲ.
  • ಒಲಿಂಪಿಕ್ ಕ್ರೀಡೆಯನ್ನು ಐದು ದಿನಗಳ ಅವಧಿಗೆ ವಿಸ್ತರಿಸಿದ್ದು 77ನೆಯ ಉತ್ಸವದಲ್ಲಿ. ಏಕದಿನದ ಸ್ಪರ್ಧೆಗಳಲ್ಲಿ ಅಭ್ಯರ್ಥಿಗಳು ಉಷಃಕಾಲದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮೇಲೆ ಅವರ ಬರಿ ಮೈಗಳಿಗೆ ತೈಲ ಹಚ್ಚಲಾಗುತ್ತಿತ್ತು. ಮಟ್ಟ ನೆಲದ ಓಟದ ಪಂದ್ಯಗಳಲ್ಲಿ ಪುರ್ವಭಾವಿಯಾಗಿ (ಹೀಟ್ಸ್‌) ತಲಾ ನಾಲ್ವರನ್ನೋಡಿಸಿ, ಸೋತವರನ್ನು ಬಿಡುತ್ತಾ ಅಂತಿಮ (ಫೈನಲ್) ಹಂತಕ್ಕೆ ಸ್ಪರ್ಧಿಗಳನ್ನು, ಆರಿಸಿಕೊಳ್ಳಲಾಗುತ್ತಿತ್ತು. ಮೊದಮೊದಲು ಇರುತ್ತಿದ್ದದ್ದು ಒಂದೇ ಓಟದ ಸ್ಪರ್ಧೆ (5.25 ಮೀ) 14ನೆಯ ಒಲಿಂಪಿಯಾಡಿನಿಂದ 5.5 ಮೀ ಓಟದ ಸ್ಪರ್ಧೆ ಸೇರಿಸಲಾಯಿತು. ದೂರದ (ಡಿಲೋಕಾಸ್) ಓಟ ಸ್ಪರ್ಧೆಯನ್ನು ಸೇರಿಸಿದ್ದು 15ನೆಯ ಕ್ರೀಡೆಗಳಿಂದ. ಇದರ ದೂರ 387.5 ಮೀ, 630 ಮೀ, 1235 ಮೀ.
  • ಕುಸ್ತಿ ಮತ್ತು ಪೆಂಟಾಥ್ಲಾನ್ ಸ್ಪರ್ಧೆಗಳನ್ನಾರಂಭಿಸಿದ್ದು 18ನೆಯ ಉತ್ಸವದಲ್ಲಿ, ಅಗಲ ನೆಗೆತ, ಈಟಿಯ ಎಸೆತ, ಚಕ್ರದ ಎಸೆತ, ಮಟ್ಟನೆಲದ ಓಟ, ಕುಸ್ತಿ-ಈ ಐದೂ ಸೇರಿ ಪೆಂಟಾಥ್ಲಾನ್ ಎನಿಸಿಕೊಳ್ಳುತ್ತಿತ್ತು. ಮುಷ್ಟಿಕಾಳಗ ಸ್ಪರ್ಧೆಯನ್ನು ಏರ್ಪಡಿಸಲಾರಂಭಿಸಿದ್ದು ಪ್ರ.ಶ.ಪು. 688ರಲ್ಲಿ (23ನೆಯ ಉತ್ಸವ). ರಥ ಸ್ಪರ್ಧೆ ಬಂದದ್ದೂ ಆ ವರ್ಷವೇ. ಕುದುರೆಸವಾರಿ ಪಂದ್ಯವನ್ನು 33ನೆಯ ಉತ್ಸವದಲ್ಲಿ (ಪ್ರ.ಶ.ಪು.648) ಏರ್ಪಡಿಸಲಾಯಿತು. ಮುಷ್ಟಿಕಾಳಗ ಮತ್ತು ಕುಸ್ತಿಗಳ ಮಿಶ್ರಣವಾದ ಪ್ಯಾನ್ಕ್ರಿಯೇಷಿಯಮನ್ನು ಪ್ರಾರಂಭಿಸಿದ್ದೂ ಆ ವರ್ಷವೇ. ಬಾಲಕರಿಗೆ ಕ್ರೀಡಾಸ್ಪರ್ಧೆಗಳನ್ನೇರ್ಪಡಿಸಿದ್ದು ಪ್ರ.ಶ.ಪು. 632ರಲ್ಲಿ, ಕಹಳೆ ಸ್ಪರ್ಧೆಗಳನ್ನು ಪ್ರ.ಶ.ಪು. 416ರಲ್ಲಿ (93ನೆಯ ಉತ್ಸವ) ಪಟ್ಟಿಯಲ್ಲಿ ಸೇರಿಸಲಾಯಿತು. ಯುದ್ಧಕವಚಧಾರಿಗಳ ಓಟದಪಂದ್ಯ ಆರಂಭಗೊಂಡಿದ್ದು ಪ್ರ.ಶ.ಪು.396ರಲ್ಲಿ. ಪ್ರ.ಶ.ಪು.490ರಲ್ಲಿ ಮ್ಯಾರಥಾನ್ ಯುದ್ಧದ ವಿಜಯದ ವಾರ್ತೆಯನ್ನು ಹೊತ್ತು ಅಲ್ಲಿಂದ ಅಥೆನ್ಸ್‌ ಪಟ್ಟಣಕ್ಕೆ ಓಡಿದ ಗ್ರೀಕ್ ಸಾಹಸವನ್ನು ನೆನಪಿಗೆ ತಂದುಕೊಡುವ ದೂರದ ಓಟದ ಪಂದ್ಯವನ್ನು (ಮ್ಯಾರತಾನ್ ರೇಸ್) ಪುರಾತನ ಕ್ರೀಡಾಸ್ಪರ್ಧೆಗಳಲ್ಲಿ ಸೇರಿಸಿಯೇ ಇರಲಿಲ್ಲವೆಂಬುದು ಸ್ವಾರಸ್ಯದ ಸಂಗತಿ.
  • ವಿವಿಧ ಪಂದ್ಯಗಳು: ಪಂದ್ಯಗಳು ನಡೆಯುವುದಕ್ಕೆ ಒಂದು ತಿಂಗಳ ಹಿಂದಿನಿಂದಲೇ ಸ್ಪರ್ಧಿಗಳು ತೀವ್ರ ತರಬೇತಿ ಪಡೆಯುತ್ತಿದ್ದರು. ಚಕ್ರ ಮತ್ತು ಈಟಿಗಳು ಬಹಳ ಜನಪ್ರಿಯತೆ ಗಳಿಸಿದ್ದುವು. ಆಗಿನ ಚಕ್ರದ್ದು ಈಗಿನದಕ್ಕಿಂತ (2 ಕಿಲೊ ಗ್ರಾಂ) ಹೆಚ್ಚು ತೂಕ. ಅದನ್ನು ಎಸೆಯುತ್ತಿದ್ದದ್ದು ಒಂದು ವೃತ್ತದಿಂದಲ್ಲ; ಒಂದು ಸರಳರೇಖೆಯ ಹಿಂಬದಿಯಿಂದ. ಚಕ್ರವನ್ನೆಸೆಯುವ ಮುನ್ನ ಒಮ್ಮೆ ಪುರ್ತಿಯಾಗಿ ಸುತ್ತುವ ಬದಲು ಗ್ರೀಕ್ ಎಸೆಗಾರ ಅದನ್ನು ಎರಡೂ ಕೈಗಳಿಂದ ತಲೆಯ ಮೇಲೆತ್ತಿ, ಬಲಗೈಯಲ್ಲಿ ಅದನ್ನು ಹಿಡಿದು ಥಟ್ಟನೆ ಬಲಕ್ಕೆ ಬಾಗಿ, ಅನಂತರ ಮತ್ತೆ ಮುಂದೆ ನಡೆದು ಎಸೆಯುತ್ತಿದ್ದ. ತತ್ಪಲವಾಗಿ ಚಕ್ರ ಎಸೆಯುವವರಿಗೆ ನಡುವಿನ ಮೇಲ್ಭಾಗದಲ್ಲಿ ಹೊಟ್ಟೆಯ ಬಳಿ ಮಾಂಸಖಂಡ ಬೆಳೆಯುತ್ತಿತ್ತು. ಆ ಕಾಲದ ಪ್ರತಿಮೆಗಳಲ್ಲಿ ಇದನ್ನು ಗಮನಿಸಬಹುದು.
  • ಈಟಿ ಎಸೆತದಲ್ಲಿ ಶಕ್ತಿಗಿಂತ ಯುಕ್ತಿಗೂ ನಿಷ್ಕೃಷ್ಟತೆಗೂ ಪ್ರಾಧಾನ್ಯ. ಇತರರಿಗಿಂತ ಹೆಚ್ಚು ದೂರ ಎಸೆಯುವುದು ಸ್ಪರ್ಧಿಯ ಉದ್ದೇಶವಲ್ಲ. ನೆಲದ ಮೇಲಿನ ಒಂದು ನಿರ್ದಿಷ್ಟ ಗುರಿಗೆ ಹೊಡೆಯಬೇಕಿತ್ತು. ಈಟಿ ಒಂದಾಳಿನಷ್ಟು ಎತ್ತರ ಬೆರಳಿನಷ್ಟು ಸಣ್ಣಗೂ ಇದ್ದು ಬಹಳ ಹಗುರವಾಗಿತ್ತು. ಅದರ ಹಿಡಿಗೆ ಸುಮಾರು 0.6069 ಮೀ ಉದ್ದದ ಚರ್ಮದ ದಾರ ಸುತ್ತಲಾಗುತ್ತಿತ್ತು. ಪಂದ್ಯಗಾರ ಆ ದಾರದ ತುದಿಯ ವಂಕಿಯೊಳಗೆ ಬೆರಳುಗಳನ್ನು ತೂರಿಸಿ, ಈಟಿ ಬುಗರಿಯಂತೆ ಗಿರುಗಿರನೆ ತಿರುಗುತ್ತ ಧಾವಿಸುವಂತೆ ಅದನ್ನು ಎಸೆಯುತ್ತಿದ್ದ.
  • ಒಲಿಂಪಿಕ್ ಕ್ರೀಡೆಗಳ ಏಕೈಕ ನೆಗೆತದ ಸ್ಪರ್ಧೆಯೆಂದರೆ ಪೆಂಟಾಥ್ಲಾನಿನ ಉದ್ದನೆಗೆತ (ಲಾಂಗ್ಜಂಪ್). ಇದನ್ನು ಮಾಡುತ್ತಿದ್ದುದು ಹೇಗೆಂಬುದು ಸ್ಪಷ್ಟವಾಗಿ ಗೊತ್ತಿಲ್ಲ. ಸು. 2-11 ಪೌಂಡುಗಳವರೆಗೆ ತೂಗುವ ಕಲ್ಲು ಅಥವಾ ಕಂಚಿನ ಎರಡು ಡಂಬ್ಬೆಲ್ಗಳನ್ನು ಸ್ಪರ್ಧಿ ತನ್ನೆರಡು ಕೈಗಳಲ್ಲೂ ಹಿಡಿದುಕೊಳ್ಳುತ್ತಿದ್ದನೆಂಬುದು ನಮಗೆ ಗೊತ್ತು. ಡಂಬ್ಬೆಲ್ಗಳನ್ನು ಮುಂದಕ್ಕೂ ಹಿಂದಕ್ಕೂ ಜೋಕಾಲೆಯಾಡಿಸಿ, ಅನಂತರ ನೆಗೆಯುತ್ತಿದ್ದುದು ರೂಢಿ. ನೆಗೆಯುವ ಮುನ್ನ ಓಡುತ್ತಿದ್ದುದೂ ಉಂಟು. ಓಡದೆ ನೇರವಾಗಿ ನೆಗೆಯುತ್ತಿದ್ದುದೂ ಉಂಟು. ಸ್ಪರ್ಧಿಗಳು 16 ಮೀಗಳಿಗೂ ಹೆಚ್ಚು ದೂರ ನೆಗೆದರೆಂದು ವರದಿಗಳುಂಟು. ಆದರೆ ಇದು ಹೇಗೆ ಸಾಧ್ಯವಾಯಿತೆಂಬುದೇ ಬಿಡಿಸಲಾಗದ ಒಗಟು. ಬಹುಶಃ ಇದು ಕೇವಲ ಒಂದೇ ನೆಗೆತದ ದೂರವಾಗಿರಲಾರದು. ಐದು ನೆಗೆತಗಳ ಒಂದು ಸರಣಿ ಇದ್ದಿರಬೇಕು.
  • ಮುಷ್ಟಿಕಾಳಗ ಮತ್ತು ಕುಸ್ತಿಗಳ ಮಿಶ್ರಣವಾದ ಪ್ಯಾನ್ಕ್ರೇಷಿಯಂ ಎಂಬುದು ಈ ಎರಡೂ ಪಂದ್ಯಗಳ ಒರಟು ಅಂಶಗಳನ್ನೆಲ್ಲ ಒಳಗೊಂಡಿತ್ತು. ಗುದ್ದುವುದೂ ಒದೆಯುವುದೂ ನಿಷಿದ್ಧವಾಗಿರಲಿಲ್ಲ. ಆದರೆ ಎದುರಾಳಿಯ ಕಣ್ಣನ್ನು ಬೆರಳಿನಿಂದ ತಿವಿಯುವುದು ಕ್ರಮಬದ್ಧವಲ್ಲ. ಸ್ಪರ್ಧಿಗಳಲ್ಲೊಬ್ಬ ಸಂಪುರ್ಣ ಅಸಹಾಯಕನಾಗಿ ಶರಣಾಗುವ ಘಟ್ಟ ಮುಟ್ಟುವವರೆಗೂ ಪಂದ್ಯ ನಡೆಯುತ್ತಿತ್ತು. ಸ್ಪರ್ಧಿಯ ತೂಕದ ಬಗ್ಗೆ ಯಾವ ನಿಬಂಧನೆಯೂ ಇಲ್ಲದ್ದರಿಂದ ಹಗುರ ದೇಹಿಯಾದವ ಗೆಲ್ಲುವ ಸಂಭವ ಇರಲಿಲ್ಲ.
  • ಕಾರ್ಯಕ್ರಮ ಬಹುಮಾನ: ಸ್ಪರ್ಧೆಗಳನ್ನು ಇದೇ ಕ್ರಮದಲ್ಲಿ ನಡೆಸಬೇಕೆಂಬ ಪದ್ಧತಿಯೇನೂ ಇರಲಿಲ್ಲ. ಎಲ್ಲ ಸ್ಪರ್ಧೆಗಳನ್ನೂ ಯಾವಾಗಲೂ ನಡೆಸುತ್ತಿರಲಿಲ್ಲ. ಹೊಸಹೊಸ ಸ್ಪರ್ಧೆಗಳನ್ನು ಸೇರಿಸಲಾಗುತ್ತಿತ್ತು. ಗ್ರೀಕ್ ಒಲಿಂಪಿಕ್ ಕ್ರೀಡೆಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲಿ ಸಾಮಾನ್ಯವಾಗಿ ಕಾರ್ಯಕ್ರಮ ಹೀಗಿರುತ್ತಿತ್ತು: ಮೊದಲನೆಯ ದಿನದಂದು ಬಲಿಗಳ ಅರ್ಪಣೆ. ಒಲಿಂಪಿಕ್ ಪ್ರತಿಜ್ಞಾವಿಧಿ ಸ್ವೀಕಾರ, ನಾನಾ ಸ್ಪರ್ಧೆಗಳಿಗೆ ಬಂದಿರುವ ಅಭ್ಯರ್ಥಿಗಳ ವಿಂಗಡಣೆ. ಎರಡನೆಯ ದಿನ ಓಟ. ಕುಸ್ತಿ, ಮುಷ್ಟಿ ಕಾಳಗ, ಪ್ಯಾನ್ಕ್ರೇಷಿಯಂ. ಪೆಂಟಾಥ್ಲಾನ್ ಮತ್ತು ಕುದುರೆ ಪಂದ್ಯಗಳಲ್ಲಿ ಹುಡುಗರ ಸ್ಪರ್ಧೆ. ಮೂರನೆಯ ದಿನ ವಯಸ್ಕರಿಗೆ ಮೀಸಲು: ಓಟ ಕುಸ್ತಿ, ಮುಷ್ಟಿಕಾಳಗ, ಪ್ಯಾನ್ಕ್ರೇಷಿಯಂ ಮತ್ತು ಸ್ಪರ್ಧೆ. ನಾಲ್ಕನೆಯ ದಿನ ಪೆಂಟಾಥ್ಲಾನ್, ರಥ ಮತ್ತು ಕುದುರೆ ಜೂಜು, ಘೋಷಣೆ ಸ್ಪರ್ಧೆ. ಐದನೆಯ ದಿನ ಮೆರವಣಿಗೆ, ಬಲಿಗಳು, ವಿಜಯಿಗಳಿಗೆ ಔತಣ, ಆಲ್ಟಿಸಿನಲ್ಲಿನ ಕಾಡು ಆಲಿವ್ ಮರದ ಎಲೆಗಳಿಂದ ಕಿರೀಟಧಾರಣೆ, ಜನಸ್ತೋಮಕ್ಕೆ ವಿಜಯಿಗಳ ದರ್ಶನ.
  • ವಿಜಯಿಗಳನ್ನು ರಾಷ್ಟ್ರವೀರರೆಂದು ಗೌರವಿಸಿ ಅವರ ಪ್ರತಿಮೆಗಳನ್ನು ರಚಿಸುತ್ತಿದ್ದುದು ಮಾತ್ರವೇ ಅಲ್ಲ, ಅವರಿಗೆ ತೆರಿಗೆ ವಿನಾಯಿತಿಯಿತ್ತು. ಒಲಿಂಪಿಕ್ ಕ್ರೀಡೆಗಳನ್ನು ವೃತ್ತಿಬಾಧೆಯಿಂದ ದೂರ ಇರಿಸಲಾಗಿತ್ತು. ಪ್ರೇಕ್ಷಕರಿಗಿಂತ ಸ್ಪರ್ಧಿಗಳಿಗಾಗಿಯೇ ಇವನ್ನು ಏರ್ಪಡಿಸುತ್ತಿದ್ದರು.

ಆಧುನಿಕ ಒಲಿಂಪಿಕ್ ಕ್ರೀಡೆಗಳು

Baron Pierre de Coubertin:ಬ್ಯಾರನ್ ಪಿಯರೆ ಡಿ ಕೂಬರ್ಟಿನ್ 1894 ರಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು (ಐಒಸಿ) ಸ್ಥಾಪಿಸಿದರು, ಇದು 1896 ರಲ್ಲಿ ಅಥೆನ್ಸ್‌ನಲ್ಲಿ ನಡೆದ ಮೊದಲ ಆಧುನಿಕ ಕ್ರೀಡಾಕೂಟಕ್ಕೆ ಕಾರಣವಾಯಿತು.
Evangelos Zappas- ಎವೇಂಜಲಿಸ ಜಪ್ಪಾಸ್;ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು (ಐಒಸಿ) ಸ್ಥಾಪಿಸಿದವರಲ್ಲಿ ಒಬ್ಬರು
  • ಪುರಾತನ ಒಲಿಂಪಿಕ್ ಕ್ರೀಡೆಗಳನ್ನು ಪುನರಾರಂಭಿಸಲು ಸಾಕಷ್ಟು ಪ್ರಯತ್ನಗಳು ಹಿಂದೆ ನಡೆದಿದ್ದವಾದರೂ ಆ ಕನಸು ಸಾಕಾರಗೊಂಡಿದ್ದು ಫ್ರಾನ್ಸಿನ ಬೇರನ್ ಪಿಯರಿ ಡಿ ಕೊಬರ್ತಿ ಅವರಿಂದ. 1889ರಲ್ಲಿ ಪ್ಯಾರಿಸ್ನಲ್ಲಿ ನಡೆದ ವಸ್ತು ಪ್ರದರ್ಶನವೊಂದರಲ್ಲಿ ಪುರಾತನ ಒಲಿಂಪಿಕ್ ಕ್ರೀಡೆಗಳ ರೂಪಕಗಳನ್ನು ನೋಡಿದ ಆತ 1892ರಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡಾ ಸಮ್ಮೇಳನದಲ್ಲಿ ಒಲಿಂಪಿಕ್ ಕ್ರೀಡೆಗಳ ಪುನರುತ್ಥಾನದ ಸೂಚನೆ ಮಂಡಿಸಿದ. ಅದು ತಿರಸ್ಕೃತವಾಯಿತು. ಆದರೆ ನಿರಾಶನಾಗದ ಆತ, ಎರಡು ವರ್ಷಗಳ ನಂತರ, ತಾನೇ ಫ್ರಾನ್ಸಿನ ಸಾರಬಾನಿನಲ್ಲಿ ಕರೆದ ಅಂತಾರಾಷ್ಟ್ರೀಯ ಕ್ರೀಡಾ ಅಧಿವೇಶನದಲ್ಲಿ ಮತ್ತೆ ತನ್ನ ಯೋಚನೆ ಮಂಡಿಸಿದ. ಆತನ ವಿಚಾರಕ್ಕೆ ಒಪ್ಪಿಗೆ ದೊರೆಯಿತು.
  • 1890 ರಲ್ಲಿ, ವೆನ್ಲಾಕ್ ಒಲಿಂಪಿಯನ್ ಸೊಸೈಟಿಯ ಒಲಿಂಪಿಯನ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ನಂತರ, ಬ್ಯಾರನ್ ಪಿಯರೆ ಡಿ ಕೂಬರ್ಟಿನ್ ಅವರಿಗೆ ಸ್ಫೂರ್ತಿ ಬಂದಿತು. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಅಂತರರಾಷ್ಟ್ರೀಯ ಮಟ್ಟದಲ್ಲಿ ಪುನರಾವರ್ತಿಸುವ ಒಲಿಂಪಿಕ್ ಕ್ರೀಡಾಕೂಟವನ್ನು ಸ್ಥಾಪಿಸುವ ಉದ್ದೇಶದಿಂದ ಕೂಬರ್ಟಿನ್ ಬ್ರೂಕ್ಸ್ ಮತ್ತು ಜಪ್ಪಾಸ್ ಅವರ ಆಲೋಚನೆಗಳ ಮತ್ತು ಕಾರ್ಯದ ಮೇಲೆ ಯೋಜಿಲಾಗಿದೆ. ಹೊಸದಾಗಿ ರಚಿಸಲಾದ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮೊದಲ ಒಲಿಂಪಿಕ್ ಕಾಂಗ್ರೆಸ್ ಸಂದರ್ಭದಲ್ಲಿ ಅವರು ಈ ವಿಚಾರಗಳನ್ನು ಮಂಡಿಸಿದರು.[2]
  • ಕೊಬರ್ತಿ ಮೊದಲ ಆಧುನಿಕ ಒಲಿಂಪಿಕ್ ಕ್ರೀಡೆಗಳನ್ನು 1900ರಲ್ಲಿ, ಪ್ಯಾರಿಸ್ನಲ್ಲೇ ನಡೆಸಬೇಕೆಂದು ಯೋಚಿಸಿದ್ದ. ಆದರೆ, ಗ್ರೀಕ್ ಜನರ ಒತ್ತಾಸೆಯ ಮೇರೆಗೆ 1896ರಲ್ಲಿ, ಗ್ರೀಸ್ನಲ್ಲಿ ಮೊದಲ ಒಲಿಂಪಿಕ್ ಕ್ರೀಡೆಗಳು ನಡೆದವು. ಒಲಿಂಪಿಯ ಗ್ರಾಮ ತೀರ ಹಿಂದುಳಿದ ಪ್ರದೇಶವಾಗಿದ್ದರಿಂದ, ಕ್ರೀಡೆಗಳನ್ನು ಅಥೆನ್ಸ್‌ನಲ್ಲಿ ನಡೆಸಲಾಯಿತು. 14 ರಾಷ್ಟ್ರಗಳ 241 ಮಂದಿ ಕ್ರೀಡಾಪಟುಗಳು ಭಾಗವಹಿಸಿದ್ದರು. ಮಹಿಳಾ ಕ್ರೀಡಾಪಟುಗಳು ಇರಲಿಲ್ಲ.
  • ಹೀಗೆ ಆರಂಭವಾದ ಆಧುನಿಕ ಒಲಿಂಪಿಕ್ ಕ್ರೀಡಾ ಆಂದೋಲನ ಇಂದು ವಿಶ್ವದ ಅತ್ಯುನ್ನತ ಕ್ರೀಡಾಕೂಟವಾಗಿ ಬೆಳೆದಿದೆ. ಎರಡು ಮಹಾಯುದ್ಧಗಳಿಂದಾಗಿ 1916, 1940, 1944ರಲ್ಲಿ ಮಾತ್ರ ಈ ಕ್ರೀಡೆಗಳು ನಡೆಯಲಿಲ್ಲ.
  • *(ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಆಶ್ರಯದಲ್ಲಿ ನಡೆದ ಮೊದಲ ಕ್ರೀಡಾಕೂಟವನ್ನು 1896 ರಲ್ಲಿ ಅಥೆನ್ಸ್‌ನ ಪನಾಥೆನಾಯಿಕ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕ್ರೀಡಾಕೂಟವು 14 ರಾಷ್ಟ್ರಗಳನ್ನು ಮತ್ತು 43 ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ 241 ಕ್ರೀಡಾಪಟುಗಳನ್ನು ಒಟ್ಟುಗೂಡಿಸಿತು.[3])
ಪನಾಥಿನಾಯ್ಕೊ ಕ್ರೀಡಾಂಗಣದಲ್ಲಿ - ಉದ್ಘಾಟನಾ ಸಮಾರಂಭ
  • ಕೊಬರ್ತಿ 1894ರಲ್ಲಿ ಒಲಿಂಪಿಕ್ ಸಮಿತಿಯ ಮೊದಲ ಸಮಾಚಾರ ಪತ್ರ ಹೊರಡಿಸಿದ. ಇಂದಿಗೂ ಅದು ಪ್ರಕಟವಾಗುತ್ತಿದೆ. ಕೊಬರ್ತಿಯ ಮಿತ್ರ ಡೈಡನ್ ಎಂಬಾತ ರೂಪಿಸಿದ ಒಲಿಂಪಿಕ್ ಧ್ಯೇಯವಾಕ್ಯ (The Olympic motto, Citius, Altius, Fortius, a Latin expression meaning "Faster, Higher, Stronger" was proposed by Pierre de Coubertin in 1894 and has been official since 1924.) [4]ವನ್ನು ಈ ಸಮಾಚಾರ ಪತ್ರದಲ್ಲಿ ಪ್ರಕಟಿಸಲಾಗಿತ್ತು. `ವೇಗಯುತ, ಶಕ್ತಿಯುತ, ಉನ್ನತ’ ಎಂಬುದೇ ಇದರ ಅರ್ಥ. ಅದರಂತೆಯೇ ಒಲಿಂಪಿಕ್ ಕ್ರೀಡೆಗಳ ಗುಣಮಟ್ಟ ಏರುತ್ತಲೇ, ಹಲವಾರು ದಾಖಲೆಗಳು ಹೊರಹೊಮ್ಮಿವೆ. ಒಲಿಂಪಿಕ್ ಚಿನ್ನದ ಪದಕ. ಯಾವುದೇ ಕ್ರೀಡಾಪಟುವಿಗೂ ಜೀವನದ ಪರಮೋಚ್ಚ ಗುರಿ. ಇದು ರಾಷ್ಟ್ರದ ಪ್ರತಿಷ್ಠೆಯೂ ಹೌದು.ಒಲಿಂಪಿಕ್ ಕ್ರೀಡಾ ಧ್ವಜ ಶುಭ್ರ ಶ್ವೇತ ವರ್ಣದ್ದು. ಅದರಲ್ಲಿ ನೀಲಿ, ಹಳದಿ, ಕಪ್ಪು, ಹಸಿರು ಮತ್ತು ಕೆಂಪು ಬಣ್ಣದ ಐದು ವರ್ತುಳಗಳ ಸರಪಳಿ. ಇವು ಏಷ್ಯ, ಆಫ್ರಿಕ, ಆಸ್ಟ್ರೇಲಿಯ, ಅಮೆರಿಕ ಮತ್ತು ಯುರೋಪ್ ಖಂಡಗಳ ಪ್ರತೀಕಗಳು.
  • 1920ರಲ್ಲಿ ಆಂಟ್ವರ್ಪಿನಲ್ಲಿ ಒಳಾಂಗಣದ ಸ್ಕೇಟಿಂಗ್ ರಿಂಕ್ ಒಂದರಲ್ಲಿ ಕೆಲವು ಚಳಿಗಾಲದ ಸ್ಪರ್ಧೆಗಳನ್ನೇರ್ಪಡಿಸಲಾಯಿತು. 1924ರಿಂದ ಮೊದಲ್ಗೊಂಡು ಪ್ರತಿಯೊಂದು ಚತುರ್ವಾರ್ಷಿಕ ಕ್ರೀಡಾಧಿವೇಶನಕ್ಕೂ ಹಿಂದಿನ ಫೆಬ್ರುವರಿಯಲ್ಲಿ ಯಾವುದಾದರೊಂದು ಚಳಿದಾಣದಲ್ಲಿ ಸ್ಕೇಟಿಂಗ್, ಸ್ಕೀಯಿಂಗ್, ಐಸ್ ಹಾಕಿ, ಬಾಬ್ ಸ್ಲೈಡಿಂಗ್ ಮುಂತಾದ ಪಂದ್ಯಗಳನ್ನೇರ್ಪಡಿಸುವ ಕ್ರಮ ಜಾರಿಗೆ ಬಂತು. ಒಲಿಂಪಿಕ್ ಚಳಿಗಾಲದ ಕ್ರೀಡೆಗಳು ನಡೆದ ಸ್ಥಳಗಳು ಇವು; ಸ್ವಿಟ್ಸರ್ಲೆಂಡಿನ ಸೇಂಟ್ ಮಾರಿಟ್ಸ್‌ (1928), ನ್ಯೂಯಾರ್ಕಿನ ಲೇಕ್ ಪ್ಲೇಸಿಡ್ (1932), ಜರ್ಮನಿಯ ಗಾರ್ಮಿಷ್-ಪಾರ್ಟೆನ್ ಕರ್ಚೆನ್ (1936), ಮತ್ತೆ ಸೇಂಟ್ ಮಾರಿಟ್ಸ್‌ (1948), ನಾರ್ವೆಯ ಆಸ್ಲೊ (1952), ಇಟಲಿಯ ಕಾರ್ಟಿನ ಡಿ ಅಂಪೆಟ್ಜೊó (1956), ಕ್ಯಾಲಿಪೋರ್ನಿಯದ ಸ್ಕ್ವಾವ್ಯಾಲಿ (1960) ಆಸ್ಟ್ರಿಯದ ಇನ್ಸ್‌ಬ್ರುಕ್ (1964) ಮತ್ತು ಫ್ರಾನ್ಸಿನ ಗ್ರಿನೋಬಲ್ (1968).
  • ಅಮೆರಿಕದ ಹಿರಿಮೆ: ಆಧುನಿಕ ಒಲಿಂಪಿಕ್ ಕ್ರೀಡೆಗಳಲ್ಲಿ ಅಮೆರಿಕದ್ದು ಅತಿ ದೊಡ್ಡ ಸಾಧನೆ. ಮೊಟ್ಟಮೊದಲ ಒಲಿಂಪಿಕ್ಸ್‌ನಲ್ಲಿ ಅಂದರೆ, 1896ರಲ್ಲಿ 11 ಚಿನ್ನದ ಪದಕಗಳೊಡನೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದ ಅಮೆರಿಕ, 1906 ಮತ್ತು 1908ರಲ್ಲಿ ಎರಡನೇ ಸ್ಥಾನಕ್ಕೆ ಇಳಿದಿತ್ತಾದರೂ, ಅದಕ್ಕೆ ಪುರ್ಣ ಪ್ರಮಾಣದ ಪೈಪೋಟಿ ಎದುರಾಗಿದ್ದು 1936ರಲ್ಲಿ. ಬರ್ಲಿನ್ನಲ್ಲಿ ನಡೆದ ಆ ಒಲಿಂಪಿಕ್ ಕ್ರೀಡೆಗಳಲ್ಲಿ ಆತಿಥೇಯ ಜರ್ಮನಿ 33 ಚಿನ್ನದ ಪದಕಗಳೊಡನೆ ಮೊದಲ ಸ್ಥಾನ ಗಳಿಸಿದರೆ, ಅಮೆರಿಕ 24 ಚಿನ್ನದ ಪದಕಗಳೊಡನೆ ಎರಡನೆಯ ಸ್ಥಾನ ಗಳಿಸಿತ್ತು.
  • 1952ರಲ್ಲಿ ಮೊದಲಬಾರಿಗೆ ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸಿದ ಸೋವಿಯತ್ ಒಕ್ಕೂಟ, 22 ಚಿನ್ನದ ಪದಕಗಳನ್ನು ಗೆಲ್ಲುವುದರೊಂದಿಗೆ ಅಮೆರಿಕಕ್ಕೆ(40 ಚಿನ್ನ) ತೀವ್ರ ಪೈಪೋಟಿ ನೀಡಿತು. 1956ರಲ್ಲಿ ಅಗ್ರಸ್ಥಾನಕ್ಕೇರಿದ ಸೋವಿಯತ್ ಒಕ್ಕೂಟ (37 ಚಿನ್ನ), 1960ರಲ್ಲೂ (43 ಚಿನ್ನ) ಮೊದಲ ಸ್ಥಾನ ಕಾಯ್ದುಕೊಂಡಿತು.
  • 1964ರಲ್ಲಿ ಮರಳಿ ಅಗ್ರಸ್ಥಾನ ಪಡೆದ ಅಮೆರಿಕ (36 ಚಿನ್ನ) 1968ರಲ್ಲೂ ಮೊದಲ ಸ್ಥಾನ (45 ಚಿನ್ನ) ಕಾಯ್ದುಕೊಂಡಿತು. ಆದರೆ 1972, 1976 ಮತ್ತು 1980ರ ಒಲಿಂಪಿಕ್ ಕ್ರೀಡೆಗಳಲ್ಲಿ ಸೋವಿಯತ್ ಒಕ್ಕೂಟ ತನ್ನ ಹಿರಿಮೆ ಮೆರೆಯಿತು. 1980ರಲ್ಲಿ ಮಾಸ್ಕೊದಲ್ಲಿ ನಡೆದ ಕ್ರೀಡೆಗಳನ್ನು ಅಮೆರಿಕ ಬಹಿಷ್ಕರಿಸಿದರೆ, 1984ರ ಲಾಸ್ ಏಂಜಲೀಸ್ ಕ್ರೀಡೆಗಳನ್ನು ಸೋವಿಯತ್ ಒಕ್ಕೂಟ ಬಹಿಷ್ಕರಿಸಿತು. 1988ರಲ್ಲಿ ಸೋಲ್ ಕ್ರೀಡೆಗಳಲ್ಲಿ ಮತ್ತೆ ಸೋವಿಯತ್-ಅಮೆರಿಕ ಎದುರಾಳಿಗಳಾದವು. ಸೋವಿಯತ್ ಜೊತೆ ಪುರ್ವ ಜರ್ಮನಿಯ ಕ್ರೀಡಾಪಟುಗಳೂ ಉತ್ತಮ ಸಾಧನೆ ತೋರಿ, ಅಮೆರಿಕವನ್ನು ಮೂರನೇ ಸ್ಥಾನಕ್ಕೆ ದೂಡಿದವು. 1992ರ ಬಾರ್ಸಿಲೊನಾ ಕ್ರೀಡೆಗಳಲ್ಲೂ ಸೋವಿಯತ್ಗೆ ಮೊದಲ ಸ್ಥಾನ. ಅಮೆರಿಕ ಎರಡನೇ ಸ್ಥಾನ ಗಳಿಸಿತು.
  • ಆದರೆ, 1996ರಲ್ಲಿ ಮತ್ತೆ ಅಗ್ರಪಟ್ಟಕ್ಕೇರಿದ ಅಮೆರಿಕ, 2000 ಮತ್ತು 2004ರಲ್ಲೂ ಮೊದಲ ಸ್ಥಾನ ಕಾಯ್ದುಕೊಂಡಿತು. ಸೋವಿಯತ್ ಒಕ್ಕೂಟ ಛಿದ್ರಗೊಂಡಿದ್ದೇ ಇದಕ್ಕೆ ಕಾರಣವಾಯಿತು. ರಷ್ಯದ ಸ್ಪರ್ಧಿಗಳು ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
  • 1884ರಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಚೀನ, ಸಿಡ್ನಿ (2000) ಒಲಿಂಪಿಕ್ಸ್‌ನಲ್ಲಿ 28 ಚಿನ್ನದ ಪದಕಗಳೊಡನೆ ಮೂರನೆಯ ಹಾಗೂ ಅಥೆನ್ಸ್‌ (2004) ಒಲಿಂಪಿಕ್ಸ್‌ನಲ್ಲಿ 32 ಚಿನ್ನದ ಪದಕಗಳೊಡನೆ ಎರಡನೆಯ ಸ್ಥಾನಕ್ಕೇರಿತು. 2008ರ ಒಲಿಂಪಿಕ್ ಕ್ರೀಡೆಗಳನ್ನು ನಡೆಸಲಿರುವ ಚೀನ, ಪದಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ ಆಶ್ಚರ್ಯಪಡಬೇಕಾಗಿಲ್ಲ.
  • ಅಥೆನ್ಸ್‌ (2004) ಒಲಿಂಪಿಕ್ಸ್‌ ಪದಕಪಟ್ಟಿಯಲ್ಲಿ ಮೊದಲ ಸ್ಥಾನದ ವಿವರಗಳು ಈ ರೀತಿ ಇವೆ.
ರಾಷ್ಟ್ರಚಿನ್ನಬೆಳ್ಳಿಕಂಚು
ಅಮೆರಿಕ353929
ಚೀನಾ321714
ರಷ್ಯಾ272738

ನಿರ್ವಹಣೆ

  • ಒಲಿಂಪಿಕ್ ಚಳವಳಿಯನ್ನು ನಿರ್ದೇಶಿಸುವ ಮತ್ತು ಕ್ರೀಡೆಗಳನ್ನು ನಿಯಂತ್ರಿಸುವ ಹೊಣೆ ಇರುವುದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯಲ್ಲಿ (ಐ.ಓ.ಸಿ.). ಇದರ ಮುಖ್ಯ ಕಚೇರಿ ಸ್ವಿಟ್ಸರ್ಲೆಂಡಿನ ಲಾಸೇನಿನ ಮಾನ್ರೆಪಾಸ್ನಲ್ಲಿದೆ. ಸಮಿತಿ ಕೂಲಂಕಷ ವಿಚಾರಣೆ ನಡೆಸಿ ಆಜೀವ ಸದಸ್ಯರನ್ನು ಆಯ್ಕೆ ಮಾಡುತ್ತದೆ. ಈ ಸಮಿತಿಯ ಒಂದು ವೈಶಿಷ್ಟ್ಯವೇನೆಂದರೆ, ಇದರ ಸದಸ್ಯರು ತಂತಮ್ಮ ರಾಷ್ಟ್ರಗಳನ್ನು ಪ್ರತಿನಿಧಿಸುವುದಿಲ್ಲ. ಪ್ರತಿಯಾಗಿ ಅವರು ಈ ಸಮಿತಿಯಿಂದ ತಂತಮ್ಮ ರಾಷ್ಟ್ರಗಳಿಗೆ ನಿಯೋಗಿಗಳಾಗಿರುತ್ತಾರೆ. ಯಾವ ರಾಷ್ಟ್ರದಿಂದಲೂ ಮೂರಕ್ಕಿಂತ ಹೆಚ್ಚು ಸದಸ್ಯರಿರತಕ್ಕದ್ದಲ್ಲ. ಸದಸ್ಯರ ಮತ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂಥ ಯಾವ ಸೂಚನೆಯನ್ನೂ ತಮ್ಮ ರಾಷ್ಟ್ರಗಳಿಂದಾಗಲಿ ಬೇರೆ ಯಾವ ಸಂಸ್ಥೆಯಿಂದಾಗಲಿ ಪುರಸ್ಕರಿಸಬಾರದು. ಈ ಸಮಿತಿಯ ಪ್ರಥಮ ಅಧ್ಯಕ್ಷ ಗ್ರೀಸ್ನ ಡಿಮಿಟ್ರಿಯಸ್ ವಿಕೆಲಾಸ್(1896-2000). ಇವರ ನಂತರ ಬ್ಯಾರೆನ್ ಪಿಯರ್ ಡಿ ಕೂಬರ್ತಿ (1925ರ ವರೆಗೆ). ಅನಂತರ ಬೆಲ್ಜಿಯಂನ ಹೆನ್ರಿ ಡಿ ಬೇಲೆಟ್ ಲ್ಯಾಟರ್ ಅಧ್ಯಕ್ಷನಾದ. 1942ರಲ್ಲಿ ಈತ ತೀರಿಕೊಂಡಾಗ ಈ ಸ್ಥಾನ ಸ್ವೀಡನಿನ ಜೆ. ಸಿಗ್ಫ್ರಿಡ್ ಎಡ್ಸ್ಟ್ರಾಂಗ್ಗೆ ಬಂತು. 1952ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಆವರಿ ಬ್ರಂಡೇಜ್ ಆಯ್ಕೆಯಾದ. ಇವರ ನಂತರ ಲಾರ್ಡ್ ಕಿಲಾನಿನ್, ಆ್ಯಂಟನಿ ಸಮರಾಂಜ್ ಅಧ್ಯಕ್ಷರಾದರು. ಈಗ ಜಾಕ್ಸ್‌ ರೋಗೆ ಅಧ್ಯಕ್ಷರು.
  • ಒಲಿಂಪಿಕ್ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಆ ಕ್ರೀಡೆಯನ್ನೇ ವೃತ್ತಿಯಾಗಿ ಮಾಡಿಕೊಂಡಿರಬಾರದು; ಅದು ಅವರ ಹವ್ಯಾಸವಾಗಿರಬೇಕು-ಎಂಬುದು 1988ರವರೆಗೆ ನಿಯಮವಾಗಿತ್ತು. ಅನಂತರ ವೃತ್ತಿಪರ ಕ್ರೀಡಾಪಟುಗಳಿಗೂ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ನೀಡಲಾಯಿತು.
  • 1932ರಲ್ಲಿ ಲಾಸ್ ಏಂಜೆಲ್ಸ್‌ನಲ್ಲಿ ನಡೆದ ಒಲಿಂಪಿಕ್ ಕ್ರೀಡೆಗಳಿಂದೀಚೆಗೆ ಬೆಳೆದುಕೊಂಡು ಬಂದಿರುವ ಒಂದು ಪದ್ಧತಿಯೆಂದರೆ ಈ ಕ್ರೀಡೆಗಳಿಗಾಗಿಯೇ ನಿರ್ಮಿಸಲಾಗುವ ಒಲಿಂಪಿಕ್ ಗ್ರಾಮ. ನಾನಾ ರಾಷ್ಟ್ರಗಳಿಂದ ಬಂದ ಎಲ್ಲ ಸ್ಪರ್ಧಿಗಳೂ ಒಂದೇ ಕ್ಷೇತ್ರದಲ್ಲಿ ವಾಸಿಸುವುದು ಇದರಿಂದ ಸಾಧ್ಯ. ಪ್ರಾಚೀನ ಗ್ರೀಸಿನಲ್ಲಿ ಕ್ರೀಡೆಗಳು ನಡೆಯುತ್ತಿದ್ದ ಸ್ಥಳವಾದ ಒಲಿಂಪಿಯದಿಂದ ತಂದ ಪಂಜಿನಿಂದ ಕ್ರೀಡಾಕೂಟದ ಸ್ಥಳದಲ್ಲಿ ಪವಿತ್ರ ಒಲಿಂಪಿಕ್ ಜ್ಯೋತಿಯನ್ನು ಹೊತ್ತಿಸಿ, ಕ್ರೀಡಾಧಿವೇಶನದ ಕಾಲದಲ್ಲಿ ಅದನ್ನು ನಂದಾದೀಪದಂತೆ ಉರಿಸುವುದು 1936ರ ಬರ್ಲಿನ್ ಕೂಟದಲ್ಲಿ ಆರಂಭವಾದ ಸಂಪ್ರದಾಯ.
  • ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸುವವರನ್ನು ಆಯ್ಕೆಮಾಡುವ ಹೊಣೆ ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳಿಗೆ ಸೇರಿದ್ದು. ಒಲಿಂಪಿಕ್ ಸ್ಪರ್ಧೆಗಳಲ್ಲಿ ಸೇರಿಸಲಾಗಿರುವ ಎಲ್ಲ ಕ್ರೀಡೆಗಳ ರಾಷ್ಟ್ರೀಯ ಸಂಸ್ಥೆಗಳಿಗೂ ರಾಷ್ಟ್ರೀಯ ಒಲಿಂಪಿಕ್ ಸಮಿತಿಯಲ್ಲಿ ಪ್ರಾತಿನಿಧ್ಯ ಇರತಕ್ಕದ್ದು. ಈ ಸಮಿತಿಗಳು ಸ್ವತಂತ್ರ್ಯವಾಗಿ ಸ್ವಯಂ ಆಡಳಿತಾಧಿಕಾರ ಹೊಂದಿರಬೇಕು. ರಾಜಕೀಯ ವಾಣಿಜ್ಯಿಕ ಅಥವಾ ಮತೀಯ ಒಲವುಗಳಿಗೆ ಮಣಿಯಬಾರದು. ಪ್ರತಿಯೊಂದು ಕ್ರೀಡೆಗೂ ರಾಷ್ಟ್ರೀಯ ಸಂಘಗಳ ಪ್ರತಿನಿಧಿಗಳನ್ನೊಳಗೊಂಡ ಅಂತಾರಾಷ್ಟ್ರೀಯ ಮಹಾಸಂಘವೊಂದಿರುತ್ತದೆ. ಈ ಮಹಾಸಂಘಗಳ ನಿಯಂತ್ರಣಕ್ಕೆ ಅನುಸಾರವಾಗಿ ಆಯಾ ಕ್ರೀಡೆಗಳ ಸ್ಪರ್ಧೆಗಳನ್ನೇರ್ಪಡಿಸಲಾಗುತ್ತದೆ. ಅವಕ್ಕೆ ಸಂಬಂಧಪಟ್ಟ ನಿಯಮಗಳನ್ನು ರಚಿಸುವುದೂ ಮಹಾಸಂಘಗಳ ಹೊಣೆ.

ಉತ್ಸವ ವರ್ಣನೆ

  • ಒಲಿಂಪಿಕ್ ಕ್ರೀಡೆಗಳ ಪ್ರಾರಂಭೋತ್ಸವವೊಂದು ವೈಭವಯುತ ಸಮಾರಂಭ. ಕ್ರೀಡೆಗಳು ನಡೆಯುತ್ತಿರುವ ದೇಶದ ಅಧಿಪತಿಯ ಆಗಮನದೊಂದಿಗೆ ಉತ್ಸವ ಆರಂಭ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಆತನನ್ನು ಸ್ವಾಗತಿಸಿ, ವಿಶೇಷವಾಗಿ ನಿರ್ಮಿಸಿದ ವೇದಿಕೆಯ ಮೇಲಕ್ಕೆ ಕರೆದೊಯ್ಯುತ್ತಾನೆ. ಅಲ್ಲಿಯ ರಾಷ್ಟ್ರಗೀತೆಯಾದೊಡನೆಯೇ ನಾನಾ ರಾಷ್ಟ್ರಗಳ ಸ್ಪರ್ಧಿಗಳ ಪ್ರದರ್ಶನ, ಉತ್ಸವ, ನಡಿಗೆ; ಅವರವರ ರಾಷ್ಟ್ರಗಳ ಸಮವಸ್ತ್ರದುಡಿಗೆ ತೊಡಿಗೆ; ಪ್ರತಿರಾಷ್ಟ್ರದ ತಂಡದ ಮುಂದುಗಡೆ ಆ ರಾಷ್ಟ್ರದ ಧ್ವಜ, ದೊಡ್ಡ ಫಲಕವೊಂದರ ಮೇಲೆ ಆ ರಾಷ್ಟ್ರದ ಹೆಸರು, ಮೊಟ್ಟಮೊದಲು ಗ್ರೀಸ್ ತಂಡ, ಅನಂತರ ಅಕ್ಷರಾನುಕ್ರಮಣಿಕೆಯಲ್ಲಿ ಇತರ ರಾಷ್ಟ್ರಗಳ ತಂಡಗಳ ಪ್ರವೇಶ. ಪ್ರತಿ ತಂಡವೂ ಕ್ರೀಡಾಂಗಣದ ಮಾರ್ಗವನ್ನೊಮ್ಮೆ ಸುತ್ತಿದ ಮೇಲೆ ನಡುಗಡೆಯಲ್ಲಿ ನಿಲ್ಲುತ್ತದೆ. ಅದರ ಮುಂದೆ ತನ್ನ ರಾಷ್ಟ್ರಧ್ವಜ ಮತ್ತು ಹೆಸರು ಬರೆದ ಫಲಕ. ಅನಂತರ ಸಮಿತಿಯ ಅಧ್ಯಕ್ಷನಿಂದ ಸಂಗ್ರಹವಾದ ಸ್ವಾಗತ ಭಾಷಣ. ಕ್ರೀಡೆಗಳನ್ನು ಉದ್ಘಾಟಿಸಬೇಕೆಂದು ರಾಷ್ಟ್ರಮುಖ್ಯನಿಗೆ ಪ್ರಾರ್ಥನೆ. ತತ್ಕ್ಷಣವೇ ತುತ್ತೂರಿಗಳ ನಿನಾದ, ಒಲಿಂಪಿಕ್ ಧ್ವಜಾರೋಹಣ, ಬಿಡುಗಡೆಗೊಂಡ ಪಾರಿವಾಳಗಳ ಸ್ವಚ್ಛಂದ ಹಾರಾಟ. ಕುಶಾಲು ತೋಪಿನ ಸಲಾಮೀ ಅಬ್ಬರ. ಆ ಕ್ಷಣಕ್ಕೆ ಸರಿಯಾಗಿ ಕ್ರೀಡಾಂಗಣದೊಳಕ್ಕೆ ಒಲಿಂಪಿಕ್ ಜ್ಯೋತಿಯ ಆಗಮನ. ಪವಿತ್ರವಾದ ನಂದಾಜ್ಯೋತಿಪುಂಜದ ಬೆಳಗುವಿಕೆ, ಸ್ವಸ್ತಿವಾಚನ. ಒಲಿಂಪಿಕ್ ಗೀತಗಾಯನ.
  • ಅದು ಮುಗಿಯುವ ವೇಳೆಗೆ ಸರಿಯಾಗಿ ಆತಿಥೇಯ ರಾಷ್ಟ್ರದ ಸ್ಪರ್ಧಿಗಳಲ್ಲೊಬ್ಬ ವೇದಿಕೆಯನ್ನೇರಿ ನಿಂತು, ‘ಈ ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸುವ ನಾವು ನಿಜವಾದ ಕ್ರೀಡಾಮನೋಭಾವದಿಂದ ವರ್ತಿಸುತ್ತೇವೆ. ಕ್ರೀಡೆಯ ಕೀರ್ತಿ ಬೆಳಗುತ್ತೇವೆ, ನಮ್ಮ ತಂಡಗಳ ಗೌರವ ರಕ್ಷಿಸುತ್ತೇವೆ, ಒಲಿಂಪಿಕ್ ಕ್ರೀಡೆಗಳಿಗೆ ಸಂಬಂಧಿಸಿದ ಎಲ್ಲ ನಿಯಮಗಳನ್ನೂ ಗೌರವಿಸಿ ಅದಕ್ಕೆ ಬದ್ಧರಾಗಿರುತ್ತೇವೆ-ಎಂದು ಎಲ್ಲ ಸ್ಪರ್ಧಿಗಳ ಪರವಾಗಿ ನಾನು ಪ್ರತಿಜ್ಞೆ ಮಾಡುತ್ತೇನೆ’ ಎಂಬುದಾಗಿ ಅಲ್ಲಿ ಸೇರಿರುವ ಎಲ್ಲ ಸ್ಪರ್ಧಿಗಳ ಪರವಾಗಿ ಪ್ರತಿಜ್ಞಾವಚನವನ್ನೋದುತ್ತಾನೆ. ಆಗ ರಾಷ್ಟ್ರಗೀತೆಯ ಮೇಳಗಾನವಾಗುತ್ತದೆ. ಸ್ಪರ್ಧಿಗಳು ಕ್ರೀಡಾಂಗಣದಿಂದ ನಿರ್ಗಮಿಸುತ್ತಾರೆ, ಆಗ ಸ್ಪರ್ಧೆಯ ಆರಂಭ. ಮುಕ್ತಾಯ ಸಮಾರಂಭ ಅಷ್ಟೇ ಆಕರ್ಷಕ. “ನಾಲ್ಕು ವರ್ಷಗಳ ಅನಂತರ ಮುಂದಿನ ಒಲಿಂಪಿಕ್ಸ್‌ನಲ್ಲಿ ಮತ್ತೆ ಸೇರೋಣ” ಎಂದು ಐಒಸಿ ಅಧ್ಯಕ್ಷರು ಕ್ರೀಡಾಪಟುಗಳಿಗೆ ಕರೆಕೊಡುತ್ತಾನೆ. `ಒಲಿಂಪಿಕ್ ಜ್ಯೋತಿ ಮುಂದೆ ಸಾಗಲು ಹಾಗೂ ಮಾನವಕುಲದ ಒಳಿತಿಗಾಗಿ ನಿಮ್ಮ ಮನೋಲ್ಲಾಸ ಸರ್ವತ್ರ ಪಸರಿಸಲಿ’ ಎನ್ನುವ ಸಂದೇಶ ನೀಡುತ್ತಾನೆ. ತುತ್ತೂರಿ ಮೊಳಗುತ್ತದೆ. ಒಲಿಂಪಿಕ್ ಜ್ಯೋತಿಯನ್ನು ನಂದಿಸುತ್ತಾರೆ. ಒಲಿಂಪಿಕ್ ಧ್ವಜ ಕೆಳಗಿಳಿಯುತ್ತದೆ. ಐದು ತೋಪುಗಳ ಸಲಾಮ್ ಅನಂತರ ಒಲಿಂಪಿಕ್ ಗೀತೆ ಹಾಡಲಾಗುತ್ತದೆ.

ಸ್ಪರ್ಧೆಗಳು

  • ಅಂಗಸಾಧನೆ ಸ್ಪರ್ಧೆ; ಮಾರ್ಗ ಮತ್ತು ಕ್ಷೇತ್ರ (ಟ್ರ್ಯಾಕ್ ಅಂಡ್ ಫೀಲ್ಡ್‌), ಗರಡಿ ವಿದ್ಯೆ (ಜಿಮ್ನಾಸ್ಟಿಕ್ಸ್‌), ಮುಷ್ಟಿಕಾಳಗ, ಕತ್ತಿವರಸೆ, ಗುಂಡುಗಾರಿಕೆ (ಷೂಟಿಂಗ್), ಕುಸ್ತಿ, ಹುಟ್ಟುಹಾಕುವ ಸ್ಪರ್ಧೆ, ಈಜು, ಕುದುರೆ ಸವಾರಿ, ಆಧುನಿಕ ಪೆಂಟಾಥ್ಲಾನ್, ಸೈಕ್ಲಿಂಗ್, ಭಾರ ಎತ್ತುವಿಕೆ, ನೌಕಾಪಂದ್ಯ (ಯಾಚಿಂಗ್) ಇವು ಕಡ್ಡಾಯ ಸ್ಪರ್ಧೆಗಳು, ಕಾಲ್ಚೆಂಡಾಟ, ವಾಟರ್ ಪೋಲೊ, ಬಂiÀÄಲು ಹಾಕಿ, ಬ್ಯಾಸ್ಕೆಟ್ ಬಾಲ್, ತೋಡುದೋಣಿ ಸ್ಪರ್ಧೆ-ಇವು ಐಚ್ಛಿಕ, ಕೆಲವು ಕಡೆಗಳಲ್ಲಿ ಕಲೆಗಳಲ್ಲೂ ಸ್ಪರ್ಧೆ ಏರ್ಪಡಿಸಿರುವುದುಂಟು. ಸ್ಕೀಯಿಂಗ್, ಸ್ಕೇಟಿಂಗ್, ಐಸ್ ಹಾಕಿ, ಬಾಬ್ಸ್ಲೆಡ್ ಇವು ಕೆಲವು ಚಳಿಗಾಲದ ಕ್ರೀಡೆಗಳು, ಮಾರ್ಗ ಮತ್ತು ಕ್ಷೇತ್ರ, ಕತ್ತಿವರಸೆ, ಗರಡಿ ವಿದ್ಯೆ, ತೋಡುದೋಣಿ ಸ್ಪರ್ಧೆ, ನೌಕಾಪಂದ್ಯ, ಈಜು ಮತ್ತು ಲಲಿತ ಕಲೆಗಳಲ್ಲಿ ಸ್ತ್ರೀಯರು ಸ್ಪರ್ಧಿಸುತ್ತಾರೆ.
  • ನಾನಾರಾಷ್ಟ್ರಗಳು ನಾನಾ ಕ್ರೀಡೆಗಳಲ್ಲಿ ವಿಶೇಷ ಪ್ರಾವೀಣ್ಯಗಳಿಸಿರುವುದು ಇನ್ನೊಂದು ಗಮನಾರ್ಹ ಅಂಶ. ಈ ಕ್ರೀಡೆಗಳಲ್ಲಿ ಉನ್ನತ ಸ್ಥಾನಗಳನ್ನುಳಿಸಿಕೊಳ್ಳಲು ಅವು ಬಹಳವಾಗಿ ಹೆಣಗುತ್ತವೆ. ಅವುಗಳೊಂದಿಗೆ ಸ್ಪರ್ಧಿಸಿ, ಅವನ್ನು ಆ ಸ್ಥಾನಗಳಿಂದ ಕೆಳಗಿಳಿಸಲು ಇತರ ರಾಷ್ಟ್ರಗಳು ಶ್ರಮಿಸುತ್ತವೆ. ಯಾವ ರಾಷ್ಟ್ರಕ್ಕೇ ಆಗಲಿ, ವರ್ಣಕ್ಕೇ ಆಗಲಿ, ಯಾವ ಸ್ಥಾನವೂ ಶಾಶ್ವತವಲ್ಲ.
  • ಒಂದೊಂದು ಕ್ರೀಡೆಯಲ್ಲಿ ಒಬ್ಬೊಬ್ಬ ವೀರ ತನ್ನ ಶೌರ್ಯ ಮೆರದು ತನ್ನ ಹೆಸರನ್ನು ಜ್ಯೋತಿರ್ರೇಖೆಯಲ್ಲಿ ಬರೆದಿಟ್ಟು ಹೋಗಿರುವುದು ಗಮನಾರ್ಹ, ಆಯಾ ಅಧಿವೇಶನಗಳೇ ಆಯಾ ವೀರರ ಹೆಸರುಗಳಿಂದ ಚಿರಸ್ಥಾಯಿಗಳಾಗಿವೆ. 1936ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಹಿಟ್ಲರನ ಆರ್ಯಪ್ರತಿಷ್ಠೆಯ ಗುಳ್ಳೆಯನ್ನೊಡೆದವನು ಅಮೆರಿಕನ್ ನೀಗ್ರೊ ಜೆಸ್ಸಿ ಓವೆನ್ಸ್‌. ಈತ 100 ಮತ್ತು 200 ಮೀಟರ್ ಓಟ ಸ್ಪರ್ಧೆಯಲ್ಲಿ, ಅಗಲ ನೆಗೆತ ಮತ್ತು ರಿಲೇ ಸ್ಪರ್ಧೆಗಳಲ್ಲಿ ವಿಕ್ರಮ ಸ್ಥಾಪಿಸಿ ನಾಲ್ಕು ಚಿನ್ನದ ಪದಕಗಳನ್ನು ಪಡೆದ. ಅವನಿಗಿಂತ ಮುಂಚೆ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ವಿಶ್ವವಿಕ್ರಮಗಳನ್ನು (24) ಮುರಿದು ‘ಹಾರುವ ಫಿನ್ನ’ ನೆಂದು ಹೆಸರು ಗಳಿಸಿದವನು ಪ್ಯಾವ್ವೊ ನುರ್ಮಿ, 1952ರ ಹೆಲ್ಸಿಂಕಿಯ ಒಲಿಂಪಿಕ್ಸ್‌ನಲ್ಲಿ ಎಮಿಲ್ ಜóಟೊಪೆಕ್ ಸಾಹಸದಿಂದಾಗಿ ಅವಕ್ಕೆ ಜಟೊಪೆಕ್ ಕ್ರೀಡೆಗಳೆಂದೇ ಅಡ್ಡಹೆಸರು ಬಂದಿದೆ. 5,000 ಮತ್ತು 10,000 ಮೀಟರುಗಳಲ್ಲಿ ಆಗ ಹೊಸ ವಿಕ್ರಮ ಸ್ಥಾಪಿಸಿದ ಈತನಿಗೆ ‘ಮಾನವ ರೈಲು’ (ಹ್ಯೂಮನ್ ಲೋಕೊಮೊಟಿವ್) ಎಂಬುದೇ ಅನ್ವರ್ಥನಾಮವಾಯಿತು. ಬಾಸ್ಟನಿನ ಜೇಮ್ಸ್‌ ಕಾನಲಿ ಆಧುನಿಕ ಒಲಿಂಪಿಕ್ಸ್‌ನ ಪ್ರಥಮ ಚಾಂಪಿಯನ್ (1896), ದೂರದ ಓಟದ ಸ್ಪರ್ಧೆಯಲ್ಲಿ (ಮ್ಯಾರತಾನ್) ಪ್ರಥಮನಾದವನು ಸ್ಟೈರಾಸ್ ಲೂಯಿಸ್ ಎಂಬ ಗ್ರೀಕ್ ಪ್ರಜೆ.
  • 1964ರಲ್ಲಿ ಟೋಕಿಯೋದಲ್ಲಿ ನಡೆದ ಒಲಿಂಪಿಕ್ ಕ್ರೀಡೆಗಳು ಏಷ್ಯದಲ್ಲೇ ಪ್ರಥಮ. ಈ ಸ್ಪರ್ಧೆಗಳಿಗಾಗಿ ವಿನಿಯೋಗವಾದ ಹಣವೂ ದುಡಿಮೆಯೂ ಸಂಘಟನೆಯೂ ಎಷ್ಟೊಂದು ಅಗಾಧವೆಂಬುದನ್ನು ಕೂಬರ್ತಿ ಕನಸಿನಲ್ಲೂ ಊಹಿಸಿದ್ದಿರಲಾರ, ವಿಶ್ವದ ಸ್ಪರ್ಧಿಗಳನ್ನು ಸ್ವಾಗತಿಸಲು ಇಡೀ ಟೋಕಿಯೋ ನಗರವೇ ಹೊಸ ಉಡುಪು ಧರಿಸಿ ಸಿದ್ಧವಾಯಿತೆನ್ನಬಹುದು. ಇವಕ್ಕಾಗಿ ಹೊಸ ಮೋಟಾರು ರಸ್ತೆಗಳೂ ಸೇತುವೆಗಳೂ ನಿರ್ಮಾಣವಾದುವು. ಕ್ರೀಡಾಂಗಣವೂ ಕ್ರೀಡೋಪನವೂ ಉದಯವಾದುವು. ಅನೇಕ ಹೊಸ ಭವನಗಳನ್ನೇ ಕಟ್ಟಲಾಯಿತು. ಇವಕ್ಕೆಲ್ಲ ವೆಚ್ಚವಾದ ಹಣ ಇಪ್ಪತ್ತು ಕೋಟಿ ಡಾಲರ್. ಹಿಂದಿನ ಕ್ರೀಡೆಗಳಂತೆ ಟೋಕಿಯೋದಲ್ಲೂ ಅಮೆರಿಕ ಸಂಯುಕ್ತಸಂಸ್ಥಾನವೇ ಮಾರ್ಗ ಮತ್ತು ಕ್ಷೇತ್ರ ಸ್ಪರ್ಧೆಗಳಲ್ಲಿ ಮೇಲುಗೈ ಸ್ಥಾಪಿಸಿತು. ನ್ಯೂಜಿಲೆಂಡಿನ ಪೀಟರ್ ಸ್ನೆಲ್ ಮಾತ್ರ 800 ಮತ್ತು 1500 ಮೀಟರುಗಳಲ್ಲೂ ಬ್ರಿಟನಿನ ಲಿನ್ ಡೇವಿಸ್ ಉದ್ದನೆಗೆತದಲ್ಲೂ ಪ್ರಥಮರಾದರು.
  • 1968ರ ಒಲಿಂಪಿಕ್ ಕ್ರೀಡೆಗಳನ್ನು ಮೆಕ್ಸಿಕೋ ನಗರದಲ್ಲಿ ಸಮುದ್ರಮಟ್ಟದಿಂದ ಸು.2134 ಮೀಗಳ ಎತ್ತರದಲ್ಲಿ-ಏರ್ಪಡಿಸಲಾಗಿತ್ತು. ಈ ಎತ್ತರದಲ್ಲಿ ಸ್ಪರ್ಧೆಗಳನ್ನು ನಡೆಸುವುದರ ಸಾಧ್ಯತೆಬಾಧ್ಯತೆಗಳನ್ನು ಕುರಿತು ವಿಪುಲವಾಗಿ ವಾದವೇ ನಡೆಯಿತು, ಆಮ್ಲಜನಕದ ವಿರಳತೆಯಿಂದಾಗಿ ಅಪಾಯ ಸಂಭವಿಸಬಹುದೆಂಬುದೇ ಭಯ, ಸ್ಪರ್ಧಿಗಳಿಗೆ ಆಮ್ಲಜನಕ ಒದಗಿಸಲಾಗಿತ್ತು. ಇದೇ ಬಗೆಯ ನಾಡುಗಳಿಂದ ಬಂದವರಿಗೆ ಈ ಎತ್ತರವೊಂದು ಅನುಕೂಲವಾಗಿಯೇ ಪರಿಣಮಿಸಿತೆನ್ನಬೇಕು. 800 ಮೀಟರ್ ಮತ್ತು ಹೆಚ್ಚಿನ ನಡುದೂರಗಳ ಓಟಗಳ ಸ್ಪರ್ಧೆಯಲ್ಲಿ ಕೀನ್ಯದವರು ಗೆದ್ದರು. ಅನೇಕ ಸ್ಪರ್ಧೆಗಳಲ್ಲಿ ಹಳೆಯ ವಿಶ್ವವಿಕ್ರಮಗಳು ಮುರಿದು ಬಿದ್ದುವು. ಅಮೆರಿಕದ ಬಾಬ್ ಬೀಮನ್ 29' 2ಳಿ” ಉದ್ದ ನೆಗೆದು ಅದ್ಭುತವಾದ ವಿಕ್ರಮ ಸ್ಥಾಪಿಸಿದ. ಇದು ಹಿಂದಿನ ವಿಕ್ರಮಕ್ಕಿಂತ 1' 9¾” ಹೆಚ್ಚು. ಪುರ್ಣ ವೇಗದ ಓಟದಲ್ಲಿ (ಸ್ಪ್ರಿಂಟ್ಸ್‌) ಅಮೆರಿಕನ್ ನೀಗ್ರೊ ಸ್ಪರ್ಧಿಗಳದೇ ಮೇಲುಗೈ. ಇತರ ವಿಕ್ರಮಗಳು ಈ ರೀತಿ ಇವೆ: ಆಲ್ ಓರ್ಟರ್ (ಅಮೆರಿಕ); ಚಕ್ರ ಎಸೆತ; ವ್ಯೋಮಿಯ ಟೈಯಸ್ (ಅಮೆರಿಕ); 100 ಮೀ. ಓಟ; ಡೇವಿಡ್ ಹೆಮರಿ (ಗ್ರೇಟ್ ಬ್ರಿಟನ್); 400 ಮೀ. ಪ್ರತಿಬಂಧಕ ಓಟ (ಹರ್ಡಲ್ಸ್‌); ರಾಲ್ಫ್‌ ಡೌಬೆಲ್ (ಆಸ್ಟ್ರೇಲಿಯ); 800 ಮೀ; ಎತ್ತರ ನೆಗೆತದ ಪರಾಕ್ರಮಿ ಡಿಕ್ ಫಾಸ್ಬೆರಿ (ಅಮೆರಿಕ) ಹಿಮ್ಮೊಗನಾಗಿ ನೆಗೆದದ್ದೊಂದು ವೈಶಿಷ್ಟ್ಯ.

ಒಲಿಂಪಿಕ್ಸ್‌ನಲ್ಲಿ ಭಾರತ

ಉದ್ಘಾಟನಾ ಸಮಾರಂಭದ ಒಂದು ದೃಶ್ಯ .2016 ಬೇಸಿಗೆ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ. 205 ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳ 11,000 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದರು.
  • ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸದ ಒಲಿಂಪಿಕ್ ಕ್ರೀಡೆಗಳಲ್ಲಿ ಭಾರತದ ಸಾಧನೆ ಏನು ಎಂದು ಕೇಳಿದರೆ, ಹಾಕಿಯ ಗತವೈಭವ ನೆನಪಾಗುತ್ತದೆ. ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಗುರುತಿಸುತ್ತಿದ್ದುದೇ ಹಾಕಿ ತಂಡದ ಸುವರ್ಣ ಸಾಧನೆಯಿಂದ. ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್ ಕೂಡ ಧ್ಯಾನ್ಚಂದರ ಮಾಂತ್ರಿಕ ಆಟಕ್ಕೆ ತಲೆಬಾಗಿದ್ದ. ಆದರೆ ಕ್ರಮೇಣ ಭಾರತದ ಹಾಕಿ ಮಾನ ಚಿನ್ನದಿಂದ ಕಂಚಿಗಿಳಿಯಿತು. ಕಂಚಿನಿಂದ ಹಂಚಿಗಿಳಿಯಿತು.
  • 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಭಾರತದ ಪೈಲ್ವಾನ ಖಾಶಾಬಾ ಜಾಧವ ಬಾಂಟಮ್ ವೇಟ್ (58 ಕಿಗ್ರಾಂ)ನಲ್ಲಿ ಕಂಚಿನ ಪದಕ ಗೆದ್ದಿದ್ದನ್ನು ಬಿಟ್ಟರೆ, ಭಾರತದ ಕ್ರೀಡಾಪಟುಗಳು ವೈಯುಕ್ತಿಕ ಪದಕವೊಂದನ್ನು ಗೆಲ್ಲಲು 2000 ದ ವರೆಗೆ ಕಾಯಬೇಕಾಯಿತು. ಸಿಡ್ನಿಯಲ್ಲಿ ನಡೆದ ಆ ಒಲಿಂಪಿಕ್ಸ್‌ನಲ್ಲಿ ಲಿಯಾಂಡರ್ ಪೇಸ್ ಟೆನಿಸ್ನಲ್ಲಿ ಹಾಗೂ ಕರ್ಣಂ ಮಲ್ಲೇಶ್ವರಿ ವೇಟ್ಲಿಫ್ಟಿಂಗ್ನಲ್ಲಿ ಕಂಚಿನ ಪದಕ ಗೆದ್ದರು. 2004ರ ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಹರ್ಷವರ್ಧನ ರಾಠೋಡ್ ಷೂಟಿಂಗ್ನಲ್ಲಿ ಬೆಳ್ಳಿ ಪದಕ ಗೆದ್ದದ್ದು ಇದುವರೆಗಿನ ಅತ್ಯುತ್ತಮ ಸಾಧನೆ. ಅದರರ್ಥ ವೈಯುಕ್ತಿಕ ಸ್ಪರ್ಧೆಗಳಲ್ಲಿ ಇದುವರೆಗೆ ಯಾರೂ ಚಿನ್ನದ ಪದಕ ಗೆದ್ದೇ ಇಲ್ಲ.
  • ಭಾರತದ ಮಿಲಾ್ಖಸಿಂಗ್ ಹಾಗೂ ಪಿ.ಟಿ. ಉಷಾ ಓಟದ ಸ್ಪರ್ಧೆಗಳಲ್ಲಿ ಕಂಚಿನ ಪದಕದ ಹತ್ತಿರ ಬಂದಿದ್ದರು. 1960ರ ರೋಮ್ ಒಲಿಂಪಿಕ್ಸ್‌ನ 400 ಮೀಟರ್ಸ್‌ ಓಟದಲ್ಲಿ ಮಿಲಾ್ಖಸಿಂಗ್ ನಾಲ್ಕನೇ ಸ್ಥಾನ ಪಡೆದರು. ಅವರು ಮೊದಲ ಮೂವರ ಜೊತೆ ವಿಶ್ವ ದಾಖಲೆಯ ಪಾಲುದಾರರಾದರೂ ಪದಕ ಮಾತ್ರ ಸಿಗಲಿಲ್ಲ. ಅದೇ ಪಿ.ಟಿ. ಉಷಾ 1984ರ ಲಾಸ್ ಏಂಜಲಿಸ್ ಒಲಿಂಪಿಕ್ಸ್‌ನ 400 ಮೀಟರ್ಸ್ ಹರ್ಡಲ್ಸ್‌ನಲ್ಲಿ ಕೂದಲೆಳೆಯ ಅಂತರದಿಂದ ಅಂದರೆ ಸೆಕೆಂಡಿನ ನೂರನೇ ಒಂದು ಭಾಗದಷ್ಟು ಅಂತರದಿಂದ ಕಂಚಿನ ಪದಕ ತಪ್ಪಿಸಿಕೊಂಡರು.
  • ಭಾರತ ಹಾಕಿ ತಂಡ 1928ರ ಆ್ಯಮ್ಸ್ಟರ್ಡ್ಯಾಮ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಆಡಿತು. ಅಲ್ಲಿಂದಲೇ ಅದರ ಸ್ವರ್ಣಯುಗ ಆರಂಭವಾಯಿತು. 1932, 1936, 1948, 1952, 1956ರ ಒಲಿಂಪಿಕ್ಸ್‌ಗಳಲ್ಲಿ ಸತತವಾಗಿ ಚಿನ್ನದ ಪದಕ ಗೆದ್ದ ಭಾರತ, 1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನಕ್ಕೆ ಸೋತು ರಜತ ಪದಕ ಗಳಿಸಿತು. 1964ರಲ್ಲಿ ಮತ್ತೆ ಭಾರತ ಚಿನ್ನದ ಪದಕ ಗಳಿಸಿತಾದರೂ 1968ರಲ್ಲಿ ಮೂರನೆಯ ಸ್ಥಾನಕ್ಕಿಳಿಯಿತು. 1972ರಲ್ಲೂ ಮೂರನೆಯ ಸ್ಥಾನ. 1976ರಲ್ಲಿ ಏಳನೆಯ ಸ್ಥಾನಕ್ಕಿಳಿದ ಭಾರತ 1980ರಲ್ಲಿ ಮರಳಿ ಚಿನ್ನದ ಪದಕ ಗಳಿಸಿತು. ಆದರೆ ಬಹಳಷ್ಟು ರಾಷ್ಟ್ರಗಳು ಮಾಸ್ಕೊದಲ್ಲಿ ನಡೆದ 1980ರ ಒಲಿಂಪಿಕ್ಸ್‌ ಕ್ರೀಡೆಗಳನ್ನು ಬಹಿಷ್ಕರಿಸಿದ್ದವು. 1984ರಲ್ಲಿ ಭಾರತಕ್ಕೆ ಐದನೆಯ ಸ್ಥಾನ, 1988ರಲ್ಲಿ ಆರನೆಯ ಸ್ಥಾನ, 1992ರಲ್ಲಿ ಎಂಟನೆಯ ಸ್ಥಾನ, 2000ರಲ್ಲಿ ಏಳನೇಯ ಹಾಗೂ 2004ರಲ್ಲಿ ಏಳನೆಯ ಸ್ಥಾನ.
  • ಒಲಿಂಪಿಕ್ ಕ್ರೀಡೆಗಳಲ್ಲಿ ಭಾರತದ ಸ್ಪರ್ಧಿಗಳು ಪ್ರಥಮ ಬಾರಿಗೆ ಭಾಗವಹಿಸಿದ್ದು 1920ರಲ್ಲಿ (ಆಂಟ್ವರ್ಪ್). ಆಗ ಸರ್ ದೊರಾಬ್ ತಾತಾ ಸ್ವಂತ ಖರ್ಚಿನಲ್ಲಿ ಮೂವರ ತಂಡವೊಂದನ್ನು ಕಳಿಸಿದರು. 1900ರಷ್ಟು ಹಿಂದೆಯೇ ನಾರ್ಮನ್ ಪ್ರಿಚರ್ಡ್ ಎಂಬಾತ ಭಾರತದ ಪರವಾಗಿ ಭಾಗವಹಿಸಿ 200 ಮೀಟರ್ ನೇರ ಓಟ (ಡ್ಯಾಷ್) ಮತ್ತು 200 ಮೀಟರ್ ಪ್ರತಿಬಂಧಕ ಓಟಗಳಲ್ಲಿ ತಲಾ ಒಂದೊಂದು ರಜತಪದಕ ಪಡೆದನೆಂದು ಉಲ್ಲೇಖವಿದೆ. ಇದುವರೆಗೂ ಬೇರೆ ಯಾವ ಭಾರತೀಯನೂ ಈ ಸಾಧನೆ ಮಾಡಿಲ್ಲ.
  • ಆಂಟ್ವರ್ಪಿನಲ್ಲಿದ್ದ ಭಾರತೀಯ ತಂಡದಲ್ಲಿದ್ದವರು ಪಿ. ಬ್ಯಾನರ್ಜಿ (200 ಮತ್ತು 800 ಮೀ.) ಪಿ. ಎಫ್. ಚೌಗುಲೆ (10,000 ಮೀ.), ಮತ್ತು ಕೈಜಾಲಿ (ಕಾಡುಮೇಡು-ಕ್ರಾಸ್ ಕಂಟ್ರಿ). ಚೌಗುಲೆಗೆ 19ನೆಯ ಸ್ಥಾನ ಲಭಿಸಿತು, 1924ರ ಪ್ಯಾರಿಸ್ ಸ್ಪರ್ಧೆಗಳಲ್ಲಿ ಭಾಗವಹಿಸಿದ ತಂಡದಲ್ಲಿ ಆರು ಮಂದಿ ಇದ್ದರು, ಇವರ ಪೈಕಿ ನಾಲ್ವರು ಮೊದಲನೆಯ ಸುತ್ತಿನಲ್ಲೇ ಮುಕ್ತರಾದರು.
  • ಲಾಸ್ಏಂಜೆಲೆಸ್ (1932) ಮತ್ತು ಬರ್ಲಿನ್ (1936) ಕ್ರೀಡೆಗಳಲ್ಲೂ ಭಾರತೀಯ ಕ್ರೀಡಾಪಟುಗಳಿದ್ದರು. ಆದರೆ ಭಾರತ ಪ್ರಥಮವಾಗಿ ಸಂಪುರ್ಣ ಪ್ರಾತಿನಿಧ್ಯ ಗಳಿಸಿದ್ದು 1948ರ ಲಂಡನ್ ಕ್ರೀಡೆಗಳಲ್ಲಿ. ಆಗ ಇದು ಹಾಕಿ, ಪುಟ್ಬಾಲ್, ಅಥ್ಲೆಟಿಕ್ಸ್‌, ಸೈಕ್ಲಿಂಗ್, ಮುಷ್ಟಿಕಾಳಗ, ಕುಸ್ತಿ, ಈಜು, ವಾಟರ್ ಪೋಲೊ, ಭಾರ ಎತ್ತುಗೆಗಳಲ್ಲಿ ಭಾಗವಹಿಸಿತು. ಆದರೆ ಹಾಕಿ ಒಂದು ಬಿಟ್ಟು ಉಳಿದ ಸ್ಪರ್ಧೆಗಳಲ್ಲಿ ಭಾರತ ಬಹು ಬೇಗ ನಿರ್ಗಮಿಸಿತು.
2020 ರಲ್ಲಿ ಟೊಕಿಯೊದಲ್ಲಿ ನೆಡಯುವ ಒಲಿಂಪಿಕ್ಸ್‌ಗಾಗಿ "ಟೋಕಿಯೊ ಬಿಗ್ ಸೈಟ್ ಕಾನ್ಫರೆನ್ಸ್ ಟವರ್ ಐಬಿಸಿ / ಎಂಪಿಸಿ ಸಂಕೀರ್ಣವನ್ನು" ಬಳಸಲಾಗುತ್ತದೆ
  • ಒಲಿಂಪಿಕ್ ಕ್ರೀಡೆಗಳಲ್ಲಿ ಮೊಟ್ಟಮೊದಲಿಗೆ ಭಾಗವಹಿಸಿದ ಮಹಿಳೆಯರೆಂದರೆ (1952) ಮೇರಿ ಡಿ’ಸೋಜó (100 ಮೀ. ಮತ್ತು 200 ಮೀ.), ನೀಲಿಮಾ ಘೋಷ್ (100 ಮೀ, ಮತ್ತು 80 ಮೀ, ಪ್ರತಿಬಂಧಕ), ಡಾಲಿ ನಜಿûೕರ್ ಮತ್ತು ಆರತಿ ಸಹಾ (ಈಜು), ಆ ವರ್ಷ ಭಾರತೀಯ ಪುರುಷರೂ ಭಾಗವಹಿಸಿ ಹಿಂದಿನಬಾರಿಗಿಂತ ಹೆಚ್ಚು ಸಮರ್ಪಕ ಸ್ಥಾನಗಳಿಸಿದರೆನ್ನಬಹುದು.
  • 1964ರ ಕ್ರೀಡೆಗಳಲ್ಲಿ ಭಾರತದ ಪ್ರದರ್ಶನ ಇನ್ನೂ ಉತ್ತಮವಾಗಿತ್ತು ಭಾರತದ ಸ್ಪರ್ಧಿಗಳು 110 ಮೀ. ಪ್ರತಿಬಂಧಕ, 400 ಮೀ. ಪ್ರತಿಬಂಧಕ ಮುಮ್ಮಡಿ ನೆಗೆತ (ಟ್ರಿಪಲ್ ಜಂಪ್), ಅಗಲ ನೆಗೆತ, ದೂರದ ಓಟ (ಮ್ಯಾರತಾನ್) ಮುಂತಾದವಲ್ಲಿ ಒಳ್ಳೆಯ ಮಟ್ಟ ಸ್ಥಾಪಿಸಿದರು. ಕುಸ್ತಿಯಲ್ಲಿ ಬ್ಯಾಂಟಮ್ ತೂಕದ ವರ್ಗದಲ್ಲಿ ಬಿಷಂಬರ್ ಸಿಂಗನದು ಆರನೆಯ ಸ್ಥಾನ, ರೋಮಿನಲ್ಲಿ ಮಿಲಾ್ಖಸಿಂಗನಂತೆ ಟೋಕಿಯೋದಲ್ಲಿ ಗುರ್ಬಚನ್ ಸಾಹಸ ಮೆರೆದ.

ಒಲಿಂಪಿಕ್ ಕ್ರೀಡೆಗಳ ಕೆಲವು ದಾಖಲೆಗಳು

  • ಅತಿ ಹೆಚ್ಚಿನ ಪದಕಗಳು: ಸೋವಿಯತ್-ಉಕ್ರೇನಿನ ಲ್ಯಾರಿಸಾ ಲ್ಯಾಜಿನಿನಾ 1956 ರಿಂದ 1964ರ ವರೆಗೆ, ಜಿಮ್ನಾಸ್ಟಿಕ್ಸ್‌ ಸ್ಪರ್ಧೆಗಳಲ್ಲಿ ಒಟ್ಟು 18 ಪದಕಗಳನ್ನು ಗೆದ್ದಿದ್ದಾರೆ. ಸೋವಿಯತ್-ರಷ್ಯಾದ ನಿಕೊಲಾಯ್ ಆ್ಯಂಡ್ರಿಯಾನೊವ್, 1972 ರಿಂದ 1980ರ ವರೆಗೆ ಜಿಮ್ನಾಸ್ಟಿಕ್ಸ್‌ನಲ್ಲಿ 15 ಪದಕಗಳನ್ನು ಗೆದ್ದಿದ್ದಾರೆ.
  • ಅತಿ ಹೆಚ್ಚು ಚಿನ್ನದ ಪದಕ ಗೆದ್ದವರು: ಫಿನ್ಲೆಂಡಿನ ಪಾವೊ ನುರ್ಮಿ (1920-1928) ಅಥ್ಲೆಟಿಕ್ಸ್‌ನಲ್ಲಿ; ಸೋವಿಯತ್-ಉಕ್ರೇನಿನ ಲ್ಯಾರಿಸಾ ಲ್ಯಾಜಿನಿನಾ (1956-1964) ಜಿಮ್ನಾಸ್ಟಿಕ್ಸ್‌ನಲ್ಲಿ; ಅಮೆರಿಕದ ಮಾರ್ಕ್ ಸ್ಪಿಟ್ಸ್‌ (1968-1972) ಈಜಿನಲ್ಲಿ ಹಾಗೂ ಅಮೆರಿಕದ ಕಾರ್ಲ್ ಲೂಯಿಸ್ (1984-1996) ಅಥ್ಲೆಟಿಕ್ಸ್‌ನಲ್ಲಿ, ಈ ನಾಲ್ವರೂ ತಲಾ 9 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.(ಜಿ.ಹೆಚ್)[5][6]

ಒಲಂಪಿಕ್ ೨೦೨೦ -ಟೋಕಿಯೊ

  • 2020 ರ ಬೇಸಿಗೆ ಒಲಿಂಪಿಕ್ಸ್ (ಅಧಿಕೃತವಾಗಿ XXXII ಒಲಿಂಪಿಯಾಡ್‌ನ ಕ್ರೀಡೆ) ಎಂದು ಕರೆಯಲ್ಪಡುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ ಟೋಕಿಯೊ 2020 ಎಂದು ಕರೆಯಲಾಗುತ್ತದೆ, ಇದು ಮುಂಬರುವ ಅಂತರರಾಷ್ಟ್ರೀಯ ಬಹು-ಕ್ರೀಡಾ ಕಾರ್ಯಕ್ರಮವಾಗಿದ್ದು, ಇದು 2020 ರ ಜುಲೈ 24 ರಿಂದ ಆಗಸ್ಟ್ 9 ರವರೆಗೆ ಜಪಾನ್‌ನ ಟೋಕಿಯೊದಲ್ಲಿ ಪ್ರಾಥಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕೆಲವು ಕ್ರೀಡೆಗಳು ಜುಲೈ 22 ರಿಂದ ಪ್ರಾರಂಭವಾಗುತ್ತವೆ.[7]
  • ಕ್ರೀಡಾಕೂಟವು 50 ವಿವಿಧ ವಿಭಾಗಗಳನ್ನು ಒಳಗೊಂಡಂತೆ 33 ವಿವಿಧ ಕ್ರೀಡೆಗಳಲ್ಲಿ 339 ಈವೆಂಟ್‌ಗಳನ್ನು ಒಳಗೊಂಡಿರುತ್ತದೆ. ಟೋಕಿಯೊದಲ್ಲಿ ಪರಿಚಯಿಸಲಾಗುವ ಐದು ಹೊಸ ಕ್ರೀಡೆಗಳ ಜೊತೆಗೆ, ಅಸ್ತಿತ್ವದಲ್ಲಿರುವ ಕ್ರೀಡೆಗಳಲ್ಲಿ 3x3 ಬ್ಯಾಸ್ಕೆಟ್‌ಬಾಲ್, ಫ್ರೀಸ್ಟೈಲ್ ಬಿಎಂಎಕ್ಸ್ ಮತ್ತು ಮ್ಯಾಡಿಸನ್ ಸೈಕ್ಲಿಂಗ್ ಮತ್ತು ಹಲವಾರು ಕ್ರೀಡೆಗಳಲ್ಲಿ ಹೊಸ ಮಿಶ್ರ ಘಟನೆಗಳು ಸೇರಿದಂತೆ ಹದಿನೈದು ಹೊಸ ಘಟನೆಗಳು ನಡೆಯಲಿವೆ. 6 ನವೆಂಬರ್ 2019 ರ ಹೊತ್ತಿಗೆ, 136 ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳು (ಎನ್‌ಒಸಿ)ಭಾಗವಹಿಸುವ ಅರ್ಹತೆ ಪಡೆದಿವೆ.[8]
  • 2020 ರ ಬೇಸಿಗೆ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದೊಂದಿಗೆ ... ಹೊಸ ಒಲಿಂಪಿಕ್ಸ್ ಕ್ರೀಡಾಂಗಣದ ನಿರ್ಮಾಣ ಸೇರಿದಂತೆ ಒಟ್ಟು ಅಂದಾಜು $25 ಬಿಲಿಯನ್ ಡಾಲರ್ (2500ಕೋಟಿ ಡಾಲರ್ X 65 ರೂ=162500 ಕೋಟಿ ರೂಪಾಯಿ ) ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ. [9]

ನೋಡಿ

ನೋಡಿ

ವಿವರ ಮಾಹಿತಿ

ಉಲ್ಲೇಖಗಳು

  1. The Olympic Flag". Extract from: Textes choisis II, p.470. (written in 1931). Archived from the original on 28 August 2008. Retrieved 29 August 2008.
  2. Young, David C. (1996). The Modern Olympics: A Struggle for Revival. Baltimore: Johns Hopkins University Press
  3. [ Athens 1896". The International Olympic Committee. Retrieved 8 February 2010.]
  4. Lennartz, Karl (2002). "The Story of the Rings" (PDF). Journal of Olympic History. 10: 29–61.
  5. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಒಲಂಪಿಕ್ - ಕ್ರೀಡೆಗಳು
  6. -AROUND THE GAMES
  7. Olympics 2020: Tokyo wins race to host Games". BBC Sport. 7 September 2013. Archived from the original on 7 June 2015. Retrieved 13 February 2018.
  8. Tokyo 2020: Test event schedule announced;Japanese capital city prepares for Olympic and Paralympic Games;02 Oct 2018
  9. Tokyo’s rough road to 2020 Summer Olympics
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.