ಸಾಲಿ ರಾಮಚಂದ್ರರಾಯರು
ಸಾಲಿ ರಾಮಚಂದ್ರರಾಯರು ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ೧೮೮೮ ಅಕ್ಟೋಬರ ೧೦ರಂದು ಜನಿಸಿದರು. ಇವರು ಒಂದೂವರೆ ವರ್ಷದವರಿದ್ದಾಗ ತಂದೆ ಸುಬ್ಬರಾಯರು ತೀರಿಕೊಂಡರು. ಇವರ ಹತ್ತನೆಯ ವಯಸ್ಸಿನಲ್ಲಿ ತಾಯಿಯೂ ಸಹ ಮರಣ ಹೊಂದಿದರು. ವಾರಾನ್ನದಿಂದ ರಾಮಚಂದ್ರ ತನ್ನ ಶಿಕ್ಷಣ ಮುಂದುವರಿಸಿದ. ನಂತರದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾದ ಆರ್.ಎ.ಜಹಾಗೀರದಾರರ ಪರಿಚಯವು ಈ ಸಮಯದಲ್ಲಾಗಿ ಅವರ ನೆರವಿನಿಂದ ಬಾಲಕನ ಶಿಕ್ಷಣ ಮುಂದುವರಿಯಿತು.
ಶಿಕ್ಷಣ, ಉದ್ಯೋಗ ಹಾಗು ಕೌಟಂಬಿಕ ಜೀವನ
೧೯೦೫ರಲ್ಲಿಯೆ ರಾಮಚಂದ್ರರಾಯರ ವಿವಾಹ ಜರುಗಿತು. ೧೯೦೭ರಲ್ಲಿ ವಿಜಾಪುರದಲ್ಲಿ ಮ್ಯಾಟ್ರಿಕ್ ಪರಿಕ್ಷೆಯಲ್ಲಿ ತೇರ್ಗಡೆಯಾದ ಸಾಲಿ ರಾಮಚಂದ್ರರಾಯರು ಒಂದು ವರ್ಷದ ಮಟ್ಟಿಗೆ ವಿಜಾಪುರದ ಅಂಚೆ ಕಚೇರಿಯಲ್ಲಿ ದುಡಿದು, ೧೯೦೮ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದರು. ೧೯೦೯ರಲ್ಲಿ ಪುಣೆಯ ಫರ್ಗ್ಯೂಸನ್ ಕಾಲೇಜು ಸೇರಿಕೊಂಡರೂ ಸಹ ಎರಡೆ ವರ್ಷ ಅಲ್ಲಿ ಕಲಿತು, ಮತ್ತೆ ದ್ರವ್ಯ ಸಂಪಾದನೆಗಾಗಿ ಹುಬ್ಬಳ್ಳಿಯ ತೊರವಿ ಹೈಸ್ಕೂಲಿನಲ್ಲಿ ಶಿಕ್ಷಕರಾದರು. ೧೯೧೩ ಎಪ್ರಿಲ್ ೨೬ರಂದು ಇವರ ಪ್ರಥಮ ಪುತ್ರ ಶ್ರೀಕೃಷ್ಣನ ಜನನವಾಯಿತು. ಶಿಕ್ಷಣಕ್ಕಾಗಿ ಮತ್ತೆ ಪುಣೆಗೆ ಹೋಗಿ ಡೆಕ್ಕನ್ ಕಾಲೇಜು ಸೇರಿ, ೧೯೧೭ರಲ್ಲಿ ಬಿ.ಎ.ಪದವಿ ಪಡೆದರು. ಅದೇ ವರ್ಷ ನವಂಬರದಲ್ಲಿ ಮಗಳು ಸುಭದ್ರಾಳ ಜನನವಾಯಿತು. ೧೯೧೮ರಿಂದ ೧೯೨೦ರವರೆಗೆ ವಿಜಾಪುರದ ಶ್ರೀಕೃಷ್ಣ ಪಾಠಶಾಲೆ'ಯಲ್ಲಿ ಶಿಕ್ಷಕರಾಗಿ ದುಡಿದರು. ೧೯೨೨ ಎಪ್ರಿಲ್ ೧೯ರಂದು ಮಗಳು ಭಾಗೀರಥಿಯ ಜನನವಾಯಿತು. ೧೯೨೪ರಲ್ಲಿ ಸಾಲಿ ರಾಮಚಂದ್ರರಾಯರು ಪತ್ನಿಯನ್ನು ಕಳೆದುಕೊಂಡರು. ೧೯೨೬ರಿಂದ ಒಂದು ವರ್ಷ ಜಯಕರ್ನಾಟಕದ ಸಂಪಾದಕರಾಗಿದ್ದ ಸಾಲಿ ರಾಮಚಂದ್ರರಾಯರು ೧೯೨೮ರಿಂದ ೧೯೪೬ರವರೆಗೆ ಧಾರವಾಡದ ಕರ್ನಾಟಕ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.
ಉಜ್ವಲ ರಾಷ್ಟ್ರಪ್ರೇಮಿಯಾದ ಸಾಲಿ ರಾಮಚಂದ್ರರಾಯರು ಲೋಕಮಾನ್ಯ ತಿಲಕರ ಬಂಧನದಿಂದ ಪ್ರೇರಿತರಾಗಿ ತಮ್ಮ ಶಿಕ್ಷಣವನ್ನು ಬಿಟ್ಟು ರಾಷ್ಟ್ರೀಯ ಆಂದೋಲನ ಸೇರಿದ್ದರು. ಖಾದಿ ಹೊತ್ತು ಮಾರಾಟ ಮಾಡಿದ್ದರು. ಬೆಳಗಾವಿಯಲ್ಲಿ ಜರುಗಿದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮಾ ಗಾಂಧಿಯವರ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿದ್ದರು.
೧೯೩೦ರಲ್ಲಿ ಮ್ಯಾಟ್ರಿಕ್ ಪರೀಕ್ಷೆ ಪಾಸಾಗಿ ಕರ್ನಾಟಕ ಕಾಲೇಜನ್ನು ಸೇರಿದ ಮಗ ಶ್ರೀಕೃಷ್ಣ ತಂದೆಯ ಒಪ್ಪಿಗೆಯಿಂದ ಧಾರವಾಡದ ಇತರ ಸ್ವಾತಂತ್ರ್ಯ ಹೋರಾಟಗಾರರೊಡನೆ ಕೈಗೂಡಿಸಿ ಧಾರವಾಡ ಹಾಗು ಸೊಲ್ಲಾಪುರಗಳಲ್ಲಿ ಉಪ್ಪಿನ ಸತ್ಯಾಗ್ರಹ ಹಾಗು ಇತರ ಚಳುವಳಿಗಳಲ್ಲಿ ಭಾಗವಹಿಸುತ್ತಿದ್ದ. ಇಂತಹ ಧೀರ ಯುವಕ ೧೯೩೧ ಡಿಶಂಬರ ೩ರಂದು ಪ್ಲೇಗ್ ಜ್ವರದಿಂದ ಮರಣಗೊಂಡ. ಇದು ಸಾಲಿ ರಾಮಚಂದ್ರರಾಯರಿಗಾದ ತೀವ್ರ ಆಘಾತ.
೧೯೭೮ ಅಕ್ಟೋಬರ ೩೧ ರಂದು ಸಾಲಿ ರಾಮಚಂದ್ರರಾಯರು ನಿಧನರಾದರು.
ಸಾಹಿತ್ಯ ಸಾಧನೆ
"ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ" ಎಂದು ಹಾಡಿದ ಕವಿ ಸಾಲಿ ರಾಮಚಂದ್ರರಾಯರು ಕಾಲೇಜಿನಲ್ಲಿ ಕಲಿಯುತ್ತಿದ್ದಾಗಲೆ ಬರೆದ ಮೊದಲ ಕವಿತೆ “ ಹಂಬಲು ” ಆಲೂರು ವೆಂಕಟರಾಯರಿಂದ ಮೆಚ್ಚುಗೆ ಪಡೆದು ಅವರ ವಾಗ್ಭೂಷಣ ಪತ್ರಿಕೆಯಲ್ಲಿ ಪ್ರಕಟವಾಯಿತು. ಕನ್ನಡ, ಸಂಸ್ಕೃತ ಹಾಗು ಇಂಗ್ಲಿಷ್ ಅಲ್ಲದೆ ಹಿಂದಿ, ಗುಜರಾತಿ, ಮರಾಠಿ, ಪಾಲಿ ಮತ್ತು ರಶಿಯನ್ ಭಾಷೆಗಳ ಉತ್ತಮ ಜ್ಞಾನ ಪಡೆದ ಸಾಲಿಯವರು ಮರಾಠಿ ಹಾಗು ಗುಜರಾತಿಯಿಂದ ಕನ್ನಡಕ್ಕೆ ಅನುವಾದ ಕಾರ್ಯವನ್ನೂ ಮಾಡಿದ್ದಾರೆ. ಮಗನ ನಿಧನದ ನಿಮಿತ್ತ ಅವರಿಂದ ಉಕ್ಕಿದ ಅಳಲು ತಿಲಾಂಜಲಿ ಎಂಬ ಕವನವಾಗಿ ಹೊರಬಂದಿದ್ದು, “ಉರಿಯುತ್ತಿರುವ ಒಂದೆ ದೀಪದ ಕುಡಿ” ಎಂದು ವಿನಾಯಕ ಕೃಷ್ಣ ಗೋಕಾಕ ಈ ಶೋಕಗೀತೆಯ ಬಗೆಗೆ ಹೇಳಿದ್ದಾರೆ.
ಕೃತಿಗಳು
ಕವನ
- ಚಿಗುರೆಲೆ
- ಕುಸುಮಾಂಜಲಿ
- ಅಭಿಸಾರ (ಕಥನಕಾವ್ಯ)
- ತಿಲಾಂಜಲಿ (ಕನ್ನಡದ ಮೊದಲ ಶೋಕಗೀತೆ(ಎಲಿಜಿಗೆ))
- ಚಿತ್ರಸೃಷ್ಟಿ (ಗೀತಗಳು)
ಕಥೆ
- ಬುದ್ಧ ಜಾತಕಗಳು
ಮಕ್ಕಳ ಸಾಹಿತ್ಯ
- ಐದು ಜಾಣ ಪ್ರಾಣಿಗಳು
ಕಾದಂಬರಿ
- ಜಯ ಗುರುದೇವ
- ಯದುಪತಿ
ನಾಟಕ
- ಸುಕನ್ಯೆ (ಏಕಾಂಕ)
ಮಹಾಕಾವ್ಯ
- ಶ್ರೀರಾಮಚರಿತವು : ಬಾಲಕಾಂಡವು
- ಶ್ರೀರಾಮಚರಿತವು : ಅಯೋಧ್ಯಾಕಾಂಡವು
ಅನುವಾದ
- ಹಿಂದುಸ್ತಾನದ ಇತಿಹಾಸ (ಗುಜರಾತಿಯಿಂದ)
- ಜೀವನಲೀಲೆ (ಗುಜರಾತಿ ಮೂಲ : ಕಾಕಾ ಕಾಲೇಲಕರ)
- ಸ್ಥಿತಪ್ರಜ್ಞದರ್ಶನ (ಮರಾಠಿ ಮೂಲ : ವಿನೋಬಾ ಭಾವೆ)
- ಸಿಪಾಯಪ್ಪ (ಮಕ್ಕಳ ಕತೆ)
ಸಂಸ್ಕೃತ ರಚನೆ
- ಅಭಿಸಾರಮ್
- ಸುದಾಮಚರಿತ್ರಮ್
- ಶರಣಾಗತಿಃ
- ಗದ್ಯರಾಮಾಯಣಮ್
ಮಹಾಕಾವ್ಯ
- ಶ್ರೀರಾಮಚರಿತವು : ಬಾಲಕಾಂಡವು
- ಶ್ರೀರಾಮಚರಿತವು : ಅಯೋಧ್ಯಾಕಾಂಡವು