ಶ್ರೀ ರಾಮಾಯಣ ದರ್ಶನಂ
"ಶ್ರೀ ರಾಮಾಯಣ ದರ್ಶನಂ"ವು ಮಹಾಕಾವ್ಯವಾದ ರಾಮಾಯಣವನ್ನು[1]ಆಧರಿಸಿ ಕುವೆಂಪುರವರು ರಚಿಸಿದ ಆಧುನಿಕ ಕನ್ನಡ ಸಾಹಿತ್ಯದ ಮೇರು ಕೃತಿಯಾಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ೧೯೬೮ ರಲ್ಲಿ 'ಜ್ಞಾನಪೀಠ ಪ್ರಶಸ್ತಿ'ಯನ್ನು ಕುವೆಂಪುರವರಿಗೆ ತಂದೊದಗಿಸಿದೆ.[2].

__TOC_
ಅರ್ಪಣೆ
ಮಹಾಕಾವ್ಯದ ಆರಂಭದಲ್ಲಿ, ಕವಿ ತಮ್ಮ ನೆಚ್ಚಿನ ಗುರುಗಳಾದ ಶ್ರೀ ವೆಂಕಣ್ಣಯ್ಯರವರಿಗೆ ಕಾವ್ಯದ ಅರ್ಪಣೆ ಮಾಡುವ ಮೂಲಕ ಕಾವ್ಯದ ಮೂಲ ನಿತ್ಯ ಸತ್ಯವನ್ನು ಸಾರುತ್ತ ಕಾವ್ಯೋದ್ದೇಶವನ್ನು ಇಲ್ಲಿ ಸ್ಪಷ್ಟಪಡಿಸಿದ್ದಾರೆ.
ಶ್ರೀ ವೆಂಕಣ್ಣಯ್ಯನವರಿಗೆ
ಇದೊ ಮುಗಿಸಿ ತಂದಿಹೆನ್ ಈ ಬೃಹದ್ ಗಾನಮಂ
ನಿಮ್ಮ ಸಿರಿಯಡಿಗೊಪ್ಪಿಸಲ್ಕೆ, ಓ ಪ್ರಿಯ ಗುರುವೆ.
ಕರುಣಿಸಿಂ ನಿಮ್ಮ ಹರಕೆಯ ಬಲದ ಶಿಷ್ಯನಂ,
ಕಾವ್ಯಮಂ ಕೇಳ್ವೊಂದು ಕೃಪೆಗೆ ಕೃತ ಕೃತ್ಯನಂ
ಧನ್ಯನಂ ಮಾಡಿ. ನೀಮುದಯರವಿಗೈತಂದು
ಕೇಳಲೆಳಸಿದಿರಂದು. ಕಿರುಗವನಗಳನೋದಿ
ಮೆಚ್ಚಿಸಿದೆನನಿತರೊಳೆ ಬೈಗಾಯ್ತು. “ಮತ್ತೊಮ್ಮೆ
ಬರುವೆ. ದಿನವೆಲ್ಲಮುಂ ಕೇಳ್ವೆನೋದುವೆಯಂತೆ ;
ರಾಮಾಯಣಂ ಅದು ವಿರಾಮಾಯಣಂ ಕಣಾ !”
ಎಂದು ಮನೆಗೈದಿದಿರಿ. ಮನೆಗೈದಿದಿರಿ ದಿಟಂ ;
ದಿಟದ ಮನೆಗೈದಿದಿರಿ !
ಇದೊ ಬಂದಿರುವೆನಿಂದು
ಮುಗಿಸಿ ತಂದಿಹೆನಾ ಮಹಾಗಾನಮಂ. ಪಿಂತೆ
ವಾಲ್ಮೀಕಿಯುಲಿದ ಕಥೆಯಾದೊಡಂ, ಕನ್ನಡದಿ
ಬೇರೆ ಕಥೆಯೆಂಬಂತೆ, ಬೇರೆ ಮೈಯಾಂತಂತೆ,
ಮರುವುಟ್ಟುವಡೆದಂತೆ ಮೂಡಿದೀ ಕಾವ್ಯಮಂ
ವಿಶ್ವವಾಣಿಗೆ ಮುಡಿಯ ಮಣಿ ಮಾಡಿಹೆನ್, ನಿಮ್ಮ
ಕೃಪೆಯಿಂದೆ.- ಪೂರ್ವದ ಮಹಾಕವಿಗಳೆಲ್ಲರುಂ
ನೆರೆದ ಸಗ್ಗದ ಸಭೆಗೆ ಪರಿಚಯಿಸಿರೆನ್ನನುಂ :
ಸಂಘಕೆ ಮಹಾಧ್ಯಕ್ಷರಲ್ತೆ ನೀಂ ? ಕಿರಿಯನಾಂ
ಹಿರಿಯರಿಗೆ ಹಾಡುವೆನ್, ಕೇಳ್ವುದಾಶೀರ್ವಾದಂ !
ನುಡಿಯುತಿಹುದಾ ದಿವ್ಯ ಕವಿಸಭೆಗೆ ಗುರುವಾಣಿ, ಕೇಳ್
ಆಲಿಸಾ ಗುರುಕೃಪೆಯ ಶಿಷ್ಯ ಕೃತಿ ಸಂಕೀರ್ತಿಯಂ :
“ಬಹಿರ್ಘಟನೆಯಂ ಪ್ರತಿಕೃತಿಸುವಾ ಲೌಕಿಕ
ಚರಿತ್ರೆಯಲ್ತಿದು, ಅಲೌಕಿಕ ನಿತ್ಯ ಸತ್ಯಂಗಳಂ
ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನಂ ಕಣಾ,
ಶ್ರೀ ಕುವೆಂಪುವ ಸೃಜಿಸಿದೀ ಮಹಾಛಂದಸಿನ
ಮೇರುಕೃತಿ, ಮೇಣ್ ಜಗದ್ಭವ್ಯ ರಾಮಾಯಣಂ !
ಬನ್ನಿಮಾಶೀರ್ವಾದಮಂ ತನ್ನಿಮಾವಿರ್ಭವಿಸಿ
ಅವತರಿಸಿಮೀ ಪುಣ್ಯಕೃತಿಯ ರಸಕೋಶಕ್ಕೆ,
ನಿತ್ಯ ರಾಮಾಯಣದ ಹೇ ದಿವ್ಯ ಚೇತನಗಳಿರ !
ವಾಗರ್ಥ ರಥವೇರಿ, ಭಾವದಗ್ನಿಯ ಪಥಂ
ಬಿಡಿದು ಬನ್ನಿಂ, ಸಚ್ಚಿದಾನಂದ ಪೂಜೆಯಂ
ಸಹೃದಯ ಹೃದಯ ಭಕ್ತಿ ನೈವೇದ್ಯಮಂ ಕೊಂಡು
ಓದುವರ್ಗಾಲಿಪರ್ಗೊಲಿದೀಯೆ ಚಿತ್ಕಾಂತಿಯಂ !
ನಿತ್ಯಶಕ್ತಿಗಳಿಂತು ನೀಂ ಕಥೆಯ ಲೀಲೆಗೆ ನೋಂತು
ರಸರೂಪದಿಂದಿಳಿಯುತೆಮ್ಮೀ ಮನೋಮಯಕೆ,
ಪ್ರಾಣಮಯದೊಳ್ ಚರಿಸುತನ್ನಮಯಕವತರಿಸೆ ;-
ಶ್ರೀ ರಾಮನಾ ಲೋಕದಿಂದವತರಿಸಿ ಬಂದು
ಈ ಲೋಕಸಂಭವೆಯನೆಮ್ಮ ಭೂಜಾತೆಯಂ
ಸೀತೆಯಂ ವರಿಸುತಾಕೆಯ ನೆವದಿ ಮೃಚ್ಛಕ್ತಿಯಂ
ಮರ್ದಿಸುತೆ, ಸಂವರ್ಧಿಸಿರ್ಪವೋಲ್ ಚಿಚ್ಛಕ್ತಿಯಂ;-
ರಾವಣಾವಿದ್ಯೆಯೀ ನಮ್ಮ ಮರ್ತ್ಯಪ್ರಜ್ಞೆ ತಾಂ
ತನ್ನ ತಮದಿಂ ಮುಕ್ತಮಪ್ಪುದು, ದಿಟಂ, ನಿಮ್ಮ
ದೀಪ್ಯ ದೈವೀ ಪ್ರಜ್ಞೆಯಮೃತ ಗೋಪುರಕೇರ್ವವೋಲ್ !
ಓ ಬನ್ನಿಮವತರಿಸಿಮೀ ಮೃತ್ಕಲಾ ಪ್ರತಿಮೆಯೊಳ್
ಚಿತ್ಕಲಾ ಪ್ರಾಣಂ ಪ್ರತಿಷ್ಠಿತಂ ತಾನಪ್ಪವೋಲ್ !
ಸಂಪುಟಗಳು
ನಾಲ್ಕು ಸಂಪುಟಗಳನ್ನು ೫ ಸಂಚಿಕೆಗಳಲ್ಲಿ ಒಟ್ಟು ೨೨೨೯೧ ಸಾಲುಗಳಲ್ಲಿ ಬರೆದಿದ್ದಾರೆ.
ಅಯೋಧ್ಯಾ ಸಂಪುಟಂ
- ಕವಿಕ್ರತು ದರ್ಶ
ನಂ (೭೧೪)
- ಶಿಲಾ ತಪಸ್ವಿನಿ (೬೮೭)
- ಮಮತೆಯ ಸುಳಿ ಮಂಥರೆ (೬೨೯)
- ಊರ್ಮಿಳಾ (೫೯೩)
- ಭರತಮಾತೆ (೩೦೮)
- ಅಗ್ನಿಯಾತ್ರೆ (೩೪೨)
- ಚಿತ್ರಕೂಟಕೆ (೪೪೦)
- ಕುಣಿದಳುರಿಯ ಊರ್ವಶಿ (೨೫೦)
- ಪಾದುಕಾ ಕಿರೀಟಿ (೬೪೦)
- ಅತ್ರಿಯಿಂದಗಸ್ತ್ಯಂಗೆ (೪೭೯)
- ಪಂಚವಟಿಯ ಪರ್ಣಕುಟಿ (೪೧೧)
ಕಿಷ್ಕಿಂದಾ ಸಂಪುಟಂ
- ಲಂಕೇಶನೊಲಿಸಿದನು ಮಾರೀಚನಂ (೪೩೮)
- ಓ ಲಕ್ಷ್ಮಣಾ! (೯೦೭)
- ಶಬರಿಗಾದನು ಅತಿಥಿ ದಾಶರಥಿ (೩೮೫)
- ಅತ್ತಲಾ ಕಿಷ್ಕಿಂಧೆಯೊಳ್ (೧೮೮)
- ಪೂಣ್ದೆನಗ್ನಿಯೆ ಸಾಕ್ಷಿ! (೪೧೬)
- ನೀಂ ಸತ್ಯವ್ರತನೆ ದಿಟಂ! (೪೬೫)
- ಸಂಸ್ಕೃತಿ ಲಂಕಾ (೩೧೧)
- ನಾನಕ್ಕನೆನ್ ನಿನಗೆ, ತಂಗೆ! (೨೧೨)
- ಸುಗ್ರೀವಾಜ್ಞೆ (೫೮೩)
- ಇರ್ದುದು ಮಹೇಂದ್ರಾಚಲಂ (೧೦೯೮)
- ಸಾಗರೋಲ್ಲಂಘನಂ (೪೪೧)
- ದಶಶಿರ ಕನಕಲಕ್ಷ್ಮಿ (೩೪೮)
ಲಂಕಾ ಸಂಪುಟಂ
- ಕನಕಲಂಕಾನ್ವೇಷಣಂ (೭೫೨)
- ವನಮಂ ಪೊಕ್ಕನಶೋಕಮಂ (೨೯೪)
- ಕಂಡನಾ ಹದಿಬದೆಯರಧಿದೇವಿಯಂ (೩೫೩)
- ಅಶ್ರುಗಂಗೋತ್ರಿ (೭೧೭)
- ಕಿವಿಗೊಟ್ಟನವನಿಜಾ ರಮಣಂ (೨೯೪)
- ರಣವ್ರತರ್ ವಹ್ನಿರಂಹರ್ (೨೯೭)
- ಅತ್ತಲಾ ದೈತ್ಯ ಸಭೆಯೊಳ್ (೬೧೮)
- ನಿನ್ನಮಗಳಲ್ತೆನ್ನವಳ್ ಅನಲೆ! (೨೩೨)
- ಮರಣಮಥವಾ ಶರಧಿತರಣಂ! (೪೫೪)
- ಶುಕಂ ಸಾರಣಂವೆರಸಿ (೨೩೪)
- ಸಫಲಮಾಯ್ತಾ ರಾಯಭಾರಂ (೧೬೬)
- ಸೈನ್ಯ ಗುಪ್ತಿ (೩೦೫)
- ಸ್ವಪ್ನದೇವಿಗೆ ತಪೋಲಕ್ಷ್ಮಿ (೩೨೨)
- ಅದ್ವಿತೀಯಮಾ ದ್ವಿತೀಯಂ ದಿನಂ (೪೭೦)
ಶ್ರೀ ಸಂಪುಟಂ
- ಕುಂಭಕರ್ಣನನೆಬ್ಬಿಸಿಮ! (೪೩೩)
- ರಸಮಲ್ತೆ ರುದ್ರದೃಷ್ಟಿಗೆ ರೌದ್ರಮುಂ! (೫೨೨)
- ದೂರಮಿರದಿನ್ ಸುಗತಿ! (೨೬೮)
- ಮಡಿದನಿಂದ್ರಜಿತು ಐಂದ್ರಾಸ್ತ್ರದಿಂ (೬೬೧)
- ನೀಂ ಮಹಚ್ಛಿಲ್ಪಿ ದಿಟಂ! (೩೭೨)
- ಶ್ರೀರಾಮ ರಾವಣ ಚಿತ್‌ತಪಸ್‌ಶ್ರೀ (೪೬೧)
- ದಶಾನನ ಸ್ವಪ್ನಸಿದ್ಧಿ (೩೩೦)
- ಅರಾವಣಂ ವಾ ಅರಾಮಂ ದಿಟಂ! (೫೦೦)
- ಸೆರೆ ಸಿಲ್ಕಿದನೊ ವೈರಿ! (೨೬೨)
- ದೈತ್ಯನೇರ್ದನ್ ಚೈತ್ಯಮಂಚಮಂ (೩೮೫)
- ರಯಗೆ ಕರೆದೊಯ್, ಓ ಅಗ್ನಿ! (೬೦೮)
- ತಪಸ್ಸಿದ್ಧಿ (೪೫೮)
- ಅಭಿಷೇಕ ವಿರಾಟ್ ದರ್ಶನಂ (೨೩೮)