ವಿಶ್ವ ರಂಗಭೂಮಿ ದಿನ

ರಂಗಭೂಮಿ ಚಟುವಟಿಕೆ ನಿರತರಿಗೂ ಒಂದು ಸ್ಮರಣೀಯ ದಿನ ಬೇಕು ಎನ್ನುವ ಕಾರಣಕ್ಕೆ 1962ರಿಂದ ವಿಶ್ವ ರಂಗಭೂಮಿ ದಿನವನ್ನು ಮಾರ್ಚ್ 27ರಂದು ಆಚರಿಸಿಕೊಂಡು ಬರಲಾಗುತ್ತಿದೆ.


ಪ್ಯಾರಿಸ್‌ನಲ್ಲಿ ಮುಖ್ಯ ಕಚೇರಿ ಹೊಂದಿರುವ ಅಂತರರಾಷ್ಟ್ರೀಯ ರಂಗಸಂಸ್ಥೆಯು ಪ್ರತಿವರ್ಷ ವಿಶ್ವದ ಯಾವುದಾದರೊಂದು ಭಾಷೆಯ ಹೆಸರಾಂತ ನಟ, ನಾಟಕಕಾರ, ನಿರ್ದೇಶಕ ಅಥವಾ ಸಂಘಟಕನಿಗೆ ಒಂದು ಸಂದೇಶ ಕೊಡುವಂತೆ ಕೇಳಿಕೊಂಡು ಅದನ್ನು ವಿಶ್ವದೆಲ್ಲೆಡೆ ಪಸರಿಸುತ್ತದೆ. ಕನ್ನಡಕ್ಕೂ ಒಮ್ಮೆ ಈ ಗೌರವ ಸಂದಿತ್ತು. ನಾಟಕಕಾರ ಗಿರೀಶ್ ಕಾರ್ನಾಡ್ ಅವರನ್ನು ‘ವಿಶ್ವರಂಗಭೂಮಿ ದಿನ’ದ ಸಂದೇಶ ನೀಡುವಂತೆ 2002ರಲ್ಲಿ ಕೇಳಿಕೊಳ್ಳಲಾಗಿತ್ತು. ಕಾರ್ನಾಡರು ಈಗ ಭಾರತೀಯ ಅಂತರರಾಷ್ಟ್ರೀಯ ಸಂಸ್ಥೆಯ ರಾಯಭಾರಿಯೂ ಆಗಿದ್ದಾರೆ. ವಿಶ್ವದ ನಾನಾ ಭಾಷೆಯ ರಂಗಕರ್ಮಿಗಳು ಅಂದು ಈ ಸಂದೇಶ ಓದಿ ನಾಟಕ ಪ್ರಯೋಗ ಇತ್ಯಾದಿ ಉತ್ಸವ ಆಚರಿಸುತ್ತಾರೆ. ನಮ್ಮ ನಾಡಿನಲ್ಲೂ ವಿವಿಧ ರಂಗ ಸಂಸ್ಥೆಗಳು ವಿಶೇಷ ರಂಗಪ್ರಯೋಗಗಳೊಂದಿಗೆ ಈ ವಿಶೇಷ ದಿನವನ್ನು ಸಂಭ್ರಮದಿಂದ ಆಚರಿಸುತ್ತಿವೆ.


೨೦೧೩ರ ವರ್ಷದ ರಂಗಭೂಮಿ ದಿನಕ್ಕೆ ಪ್ರಸಿದ್ಧ ನಾಟಕ ರಚನಕಾರ ನೊಬೆಲ್ ಪ್ರಶಸ್ತಿ ವಿಜೇತ ದರಿಯ ಫೋ ಅವರು ಸಂದೇಶ ನೀಡುವ ಗೌರವಕ್ಕೆ ಪಾತ್ರರಾಗಿದ್ದಾರೆ. ದರಿಯ ಫೋ ಅವರು ತಮ್ಮ ಈ ಸಂದೇಶದಲ್ಲಿ “ಹೆಚ್ಚು ಹೆಚ್ಚು ಯುವಜನತೆ ರಂಗ ಚಟುವಟಿಕೆಗಳಲ್ಲಿ ಪಾಲ್ಗೊಂಡು ಹೊಸ ಚಿಂತನೆಗಳ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸುವುದಕ್ಕೆ ಪೂರಕರಾಗಬೇಕಾಗಿದೆ” ಎಂದಿದ್ದಾರೆ.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.