ವಿಂಧ್ಯ ಪರ್ವತಗಳು

ವಿಂಧ್ಯ ಪರ್ವತಗಳು ಭಾರತದ ಪಶ್ಚಿಮ ಮತ್ತು ಮಧ್ಯಭಾಗದಲ್ಲಿನ ಪರ್ವತಶ್ರೇಣಿ. ಈ ಶ್ರೇಣಿಯು ಉತ್ತರಭಾರತದ ಸಿಂಧೂ-ಗಂಗಾ ಬಯಲನ್ನು ದಕ್ಷಿಣದ ದಖ್ಖನ್ ಪೀಠಭೂಮಿಯಿಂದ ಭೌಗೋಳಿಕವಾಗಿ ಪ್ರತ್ಯೇಕಿಸುತ್ತದೆ. ವಿಂಧ್ಯ ಪರ್ವತಗಳು ಪಶ್ಚಿಮದಲ್ಲಿ ಗುಜರಾತ್-ರಾಜಸ್ಥಾನ-ಮಧ್ಯ ಪ್ರದೇಶಗಳು ಸಂಧಿಸುವ ಸ್ಥಾನದಲ್ಲಿ ಆರಂಭವಾಗಿ ಪೂರ್ವಕ್ಕೆ ಹಬ್ಬಿ ಮಿರ್ಜಾಪುರದಲ್ಲಿ ಗಂಗಾ ನದಿಯ ಸಮೀಪದವರೆಗೆ ಹರಡಿವೆ. ವಿಂಧ್ಯಪರ್ವತಗಳ ಪಶ್ಚಿಮೋತ್ತರ ಭಾಗವು ಹೆಚ್ಚೂಕಡಿಮೆ ಪೂರ್ಣ ಒಣಪ್ರದೇಶವಾಗಿದ್ದು ಜನವಸತಿಗೆ ಅನುಕೂಲಕರವಾಗಿಲ್ಲ. ಪರ್ವತಗಳ ದಕ್ಷಿಣಭಾಗವು ನರ್ಮದಾ ನದಿಯ ಜಲಾನಯನ ಪ್ರದೇಶವಾಗಿದೆ. ಉತ್ತರದ ಭಾಗದಲ್ಲಿ ಗಂಗಾನದಿಯ ಉಪನದಿಗಳಾದ ಕಾಳಿ ಸಿಂಧಿ, ಪಾರ್ಬತಿ, ಬೇಟ್ವಾ ಮತ್ತು ಕೇನ್ ನದಿಗಳು ಹರಿಯುತ್ತವೆ. ವಿಂಧ್ಯ ಪರ್ವತಗಳ ಪೂರ್ವ ಅಂಚಿನಲ್ಲಿ ಸೋನ್ ನದಿಯು ಹರಿಯುತ್ತದೆ. ವಿಂಧ್ಯ ಪರ್ವತಗಳ ಮಧ್ಯಭಾಗದ ಉತ್ತರಕ್ಕಿರುವ ಪ್ರದೇಶವನ್ನು ವಿಂಧ್ಯ ಪೀಠಭೂಮಿ ಎಂದು ಕರೆಯಲಾಗುತ್ತದೆ. ಮಧ್ಯ ಪ್ರದೇಶದ ಮುಖ್ಯ ನಗರಗಳಾದ ಭೋಪಾಲ್ ಮತ್ತು ಇಂದೋರ್ ನಗರಗಳು ಈ ಪೀಠಭೂಮಿಯಲ್ಲಿವೆ.

ವಿಂಧ್ಯ ಪರ್ವತಗಳ ಒಂದು ನೋಟ
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.