ರೇಖಾಗಣಿತ

ರೇಖಾಗಣಿತ ಮಾನವನಿಗೆ ಗೊತ್ತಿರುವ ಅತ್ಯಂತ ಹಳೆಯ ಶಾಸ್ತ್ರಗಳಲ್ಲೊಂದು. ಇದು ವಸ್ತುಗಳ ಆಕಾರ ಮತ್ತು ಅಳತೆಗೆ ಸಂಬಂಧಪಟ್ಟ ಶಾಸ್ತ್ರ. ರೇಖಾಗಣಿತ ಹುಟ್ಟಿದ್ದು ಹೇಗೆಂದು ಅದರ ಇನ್ನೊಂದು ಹೆಸರು ಭೂಮಿತಿ ಹೇಳುತ್ತದೆ. ಭೂಮಿಯ ಉದ್ದ, ಅಗಲಗಳನ್ನು, ವಿಸ್ತೀರ್ಣವನ್ನು ಅಳೆಯಲು ಮೊದಲು ಮಾಡಿದ ಈ ಗಣಿತದ ವಿಭಾಗ ಇಂದು ಸಮತಲ, ಘನಾಕೃತಿಗಳ ಗುಣಲಕ್ಷಣಗಳನ್ನು ಅವುಗಳ ನಡುವೆ ಇರುವ ಸಂಬಂಧಗಳನ್ನು ವಿವರಿಸುವುದಲ್ಲದೇ ಅವಕಾಶಕ್ಕೆ ಸಂಬಂಧಪಟ್ಟ ವಿಶಯಗಳನ್ನೂ ಅರ್ಥಮಾಡಿಕೊಳ್ಳಲು, ಉತ್ತರಿಸಲು ಸಹಾಯಮಾಡುತ್ತದೆ.

ರೇಖಾಗಣಿತದ ತವರು ಗ್ರೀಸ್‍. ಇದನ್ನು ಬೆಳೆಸಿದವರು ಗ್ರೀಕರು ಎನ್ನುವುದು ಜನಜನಿತ ಮಾತಾದರೂ, ಭಾರತೀಯರೂ ಈ ಶಾಸ್ತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಪೈಥಾಗೋರಸ್‌ನ ಪ್ರಮೇಯವನ್ನು ಅವನಿಗೂ ಮೊದಲು ವ್ಯಾಖ್ಯಾನಿಸಿದ ಬೋಧಾಯನ, ಪೈ ಒಂದು ಅವಿಭಾಜ್ಯ ಸಂಖ್ಯೆ ಎಂದು ಹೇಳಿದ ಆರ್ಯಭಟ, ಹಾಗೂ ಪೈಥಾಗೋರಸ್ಸನ ಪ್ರಮೇಯವನ್ನು ಸರ್ವಸಮ ತ್ರಿಭುಜಗಳ ಸಹಾಯದಿಂದ ಪಾಶ್ಚಾತ್ಯರಿಗಿಂತ ಸುಮಾರು ೫೦೦ ವರ್ಷ ಮೊದಲು ಸಾಧಿಸಿದ ಭಾಸ್ಕರಾಚಾರ್ಯರನ್ನು ಇಲ್ಲಿ ನೆನೆಯಬಹುದು.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.