ಮೆಂಫಿಸ್

ಮೆಂಫಿಸ್ - ಪ್ರಾಚೀನ ಈಜಿಪ್ಟಿನ ರಾಜಧಾನಿ ಎನಿಸಿದ್ದ ಒಂದು ನಗರ.

ಇತಿಹಾಸ

ಬೈಬಲ್ಲಿನ ಹಳೆಯ ಒಡಂಬಡಿಕೆಯಲ್ಲಿ ಹಲವು ಸಲ ಇದು ಉಲ್ಲೇಖಗೊಂಡಿದೆ. ಕೈರೋ ನಗರಕ್ಕೆ ಸುಮಾರು 23 ಕಿಮೀ ದಕ್ಷಿಣದಲ್ಲಿ ನೈಲ್ ನದಿಯ ಪಶ್ಚಿಮ ತೀರದಲ್ಲಿರುವ ಈ ನಗರ ಪ್‍ಟಾ ದೇವತೆಯ ಆರಾಧನೆಯ ಪ್ರಮುಖ ಕೇಂದ್ರವಾಗಿತ್ತು. ಮೀನೀಸ್ (ಕ್ರಿ. ಪೂ. 3200) ಎಂಬ ದೊರೆ ಇದನ್ನು ಮೇಲಣ ಮತ್ತು ಕೆಳಗಣ ಈಜಿಪ್ಟಿನ ಸಂಯುಕ್ತ ರಾಜ್ಯಗಳ ರಾಜಧಾನಿಯಾಗಿ ಮಾಡಿದಾಗ ಇದರ ಬಹುಮುಖ ಬೆಳೆವಣಿಗೆ ಆರಂಭವಾಯಿತು. ಕ್ರಿ.ಪೂ. 1570ರಲ್ಲಿ ಈಜಿಪ್ಟಿನಲ್ಲಿ ನವಸಾಮ್ರಾಜ್ಯ (ನ್ಯೂ ಎಂಪೈರ್) ಸ್ಥಾಪನೆಯಾಗುವ ತನಕ ಮೆಂಫಿಸ್ ಈಜಿಪ್ಟಿನ ಅತಿದೊಡ್ಡ ನಗರವಾಗಿ ಉಳಿದಿತ್ತು. ಆಮನ್ ದೇವತಾರಾಧನೆ ಪ್ರಬಲವಾಗಿ ತೀಬ್ಸ್‍ನಗರಕ್ಕೆ ಪ್ರಾಧಾನ್ಯ ಬಂದಾಗ ಮೆಂಫಿಸ್ ಬಹು ಶೀಘ್ರವಾಗಿ ಅವನತಿ ಹೊಂದಿತು; ನೈಲ್ ನದಿಯ ಇನ್ನೊಂದು ತೀರದಲ್ಲಿ ಪುಸ್ತಾತ್ ಎಂಬ ಅರೇಬಿಕ್ ನಗರದ ಉದಯದಿಂದಾಗಿ ಮೆಂಫಿಸ್‍ನ ಅವನತಿ ಇನ್ನಷ್ಟು ವೇಗವಾಗಿ ಆಯಿತು. ಪುಸ್ತಾತ್ ಹಾಗೂ ಕೈರೋ ನಗರಗಳ ನಿರ್ಮಾಣಕ್ಕೆ ಮೆಂಫಿಸ್ ಅವಶೇಷಗಳು ಕಲ್ಲುಗಣಿಗಳಾಗಿ ಪರಿಣಮಿಸಿದವು. ಹೀಗಾಗಿ ಮೆಂಫಿಸ್‍ನಲ್ಲಿ ಕೆಲವು ಕಲ್ಲು ರಾಶಿಯ ಗುಡ್ಡಗಳಷ್ಟೇ ಉಳಿದುಕೊಂಡಿವೆ; ಇವುಗಳಿಂದ ನಗರದ ಸ್ಥಿತಿ, ಅರಮನೆ ಮತ್ತು ದೇಗುಲಗಳು, ಆ್ಯಪಿಸ್‍ನ ವಾಸಸ್ಥಾನಗಳನ್ನು ಗುರುತಿಸಲು ಸಾಧ್ಯವಾಗಿದೆ. ಆದರೆ ಇಲ್ಲಿಯ ಸಕ್ಕಾರಾದ ಬೃಹತ್ ಗೋರಿಯೊಂದನ್ನು, ಗಾಳಿಗೆ ಹಾರಿಬಂದು ಸೇರಿದ ಮರಳರಾಶಿ ರಕ್ಷಿಸಿತು; ಈ ಗೋರಿ ಗೀಜಾದಿಂದ ದಶುರ್‍ವರೆಗೆ ಸುಮಾರು 32ಕಿಮೀ ದೂರ ಹಬ್ಬಿದ ಪಿರಮಿಡ್ ಹಾಗೂ ಗೋರಿಗಳ ಶ್ರೇಣಿಯ ಒಂದು ಭಾಗವಾಗಿದೆ.

ಮುಖ್ಯ ಸ್ಮಾರಕಗಳು

1861ರಲ್ಲಿ ಎ.ಎಫ್.ಎಫ್. ಮೆರಿಯಟ್ ಕಂಡುಹಿಡಿದ ಆ್ಯಪಿಸ್‍ನ ಸಮಾಧಿ ಗುಹೆ. 1905ರಲ್ಲಿ ಜೆ.ಇ.ಕ್ವಿಬೆಲ್ ಪತ್ತೆ ಮಾಡಿದ ಸೇಂಟ್ ಜೆರೆಮಿಯಸ್ ಕಾಪ್ಯರ್ ಕ್ರೈಸ್ತ ಸಂನ್ಯಾಸಿ ಮಠ-ಇವು ಇಲ್ಲಿಯ ಸ್ಮಾರಕಗಳಲ್ಲಿ ಮುಖ್ಯವಾದವು. ಈ ಎರಡನೆಯ ರಚನೆಯಲ್ಲಿ ಕೆಲವು ಗಮನಾರ್ಹ ಭಿತ್ತಿಚಿತ್ರ ಹಾಗೂ ಶಿಲ್ಪಗಳಿವೆ. ಗ್ರೀಕ್ ಕಲಾಶೈಲಿಯ ಮಣ್ಣಿನ ಪ್ರತಿಮಾ ಶಿರಗಳನ್ನು ಇಲ್ಲಿ ಸರ್ ಫ್ಲಿಂಡರ್ಸ್ ಪೆಟ್ರಿ ಕಂಡು ಹಿಡಿದರು. ಇವು ಪರ್ಷಿಯನ್ ಆಳ್ವಿಕೆಯ ಕಾಲದಿಂದ ಟಾಲೆವಿಯ ಕಾಲದ ಅವಧಿಗೆ ಸೇರಿದವು.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.