ಮೂರನೆಯ ಪಾಣಿಪತ್ ಯುದ್ಧ

ಮೂರನೆಯ ಪಾಣಿಪತ್ ಯುದ್ಧ ೧೭೬೧ಜನವರಿ ೧೪ರಂದು ಇಂದಿನ ಹರ್ಯಾಣದಲ್ಲಿರುವ ಪಾಣಿಪತ್ನಲ್ಲಿ (29.39° N 76.97° E) ಮರಾಠ ಸಾಮ್ರಾಜ್ಯ ಮತ್ತು ಅಹ್ಮದ್ ಶಾಹ್ ದುರ್ರಾನಿ (ಅಹ್ಮದ್ ಶಾಹ್ ಅಬ್ದಾಲಿ ಎಂದೂ ಕೂಡ ಕರೆಯಲಾಗುತ್ತದೆ) ನೇತೃತ್ವದ ಪಾಶ್ತುನ್ ಜನರ ಸೇನೆಯ ಮಧ್ಯೆ ನಡೆದ ಯುದ್ಧ. ಇದು ಪಾಣಿಪತ್ ಅಲ್ಲಿ ನಡೆದ ಮೂರನೆಯ ಯುದ್ಧ. ಈ ಯುದ್ಧದಲ್ಲಿ ಫ್ರೆಂಚರಿಂದ ಮದ್ದು ಗುಂಡು ಮತ್ತಿ ತರಬೇತಿ ಗಳಿಸಿದ್ದ ಮರಾಠರಿಗೂ, ಅಹಮದ್ ಶಾ ಅಬ್ದಾಲಿಯ ಸಬಲ ಕುದುರೆ ಕಾಳಗ ನಿಪುಣರ ಮಧ್ಯೆ ಮುಖಾಮುಖಿಯಾಯಿತು.

ಮೂರನೆಯ ಪಾಣಿಪತ್ ಯುದ್ಧ
Part of ಮರಾಠ ಸಾಮ್ರಾಜ್ಯ, ದುರ್ರಾನಿ ಸಾಮ್ರಾಜ್ಯ
ಕಾಲ: ಜನವರಿ ೧೪, ೧೭೬೧
ಸ್ಥಳ: ಪಾಣಿಪತ್, ಇಂದಿನ ಹರ್ಯಾಣ ರಾಜ್ಯ
ಪರಿಣಾಮ: ಅಫ್ಘಾನ್ ಸೇನೆಯ ವಿಜಯ. ಮರಾಠರಿಂದ ಪಂಜಾಬ್ ಪ್ರದೇಶದ ತ್ಯಜ್ಯ.
ಕಾರಣ(ಗಳು): ಮರಾಠರಿಂದ ಪಂಜಾಬ್ ಪ್ರದೇಶದ ಗಳಿಕೆ.
ಪ್ರದೇಶಗಳ ಕೈಬದಲು: ಉತ್ತರ ಭಾರತ
ಕದನಕಾರರು
ಮರಾಠ ಸಾಮ್ರಾಜ್ಯ ದುರ್ರಾನಿ ಸಾಮ್ರಾಜ್ಯ (ಅಫ್ಘಾನ್ ಸಾಮ್ರಾಜ್ಯ)
ಸೇನಾಧಿಪತಿಗಳು
ಸದಾಶಿವರಾವ್ ಭಾಉ, ಇಬ್ರಾಹಿಮ್ ಖಾನ್ ಗರ್ದಿ, ಜನೋಕ್ಜಿ ಶಿಂಡೆ, ಮಲ್ಹರ್ ರಾವ್ ಹೋಳ್ಕರ್, ಸರ್ದಾರ್ ಪುರಂದರೆ, ಸರ್ದಾರ್ ವಿನ್ಚುರ್ಕರ್ ಅಹ್ಮದ್ ಶಾಹ್ ದುರ್ರಾನಿ,
ನಜೀಬ್-ಉದ್-ದೌಲ,
ಶೂಜ-ಉದ್-ದೌಲ
ಬಲ
೪೦,೦೦೦ ಕುದುರೆ ಸವಾರರು, ೨೦೦ ತೋಪುಗಳು, ೧೫,೦೦೦ ಪಾದತಿಗಳು, ೧೫,೦೦೦ ಪಿಂದರಿಗಳು, ಇತ್ಯಾದಿ. ೪೨,೦೦೦ ಕುದುರೆ ಸವಾರರು, ೧೨೦-೧೩೦ ತೋಪುಗಳು, ೩೮,೦೦೦ ಪಾದತಿಗಳು, ಇತ್ಯಾದಿ.
ಮೃತರು ಮತ್ತು ಗಾಯಾಳುಗಳು
೩೫,೦೦೦ ಕಾಳಗದಲ್ಲಿ. ಸುಮಾರು ೧೦,೦೦೦ ಮುಂದಿನ ದಿನದ ನರಹತ್ಯೆಯಲ್ಲಿ. ೩೦,೦೦೦ದಿಂದ ೪೦,೦೦೦

ಮುಘಲ ಸಾಮ್ರಾಜ್ಯ ಶಿಥಿಲವಾಗುತ್ತಿರುವುದರ ಲಾಭ ಪಡೆದ ಮರಾಠರ ಒಕ್ಕೂಟವು ತನ್ನ ರಾಜ್ಯವನ್ನು ವಿಸ್ತರಿಸತೊಡಗಿತು. ಇದರಿಂದ ಅಸಮಾಧಾನಗೊಂಡವರಲ್ಲಿ ಅಹಮದ್ ಶಾ ಅಬ್ದಾಲಿಯೂ ಒಬ್ಬನಾಗಿದ್ದ. ೧೭೫೯ರಲ್ಲಿ ಅಫ್ಘಾನಿಸ್ತಾನದ ಪಶ್ತೂನ್ ಜನಗಳ ಸೈನ್ಯವನ್ನು ಕಟ್ಟಿ , ಮರಾಠರ ಸಣ್ಣ ಪುಟ್ಟ ಸೈನ್ಯಗಳ ಮೇಲೆ ವಿಜಯ ಸಾಧಿಸಿದ. ಇದರಿಂದ ಕುಪಿತರಾದ ಮರಾಠರು ಸದಾಶಿವರಾವ್ ಭಾವುವಿನ ಮುಖಂಡತ್ವದಲ್ಲಿ ೧೦೦,೦೦೦ ಜನರ ಸೈನ್ಯದೊಂದಿಗೆ ದೆಹಲಿಗೆ ದಾಳಿ ಮಾಡಿ ನಗರವನ್ನು ಹಾಳುಗೆಡವಿದರು. ಇದರ ನಂತರ ಕರ್ನಾಲ್ ಮತ್ತು ಕುಂಜುಪುರಗಳ ಯಮುನಾ ನದಿಯ ದಂಡೆಯ ಮೇಲೆ ಮರಾಠರಿಗೂ ಅಹಮದ್ ಶಾಹನಿಗೂ ಸಣ್ಣಪುಟ್ಟ ತಿಕ್ಕಾಟಗಳಾಗಿ, ಇದೇ ಮುಂದೆ ಮರಾಠರಿಗೆ ಎರಡು ತಿಂಗಳು ದಿಗ್ಬಂಧನದಲ್ಲಿ ಕೊನೆಯಾಯಿತು.

ಯುದ್ಧ ನಡೆದ ನಿರ್ದಿಷ್ಟ ಜಾಗದ ಬಗ್ಯೆ ವಿದ್ವಾಂಸರಲ್ಲಿ ಒಮ್ಮತವಿಲ್ಲದೆಯೇ ಹೋದರೂ, ಬಹುತೇಕ ಅಭಿಪ್ರಾಯಗಳ ಪ್ರಕಾರ ಇಂದಿನ ಕಾಲಾ ಆಂಬ್ ಮತ್ತು ಸನೌಲಿ ರಸ್ತೆ ಹತ್ತಿರದಲ್ಲೆಲ್ಲೋ ನಡೆದಿರಬೇಕು. ಅನೇಕ ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ೧೨೫,೦೦೦ ಸೈನಿಕರು ಪಾಲ್ಗೊಂಡಿದ್ದರು. ಎರಡೂ ಪಕ್ಷಗಳಲ್ಲಿ ಲಾಭ ನಷ್ಟಗಳಿದ್ದವು. ಮರಾಠರ ಅನೇಕ ತುಕಡಿಗಳನ್ನು ಧ್ವಂಸ ಮಾಡಿದ ಅಬ್ದಾಳಿಯ ಸೈನ್ಯ ವಿಜಯಶಾಲಿಯಾಯಿತು. ಸತ್ತವರ ಸಂಖ್ಯೆಯ ಬಗ್ಯೆ ಭಿನ್ನಾಭಿಪ್ರಾಯಗಳಿದ್ದರೂ, ೬೦,೦೦೦-೭೦,೦೦೦ ಜನ ಸತ್ತಿರಬೇಕು ಎಂದು ಅಂದಾಜಿದೆ. ಗಾಯಗೊಂಡವರ ಮತ್ತು ಸೆರೆಸಿಕ್ಕವರ ಸಂಖ್ಯೆಯಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಸದಾಶಿವರಾವರಾವ್ ಭಾವು ಈ ಯುದ್ಧದಲ್ಲಿ ಮಡಿದನು. ಇತರ ಅನೇಕ ಮರಾಠಾ ಸೇನಾಧಿಕಾರಿಗಳನ್ನು ಚಿತ್ರಹಿಂಸೆ ಕೊಟ್ಟು ಕೊಲ್ಲಲಾಯಿತು. ಈ ಯುದ್ಧದ ಅತ್ಯಂತ ಮಹತ್ವದ ಪರಿಣಾಮವೆಂದರೆ, ಇದರಿಂದ ಮರಾಠರ ಉತ್ತರ ಭಾರತದತ್ತ ರಾಜ್ಯ ವಿಸ್ತಾರ ನಿಂತು ಹೋಯಿತು.

ಹಿನ್ನೆಲೆ

೧೭೦೭ರಲ್ಲಿ ಔರಂಗಜೇಬನ ಮರಣದ ನಂತರ ಮುಘಲ್ ಸಾಮ್ರಾಜ್ಯ ಅವನತಿಯ ಹಾದಿ ಹಿಡಿದಿತ್ತು. ೧೭೩೯ರಲ್ಲಿ ನಾದಿರ್ ಶಹಾನ ಭಾರತದ ಮೇಲಿನ ಆಕ್ರಮಣದಿಂದ ಈ ಅವನತಿ ಇನ್ನೂ ತೀವ್ರವಾಯಿತು. ದಕ್ಷಿಣದಲ್ಲಿ ಮರಾಠರ ಸತತ ದಂಗೆಗಳು, ಹೈದರಾಬಾದ್ ಮತ್ತು ಬಂಗಾಳ ಸೇರಿದಂತೆ ಅನೇಕ ಪ್ರಾಂತಗಳ ವಸ್ತುಶಃ ಸ್ವತಂತ್ರ ರಾಜ್ಯಭಾರ ಇವುಗಳು ಸಾಮ್ರಾಜ್ಯವನ್ನು ಇನ್ನೂ ಶಿಥಿಲಗೊಳಿಸಿದವು. ಔರಂಗಜೇಬ ತೀರಿಕೊಂಡ ಕೆಲವೇ ವರ್ಷಗಳಲ್ಲಿ ಮರಾಠರು ಅವನು ಗೆದ್ದಿದ್ದ ದಖ್ಖನಿನ ಎಲ್ಲಾ ಪ್ರದೇಶಗಳನ್ನು ಮರಳಿ ಗೆದ್ದದ್ದಲ್ಲದೆ, ಮಧ್ಯ ಮತ್ತು ಉತ್ತರ ಭಾರತದಲ್ಲಿ ಮುಘಲರ ಅಧೀನದಲ್ಲಿದ್ದ ಬಹುತೇಕ ಎಲ್ಲಾ ಪ್ರದೇಶಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ೧೭೬೧ರಲ್ಲಿ ಅವರ ಇನ್ನೂ ಉತ್ತರಕ್ಕೆ ಮತ್ತು ವಾಯುವ್ಯಕ್ಕೆ ಹಬ್ಬುವ ಮಹತ್ವಾಕಾಂಕ್ಷೆಗೆ, ಅಫ್ಘಾನಿಸ್ತಾನದಿಂದ ಬಂದ, ಕೆಲ ವರ್ಷಗಳಿಂದ ಪಂಜಾಬಿನ ಮೇಲೆ ಆಕ್ರಮಣ ಮಾಡುತ್ತಿದ್ದ, ಅಹಮದ್ ಶಾ ಅಬ್ದಾಲಿಯು ಅಡ್ಡಿಯಾದನು.

೧೭೦೭ರಿಂದ ೧೭೫೭ರ ಅವಧಿಯಲ್ಲಿ ಮರಾಠರು ಭಾರತದ ಗಣನೀಯ ಭಾಗವನ್ನು ತಮ್ಮ ತೆಕ್ಕೆಯಲ್ಲಿಟ್ಟುಕೊಂಡಿದ್ದರು. ೧೭೫೮ರಲ್ಲಿ, ಅವರು ದೆಹಲಿಯನ್ನು ಗೆದ್ದು, ಲಾಹೋರನ್ನು ಕೈವಶ ಮಾಡಿಕೊಂಡು, ಅಲ್ಲಿ ಆಡಳಿತಾಧಿಕಾರಿಯಾಗಿದ್ದ ಅಹಮದ್ ಶಾ ಅಬ್ದಾಲಿಯ ಮಗ , ತೈಮೂರ್ ಶಾ ದುರಾನಿಯನ್ನು, ಲಾಹೋರಿನಿಂದ ಓಡಿಸಿದರು. ಮರಾಠರ ರಾಜ್ಯ ವಿಸ್ತಾರದಲ್ಲಿ ಇದೊಂದು ಮಹತ್ವದ ಕಾಲಾವಧಿಯಾಗಿತ್ತು. ಅವರ ರಾಜ್ಯ ಸಿಂಧೂ ನದಿ, ಹಿಮಾಲಯ ಮತ್ತು ದಕ್ಷಿಣದಲ್ಲಿ ಉಪಖಂಡದ ಗಡಿಯವರೆಗೆ ಹಬ್ಬಿತ್ತು. ಮರಾಠರ ಅಧಿಪತಿ ಪೇಶ್ವೆಯು ತನ್ನ ಮಗ ವಿಶ್ವಾಸರಾವ್ ನನ್ನು ಮುಘಲರ ಸಿಂಹಾಸನದ ಮೇಲೆ ಕೂರಿಸುವ ಕನಸುಕಾಣುತ್ತಿದ್ದ. ದೆಹಲಿಯು ಹೆಸರಿಗೆ ಮಾತ್ರ ಮುಘಲರ ಅಂಕೆಯಲ್ಲಿ ಉಳಿದಿತ್ತು. ದೆಹಲಿ ಮತ್ತು ಪಂಜಾಬಿ ಮುಸ್ಲಿಮ್ ಧರ್ಮಗುರುಗಳು ಮತ್ತು ಬುದ್ಧಿಜೀವಿಗಳು ಈ ಬೆಳವಣಿಗೆಗಳಿಂದ ಕಳವಳಗೊಂಡು, ತಮ್ಮ ಸಹಾಯಕ್ಕೆ ಬರುವಂತೆ ಅಹಮದ್ ಶಾ ಅಬ್ದಾಲಿಗೆ ಮೊರೆಯಿಟ್ಟರು.

ಪೂರ್ವರಂಗ

ತನ್ನ ಮಗ ಮತ್ತು ಇತರ ಮಿತ್ರಪಕ್ಷಗಳಿಂದ ಮರಾಠರ ದಿಗ್ವಿಜಯಗಳ ಬಗ್ಯೆ ತಿಳಿದು ಕೋಪಗೊಂಡ ಅಬ್ದಾಲಿಯು ಮರಾಠರ ಪ್ರಗತಿಯನ್ನು ನಿಲ್ಲಿಸಬೇಕೆಂದು ನಿರ್ಣಯಿಸಿದನು. ೧೭೫೯ರಲ್ಲಿ ಅಫಘಾನಿಸ್ತಾನದ ಪಶ್ತೂನ್ ಬುಡಕಟ್ಟಿನವರ ಒಂದು ಹೊಸ ಸೈನ್ಯವನ್ನು ಕಟ್ಟಿದನು. ಆ ವರ್ಷದ ಕೊನೆಗಾಗಲೆ ಈ ಸೈನ್ಯವು ಲಾಹೋರ್‍ ಮತ್ತು ದೆಹಲಿಯನ್ನು ತಲುಪಿ ಅಲ್ಲಿಯ ಸಣ್ಣ ಪುಟ್ಟ ತುಕಡಿಗಳನ್ನು ಸೋಲಿಸಿದ್ದರು. ಔಧ್ ಸಂಸ್ಥಾನದ ನವಾಬ ಶುಜಾ ಉದ್ ದೌಲಾನ ಮನ ಒಲಿಸಿ ಅಬ್ದಾಲಿಯು ಅವನನ್ನು ತನ್ನ ಕಡೆಗೆ ಮಾಡಿಕೊಂಡನು.

ಅಬ್ದಾಲಿಯ ಹೊಸ ಸೈನ್ಯದ ಆಗಮನದ ಸುದ್ದಿ ಕೇಳಿದ ಮರಾಠರು ಇನ್ನೂ ದೊಡ್ಡ ಸೈನ್ಯವನ್ನು ಒಟ್ಟುಗೂಡಿಸಿ, ಸದಾಶಿವರಾವ್ ಭಾವು ನೇತೃತ್ವದಲ್ಲಿ, ಉತ್ತರದ ಕಡೆಗೆ ಹೊರಟರು. ಇತರ ಮರಾಠಾ ಸಂಸ್ಥಾನಗಳಾದ ಹೋಳ್ಕರ್‍, ಸಿಂಧಿಯಾ ಮತ್ತು ಗಾಯಕವಾಡ್, ಇತರ ಸಂಸ್ಥಾನಗಳಾದ ಬುಂದೇಲಖಂಡ, ರಜಪೂತರ ಮತ್ತು ಜಾಟರ ಸೈನ್ಯಗಳೂ ಇದರಲ್ಲಿ ಶಾಮೀಲಾಗಿದ್ದವು. ಸುಮಾರು ೧೦೦,೦೦೦ರಷ್ಟಿದ್ದ ಈ ಒಟ್ಟು ಸೈನ್ಯವು ದೆಹಲಿ ಮೇಲೆ ಡಿಸೆಂಬರ್‍ ೧೭೫೯ರಲ್ಲಿ ಮುತ್ತಿಗೆ ಹಾಕಿ, ಅಫಘನಿ ಕಾವಲುದಂಡನ್ನು ಸೋಲಿಸಿ ಆ ರಾಜಧಾನಿಯನ್ನು ವಶಕ್ಕೆ ತೆಗೆದುಕೊಂಡಿತು.

ಭಾವು ಈಗಾಗಲೇ ಸಾಕಷ್ಟು ನಿರ್ಜನವಾಗಿದ್ದ ದೆಹಲಿಯನ್ನು ಕೊಳ್ಳೆ ಹೊಡೆಯಲು ಆಜ್ಞೆ ಮಾಡಿದನು. ಮುಘಲ್ ಸಿಂಹಾಸನದ ಮೇಲೆ ತನ್ನ ಸೋದರ ಸಂಬಂಧಿ . ಪೇಶ್ವೆಯ ಮಗ, ವಿಶ್ವಾಸ ರಾವನನ್ನು ಕೂರಿಸುವ ಹಂಚಿಕೆಯೂ ಅವನಿಗಿತ್ತು ಎನ್ನಲಾಗಿದೆ. ಸಿಖ್ಖರು ಮತ್ತು ಬಹುತೇಕ ಜಾಟರು, ತಮ್ಮೆಲ್ಲ ಸಾಮಗ್ರಿ ಸರಬರಾಜಿನ ದಾರಿಯಲ್ಲಿದ್ದ ದೆಹಲಿಯನ್ನು ಕೊಳ್ಳೆಹೊಡೆಯಲು ನಿರಾಕರಿಸಿ ಮರಾಠರಿಂದ ದೂರವಾದರು. ಇದು ಮುಂದೆ ಮಹತ್ವದ ಪರಿಣಾಮವನ್ನುಂಟು ಮಾಡಿತು.

ಪಾಣಿಪತ್ತಿನ ಮುತ್ತಿಗೆ

ಮುತ್ತಿಗೆಯ ಮುಂದಿನ ಎರಡು ತಿಂಗಳುಗಳಲ್ಲಿ ಎರಡೂ ಪಕ್ಷಗಳ ನಡುವೆ ಸತತ ಹೊಡೆದಾಟಗಳು ನಡೆದವು. ಯಾವುದೇ ಪಕ್ಷಕ್ಕೆ ಸ್ಪಷ್ಟ ಗೆಲುವು ಸಿಗಲಿಲ್ಲ. ಅಬ್ದಾಲಿ ಮಾಡಿದ ಸಂಧಾನದ ಪ್ರಸ್ತಾಪಕ್ಕೆ ಸದಾಶಿವರಾಯನು ಸಮ್ಮತಿಯಿತ್ತನು. ಆದರೆ ಅಬ್ದಾಲಿಯ ಸಹಚರ ನಜೀಬ್ ಖಾನನು ಧಾರ್ಮಿಕ ಆಧಾರದ ಮೇಲೆ ಈ ಸಂಧಾನವನ್ನು ವಿರೋಧಿಸಿದ್ದಲ್ಲದೆ ಮರಾಠರು ಈ ಸಂಧಾನದ ಕರಾರುಗಳನ್ನು ಪಾಲಿಸುವುದರ ಬಗ್ಗೆಯೂ ಸಂದೇಹ ವ್ಯಕ್ತಪಡಿಸಿದನು.

ಸಾಮಾನು ಸರಬರಾಜು ನಿಲ್ಲದಂತೆ ನೋಡಿಕೊಳ್ಳಲು ಮರಾಠರಿಗೆ ಹೆಚ್ಚು ಹೆಚ್ಚು ಕಷ್ಟವಾದಂತೆ ಅವರ ಹತಾಶೆಯೂ ಹೆಚ್ಚಾಗುತ್ತಾ ಹೋಯಿತು. ಸುತ್ತಮುತ್ತಲ ಊರುಗಳವರನ್ನೂ ಸಾಮಾನುಗಳಿಗಾಗಿ ಲೂಟಿ ಮಾಡಿದ್ದ ಕಾರಣ ಸ್ಥಳೀಯರೂ ಅವರ ವಿರುದ್ಧವಾಗಿದ್ದರು.

ಈ ಪರಿಸ್ಥಿತಿಯಲ್ಲಿ ಸದಾಶಿವರಾಯನು ಸಂಧಾನಕ್ಕೆ ತಯಾರಿದ್ದರೂ, ಯುದ್ಧ ಮುಂದುವರಿಸುವಂತೆಯೂ, ಸಾಮಾನುಗಳ ಸರಬರಾಜು ಸದ್ಯದಲ್ಲಿಯೇ ಆಗುವುದಾಗಿಯೂ ಅವನಿಗೆ ಆದೇಶ ಬಂದಿತು. ಸರಬರಾಜಿಲ್ಲದೆ ಪರಿಸ್ಥಿತಿ ಬಿಗಡಾಯಿಸಲು, ಸದಾಶಿವರಾಯನು ಮುತ್ತಿಗೆಯನ್ನು ಮುರಿಯಲು ನಿರ್ಧಾರ ಮಾಡಿದನು.

ಯುದ್ಧ

ಯುದ್ಧದ ಮೊದಮೊದಲಲ್ಲಿ ಮರಾಠರಿಗೆ ಮುನ್ನಡೆಯಾಯಿತು. ಆದರೆ, ಮೊದಲೇ ಸರಿಯಾದ ಆಹಾರವಿಲ್ಲದೆ ಪರಿತಪಿಸುತ್ತಿದ್ದ ಸೈನ್ಯದ ಕುದುರೆಗಳು, ಶೀಘ್ರದಲ್ಲಿಯೇ ಇಷ್ಟು ಮುನ್ನಡೆ ( ಸುಮಾರು ಎರಡು ಕಿ.ಮೀ) ಸಾಧನೆಯಿಂದ ಸಂಪೂರ್ಣ ದಣಿದವು. ಕೆಲವು ಕುದುರೆಗಳು ಇದ್ದಲ್ಲೇ ಕುಸಿದವು. ಆದರೂ ಮರಾಠರು ಮುನ್ನಡೆದು ಇನ್ನೇನು ಗೆಲುವು ಕೈವಶವಾಗುವುದರಲ್ಲಿತ್ತು.

ಈ ವೇಳೆಗೆ ಅಬ್ದಾಲಿಯು ತನ್ನ ೧೫೦೦೦ದಷ್ಟು ದೊಡ್ಡದಿದ್ದ ವಿಶೇಷ ದಳಕ್ಕೆ ಕರೆಕಳುಹಿಸಿದನು. ಆ ಸೈನ್ಯದ ಹಿಂದೆ ಒಂಟೆಗಳ ಮೇಲೆ ತೋಫುಗಳನ್ನು ನಿಯೋಜಿಸಿದನು. ಈ ಒಂಟೆಗಳ ಮೇಲಿನ ತೋಫುಗಳು , ತಮ್ಮದೇ ಸೈನಿಕರತಲೆಯ ಮೇಲೆಹಾದುಹೋಗುವಂತೆ ಫಿರಂಗಿಗಳನ್ನು ಶತ್ರುಗಳ ಮೇಲೆ ಎಸೆಯಬಲ್ಲವರಾಗಿದ್ದವು. ಈ ಫಿರಂಗಿಗಳ ಬಲವನ್ನು ಎದುರಿಸಲಾಗದೇ ಮರಾಠಾ ಸೈನ್ಯವು ತತ್ರಿಸಿತು. ಸುಮಾರು ಏಳು ಸಾವಿರ ಮರಾಠಾ ಸೈನಿಕರು ಸಾವನ್ನಪ್ಪಿದರು. ಆ ದಿನ ಸಂಜೆಯ ವೇಳೆಗಾಗಲೇ ಮರಾಠಾ ಪದಾತಿಗಳು ಸೋಲೊಪ್ಪಿಕೊಳ್ಳುವ ಹಂತ ಮುಟ್ಟಿದರು.

ಒಳಗಿನಿಂದ ಹೋರಾಟ

ಕುಂಜಪುರ ಯುದ್ಧದ ವೇಳೆಯಲ್ಲಿ ಮರಾಠರು ಕೆಲ ಅಫಘಾನಿ ಸೈನಿಕರನ್ನು ಸೆರೆ ಹಿಡಿದು ತಂದಿದ್ದರು. ಆವರೆಲ್ಲಾ ಈಗ ಬಂಡೆದ್ದರು. ಶತ್ರುವು ಹಿಂದಿನಿಂದ ಮೇಲೆಬಿದ್ದಿದ್ದಾನೆ ಎಂದು ಗಾಬರಿಯಾದ ಮರಾಠರಿಗೆ ಇದರಿಂದ ವಿಪರೀತ ಗೊಂದಲವಾಯಿತು.

ಆನೆಯ ಮೇಲಿನಿಂದ ಸೈನ್ಯವನ್ನು ನಿರ್ದೇಶಿಸುತ್ತಿದ್ದ ಸದಾಶಿವರಾಯನು ತನ್ನ ಸೈನ್ಯದ ಕಠಿಣ ಪರಿಸ್ಥಿತಿಯನ್ನು ನೋಡಿ ಆನೆಯಿಂದಿಳಿದು ತಾನೇ ಯುದ್ಧದ ಮುಂದಾಳತ್ವ ವಹಿಸಲು ಸಜ್ಜಾದನು. ಆದರೆ ಇದರ ಪರಿಣಾಮ ವಿರುದ್ಧವೇ ಆಯಿತು. ತಮ್ಮ ನಾಯಕ ಆನೆಯ ಮೇಲೆ ಕಾಣದಿದ್ದುದರಿಂದ ಎದೆಗುಂದಿದ ಮರಾಠಿ ಸೈನಿಕರು ಯುದ್ಧದಿಂದ ಪಲಾಯನ ಹೂಡತೊಡಗಿದರು. ಪ್ರಧಾನ ಮಂತ್ರಿ ನಾನಾಸಾಹೇಬನ ಮಗ ವಿಶ್ವಾಸರಾವ್ ಈಗಾಗಲೇ ಗುಂಡಿಗೆ ತುತ್ತಾಗಿ ಮರಣವನ್ನಪ್ಪಿದ್ದ. ಸದಾಶಿವರಾವ್ ಮತ್ತು ಅವನ ಸ್ವಾಮಿಭಕ್ತ ಅಂಗರಕ್ಷಕರು ಕೊನೆಯವರೆಗೂ ಹೋರಾಡಿದರು. ಆದರೂ ಮರಾಠಾ ಸೈನ್ಯ ಸೋಲಪ್ಪಿತು.

ಯುದ್ಧಾನಂತರ

ಅಫಘಾನಿ ಸೈನಿಕರು ಪಾಣಿಪತ್ ನಗರವನ್ನು ಹೊಕ್ಕು ಸಿಕ್ಕಸಿಕ್ಕ ಮರಾಠಿ ಸೈನಿಕರನ್ನು ಕೊಂದರು. ಯಾವುದೇ ಪ್ರತಿಭಟನೆ ತೋರಿದ ನಾಗರೀಕರಿಗೂ ಅದೇ ಗತಿಯಾಯಿತು. ಸುಮಾರು ೧೦,೦೦೦ ಸೈನಿಕರು ಮತ್ತು ಸಾಮಾನ್ಯರು ಜೀವ ತೆತ್ತಿರಬಹುದು ಎಂದು ಅಂದಾಜಿದೆ. ಅನೇಕ ಮರಾಠಿ ಹೆಣ್ಣುಮಕ್ಕಳು ಬಾವಿಗೆ ಹಾರಿ ಮಾನ ಉಳಿಸಿಕೊಂಡರು.

ಈ ಯುದ್ಧದಲ್ಲಿ ೩೫,೦೦೦ ಮರಾಠಾ ಸೈನಿಕರು ಯುದ್ಧಭೂಮಿಯಲ್ಲಿ ಮತ್ತು ೧೦,೦೦೦ ಯುದ್ಧಾನಂತರ ಸತ್ತರೆ, ಸುಮಾರು ೩೦,೦೦೦ದಿಂದ ೪೦,೦೦೦ ಅಫಘಾನಿ ಸೈನಿಕರು ಈ ಯುದ್ಧದಲ್ಲಿ ಮಡಿದರು.

ವಿಶ್ವಾಸರಾವ್ ಮತ್ತು ಸದಾಶಿವರಾವ್ ಇಬ್ಬರ ಮೃತಶರೀರಗಳನ್ನು ಅಬ್ದಾಲಿಯ ನಿರ್ದೇಶನದಂತೆ ಹಿಂದೂ ಪದ್ಧತಿಯಂತೆ ದಹನಮಾಡಲಾಯಿತು. ಸದಾಶಿವರಾಯನ ಹೆಂಡತಿ ಪಾರ್ವತೀಬಾಯಿಯು ಹೋಳ್ಕರರ ರಕ್ಷಣೆಯಲ್ಲಿ ಪುಣೆಗೆ ವಾಪಸು ಬಂದು ತಲುಪಿದಳು.

ಇದು ಯಾವುದರ ಅರಿವೂ ಇಲ್ಲದ ಪೇಶ್ವೆ ಬಾಜೀರಾಯನು ಸದಾಶಿವರಾಯನ ಸಹಾಯಕ್ಕೆಂದು ಮತ್ತಷ್ಟು ಸೈನ್ಯದೊಂದಿಗೆ ಹೊರಟು, ನರ್ಮದಾ ನದಿ ದಾಟುವಾಗ ಅವನಿಗೆ ಯುದ್ಧದ ದಾರುಣ ವಾರ್ತೆ ತಲುಪಿತು. ಪೇಶ್ವೆ ಈ ಸುದ್ದಿಯ ಅಘಾತದಿಂದ ಚೇತರಿಸಿಕೊಳ್ಳಲೇ ಇಲ್ಲ. ಪುಣೆಗೆ ಮರಳಿದ ಆತ ಅದೇ ವ್ಯಸನದಲ್ಲಿ ಪರ್ವತಿ ಗುಡ್ಡದ ದೇವಾಲಯವೊಂದರಲ್ಲಿ ಕೊನೆಯುಸಿರೆಳೆದನು.

ಈ ಯುದ್ಧದಿಂದ ಸಂಪೂರ್ಣ ಚೇತರಿಸಿಕೊಂಡ ಮರಾಠರು , ಭಾರತದ ಬಲಿಷ್ಠ ಮಿಲಿಟರಿ ಶಕ್ತಿಗಳಲ್ಲಿ ಒಂದಾಗಿ ಉಳಿದದ್ದಲ್ಲದೇ, ದೆಹಲಿಯನ್ನು ಎರಡು ದಶಕದಲ್ಲಿ ಮತ್ತೆ ಗೆಲ್ಲುವುದರಲ್ಲಿ ಸಫಲರಾದರು. ಆದರೆ ಪಾಣಿಪತ್ ಯುದ್ಧದ ನಂತರ ಐವತ್ತು ವರ್ಷಗಳಲ್ಲಿ ಮೂರು ಬಾರಿ ಬ್ರಿಟಿಷರೊಂದಿಗೆ ಯುದ್ಧಗಳಿಂದ ಹತಬಲರಾದರು.

ಯುದ್ಧದಲ್ಲಿ ವಿಜಯಿಯಾದ ಅಬ್ದಾಲಿಯು ಉತ್ತರ ಭಾರತದ ಅಪ್ರತಿಮ ನಾಯಕನೆನಿಸಿದ. ಆದರೆ, ಸ್ವಲ್ಪ ಕಾಲದಲ್ಲಿಯೇ ಒಳ ಜಗಳಗಳು ತಲೆಯೆತ್ತಿದವು. ಅದರ ಪರಿಣಾಮವಾಗಿ ಎರಡನೆಯ ಶಾ ಅಲಂನನ್ನು ದೊರೆಯಾಗಿ ಮಾಡಿ ಫರ್ಮಾನು ಹೊರಡಿಸಿ, ತಾನು ೫೦೦ ಆನೆಗಳು, ೧೫೦೦ ಒಂಟೆಗಳು, ೫೦೦೦೦ ಕುದುರೆಗಳು ಮತ್ತು ೨೨೦೦೦ ಹೆಂಗಸರು ಮಕ್ಕಳೊಂದಿಗೆ ಅಫಘಾನಿಸ್ತಾನಕ್ಕೆ ವಾಪಸಾದನು.

ಯುದ್ಧದ ಪಾಠಗಳು

ಒಂದೇ ದಿನದಲ್ಲಿ ಸತ್ತ ಅಪಾರ ಸೈನಿಕರುಗಳ ಸಂಖ್ಯೆ ಆಧುನಿಕ ಯುದ್ಧಗಳಲ್ಲಿಯೂ ಬಹುಶ: ಕಂಡುಬರುವುದಿಲ್ಲ.ಭಾರತ ಭೂಖಂಡದಲ್ಲಿ ಇಂಥಾ ಪ್ರಮಾಣದ ಮತ್ತೊಂದು ಸ್ಥಳೀಯರ ಹೋರಾಟ ಆದದ್ದು ೧೯೪೮ರಲ್ಲಿ ಪಾಕಿಸ್ತಾನದ ಉಗಮವಾದಾಗ ಮಾತ್ರ ಎನ್ನಬಹುದು.

ತಮ್ಮ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಅಫಘಾನರಿಗೆ ಸಹಾಯಹಸ್ತ ಚಾಚಿದ ಮುಘಲರು ತಮ್ಮ ಮೊದಲ ವೈಭವಕ್ಕೆ ಶಾಶ್ವತವಾಗಿ ಎಳ್ಳುನೀರು ಬಿಟ್ಟರು. ಅಲ್ಲಿಂದ ಮುಂದೆ ಬರಿಯ ನಾಮಮಾತ್ರದ ರಾಜಕೀಯಶಕ್ತಿಯಾಗಿ ಉಳಿದು, ೧೮೫೭ರಲ್ಲಿ ಬ್ರಿಟಿಷರು ಆಗಿನ ಮುಘಲ್ ರಾಜ ಬಹಾದೂರ್‍ ಶಾ ಜಾಫರನನ್ನು ಗಡೀಪಾರು ಮಾಡುವುದರೊಂದಿಗೆ ಆ ಸಾಮ್ರಾಜ್ಯದ ಅಂತ್ಯವಾಯಿತು.

ಹರ್ಯಾಣಾ ಸರಕಾರವು ಪಾಣಿಪತ್ ಪಟ್ಟಣದ ದಕ್ಷಿಣದಲ್ಲಿ , ಸದಾಶಿವರಾವ್ ನಿಂತು ಯುದ್ಧವನ್ನು ವೀಕ್ಷಿಸಿದ ಜಾಗದಲ್ಲಿ ಯುದ್ಧ ಸ್ಮಾರಕವನ್ನು ಕಟ್ಟಿಸಿದೆ.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.