ಮಂಡ್ಯ ದರ್ಶನ
ಮಂಡ್ಯ ಎಂದರೆ ಇಂಡಿಯಾ” ಎನ್ನುವ ಮಾತೊಂದಿದೆ. ಇಂಡಿಯಾದ ಅನೇಕ ವೈಶಿಷ್ಯಗಳು, ವೈವಿಧ್ಯಗಳು ಮಂಡ್ಯದಲ್ಲಿವೆ. ಹೇಳಿ ಕೇಳಿ ಇದು ಬಯಲು ಸೀಮೆ. ೧೯೩೯ಕ್ಕೆ ಮುಂಚೆ ಮಂಡ್ಯ ಮೈಸೂರು ಜಿಲ್ಲೆಗೆ ಸೇರಿತ್ತು. ನಾಲ್ವಡಿಯವರು ಮಂಡ್ಯವನ್ನು ಪ್ರತ್ಯೇಕ ಜಿಲ್ಲೆ ಮಾಡುವುದಕ್ಕೆ ಮುಂಚೆಯೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕನ್ನಂಬಾಡಿ ಎಂಬಲ್ಲಿ ಕೃಷ್ಣರಾಜ ಜಲಾಶಯ ನಿರ್ಮಿಸಿದರು. ಮಂಡ್ಯಕ್ಕೆ ನೀರುಣಿಸಿದರು. ಮೈಸೂರು ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಕಾರಣರಾದರು. ಸರ್.ಎಂ. ವಿಶ್ವೇಶ್ವರಯ್ಯನವರು ಎಂಜಿನಿಯರ್ ಆಗಿ, ದಿವಾನರಾಗಿ ಮೈಸೂರಿನ ನವಶಿಲ್ಪಿಯಾಗಿ ಕಂಗೊಳಿಸಿದರು. ಮಿರ್ಜಾಇಸ್ಮಾಯಿಲ್ ಅವರು ಜಿಲ್ಲೆಯನ್ನು ಸುಂದರಗೊಳಿಸಲು ನೆರವಾದರು. ಡಾ.ವೆಸ್ಲಿ ಸಿ.ಕೋರ್ಲ್ಮ ಜಿಲ್ಲೆಯ ಕಬ್ಬು ಬೆಳೆ-ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗೆ ಕಾರಣರಾದರು. ಮಂಡ್ಯಜಿಲ್ಲೆ ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿದೆ. ಉತ್ತರದಲ್ಲಿ ತುಮಕೂರು ದಕ್ಷಿಣ ಹಾಗೂ ನೈರುತ್ವದಲ್ಲಿ ಮೈಸೂರು, ಪೂರ್ವಕ್ಕೆ ರಾಮನಗರ, ವಾಯುವ್ಯಕ್ಕೆ ಹಾಸನ ಜಿಲ್ಲೆಗಳ ಗಡಿಗಳಿಂದ ಸುತ್ತುವರೆದಿದೆ. ಈ ಜಿಲ್ಲೆಯ ಒಟ್ಟು ವಿಸ್ತೀರ್ಣ ೪೯೫೮ ಚದರ ಕಿ.ಮೀ.ಗಳು ಅಂದರೆ ೧೯೨೪ ಚದರ ಮೈಲಿ. ಸಮುದ್ರಮಟ್ಟಕ್ಕಿಂತ ಸುಮಾರು ೭೬೨ರಿಂದ ೯೧೪ಮೀಟರ್ ಎತ್ತರಕ್ಕಿದೆ. ಮಂಡ್ಯಜಿಲ್ಲೆಯಲ್ಲಿ ಏಳು ತಾಲ್ಲೂಕುಗಳಿವೆ. ಅವು ಕೃಷ್ಣರಾಜಪೇಟೆ, ಮಂಡ್ಯ, ಮದ್ದೂರು, ಮಳವಳ್ಳಿ, ನಾಗಮಂಗಲ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳು. ಜಿಲ್ಲೆಯಲ್ಲಿ ಸುಮಾರು ಒಂದೂವರೆ ಸಾವಿರ ಹಳ್ಳಿಗಳಿದ್ದು ಪ್ರಮುಖ ಕಸುಬು ಬೇಸಾಯ.
ಪೌರಾಣಿಕ ಹಿನ್ನಲೆ :
ಈ ಪ್ರದೇಶ ದಂಡಕಾರಣ್ಯ, ಮೃಗಪಕ್ಷಿಗಳ ಆಶ್ರಯಧಾಮ, ಮಾಂಡವ್ಯ, ಕದಂಬ, ಅಗಸ್ತ್ಯ, ಗೌತಮ, ಭೃಗು, ಕಣ್ವ, ಲಂಬಕರ್ಣರ ತಪೋಭೂಮಿ, ಪವಿತ್ರತೀರ್ಥ ಕ್ಷೇತ್ರಗಳು ಇಲ್ಲಿವೆ. ಕಾವೇರಿ, ಹೇಮಾವತಿ, ಲೋಕಪಾವನಿ, ವೀರವೈಷ್ಣವಿ ಹಾಗೂ ಶಿಂಷಾ ಎಂಬ ಐದು ನದಿಗಳು ಹರಿಯುತ್ತವೆ.ವಿವಿಧ ಕಾಲಘಟ್ಟಗಳಲ್ಲಿ ಚೋಳರು, ಹೊಯ್ಸಳರು, ವಿಜಯನಗರದ ಅರಸರು, ಮೈಸೂರು ಒಡೆಯರ ಆಳ್ವಿಕೆಗೆ ಒಳಪಟ್ಟಿತ್ತು. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಮಂಡ್ಯಜಿಲ್ಲೆಗೆ ಸಂಬಂಧಿಸಿದಂತೆ ಒಂದು ಸಾವಿರಕ್ಕೂ ಹೆಚ್ಚು ಶಾಸನಗಳು ಲಭ್ಯವಾಗಿವೆ. ಗಗನಚುಕ್ಕಿ-ಭರಚುಕ್ಕಿ ಜಲಪಾತಗಳು ಇಲ್ಲಿವೆ. ಕೊಕ್ಕರೆಬೆಳ್ಳೂರು, ರಂಗನತಿಟ್ಟು, ಆದಿಚುಂಚನಗಿರಿ ನವಿಲು ಮುಂತಾದ ಪಕ್ಷಿಧಾಮಗಳು ಪ್ರವಾಸಿಗಳನ್ನು ಆಕರ್ಷಿಸುತ್ತಿವೆ. ವೀರಗಲ್ಲು-ಮಾಸ್ತಿಕಲ್ಲುಗಳ ಸಂಖ್ಯೆ ಗಣನೀಯವಾಗಿದೆ. ಇಂತಹ ಭವ್ಯ ಪರಂಪರೆಯ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಇತಿಹಾಸವನ್ನು ತಿಳಿಯಬೇಕಾದರೆ, ಏಳು ತಾಲ್ಲೂಕುಗಳ ಪ್ರತ್ಯೇಕ ಪರಿಚಯ ಮಾಡಿಕೊಳ್ಳುವುದು ಅಗತ್ಯ.