ಆರೋರಾ

ಆರೋರಾ ಧ್ರುವಪ್ರದೇಶಗಳಲ್ಲಿ ರಾತ್ರಿಯ ಹೊತ್ತು ಆಗಸದಲ್ಲಿ ಕಾಣಬರುವ ವರ್ಣರಂಜಿತ ಬೆಳಕಿನಾಟ. ಇದೊಂದು ನೈಸರ್ಗಿಕ ವಿದ್ಯಮಾನವಾಗಿದೆ. ಉತ್ತರಧ್ರುವ ಪ್ರದೇಶದಲ್ಲಿ ಕಾಣುವ ಇಂತಹ ಬಣ್ಣದ ಬೆಳಕಿನಾಟವನ್ನು ಆರೋರಾ ಬೋರಿಯಾಲಿಸ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಆರೋರಾ ಬೋರಿಯಾಲಿಸ್ ಹಸಿರು ಬಣ್ಣದ ಹೊಳಪಿನೊಂದಿಗೆ ಕೂಡಿರುತ್ತದೆ. ಕೆಲವೊಮ್ಮೆ ಕೆಂಪು ಬಣ್ಣವು ಸಹ ಇದರಲ್ಲಿರುವುದುಂಟು. ಮೊದಲನೋಟಕ್ಕೆ ಇದು ಬೇರಾವುದೋ ದಿಕ್ಕಿನಲ್ಲಿ ಜರಗುತ್ತಿರುವ ಸೂರ್ಯೋದಯದಂತೆ ಭಾಸವಾಗುವುದು. ಆರೋರಾ ಬೋರಿಯಾಲಿಸ್ ಅನ್ನು ನಾರ್ದರ್ನ್ ಲೈಟ್ಸ್ (ತೆಂಕಣ ಬೆಳಕು) ಎಂದು ಸಹ ಕರೆಯಲಾಗುತ್ತದೆ. ಆರೋರಾ ಬೋರಿಯಾಲಿಸ್ ಸೆಪ್ಟೆಂಬರ್ ನಿಂದ ಅಕ್ಟೋಬರ್ ವರೆಗೆ ಮತ್ತು ಮಾರ್ಚ್ ನಿಂದ ಎಪ್ರಿಲ್ ವರೆಗೆ ಘಟಿಸುತ್ತದೆ. ದಕ್ಷಿಣಧ್ರುವ ಪ್ರದೇಶದಲ್ಲಿ ಸಂಭವಿಸುವ ಇದೇ ರೀತಿಯ ವಿದ್ಯಮಾನವು ಆರೋರಾ ಆಸ್ಟ್ರಾಲಿಸ್ ಎಂದು ಹೆಸರಾಗಿದೆ.

ಅಲಾಸ್ಕಾದಲ್ಲಿ ಕಂಡ ಆರೋರಾ ಬೋರಿಯಾಲಿಸ್‌ನ ಸುಂದರ ನೋಟ
ಕೆನಡಾದ ಆಗಸದಲ್ಲಿ ಆರೋರಾ

ಆರೋರಾದ ಮೂಲ

ಆರೋರಾ ವಿದ್ಯಮಾನವನ್ನು ಈಗ ವೈಜ್ಞಾನಿಕವಾಗಿ ವಿವರಿಸಲಾಗಿದೆ. ಭೂಮಿವಾತಾವರಣದ ಮೇಲ್ಪದರದಲ್ಲಿರುವ ಪರಮಾಣುಗಳಿಗೆ ಕಾಂತಗೋಲ (ಮ್ಯಾಗ್ನೆಟೋಸ್ಫಿಯರ್)ದಲ್ಲಿನ ವಿದ್ಯುತ್ಪ್ರೇರಿತ ಕಣಗಳು ( + ಅಥವಾ - ಅಯಾನು ಢಿಕ್ಕಿ ಹೊಡೆದಾಗ ಆರೋರಾ ಉಂಟಾಗುತ್ತದೆ. ಈ ಕಣಗಳು ಗಂಟೆಗೆ ೩೦೦ ರಿಂದ ೧೨೦೦ ಕಿ.ಮೀ. ವೇಗದಲ್ಲಿ ಅಂತರಿಕ್ಷದತ್ತ ಸಾಗುತ್ತವೆ. ಕಾಂತಗೋಲದಲ್ಲಿನ ಇಂತಹ ಕಣಗಳು ದಟ್ಟೈಸಿದ ಮೋಡವನ್ನು ಪ್ಲಾಸ್ಮಾ ಎಂದು ಕರೆಯಲಾಗುವುದು. ಸೂರ್ಯನಿಂದ ಬರುವ ಈ ಪ್ಲಾಸ್ಮಾದ ಝರಿಗೆ ಸೌರ ಮಾರುತವೆಂಬ ಹೆಸರು. ವಿದ್ಯುತ್ಪ್ರೇರಿತವಾದ ಈ ಕಣಗಳು ಭೂಮಿಯ ವಾತಾವರಣದಲ್ಲಿನ ಅನಿಲಗಳ ಪರಮಾಣುಗಳಿಗೆ ಢಿಕ್ಕಿ ಹೊಡೆದಾಗ ಅವು ಉತ್ತೇಜಿತವಾಗುತ್ತವೆ. ಕೊಂಚ ಸಮಯದ ನಂತರ ಅನಿಲಗಳ ಪರಮಾಣುಗಳು ತಾವು ಸೌರ ಮಾರುತದಿಂದ ಪಡೆದ ಶಕ್ತಿಯನ್ನು ಬೆಳಕಿನ ರೂಪದಲ್ಲಿ ಹೊರಹಾಕುತ್ತವೆ. ಅಗಾಧ ಸಂಖ್ಯೆಯ ಪರಮಾಣುಗಳು ಒಮ್ಮೆಲೇ ಹೀಗೆ ಶಕ್ತಿಯನ್ನು ಬೆಳಕಾಗಿ ಹೊರಹಾಕಿದಾಗ ಆಗಸದಲ್ಲಿ ವರ್ಣರಂಜಿತ ಬೆಳಕಿನಾಟ ಕಾಣಿಸುವುದು. ಇದೇ ಆರೋರಾ. ಸಾಮಾನ್ಯವಾಗಿ ಈ ಬೆಳಕು ಚಿಮ್ಮಿಸುವ ಪರಮಾಣುಗಳಲ್ಲಿ ಹೆಚ್ಚಿನವು ಆಮ್ಲಜನಕದವಾದ್ದರಿಂದ ಆರೋರಾ ಎತ್ತರದ ಆಕಾಶದಲ್ಲಿ ದಟ್ಟ ಕೆಂಪು ಬಣ್ಣದಿಂದ ಹೊಳೆಯುತ್ತದೆ ಮತ್ತು ಕಡಿಮೆ ಎತ್ತರದಲ್ಲಿ ಹಸಿರಿನಿಂದ ಕೂಡಿರುತ್ತದೆ. ಇದೇ ರೀತಿ ಸಾರಜನಕ ಪರಮಾಣುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಆರೋರಾವು ನೀಲ ಅಥವಾ ನೇರಳೆ ಬಣ್ಣದಿಂದ ಹೊಳೆಯುತ್ತದೆ.

ಆರೋರಾದ ಇನ್ನೊಂದು ದೃಶ್ಯ

ಬಹಳವಾಗಿ ಆರೋರಾ ಬಣ್ಣದ ಬೆಳಕನ್ನು ಚೆಲ್ಲುತ್ತಿರುವ ಕುಂಡದಂತೆ ಅಥವಾ ಪೂರ್ವದಿಂದ ಪಶ್ಚಿಮಕ್ಕೆ ಕಟ್ಟಿರುವ ಒಂದು ಬಣ್ಣದ ಪರದೆಯಂತೆ ಗೋಚರಿಸುತ್ತದೆ. ಕೆಲವೊಮ್ಮೆ ಇವು ಆಗಸದಲ್ಲಿ ದಪ್ಪನಾಗಿ ಎಳೆದಿರುವ ಸ್ಥಿರ ವಕ್ರ ರೇಖೆಗಳಂತೆ ಕಂಡರೆ ಇನ್ನು ಹಲವು ಸಲ ಆರೋರಾಗಳು ಕ್ಷಣಕ್ಷಣಕ್ಕೂ ಆಕಾರ ಬದಲಿಸುತ್ತವೆ. ಪ್ರತಿ ಬಣ್ಣದ ಪರದೆಯು ಕಲವಾರು ಸಮಾನಾಂತರ ರೇಖೆಗಳನ್ನು ಹೊಂದಿದ್ದು ಈ ಗೆರೆಗಳು ಆ ಕ್ಷೇತ್ರದ ಕಾಂತೀಯ ಗೆರೆಗಳಿಗೆ ಅನುಗುಣವಾಗಿಯೇ ಇರುತ್ತವೆ. ಇದರಿಂದಾಗಿ ಆರೋರಾಗಳ ಆಕಾರವು ಭೂಮಿಯ ಕಾಂತತ್ವದ ಮೇಲೆ ನಿರ್ಧರಿಸಲ್ಪಡುತ್ತದೆಂದು ತಿಳಿಯಲಾಗಿದೆ. ಧ್ರುವಪ್ರದೇಶಗಳಲ್ಲಿ ಆರೋರಾದ ಉಗಮವು ಅತಿ ಸಾಮಾನ್ಯ. ಕೆಲವೊಮ್ಮೆ ಸಮಶೀತೋಷ್ಣವಲಯದ ಉತ್ತರದಂಚಿನಲ್ಲಿ ಸಹ ಇವೆ ಕಾಣುವುದುಂಟು. ಅಲ್ಲದೆ ಇಕ್ವಿನಾಕ್ಸ್ ಆಸುಪಾಸಿನ ತಿಂಗಳುಗಳಲ್ಲಿ ಆರೋರಾಗಳು ಹೆಚ್ಚಾಗಿ ಗೋಚರಿಸುತ್ತವೆ.

ಆರೋರಾ ಆಸ್ಟ್ರಾಲಿಸ್

ಬಾಹ್ಯ ಸಂಪರ್ಕಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.