ಟೈಗರ್ ಪ್ರಭಾಕರ್

ಟೈಗರ್ ಪ್ರಭಾಕರ್ ( ೧೯೪೮ - ಮಾರ್ಚ್ ೨೫, ೨೦೦೧) ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ವಿವಿಧ ರೀತಿಯಪಾತ್ರಗಳಲ್ಲಿ ಗಮನಸೆಳೆದ ಪ್ರತಿಭಾನ್ವಿತರು.

ಟೈಗರ್ ಪ್ರಭಾಕರ್
ಜನನ೧೯೪೮
ನಿಧನಮಾರ್ಚ್ ೨೫, ೨೦೦೧
ರಾಷ್ಟ್ರೀಯತೆಭಾರತೀಯ
ವೃತ್ತಿಚಲನಚಿತ್ರ ನಟ

ಚಿತ್ರ ಜೀವನ

ಕನ್ನಡ ಚಿತ್ರರಂಗದ ಟೈಗರ್ ಎಂದೇ ಖ್ಯಾತರಾಗಿದ್ದ ಪ್ರಭಾಕರ್, ಕನ್ನಡ ಚಿತ್ರರಂಗ ಕಂಡ ಅಪರೂಪದ ಆಲ್ ರೌಂಡರ್ ಎಂದರೆ ತಪ್ಪಿಲ್ಲ. ಸಹ ನಟನಾಗಿ, ಪೋಷಕನಟನಾಗಿ, ಖಳ ನಾಯಕನಾಗಿ, ನಾಯಕ ನಟನಾಗಿ, ಛಾಯಾಗ್ರಾಹಕನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ವಿಶಿಷ್ಟತೆ ಮೆರೆದ ವ್ಯಕ್ತಿ ಪ್ರಭಾಕರ್. ಯಾವುದೇ ಪಾತ್ರವಾಗಿರಲಿ, ಯಾವ ಪ್ರಮಾಣದ ಪಾತ್ರವೇ ಆಗಿರಲಿ, ಆ ಪಾತ್ರ ಸದಾ ಕಾಲ ನೆನಪಿನಲಿ ಉಳಿಯುವಂತೆ ನಟಿಸುತ್ತಿದ್ದ ನಟ. ಅಂತೆಯೇ ಸುಮಾರು 450 ಚಿತ್ರಗಳಲ್ಲಿ ನಟಿಸಿ ಮರೆಯಾಗಿದ್ದರೂ, ಇಂದಿಗೂ ಕನ್ನಡ ಚಿತ್ರ ರಸಿಕರ ಮನದಲ್ಲಿ ಅಚ್ಚಳಿಯದೇ ನೆನಪಿನಲ್ಲುಳಿದಿದ್ದಾರೆ ನಟ ಪ್ರಭಾಕರ್.

ಖಳನಟನಾಗಿ ಪ್ರಸಿದ್ಧಿ

ಎಪ್ಪತ್ತರರ ದಶಕದ ‘ಕಾಡಿನ ರಹಸ್ಯ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರ ಜೀವನ ಆರಂಭಿಸಿದ ಪ್ರಭಾಕರ್ ಅವರಿಗೆ ಆಗ ಕೇವಲ 14ರ ಪ್ರಾಯ. ನಂತರ ಅನೇಕ ಚಿತ್ರಗಳಲ್ಲಿ ಚಿಕ್ಕ ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ, ಸಾಹಸ ದೃಶ್ಯಗಳಲ್ಲಿ ಸಹ ನಟನಾಗಿ ಗುರುತಿಸಿಕೊಳ್ಳುತ್ತಾ, ಹಂತ ಹಂತವಾಗಿ ನಟನಾ ಜೀವನದಲ್ಲಿ ಮೇಲೇರಿದ ಪ್ರಭಾಕರ್ ಕ್ರಮೇಣ ಖಳನಾಯಕನ ಸಹಾಯಕನಾಗಿ ನಂತರ ಖಳನಾಯಕರಲ್ಲಿ ಒಬ್ಬನಾಗಿ, ಆನಂತರ ಪ್ರಮುಖ ಖಳನಾಯಕನಾಗಿ ಅಭಿನಯಿಸತೊಡಗಿದರು. ಖಳನಾಯಕನಾದ ಮೇಲಂತೂ ತಮ್ಮದೇ ವಿಶಿಷ್ಟ ರೀತಿಯ ಸಂಭಾಷಣಾ ಶೈಲಿಯಿಂದ ಕನ್ನಡಿಗರ ಮನೆಮಾತಾದ ಪ್ರಭಾಕರ್, ಎಂಭತ್ತರ ದಶಕದಲ್ಲಿ ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೇ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲೂ ಬೇಡಿಕೆಯ ಖಳನಾಯಕನಾಗಿ ವಿಜ್ರಂಭಿಸಿದರು. ಪರಭಾಷೆಗಳಲ್ಲಿ ಅಭಿನಯಿಸುವಾಗ ಅವರು ಕನ್ನಡ ಪ್ರಭಾಕರ್ ಎಂದೇ ಹೆಸರಾಗಿದ್ದರು.

ನಾಯಕನಟರಾಗಿ

ಎತ್ತರದ ನಿಲುವು, ಆಕರ್ಷಕ ಮೈಕಟ್ಟು ಹಾಗೂ ಜನಪ್ರಿಯ ಸಂಭಾಷಣಾ ಶೈಲಿಯಿಂದ ಆಗಲೇ ಸಾಕಷ್ಟು ಜನಪ್ರಿಯರಾಗಿದ್ದ ಪ್ರಭಾಕರ್, ನಂತರ ಕನ್ನಡ ಚಿತ್ರಗಳಲ್ಲಿ ನಾಯಕ ನಟನಿಗೆ ಸಮನಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿ, ಕ್ರಮೇಣ ನಾಯಕ ನಟನಾಗಿ ಅಭಿನಯಿಸಲಾರಂಭಿಸಿದರು. ಬಹುತೇಕ ನಟ-ತಂತ್ರಜ್ನರ-ನಿರ್ಮಾಪಕರ-ನಿರ್ದೇಶಕರ ಮೆಚ್ಚಿನ ವ್ಯಕ್ತಿಯಾಗಿದ್ದ ಪ್ರಭಾಕರ್ ‘ವಿಘ್ನೇಶ್ವರನ ವಾಹನ’ ಚಿತ್ರದಲ್ಲಿ ದಲ್ಲಿ ಪ್ರಥಮ ಬಾರಿಗೆ ಪೂರ್ಣ ಪ್ರಮಾಣದ ನಾಯಕ ನಟನಾಗಿ ಕಾಣಿಸಿಕೊಂಡರಲ್ಲದೇ, ಆ ಚಿತ್ರದಲ್ಲಿ ದ್ವಿಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು. ನಂತರದ ‘ಜಿದ್ದು’ ಚಿತ್ರದ ಭಾರೀ ಯಶಸ್ಸು ಪ್ರಭಾಕರ್ ಗೆ ಸಾಕಷ್ಟು ಜನಪ್ರಿಯತೆ ತಂದು ಕೊಟ್ಟಿದ್ದಲ್ಲದೇ, ಅವರನ್ನು ಕನ್ನಡ ಚಿತ್ರರಂಗದ ಸ್ಟಾರ್ ನಾಯಕ ನಟರಲ್ಲೊಬ್ಬರನ್ನಾಗಿಸಿತು. ‘ಯಾರೀ ಸಾಕ್ಷಿ’ ಚಿತ್ರದ ಅವರ ಟೈಗರ್ ಹೆಸರಿನ ಪಾತ್ರ, ಪ್ರಭಾಕರ್ ರವರನ್ನು ಸಾಕಷ್ಟು ಜನಪ್ರಿಯಗೊಳಿಸಿದ್ದಲ್ಲದೇ, ಕನ್ನಡ ಚಿತ್ರರಂಗದಲ್ಲಿ ‘ಟೈಗರ್’ ಪ್ರಭಾಕರ್ ಎಂದೇ ಅವರ ಹೆಸರನ್ನು ಚಿರಸ್ಥಾಯಿಯಾಗಿಸಿತು.

ನಿರ್ಮಾಪಕ, ನಿರ್ದೇಶಕರಾಗಿ

ಹಿರಿಯ ನಿರ್ದೇಶಕ ಕೆ.ಎಸ್.ಆರ್.ದಾಸ್ ಅವರನ್ನು ‘ಗುರು’ ಎಂದೇ ಭಾವಿಸಿದ್ದ ಪ್ರಭಾಕರ್, ಅವರಿಂದ ಛಾಯಾಗ್ರಹಣ, ಚಿತ್ರ ನಿರ್ಮಾಣ, ನಿರ್ದೇಶನದ ಸೂಕ್ಷ್ಮತೆಗಳನ್ನು ಕಲಿತು, ತಾರೆ ಜಯಮಾಲಾ ಜೊತೆಗೂಡಿ ‘ಮಹೇಂದ್ರ ‘ವರ್ಮ’, ‘ಮಿಸ್ಟರ್ ಮಹೇಶ್ ಕುಮಾರ್’ ಮೊದಲಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಲ್ಲದೇ, ಆನಂತರ ‘ಬಾಂಬೆ ದಾದ’, ‘ಕಿಂಗ್’, ‘ಗುಡ್ ಬ್ಯಾಡ್ ಅಂಡ್ ಅಗ್ಲಿ’ ಮುಂತಾದ ಚಿತ್ರಗಳನ್ನೂ ನಿರ್ದೇಶಿಸಿದರು.

ಕೆಲವೊಂದು ಪ್ರಮುಖ ಚಿತ್ರಗಳು

ಅಂತ, ಪುಟಾಣಿ ಏಜೆಂಟ್ 1 2 3, ಸಹೋದರರ ಸವಾಲ್, ಸ್ನೇಹಿತರ ಸವಾಲ್, ಚಿಲ್ಲಿದ ರಕ್ತ, ರಕ್ತ ತಿಲಕ, ಕಾರ್ಮಿಕ ಕಳ್ಳನಲ್ಲ, ಒಂದೇ ಗುರಿ, ಮಹಾ ಪ್ರಚಂಡರು, ನ್ಯಾಯ ಗೆದ್ದಿತು, ಹುಲಿ ಹೆಜ್ಜೆ, ಜಿದ್ದು, ಕಾಡಿನ ರಾಜ, ಚಂಡಿ ಚಾಮುಂಡಿ, ತಾಳಿಯ ಭಾಗ್ಯ, ಬಂಧ ಮುಕ್ತ, ಭರತ್, ಹೊಸ ಇತಿಹಾಸ, ಅತಿರಥ ಮಹಾರಥ, ಹುಲಿ ಹೆಬ್ಬುಲಿ, ಕಿರಾತಕ, ಕೇಡಿ ನಂ.1, ಅಗ್ನಿ ಪರ್ವ, ಪ್ರೇಮ ಯುದ್ಧ, ರಣ ಭೇರಿ, ಖದೀಮ ಕಳ್ಳರು, ಮುತ್ತೈದೆ ಭಾಗ್ಯ, ಪ್ರೀತಿ ವಾತ್ಸಲ್ಯ, ಒಂದು ಗೂಡಿನ ಹಕ್ಕಿಗಳು, ಹುಲಿಯಾದ ಕಾಳ, ಪ್ರೇಮ ಮತ್ಸರ, ಗರುಡ ರೇಖೆ, ಟೋನಿ, ಮಹೇಂದ್ರ ವರ್ಮ, ಮಿಸ್ಟರ್ ಮಹೇಶ್ ಕುಮಾರ್, ಪ್ರೇಮ ಲೋಕ, ಸಾಹಸ ಸಿಂಹ, ಸೇಡಿನ ಹಕ್ಕಿ, ಮುತ್ತೈದೆ ಭಾಗ್ಯ . . .ಇತ್ಯಾದಿ ಚಿತ್ರಗಳು ಟೈಗರ್ ಪ್ರಭಾಕರ್ ಅಭಿನಯದ ಕೆಲವು ಚಿತ್ರಗಳಾಗಿವೆ.

  • ಗಂಧದ ಗುಡಿ [ಭಾಗ-೧]ರಲ್ಲಿ ಖಳನಾಗಿ ನಟಿಸಿದ್ದ ಅವರು ಗಂಧದ ಗುಡಿ ಭಾಗ-೨ ರಲ್ಲಿ "ಟೋನಿ"ಯ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು.

ಇತರ ಭಾಷಾ ಚಿತ್ರರಂಗಗಳಲ್ಲಿ

‘ಬಿಲ್ಲಾ ರಂಗಾ’, ‘ಚಟ್ಟಾನಿಕಿ ಕಳ್ಳುಲೇವು’, ‘ಪುಲಿ ಬೆಬ್ಬುಲಿ’, ‘ಜ್ವಾಲಾ’, ‘ರೋಷಗಾಡು’, ‘ಕಿರಾತಕುಡು’, ‘ರಾಕ್ಷಸುಡು’, ‘ಪಸಿವಾಡಿ ಪ್ರಾಣಂ’, ‘ಜೇಬು ದೊಂಗ’, ‘ಕೊದಮ ಸಿಂಹಂ’, ‘ಜಗದೇಕ ವೀರುಡು ಅತಿಲೋಕ ಸುಂದರಿ’ ಇತ್ಯಾದಿ ಸೂಪರ್ ಹಿಟ್ ತೆಲುಗು ಚಿತ್ರಗಳಲ್ಲಿ ಮಿಂಚಿದ್ದ ಪ್ರಭಾಕರ್, ‘ಧ್ರುವಂ’ ಎಂಬ ಮಲಯಾಳಂ ಚಿತ್ರದಲ್ಲಿ ‘ಹೈದರ್ ಮರಕ್ಕರ್’ ಪಾತ್ರದಲ್ಲಿ ಅಭಿನಯಿಸಿ ವೀಕ್ಷಕರ ಭಾರೀ ಪ್ರಶಂಸೆಗಳಿಸಿದ್ದರು. ಖ್ಯಾತ ಈಶ್ವರೀ ಸಂಸ್ಥೆ ನಿರ್ಮಿಸಿದ್ದ ಕನ್ನಡ ಚಲನಚಿತ್ರ "ಚಕ್ರವ್ಯೂಹ"ದ ಹಿಂದಿ ಅವತರಣಿಕೆಯಾದ ಚಲನಚಿತ್ರ "ಇನ್ಕಲಾಬ್" ನಲ್ಲಿ ಕೂಡ ನಟಿಸಿದ್ದರು.

ಸಮಾಜಕ್ಕಾಗಿ ಮಿಡಿತ

ಚಿತ್ರರಂಗದಲ್ಲಿ ಮಾತ್ರವಲ್ಲದೇ, ಚಿತ್ರರಂಗದ ಆಚೆಗೂ ಸ್ನೇಹ ಜೀವಿ ಎಂದೇ ಹೆಸರಾಗಿದ್ದ ಪ್ರಭಾಕರ್, ತಮ್ಮ ಸಾಮಾಜಿಕ ಕಳಕಳಿ, ಉದಾರ ಮನೋಭಾವದ ಗುಣಗಳಿಂದ ಅನೇಕ ಸಹ ಕಲಾವಿದರಿಗೆ, ಅನಾಥಾಶ್ರಮಗಳಿಗೆ, ಸಂಘ ಸಂಸ್ಥೆಗಳಿಗೆ ಆರ್ಥಿಕವಾಗಿ ನೆರವಾಗುತ್ತಿದ್ದರು. ಪ್ರಭಾಕರ್ ಅವರ ಪುತ್ರ ವಿನೋದ್ ಪ್ರಭಾಕರ್ ಇಂದು ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸುವ ಯುವ ನಾಯಕ ನಟನಾಗಿದ್ದಾರೆ.

ವಿದಾಯ

1947ರಲ್ಲಿ ಜನಿಸಿದ ಪ್ರಭಾಕರ್ ಇನ್ನೂ 52ನೇ ವಯಸ್ಸಿನಲ್ಲಿರುವಾಗಲೇ, 2001ರ ಮಾರ್ಚ್ 25ರಂದು ಈ ಲೋಕವನ್ನಗಲಿದರು. ವಿಶಿಷ್ಟ ರೀತಿಯ ಅಭಿನಯ ಹಾಗೂ ಸಂಭಾಷಣೆ ಹೇಳುವ ರೀತಿಯಿಂದ ಅವರು ಪ್ರತ್ಯೇಕರೂ, ವಿಶಿಷ್ಟರೂ, ಸ್ಮರಣೀಯರೂ ಆಗಿ ಚಿತ್ರರಸಿಕರ ಮನದಲ್ಲಿ ನೆಲೆಸಿದ್ದಾರೆ.

ಮಾಹಿತಿ ಕೃಪೆ

ವಾಕ್ಚಿತ್ರ

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.