ಜೈಮಿನಿ ಮಹರ್ಷಿ
ಮೀಮಾಂಸಾ ದರ್ಶನದ ಮೂಲಾಧಾರವೇ ಮೀಮಾಂಸಾ ಸೂತ್ರಗಳು. ಇವುಗಳನ್ನು ಜೈಮಿನಿ ಮಹರ್ಷಿಗಳು ರಚಿಸಿದರು. ಮೀಮಾಂಸಾ ಶಾಸ್ತ್ರವು ವೇದಾರ್ಥಗಳನ್ನು ಗುರಿಯಾಗಿಸಿಕೊಂಡು ತೊಡಗಿದ ಶಾಸ್ತ್ರವಾಗಿದೆ.ಇದನ್ನು ಪೂರ್ವಮೀಮಾಂಸಾ ಶಾಸ್ತ್ರವೆಂದೂ ಕರೆಯುತ್ತಾರೆ. ಜೈಮಿನಿ ಮಹರ್ಷಿಗಳಿಗಿಂತಲೂ ಮೊದಲೇ ಅನೇಕ ಸೂತ್ರಕಾರರು ಆಗಿದ್ದರು ಎಂಬುದಾಗಿ ಜೈಮಿನಿ ಮಹರ್ಷಿಗಳ ಗ್ರಂಥದಿಂದಲೇ ತಿಳಿಯುತ್ತದೆ.
ಕಾಲ
ಜೈಮಿನಿ ಮಹರ್ಷಿಗಳ ಕಾಲವನ್ನು ಕುರಿತು ನಿರ್ದಿಷ್ಟವಾಗಿ ಹೇಳುವುದು ಕಷ್ಟಸಾಧ್ಯ. ಜೈಮಿನಿ ಮಹರ್ಷಿಗಳು ಬಾದರಾಯಣರ ಅಭಿಪ್ರಾಯವನ್ನು ತಮ್ಮ ಸೂತ್ರಗಳಲ್ಲಿ ಉಲ್ಲೇಖಿಸುತ್ತಾರೆ. ಬಾದರಾಯಣರೂ ಕೂಡ ಜೈಮಿನಿ ಮಹರ್ಷಿಗಳ ಸೂತ್ರಗಳನ್ನು ಉದ್ಧರಿಸುತ್ತಾರೆ. ಆದ್ದರಿಂದ ಅವರಿಬ್ಬರೂ ಸಮಕಾಲೀನರು ಎಂಬುದು ಅನೇಕರ ಮತ. ಸುಮಾರು ಕ್ರಿ. ಶ. ೮೦೦ ಜೈಮಿನಿ ಮಹರ್ಷಿಗಳ ಕಾಲವಾಗಿರಬಹುದೆಂದು ಊಹೆ ಮಾಡುತ್ತಾರೆ. ಜೈಮಿನಿ ಮಹರ್ಷಿಗಳ ಜೀವನದ ಬಗ್ಗೆ ಹೆಚ್ಚಿನ ವಿಷಯಗಳು ತಿಳಿದು ಬರುತ್ತಿಲ್ಲ. ಭಾಗವತದಲ್ಲಿ "ವ್ಯಾಸರು ವೇದಗಳನ್ನು ನಾಲ್ಕು ಭಾಗವಾಗಿ ವಿಂಗಡಿಸಿ ಸಾಮವೇದವನ್ನು ಜೈಮಿನಿ ಮಹರ್ಷಿಗಳಿಗೆ ಉಪದೇಶಿಸಿದರು" ಎನ್ನಲಾಗಿದೆ.
ಮೀಮಾಂಸಾ ಸೂತ್ರ
ಹನ್ನೆರಡು ಅಧ್ಯಾಯಗಳಾಗಿ ವೀಮಾಂಸಾ ಸೂತ್ರಗಳನ್ನು ವಿಭಾಗಿಸಲಾಗಿದೆ. ಇವುಗಳಲ್ಲಿ ವೇದಗಳ ಅರ್ಥವನ್ನು ಸ್ಪಷ್ಟವಾಗಿ ತಿಳಿಯಲು ಅವಶ್ಯಕವಾದ ಎಲ್ಲ ವಿಚಾರಗಳನ್ನು ವಿವರಿಸಲಾಗಿದೆ. ಈ ಮೀಮಾಂಸಾ ಸೂತ್ರಗಳಿಗೆ ಅನೇಕ ಭಾಷ್ಯಗಳು, ವಾರ್ತಿಕಗಳು, ವ್ಯಾಖ್ಯಾನಗಳು ರಚಿತವಾಗಿವೆ. ಮೀಮಾಂಸಾ ಭಾಷ್ಯಗಳಲ್ಲಿ ಶಬರಸ್ವಾಮಿಗಳ ಭಾಷ್ಯವು ತುಂಬಾ ಪ್ರಸಿದ್ಧವಾಗಿದೆ.