ಗದಿಗೆಯ್ಯ ಹುಚ್ಚಯ್ಯ ಹೊನ್ನಾಪುರಮಠ
ಗದಿಗೆಯ್ಯ ಹುಚ್ಚಯ್ಯ ಹೊನ್ನಾಪುರಮಠ ಇವರು ೧೮೭೦ರಲ್ಲಿ ಜನಿಸಿದರು. ೧೮೯೩ರಲ್ಲಿ ಪುಣೆಯಲ್ಲಿ ಕಾನೂನು ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ಧಾರವಾಡದಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ಗದಿಗೆಯ್ಯನವರ ತಂದೆ ಹುಚ್ಚಯ್ಯನವರು “ಚಂದ್ರೋದಯ” ಎನ್ನುವ ವಾರಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸುತ್ತಿದ್ದರು. ಗದಿಗೆಯ್ಯನವರು ಕೆಲಕಾಲ “ಚಂದ್ರೋದಯ”ವನ್ನು ಮುಂದುವರಿಸಿದರು ಹಾಗು “ವಾಗ್ದೇವಿ” ಎನ್ನುವ ಮಾಸಪತ್ರಿಕೆಯನ್ನು ಸಹ ಪ್ರಕಟಿಸುತ್ತಿದ್ದರು. ಇವೆರಡೂ ಪತ್ರಿಕೆಗಳು ಕೆಲಕಾಲದ ನಂತರ ವಿಲೀನಗೊಂಡವು.
ಗದಿಗೆಯ್ಯನವರು ರಾಷ್ಟ್ರೀಯ ಮನೋಭಾವದವರು. ಕನ್ನಡದ ಕಳಕಳಿ ಇದ್ದವರು. ಆಲೂರು ವೆಂಕಟರಾಯರು, ಕಡಪಾ ರಾಘವೇಂದ್ರರಾಯರು, ರಾಮರಾವ ನರಗುಂದಕರ ಹಾಗು ಗದಿಗೆಯ್ಯ ಹೊನ್ನಾಪುರಮಠ ಇವರು ಜೊತೆಗೂಡಿ ಹುಟ್ಟುಹಾಕಿದ “ಕರ್ನಾಟಕ ಸಭೆ”ಯು ಮುಂದೆ ಕರ್ನಾಟಕ ಏಕೀಕರಣಕ್ಕೆ ನಾಂದಿಯಾಯಿತು.
೧೮೯೭ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಇವರು ಮುಂದಿನ ೧೬ ವರ್ಷಗಳ ಕಾಲ ಅದರ ಪ್ರಗತಿಗಾಗಿ ದುಡಿದರು. ಆಲೂರು ವೆಂಕಟರಾಯರು ಧಾರವಾಡದಲ್ಲಿ ನಡೆಯಿಸಿದ ಕನ್ನಡ ಗ್ರಂಥಕರ್ತರ ಪ್ರಥಮ ಪರಿಷತ್ತನ್ನು ಯಶಸ್ವಿಗೊಳಿಸಲು ಗದಿಗೆಯ್ಯನವರು ಪರಿಶ್ರಮಿಸಿದರು.
ಕೃತಿಗಳು
ಕಾದಂಬರಿ
- ಅದ್ಭುತ ಪ್ರೇಮ
ಪ್ರಬಂಧ
- ನೀತಿ ಮಂಜರಿ
ಮಕ್ಕಳ ಸಾಹಿತ್ಯ
- ಪ್ರಹ್ಲಾದ ಚರಿತ್ರೆ
- ಶ್ರೀಕೃಷ್ಣ ಚರಿತ್ರೆ
- ಸಾವಿತ್ರಿ ಚರಿತ್ರೆ
- ಸಚಿತ್ರ ಬಾಲಭಾಗವತ
- ಸಚಿತ್ರ ಬಾಲರಾಮಾಯಣ
ಜೀವನ ಚರಿತ್ರೆ
- ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರೆ
- ಶ್ರೀ ರಾಮಕೃಷ್ಣ ಪರಮಹಂಸರ ಸತ್ಕಥೆಗಳು
- ಶ್ರೀ ಬಸವೇಶ್ವರ ಚರಿತ್ರೆ
ನಾಟಕ
- ಮೊಹಿನೀ ಅಥವಾ ನಿಂದಕರ ನಡುವಳಿ (‘ಶೆರಿಡನ್ನ’ರ ‘ಸ್ಕೂಲ್ ಫಾರ್ ಸ್ಕೌಂಡ್ರೆಲ್’ದ ರೂಪಾಂತರ)
- ತ್ರಾಟಿಕಾ ಅಥವಾ ಮೊಂಡ ಗಂಡ ತುಂಟ ಹೆಂಡತಿ (ಶೇಕ್ಸ್ಪಿಯರನ ‘ಟೇಮಿಂಗ್ ಆಫ್ ದ ಶ್ರೂ’ದ ರೂಪಾಂತರ)