ಗಣತಂತ್ರ ದಿನಾಚರಣೆ
ಪಂಜಾಬ, ಸಿಂಧು, ಗುಜರಾತ, ಮರಾಠ, ದ್ರಾವಿಡ, ಕನ್ನಡ ..." ಎಲ್ಲಿ ನೊಡಿದರೂ ಬಗೆ ಬಗೆಯ ಭಾರತೀಯ ವರ್ಣರಂಜಿತ ಉಡುಗೆ ತೊಡುಗೆಗಳನ್ನು ಧರಿಸಿದ ಮೂರು ಸಾವಿರಕ್ಕೂ ಹೆಚ್ಚು ಜನ, ಅಲಂಕೃತ ವೇದಿಕೆ, ಭಾರತವನ್ನು ನೆನೆಪಿಸುವ ವಾತಾವರಣ ಸೃಷ್ಟಿಯಾಗಿತ್ತು.
ದಿನಾಂಕ 24ನೇ ಜನವರಿ 2010ರಂದು ಭಾನುವಾರ ಅಕ್ಲೆಂಡ್ ನಗರದ ಮನುಕಾವ್ ಟೆಲ್‌ಸ್ಟ್ರಾಕ್ಲಿಯರ್ ಪೆಸಿಫಿಕ್ ಸೆಂಟರ್ ನಲ್ಲಿ ಭಾರತೀಯ ಸಮಾಜ ಚಾರಿಟಬಲ್ ಟ್ರಸ್ಟ್ ನವರು ನಡೆಸಿದ ಭಾರತದ 60ನೇ ಗಣರಾಜ್ಯೋತ್ಸವ ದಿನಾಚರಣೆಯ ಸಮಾರಂಭದಲ್ಲಿ ಪಾಲ್ಗೊಂಡ ನ್ಯೂಜಿಲೆಂಡ್ ಕನ್ನಡ ಕೂಟ ಸೇರಿದಂತೆ ಸುಮಾರು 25 ಸಂಘ ಸಂಸ್ಥೆಗಳು ಮೊದಲಿಗೆ ನಡೆದ ಆಕರ್ಷಕ ಪಥಸಂಚಲನದಲ್ಲಿ ಭಾಗವಹಿಸಿದವು. ಭಾಷೆ ಬೇರೆ, ಭಾವ ಒಂದೇ. ನಾವು ಭಾರತೀಯರು ಎಂಬುದು ಎಲ್ಲರ ಮನದಲ್ಲಿದ್ದು ನಡವಳಿಕೆಯಲ್ಲಿ ಪ್ರತಿಬಿಂಬಿಸಿತು.
ಮನುಕಾವ್ ನಗರ ಸಭೆಯ ಮಾಜಿ ಮೇಯರ್ ಸರ್ ಬ್ಯಾರಿ ಕರ್ಟೀಸ್ ಅವರು ಧ್ವಜಾರೋಹಣ ನಡೆಸಿದ ನಂತರ ನಡೆದ ಪಥಸಂಚಲನ, ಧ್ವಜ ವಂದನೆ ಎಲ್ಲದರಲ್ಲೂ ಉತ್ಸಾಹದಿಂದ ಭಾಗವಹಿಸಿದವರಿಗೆ ಭಾರತದ ವಿವಿಧ ಭಾಗಗಳ ಸಾಂಸ್ಕೃತಿಕ ವೈವಿಧ್ಯತೆಯ ಪರಿಚಯವೂ ಆಯಿತು. ಕನ್ನಡತಿ ಸುಶ್ಮಿತಾ ದೇಶಪಾಂಡೆ ಅವರ ಶಿವ ತಾಂಡವ ನೃತ್ಯಪ್ರದರ್ಶನ ಅತ್ಯಾಕರ್ಷಕವಾಗಿತ್ತು. ಭಾರತದ ವಿವಿಧ ಭಾಷೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರನ್ನೂ ರಂಜಿಸಿದ್ದಲ್ಲದೇ ಸ್ಥಳೀಯರ ಮೆಚ್ಚುಗೆಯನ್ನೂ ಗಳಿಸಿದವು.
ಈ ಸಂದರ್ಭದಲ್ಲಿ ನ್ಯೂಜಿಲೆಂಡ್ ನಿವಾಸಿಗಳಾಗಿದ್ದು ವಿಜ್ಞಾನ, ಸಮಾಜ ಸೇವೆ, ವೈದ್ಯಕೀಯ ನೆರವು ಮುಂತಾದ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಐವರು ಭಾರತೀಯರನ್ನು ಗೌರವಿಸಲಾಯಿತು. ಸುಮಾರು ನಲವತ್ತು ವರ್ಷಗಳ ಕಾಲ ಆಕ್ಲೆಂಡ್ ವಿಶ್ವವಿದ್ಯಾನಿಲಯದ ಗಣಿತ ಶಾಸ್ತ್ರ ಪ್ರಾಧ್ಯಾಪಕರಾಗಿ, ಕನ್ನಡ ಸಮುದಾಯದ ಹಿರಿಯ ಚೇತನ ಎಂದು ಗುರುತಿಸಲಾದ ದಿ. ಪ್ರಾಚಾರ್ಯ ಎಂ.ಕೆ. ವಾಮನ ಮೂರ್ತಿಯವರನ್ನು ಮರಣೋತ್ತರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀಮತಿ ಜೂನ್ ಹಿಲ್ಲರಿಯವರಿಂದ [ದಿ. ಸರ್ ಎಡ್ಮಂಡ್ ಹಿಲ್ಲರಿ ಅವರ ಪತ್ನಿ] ಈ ಪ್ರಶಸ್ತಿಯನ್ನು ಶ್ರೀಮತಿ ರತ್ನಾ ವಾಮನಮೂರ್ತಿಯವರು ಸ್ವೀಕರಿಸಿದರು.