ಎಮ್.ವಿ.ವಾಸುದೇವ ರಾವ್

ಎಮ್.ವಿ.ವಾಸುದೇವ ರಾವ್ [ ಮೂಡುಬಿದ್ರೆ ವೆಂಕಟರಾವ್ ವಾಸುದೇವರಾವ್ ], ಇವರು ಹುಟ್ಟಿದ್ದು ೧೯೨೮ರಲ್ಲಿ.

ಇವರು ತಮ್ಮ ಎಳೆಯ ವಯಸ್ಸಿನಲ್ಲೇ ನಾಟಕಗಳಲ್ಲಿ ಪಾತ್ರವನ್ನು ನಿರ್ವಹಿಸುತ್ತಿದ್ದರು. ಅವರು ಗುಬ್ಬೀ ಕಂಪನಿಯಲ್ಲೂ ಸಹ ನಾಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಶ್ರೀ ಕೃಷ್ಣ ಪಾರಿಜಾತ , ಸಾಹುಕಾರ ಮುಂತಾದ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ೧೯೭೫ರಲ್ಲಿ ಶಿವರಾಮ ಕಾರಂತರ ಕಾದಂಬರಿ ಆಧಾರಿತ ಚಲನಚಿತ್ರ "ಚೋಮನ ದುಡಿ" ಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದರು. ಈ ಪಾತ್ರಕ್ಕಾಗಿ ವಾಸುದೇವ ರಾವ್ ಅವರಿಗೆ "ಅತ್ಯುತ್ತಮ ನಾಯಕ ನಟ" ರಾಷ್ಟ್ರೀಯ ಪ್ರಶಸ್ತಿ ಹುಡುಕಿಕೊಂಡು ಬಂದಿತು. ಆ ಪ್ರಶಸ್ತಿ ಸ್ವೀಕರಿಸಲು ಇವರ ಬಳಿ ಹಣವಿರದ ಕಾರಣ ತಡವಾಗಿ ನವದೆಹಲಿಗೆ ತೆರಳಿದರು. ಅಲ್ಲಿ ಇವರನ್ನು ಭಾರತೀಯ ಚಲನಚಿತ್ರ ಜಗತ್ತಿನ ದಿಗ್ಗಜರಾದ "ಶ್ರೀ ಸತ್ಯಜಿತ್ ರೇ" ಅವರು ಅತ್ಯಂತ ಸಂತಸದಿಂದ ತಬ್ಬಿಕೊಂಡು ಅವರ ನಟನೆಯನ್ನು ಶ್ಲಾಘಿಸಿದ್ದರು. ನಂತರ ಇವರ ಪ್ರತಿಭೆಯನ್ನು ಪ್ರದರ್ಶಿಸುವಂತಹ ಪಾತ್ರಗಳು ಸಿಗದೆ , ಬಂದ ಅವಕಾಶಗಳಲ್ಲೆ ಉತ್ತಮವಾದವುಗಳನ್ನ ಆರಿಸಿಕೊಂಡರು. ಅವುಗಳಲ್ಲಿ ಕೆಲವು : ಶ್ರೀ ಶ್ಯಾಮ್ ಬೆನೆಗಲ್ ಅವರ ತೆಲುಗು ಚಲನಚಿತ್ರ "ಕೋಂಡುರಾ" ಶ್ರೀ ಮೃಣಾಲ್ ಸೇನ್ ಅವರ "ಒಕ ಊರಿ ಕಥಾ" ಶ್ರೀ ಮಣಿರತ್ನಂ ಅವರ "ನಾಯಗನ್" ಮತ್ತು "ಮುಂಬಯಿ". "ಕಳಸಾಪುರದ ಹುಡುಗರು", "ದಂಗೆಯೆದ್ದ ಮಕ್ಕಳು", "ಮೈತ್ರಿ", "ಮುತ್ತು ಒಂದು ಮುತ್ತು" ಇನ್ನೂ ಮುಂತಾದ ಹಲವು ಕನ್ನಡ ಚಲನಚಿತ್ರಗಳಲ್ಲಿ ಮಿಂಚಿದರು. ಎಮ್.ವಿ.ವಾಸುದೇವರಾವ್ ಅವರು ೨೨ ಮಾರ್ಚ್ ೨೦೦೨ರಂದು ದೈವಾಧೀನರಾದರು.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.