ಅಷ್ಟ ಮಠಗಳು
ಸಾಂಪ್ರದಾಯಿಕವಾಗಿ ಉಡುಪಿಯಲ್ಲಿರುವ ಎಂಟು ಮಠಗಳಿಗೆ ಅಷ್ಟ ಮಠಗಳು ಎಂದು ಕರೆಯುತ್ತಾರೆ. ಶ್ರೀ ಮಧ್ವಾಚಾರ್ಯರು ಈ ಅಷ್ಟ ಮಠಗಳನ್ನು ಸ್ಥಾಪಿಸಿದರು. ಸಂಸ್ಕೃತದಲ್ಲಿ ಅಷ್ಟ ಎಂದರೆ - ಎಂಟು ಎಂಬರ್ಥ ಮೂಡುತ್ತದೆ.
ಅಷ್ಟ ಮಠಗಳು
ಉಡುಪಿಯ ಅಷ್ಟ ಮಠಗಳೆಂದರೆ:
ಶ್ರೀ ಮಧ್ವಾಚಾರ್ಯರು ಶ್ರೀ ಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿ ಅವನ ಪೂಜೆಗೆ ಮತ್ತು ದ್ವೈತ ಸಿದ್ಧಾಂತದ ತತ್ವಗಳನ್ನು ಸಾರಲು ಎಂಟು ಮಠಗಳನ್ನು ಸ್ಥಾಪಿಸಿ ಪ್ರತಿಯೊಂದಕ್ಕೆ ಒಬ್ಬ ಪೀಠಾಧಿಪತಿಗಳನ್ನು ನೇಮಿಸಿದರು. ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯದಲ್ಲಿ ಈ ಎಂಟು ಮಠಗಳಲ್ಲೊಂದಕ್ಕೆ ಕೃಷ್ಣ ಮಠದ ಅಧಿಕಾರ ಹಸ್ತಾಂತರವಾಗುತ್ತದೆ.
ಪರ್ಯಾಯ
ಪ್ರಾರಂಭದಲ್ಲಿ ಈ ಎಂಟು ಪೀಠಾಧಿಪತಿಗಳು ಶ್ರೀ ಕೃಷ್ಣ ಮಠದಲ್ಲಿ ಒಟ್ಟಾಗಿ ಇದ್ದು ಪರಸ್ಪರ ಚರ್ಚೆ ಮತ್ತು ಒಪ್ಪಿಗೆಯಿಂದ ತಮ್ಮ ಧಾರ್ಮಿಕ ಕರ್ತವ್ಯಗಳನ್ನು ಹಂಚಿಕೊಳ್ಳುತ್ತಿದ್ದರು. ಪ್ರತಿಯೊಂದು ಮಠಕ್ಕೆ ಎರಡು ತಿಂಗಳಿನ ಮಟ್ಟಿಗೆ ಶ್ರೀ ಕೃಷ್ಣನ ಪೂಜೆಯ ಜವಾಬ್ದಾರಿ ಜಾರಿಗೆ ಬಂದಿತು. ಶ್ರೀ ಮಧ್ವರಿಂದ ಪ್ರಾರಂಭವಾದ ಎರಡು ತಿಂಗಳ [ಪರ್ಯಾಯ] ಶ್ರೀ ವಾದಿರಾಜರ ಕಾಲದವರೆಗೂ ನಡೆದು ಬಂದು, ಅವರು ಪರ್ಯಾಯದ ಅವಧಿಯನ್ನು ಎರಡು ವರ್ಷಕ್ಕೆ ವಿಸ್ತರಿಸಿದರು. ಇದರಿಂದಾಗಿ ಪರ್ಯಾಯೇತರ ಮಠದ ಸ್ವಾಮಿಗಳಿಗೆ ದೀರ್ಘ ಪ್ರವಾಸ ಮತ್ತು ತೀರ್ಥಯಾತ್ರೆಗಳನ್ನು ಕೈಗೊಳ್ಳಲು ಅನುಕೂಲವಾಯಿತು. ಇದೇ ವೇಳೆಗೆ ಶ್ರೀ ವಾದಿರಾಜರು ಉಡುಪಿಯ ರಥಬೀದಿಯಲ್ಲಿ ಅಷ್ಟಮಠಗಳನ್ನು ಕಟ್ಟಿಸಿದರು. ಆಗಿನಿಂದ ಪರ್ಯಾಯ ಪ್ರಾರಂಭ ಕಾರ್ಯಕ್ರಮವು ವೈಭವದಿಂದ ನಡೆಯಲು ಶುರುವಾಯಿತು.
ಜೋಡಿ ಮಠಗಳು
ಒಮ್ಮೆ ಶ್ರೀ ಮಧ್ವರು ಚಾತುರ್ಮಾಸ್ಯಕ್ಕೆ ಕಣ್ವ ತೀರ್ಥದಲ್ಲಿ ಉಳಿದುಕೊಂಡಿದ್ದಾಗ ಎಂಟೂ ಸ್ವಾಮಿಗಳನ್ನು ಕರೆದು ಅವರನ್ನು ಇಬ್ಬರ ಜೋಡಿಯಂತೆ ನಾಲ್ಕು ಗುಂಪುಗಳಾಗಿ ವಿಂಗಡಿಸಿದರು. ಈ ಥರದ ಗುಂಪುಗಳಾಗಿ ವಿಂಗಡಿಸಲು ಕಾರಣವೇನೆಂದರೆ ಪರ್ಯಾಯ ಸ್ವಾಮಿಗಳಿಗೆ ಪೂಜೆಗೆ ಅತೀವ ತೊಂದರೆಯಾದರೆ ಅಥವಾ ಅನಾರೋಗ್ಯವುಂಟಾದರೆ, ಅವರ ಜೋಡಿಯ ಇನ್ನೊಂದು ಮಠದ ಸ್ವಾಮಿಯವರು ಶ್ರೀ ಕೃಷ್ಣನ ಪೂಜೆಯನ್ನು ಮುಂದುವರಿಸಲೆಂದು. ಕಣ್ವ ತೀರ್ಥದಲ್ಲಿ ಮಧ್ವಾಚಾರ್ಯರು ಅಂಜೂರ ಹಣ್ಣಿನ ಮರದ ಕೆಳಗೆ ಕಟ್ಟೆಯ ಮೇಲೆ ಕುಳಿತು ಜೋಡಿ ಮಠದ ವ್ಯವಸ್ಥೆಯನ್ನು ಪ್ರಾರಂಭಿಸಿದರು. ಈಗಲೂ ಈ ಕಟ್ಟೆಯನ್ನು ಅಲ್ಲಿ ನೋಡಬಹುದು. "ಸಂಪ್ರದಾಯ ಪದ್ಧತಿ" ಎಂಬ ಗ್ರಂಥದಲ್ಲಿ ಈ ಜೋಡಿ ಪದ್ಧತಿಯ ಉಲ್ಲೇಖವಿದೆ. ಶ್ರೀ ಮಧ್ವಾಚಾರ್ಯರು ಪ್ರತಿಯೊಂದು ಜೋಡಿಯನ್ನು ಒಂದೊಂದಾಗಿ ಕರೆದು ಬೇರೆ ಬೇರೆ ಮಂತ್ರಗಳು, ಕ್ರಿಯಾವಿಧಿ ಮತ್ತು ಪೂಜೆಗಳನ್ನು ಪ್ರಾರಂಭ ಮಾಡಿಸಿದರು. ಹೃಷಿಕೇಶ ತೀರ್ಥ ಮತ್ತು ಇತರ ಸ್ವಾಮಿಗಳು ಜೋಡಿಯಾಗಿ ಕೆಲಸ ಮಾಡಲು ಮತ್ತು ಸಂಪ್ರದಾಯ ಮುಂದುವರೆಸಲು ಸೂಚಿಸಲಾಯಿತು.
- ಶ್ರೀ ಹೃಷಿಕೇಶ ತೀರ್ಥರು - ಫಲಿಮಾರು ಮಠ
ಶ್ರೀ ನರಹರಿ ತೀರ್ಥರು - ಅದಮಾರು ಮಠ
- ಶ್ರೀ ಜನಾರ್ದನ ತೀರ್ಥರು - ಕೃಷ್ಣಾಪುರ ಮಠ
ಶ್ರೀ ಉಪೇಂದ್ರ ತೀರ್ಥರು - ಪುತ್ತಿಗೆ ಮಠ
- ಶ್ರೀ ವಾಮನ ತೀರ್ಥರು - ಶಿರೂರು ಮಠ
ಶ್ರೀ ವಿಷ್ಣು ತೀರ್ಥರು. - ಸೋದೆ ಮಠ
- ಶ್ರೀ ರಾಮ ತೀರ್ಥರು - ಕಾಣಿಯೂರು ಮಠ
ಶ್ರೀ ಅಧೋಕ್ಷಜ ತೀರ್ಥರು - ಪೇಜಾವರ ಮಠ
ಎಂಟು ಮಠಗಳು, ಅವುಗಳ ಸಂಸ್ಥಾಪಕ ಪೀಠಾಧಿಪತಿಗಳು,ಈಗಿನ ಪೀಠಾಧಿಪತಿಗಳು ಮತ್ತು ಜೋಡಿ ಮಠಗಳು
ಸಂಸ್ಥಾಪಕ ಪೀಠಾಧಿಪತಿಗಳು | ಮಠ | ಜೋಡಿ | ಈಗಿನ ಪೀಠಾಧಿಪತಿಗಳು | ಉತ್ತರಾಧಿಕಾರಿ |
---|---|---|---|---|
ಶ್ರೀ ಹೃಷಿಕೇಶತೀರ್ಥರು | ಫಲಿಮಾರು ಮಠ | ಮೊದಲನೇ ಜೋಡಿ | ಶ್ರೀ ವಿದ್ಯಾಧೀಶ ತೀರ್ಥರು | ಶ್ರೀ ವಿದ್ಯಾರಾಜೇಶ್ವರ ತೀರ್ಥರು |
ಶ್ರೀ ನರಸಿಂಹತೀರ್ಥರು | ಅದಮಾರು ಮಠ | ಮೊದಲನೇ ಜೋಡಿ | ಶ್ರೀ ವಿಶ್ವಪ್ರಿಯ ತೀರ್ಥರು | ಶ್ರೀ ಈಶಪ್ರಿಯ ತೀರ್ಥರು |
ಶ್ರೀ ಜನಾರ್ಧನತೀರ್ಥರು | ಕೃಷ್ಣಾಪುರ ಮಠ | ಎರಡನೇ ಜೋಡಿ | ಶ್ರೀ ವಿದ್ಯಾಸಾಗರ ತೀರ್ಥರು | |
ಶ್ರೀ ಉಪೇಂದ್ರತೀರ್ಥರು | ಪುತ್ತಿಗೆ ಮಠ | ಎರಡನೇ ಜೋಡಿ | ಶ್ರೀ ಸುಗುಣೇಂದ್ರ ತೀರ್ಥರು | ಶ್ರೀ ಸುಶ್ರೀಂದ್ರ ತೀರ್ಥರು |
ಶ್ರೀ ವಾಮನತೀರ್ಥರು | ಶಿರೂರು ಮಠ | ಮೂರನೇ ಜೋಡಿ | ಶ್ರೀ ಲಕ್ಷ್ಮೀವರ ತೀರ್ಥರು | |
ಶ್ರೀ ವಿಷ್ಣುತೀರ್ಥರು | ಸೋದೆ ಮಠ | ಮೂರನೇ ಜೋಡಿ | ಶ್ರೀ ವಿಶ್ವವಲ್ಲಭ ತೀರ್ಥರು | |
ಶ್ರೀ ರಾಮತೀರ್ಥರು | ಕಾಣಿಯೂರು ಮಠ | ನಾಲ್ಕನೇ ಜೋಡಿ | ಶ್ರೀ ವಿದ್ಯಾವಲ್ಲಭ ತೀರ್ಥರು | |
ಶ್ರೀ ಅಧೋಕ್ಷಜತೀರ್ಥರು | ಪೇಜಾವರ ಮಠ | ನಾಲ್ಕನೇ ಜೋಡಿ | ಶ್ರೀ ವಿಶ್ವೇಶ ತೀರ್ಥರು | ಶ್ರೀ ವಿಶ್ವಪ್ರಸನ್ನ ತೀರ್ಥರು |
ಆಚಾರ್ಯ ಮಧ್ವರು ಮೇಲೆ ಕಾಣಿಸಿದ ಅನುಕ್ರಮಣಿಕೆಯಲ್ಲೇ ಪ್ರಾರಂಭ ಮಾಡಿದರೆಂದು ತೋರುತ್ತದೆ. ಯಾಕೆಂದರೆ ಪರ್ಯಾಯ ಚಕ್ರವು ಇದೇ ಅನುಕ್ರಮಣಿಕೆಯಲ್ಲಿ ನಡೆಯುತ್ತಿದ್ದು ಶ್ರೀ ಫಲಿಮಾರು ಮಠದಿಂದ ಪ್ರಾರಂಭವಾಗಿ ಶ್ರೀ ಪೇಜಾವರ ಮಠದಿಂದ ಮುಗಿಯುತ್ತದೆ. ಈ ಎಂಟೂ ಮಠಗಳನ್ನು ಉಡುಪಿಯ ರಥ ಬೀದಿಯಲ್ಲಿ ಈಗಲೂ ಕಾಣಬಹುದು.
ಇತರ ಮಠಗಳು
ಸಾಂಪ್ರದಾಯಿಕ ಅಷ್ಟ ಮಠಗಳಲ್ಲದೇ, ಇನ್ನೂ ಮಠಗಳಿವೆ. ಅವು
- ಭಂಡಾರಕೇರಿ ಮಠ
- ವ್ಯಾಸರಾಯ ಮಠ
- ಭೀಮನಕಟ್ಟೆ ಮಠ
- ಉತ್ತರಾದಿ ಮಠ ಮತ್ತು
- ರಾಘವೇಂದ್ರ ಸ್ವಾಮಿ ಮಠ
- ಆರ್ಯ ಅಕ್ಷೋಭ್ಯ ಮಠ
- ಬಾಳೆಗಾರು ಅಕ್ಷೋಭ್ಯ ಮಠ
ಇವುಗಳಲ್ಲಿ ಭಂಡಾರಕೇರಿ ಮಠ ಮತ್ತು ಭೀಮನಕಟ್ಟೆ ಮಠಗಳು ತೌಲವ ಮಠಗಳು, ಉಳಿದವು ದೇಶಸ್ಥ ಮಠಗಳು. ಭೀಮನಕಟ್ಟೆ ಮಠವು ತೀರ ಇತ್ತೀಚಿನದು. ರಾಘವೇಂದ್ರ ಸ್ವಾಮಿ ಮಠದಲ್ಲಿ ೧೯೨೬ರಲ್ಲಿ ಶ್ರೀ ಸುಶಿಲೇಂದ್ರ ತೀರ್ಥ ಸ್ವಾಮಿಗಳು ಸ್ಥಾಪಿಸಿದ ಶ್ರೀ ರಾಘವೇಂದ್ರರ ವೃಂದಾವನವಿದ್ದು ಇಂದಿಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುತ್ತದೆ.