ಆರ್ಥಿಕ ರಾಷ್ಟ್ರೀಯತೆ
ರಾಷ್ಟ್ರೀಯ ಹಿತಾಸಕ್ತಿಗಳನ್ನೇ ಪ್ರಧಾನವಾಗುಳ್ಳ ರಾಜಕೀಯ ಹಾಗೂ ಸಾಮಾಜಿಕ ತತ್ತ್ವವನ್ನು ರಾಷ್ಟ್ರೀಯತೆ ಎನ್ನುವ ಪಕ್ಷದಲ್ಲಿ ರಾಷ್ಟ್ರದ ಧ್ಯೇಯಗಳ ಲ್ಲೊಂದಾದ ಆರ್ಥಿಕ ಪ್ರಗತಿಯನ್ನೇ ಪ್ರಧಾನವಾಗುಳ್ಳ ರಾಷ್ಟ್ರೀಯ ಮನೋಧರ್ಮವನ್ನು ಆರ್ಥಿಕ ರಾಷ್ಟ್ರೀಯತೆ ಎನ್ನಬಹದು (ಎಕನಾಮಿಕ್ ನ್ಯಾಷನಲಿಸಂ). ಇತರ ರಾಷ್ಟ್ರಗಳಿಗೆ ಆಗಬಹುದಾದ ಕಷ್ಟನಷ್ಟಗಳಿಗೆ ಸ್ವಲ್ಪವೂ ಗಮನ ಕೊಡದೆ ಸ್ವರಾಷ್ಟ್ರ ಲಾಭವನ್ನು ಪರಮಾವಧಿ ಗೊಳಿಸುವ ಕಾರ್ಯಾಚರಣೆಗಳಲ್ಲಿ ತೊಡಗುವುದು ಅತ್ಯುಗ್ರ ಆರ್ಥಿಕ ರಾಷ್ಟ್ರೀಯತೆ ಎನ್ನಿಸಿಕೊಳ್ಳುವುದು. ಇಷ್ಟು ತೀವ್ರ ಸ್ವರೂಪದಲ್ಲಿಲ್ಲದಿದ್ದರೂ ಅಂತಾರಾಷ್ಟ್ರೀಯ ಹಿತಾಸಕ್ತಿಗಳಿಗೆ ಸಾಕಷ್ಟು ಮಾನ್ಯತೆ ನೀಡದೆ ಕೇವಲ ಸ್ವರಾಷ್ಟ್ರ ಹಿತಕ್ಕೆ ಹೆಚ್ಚು ಪ್ರಾಧಾನ್ಯ ಕೊಟ್ಟು ಕೈಗೊಳ್ಳುವ ನೀತಿಗಳೂ ನಡೆಸುವ ಕಾರ್ಯಾಚರಣೆಗಳೂ ಆರ್ಥಿಕ ರಾಷ್ಟ್ರೀಯತೆ ಎನ್ನಿಸುವುವು. ಇದನ್ನು ಲಘು ಸ್ವರೂಪದ ಆರ್ಥಿಕ ರಾಷ್ಟ್ರೀಯತೆ ಎಂದು ಹೇಳಬಹುದು. ಅತ್ಯಂತ ಉಗ್ರ ಹಾಗೂ ಅತ್ಯಂತ ಲಘು ಸ್ವರೂಪದ ಆರ್ಥಿಕ ರಾಷ್ಟ್ರೀಯತೆಯ ನಡುವೆ ಆರ್ಥಿಕ ರಾಷ್ಟ್ರೀಯತೆಯ ವಿವಿಧ ಹಂತಗಳನ್ನು ಕಾಣಬಹುದು. ಪ್ರಪಂಚದ ಇತಿಹಾಸದಲ್ಲಿ ಕೆಲವು ಕಾಲಗಳಲ್ಲಿ ಆರ್ಥಿಕ ರಾಷ್ಟ್ರೀಯತೆ ಎದ್ದು ಕಾಣುವು ದನ್ನು ಗಮನಿಸದಿರಲಾಗುವುದಿಲ್ಲ. ಆರ್ಥಿಕ ರಾಷ್ಟ್ರೀಯತೆ ಪ್ರೇರಕಶಕ್ತಿ, ಸ್ವರೂಪ, ಪರಿಣಾಮ ಇತ್ಯಾದಿ ಅಂಶಗಳ ಬಗ್ಗೆ ಮುಖ್ಯ ವಿಷಯಗಳನ್ನು ತಿಳಿಯಲು ಆ ಕಾಲದ ಅನುಭವಗಳ ಅವಲೋಕನ ಉಪಯುಕ್ತ. ಆಧುನಿಕ ಯುಗಕ್ಕೆ ಮುನ್ನ ಅಂದರೆ ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿಗೆ ಮುನ್ನ ಇಂಗ್ಲೆಂಡ್, ಫ್ರಾನ್್ಸ, ಸ್ಪೇನ್, ಹಾಲೆಂಡ್ ಇತ್ಯಾದಿ ಐರೋಪ್ಯ ರಾಷ್ಟ್ರಗಳು ಸುಮಾರು ಎರಡು ಶತಮಾನಗಳ ಕಾಲ ಅನುಸರಿಸುತ್ತಿದ್ದ ವಾಣಿಜ್ಯ ಪದ್ಧತಿಯ ನೀತಿ (ಮರ್ಕೆಂಟೈಲಿಸಂ) ಆರ್ಥಿಕ ರಾಷ್ಟ್ರೀಯತೆಯ ಒಂದು ಉಗ್ರಸ್ವರೂಪವೆಂದು ಹೇಳಬಹುದು.